ವಚನ ದಾಸೋಹ :ಎನ್ನ ಗುರು ಪರಮಗುರು ನೀವೆ ಕಂಡಯ್ಯ,

ವಚನ ದಾಸೋಹ : ಎನ್ನ ಗುರು ಪರಮಗುರು ನೀವೆ ಕಂಡಯ್ಯ,
ವಚನ:
#ಎನ್ನ ಗುರು ಪರಮಗುರು ನೀವೆ ಕಂಡಯ್ಯ,
ಎನ್ನ ಗತಿಮತಿ ನೀವೆ ಕಂಡಯ್ಯ,
ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯ, ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯ,ಕೂಡಲಸಂಗಮದೇವಾ,
ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು.
- ಗುರು ಬಸವಣ್ಣನವರು
*ಅರ್ಥ*:
ಲಿಂಗ ಸ್ವಾಯತ ಆದ ಶರಣನ ಮುಂದಿನ ಸಾಧನೆಗೆ (ಲಿಂಗಸನ್ನಿಹತ)  ಪರಮ ಪರಶಿವನೇ, ಅವನ ಅರಿವಿನ ಜ್ಯೋತಿಯಾಗಿ ಪರಮಗುರುವಾಗುತ್ತಾನೆ ಎನ್ನುತ್ತಾರೆ ಗುರು ಬಸವಣ್ಣನವರು.

*ವಚನ ಚಿಂತನೆ*:
ಅಷ್ಟಾವರಣವೆಂದರೆ ಬರೀ ಹೊದಿಕೆ, ಬಹಿರಂಗದ ಲಾಂಛನಗಳಲ್ಲ. ಇವು ಸಾಧಕನನ್ನು ಸಾಧನೆಯಲ್ಲಿ ಮನ ಚಂಚಲವಾಗದಂತೆ ಕಾಯುವ ಮತ್ತು ಶರಣನಾಗಿ ಪರಿವರ್ತಿಸುವ ರಕ್ಷಾಕವಚಗಳು. 
ಅಷ್ಟಾವರಣಗಳಲ್ಲಿ ಸ್ಥೂಲತನು, ಸೂಕ್ಷ್ಮತನು, ಕಾರಣತನುವಿಗೆ ಎಂಬ ತ್ರಿವಿಧ ತನುಗಳಿಗೆ ತ್ರಿವಿಧ ಅಷ್ಟಾವರಣಗಳು ಎಂದು ಹೇಳಿದ್ದಾರೆ. 
ತ್ರಿವಿಧ ಅಷ್ಟಾವರಣಗಳು: 
ಸ್ಥೂಲತನುವಿಗೆ  -  ಕ್ರಿಯಾ ಅಷ್ಟಾವರಣ 
ಸೂಕ್ಷ್ಮತನುವಿಗೆ  -  ಜ್ಞಾನ ಅಷ್ಟಾವರಣ
ಕಾರಣತನುವಿಗೆ -  ಮಹಾಜ್ಞಾನ ಅಷ್ಟಾವರಣ  

ಶರಣರು ಬರೀ ಬಹಿರಂಗದ ಆಡಂಬರಕ್ಕೆ, ಆಚರಣೆಗೆ, ತಮ್ಮನ್ನಾಗಲಿ ಧರ್ಮವನ್ನಾಗಲಿ ಸೀಮಿತಗೊಳಿಸಲಿಲ್ಲ. ಬಹಿರಂಗದ ಕ್ರಿಯಾತ್ಮಕ ಆಚರಣೆಯು ಅಂತರಂಗದ  ಜ್ಞಾನಾತ್ಮಕ ಮತ್ತು  ಮಹಾಜ್ಞಾನಾತ್ಮಕವಾದರೆ ಮಾತ್ರ ಸಾಧಕ ಪರಿಣಾಮಿಸಿ ಶರಣನಾಗಬಲ್ಲ ಎಂದು ಅರಿತು  ಬಹಿರಂಗದ ಅಷ್ಟಾವರಣಗಳನ್ನು ಅಂತರಂಗದ ಅಷ್ಟಾವರಣಗಳೊಡನೆ  ಅನುಸಂಧಾನ ಮಾಡುವ ಮಾರ್ಗ ಸೂಚಿಸಿದರು.
ಸೋಪಾದಿಕ ಅಷ್ಟಾವರಣ ಸ್ಥೂಲತನುವಿಗೆ,
ನಿರುಪಾದಿಕ ಅಷ್ಟಾವರಣ ಸೂಕ್ಷ್ಮತನುವಿಗೆ ಇವೆ.  ಗುರು, ಲಿಂಗ, ಜಂಗಮ, ಪ್ರಸಾದ, ಪಾದೋದಕ, ವಿಭೂತಿ, ರುದ್ರಾಕ್ಷಿ, ಮಂತ್ರ ವೆಂಬ ಸೋಪಾದಿಕ ಅಷ್ಟಾವರಣಗಳನ್ನು ಆಶ್ರಯಿಸಿ ಅಂತರಂಗದೊಳಗೆ  ಪ್ರಕಾಶಿಸುವ
ನಿರುಪಾದಿಕ ಅಷ್ಟಾವರಣಗಳನ್ನು ಅರಿಯಬೇಕು. 
ಕಾರಣತನುವಿಗೆ ಸಂಬಂದಸಿದ ಮಹಾಜ್ಞಾನ ಅಷ್ಟಾವರಣಗಳು: 8
ಸತ್ಯವೇ ಗುರು     
ಚಿತ್ತವೇ ಲಿಂಗ  
ಆನಂದವೇ ಜಂಗಮ  
ಕರಣಾರ್ಪಣವೇ ಪ್ರಸಾದ  
ಪರಂಜ್ಯೋತಿಯೇ ಪಾದೋದಕ  
 ನಿತ್ಯನೇಮವೇ ವಿಭೂತಿ   
ಪರಿಪೂರ್ಣವೇ ರುದ್ರಾಕ್ಷಿ  
ಅವಿರಳ ಸ್ಮರಣೆಯೇ ಮಂತ್ರ. 
ಹೀಗೆ ಲಿಂಗ ಸ್ವಾಯತ ಆದ ಶರಣನಿಗೆ  ಸತ್ ಚಿತ್ ಆನಂದ ಪರಮ ಪರಶಿವನೇ, ಅವನ ಅರಿವಿನ ಜ್ಯೋತಿಯಾಗಿ ಪರಮಗುರುವಾಗುತ್ತಾನೆ.
- ✍️Dr Prema Pangi
#ಎನ್ನ_ಗುರು_ಪರಮಗುರು_ನೀವೆ_ಕಂಡಯ್ಯ,

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma