ಶಿವಯೋಗ - 1
ಶಿವಯೋಗ - 1
ಭಾರತೀಯ ಶಡ್ದರ್ಶನಗಳಲ್ಲಿ ಯೋಗವೂ ಒಂದು ದರ್ಶನವಾಗಿದೆ. ಯೋಗ ಎನ್ನುವ ಸಂಸ್ಕೃತ ಪದದ ಅರ್ಥ ಸಂಧಿ ಅಥವಾ ಕೂಟ. ಯೋಗ ಅಂದರೆ 'ವಸ್ತು ಪರವಸ್ತುವಿನಲ್ಲಿ ಸಂಯೋಗವಾಗುವದು ' ಅಥವಾ
'ಆತ್ಮ ಪರಮಾತ್ಮನಲ್ಲಿ ಸಂಯೋಗವಾಗುವದು'
ಯೋಗ ತನ್ನಲ್ಲಿಯೇ ತನ್ನ ಶರೀರದ ಮುಖಾಂತರವಾಗಿ ಪಡೆಯುವ ಒಂದು ವಿಶೇಷ ಅವಸ್ಥೆಯಾಗಿದೆ. ಯೋಗಿಯು, ಯೋಗದಿಂದ ಉಂಟಾಗುವ ಅನುಭವವನ್ನು ತನ್ನ ಅಂತರಂಗದಲ್ಲಿಯೇ ಕಾಣುತ್ತಾನೆ.
ಮುಕ್ತಿಯನ್ನು ಪಡೆಯಬೇಕು ಎಂಬ ವಿಚಾರಕ್ಕೆ ಯೋಗ ಸಿದ್ಧಾಂತದಲ್ಲಿ ಅವಕಾಶವಿಲ್ಲ. ಶಿವ ಎಲ್ಲ ಯೋಗಗಳ ಅಧಿಪತಿ, ಆದಿ. ಅದಕ್ಕೇ ಶಿವನನ್ನು ಆದಿಯೋಗಿ ಎನ್ನುವರು. ಅಷ್ಟಾಂಗ ಯೋಗ, ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗ ಮತ್ತು ಕುಂಡಲಿನಿ ಯೋಗ ಇವೇ ಆ ಆರು ಪ್ರಕಾರದ ಯೋಗಗಳು. ಎಲ್ಲ ಯೋಗಗಳ ಪರಿಣಾಮ ಗುರಿ ಒಂದೇ ಆದರೂ ಅನುಸರಿಸುವ ದಾರಿಗಳು ಬೇರೆ ಬೇರೆ. ಉದಾಹರಣೆಗಾಗಿ ಹಠಯೋಗಿಗೆ ಪ್ರಾಣ ಅಪಾನಗಳನ್ನು ಒಂದುಗೂಡಿಸುವುದು ಯೋಗವಾಗಿದೆ. ರಾಜಯೋಗಿಗೆ ಸೂರ್ಯ-ಚಂದಾಡಿಗಳನ್ನು ಒಂದುಗೂಡಿಸಿ ಮನವನ್ನು ಅಮನಸ್ಸಗೊಳಿಸುವುದು ಯೋಗವಾಗಿದೆ.
ಕುಂಡಲಿನೀ ಯೋಗಿಗೆ ಶಿವ-ಶಕ್ತಿಯನ್ನು ಒಂದುಗೂಡಿಸುವುದು ಯೋಗವಾಗಿದೆ.
೧೨ ನೆಯ ಶತಮಾನದ ಶರಣರು ಎಲ್ಲ ಯೋಗಗಳನ್ನು ಅರಿತು ಸಾಕ್ಷಾತ್ಕಾರ ವಾಗಿಸಿಕೊಂಡು, ಚಿತ್ತವೃತ್ತಿಗಳನ್ನು ನಿಗ್ರಹಿಸುವ ಇಷ್ಟಲಿಂಗದ ಆಯತ, ಸ್ವಾಯತ ಮತ್ತು ಸನ್ನಿಹಿತ ಅಳವಡಿಸಿಕೊಂಡು, ಶಟ್ಸ್ಥ ಲದ ಮಾರ್ಗದಲ್ಲಿ ಸಾಗುವ, ತಮ್ಮದೇ ಆದ 'ಲಿಂಗಾಂಗಯೋಗ ' ಪ್ರತಿಪಾದಿಸಿದರು. ಶಿವಯೋಗದಲ್ಲಿ ಮೇಲಿನ ಎಲ್ಲಾ ಯೋಗ ವಿಧಾನಗಳ ತಿರುಳಿದೆ.
ಇಪ್ಪತ್ತೈದು ಅಂಗತತ್ವಗಳು ಹನ್ನೊಂದು ಲಿಂಗತತ್ವ ಗಳೊಡನೆ ಕೂಡಿ ಲಿಂಗಾಂಗ ಸಾಮರಸ್ಯದಿಂದ ಮಾನವ ಮಹಾದೇವನಾಗುವದೇ ಶಿವಯೋಗ.
ಶಿವಯೋಗದಲ್ಲಿ ವಾಮಮಾರ್ಗಗಳಿಲ್ಲ . ಭಕ್ತಿಯೋಗ, ನಿಷ್ಕಾಮ ಕಾಯಕಯೋಗ, ಜ್ಞಾನಯೋಗ ಮೂರನ್ನೂ ಶಿವಯೋಗದಲ್ಲಿ ಮತ್ತು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ಇದು ರಾಜಮಾರ್ಗದ ರೀತಿ ಸರಳ ನೇರ ವಿಶಾಲ ಮಾರ್ಗವಾಗಿರುವುದರಿಂದ ಶಿವಯೋಗವನ್ನು ರಾಜಯೋಗ ಎಂದಿದ್ದಾರೆ ಶರಣರು.
ಸ್ವಾಮೀ ವಿವೇಕಾನಂದರು ಪತಂಜಲಿಯ ಅಷ್ಟಾಂಗಯೋಗವನ್ನೇ ರಾಜಯೋಗ ಎಂದಿದ್ದಾರೆ. ಈಶ್ವರಿ ವಿದ್ಯಾಲಯದವರು ದೀಪವನ್ನು ದೃಷ್ಟಿಸುವ ತ್ರಾಟಕ ಯೋಗ ಅನುಸರಿಸಿ ತಮ್ಮದು ರಾಜಯೋಗವೆಂದು
ಕರೆಯುತ್ತಾರೆ. ಏಕಾಗ್ರತೆ ತನ್ಮಯತೆಯಿಂದ ಧ್ಯಾನದ ಉತ್ತುಂಗ ಸ್ಥಿತಿಯಾದ ಸಮಾಧಿ ಸಾಧಿಸುವುದಕ್ಕೆ ರಾಜಯೋಗ ಎನ್ನುವರು.
ಶರಣರು ಪ್ರತಿಪಾದಿಸಿದುದು ಅನುಭಾವ ಮಾರ್ಗವನ್ನು. ಪೂಜೆ ಪ್ರಾರ್ಥನೆಗಳೇ ಅಂತ್ಯವಲ್ಲ. ಅವು ಆರಂಭ. ಅವೇ ಅಂತ್ಯವಲ್ಲ. ಬದುಕಿನ ಉದ್ದೇಶ, ಗುರಿ ಅಲ್ಲ. ಸತ್ಯದರ್ಶನವೇ ಅಂತಿಮ ಗುರಿ. 'ಆರಾಧನೆಯಿಂದ ಅನುಭಾವಕ್ಕೆ' ಇದೇ ಅವರ ಶಟ್ಸ್ಥಲದ ಮಾರ್ಗ. ಇಡೀ ಬ್ರಹ್ಮಾಂಡವನ್ನು ಲಿಂಗರೂಪದಲ್ಲಿ ಆರಾಧನೆಯಾಗಿ ಮಾಡಿ ಲಿಂಗಾಂಗ ಸಾಮರಸ್ಯದಿಂದಲೇ ಬ್ರಹ್ಮಾಂಡದ ಸತ್ಯದರ್ಶನ ಮಾಡಿದ ಅನುಭಾವಿಗಳು ನಮ್ಮ ಶರಣರು.
"ಪಿಂಡಬ್ರಹ್ಮಾಂಡಯೋರೈಕ್ಕಂ"
ಎಂದರೆ ಬ್ರಹ್ಮಾಂಡದಲ್ಲಿ ವ್ಯಕ್ತವಾಗಿರುವ ಘಟಕಗಳು ಪಿಂಡಾಂಡದಲ್ಲಿಯೂ ಇವೆ. ಅಂತರ್ಮುಖಿಗಳಾದ ಯೋಗಿಗಳು ಬ್ರಹ್ಮಾಂಡವನ್ನು ಅರಿತುಕೊಳ್ಳಲು ಹಂಬಲಿಸದೆ ಪಿಂಡದಲ್ಲಿ ಪ್ರವೇಶ ಮಾಡಿ ಅಲ್ಲಿ ಕಂಡ ಅದ್ಭುತ ಶಕ್ತಿ-ತತ್ವಗಳಿಂದ ಬ್ರಹ್ಮಾಂಡದ ನೆಲೆಯನ್ನು ಕಂಡುಕೊಂಡರು. ಯೋಗಸಾಧನೆಗೆ ಪಿಂಡವನ್ನು ಬಿಟ್ಟರೆ ಇನ್ನಾವ ಉಪಕರಣವು ಇಲ್ಲ. "ಶರೀರಮಾದ್ಯಂ ಖಲು ಧರ್ಮ ಸಾಧನಂ"'
ಎಂದು ಹೇಳುವ ಮಾತಿನಲ್ಲಿ ಪಿಂಡಾಂಡದಿಂದ ಪರಬ್ರಹ್ಮನ ನಿಲುವನ್ನು ಕಾಣಬೇಕೆಂಬ ರಹಸ್ಯವಾಗಿದೆ.. ಅದಕ್ಕೇ ಶರಣರು ಆತ್ಮ ಪರಮಾತ್ಮ ಸಂಯೋಗ ಪದ ಬಿಟ್ಟು ಲಿಂಗ ಅಂಗ ಸಮರಸ ,ಲಿಂಗಾಂಗ ಸಾಮರಸ್ಯ ಎಂದು ಕರೆದರು. ಲಿಂಗ ಅಂದರೆ ಪರಮಾತ್ಮ, ಪರಶಿವ. ಅಂಗ ಅಂದರೆ ದೇಹ ಮತ್ತು ಆತ್ಮ ,ಲಯವಾದ ಮನಸ್ಸು. ಅಂದರೆ ಯೋಗ ದೇಹದ ಮುಖಾಂತರವೇ ಆಗುವ ಆತ್ಮ ಪರಮಾತ್ಮರ ಸಂಯೋಗ.
ಪಿಂಡಾಂಡ ಮಹತ್ವವನ್ನು ಎತ್ತಿ ಹಿಡಿಯುತ್ತ, ಷಣ್ಮುಖ ಸ್ವಾಮಿ ತಮ್ಮ ಒಂದು ವಚನದಲ್ಲಿ,
#ಪಿಂಡದೊಳಗೆ ಪ್ರಾಣವಿರ್ಪುದ ಎಲ್ಲರೂ ಬಲ್ಲರಲ್ಲದೆ,
ಪ್ರಾಣದೊಳಗೆ ಶಬ್ದವಿರ್ಪುದನಾರೂ ಅರಿಯರಲ್ಲ.
ಪ್ರಾಣದೊಳಗೆ ಶಬ್ದವಿರ್ಪುದ ಎಲ್ಲರೂ ಬಲ್ಲರಲ್ಲದೆ,
ಶಬ್ದದೊಳಗೆ ನಾದವಿರ್ಪುದನಾರೂ ಅರಿಯರಲ್ಲ.
ಶಬ್ದದೊಳಗೆ ನಾದವಿರ್ಪುದ ಎಲ್ಲರೂ ಬಲ್ಲರಲ್ಲದೆ,
ನಾದದೊಳಗೆ ಮಂತ್ರವಿರ್ಪುದನಾರೂ ಅರಿಯರಲ್ಲ.
ಮಂತ್ರದೊಳಗೆ ಶಿವನಿರ್ಪುದ ಎಲ್ಲರೂ ಬಲ್ಲರಲ್ಲದೆ,
ಶಿವನ ಕೂಡುವ ಅವಿರಳಸಮರಸವನಾರೂ
ಅರಿಯರಲ್ಲ ಅಖಂಡೇಶ್ವರಾ. / 440
ಎಂದು ಷಣ್ಮುಖ ಸ್ವಾಮಿಗಳು ಹೇಳಿರುವರು.
ಆಧ್ಯಾತ್ಮಿಕ ಅರ್ಥದಲ್ಲಿ ಆತ್ಮ-ಪರಮಾತ್ಮ ಸಂಯೋಗವನ್ನುಂಟು ಮಾಡುವ ಸಾಧನೆಗೆ ಯೋಗವೆಂದು ಹೆಸರು. ಭಿನ್ನ ಭಿನ್ನ ಮತಪಂಥ, ಸಿದ್ಧಾಂತಗಳಿಗನುಗುಣವಾಗಿ ಈ ಸಂಯೋಗದ ಸ್ವರೂಪವು ಬೇರೆ ಬೇರೆಯಾಗಿದೆ. ದ್ವೈತ ಮತ್ತು ವಿಶಿಷ್ಟಾದ್ವೈತ ಸಿದ್ಧಾಂತಗಳಲ್ಲಿ ಆತ್ಮನು ಪರಮಾತ್ಮನಿಗಿಂತ ಪ್ರತ್ಯೇಕವಾಗಿದ್ದಾನೆಂದು ಹೇಳಲಾಗಿದೆ. ಆದ್ದರಿಂದ ದ್ವೈತ ಮತ್ತು ವಿಶಿಷ್ಟಾದ್ವೈತ ಸಿದ್ಧಾಂತಗಳಲ್ಲಿ ಈ ಎರಡರ ಮಧುರವಾದ ಮಿಲನವೇ ಯೋಗವೆನಿಸಿದೆ.
ಅದ್ವೈತ ಸಿದ್ಧಾಂತದ ಮೇರೆಗೆ ಆತ್ಮ ಪರಮಾತ್ಮನಲ್ಲಿ ಭಿನ್ನತೆಯೇ ಇಲ್ಲ, ಆದ್ದರಿಂದ ಆತ್ಮವು ಪರಮಾತ್ಮನಲ್ಲಿ ಅಭಿನ್ನತೆಯನ್ನು ಕಾಣುವದೇ ಆದ್ವೈತದಲ್ಲಿ ಯೋಗ ವೆನಿಸುವದು, "ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತ" ದಲ್ಲಿ ವಾಸ್ತವಿಕವಾಗಿ ಜೀವ-ಶಿವರು, ಆತ್ಮ-ಪರಮಾತ್ಮರು ಒಂದೇ ಆಗಿದ್ದರೂ ಕೆಲವು ಅವಧಿಯವರೆಗೆ ಮಾತ್ರ ಪ್ರತ್ಯೇಕವಾಗಿ ತೋರುತ್ತಾರೆ. ಈ ವಿಭಿನ್ನತೆಯನ್ನು ಪರಿಹರಿಸಿಕೊಂಡು ಯೋಗ ಸಾಧನೆಯಿಂದ ಯೋಗಿಯು ಶಿವ-ಜೀವರ ಐಕ್ಯತೆಯನ್ನು ಸಾಧಿಸುತ್ತಾನೆ.
ಮಾಯೆಯ ಮೂಲಕವಾಗಿ ಆತ್ಮನು ತನ್ನ ಮೂಲ ಸ್ವರೂಪವನ್ನು ಮರೆತು, ಆಣವ, ಮಾಯಾ, ಮತ್ತು ಕರ್ಮ ಎಂಬ ಮೂರು ತೆರನಾದ ಮಲಗಳಿಂದಲೂ ; ಕಾಲ, ನಿಯತಿ, ರಾಗ, ವಿದ್ಯಾ, ಕಲಾ ಎಂಬ ಪಂಚಕಂಚುಕಗಳಿಂದ ಆವರಿಸಲ್ಪಟ್ಟಿದ್ದಾನೆ.
ಯೋಗ ಸಾಧನೆಯಿಂದ ಆತ್ಮನು ಇವನ್ನೆಲ್ಲ ಪರಿಹರಿಸಿಕೊಂಡು ಸ್ವರೂಪ ಜ್ಞಾನವನ್ನು (intellectual awareness) ಪಡೆದು ಪರಮಾತ್ಮನೊಡನೆ ಸಾಮರಸ್ಯವನ್ನು ಹೊಂದುವುದೇ ಶಕ್ತಿ ವಿಶಿಷ್ಟಾದ್ವೈತದಲ್ಲಿ ಯೋಗವೆನಿಸಿಕೊಳ್ಳುವದು.
ಪ್ರಜ್ಞೆಯ ಸ್ಥಿತಿ (ಅರಿವು, ಜಾಗೃತ ಸ್ಥಿತಿ) Awareness:
“ಯೋಗಃ ಚಿತ್ತವೃತ್ತಿ ನಿರೋಧಃ' ಎಂದರೆ ಚಿತ್ತದಲ್ಲಿ ಮೂಡಿಕೊಂಡಿರುವ ವೃತ್ತಿಗಳನ್ನು ನಿರೋಧಗೊಳಿಸಿ ಅಂಕಿತ ದಲ್ಲಿಟ್ಟುಕೊಳ್ಳುವುದೇ ಯೋಗ; ಅದರಿಂದ ಆತ್ಮತತ್ವಜ್ಞಾನವು ಲಭಿಸುವುದು ಎಂದು ಹೇಳುತ್ತಾರೆ.
ಯೋಗಧ್ಯಾನದಲ್ಲಿ ಪಂಚೇಂದ್ರಿಯಗಳ ಸಂಪರ್ಕ ಇಲ್ಲದಿರುವ ಅವಸ್ಥೆಯೊಂದು ಒದಗುತ್ತದೆ.
ಇದು ಮನದ ಶುದ್ಧ ಸಂವಿತ್-ಜ್ಞಾನದ ಅವಸ್ಥೆಯನ್ನು ಸೂಚಿಸುತ್ತದೆ. ಅಲ್ಲಿ ಮನ ಬುದ್ದಿ ಚಿತ್ತ ಮೊದಲಾದ ಅಂತರ-ಇಂದ್ರಿಯಗಳ ಎಲ್ಲ ವ್ಯವಹಾರಗಳು ನಿಂತುಹೋಗುತ್ತದೆ. ಮನಸ್ಸಿನ ಸ್ಥಿರತೆ ಮತ್ತು ಶಾಂತಿಗಳಿಂದ ಅಜ್ಞಾನದ ಕತ್ತಲೆಯು ಕಳಚುವುದು. ಜಡವಾದ ಮನದ ಆಚೆಗೆ ಚೈತನ್ಯ ಸ್ವರೂಪವಾದ ಆತ್ಮವಿರುತ್ತದೆ. ಚೈತನ್ಯದ ಸಹಾಯದಿಂದ ಚಿತ್ತಕ್ಕೆ ಅದರ ಸ್ವರೂಪ ಗೊತ್ತಾಗುತ್ತದೆ.
ಹೀಗೆ ಯೋಗದಿಂದ ಮನಸ್ಸಿನ ಸ್ಥಿರತೆ, ಶಾಂತಿ ಮತ್ತು ಆತ್ಮ ತತ್ವಜ್ಞಾನ ಲಭಿಸುತ್ತದೆ. ಸಾಧಕನನ್ನು ಆತ್ಮಸಾಕ್ಷಾತ್ಕಾರದ ಔನ್ನತ್ಯಕ್ಕೆ ಸುಲಭವಾಗಿ ಕ್ರಮಕ್ರಮವಾಗಿ ಕರೆದೊಯ್ದು ಕೊನೆಗೆ ಇಚ್ಚಿತವಾದ ಗುರಿಯನ್ನು ಮುಟ್ಟಿಸುತ್ತದೆ.
ಎಲ್ಲ ದೇಶ ಎಲ್ಲ ಕಾಲಗಳ ಸಾಧು-ಸತ್ಪುರುಷ ಮುನಿ, ಯೋಗಿ ಸಿದ್ಧರು ಮಾಡಿದ ಪವಾಡ ಪ್ರತ್ಯಕ್ಷಗಳು, ಈ ಯೋಗ ವಿಜ್ಞಾನದ ಪರಿಣಾಮವಾಗಿಯೇ ಜರುಗಿವೆ ಮತ್ತು ಜರಗುವವು.
ಯೋಗಾನುಸಂಧಾನದ ಕಾಲಕ್ಕೆ ಪರವಸ್ತುವಿನಲ್ಲಿರಿಸಿದ ತನ್ಮಯವಾದ ನೋಟ ದಿಂದ (ತ್ರಾಟಕ ಯೋಗ) ಸುಪ್ತಸ್ಥಿತಿಯಲ್ಲಿದ್ದ ಪೀನಿಯಲ್‌ಗ್ರಂಥಿಯು ಜಾಗ್ರತಗೊಳ್ಳುವದು, ವಿದ್ಯುತ್ ಶಕ್ತಿಯಾಗಿ ಕಾರ್ಯ ಮಾಡತೊಡಗುವದು.
ದೋಷಗಳು ನಿವಾರಣೆಯಾಗಿ ಆತ್ಮತೇಜವು ಬೆಳಗುವದು. ಚಕ್ರಗಳ ಶುದ್ಧಿಯಿಂದ ದೇಹ ಸುಸ್ಥಿತಿಗೆ ಬಂದು ಆರೋಗ್ಯ ಲಭಿಸುವುದು. ಇಂದ್ರಿಯಗಳ ಭ್ರಮೆ ದೋಷಗಳು ನಾಶವಾಗಿ ತೇಜಸ್ಸು ಪ್ರಕಾಶವಾಗುವುದು.
- ಮುಂದುವರೆಯುವುದು
- ✍️ Dr Prema Pangi
- ಮುಂದುವರಿಯುವುದು
#ಶಿವಯೋಗ_1
Comments
Post a Comment