ಶಿವಯೋಗ 5
ಶಿವಯೋಗ - 5
ನಾಮ,ರೂಪು ಕ್ರೀಗಳೇನು ಇಲ್ಲದ
ನಿತ್ಯನಿರಂಜನ ಪರವಸ್ತು ಇದು ನಿರಂಜನಪ್ರಣವ.
ಆ ನಿರಂಜನ ಪರವಸ್ತುವಿನಲ್ಲಿ ಪರಮ ಚಿತ್ಕಲೆ ಉದಯವಾಯಿತು.
ಆ ಚಿತ್ಕಲೆ ಶುದ್ಧಪ್ರಣವ.
ಆ ಶುದ್ಧ ಪ್ರಣವದಲ್ಲಿ ಚಿತ್ತು ಹುಟ್ಟಿತು. ಆ ಚಿತ್ತೇ ಸಚ್ಚಿದಾನಂದಸ್ವರೂಪವನ್ನು ಹೊಂದಿ
ಚಿತ್‍ಪ್ರಣವ ಆಯಿತು
ಆ ಚಿತ್ ಪ್ರಣವಸ್ವರೂಪದ ಪರತತ್ವದಲ್ಲಿ ಪರಾಶಕ್ತಿ ಉದಯವಾಯಿತು.
ಪರಾಶಕ್ತಿಯಿಂದ ನಾದ ಬಿಂದು ಕಳೆ ಗಳಾದವು.
ಆಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ;
ಹೀಗೆ ನಾದ ಬಿಂದು ಕಳೆ ಈ ಮೂರಕ್ಕೆ ಪರಾಶಕ್ತಿಯೇ ತಾಯಿ.
ಈ ನಾದ ಬಿಂದು ಕಳೆ ಮತ್ತು ಪರಾಶಕ್ತಿ ಈ ನಾಲ್ಕು ಒಂದಾದಲ್ಲಿ ಓಂ ಪ್ರಣವವಾಯಿತು..
ಆ ಪ್ರಣವವೇ ಪಂಚಲಕ್ಷಣವಾಯಿತು.
ಆ ಪ್ರಣವವೇ ತಾರಕಾಕೃತಿ, ದಂಡಕಾಕೃತಿ, ಕುಂಡಲಾಕೃತಿ,ಅರ್ಧಚಂದ್ರಾಕೃತಿ, ಬಿಂದುಕೃತಿ ಆಗಿ ಪಂಚಾಕೃತಿಯಾಯಿತು.
ತಾರಕಾ ಕೃತಿಯಲ್ಲಿ ನಕಾರ ಜನನ;
ದಂಡಕಾಕೃತಿಯಲ್ಲಿ ಮಕಾರ ಜನನ.
ಕುಂಡಲಾಕೃತಿಯಲ್ಲಿ ಶಿಕಾರ ಜನನ.
ಅರ್ಧಚಂದ್ರಾಕೃತಿಯಲ್ಲಿ ವಕಾರ ಜನನ.
ಬಿಂದುಕೃತಿಯಲ್ಲಿ ಯಕಾರ ಜನನ.
ಹೀಗೆ ಪ್ರಣವದಿಂದ
ಪಂಚಾಕ್ಷರಗಳು ಉತ್ಪತ್ತಿಯಾದವು.
ಪಂಚಭೂತ ಗಳಿಂದ ದೇಹ
ಪ್ರಥ್ವಿ, ಅಪ್ಪು, ತೇಜ, ವಾಯು, ಆಕಾಶವೆಂಬ ಐದು ಮಹಾಭೂತಗಳ ಪಂಚಿಕರಣದಿಂದ ನಮ್ಮ ದೇಹವಾಗಿದೆ.
ಐದು ವಿಷಯಗಳು-
ಶಬ್ದ, ಸ್ಪರ್ಶ, ರೂಪ, ರಸ, ಗಂಧ
ಐದು ವಿಷಯಾನುಭವಗಳು-.
ಗಂಧ - ಗಂಧಾನುಭವ.
ರಸ - ರಸಾನುಭವ.
ರೂಪ - ರೂಪಾನುಭವ.
ಸ್ಪರ್ಶ - ಸ್ಪರ್ಶಾನುಭವ
ಶಬ್ಧ - ಶಬ್ದಾನುಭವ
ಐದು ಕರ್ಮೇoದ್ರಿಯಗಳು -
ವಾಕ್ಕು, ಪಾಣಿ, ಪಾದ, ಉಪಸ್ಥಾ, ಪಾಯು
ಐದು ಕರ್ಮೇoದ್ರಿಯಗಳಾದ ವಾಕ್ಕು, ಪಾಣಿ, ಪಾದ, ಉಪಸ್ಥಾ, ಪಾಯು ಅವುಗಳ ಕಾರ್ಯಗಳು-
ವಾಕ್ಕು : ಧ್ವನಿ ನಿರ್ಮಾಣ ಕಾರ್ಯ
ಪಾಣಿ : ಗ್ರಹಣಮಾಡುವ, ಹಿಡಿವ ಕಾರ್ಯ
ಪಾದ : ನಡೆಯುವ ಕಾರ್ಯ
ಉಪಸ್ಥಾ : ಪ್ರಜನನ ಕಾರ್ಯ
ಪಾಯು : ವಿಸರ್ಜನ ಕಾರ್ಯ
ಪಂಚಾಕ್ಷರಗಳಲ್ಲಿ ಓಂ ಪ್ರಣವವೇ ಕೂಡಿ, ಷಡಕ್ಷರವೆಂದು ಆಯಿತು. ಆ ಆರು ಪ್ರಣವಗಳೇ ಆರು ಲಿಂಗಗಳು.
ಆರು ಲಿಂಗಗಳು-
ಆಚಾರಲಿಂಗ
ಗುರುಲಿಂಗ
ಶಿವಲಿಂಗ
ಜಂಗಮಲಿಂಗ
ಪ್ರಸಾದಲಿಂಗ
ಮಹಾಲಿಂಗ
ಆರು ಚಕ್ರಗಳು-
ಆಧಾರ ಚಕ್ರ,
ಸ್ವಾದಿಷ್ಠಾನ ಚಕ್ರ
ಮಣಿಪೂರಕ ಚಕ್ರ,
ಅನಾಹುತ ಚಕ್ರ
ವಿಶುಧ್ಧಿ ಚಕ್ರ
ಆಜ್ಞಾ ಚಕ್ರ
ಆರು ಚಕ್ರಗಳಲ್ಲಿ ಕ್ರಮವಾಗಿ
ಆಚಾರಲಿಂಗ ,ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ ಎಂಬ ಆರು ಲಿಂಗಗಳನ್ನು ಪೂಜಿಸಬೇಕು.
ಆ ಆರು ಲಿಂಗಗಳಿಗೆ
ಆರು ಇಂದ್ರಿಯಗಳು -
ಐದು ಜ್ಞಾನೇಂದ್ರಿಯಗಳು
ಘ್ರಾಣ - ಗಂಧಗ್ರಾಹಕ
ಜಿಹ್ವೆ - ರಸಗ್ರಾಹಕ
ನೇತ್ರ - ರೂಪಗ್ರಾಹಕ
ತ್ವಕ್ಕು - ಸ್ಪರ್ಶಗ್ರಾಹಕ
ಶ್ರೋತ್ರ - ಶಬ್ದಗ್ರಾಹಕ
ಹೃದಯ ಎಂಬ ಆರು ಇಂದ್ರಿಯಗಳನ್ನು
ಆರು ಮುಖಗಳೆಂದು ತಿಳಿದು, ಆರು ಮುಖಗಳಿಗೆ ಆರು ತನ್ಮಾತ್ರೆಗಳನ್ನು
ಗಂಧ , ರುಚಿ, ರೂಪು , ಸ್ಪರ್ಶ, ಶಬ್ದ , ತೃಪ್ತಿ ಎಂಬ
ಆರು ವಿಧದ ಭಕ್ತಿಗಳು -
ಶ್ರದ್ಧಾಭಕ್ತಿ,
ನೈಷ್ಠಿಕಾಭಕ್ತಿ,
ಅವಧಾನಭಕ್ತಿ
ಅನುಭಾವಭಕ್ತಿ,
ಆನಂದಭಕ್ತಿ,
ಸಮರಸಭಕ್ತಿ,
ಎಂಬ ಆರು ವಿಧದ ಭಕ್ತಿಗಳಿಂದರ್ಪಿಸಬೇಕು.
ಆರು ಬಗೆಯ ಪದಾರ್ಥ ಸಮರ್ಪಿಸಬೇಕು.ಆರು ಬಗೆಯ ಪ್ರಸಾದ ಸ್ವೀಕರಿಸಬೇಕು..
ಶಿವಯೋಗ ಸಾಧಕನು ಬಾಹ್ಯಪದಾರ್ಥಗಳನ್ನು ಕರಸ್ಥಲಲಿಂಗಕ್ಕೆ ಅರ್ಪಿಸಿ ಅನುಭವಿಸುತ್ತಾನೆ. ಆ ಪದಾರ್ಥಗಳ ಇಂದ್ರಿಯ ಅನುಭವಗಳನ್ನೆಲ್ಲ ಪ್ರಾಣಲಿಂಗಕ್ಕೆ ಸಮರ್ಪಿಸಿ ಸ್ವೀಕರಿಸಿ ಸಂತೋಷಿಸುತ್ತಾನೆ.
ವಿವಿಧ ಅಂಗಗಳಿಂದ ಕೂಡಿದ ದೇಹವು ಪಂಚಭೂತಗಳ ವಿಶಿಷ್ಟ ಸಂಮಿಶ್ರಣದಿಂದ ಇದು ನಿರ್ಮಾಣವಾಗಿದೆ. ಈ ದೇಹದಲ್ಲಿಯ ಪಂಚ ಕರ್ಮೇoದ್ರಿಯಗಳು - ವಾಕ್ಕು, ಪಾಣಿ, ಪಾದ, ಉಪಸ್ಥಾ, ಪಾಯು ಇವು ಮಾತನಾಡುವ, ಹಿಡಿಯುವ , ನಡೆಯುವ , ಸೃಷ್ಟಿಸುವ, ವಿಸರ್ಜಿಸುವ ಈ ಮುಂತಾದ ಕಾರ್ಯಗಳನ್ನು ಮಾಡುವ ಕ್ರಿಯಾ ಅವಯವಗಳು.
ಪಂಚ ಜ್ಞಾನೇಂದ್ರಿಯಗಳು- .ಶ್ರೋತ, ತ್ವಕ್ , ನೇತ್ರ, ಜಿಹ್ವಾ , ಘ್ರಾಣ. ಇವು ಕೇಳುವ, ಮುಟ್ಟುವ, ನೋಡುವ, ರುಚಿಸುವ ಮತ್ತು ಆಘ್ರಾಣಿಸುವ ಈ ಪಂಚ ಜ್ಞಾನಕಾರ್ಯಗಳು ಅವುಗಳಿಂದ ನಡೆಯುತ್ತವೆ.
ಪಂಚವಿಷಯಗಳು-
ಶಬ್ದ, ಸ್ಪರ್ಶ, ರೂಪ, ರಸ, ಗಂಧ .
ನಮ್ಮೆಲ್ಲರಲ್ಲಿ ಇರುವ ಆತ್ಮ.
ಇಲ್ಲಿಯ ಪಂಚ ಅನುಭವಗಳು -
ಶಬ್ದಾನುಭವ, ಸ್ಪರ್ಶಾನುಭವ, ರೂಪಾನುಭವ, ರಸಾನುಭವ, ಗಂಧಾನುಭವಗಳನ್ನು ; ಹೀಗೆ ಎಲ್ಲ ಅನುಭವಗಳನ್ನು ಮೆಲ್ಲುತ್ತ ಇರುತ್ತಾನೆ. ಇವು ವಿಷಯಗಳ ಅನುಭವಗಳು. ಈ ದೇಹವಿರುವ ವರಿಗೂ ಈ ಎಲ್ಲ ಕಾರ್ಯಗಳು ನಡೆಯುತ್ತಲೆ ಇರುತ್ತವೆ. ಅದೇ ರೀತಿ ಆತ್ಮನು ವಿಷಯಗಳ ಅನುಭವ ಪಡೆಯುತ್ತಲೆ ಇರುತ್ತಾನೆ. ಮತ್ತು ಆ ವಿಷಯಸುಖದ ವ್ಯಾಮೋಹದಲ್ಲಿ ಬಂಧಿತನಾಗುತ್ತಾನೆ. ತನ್ನ ನಿಜಸ್ವರೂಪವಾದ ಸತ್ ಚಿತ್ ಆನಂದ ಸ್ವರೂಪವನ್ನು ತಾನು ಪರಮಾತ್ಮನ ಸ್ವರೂಪ ವೆಂದು ಮರೆತುಬಿಡುತ್ತಾನೆ. ಅವನಿಗೆ 'ಬದ್ಧ ಜೀವ ಅಥವಾ ಭವಿ ಎಂದು ಹೆಸರು. ಅವನೀಗ ಇದೇ ದೇಹದೊಳಗಿದ್ದು (ಜೀವಂತ ಇರುವಾಗಲೇ) ವಿಷಯಾದಿಗಳನ್ನು ಅನುಭವಿಸುತ್ತಲೇ ಬಂಧಮುಕ್ತನಾಗಬೇಕು. ದೇಹಭಾವ ನೀಗಿ ಶಿವಭಾವ ಹೊಂದಬೇಕು.
ಐದು ಪ್ರಕಾರದ ಲಿಂಗಗಳು - ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಿಲಿಂಗ. ಈ ಲಿಂಗಗಳು ನಮ್ಮ ಸೂಕ್ಷ್ಮ ಶರೀರದ ಚಕ್ರಗಳಲ್ಲಿ ಸ್ಥಾಪನೆಗೊಂಡಿವೆ.
ಶಿವಯೋಗ ಸಾಧಕನು ಶಬ್ದಾದಿ ವಿಷಯಗಳನ್ನು ಪ್ರಾಕೃತರೂಪದಲ್ಲಿ ಅನುಭವಿಸಬಾರದು. ಲಿಂಗಕ್ಕೆ ಪದಾರ್ಥವಾಗಿ ಅರ್ಪಿಸಿ ಲಿಂಗಪ್ರಸಾದವೆಂದು ಸ್ವೀಕರಿಸಬೇಕು. ಶ್ರೋತ್ರ, ತ್ವಕ್, ನೇತ್ರ, ರಸ, ಘ್ರಾಣ - ಈ ಕ್ರಮದಲ್ಲಿ ಅಂದರೆ ಶಬ್ದದಾದಿ ವಿಷಯಗಳನ್ನು ಅನುಕ್ರಮವಾಗಿ ಆ ಕಮಲಗಳ ನಡುವೆ ಇರುವ ಲಿಂಗಗಳಿಗೆ ಆರ್ಪಿಸಿ ಅನುಭವಿಸಬೇಕು.
ಗಂಧವನ್ನು ಗ್ರಹಿಸುವುವದರಲ್ಲಿ ಗಂಧಗ್ರಾಹಕವಾದ ಮೂಗಿನ ಮೂಲಕ ಮೊದಲು ಗ್ರಾಣಿಸಿ , ಹಾಗೆ ಗ್ರಹಿಸಿದ ಗಂಧ (ವಾಸನೆ)ಯನ್ನು ಹೊಳೆವ ಶಿವಕಳೆಯಾದ "ಆಚಾರಲಿಂಗಕ್ಕೆ" ಅವಧಾನ ಭಕ್ತಿಯಿಂದ ಸಮರ್ಪಿಸಬೇಕು. ಆಗ ಆ ಗಂಧ ಲಿಂಗಪ್ರಸಾದವಾಗುತ್ತದೆ. ಅದನ್ನು ಸ್ವೀಕರಿಸಿ ಆನಂದಿಸಬೇಕು.
ರಸವನ್ನು ಆಸ್ವಾದಿಸಿವದರಲ್ಲಿ ರಸಇಂದ್ರಿಯ ದ ಮೂಲಕ ಮೊದಲು ರುಚಿಸಿ , ಹಾಗೆ ಗ್ರಹಿಸಿದ ರುಚಿಯನ್ನು ಹೊಳೆವ ಶಿವಕಳೆಯಾದ "ಗುರುಲಿಂಗಕ್ಕೆ" ಅವಧಾನ ಭಕ್ತಿಯಿಂದ ಸಮರ್ಪಿಸಬೇಕು. ಆಗ ಆ ರುಚಿ ಲಿಂಗಪ್ರಸಾದವಾಗುತ್ತದೆ. ಅದನ್ನು ಸ್ವೀಕರಿಸಿ ರುಚಿಸಿ ಆಸ್ವಾದಿಸಬೇಕು.
ರೂಪವನ್ನು ಗ್ರಹಿಸುವುವದರಲ್ಲಿ ನಯನೆಂದ್ರಿಯದ ಮೂಲಕ ಮೊದಲು ನೋಡಿ , ಹಾಗೆ ನೋಡಿದ ನೋಟವನ್ನು ಹೊಳೆವ ಶಿವಕಳೆಯಾದ "ಶಿವಲಿಂಗಕ್ಕೆ" ಅವಧಾನ ಭಕ್ತಿಯಿಂದ ಸಮರ್ಪಿಸಬೇಕು. ಆಗ ಆ ರೂಪ ಲಿಂಗಪ್ರಸಾದವಾಗುತ್ತದೆ. ಅದನ್ನು ಸ್ವೀಕರಿಸಿ ಆನಂದಿಸಬೇಕು.
ಸ್ಪರ್ಶವನ್ನು ಗ್ರಹಿಸುವುವದರಲ್ಲಿ ತ್ವಕ್ಇಂದ್ರಿಯದ ಮೂಲಕ ಮೊದಲು ಅದನ್ನು ಭಾವಿಸಿ, ಹಾಗೆ ಆ ಸ್ಪರ್ಶವನ್ನು ಹೊಳೆವ ಶಿವಕಳೆಯಾದ "ಜಂಗಮಲಿಂಗಕ್ಕೆ" ಅವಧಾನ ಭಕ್ತಿಯಿಂದ ಸಮರ್ಪಿಸಬೇಕು. ಆಗ ಆ ಸ್ಪರ್ಶ ಲಿಂಗಪ್ರಸಾದವಾಗುತ್ತದೆ. ಅದನ್ನು ಸ್ವೀಕರಿಸಿ ಅನುಭವಿಸಬೇಕು.
ಶಬ್ಬವನ್ನು ಗ್ರಹಿಸುವುವದರಲ್ಲಿ ಶ್ರೋತೆಂದ್ರಿಯದ ಮೂಲಕ ಮೊದಲು ಅದನ್ನು ಕೇಳಿ, ಹಾಗೆ ಕೇಳಿದ ಆ ಮಧುರ ಶಬ್ದವನ್ನು ಕರ್ಣವೃತ್ತಿಯೊಳಗೆ ಹೊಳೆವ ಶಿವಕಳೆಯಾದ "ಪ್ರಸಾದಲಿಂಗಕ್ಕೆ" ಅವಧಾನ ಭಕ್ತಿಯಿಂದ ಸಮರ್ಪಿಸಬೇಕು. ಆಗ ಆ ಶಬ್ದವು ಲಿಂಗಪ್ರಸಾದವಾಗುತ್ತದೆ. ಅದನ್ನು ಸ್ವೀಕರಿಸಬೇಕು.
ಶಿವಯೋಗದಲ್ಲಿ ಪ್ರಸಾದವೆಂದರೆ ಅರ್ಪಣೆಯಿಂದ ಆದ ಮನಸ್ಸಿನ ನೈರ್ಮಲ್ಯ . ಯಾವ ವಸ್ತು ಶಿವನಿಗೆ ಸಮರ್ಪಿತವಾಗುವುದೋ ಅದು ಪ್ರಸಾದ". "ಯಾವುದು ಮನೋನೈರ್ಮಲ್ಯಕ್ಕೆ ಕಾರಣವಾಗುವುದೋ ಅದು ಪ್ರಸಾದ". ಹೀಗೆ ಶರಣರು ಪ್ರಸಾದತತ್ವವನ್ನು ಎರಡು ರೀತಿಯಲ್ಲಿ ವಿವೇಚಿಸಿದ್ದಾರೆ. ತಾನೇ ಈಶ್ವರನಿಗೆ ಪ್ರಸಾದವಾಗಿ ಪರಿಣಮಿಸುವಿಕೆ ಒಂದಾದರೆ;
ಇಡೀ ಸೃಷ್ಟಿಯೆಲ್ಲಾ ಈಶ್ವರನ ಪ್ರಸಾದವೆಂಬ ಅರಿವು ಇನ್ನೊಂದು ಬಗೆಯಾಗಿ.ಇಂದ್ರಿಯಗಳೆಲ್ಲಾ ಲಿಂಗಸ್ವರೂಪವಾಗುವುದರಿಂದ ತನುವಿಕಾರ ಮನವಿಕಾರಗಳು ಇಲ್ಲದಂತಾಗಿ ಪ್ರಸನ್ನತೆಯ ತೃಪ್ತಿಯ ಪ್ರಸಾದ ಜೀವನವಾಗುತ್ತದೆ. ಈ ಲೌಕಿಕ ಜೀವನದಲ್ಲಿ ಆತ ನಿರತನಾಗಿ ಯಾವುದೇ ಕಾರ್ಯವನ್ನು ಕೈಗೊಂಡಿದ್ದರೂ ಅದು ಸಾಧನೆಗೆ ಸಹಾಯಕವೇ ಆಗುತ್ತದೆ. ಭೋಗಮಯ
ಜೀವನವೆಲ್ಲಾ ಶಿವಮಯಜೀವನವಾಗಿ ಪರಿಣಮಿಸುತ್ತದೆ. ಈ ಪ್ರಪಂಚ ಹೇಯ
ವಾದುದೆಂದು ಆತ ತ್ಯಜಿಸಿ ಓಡಿಹೋಗುವುದಿಲ್ಲ. ಶಿವನ ಪ್ರಸಾದರೂಪವಾದ ಈ ಸೃಷ್ಟಿಯ ಸೇವೆಯಲ್ಲಿ ಸ್ವಾರ್ಥಕತೆ ಕಾಣುವ ಶಿವಯೋಗಿ ಆಗುತ್ತಾನೆ.
ಹೀಗೆ ಎಲ್ಲ ವಿಷಯಗಳನ್ನು ಆಯಾ ಇಂದ್ರಿಯಗಳ ಮೂಲಕ ಪಡೆದು ಆಯಾ ಇಂದ್ರಿಯಗಳಲ್ಲಿ ನೆಲೆಸಿದ ಲಿಂಗಗಳಿಗೆ ಸಮರ್ಪಿಸಿ ಸ್ವೀಕರಿಸಿ, ವಿಷಯಾನುಭವ ಪಡೆಯುವದರಿಂದ ಆ ಶಬ್ದಾದಿ ವಿಷಯಗಳು ಸಾಧಕನನ್ನು ಬಾಧಿಸುವದಿಲ್ಲ. ಬಂಧಿಸುವದಿಲ್ಲ. ಅವನ ಬದುಕು ವಿಮುಕ್ತವೂ ದಿವ್ಯವೂ ಆಗುತ್ತದೆ. ಶಿವಯೋಗ ಸಾಧನೆಯಲ್ಲಿ ಎಲ್ಲ ಅಂಗತತ್ವಗಳು ಅರ್ಪಣೆಯಾಗಿ "ಪ್ರಸಾದಿಕರಣ"ಗೊಂಡು ಲಿಂಗತತ್ವ ಗಳಾಗುತ್ತವೆ.
"ಲಿಂಗಾರ್ಪಣೆ" ಎಂಬುದನ್ನು ಬಹಳ ವ್ಯಾಪಕವಾದ ಅರ್ಥದಲ್ಲಿ ಕಂಡಿದ್ದಾರೆ ಶರಣರು. ಆದ್ದರಿಂದ ಅಲ್ಲಮ ಪ್ರಭುಗಳು ಅವನು ಸಾಕ್ಷಾತ್ ಲಿಂಗವೇ ಎಂದು ಹೇಳಿದ್ದಾರೆ. ಹೀಗೆ ಎಲ್ಲ ಜ್ಞಾನೇಂದ್ರಿಯಗಳಲ್ಲಿ ಲಿಂಗ ಸ್ಥಾಪಿಸಿ ಸಾಧಕ ಸರ್ವಾಂಗಲಿಂಗಿ ಯಾಗುತ್ತಾನೆ. ಲೌಕಿಕದಲ್ಲಿ ಇದ್ದೂ ಬಂಧನಮುಕ್ತ ನಾಗುತ್ತಾನೆ.
#ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದಡೇನು ತನ್ನಿದ್ದೆಡೆಗೆ ಬಂದುದ
ಲಿಂಗಾರ್ಪಿತವ ಮಾಡಿ ಭೋಗಿಸುವುದೆ ಆಚಾರ.
ಕೂಡಲಸಂಗಮದೇವರನೊಲಿಸ ಬಂದ
ಪ್ರಸಾದಕಾಯವ ಕೆಡಿಸಲಾಗದು. / 431
ಎಂಬ ಸರಳವಾದ ಮಾತಾದರೂ ಅರ್ಥ ಗರ್ಭಿತವಾಗಿದೆ. ದೇಹಸುಖಕ್ಕಾಗಿ, ನಾಲಗೆಯ ಚಪಲಕ್ಕಾಗಿ ಬಯಸುವ ಆಶೆ ಸಲ್ಲದು. ಹಾಗೆಯೇ ಬಂದದ್ದನ್ನು ತಿರಸ್ಕರಿಸಬೇಕೆಂಬ ವೈರಾಗ್ಯವೂ ಬೇಕಾಗಿಲ್ಲ. ಪ್ರಭು ಹೇಳುವಂತೆ ಉಂಡೇನೆಂಬ ಬಯಕೆಯೂ ಇಲ್ಲ. ಒಲ್ಲೆನೆಂಬ ವೈರಾಗ್ಯವೂ ಇಲ್ಲ. ತಾನಿದ್ದೆಡೆಗೆ ಬಂದುದನ್ನು ಲಿಂಗಾರ್ಪಿತವ ಮಾಡಿ ಭೋಗಿಸುವುದೇ ಯುಕ್ತವಾದುದು. ಕೂಡಲಸಂಗನನ್ನು ಒಲಿಸುವುದಕ್ಕಾಗಿ ಬಂದ ಈ ದೇಹ ಪವಿತ್ರವಾದದ್ದು ; ಈ ಪ್ರಸಾದಕಾಯವನ್ನು ಕೆಡಿಸಲಾಗದು ಎಂಬ ಬಸವಣ್ಣನವರ ಮಾತು ಮನನೀಯವಾಗಿದೆ.
ಜೀವನು ದೀಕ್ಷೆಯಿಂದ ಶುದ್ಧವಾಗಿ 'ಅಂಗ' ಎನಿಸಿಕೊಳ್ಳುತ್ತಾನೆ. ಪ್ರಸಾದಿಕರಣದಿಂದ ಅವನ ದೇಹದ ಅಂಗಗುಣಗಳು ಅಳಿದು ಲಿಂಗಗುಣಗಳಾಗಿ ಪರಿಣಮಿಸುತ್ತವೆ. ಆ ಲಿಂಗಗುಣಗಳಿಂದ ಸಮನ್ವಿತನಾಗಿ ಪರಿಣಮಿಸುತ್ತಾನೆ. ಸ್ವೀಕರಿಸುವ ಆಹಾರದಿಂದ ಹಿಡಿದು ಇತರ ಎಲ್ಲ ಕ್ರಿಯೆಗಳಲ್ಲಿಯೂ ಪ್ರಸಾದವನ್ನೇ ಕಾಣುವ ದೈವಿಕ ದೃಷ್ಟಿ ಶರಣರದು.
ತಾನೇ ಈಶ್ವರನಿಗೆ ಪ್ರಸಾದವಾಗಿ ಪರಿಣಮಿಸುವಿಕೆಯಿಂದ ಇಡೀ ಸೃಷ್ಟಿಯೆಲ್ಲಾ ಈಶ್ವರನ ಪ್ರಸಾದವೆಂಬ ಭಾವನೆ ಒಡಮೂಡುತ್ತದೆ.
ದೇಹವಿಡಿದು ಲೌಕಿಕ ಜಗತ್ತಿನಲ್ಲಿಯೇ ಬಾಳಬೇಕು. ಶಬ್ದಾದಿ ವಿಷಯಗಳನ್ನು ಹಿತವಾಗಿ ಅನುಭವಿಸಬೇಕು, ಆದರೆ ಮೋಹ ಮಾಯೆಗಳಿಗೆ ಒಳಗಾಗಬಾರದು. ಅದೇ ಶಿವಯೋಗ ಸಾಧನೆ.
- ✍️ Dr Prema Pangi
Comments
Post a Comment