ವಚನ ದಾಸೋಹ :ಗುರುವೇ ಪರಶಿವನು.
#ಗುರುವೇ ಪರಶಿವನು.
ಗುರುವೇ ಸಕಲಾಗಮಮೂರ್ತಿ.
ಗುರುವೇ ಸಕಲ ವಿದ್ಯಾಸ್ವರೂಪನು.
ಗುರುವೇ ಸಕಲ ಮಂತ್ರಸ್ವರೂಪನು.
ಗುರುವೇ ಕಲ್ಪವೃಕ್ಷವು, ಕಾಮಧೇನುವು.
ಗುರುವೇ ಪರುಷದ ಖಣಿ, ತವನಿಧಿ.
ಗುರುವೇ ಕರುಣರಸಾಬ್ಧಿ.
ಗುರುವಿನಿಂದಧಿಕ ದೈವವಿಲ್ಲ.
ಸರ್ವಧ್ಯಾನಕ್ಕೆ ಗುರುಧ್ಯಾನವೇ ಅಧಿಕ.
ಸರ್ವಪೂಜೆಗೆ ಗುರುವಿನ ಪಾದಪೂಜೆಯೇ ಅಧಿಕ.
ಸರ್ವಮಂತ್ರಕ್ಕೆ ಗುರುವಿನ ವಾಕ್ಯವೇ ಅಧಿಕ.
ಸರ್ವಮುಕ್ತಿಗೆ ಗುರುವಿನ ಕರುಣಕೃಪೆಯೇ ಅಧಿಕ.
ಸಾಕ್ಷಿ : ''ಧ್ಯಾನಮೂಲಂ ಗುರೋಮರ್ರ್ತಿಃ
ಪೂಜಾಮೂಲಂ ಗುರೋಃ ಪದಂ |
ಮಂತ್ರಮೂಲಂ ಗುರೋರ್ವಾಕ್ಯಂ
ಮುಕ್ತಿಮೂಲಂ ಗುರೋಃ ಕೃಪಾ ||''
ಎಂಬುದಾಗಿ, ಇಂತಿವನೆಲ್ಲವನೊಳಕೊಂಡು
ಎನ್ನ ಕರಸ್ಥಲಕ್ಕೆ ಇಷ್ಟಲಿಂಗಸ್ವರೂಪವಾಗಿ
ಮತ್ತೆ ಮನಸ್ಥಲಕ್ಕೆ ಪ್ರಾಣಲಿಂಗಸ್ವರೂಪವಾಗಿ
ಮತ್ತೆ ಭಾವಸ್ಥಲಕ್ಕೆ ಭಾವಲಿಂಗಸ್ವರೂಪವಾಗಿ
ಈ ತ್ರಿವಿಧಮೂರ್ತಿಯೇ ಅಷ್ಟಾವರಣಸ್ವರೂಪವಾಗಿ
ಎನ್ನ ಅರುಹಿನಲ್ಲಿ ಗುರು
ಎನ್ನ ಪ್ರಾಣದಲ್ಲಿ ಲಿಂಗ
ಎನ್ನ ಜ್ಞಾನದಲ್ಲಿ ಜಂಗಮ
ಎನ್ನ ಜಿಹ್ವೆಯಲ್ಲಿ ಪಾದೋದಕ
ಎನ್ನ ನಾಸಿಕದಲ್ಲಿ ಪ್ರಸಾದ
ಎನ್ನ ತ್ವಕ್ಕಿನಲ್ಲಿ ವಿಭೂತಿ
ಎನ್ನ ನೇತ್ರದಲ್ಲಿ ರುದ್ರಾಕ್ಷಿ
ಎನ್ನ ಶ್ರೋತ್ರದಲ್ಲಿ ಪಂಚಾಕ್ಷರಿ
ಇಂತಿವು ಅಷ್ಟಾವರಣಸ್ವರೂಪವಾಗಿ
ಎನ್ನೊಳು ತನ್ನ ಕರುಣಕೃಪೆಯ ತೋರಿದಾತ
ನಮ್ಮ ಶಾಂತಕೂಡಲಸಂಗಮದೇವ. / 17
- ಶರಣ ಗಣದಾಸಿ ವೀರಣ್ಣನವರು
*ಅರ್ಥ*:
ಪರಶಿವ (ಇಷ್ಟದೈವ ಶಾಂತ ಕೂಡಲಸಂಗಮದೇವ)ನೇ ನನ್ನ ಗುರು, ತಮ್ಮ ಗುರು ಸಕಲಾಗಮಮೂರ್ತಿ,
ಸಕಲ ವಿದ್ಯಾಸ್ವರೂಪ, ಸಕಲ ಮಂತ್ರಸ್ವರೂಪ, ಬೇಡಿದನ್ನು ಕರುಣಿಸುವ ಕಲ್ಪವೃಕ್ಷ, ಕಾಮಧೇನು, ಪರುಷದ ಖಣಿ, ತವನಿಧಿ, ಕರುಣರಸದ ಮೂಲ ಎಂದು ವರ್ಣಿಸುತ್ತಾರೆ.
ಗುರುವಿನಿಗಿಂತ ಹೆಚ್ಚಿನ ದೈವವಿಲ್ಲ.
ಸರ್ವಧ್ಯಾನಕ್ಕೆ ಗುರುಧ್ಯಾನವೇ ಅಧಿಕ.
ಸರ್ವಪೂಜೆಗಿಂತ ಗುರುವಿನ ಪಾದಪೂಜೆಯೇ ಅಧಿಕ.
ಸರ್ವಮಂತ್ರಕ್ಕೆ ಗುರುವಿನ ವಾಕ್ಯವೇ ಅಧಿಕ.
ಸರ್ವಮುಕ್ತಿಗೆ ಗುರುವಿನ ಕರುಣಕೃಪೆಯೇ ಅಧಿಕ. ಇದಕ್ಕೆಲ್ಲ
ಸಾಕ್ಷಿಯಾಗಿ ಶ್ಲೋಕದ ಆಧಾರ ಕೊಡುತ್ತಾರೆ. ಪರಶಿವನೇ ಎನ್ನ ಗುರುವಾಗಿ ಬಂದು ಕರಸ್ಥಲಕ್ಕೆ ಇಷ್ಠಲಿಂಗ, ಮನಸ್ಥಲಕ್ಕೆ ಪ್ರಾಣಲಿಂಗ, ಭಾವಸ್ಥಲಕ್ಕೆ ಭಾವಲಿಂಗವಾಗಿದ್ದಾನೆ. ಸ್ವಯಂ ಪರಶಿವನೇ ಅಷ್ಟಾವರಣ ಸ್ವರೂಪನಾಗಿ, ಅರುಹಿನಲ್ಲಿ ಗುರುವಾಗಿ, ಪ್ರಾಣದಲ್ಲಿ ಲಿಂಗವಾಗಿ, ಜ್ಞಾನದಲ್ಲಿ ಜಂಗಮನಾಗಿ, ಜೆವ್ಹೆಯಲ್ಲಿ ಪಾದೋದಕವಾಗಿ, ನಾಸಿಕದಲ್ಲಿ ಪ್ರಸಾದವಾಗಿ, ತ್ವಕ್ಕಿನಲ್ಲಿ ವಿಭೂತಿಯಾಗಿ, ನೇತ್ರದಲ್ಲಿ ರುದ್ರಾಕ್ಷಿಯಾಗಿ, ಸೂತ್ರದಲ್ಲಿ ಪಂಚಾಕ್ಷರಿಯಾಗಿ ನಿಂತು ನನ್ನೊಳಗೆಯೆ ತನ್ನನ್ನು ತೋರಿದ ಎಂದು ಶರಣ ಗಣದಾಸಿ ವೀರಣ್ಣನವರು ತಮ್ಮ ಗುರು ಶಾಂತಕೂಡಲಸಂಗಮದೇವ ಆ ಪರಶಿವನೇ ;ಪರಶಿವನೇ ಗುರು ಎಂದು ಗುರುವಿನ ಮಹತ್ವವನ್ನು ತಿಳಿಸಿದ್ದಾರೆ.
- ✍️Dr Prema Pangi
Comments
Post a Comment