ವಚನ ದಾಸೋಹ: ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ವಚನ ದಾಸೋಹ:
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
#ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು ಎಲೆ ಹೋತೇ ಅಳು, ಕಂಡಾ ! ವೇದವನೋದಿದವರ ಮುಂದೆ ಅಳು, ಕಂಡಾ ! ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ! ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.
- ಗುರು ಬಸವಣ್ಣನವರು
*ಅರ್ಥ*:
"ದಯೆ ಇಲ್ಲದ ಧರ್ಮ ಯಾವುದಯ್ಯಾ? ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ" ಎನ್ನುವ ಗುರು ಬಸವಣ್ಣನವರು ವೇದ ಶಾಸ್ತ್ರಗಳಲ್ಲಿ ಹೇಳಿರುವ ಹಿಂಸಾಚಾರದ ಮಾರ್ಗವನ್ನು ಕಟುವಾಗಿ ಖಂಡಿಸುತ್ತಾರೆ. ಯಜ್ಞದಲ್ಲಿ ಬಲಿಕೊಡುವುದಕ್ಕಾಗಿ ಹೋತವನ್ನು ಎಳೆದುಕೊಂಡು ಹೋಗಿ ಯಜ್ಞಶಾಲೆಯ ಮುಂದೆ ಅದನ್ನು ಕಟ್ಟಿದ್ದಾರೆ. ಆ ಹೋತ ಒಂದೇ ಸಮನೆ ಅರಚುತ್ತಿದೆ. ಅದನ್ನು ಕಂಡು ಮರುಗಿದ ಬಸವಣ್ಣನವರು ಅದರ ಮೈದಡವುತ್ತ ಈ ಮಾತನ್ನು ಹೇಳುತ್ತಾರೆ; ವೇದಗಳಲ್ಲಿ ಹೇಳಿದೆಯೆಂದು ನಿಷ್ಕಾರಣವಾಗಿ ನಿನ್ನನ್ನು ಕೊಲ್ಲುತ್ತಾರೆ. ಅದಕ್ಕಾಗಿ ವೇದವನೋದಿದವರ ಮುಂದೆ ನೀನು ಅಳು, ಶಾಸ್ತ್ರವನೋದಿದವರ ಮುಂದೆ ನೀನು ಅಳು, ನೀನು ಅತ್ತ ಮಾತ್ರಕ್ಕೆ ಮನಕರಗಿ ನಿನ್ನನ್ನು ಅವರು ಬಿಡುವವರಲ್ಲ. ಆದರೆ ನೀನತ್ತುದಕ್ಕೆ ತಕ್ಕ ಫಲವನ್ನು ಅವರು ಪಡೆಯಲೇಬೇಕಾಗುತ್ತದೆ. 'ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ' ಎನ್ನುತ್ತಾರೆ. ವೇದ ಶಾಸ್ತ್ರಗಳ ಪ್ರಾಣಿ ಬಲಿಯನ್ನು ದಿಟ್ಟತನದಿಂದ ನಿರಾಕರಿಸುತ್ತಾರೆ. "ಕೊಲಬೇಡ" ಎಂಬುದು ಲಿಂಗಾಯತ ಧರ್ಮದ ಸಪ್ತ ಸೂತ್ರಗಳಲ್ಲಿ ಒಂದು. ಅಹಿಂಸಾನಿಷ್ಠೆ ಬಸವಣ್ಣನವರ ಶರಣ ಮಾರ್ಗದ ಒಂದು ವ್ರತವಾಗಿ ಪರಿಣಮಿಸಿತು.
- ✍️Dr Prema Pangi
#ಮಾತಿನ_ಮಾತಿಂಗೆ_ನಿನ್ನ_ಕೊಂದಹರೆಂದು
Comments
Post a Comment