ವಚನ ದಾಸೋಹ :ಅಖಂಡ ಗೋಳಕಾಕಾರ ಮಹಾಲಿಂಗದ ಪೂಜೆ ಎಂತೆಂದಡೆ

ವಚನ ದಾಸೋಹ :ಅಖಂಡ ಗೋಳಕಾಕಾರ ಮಹಾಲಿಂಗದ ಪೂಜೆ ಎಂತೆಂದಡೆ :
ವಚನ:
#ಅಖಂಡ ಗೋಳಕಾಕಾರ ಮಹಾಲಿಂಗದ ಪೂಜೆ ಎಂತೆಂದಡೆ :
ಸದ್ಯೋಜಾತಮುಖದಿಂದಾದ ಪೃಥ್ವಿ
ಲಿಂಗಕ್ಕೆ ಪತ್ರಿ ಪುಷ್ಪ ಬೇಕೆಂದು
ಅನಂತ ಪತ್ರಿ ಪುಷ್ಪಗಳಿಂದ ಅಚರ್ಸುತ್ತಿಹುದು.
ವಾಮದೇವಮುಖದಿಂದಾದಪ್ಪು
ಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂದು
ಸಪ್ತಸಮುದ್ರ ದಶಗಂಗೆಗಳ ಕುಂಭವ ಮಾಡಿ,
ಕೆರೆ ಬಾವಿಗಳ ಪಂಚಪಾತ್ರೆಯ ಮಾಡಿ,
ಮಜ್ಜನ ನೀಡಿಸುತ್ತಿಹುದು.
ಅಘೋರಮುಖದಿಂದಾದ ಅಗ್ನಿ
ಲಿಂಗಕ್ಕೆ ಧೂಪ ದೀಪ ಆರತಿಗಳಾಗಬೇಕೆಂದು,
ಕಾಷ್ಠದಲ್ಲಿ ಪಾಷಾಣದಲ್ಲಿ ಬೆಳಗುತ್ತಿಹುದು.
ತತ್ಪುರುಷಮುಖದಿಂದಾದ ವಾಯು
ಲಿಂಗಕ್ಕೆ ಜಪವ ಮಾಡುತ್ತಿಹುದು.
ಈಶಾನ್ಯ ಮುಖದಿಂದಾದ ಆಕಾಶ
ಲಿಂಗಕ್ಕೆ ಭೇರಿ ಮೊದಲಾದ ನಾದಂಗಳ ಬಾರಿಸುತ್ತಿಹುದು.
ಗೋಪ್ಯಮುಖದಿಂದಾದ ಆತ್ಮನು ಲಿಂಗಕ್ಕೆ ಸಿಂಹಾಸನವಾಗಿಪರ್ದು.
ಮನ ಚಕ್ಷುವಿನಿಂದಾದ ಚಂದ್ರ-ಸೂರ್ಯರು ದೀವಿಗೆಯಾಗಿಹರು.
ಇಂತಪ್ಪ ಘನವಸ್ತು ಎರಡಾಗಿ
ತನ್ನ ವಿನೋದಕ್ಕೆ ಅರ್ಪಿಸಿಕೊಂಬಾತನು ತಾನೇ, ಅರ್ಪಿಸುವಾತನು ತಾನೇ.
ಇಂತಪ್ಪ ಘನಲಿಂಗವು ಕರಸ್ಥಲದೊಳಗೆ
ಚುಳುಕಾಗಿ ನಿಂದ ನಿಲವ ಎನ್ನೊಳರುಹಿದಾತ
ನಮ್ಮ ಶಾಂತಕೂಡಲಸಂಗಮದೇವ./3
- ಗಣದಾಸಿ ವೀರಣ್ಣ ಶರಣರು
*ಅರ್ಥ*: 
ಬಸವಾದಿ ಶರಣರ ಸಮಕಾಲೀನರಾದ ಅಮರಗಣ ಗಣದಾಸಿ ವೀರಣ್ಣ ಶರಣರು ಕಂಡ ಮಹಾಲಿಂಗಪೂಜೆ  ನಮ್ಮ ನಿಮ್ಮಂತ ಸಾಮಾನ್ಯರಿಗೆ ಕಲ್ಪನಾತೀತವಾಗಿದೆ. ಆ ಅಗಮ್ಯ ಅಪ್ರಮಾಣ ಅಗೋಚರ ಮಹಾಲಿಂಗ ಪೂಜೆಯು ಅಷ್ಟೇ  ಅವರ್ಣನೀಯ ಅಮೋಘವಾಗಿದೆ. ಗುರು ಬಸವಣ್ಣನವರು ಲಿಂಗದೇವರ ಸ್ವರೂಪ ವಿವರಿಸುತ್ತಾ 
"ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ, ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ, ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ, ಅಗಮ್ಯ ಅಗೋಚರ ಅಪ್ರತಿಮ" ವೆಂದು ಲಿಂಗದ ಸ್ವರೂಪ ತಿಳಿಸುತ್ತಾರೆ. ಇನ್ನೂ ಜಗವೆಲ್ಲ ವ್ಯಾಪಿಸಿದ ಲಿಂಗದ ಪೂಜೆ ವಿಶ್ವದಲ್ಲಿ ಪ್ರಕೃತಿಯಲ್ಲಿ ಹೇಗೆ ನಡೆಯುತ್ತಿದೆ ಎಂಬುದರ ವರ್ಣನೆ ಮಾಡಿದ್ದಾರೆ ಗಣದಾಸಿ ವೀರಣ್ಣ ಶರಣರು. 
ಶರಣರು ವರ್ಣಿಸುವ ಜಗವೆಲ್ಲಾ ವ್ಯಾಪಿಸಿದ ಲಿಂಗವೇ ಅಖಂಡ ಗೋಳಕಾಕಾರ ಮಹಾಲಿಂಗ. ಆ ಲಿಂಗದಲ್ಲಿಯೆ ಹುಟ್ಟಿದ್ದು ಐದು ಮುಖವುಳ್ಳ ಸದಾಶಿವಲಿಂಗ. ಅವು ಸದ್ಯೋಜಾತಮುಖ, ವಾಮದೇವಮುಖ, ಅಘೋರಮುಖ, ತತ್ಪುರುಷಮುಖ, ಈಶಾನ್ಯ ಮುಖ ಮತ್ತು ಬ್ರಹ್ಮ ವಿಷ್ಣು ಆದಿಯಾಗಿ ಯಾರಿಗೂ ಗೋಚರಿಸಿದ ಗೋಪ್ಯಮುಖ. ಇವುಗಳಿಂದ ಸದ್ಯೋಜಾತಮುಖದಿಂದ ಪೃಥ್ವಿ ತತ್ವ, ವಾಮದೇವಮುಖದಿಂದ ಅಪ್ಪು(ಜಲ ತತ್ವ), ಅಘೋರಮುಖದಿಂದಾದ ಅಗ್ನಿ ತತ್ವ, ತತ್ಪುರುಷಮುಖದಿಂದ ವಾಯು ತತ್ವ, 
ಈಶಾನ್ಯ ಮುಖದಿಂದ ಆಕಾಶ ತತ್ವ, ಗೋಪ್ಯಮುಖದಿಂದ ಆತ್ಮನು ಹುಟ್ಟಿದರು.
ಹೀಗೆ ಹುಟ್ಟಿದ ಈ ಪಂಚಭೂತಗಳು ತಮ್ಮಲ್ಲಿಯೇ ಸೃಷ್ಟಿಸಿದ ತಮ್ಮದೇ ಆದ ವಸ್ತುತತ್ವಗಳನ್ನು ಸಮರ್ಪಿಸಿ, ಆ ಜಗದಗಲ ಅಖಂಡ ಮಹಾಲಿಂಗವನ್ನು ಪೂಜಿಸುತ್ತಿದ್ದಾರೆ.

ಸದ್ಯೋಜಾತಮುಖದಿಂದ ಹುಟ್ಟಿದ ಪೃಥ್ವಿಯು
ಮಹಾಲಿಂಗಕ್ಕೆ ತನ್ನ ಧರೆಯಲ್ಲಿ ಬೆಳೆದ
ಅನಂತ ಪತ್ರಿ ಪುಷ್ಪಗಳಿಂದ ಅರ್ಚಿಸುತ್ತಿದೆ.

ವಾಮದೇವಮುಖದಿಂದ ಜನಿಸಿದ ಅಪ್ಪು (ಜಲ)ವು ಮಹಾಲಿಂಗಕ್ಕೆ ಸಪ್ತಸಮುದ್ರ ದಶಗಂಗೆಗಳ ಕುಂಭವ ಮಾಡಿ, ಕೆರೆ ಬಾವಿಗಳ ಪಂಚಪಾತ್ರೆಯ ಮಾಡಿ, ಮಜ್ಜನ ನಡೆಸುತ್ತಿಹದು.

ಅಘೋರಮುಖದಿಂದ ಜನಿಸಿದ ಅಗ್ನಿಯು
ಮಹಾಲಿಂಗಕ್ಕೆ, ಕಾಷ್ಠದಲ್ಲಿ ಪಾಷಾಣದಲ್ಲಿ ಧೂಪ ದೀಪ ಆರತಿ ಬೆಳಗುತ್ತಿಹುದು.

ತತ್ಪುರುಷಮುಖದಿಂದ ಜನಿಸಿದ ವಾಯುವು,
ಮಹಾಲಿಂಗಕ್ಕೆ ಜಪವ ಮಾಡುತ್ತಿಹುದು.

ಈಶಾನ್ಯ ಮುಖದಿಂದ ಜನಿಸಿದ ಆಕಾಶವು,
ಲಿಂಗಕ್ಕೆ ಭೇರಿ ಮೊದಲಾದ ದಶನಾದಗಳನ್ನು ಬಾರಿಸುತ್ತಿಹುದು.

ಗೋಪ್ಯಮುಖದಿಂದ ಜನಿಸಿದ ಆತ್ಮನು ಮಹಾಲಿಂಗಕ್ಕೆ ಸಿಂಹಾಸನವಾಗಿದ್ದಾನೆ. ಆತ್ಮನ ಲ್ಲಿಯೆ ಮಹಾಲಿಂಗ ನೆಲೆಸಿದ್ದಾನೆ.

ಮನ ಚಕ್ಷುವಿನಿಂದಾದ ಚಂದ್ರ-ಸೂರ್ಯರು ದೀವಿಗೆಯಾಗಿ ಬೆಳಕಿನ ಪ್ರಭೆ ಹರಡಿ ತಾವೇ ವೃತ್ತಾಕಾರವಾಗಿ ಸುತ್ತುತ್ತಾ ಬೆಳಗುತ್ತಿದ್ದಾರೆ. 

ಈ  ಘನವಸ್ತು ಮಹಾಲಿಂಗವು
ತನ್ನದೇ ವಿನೋದ ಇಚ್ಛೆಗೆ ಅಂಗ, ಲಿಂಗ ಎಂದು ಎರಡಾಗಿ ಪೂಜೆಯಲ್ಲಿ  ತನ್ನನ್ನು ತಾನೇ ಪೂಜಿಸಿ ಕೊಳ್ಳುತ್ತಿದೆ.  ಈ ಪೂಜೆಯಲ್ಲಿ ಅರ್ಪಿಸಿಕೊಂಬಾತನು ತಾನೇ (ಲಿಂಗ), ಅರ್ಪಿಸುವಾತನು ತಾನೇ (ಅಂಗ) ಆದ ಪರಿ ವರ್ಣನಾತೀತ. "ಇಷ್ಟಲಿಂಗ" ವೆಂದರೆ ಆ ಮಹಾಲಿಂಗದ ಕುರುಹು. "ಅಂಗ" ವೆಂದರೆ 
ನಿಜೈಕ್ಯ ಶರಣನಾಗಿದ್ದಾನೆ.
ಇಂತಹ ಘನಲಿಂಗವು ಕರಸ್ಥಲದೊಳಗೆ 
ಚುಳುಕಾಗಿ ನಿಂತ ಇಷ್ಟಲಿಂಗದ ನಿಲವನ್ನು  ನನಗೆ ಅರುಹಿದಾತ
ನಮ್ಮ ಶಾಂತಕೂಡಲಸಂಗಮದೇವ ಸಾಕ್ಷಾತ್ ಪರಶಿವನೇ ಎನ್ನುತ್ತಾರೆ ಗಣದಾಸಿ ವೀರಣ್ಣ ಶರಣರು.
*ಶರಣ ಪರಿಚಯ*:
ಗಣದಾಸಿ ವೀರಣ್ಣ : 
ಸು.1160. 
ಶಿವಶರಣ ಹಾಗೂ ವಚನಕಾರ. ಅಲ್ಲಮಪ್ರಭು, ಬಸವೇಶ್ವರ, ಅಕ್ಕಮಹಾದೇವಿ ಮೊದಲಾದ ಮಹಾಶರಣಶರಣೆಯರ ಸಮಕಾಲೀನರು. ಪಾಲ್ಕುರಿಕೆ ಸೋಮನಾಥನ (ಸು.1299) ‘ಸಹಸ್ರಗಣನಾಮ’ದಲ್ಲಿ ಈತನ ಹೆಸರು ಉಲ್ಲೇಖಿತವಾಗಿರುವುದರಿಂದ ಅಮರಗಣದಲ್ಲಿ ಪೂಜ್ಯಸ್ಥಾನವನ್ನು ಪಡೆದುಕೊಂಡಿದ್ದನೆಂದು ತಿಳಿಯುತ್ತದೆ. ಈತ ಹಲವಾರು ವಚನಗಳನ್ನು ಬರೆದಿದ್ದಾನೆ. ನಮ್ಮ ಶಾಂತ ಕೂಡಲಸಂಗಮದೇವ ಎಂಬುದು ಈತನ ವಚನಗಳ ಅಂಕಿತ. ಇವನ ವಚನಗಳಲ್ಲಿ ಆಳವಾದ ಚಿಂತನೆ ಹಾಗೂ ಅನುಭವ ಘನೀಭೂತವಾಗಿದೆ. ‘ಗಾಳಿಯಿಲ್ಲದ ದೀಪದಂತೆ’ ಈತನ ವಚನಗಳು ಅರ್ಥಶ್ರೀಮಂತಿಕೆಯಿಂದ ಸದಾ ಪ್ರಜ್ವಲಿಸುತ್ತವೆ. ಭಾವದೃಢತೆ ವಚನಗಳಲ್ಲಿ ವ್ಯಕ್ತವಾಗಿ ಈತನ ವ್ಯಕ್ತಿತ್ವಕ್ಕೆ ಸ್ಪಷ್ಟವಾದ ನಿಲುವನ್ನು ಕೊಡುತ್ತದೆ.
- ✍️ Dr Prema Pangi
#ಅಖಂಡ_ಗೋಳಕಾಕಾರ_ಮಹಾಲಿಂಗದ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma