ಶೂನ್ಯ - 3
*ಶೂನ್ಯ- 3*
ಬಯಲಿನಿಂದ, ಶೂನ್ಯಲಿಂಗದಿಂದ ಹುಟ್ಟಿದುದು ವಿಶ್ವ, ಬ್ರಹ್ಮಾಂಡ.
ಏನೂ ಏನೂ ಇಲ್ಲದ ಬಯಲೊಳಗೊಂದು ಗುಹೇಶ್ವರ ಲಿಂಗದಲ್ಲಿ ಪ್ರಥಮಭಿತ್ತಿ ಮೂಡಿತ್ತು ಎಂಬ ವಚನ ಕೆಳಗಿನಂತಿದೆ.
ಬಗೆಗೊಳಗಾದ ಬಣ್ಣ ತಲೆದೋರಿತ್ತು.
ಆ ಬಣ್ಣವು ಆ ಬಯಲ ಶೃಂಗರಿಸಲು,
ಬಯಲು ಸ್ವರೂಪಗೊಂಡಿತ್ತು.
ಅಂತಪ್ಪ ಸ್ವರೂಪಿನ ಬೆಡಗು ತಾನೆ,
ನಮ್ಮ ಗುಹೇಶ್ವರಲಿಂಗದ ಪ್ರಥಮ ಬಿತ್ತಿ / 493
ಏನೂ ಇಲ್ಲದೆ ಬಯಲಲ್ಲಿ 'ಚಿತ್ ಶಕ್ತಿ ' ಎಂಬ ಬಣ್ಣ ತಲೆದೋರಿ ಅದರಲ್ಲಿ ಗುಹೇಶ್ವರ ಲಿಂಗದ ಪ್ರಥಮಭಿತ್ತಿ (ಶೂನ್ಯಲಿಂಗ) ಉದಯವಾಗಿ, ಸೃಷ್ಟಿಗೆ ಕಾರಣವಾಯಿತು. ಅಂದರೆ ಆ ಬಣ್ಣ ಬಯಲನ್ನೇ ಸ್ವರೂಪಗೊಳಿಸಿತು. ಹೀಗೆ 'ನಿರೂಪದಿಂದ ಸ್ವರೂಪ' ವಾಯಿತು. ಅಂಥ ಸ್ವರೂಪಿನ ಬೆಡಗು ತಾನಾಗಿತ್ತು. ಈ ಸ್ವರೂಪ ಮತ್ತು ಬೆಡಗು ಉಪಮಾತೀತವಾದದ್ದು ಎನ್ನುತ್ತಾರೆ ವ್ಯೋಮ ಮೂರ್ತಿ ಅಲ್ಲಮ ಪ್ರಭುಗಳು. ಅದರ ಬೆಡಗು ವರ್ಣಿಸುವದು ಅಸಾಧ್ಯ.ಅದನ್ನು ಸಾಮಾನ್ಯರಿಂದ ಗುರುತಿಸಲಾಗದು ಎನ್ನುವ ವಚನ,
ತಲೆದೋರದ ಮುನ್ನ- ಅಲ್ಲಿಂದತ್ತ ಬಯಲೆ ಸ್ವರೂಪವಾಯಿತ್ತು.
ಆ ಸ್ವರೂಪಿನ ಘನತೆಯ ಉಪಮಿಸಬಾರದು.
ನೋಡಬಾರದ ಬೆಳಗು,ಕೂಡಬಾರ ಮೂರ್ತಿ
ಅಖಂಡ ಅಪ್ರತಿಮ ನಮ್ಮ ಗುಹೇಶ್ವರಲಿಂಗದ ಬೆಳಗಿನ ಮೂಲವ ಲಿಂಗಸಂಗಿಗಳಲ್ಲದೆ ಮಿಕ್ಕಿನ ಅಂಗವಿಕಾರಿಗಳೇನ ಬಲ್ಲರೊ ?
/ 1206
ಬಹು ದೇವತೆಗಳ ಸಂದಣಿ ತಲೆದೋರದ ಮುನ್ನ-ಅಲ್ಲಿಂದತ್ತ ನಿರೂಪ ನಿರಾಕಾರ ಬಯಲೇ ಸ್ವರೂಪವಾಗಿ ವಿಶ್ವ ನಿರ್ಮಾಣ ಮಾಡಿತು. ಆ ಸ್ವರೂಪಿನ ಘನತೆಯ ಉಪಮಿಸಲುಬಾರದು. ಅದು ನೋಡಲುಬಾರದ ಬೆಳಗು, ಕೂಡಬಾರದ ಮೂರ್ತಿ. ಅಂಗವಿಕಾರವನ್ನು ಕಳೆದು ಲಿಂಗದಲ್ಲಿ ಸಮರಸನಾದ ಅನುಭಾವಿ ಅಲ್ಲಮಪ್ರಭು ಉಪಮಿಸಬಾರದ ಶೂನ್ಯಲಿಂಗದ ಸ್ವರೂಪವನ್ನು ಕಂಡು ಮಂತ್ರಮುಗ್ಧನಾಗಿದ್ದಾರೆ. ಅಖಂಡ ಅಪ್ರತಿಮ ಗುಹೇಶ್ವರ ಲಿಂಗದ ಬೆಳಗಿನ ಮೂಲವದು, "ನಿರವಯ ಬಯಲು". ಅಂತ ಸ್ವರೂಪವನ್ನು ಭವಭಾದೆಗೊಳಗಾದವರು ತಿಳಿಯಲಾರರು. ಲಿಂಗಸಂಗಿಗಳಾದ ಶರಣರಷ್ಟೇ ಬಲ್ಲರು. ಮಿಕ್ಕಿನ ಅಂಗವಿಕಾರಿಗಳು ಇದನ್ನು ಅರಿಯಲಾರರು. ಇದರ ಅನುಭವ ವೇಧ್ಯವಾಗುವುದು, ಶಿವಯೋಗ ಸಾಧನೆಗೈದ ಲಿಂಗಾಂಗ ಸಾಮರಸ್ಯ ಹೊಂದಿದ ಸಾಧಕರಿಗೆ ಮಾತ್ರ.
'ಶೂನ್ಯಲಿಂಗ' ಎಂಬುದು ನಿರಾಳ ನಿರಾಕಾರವಾದ ಪರಿಶುದ್ಧ ಘನ. ಯಾವ ಪರಮಿತಿಗೂ ನಿಲುಕದ ಇಂದ್ರಿಯಗಳಿಗೆ ಅಗೋಚರವಾದ ದಿವ್ಯ ಪರತತ್ವ.
"#ಏನೂ ಇಲ್ಲದಠಾವಿನಲ್ಲಿ ನಾ ನೀನೆಂಬುದ ತಾನೆ ತಂದನು.
ಇಲ್ಲಾದುದ ಉಂಟಾದುದ ಸಾವಿರವನಾಡಿದಡೇನು ?
ಉಂಟಾದುದನು `ಇಲ್ಲ' ಮಾಡಬಲ್ಲಡೆ
ಆ `ಇಲ್ಲ'ವೆ ತಾನೆ ಗುಹೇಶ್ವರ ! / 491
ಅಲ್ಲಮ ಪ್ರಭುಗಳು ಆದಿ ಮತ್ತು ಅಂತ್ಯ (ಆದ್ಧ್ಯಾಂತ) ಮಾಡುವವನು ಏನೂ ' ಇಲ್ಲ 'ದ ಶೂನ್ಯಲಿಂಗ. ಆ `ಇಲ್ಲ'ವೆ ತಾನೆ ಗುಹೇಶ್ವರ- ಆ ಏನೂ ಇಲ್ಲದ ಬಯಲೇ ಗುಹೇಶ್ವರ ಎಂದಿದ್ದಾರೆ.
ಅಲ್ಲಮಪ್ರಭುವಿನ ವಚನಗಳಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕವಾದ ವಿಶ್ವ ವಿಕಾಸದ ಚಿಂತನ ಮಹತ್ವ ಪೂರ್ಣವಾದ ವಿಶಾಲಶಕ್ತಿಯನ್ನೊಳಗೊಂಡಿದೆ. "ಪ್ರಥಮದಲ್ಲಿ ವಸ್ತು ಏನು ಏನೂ ಇಲ್ಲದ” ಮಹಾಘನ ಶೂನ್ಯ ಬ್ರಹ್ಮವಾಗಿದ್ದಿತ್ತು. ಏನೂ ಇಲ್ಲದ ಮಹಾಘನ ಶೂನ್ಯಲಿಂಗವೇ ಪರವಸ್ತು. ಅದು ಸತ್ಯವಸ್ತು. ಅದು ತನ್ನ ಲೀಲೆಯಿಂದ ಅಂಗಸ್ಥಲ ಲಿಂಗಸ್ಥಲ ಎಂದು ಸೃಷ್ಠಿ ಕ್ರಿಯೆಯಲ್ಲಿ ತೊಡಗುತ್ತವೆ. ಶಿವಯೋಗದ ಲಿಂಗಾಂಗ ಸಾಮರಸ್ಯದಲ್ಲಿ ಮತ್ತೇ ಅವು ಸಮರಸವಾಗುತ್ತವೆ. ಹೀಗೆ ಶೂನ್ಯಲಿಂಗವು ಆದಿ ಮತ್ತು ಅಂತ್ಯ - ಆದ್ಧ್ಯಾಂತ .ಇದು ಅಂತ್ಯದಲ್ಲಿ ಸ್ಥಳಕುಳವಾದ ಮಹಾಘನ ಲಿಂಗದಿಂದ ಶೂನ್ಯಲಿಂಗ, ಅದು ಆಣೆಕಲ್ಲು ಕರಗಿ ನೀರಾದಂತೆ ತನ್ನ ಪರಮಾನಂದದಿಂದ ಪುನಃ ಸರ್ವಶೂನ್ಯ ಸ್ಥಿತಿಯನ್ನು ಹೊಂದುತ್ತದೆ. ಪರಶಿವನ ಲೀಲೆಯಿಂದ ಸಕಲಲಿಂಗವಾಗಿ, ಲೀಲೆ ಸಾಕಾದೊಡೆ ನಿಷ್ಕಲಲಿಂಗ ನಾಗಬಲ್ಲದು. ಅಂತ್ಯದಲ್ಲಿ ಈ ಸಾಕಾರ -ನಿರಾಕಾರಗಳನ್ನು ಮೀರಿ ಏನೂ ಏನೂ ಇಲ್ಲದ "ಶೂನ್ಯಲಿಂಗ" ವಾಗಿ ಮೊದಲಿನಂತೆ ಇರಬಲ್ಲದು. ಹೀಗೆ ಶೂನ್ಯವು ವಿಶ್ವದ ಆದಿಯೂ, ಅಂತ್ಯವೂ ಆಗಿದೆ.
ಅಥವಾ *ಆಧ್ಯಾತ್ಮಿಕ ಶೂನ್ಯ ಸಂಪಾದನೆ*
#ವೇದ ದೈವವೆಂದು ನುಡಿವರು.............
ವಾಯುವಾಧಾರದ ಪವನಸಂಯೊಗದ ಅನಾಹತ ಚಕ್ರದಿಂದ ಮೇಲಣ ಆಜ್ಞಾ ಚಕ್ರದಲ್ಲಿ ನಿಂದು;
ಅನಂತಕೋಟಿ ಬ್ರಹ್ಮಾಂಡಗಳ ಮೆಟ್ಟಿ-ಕಾಯದ ಕಣ್ಣ ಮುಚ್ಚಿ,
ಜ್ಞಾನ ಕಣ್ಣ ತೆರೆದು ನೋಡಲ್ಕೆ. ಅಲ್ಲಿ ಒಂದು ನಿರಾಕಾರ ಉಂಟು.
ಆ ನಿರಾಕಾರದಲ್ಲಿ ನಿಂದು ನಿರ್ಣಯಿಸಿ ನೋಡಲ್ಕೆ, ಅಲ್ಲಿ ಒಂದು ನಿಶೂನ್ಯವುಂಟು.
ಆ ನಿಶೂನ್ಯದಲ್ಲಿ ನಿಂದು ನಿಶ್ಚಯಿಸಿ ನೋಡಲ್ಕೆ,
ಕತ್ತಲೆಯಲ್ಲ ಬೆಳಗಲ್ಲ ಬಚ್ಚಬರಿಯ ಬಯಲು ಗುಹೇಶ್ವರಾ! - ಸವಸ-2/1532
ಶರಣರ ಧರ್ಮದಲ್ಲಿ ಸಾಧಕನು ತನ್ನ ಸಾಧನ ಜೀವನ ಸಿದ್ಧ ಸ್ಥಿತಿಯಲ್ಲಿ, ಮೋಕ್ಷದ ಸ್ಥಿತಿಯಲ್ಲಿ ಬಯಲಲ್ಲಿ ಬಯಲಾಗುವುನು, ನಿರ್ಬಯಲಾಗುವನು - ಇದೇ ಶೂನ್ಯ ಸಂಪಾದನೆ, ಶರಣರ ಆಧ್ಯಾತ್ಮಿಕ ಸಾಧನೆ. ಶಿವಯೋಗಿಗಳು ಅಂಗ-ಲಿಂಗ ಸಮರಸದಿಂದ ಅಂಗತತ್ವಗಳು ಲಿಂಗತತ್ವಗಳಾಗಿ ಅನುಭಾವಿಸುವ ಬೆಳಗು. ಪ್ರಾಣಾಯಾಮ, ಶಿವಯೋಗದಿಂದ ಅನುಭಾವಿಸುವ ಶೂನ್ಯ. ಇಂತಹ 'ಶೂನ್ಯ'ದ ಸಂಪಾದನೆಯೇ ನಮ್ಮ ಗುರಿಯಾಗಬೇಕು ಎಂಬುದು ಶರಣರ ಆಶಯ.
*ಶೂನ್ಯ ಸಂಪಾದನೆ ಎಂಬ ಗ್ರಂಥಗಳು* :
ಹನ್ನೆರಡನೆಯ ಶತಮಾನದಲ್ಲಿ ರಚನೆಯಾದ ಬಿಡಿ ಬಿಡಿಯಾಗಿ ಸಿಕ್ಕ ವಚನಗಳನ್ನು ಒಂದು ನಿರ್ದಿಷ್ಟವಾದ ಪರಿಕಲ್ಪನೆಯಲ್ಲಿ ಸಂಕಲಿಸಿ-ಸಂಪಾದಿಸಿದ ಕೃತಿ ’ಶೂನ್ಯ ಸಂಪಾದನೆಗಳು.’ ನಾಲ್ಕು ಶೂನ್ಯ ಸಂಪಾದನೆಗಳು ಲಭ್ಯವಿವೆ. ಕಥನ-ಸಂವಾದ ರೂಪದಲ್ಲಿ ಸಂಕಲಿಸಲಾಗಿದೆ. ಅಲ್ಲಮನ ವಚನಗಳು ಮತ್ತು ಸಮಕಾಲೀನ ಶರಣರ ವಚನಗಳನ್ನೇ, ರತ್ನಮಾಲೆಯಂತೆ ಸಂದರ್ಭಕ್ಕೆ ಅನುಗುಣವಾಗಿ ಕೆಲವು ವಚನಗಳನ್ನು ಸೇರಿಸಿ , ಶಿವಗಣ ಪ್ರಸಾದಿ ಮಹದೇವಯ್ಯಗಳು ಹದಿನೈದನೆಯ ಶತಮಾನದಲ್ಲಿ ಮೊದಲ ಶೂನ್ಯ ಸಂಪಾದನೆಯನ್ನು ರಚಿಸಿದರು. ನಂತರ ಗೂಳೂರು ಸಿದ್ದವೀರಣ್ಣೊಡೆಯರು, ಮೂರನೆಯದಾಗಿ ಗುಮ್ಮಳಾಪುರದ ಸಿದ್ದಲಿಂಗದೇವರು ಅಂತಿಮವಾಗಿ ಕೆಂಚವೀರಣ್ಣೊಡೆಯರು ಹೀಗೆ ನಾಲ್ಕು ಶೂನ್ಯ ಸಂಪಾದನೆಗಳು. ಈ ಕೃತಿಗಳು ಶರಣರ ಸಿದ್ಧಿ ಸಾಧನೆಯನ್ನು ಸಾರುತ್ತವೆ.
*ಬೌದ್ಧರ ಶೂನ್ಯಕ್ಕೂ ಶರಣರ ಶೂನ್ಯಕ್ಕೆ ಇರುವ ವ್ಯತ್ಯಾಸ*:
ಬೌದ್ಧರಲ್ಲಿಯೂ 'ಶೂನ್ಯ'ದ ನಿರೂಪಣೆಯುಂಟು. ಬೌದ್ಧರ ಸಾಧನೆಯ ಮುಖ್ಯ ಉದ್ದೇಶ ದುಃಖ ನಿರ್ಮೂಲನೆ ಯಾಗಿದೆ. ಮನಸ್ಸಿನ ಮೇಲೆ ಒತ್ತಡವನ್ನು ಬೀರಿರುವ ಎಲ್ಲಾ ದುಖಕಾರಕ ಗುಣಗಳನ್ನು ತೆಗೆದುಹಾಕಿ ಆವರಣಗಳಿಂದ ವಿಮುಕ್ತಿಗೊಳಿಸಿದಾಗ ಶೂನ್ಯತೆಯ ಆರಂಭವಾಗುತ್ತದೆ ಎನ್ನುತ್ತಾರೆ. ಅವರು. " ಈ ಜಗತ್ತಿನಲ್ಲಿ ಕಾಣುವ ವಸ್ತುಗಳೆಲ್ಲವೂ ಆರೋಪಿತ, ಸಹಜ ಸ್ವಭಾವದಿಂದ ಕೂಡಿಲ್ಲ. ಕಲ್ಪಿತವಾದುವುಗಳು. ಈ ಸೃಷ್ಟಿ ಮಿಥ್ಯ ; “ನಾನು” “ನನ್ನದು' ಎಂಬ ಭಾವನೆಗಳು ಹುಸಿ.ಇವು ಆಳವಾಗಿ ಬೇರು ಬಿಟ್ಟಿರುವ ಸಂಸಾರದ ಬಂಧನಗಳು. ಇದನ್ನು ಅರಿತಾಗ ನಾಶವಾಗುತ್ತವೆ. ಹೀಗೆ ಬೌದ್ಧರ ಶೂನ್ಯವಾದದ ಮೂಲ ಅಂಶ ಈ ಜಗತ್ತನ್ನು ಮತ್ತು 'ನಾನು' ಎಂಬುದನ್ನು ಅಳಿಸಿ ಹಾಕುವುದು. ಜೀವನು ಆಶೆಯನ್ನು ಗೆದ್ದು ನಿರ್ವಾಣ ಸ್ಥಿತಿಯನ್ನು ಮುಟ್ಟಿದಾಗ, ದುಃಖ ನಿರ್ಮೂಲ ವಾಗಿ ತಾನು ಶೂನ್ಯ ಗೊಳ್ಳುತ್ತಾನೆ. ಪಂಚಸ್ಕಂಧಗಳ ಸಂಘಾತವೆನಿಸಿದ ಆತ್ಮನು ನಿರ್ವಾಣ ಸ್ಥಿತಿಯನ್ನು ಮುಟ್ಟಿದಾಗ ದುಃಖ ನಿರ್ಮೂಲದೊಂದಿಗೆ ತಾನು ಶೂನ್ಯ ಗೊಳ್ಳುತ್ತಾನೆ. ಆದ್ದರಿಂದ ಇದು ಒಂದು ರೀತಿಯಲ್ಲಿ ಆಭಾವಾತ್ಮಕ ಶೂನ್ಯ ಎಂದೆನಿಸಿದೆ.
ಹೀಗೆ ಬೌದ್ಧರು ಎಲ್ಲ ತತ್ವಗಳ ನಿರಶನವನ್ನು ಶೂನ್ಯವೆಂದು ಕರೆದರೆ ;
ಶರಣರು ಎಲ್ಲ ತತ್ವಗಳನ್ನು ಒಳಗೊಂಡ ಪರಿಪೂರ್ಣತೆಯನ್ನು ಶೂನ್ಯವೆಂದು ಕರೆದಿದ್ದಾರೆ.
Shunyasampadane (ಶೂನ್ಯ ಸಂಪಾದನೆ) can be roughly translated as "the acquisition of nothing" . The more precise translation is "the Graduated Attainment of the Divine Void" and to go beyond the limitations of body and mind and experience higher levels of consciousness. It offers the Divine experience or Anubhava, ಅನುಭಾವ) of unbounded love and joy.
- ✍️Dr Prema Pangi
#ಶೂನ್ಯಸಂಪಾದನೆ
Comments
Post a Comment