ವಚನ ದಾಸೋಹ : ಕರುಣಜಲ ವಿನಯಜಲ ಸಮತಾಜಲ

ವಚನ ದಾಸೋಹ :  ಕರುಣಜಲ ವಿನಯಜಲ ಸಮತಾಜಲ
ವಚನ:
#ಕರುಣಜಲ ವಿನಯಜಲ ಸಮತಾಜಲ :
ಕರುಣಜಲವೆ ಗುರುಪಾದೋದಕ:
ವಿನಯಜಲವೆ ಲಿಂಗಪಾದೋದಕ;
ಸಮತಾಜಲವೆ ಜಂಗಮಪಾದೋದಕ.
ಗುರುಪಾದೋದಕದಿಂದ ಸಂಚಿತಕರ್ಮನಾಸ್ತಿ.
ಲಿಂಗಪಾದೋದಕದಿಂದ ಪ್ರಾರಬ್ಧಕರ್ಮನಾಸ್ತಿ.
ಜಂಗಮಪಾದೋದಕದಿಂದ ಆಗಾಮಿಕರ್ಮನಾಸ್ತಿ. 
ಇಂತೀ ತ್ರಿವಿಧೋದಕದಲ್ಲಿ ತ್ರಿವಿಧಕರ್ಮನಾಸ್ತಿ.
ಇದು ಕಾರಣ- ಕೂಡಲಚೆನ್ನಸಂಗಮದೇವಾ
ತ್ರಿವಿಧೋದಕವ ನಿಮ್ಮ ಶರಣನೆ ಬಲ್ಲ. / 478
- ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು 
*ಅರ್ಥ*:
ಪಾದೋದಕದಲ್ಲಿ ಮೂರು ಬಗೆ; ಗುರು ಪಾದೋದಕ, ಲಿಂಗ ಪಾದೋದಕ, ಜಂಗಮ ಪಾದೋದಕ.
ಕರುಣೆ, ವಿನಯ ಹಾಗೂ ಚಿತ್ತಸಮತೆಗಳೇ ಪಾದೋದಕ
ಗುರುಪಾದೋದಕವೆಂದರೆ ಕರುಣಜಲ, ಲಿಂಗ ಪಾದೋದಕವೆಂದರೆ  ವಿನಯಜಲ, ಜಂಗಮ ಪಾದೋದಕವೆಂದರೆ ಸಮತಾಜಲ ಎಂದು ಚನ್ನಬಸವಣ್ಣನವರು ವರ್ಣಿಸುತ್ತಾ ಇದರಿಂದ ಸಂಚಿತ, ಪ್ರಾರಬ್ದ ಮತ್ತು ಆಗಮಿ ಕರ್ಮಗಳು ನಾಶವಾಗುತ್ತವೆನ್ನುತ್ತಾರೆ.
ಗುರು ಪಾದೋದಕ: ಕರುಣಜಲ. 
ಸಕಲ ಜೀವಿಗಳಲ್ಲಿ ಕರುಣೆಯಿಂದ, ತನ್ನಂತೆ ಪರರು ಎಂದು ಅರಿತು, ವರ್ತಿಸಿ ತನ್ನ ಸ್ಥೂಲ ತನುವನ್ನು ಪರಿಶುದ್ಧವಾಗಿಟ್ಟುಕೊಳ್ಳುವುದೇ ಗುರು ಪಾದೋದಕ. ಇದರಿಂದ ಅಜ್ಞಾನ ಎಂಬ ಮಾಲಿನ್ಯದ ನಾಶ.
ಲಿಂಗಪಾದೋದಕ: ವಿನಯಜಲ. 
ಲೋಕದಲ್ಲಿ ವ್ಯವಹರಿಸುವಾಗ ಸರ್ವರಲ್ಲಿ ವಿನಯಭಾವ ಹೊಂದಿ ಅದರಂತೆ ನಡೆ ನುಡಿ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಅಂತಃಕರಣಗಳಾದ ಚಿತ್ತ ಮನ ಬುದ್ಧಿ ಮತ್ತು ಅಹಂಕಾರಗಳನ್ನು ನಿರ್ಲಿಪ್ತವಾಗಿಸಿ ಕೊಂಡುದೇ ಲಿಂಗಪಾದೋದಕ. ಇದರಿಂದ ಅಹಂಭಾವ ಎಂಬ ಮಾಲಿನ್ಯದ ನಾಶ. 
ಜಂಗಮ ಪಾದೋದಕ: ಸಮತಾಜಲ.
 ಸೃಷ್ಟಿಯ ಸಕಲ ಜೀವಿಗಳಲ್ಲಿ ಯಾವುದೇ ಭೇದವೆಣಿಸದೆ ಎಲ್ಲರೂ ತನ್ನವರೆಂಬ ಭಾವವನ್ನಳವಡಿಸಿಕೊಂಡುದೇ ಜಂಗಮ ಪಾದೋದಕ. ಇದರಿಂದ ಭೇದಭಾವ ಎಂಬ ಮಾಲಿನ್ಯದ ನಾಶ.
ಗುರುವಿನ ಕರುಣಾಜಲ, ಲಿಂಗದ ವಿನಯಜಲ, ಜಂಗಮದ ಸಮತಾಜಲ ಇವುಗಳನ್ನು ಸೇವಿಸುವುದೇ "ತ್ರಿವಿಧಪಾದೋದಕ ಸೇವನೆ". 
ಈ ರೀತಿಯ ಆಚರಣೆಗಳು ನಮ್ಮಲ್ಲಿ ನೆಲೆಗೊಂಡುದೇ ಆದರೆ ಸಂಚಿತ, ಆಗಾಮಿ ಹಾಗೂ ಪ್ರಾರಬ್ಧ ಎಂಬ ಕರ್ಮತ್ರಯಗಳು ನಾಸ್ತಿಯಾಗುವವು ಎನ್ನುತ್ತಾರೆ 
ಚೆನ್ನಬಸವಣ್ಣನವರು.

ವಚನ ಚಿಂತನೆ:
*ಪಾದೋದಕ*
ಶರಣಧರ್ಮದಲ್ಲಿ ಪಾದೋದಕ ಅಷ್ಟಾವರಣ ಗಳಲ್ಲಿ ಒಂದು. ಇದು ಸಹ ಇತರ ಅಷ್ಟಾವರಣ ಗಳಂತೆಯೆ ಬಹಿರಂಗ ಪಾದೋದಕ, ಅಂತರಂಗದ ಪಾದೋದಕ ಎಂದು ಎರಡು ಬಗೆಯಾಗಿದೆ. ಬಹಿರಂಗ ಪಾದೋದಕವೆಂದರೆ - ಬಹಿರಂಗ ಪೂಜೆಯಲ್ಲಿ ಇಷ್ಟಲಿಂಗದ ಮೇಲೆ ಎರೆದ ನೀರು ಮತ್ತು ಅಭಿಷೇಕ. ಇದು ಸೇವನೆಗೆ ಯೋಗ್ಯವಾಗಿದೆ.
ಅಂತರಂಗ ಪಾದೋದಕವೆಂದರೆ  ಶಿವಯೋಗ ಸಾಧನೆಯ ಮೂಲಕವಾಗಿ ಅನುಭವ ಅನುಭಾವ ಹಾಗೂ ಅನುಭೂತಿಯನ್ನು ಹಂತ ಹಂತವಾಗಿ ಏರಿ ಅನುಭಾವ ಸ್ಥಿತಿಯಲ್ಲಿ ಪಿನೆಲ್ ಗ್ರಂಥಿಯು (pineal gland ) ಸ್ರವಿಸುವ ಪರಮ ಜ್ಞಾನರಸ.  ಇದು ಸಮಯಕ್ಕೆ ಸರಿಯಾಗಿ ನಿದ್ದೆ, ಸಮಚಿತ್ತ, ಸ್ಥಿತಿಪ್ರಜ್ಞೆ , intuition, ಆತ್ಮಜ್ಞಾನ (spiritual intelligence ) ಇವುಗಳಿಗೆ ಆವಶ್ಯಕ. ಇದರಲ್ಲಿ ಮೆಲಟೋನಿನ್ (melatonin) ಇರುತ್ತದೆ. ಇದನ್ನು ಶರಣರು ಚಿದ್ರಸ, ಅಮೃತ ಎಂದು ಅನೇಕ ವಚನಗಳಲ್ಲಿ ಹೆಸರಿಸಿದ್ದಾರೆ. ಇದು ಅಜ್ಞಾಚಕ್ರದ ಮಹಾಲಿಂಗದ ಮೇಲೆ ಒಸರುವದರಿಂದ ಅದನ್ನು ಸಹ ಮಹಾಲಿಂಗಾಭಿಷೇಕ ಎಂದು ಈ ಚಿದ್ರಸಕ್ಕೆ ಅಂತರಂಗದ ಪಾದೋದಕ ಎಂದರು. ಇದು ಅಂತರಂಗದ ಶುದ್ಧತೆ, ನಿರ್ಮಲತ್ವವನ್ನು ಕೊಡುತ್ತದೆ ಎಂಬ ಭಾವಜ್ಞಾನ ಶರಣರದು.
 "ಪಾದ ಎಂದರೆ ಪರಮಾನಂದ ಮತ್ತು ಉದಕ ಎಂದರೆ ಜ್ಞಾನ" ಎಂಬ ವಿಶಿಷ್ಟವಾದ ಅರ್ಥ ಶರಣಧರ್ಮದಲ್ಲಿ ಇದೆ. ಇದರ ಅರ್ಥ ಪರಮಾನಂದವೆಂಬ ಅನುಭಾವ ಜ್ಞಾನದಿಂದ ಸಂಭವಿಸಿ ಮಹಾಲಿಂಗದ ಮೇಲೆ ಒಸರುವ ಅಂತರಂಗದ ನಿರ್ಮಲತ್ವ ಅಂತರಂಗ ಶುದ್ಧಿಗೆ ಕಾರಣವಾಗುವ ಚಿದ್ರಸವೇ "ಪಾದೋದಕ"ವೆಂದಾಗುತ್ತದೆ.
-✍️ Dr Prema Pangi
 #ಕರುಣಜಲ_ವಿನಯಜಲ_ಸಮತಾಜಲ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma