ವಚನ ದಾಸೋಹ: ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ.
ವಚನ ದಾಸೋಹ : ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ.
#ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದಡೇನು ತನ್ನಿದ್ದೆಡೆಗೆ ಬಂದುದ
ಲಿಂಗಾರ್ಪಿತವ ಮಾಡಿ ಭೋಗಿಸುವುದೆ ಆಚಾರ.
ಕೂಡಲಸಂಗಮದೇವರನೊಲಿಸ ಬಂದ
ಪ್ರಸಾದಕಾಯವ ಕೆಡಿಸಲಾಗದು. / 431
*ಅರ್ಥ*:
ಕೂಡಲಸಂಗಮನನ್ನು ಒಲಿಸುವುದಕ್ಕಾಗಿ ಬಂದ ಈ ದೇಹ ಪವಿತ್ರವಾದದ್ದು. ಈ ಪ್ರಸಾದಕಾಯವನ್ನು ಕೆಡಿಸಲಾಗದು ಎಂಬ ಬಸವಣ್ಣನವರ ಮಾತು ನಿಸರ್ಗ ನಿಯಮಕ್ಕೆ ತಕ್ಕುದಾಗಿಯೂ, ವೈಜ್ಞಾನಿಕವೂ, ವೈಚಾರಿಕವೂ ಆಗಿದೆ. ಎಲ್ಲವೂ ಬೇಡ ಎನ್ನುವುದು ವೈರಾಗ್ಯ. ಎಲ್ಲವನ್ನು ಬಯಸುವುದು ದೇಹದ ಸಹಜ ಕಾಯಗುಣ. ನೈತಿಕವಾಗಿ ನಮಗೆ ದೊರೆತದ್ದನ್ನು ಶಿವನಿಗೆ ಅರ್ಪಿಸಿ, ಅವನು ಕರುಣಿಸಿದ ಪ್ರಸಾದವೆಂದು ಸ್ವೀಕರಿಸಬೇಕು. ಈ ದೇಹವನ್ನು ಬಸವಣ್ಣನವರು ಪ್ರಸಾದಕಾಯ ಎನ್ನುತ್ತಾರೆ. ಶಿವಯೋಗದಲ್ಲಿ ದೇವನೊಡನೆ ನಮ್ಮನ್ನು ಸೇರಿಸಲು ಸಹಕರಿಸುವ, ಅವನೇ ಕರುಣಿಸಿದ ಪ್ರಸಾದ. ದೇಹ, ಆತ್ಮಗಳು ಪರಸ್ಪರ ಸಹಕಾರದಿಂದ ನಡೆದಾಗ ಜೀವನ ತೃಪ್ತಿಕರವಾಗುತ್ತದೆ. ಒಂದು ಬಿಟ್ಟು ಇನ್ನೊಂದಿಲ್ಲ. ಶರಣರಿಗೆ ಬ್ರಹ್ಮಾಂಡದಂತೆ ಪಿಂಡಾಂಡವೂ ಸಹ ಗೌರವಾರ್ಹವಾಗಿದೆ. ಪರಮಾತ್ಮನ ಅಂಶವೇ ಆದ ಜೀವಾತ್ಮ ನೆಲೆಸಿರುವ ಅಂಗವನ್ನು ಗೌರವಭಾವನೆ ಯಿಂದಲೆ ಕಾಣಬೇಕು. ಕೆಲವು ಕಟ್ಟುನಿಟ್ಟಿನ ತಪಸ್ವಿಗಳು ದೇಹಸುಖವನ್ನು ಹೇಯವಾದುದು ಎಂದು ಪರಿಗಣಿಸಿ ಅತಿಕಠಿಣ ಉಪವಾಸ ವೃತಗಳನ್ನು, ಅತಿಯಾದ ನೇಮ ನಿಯಮಗಳನ್ನು, ಬ್ರಹ್ಮಚರ್ಯವನ್ನು ಅನುಸರಿಸುತ್ತಾರೆ. ಅಜೈವಿಕರು ಋಷಿ ಮುನಿಗಳು ಅತಿಯಾದ ವೈರಾಗ್ಯಭಾವ ತಳೆದು ಎಲ್ಲ ತರದ ಸುಖಗಳನ್ನು ತ್ಯಾಗ ಮಾಡುತ್ತಾರೆ. ಇನ್ನೂ ಹಠಯೋಗಿಗಳು ತಮ್ಮ ಯೋಗಸಾಧನೆಯಲ್ಲಿ ಕಠಿಣ ದೇಹದಂಡನೆ ಮಾಡುತ್ತಾರೆ. ಆದರೆ ಶರಣರು ಇವನ್ನು ಒಪ್ಪುವುದಿಲ್ಲ. ಅದೇ ರೀತಿ ಚರ್ವಾಕರು, ಭವಿಗಳು ಅತಿಯಾದ ಭೋಗದಲ್ಲಿಯೆ ತಮ್ಮ ಜೀವನ ಕಳೆಯುತ್ತಾರೆ. ಗುರು
ಬಸವಣ್ಣನವರು ಈ ಎರಡೂ ಮಾರ್ಗಗಳನ್ನು ಒಪ್ಪದೇ, ಲಿಂಗಮುಖದಿಂದ ಬಂದ ಸಕಲ ಭೋಗಗಳನ್ನು ನೈತಿಕ ಮಾರ್ಗದಲ್ಲಿ ನಡೆದು, ದೇವನನ್ನು ಒಲಿಸುವ ಪ್ರಸಾದಕಾಯವನ್ನು ಕೆಡಿಸದೆ, ಹಿತಮಿತವಾಗಿ ಸವಿಯಬಹುದು ಎಂದು ಪ್ರತಿಪಾದಿಸುತ್ತಾರೆ. ಹೀಗೆ ಬಸವ ಮಾರ್ಗ ಒಂದು ಮಧ್ಯಮ ಮಾರ್ಗ. ಈ ಬಸವ ಪ್ರಣೀತ ಲಿಂಗಾಯತವು ಮಾರ್ಗವು ಹಲವು ಸಾಧಕರನ್ನು, ಸಂಸಾರಸ್ಥರನ್ನು, ಇತರ ಶೈವ ಮಾರ್ಗಗಳನ್ನು, ಜೈನರನ್ನು ತನ್ನಡೆಗೆ ಸೆಳೆಯಲು ಯಶಸ್ವಿಯಾಯಿತು. . ದೇಹಸುಖಕ್ಕಾಗಿ, ನಾಲಗೆಯ ಚಪಲಕ್ಕಾಗಿ ಬಯಸುವ ಆಶೆ ಸಲ್ಲದು. ಹಾಗೆಯೇ ಸಹಜ ಕಾಯಗುಣವನ್ನು ತಿರಸ್ಕರಿಸಬೇಕೆಂಬ ವೈರಾಗ್ಯವೂ ಬೇಕಾಗಿಲ್ಲ. ಅಲ್ಲಮ ಪ್ರಭುಗಳು ಹೇಳುವಂತೆ ಉಂಡೇನೆಂಬ ಬಯಕೆಯೂ ಇಲ್ಲ. ಒಲ್ಲೆನೆಂಬ ವೈರಾಗ್ಯವೂ ಇಲ್ಲ. ತಾನಿದ್ದೆಡೆಗೆ ಬಂದುದನ್ನು ಲಿಂಗಾರ್ಪಿತವ ಮಾಡಿ ಭೋಗಿಸುವುದೇ ಯುಕ್ತವಾದುದು.
ಜೀವನು ದೀಕ್ಷೆಯಿಂದ ಶುದ್ಧವಾಗಿ 'ಅಂಗ' ಎನಿಸಿಕೊಳ್ಳುತ್ತಾನೆ. ಪ್ರಸಾದಿಕರಣದಿಂದ ಅವನ ದೇಹದ ಅಂಗಗುಣಗಳು ಅಳಿದು ಲಿಂಗಗುಣಗಳಾಗಿ ಪರಿಣಮಿಸುತ್ತವೆ. ಆ ಲಿಂಗಗುಣಗಳಿಂದ ಸಮನ್ವಿತನಾಗಿ ಅರ್ಪಣೆ ಯಿಂದ ಪ್ರಸಾದಿಯಾಗಿ ಪರಿಣಮಿಸುತ್ತಾನೆ. ಸ್ವೀಕರಿಸುವ ಆಹಾರದಿಂದ ಹಿಡಿದು ಇತರ ಎಲ್ಲ ಕ್ರಿಯೆಗಳಲ್ಲಿಯೂ ಪ್ರಸಾದವನ್ನೇ ಕಾಣುವ ದೈವಿಕ ದೃಷ್ಟಿ ಶರಣರದು.
ತಾನೇ ಈಶ್ವರನಿಗೆ ಪ್ರಸಾದವಾಗಿ ಪರಿಣಮಿಸುವಿಕೆಯಿಂದ ಇಡೀ ಸೃಷ್ಟಿಯೆಲ್ಲಾ, ಮತ್ತು ಅದು ತನಗೆ ದಯಪಾಲಿಸಿದ್ದನ್ನು ಈಶ್ವರನ ಪ್ರಸಾದವೆಂಬ ಭಾವನೆ ಒಡಮೂಡುತ್ತದೆ.
- ✍️ Dr Prema Pangi
#ಒಲ್ಲೆನೆಂಬುದು_ವೈರಾಗ್ಯ_ಒಲಿವೆನೆಂಬುದು ಕಾಯಗುಣ.
Comments
Post a Comment