ವಚನ ದಾಸೋಹ : ಆಚಾರವೆ ಭಕ್ತಂಗೆ ಅಲಂಕಾರವು
ವಚನ ದಾಸೋಹ : ಆಚಾರವೆ ಭಕ್ತಂಗೆ ಅಲಂಕಾರವು
#ಆಚಾರವೆ ಭಕ್ತಂಗೆ ಅಲಂಕಾರವು.
ಆಚಾರವೆ ಭಕ್ತಂಗೆ ಸರ್ವಪೂಜ್ಯವು.
ಇಂತೀ ಆಚಾರವುಳ್ಳವನೆ ಭಕ್ತನು. ಆಚಾರವುಳ್ಳವನೆ ಯುಕ್ತನು. ಆಚಾರವುಳ್ಳವನೆ ಮುಕ್ತನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ
- ಸ್ವತಂತ್ರ ಸಿದ್ಧಲಿಂಗೇಶ್ವರರು
*ಅರ್ಥ*:
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರರು ಈ ವಚನದಲ್ಲಿ ಭಕ್ತನ ಲಕ್ಷ್ಮಣಗಳನ್ನು ವಿವರಿಸುತ್ತಾ ಭಕ್ತನಿಗೆ ಆಚಾರಗಳ ಅಳವಡಿಕೆಯ ಮಹತ್ವ ತಿಳಿಸಿದ್ದಾರೆ. ಆಚಾರವುಳ್ಳವನೆ ಭಕ್ತನು, ಯುಕ್ತನು, ಮುಕ್ತನು ಎನ್ನುತ್ತಾರೆ.
ಇದು ಭಕ್ತಸ್ಥಲದ ವಚನ.
*ಭಕ್ತಸ್ಥಲ*:
ಷಟ್ಸ್ಥಲದಲ್ಲಿ ಮೊದಲನೆಯದು ಭಕ್ತಸ್ಥಲ, ಷಟ್ಸ್ಥಲ ಸಾಧನೆಯ ಮೂಲವೇ ಭಕ್ತಿ. ಷಟ್ಸ್ಥಲಗಳು ಬೆಳೆದಂತೆ ಭಕ್ತಿ ಇಲ್ಲಿ ಬೆಳೆಯುತ್ತದೆ. ಭಕ್ತಿಯು ಷಟ್ಸ್ಥಲದಲ್ಲಿ ಚಲನಶೀಲ ಆಂತರಿಕ ವಿಕಾಸಶಕ್ತಿಯಾಗುತ್ತದೆ. ಭಕ್ತಸ್ಥಲದಲ್ಲಿ ಅದನ್ನು ' ಶ್ರದ್ಧಾ ಭಕ್ತಿ' ಎಂದು ಕರೆಯಲಾಗಿದೆ.
*ಶ್ರದ್ಧಾಭಕ್ತಿ* :
ಇಲ್ಲಿ ಶ್ರದ್ದೆ ಎಂದರೆ ವಿಚಾರವಿಲ್ಲದೆ ಎಲ್ಲವನ್ನೂ ನಂಬುವ ಕುರುಡು ನಂಬಿಕೆಯಲ್ಲ. ನಾನು ಏನು ಆಗಬೇಕೆಂದು ಉದ್ದೇಶಿಸಿದ್ದೇನೆಯೋ ಮೂಲತಃ ಅದರ ಸ್ವರೂಪವೇ ನಾನು. ಆ ಸ್ವರೂಪವೇ ಇಷ್ಟಲಿಂಗ ರೂಪದಿಂದ ಕರಸ್ಥಲಕ್ಕೆ ಬಂದಿದೆ, ಅದರ ಅನುಸಂಧಾನದಿಂದ ಆಂತರಿಕ ಪರಿವರ್ತನೆಯಾಗಿ ಆ ಸಹಜ ಸ್ಥಿತಿಯನ್ನು ಪಡೆಯಬೇಕು ಎಂಬ ಸುಜ್ಞಾನವೆಂಬ ಅರಿವಿನ ಎಚ್ಚರವೇ ಇಲ್ಲಿ ಶ್ರದ್ಧೆ ಯಾಗುತ್ತದೆ. ಶ್ರದ್ಧಾಭಕ್ತಿಯನ್ನು ಅವಲಂಬಿಸಿ ಆಚಾರಲಿಂಗ ಉಪಾಸನೆ. ಇದಕ್ಕೆ ಸಹಾಯಕವಾಗುವಂತೆ ಬಹಿರಂಗದ ಕ್ರಿಯಾಶೀಲ ಆಚಾರಗಳನ್ನು, ಜೀವನವನ್ನು ಅಳವಡಿಸಿಕೊಳ್ಳುವುದು - ಇವು ಈ ಸ್ಥಲದ ಮೊದಲ ಹಂತ. ಗುರು, ಲಿಂಗ, ಜಂಗಮ, ತ್ರಿವಿಧ ದಾಸೋಹಗಳು, ಬಹಿರಂಗದ ಕ್ರಿಯಾಶೀಲ ಜೀವನ ಇವು ಭಕ್ತನ ಲಕ್ಷಣಗಳು. ಚತುಷ್ಕೋಣಾಕಾರ ಆಧಾರ ಚಕ್ರದ, ಚತುರ್ದಳಪದ್ಮದಲ್ಲಿ ಆಚಾರಲಿಂಗದ ಧ್ಯಾನ ಉಪಾಸನೆ.
ಭಕ್ತಸ್ಥಲವನ್ನು "ಬೀಜವೃಕ್ಷನ್ಯಾಯಸ್ಥಲ" ಎಂದು ಕರೆಯುವರು.ಪರಶಿವಶಕ್ತಿಪಾತದಿಂದ ಕೃತಾರ್ಥನಾಗಿ ಶಿವದೀಕ್ಷೆ ಪಡೆದ ಭಕ್ತನಲ್ಲಿ ಭಕ್ತಿಯು "ಶ್ರದ್ಧಾ" ರೂಪವಾಗಿ ಇರುತ್ತದೆ. ಆಗ ಅವನಲ್ಲಿ ದೇಹಾದಿಗಳ ಅಭಿಮಾನವು ನಷ್ಟವಾಗಿ ಅವನಿಗೆ ಗುರು-ಲಿಂಗ-ಜಂಗಮ-ಭಸ್ಮ-ರುದ್ರಾಕ್ಷ-ಮಂತ್ರ-ಪಾದೋದಕ ಮತ್ತು ಪ್ರಸಾದ ಎಂಬ ಅಷ್ಟಾವರಣಗಳಲ್ಲಿ, ಲಿಂಗಾಚಾರ-ಸದಾಚಾರ-ಶಿವಾಚಾರ-ಗಣಾಚಾರ ಮತ್ತು ಭೃತ್ಯಾಚಾರ ಎಂಬ ಪಂಚಾಚಾರಗಳಲ್ಲಿ ಶ್ರದ್ಧೆ ಮೂಡಿ, ಅವುಗಳನ್ನು ಅನುಷ್ಠಾನಮಾಡುವ ಪ್ರವೃತ್ತಿಯುಂಟಾಗುತ್ತದೆ. ಈ ಬಗೆಯ ಅನುಷ್ಠಾನದ ಪ್ರಭಾವದಿಂದ ಬೆಣ್ಣೆ ತೆಗೆಯಲು ಮೊಸರನ್ನು ಮಥಿಸುವಂತೆ ಜೀವಾತ್ಮನಲ್ಲಿ ಶಿವತ್ವ ಅಭಿವ್ಯಕ್ತಿಗಾಗಿ ಪ್ರೇಮಮಂಥನವು ಆರಂಭವಾಗುತ್ತದೆ. ಆಗ ಭಕ್ತಿಯು ಭಕ್ತನಲ್ಲಿ ಬೀಜ ಅಂಕುರಿಸಿ ವೃಕ್ಷ ವಾಗುವಂತೆ ಬೆಳೆಯತೊಡಗುತ್ತದೆ.
-✍️ Dr Prema Pangi
#ಆಚಾರವೆ_ಭಕ್ತಂಗೆ_ಅಲಂಕಾರವು.
Comments
Post a Comment