ವಚನ ದಾಸೋಹ - ಆತ್ಮತತ್ವ ಇಪ್ಪತ್ತೈದು
ವಚನ ದಾಸೋಹ : ಆತ್ಮತತ್ವ ಇಪ್ಪತ್ತೈದು
#ವಚನ:
ಆತ್ಮತತ್ವ ಇಪ್ಪತ್ತೈದು , ವಿದ್ಯಾತತ್ವ ಹತ್ತು, ಶಿವತತ್ತ್ವವೊಂದು.
ಅದೆಂತೆಂದಡೆ :
ಭೂತಾದಿ ಪಂಚಕಂಗಳೈದು, ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು,
ಶಬ್ದಾದಿ ವಿಷಯಂಗಳೈದು, ವಾಗಾದಿ ಕರ್ಮೆಂದ್ರಿಯಂಗಳೈದು,
ಮನಸಾದಿ ಪಂಚಕಂಗಳೈದು, ಆತ್ಮತತ್ವ ಇಪ್ಪತ್ತೈದು,
ಕರ್ಮಸಾದಾಖ್ಯ, ಮೂರ್ತಿಸಾದಾಖ್ಯ,
ಅಮೂರ್ತಿಸಾದಾಖ್ಯ, ಶಿವಸಾದಾಖ್ಯ,
ನಿವೃತ್ತಿಕಲೆ, ಪ್ರತಿಷ್ಠಾಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ,
ಇಂತು ವಿದ್ಯಾತತ್ವ ಹತ್ತು, ಶಿವತತ್ವವೊಂದು.
ಇಂತು ಮೂವತ್ತಾರು ತತ್ವಂಗಳೊಳಗೆ
ಶಿವತತ್ತ್ವವೆ ತತ್ಪದ, ಆತ್ಮತತ್ವವೆ ತ್ವಂಪದ, ವಿದ್ಯಾತತ್ತ್ವವೆ ಅಸಿಪದ.
ಅಕಾರದಲ್ಲಿ ತತ್ವದ ಐಕ್ಯವಾಯಿತ್ತು.
ಉಕಾರದಲ್ಲಿ ತ್ವಂಪದ ಐಕ್ಯವಾಯಿತ್ತು.
ಮಕಾರದಲ್ಲಿ ಅಸಿಪದ ಐಕ್ಯವಾಯಿತ್ತು.
ಮಕಾರ ಅಕಾರ ಉಕಾರ ಏಕಾರ್ಥವಾಗಿ
ಷಟ್ಸ್ಥಲಬ್ರಹ್ಮವೆಂಬ ಮಹಾಜ್ಯೋತಿರ್ಮಯಲಿಂಗವಾಯಿತ್ತು.
ಆ ಷಟ್ಸ್ಥಲಬ್ರಹ್ಮವೆಂಬ ಮಹಾಜ್ಯೋತಿರ್ಮಯಲಿಂಗದಲ್ಲಿ
ತತ್ಪದ ತ್ವಂಪದ ಅಸಿಪದ ನಿಕ್ಷೇಪವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
/ 375
- ಶರಣ ಬಾಲಸಂಗಯ್ಯ ಅಪ್ರಮಾಣದೇವ
ಅರ್ಥ:
ಅದ್ವಿತೀಯ ಪಂಡಿತನಾಗಿದ್ದ 'ಬಾಲಸಂಗಯ್ಯ'ನ ವಚನಗಳು ಶಾಸ್ತ್ರ ಸಮ್ಮತ, ನೀತಿ ಪ್ರಧಾನ, ತತ್ವ ಪ್ರಬೋಧಕವಾಗಿವೆ. ಷಟಸ್ಥಲ ಅರಿತುಕೊಳ್ಳುವ ಜಿಜ್ಞಾಸುಗಳಿಗೆ ಬಾಲಸಂಗಯ್ಯರ 'ವಚನ ಗ್ರಂಥ' ದಾರಿದೀಪವಾಗಿ ನಿಲ್ಲಬಲ್ಲ ಶಕ್ತಿಯನ್ನು ಹೊಂದಿದೆ. 'ಸಕಲಾಗಮ ಶಿಖಾಮಣಿ' ಅಪ್ರಮಾಣದೇವನ ಕೃತಿಯ ಹೆಸರು, ಇದರಲ್ಲಿ 'ಅಪ್ರಮಾಣ ಕೂಡಲ ಸಂಗಮದೇವ' ಅಂಕಿತದ ಒಟ್ಟು ೯೨೦ ವಚನಗಳು ಸಂಕಲನಗೊಂಡಿವೆ. ಇದು ಒಂದು ಶುದ್ಧ ತಾತ್ವಿಕ ಶಾಸ್ತ್ರ ಕೃತಿ. ಚೆನ್ನಬಸವಾದಿಗಳು ಹೇಳಿದ ಲಿಂಗಾಯತ ಧರ್ಮತತ್ವಗಳನ್ನು ವ್ಯವಸ್ಥಿತವಾಗಿ ಪ್ರತಿಪಾದಿಸುವುದೇ ಇದರ ಪರಮ ಉದ್ದೇಶ. ಸೃಷ್ಟಿಯ ಉತ್ಪತ್ತಿಯಿಂದ ಹಿಡಿದು ಲಿಂಗಾಂಗ ಸಾಮರಸ್ಯವರೆಗಿನ ವಿಷಯಗಳು ಇಲ್ಲಿ ವಿವರಗೊಂಡಿವೆ. ತಾನು ಹೇಳುವ ಪ್ರತಿಯೊಂದು ವಿಷಯಕ್ಕೂ ಸಂಸ್ಕೃತ ಪ್ರಮಾಣ ವಾಕ್ಯಗಳನ್ನು ಈತ ನೀಡಿರುವನು. ಹೀಗಾಗಿ ವೇದ, ಆಗಮ, ಉಪನಿಷತ್ತು, ಪ್ರಮಾಣ ಸಂಹಿತೆ, ಶ್ರುತಿ, ಸ್ಮರ್ತಿ, ಸೂಕ್ತ ಮೊದಲಾದವುಗಳಿಂದ ಧಾರಾಳವಾಗಿ ತನ್ನ ವಿಚಾರ ಸಮರ್ಥನೆಗೆ ಉಕ್ತಿಗಳನ್ನು ಎತ್ತಿಕೊಟ್ಟಿರುವನು. ಅನುಭಾವ ಮತ್ತು ಬೆಡಗನ್ನು ಕುರಿತು ಅನೇಕ ವಚನಗಳಿವೆ.
ಈ ವಚನದಲ್ಲಿ ಬಾಲಸಂಗಯ್ಯ ಅಪ್ರಮಾಣದೇವರು ಶರಣ ಧರ್ಮದ 36 ಮೂಲಭೂತ ತತ್ವಗಳನ್ನು ವಿವರಿಸುತ್ತ ಆ ತತ್ವಗಳಲ್ಲಿ ಶಿವಾದ್ವೈತದ "ತತ್ವಂ ಅಸಿ" ಹೇಗೆ ಅಡಕವಾಗಿದೆ ಎಂದು ವಿವರಿಸುತ್ತಾರೆ.
"ತತ್ವಂ ಅಸಿ" ಎಂಬ ಪ್ರಜ್ಞೆಯ ಸ್ಥಿತಿಯಿಂದ (stage of Awareness) ಮುಂದು ಹೋಗಿ ಅಕಾರ ಉಕಾರ ಮಕಾರ ಮೂರರಲ್ಲಿ ತತ್ವಂ ಅಸಿ ಐಕ್ಯವಾದಾಗ ಮಕಾರ ಅಕಾರ ಉಕಾರ ಏಕಾರ್ಥವಾದಾಗ "ಷಟ್ಸ್ಥಲಬ್ರಹ್ಮ"ವೆಂಬ ಮಹಾಜ್ಯೋತಿರ್ಮಯಲಿಂಗ ದರ್ಶನ ವಾಗುತ್ತದೆ ಎನ್ನುತ್ತಾರೆ.
(Aikya or merger with The Supreme; 'thou art one with the Supreme')
ಆತ್ಮತತ್ವಗಳು ಇಪ್ಪತ್ತೈದು, ವಿದ್ಯಾತತ್ವಗಳು ಹತ್ತು, ಶಿವತತ್ವ ಒಂದು
ಅದು ಹೇಗೆ ಅಂದರೆ
ಆತ್ಮತತ್ವಗಳು - 25 (ಇಪ್ಪತ್ತೈದು)
1) 5 ಮಹಾಭೂತಗಳು
ಪೃಥ್ವಿ ಅಪ್ಪು ತೇಜ ವಾಯು ಆಕಾಶ
2)5 ಜ್ಞಾನೇಂದ್ರಿಯಗಳು
ಶೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣ
3) 5 ವಿಷಯಗಳು
ಶಬ್ದ , ಸ್ಪರ್ಶ, ರೂಪ, ರಸ, ಗಂಧ.
4) 5 ಕರ್ಮೆಂದ್ರಿಯಗಳು
ವಾಕ್ಕು ಪಾಣಿ ಪಾದ ಪಾಯು ಗುಹ್ಯ
5) 5 ಪಂಚಕರಣಗಳು
ಮನ ಜ್ಞಾನ ಬುದ್ಧಿ ಚಿತ್ತ ಅಹಂಕಾರ
ಹೀಗೆ ಇಪ್ಪತ್ತೈದು ಆತ್ಮತತ್ವಗಳು
ವಿದ್ಯಾತತ್ವಗಳು - 10 (ಹತ್ತು)
1) 5 ಸಾಧಾಖ್ಯಗಳು
ಕರ್ಮಸಾದಾಖ್ಯ, ಕರ್ತುಸಾದಾಖ್ಯ, ಮೂರ್ತಿಸಾದಾಖ್ಯ, ಅಮೂರ್ತಿಸಾದಾಖ್ಯ, ಶಿವಸಾದಾಖ್ಯ
2) 5 ಕಲೆಗಳು
ನಿವೃತ್ತಿಕಲೆ, ಪ್ರತಿಷ್ಠಾಕಲೆ,
ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ,
ಶಿವತತ್ವ - 1 (ಒಂದು)
ಹೀಗೆ ಮೂವತ್ತಾರು ತತ್ವಗಳು
* ತತ್ವಂ ಅಸಿ *
" ಸತ್ಯಸ್ಯ ಸತ್ಯಂ ತತ್ ತತ್ವಮಸಿ", ಸತ್ಯದ ಸತ್ಯ ನೀನು ಅದೇ ಆಗಿದ್ದೀಯೇ ಅಥವಾ ಅಹಂ ಬ್ರಹ್ಮಸ್ಮಿ ನಾನೇ ಬ್ರಹ್ಮ ಅಥವಾ ನಾನೇ ದೇವರು
(Tattvamasi - thou art That'.
The knower is the same as, the knowable)
ಈ ಮೂವತ್ತಾರು ತತ್ವಗಳಲ್ಲಿ
ತತ್ವಂ ಅಸಿ ಅಡಗಿದೆ.
ಶಿವತತ್ತ್ವವೆ "ತತ್" ಪದ, ಆತ್ಮತತ್ವವೆ "ತ್ವಂ"ಪದ, ಶಿವತತ್ತ್ವ, "ತತ್" ಆತ್ಮತತ್ವದ "ತ್ವಂ" ಕೂಡಿದರೆ, "ತತ್ವಂ" ಆಗುತ್ತದೆ.
ಶಿವತತ್ವ, ಆತ್ಮತತ್ವಗಳಲ್ಲಿ ಕೂಡಿದರೆ ಅದೇ ಲಿಂಗಾಂಗ ಸಮರಸ. ವಿದ್ಯಾತತ್ತ್ವವೆ "ಅಸಿ"ಪದ.
ಅದು ಮುಂದೆ ವರೆದು
ಅಕಾರದಲ್ಲಿ "ತತ್" ಪದ ಐಕ್ಯವಾಯಿತ್ತು.
ಉಕಾರದಲ್ಲಿ "ತ್ವಂ"ಪದ ಐಕ್ಯವಾಯಿತ್ತು.
ಮಕಾರದಲ್ಲಿ "ಅಸಿ"ಪದ ಐಕ್ಯವಾಯಿತ್ತು.
ಮಕಾರ ಅಕಾರ ಉಕಾರ ಏಕಾರ್ಥವಾಗಿ
ಷಟ್ಸ್ಥಲಬ್ರಹ್ಮವೆಂಬ ಮಹಾಜ್ಯೋತಿರ್ಮಯಲಿಂಗವಾಯಿತ್ತು.
ಆ ಷಟ್ಸ್ಥಲಬ್ರಹ್ಮವೆಂಬ ಮಹಾಜ್ಯೋತಿರ್ಮಯಲಿಂಗದಲ್ಲಿ
"ತತ್' ಪದ "ತ್ವಂ"ಪದ "ಅಸಿ"ಪದ ನಿಕ್ಷೇಪವಾಗಿದೆ ಎನ್ನುತ್ತಾರೆ ಶರಣ ಬಾಲಸಂಗಯ್ಯ ಅಪ್ರಮಾಣದೇವರು.
*ವಚನ ಚಿಂತನೆ*:
ಭಾರತೀಯ ತತ್ತ್ವಶಾಸ್ತ್ರದಲ್ಲಿ, ತತ್ವಗಳು ಅಂದರೆ ವಾಸ್ತವದ ಅಂಶಗಳು. ತತ್ವ ಎಂಬುದು ಸಂಸ್ಕೃತ ಪದವಾಗಿದ್ದು ಇದರ ಅರ್ಥ 'ಅದು', 'ವಾಸ್ತವ' 'ಸತ್ಯ' .
ಸಾಂಖ್ಯ ಮತ್ತು ಶೈವ ತತ್ತ್ವಗಳಲ್ಲಿ ಆತ್ಮಗಳು ಮತ್ತು ಬ್ರಹ್ಮಾಂಡದ ಸಂಪೂರ್ಣ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಮೂಲಭೂತ ಪರಿಕಲ್ಪನೆಗಳಾಗಿವೆ. ಸಾಂಖ್ಯ ತತ್ತ್ವಶಾಸ್ತ್ರವು 25 ತತ್ವಗಳನ್ನು ಪಟ್ಟಿಮಾಡುತ್ತದೆ ಆದರೆ ಶೈವ ತತ್ವಗಳು ಈ ಸಂಖ್ಯೆಯನ್ನು 36 ಕ್ಕೆ ವಿಸ್ತರಿಸುತ್ತವೆ .
ಬ್ರಹ್ಮಾಂಡದ ರಚನೆ ಮತ್ತು ಮೂಲವನ್ನು ವಿವರಿಸಲು ತತ್ವಗಳನ್ನು ಬಳಸಲಾಗುತ್ತದೆ. ಅವುಗಳನ್ನು ಸಾಮಾನ್ಯವಾಗಿ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ: ಶುದ್ಧ (ಶುದ್ಧ ತತ್ವಗಳು); ಶುದ್ಧಶುದ್ಧ (ಶುದ್ಧ-ಅಶುದ್ಧ ತತ್ವಗಳು); ಮತ್ತು ಅಶುದ್ಧ (ಅಶುದ್ಧ ತತ್ವಗಳು). ಶುದ್ಧ ತತ್ವಗಳು ಸಂಪೂರ್ಣ ಆಂತರಿಕ ಅಂಶಗಳನ್ನು ವಿವರಿಸುತ್ತದೆ ; ಶುದ್ಧ-ಅಶುದ್ಧ ತತ್ವಗಳು ಆತ್ಮ ಮತ್ತು ಅದರ ಮಿತಿಗಳನ್ನು ವಿವರಿಸುತ್ತದೆ; ಅಶುದ್ಧ ತತ್ವಗಳು ಬ್ರಹ್ಮಾಂಡ ಮತ್ತು ಆತ್ಮದ ಅಸ್ತಿತ್ವಕ್ಕೆ ಸಹಾಯ ಮಾಡುವ ಜೀವಿಗಳನ್ನು ಒಳಗೊಂಡಿರುತ್ತವೆ.
ಸಾಂಖ್ಯ ತತ್ತ್ವಶಾಸ್ತ್ರವು ಕೇವಲ 25 ತತ್ವಗಳನ್ನು ಎಣಿಸುತ್ತದೆ; ಇಪ್ಪತ್ನಾಲ್ಕು ಆತ್ಮ ತತ್ವಗಳು ಪುರುಷನೊಂದಿಗೆ ,ಇದು ಆತ್ಮ. ಶೈವ ತತ್ತ್ವಚಿಂತನೆಗಳು ಇವುಗಳ ಬಗ್ಗೆ ವಿವರಿಸಿ ಇವುಗಳನ್ನು ಇಪ್ಪತ್ತನಾಲ್ಕು ಅಶುದ್ಧತತ್ವಗಳಾಗಿ ತೆಗೆದುಕೊಂಡು ಅವುಗಳಿಗೆ ಶುದ್ಧಶುದ್ಧ (ಶುದ್ಧ-ಅಶುದ್ಧ) ಮತ್ತು ಶುದ್ಧ ತತ್ವಗಳನ್ನು ಸೇರಿಸುತ್ತವೆ . ಹೀಗೆ ಮೂವತ್ತಾರು ವಿಶಿಷ್ಟ ತತ್ವಗಳನ್ನು ಎಣಿಕೆ ಮಾಡುವುದು, ಶುದ್ಧ-ಅಶುದ್ಧ ತತ್ವಗಳಲ್ಲಿ ಪುರುಷನನ್ನು ಎಣಿಸಲಾಗುತ್ತದೆ .
ಆರಂಭಿಕ ಶೈವ ತತ್ತ್ವಶಾಸ್ತ್ರಗಳ ಪ್ರಕಾರ, ಪರಮೇಶ್ವರ, ಪರಶಿವ (ಪರಮಶಿವ), ಅಂತಿಮ ವಾಸ್ತವ, ಪರಬ್ರಹ್ಮ, ಪರವಸ್ತು , ಪರಮಾತ್ಮ ಅಂದರೆ ಸೃಷ್ಠಿಯ ಎಲ್ಲವೂ ಹೊರಹೊಮ್ಮುವ ಒಂದು ರೂಪ. ಶೈವ ಧರ್ಮದ ಪರಮಶಿವನು 36 ತತ್ವಗಳ ಮೂಲಕ ಪರಮಶಿವನಿಂದ ಜೀವಕ್ಕೆ ಇಳಿಯುವ ಪ್ರಕ್ರಿಯೆಯ ಮೂಲಕ ತನ್ನನ್ನು ತಾನು ಪ್ರಕಟಿಸಿಕೊಳ್ಳುತ್ತಾನೆ ಎಂದು ತತ್ವಗಳನ್ನು ವಿವರಿಸುತ್ತದೆ. ಪರಶಿವನ ದೈವಿಕ ಲೀಲಾ. ಸೃಜನಾತ್ಮಕ ಶಕ್ತಿಯು ಈ 36 ತತ್ತ್ವಗಳನ್ನು ಸ್ವತಃ ಪ್ರಕಟಪಡಿಸುವಂತೆ ಪ್ರೇರೇಪಿಸುತ್ತದೆ.
ತತ್ವಂ ಅಸಿ" ಸತ್ಯದ ಸತ್ಯ, ಪರಮ ಸತ್ಯ ನೀನು ಅದೇ ಆಗಿದ್ದೀಯೇ ಎಂಬ ಪ್ರಜ್ಞೆಯ ಸ್ಥಿತಿ ಯಿಂದ(stage of Awareness) ಶರಣರು ಜ್ಞಾತೃ ಜ್ಞಾನ ಜ್ಞೇಯ ಒಂದೇ ಎಂದು ಅರಿತು ನಂತರ ಅದಕ್ಕೂ ಮುಂದು ಹೋಗಿ ಲಿಂಗಾಂಗ ಸಮರಸದ ಅನುಭಾವ ಸ್ಥಿತಿಗೆ ಐಕ್ಯಕ್ಕೆ ಅಹಂ ಸಮರ್ಪಣ )ಇಲ್ಲುವಾಗುವಿಕೆ) ಅವಶ್ಯ ಎನ್ನುತ್ತಾರೆ. ಅಕಾರ ಉಕಾರ ಮಕಾರ ಮೂರರಲ್ಲಿ ತತ್ವಂ ಅಸಿ ಐಕ್ಯವಾದಾಗ ಮಕಾರ ಅಕಾರ ಉಕಾರ ಏಕಾರ್ಥವಾದಾಗ "ಷಟ್ಸ್ಥಲಬ್ರಹ್ಮ"ವೆಂಬ ಮಹಾಜ್ಯೋತಿರ್ಮಯಲಿಂಗ ದರ್ಶನ ವಾಗುತ್ತದೆ ಎನ್ನುತ್ತಾರೆ ಶರಣ ಬಾಲಸಂಗಯ್ಯ ಅಪ್ರಮಾಣದೇವ ಶರಣರು.
ಶರಣ ಧರ್ಮ ಬರೀ ಜ್ಞಾನಮಾರ್ಗ ಒಪ್ಪುವುದಿಲ್ಲ. ಜ್ಞಾನ, ಕ್ರಿಯೆ, ಭಕ್ತಿ, ನಿತ್ಯ ಕಾಯಕದ ಅನುಭಾವ ಮಾರ್ಗವಾಗಿದೆ.
#ತನಗೆ ಜ್ಞಾತೃವಿಲ್ಲ ಜ್ಞೇಯವಿಲ್ಲೆನಲು
ಆರಿಗೆ ತೋರುವುದೊ? ಜಗವಿನ್ನಾರಿಗೆ ತೋರುವುದೋ?
ನಿನ್ನ ಮರುತನ ಜಗದ ಡಂಗುರ ನೋಡಾ!
ಇನ್ನಾರಿಗೆಯು ದೃಶ್ಯವಿಲ್ಲ.
ಐಕ್ಯಂತು ಭಾವ ದೃಷ್ಟಿ.
ಸಿಮ್ಮಲಿಗೆಯ ಚೆನ್ನರಾಮ ಸರ್ವವೈದ್ಯನು./57 ಎನ್ನುತ್ತಾರೆ ಶರಣ ಚಂದಿಮರಸರು
(Aikya is merger with The Supreme; 'thou art one with the Supreme')
-✍️ Dr Prema Pangi
Comments
Post a Comment