ಬುದ್ಧ ಪೂರ್ಣಿಮೆಯ ಶುಭಾಶಯಗಳು
* ಗೌತಮ ಬುದ್ಧ *
557 - 447 BC
ಗೌತಮ ಬುದ್ಧರು ಬೌದ್ಧಧರ್ಮದ ಸಂಸ್ಥಾಪಕ ಮಾತ್ರರಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕರು.
ಬುದ್ಧನು ಬೋಧಿಸಿದ್ದು ದುಃಖದಿಂದ ಹೊರಬರುವ ಮಾರ್ಗವನ್ನು. ಇದನ್ನೆ ಅವರು ಪಾಲಿ ಭಾಷೆಯಲ್ಲಿ "ಧಮ್ಮ" ಎಂದು ಕರೆದರು. ತಾನು ಬೊಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವನೂ ಅಲ್ಲ, ಕೊನೆಯವನೂ ಅಲ್ಲವೆಂದು ಸಾರಿದರು. ಯಾರು ಬೇಕಾದರೂ ಈ ಮಾರ್ಗವನ್ನು ಅನುಸರಿಸಿ ದುಃಖದಿಂದ ಮುಕ್ತರಾಗಬಹುದು ಮತ್ತು ತನ್ನಂತೆ ಎಚ್ಚರದ ಸ್ಥಿತಿಯನ್ನು ಬೌದ್ಧತ್ವವನ್ನು ಹೊಂದಬಹುದು. ಆದರೆ ಈ ಸಿದ್ಧಿಗೆ ಸ್ವಂತ ಪ್ರಯತ್ನ, ಸಾಧನೆ ಮಾತ್ರ ಕಾರಣ ಎಂದು ಹೇಳಿದರು. ಸತತ ಎಚ್ಚರದ ಸ್ಥಿತಿಯನ್ನು ಸಾಧಿಸಿದ ಯಾರನ್ನೂ ಬೇಕಾದರೂ ಬುದ್ಧನೆಂದು ಕರೆಯಬಹುದು. ತಾನು ಅಂತಹ ಅರಿವಿನ ಸ್ಥಿತಿಯಲ್ಲಿರುವುದರಿಂದ ತನ್ನನ್ನು ಬುದ್ಧನೆಂದು ಸಂಬೋಧಿಸಲು ಅವರು ತಮ್ಮ ಶಿಷ್ಯರಿಗೆ ಸೂಚಿಸಿದರು.
"ಬುದ್ಧ" ಎಂದರೆ ನಿದ್ದೆಯಿಂದ ಎದ್ದವನು, ಜಾಗೃತನಾದವ, ಜ್ಞಾನಿ, ವಿಕಸಿತ, ಎಲ್ಲವನ್ನು ತಿಳಿದವನು ಎಂದರ್ಥ. ಅವನು ಎಲ್ಲರಿಗೂ ಸಂಜೀವಿನಿಯಂಥ ಮಾಹಿತಿ ನೀಡಿದ ಮಹಾತ್ಮ. "ಆಸೆಯೇ ದುಃಖಕ್ಕೆ ಮೂಲ" ಎಂಬುದು ಅವನ ಪ್ರಸಿದ್ಧ ತತ್ವ.
ವಿವಿಧ ಪಂಥಗಳ ಗುರುಗಳ ಹತ್ತಿರ ಸತತವಾಗಿ 6 ವರ್ಷಗಳ ಕಾಲ ಅವರು ಹೇಳಿದಂತೆ ದೇಹ ದಂಡನೆ ಮಾಡಿ ಇದರಿಂದ ಯಾವುದೇ
ಪ್ರತಿಫಲ ಮತ್ತು ಶಾಂತಿ ಸಿಗದೆ ಅಂತಿಮವಾಗಿ ಪರಮ ಸತ್ಯ ಕಾಣಲು ಮುಂದಿನ 6 ವರ್ಷಗಳು ಬೋಧಿ ವೃಕ್ಷದ ಕೆಳಗೆ ನಿರಂತರ ಧ್ಯಾನ ತಪಸ್ಸು ಮಾಡುವುದರ ಮೂಲಕ ಪರಿಪೂರ್ಣ
ಜ್ಞಾನೋದಯ ಪಡೆದುಕೊಂಡರು. ಗೌತಮ ಬುದ್ಧರು ಮುಂದಿನ 45 ವರ್ಷಗಳು ನಿರಂತರವಾಗಿ ಧಮ್ಮೋಪದೇಶಗಳನ್ನು ಜನಸಾಮಾನ್ಯರಿಗೆ ನೀಡುವ ಮೂಲಕ ಮಾನವನ ದುಃಖ ನಿವಾರಣೆಗೆ ಬೋಧನೆ ಮಾಡಿದರು.
"ಬುದ್ಧ" ಅಂದರೆ ದೇವರಲ್ಲ, ದೇವದೂತನೂ ಅಲ್ಲ ಮತ್ತು ದೈವಸಂಭೂತನೂ ಅಲ್ಲ ; ಆದರೆ ತನ್ನ ಸ್ವಸಾಮಾರ್ಥ್ಯದಿಂದ, ಅತ್ಯುನ್ನತ ಜ್ಞಾನ ಪಡೆದು ಜಗತ್ತಿಗೆ ಪರಮ ಸತ್ಯವನ್ನು ಬೋಧಿಸಿದ ಮಹಾಗುರು. ಪರಿಶುದ್ದವಾದ ಜೀವನ ನಡೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದರಿಂದ ದುಃಖ ನಿವಾರಣೆ ಸಾಧ್ಯ. "ಧಮ್ಮ" ವೆಂದರೆ ಇತರೆ ಧರ್ಮಗಳಲ್ಲಿರುವಂತೆ ಅದು ತತ್ವಶಾಸ್ತ್ರವಲ್ಲ. ಇದು ಎಲ್ಲರಿಗೂ ಮುಕ್ತವಾದ ರೀತಿಯಲ್ಲಿ ಸತ್ಯದ ಬೆಳಕು ಚಲ್ಲುತ್ತದೆ. ಇದರಿಂದ ಜೀವನ ಸಾಕ್ಷಾತ್ಕಾರವನ್ನು ಪಡೆಯಬಹುದು. ಮನುಷ್ಯರು ಮನಸ್ಸಿನ ಶುದ್ಧಿ ಮತ್ತು ಅಂತರ್ ದೃಷ್ಟಿಯಿಂದ ಅಂತಿಮವಾಗಿ "ನಿಬ್ಬಾಣ" ಹೊಂದಬಹುದು.
ಬೌದ್ಧಧರ್ಮದ ಮಧ್ಯಮ ಮಾರ್ಗದ ಮೂಲಕ ಮೈತ್ರಿ, ಕರುಣೆ, ದಯೆ, ಸಮತೆ, ಪ್ರೀತಿ, ಅನುಕಂಪ, ಮತ್ತು ಜ್ಞಾನದೂಂದಿಗೆ ಅಷ್ಠಾಂಗ ಮಾರ್ಗಗಳನ್ನು ತೋರಿಸಿಕೊಟ್ಟರು. ಈ ಸತ್ಯವನ್ನು ನಾವು ಪರಿಪಾಲಿಸಿದರೆ ನಮ್ಮ ಜೀವನದಲ್ಲಿ ಬುದ್ಧತ್ವವನ್ನು ಪಡೆಯಬಹುದು.
🌷ಬೌದ್ಧ ಧಮ್ಮದ ಮೂಲ ಸಂಕೇತಗಳು🌷.
ಬುದ್ಧಂ ಶರಣಂ ಗಚ್ಚಾಮಿ
ಧಮ್ಮಂ ಶರಣಂ ಗಚ್ಚಾಮಿ
ಸಂಘಂ ಶರಣಂ ಗಚ್ಚಾಮಿ
"ಗಚ್ಚಾಮಿ" ಎಂದರೆ, ಸತ್ಯದಿಂದ ಬೌದ್ಧ ಧಮ್ಮ ಸ್ವೀಕರಿಸುತ್ತೆನೆ ಎಂದು ಅರ್ಥೈಸುತ್ತದೆ.
ಈ ಮೂರು ಶರಣ್ಯಗಳನ್ನು ಉಪಾಸಕರು ಮೂರು ಬಾರಿ ಉಚ್ಚರಿಸುವ ಮೂಲಕ ತಾವು ಬೌದ್ಧ ಧಮ್ಮಾಚಾರಿಗಳೆಂದು ಘೋಷಿಸುತ್ತಾರೆ.
- ✍️Dr Prema Pangi
Comments
Post a Comment