ವಚನ ದಾಸೋಹ : ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬಿವು

ವಚನ ದಾಸೋಹ:
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬಿವು
#ವಚನ:
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬಿವು
 ಪಂಚ ಮಹಾಭೂತಂಗಳು.
ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬಿವು ಪಂಚಪ್ರಾಣವಾಯುಗಳು.
ವಾಕ್ಕು ಪಾಣಿ ಪಾದ ಪಾಯು ಗುಹ್ಯವೆಂಬಿವು
ಪಂಚಕರ್ಮೆಂದ್ರಿಯಂಗಳು.
ಶೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬಿವು
ಪಂಚಜ್ಞಾನೇಂದ್ರಿಯಂಗಳು.
ಮನ ಬುದ್ಧಿ ಚಿತ್ತ ಅಹಂಕಾರವೆಂಬಿವು ಅಂತಃಕರಣ ಚತುಷ್ಟಯಂಗಳು.
ಇಂತು ಇಪ್ಪತ್ತು ನಾಲ್ಕು ತತ್ವಂಗಳು ಕೂಡಿ ದೇಹವಾಯಿತ್ತು.
ಭೂತೈಶ್ಚ ಪಂಚಭಿಃ ಪ್ರಾಣೈಶ್ಚ ಚತುರ್ದಶಭಿರಿಂದ್ರಿಯೈಃ|
ಚತುರ್ವಿಂಶತಿದೇಹಾನಿ ಸಾಂಖ್ಯಶಾಸ್ತ್ರವಿದೋ ವಿದುಃ||
ಎಂದುದಾಗಿ, ಇಂತೀ ಇಪ್ಪತ್ತನಾಲ್ಕು ತತ್ತ್ವಂಗಳು ಕೂಡಿ
ಚೇಷ್ಟಿಸುವಾತನೇ ಜೀವಾತ್ಮನು.
ಅದೆಂತೆಂದಡೆ: ಮನಶ್ಚತುರ್ವಿಂಶಕಂ ಚ ಜ್ಞಾತೃತ್ವಂ ಪಂಚವಿಂಶಕಂ|
ಆತ್ಮಾ ಷಡ್ವಿಂಶಕಶ್ಚೈವ ಪರಾತ್ಮಾ ಸಪ್ತವಿಂಶಕಃ||
ಚತುರ್ವಿಧಂತು ಮಾಯಾಂಶಂ ನಿರ್ಗುಣಃ ಪರಮೇಶ್ವರಃ|
ಪಂಚವಿಂಶತಿ ತತ್ತ್ವಾನಿ ಮಾಯಾಕರ್ಮ ಗುಣಾಯತೇ
ವಿಷಯಾ ಇತಿ ಕಥ್ಯಂತೇ ಪಾಶಜೀವ ನಿಬಂಧನಾತ್
ಇಂತೆಂದುದಾಗಿ ಇಂತೀ ಪಂಚವಿಂಶತಿ ತತ್ತ್ವಂಗಳುತ್ಪತ್ತಿಯು
ನಿಮ್ಮ ನೆನಹುಮಾತ್ರದಿಂದಾದವಾಗಿ
ಇವರ ಗುಣಧರ್ಮಕರ್ಮಂಗಳು ನಿಮಗಿಲ್ಲ ನೋಡಾ,
ಸಿಮ್ಮಲಿಗೆಯ ಚೆನ್ನರಾಮಾ./99
ಅರ್ಥ:
ಸುತ್ತೂರು ವೀರಸಿಂಹಾಸನದ ಅಧ್ಯಕ್ಷ ಶರಣ  ಚಂದಿಮರಸರು  ಬಸವಣ್ಣನವರ ಹಿರಿಯ ಸಮಕಾಲೀನರು. ಕೃಷ್ಣಾನದಿ ತೀರದ ಚಿಮ್ಮಲಿಗೆ ಇವರ ಹುಟ್ಟೂರು. ಇವರ ಗುರು ನಿಜಗುಣಯೋಗಿ ಇವರಿಂದ ದೀಕ್ಷೆ ಪಡೆದು ಶರಣ ಧರ್ಮದ ಸಂಸ್ಕಾರವನ್ನು ಪಡೆದರು. ಸಿಮ್ಮಲಿಗೆಯ ಚೆನ್ನರಾಮ ಅಂಕಿತದಲ್ಲಿ 160 ವಚನಗಳು ದೊರೆತಿವೆ. ಅರಿವು, ಗುರು-ಶಿಷ್ಯರ ಸಂಬಂಧ, ಇಷ್ಟಲಿಂಗ ದೀಕ್ಷೆ,  ಅರಿವು, ಆತ್ಮಜ್ಞಾನ, ಶರಣರಸ್ತುತಿ, ಅನುಭಾವ ಈ ಮುಂತಾದ ವಿಷಯಗಳನ್ನು ವಿವೇಚಿಸಿದ್ದಾರೆ. ತಮ್ಮ ಅರಿವೇ ತಮಗೆ ಗುರು. ಈ ಅರಿವನ್ನು ಪ್ರತಿಯೊಬ್ಬರು ಜಾಗೃತಗೊಳಿಸಿ ಬಾಳಬೇಕೆಂದು ಇವರ ವಚನಗಳಲ್ಲಿ ಮೂಡಿಬರುತ್ತವೆ. ಪ್ರಸ್ತುತ ವಚನದಲ್ಲಿ ಬ್ರಹ್ಮಾಂಡದ ರಚನೆ, ಜೀವಾತ್ಮನ ಮೂಲವನ್ನು ವಿವರಿಸಲು ತತ್ವಗಳ ಪ್ರವೃತ್ತಿ ಮಾರ್ಗದ ವಿವರವಿದೆ.

ಪೃಥ್ವಿ ಅಪ್ಪು ತೇಜ ವಾಯು ಆಕಾಶ ವೆಂಬ ಐದು ಪಂಚ ಮಹಾಭೂತಗಳು.

ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ ಐದು ಪಂಚಪ್ರಾಣವಾಯುಗಳು.

ವಾಕ್ಕು ಪಾಣಿ ಪಾದ ಪಾಯು ಗುಹ್ಯವೆಂಬ ಐದು ಪಂಚಕರ್ಮೆಂದ್ರಿಯಂಗಳು.

ಶೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ ಐದು  ಪಂಚಜ್ಞಾನೇಂದ್ರಿಯಂಗಳು.

ಮನ ಬುದ್ಧಿ ಚಿತ್ತ ಅಹಂಕಾರ ವೆಂಬವು ಅಂತಃಕರಣ ಚತುಷ್ಟಯಂಗಳು.

ಇಂತು ಇಪ್ಪತ್ತು ನಾಲ್ಕು ತತ್ವಗಳು ಕೂಡಿ ದೇಹವಾಯಿತು.
ಇದಕ್ಕೆ ಸಾಕ್ಷಿ ಇದು ಸಂಖ್ಯಾ ಶಾಸ್ತ್ರದ ಪ್ರಕಾರ.
#ಭೂತೈಶ್ಚ ಪಂಚಭಿಃ ಪ್ರಾಣೈಶ್ಚ ಚತುರ್ದಶಭಿರಿಂದ್ರಿಯೈಃ|
ಚತುರ್ವಿಂಶತಿದೇಹಾನಿ ಸಾಂಖ್ಯಶಾಸ್ತ್ರವಿದೋ ವಿದುಃ||
ಎಂದುದಾಗಿ, ಹೀಗೆ  
ಪಂಚ ಮಹಾಭೂತಗಳು, ಪಂಚಪ್ರಾಣವಾಯುಗಳು,  ಪಂಚಕರ್ಮೆಂದ್ರಿಯಂಗಳು, ಪಂಚಜ್ಞಾನೇಂದ್ರಿಯಂಗಳು, 
ಅಂತಃಕರಣ ಚತುಷ್ಟಯಂಗಳು ಈ ಇಪ್ಪತ್ತನಾಲ್ಕು ತತ್ತ್ವಗಳು ಕೂಡಿ ಚೇಷ್ಟಿಸುವಾತನೇ ಜೀವಾತ್ಮನು.

ಅದು ಹೇಗೆಂದರೆ
 #ಮನಶ್ಚತುರ್ವಿಂಶಕಂ ಚ ಜ್ಞಾತೃತ್ವಂ ಪಂಚವಿಂಶಕಂ|
ಆತ್ಮಾ ಷಡ್ವಿಂಶಕಶ್ಚೈವ ಪರಾತ್ಮಾ ಸಪ್ತವಿಂಶಕಃ||
ಚತುರ್ವಿಧಂತು ಮಾಯಾಂಶಂ ನಿರ್ಗುಣಃ ಪರಮೇಶ್ವರಃ|
ಪಂಚವಿಂಶತಿ ತತ್ತ್ವಾನಿ ಮಾಯಾಕರ್ಮ ಗುಣಾಯತೇ
ವಿಷಯಾ ಇತಿ ಕಥ್ಯಂತೇ ಪಾಶಜೀವ ನಿಬಂಧನಾತ್

ಹೀಗೆ ಅಂದುದಾಗಿ ಈ ರೀತಿ ಪಂಚವಿಂಶತಿ ತತ್ತ್ವಗಳು ಉತ್ಪತ್ತಿಯಾದವು.
ಈ ತತ್ವಗಳು
ನಿಮ್ಮ ನೆನಹುಮಾತ್ರದಿಂದ ಆದವಾಗಿ
ಈ ಪಂಚವಿಂಶತಿ ತತ್ವಗಳ ಗುಣಧರ್ಮ ಕರ್ಮಗಳು ನಿಮಗಿಲ್ಲ ನೋಡಾ,
ಸಿಮ್ಮಲಿಗೆಯ ಚೆನ್ನರಾಮಾ ಎಂದು ತಮ್ಮ ಇಷ್ಟದೈವವನ್ನು ನೆನೆಯುತ್ತಾರೆ ಶರಣ ಚಂದಿಮರಸರು.
ವಚನ ಚಿಂತನೆ:
ಸಾಂಖ್ಯ ಮತ್ತು ಶೈವ ತತ್ತ್ವಗಳಲ್ಲಿ ಆತ್ಮಗಳು ಮತ್ತು ಬ್ರಹ್ಮಾಂಡದ ಸಂಪೂರ್ಣ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಮೂಲಭೂತ ಪರಿಕಲ್ಪನೆಗಳಾಗಿವೆ. ಸಾಂಖ್ಯ ತತ್ತ್ವಶಾಸ್ತ್ರವು 25 ತತ್ವಗಳನ್ನು ಪಟ್ಟಿಮಾಡುತ್ತದೆ ಆದರೆ  ಶೈವ ತತ್ವಗಳು ಈ ಸಂಖ್ಯೆಯನ್ನು 36 ಕ್ಕೆ ವಿಸ್ತರಿಸುತ್ತವೆ .
ಬ್ರಹ್ಮಾಂಡದ ರಚನೆ ಮತ್ತು ಮೂಲವನ್ನು ವಿವರಿಸಲು ತತ್ವಗಳನ್ನು ಬಳಸಲಾಗುತ್ತದೆ. ಅವುಗಳನ್ನು ಸಾಮಾನ್ಯವಾಗಿ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ: ಶುದ್ಧ (ಶುದ್ಧ ತತ್ವಗಳು); ಶುದ್ಧಶುದ್ಧ (ಶುದ್ಧ-ಅಶುದ್ಧ ತತ್ವಗಳು); ಮತ್ತು ಅಶುದ್ಧ (ಅಶುದ್ಧ ತತ್ವಗಳು). ಶುದ್ಧ ತತ್ವಗಳು ಸಂಪೂರ್ಣ ಆಂತರಿಕ ಅಂಶಗಳನ್ನು ವಿವರಿಸುತ್ತದೆ ; ಶುದ್ಧ-ಅಶುದ್ಧ ತತ್ವಗಳು ಆತ್ಮ ಮತ್ತು ಅದರ ಮಿತಿಗಳನ್ನು ವಿವರಿಸುತ್ತದೆ; ಅಶುದ್ಧ ತತ್ವಗಳು ಬ್ರಹ್ಮಾಂಡ ಮತ್ತು ಆತ್ಮದ ಅಸ್ತಿತ್ವಕ್ಕೆ ಸಹಾಯ ಮಾಡುವ ಜೀವಿಗಳನ್ನು ಒಳಗೊಂಡಿರುತ್ತವೆ. 

ಸಾಂಖ್ಯ ತತ್ತ್ವಶಾಸ್ತ್ರವು ಕೇವಲ 25 ತತ್ವಗಳನ್ನು ಎಣಿಸುತ್ತದೆ; ಇಪ್ಪತ್ನಾಲ್ಕು ಆತ್ಮ ತತ್ವಗಳು ಪುರುಷನೊಂದಿಗೆ ,ಇದು ಆತ್ಮ.  ಶೈವ ತತ್ತ್ವಚಿಂತನೆಗಳು ಇವುಗಳ ಬಗ್ಗೆ ವಿವರಿಸಿ ಇವುಗಳನ್ನು ಇಪ್ಪತ್ತನಾಲ್ಕು ಅಶುದ್ಧ  ತತ್ವಗಳಾಗಿ(ಅಂಗತತ್ವಗಳು) ತೆಗೆದುಕೊಂಡು ಅವುಗಳಿಗೆ ಶುದ್ಧಶುದ್ಧ (ಶುದ್ಧ-ಅಶುದ್ಧ) ಮತ್ತು ಶುದ್ಧ ತತ್ವಗಳನ್ನು  ಸೇರಿಸುತ್ತವೆ . ಹೀಗೆ ಮೂವತ್ತಾರು ವಿಶಿಷ್ಟ ತತ್ವಗಳನ್ನು ಎಣಿಕೆ ಮಾಡುವುದು, ಶುದ್ಧಶುದ್ಧ ತತ್ವಗಳಲ್ಲಿ ಪುರುಷನನ್ನು ಎಣಿಸಲಾಗುತ್ತದೆ .

ಆರಂಭಿಕ ಶೈವ ತತ್ತ್ವಶಾಸ್ತ್ರಗಳ ಪ್ರಕಾರ, ಪರಮೇಶ್ವರ, ಪರಶಿವ, ಪರಮಶಿವ, ಅಂತಿಮ ವಾಸ್ತವ, ಪರಬ್ರಹ್ಮ, ಪರವಸ್ತು , ಪರಮಾತ್ಮ ಅಂದರೆ ಸೃಷ್ಠಿಯ ಎಲ್ಲವೂ ಹೊರಹೊಮ್ಮುವ ಒಂದು ರೂಪ.  ಶೈವ ಧರ್ಮದ ಪರಮಶಿವನು 36 ತತ್ವಗಳ ಮೂಲಕ ಪರಮಶಿವನಿಂದ ಜೀವಕ್ಕೆ ಇಳಿಯುವ ಪ್ರಕ್ರಿಯೆಯ ಮೂಲಕ ತನ್ನನ್ನು ತಾನು ಪ್ರಕಟಿಸಿಕೊಳ್ಳುತ್ತಾನೆ ಎಂದು ತತ್ವಗಳನ್ನು ವಿವರಿಸುತ್ತದೆ.  ಪರಶಿವನ ದೈವಿಕ ಲೀಲಾ.  ಸೃಜನಾತ್ಮಕ ಶಕ್ತಿಯು ಈ 36 ತತ್ತ್ವಗಳನ್ನು ಸ್ವತಃ ಪ್ರಕಟಪಡಿಸುವಂತೆ ಪ್ರೇರೇಪಿಸುತ್ತದೆ.  
ಪರಶಿವ ತತ್ವವು ಸೃಷ್ಟಿಯಲ್ಲಿ ನಿರಾಕಾರವಾಗಿ ತುಂಬಿತುಳುಕುತ್ತಿದೆ. ಆ ನಿರಾಕಾರ ಪರಶಿವ ತತ್ವವು  ಪ್ರತಿಯೊಂದು ಜೀವಿಯ ಅಂತರಾಳದಲ್ಲೂ, ಅಣು ಅಣುವಿನಲ್ಲೂ, ಅಣು- ರೇಣುನಲ್ಲೂ ನೆಲೆಸಿದೆ. ಯಾವಾಗ ಪರಶಿವತತ್ವವು ಜೀವಾತ್ಮನ ಸಂಪರ್ಕಕ್ಕೆ ಬರುತ್ತದೋ ಆಗ ಅದು ಶಿವತತ್ವವಾಗುತ್ತದೆ. ನಮ್ಮೊಳಗೇ ಬೆರೆತಿರುವ ಅಖಂಡ ಶಿವತತ್ವವನ್ನು ನಾವು ಅರಿತು ಅನುಭವಿಸಬೇಕು, ಅದೇ ಮುಕ್ತಿ .
- ✍️ Dr Prema Pangi
#ಪ್ರೇಮಾ_ಪಾಂಗಿ,
#ಪೃಥ್ವಿ_ಅಪ್ಪು_ತೇಜ_ವಾಯು_ಆಕಾಶವೆಂಬಿವು,#ಚಂದಿಮರಸ


Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma