ವಚನ ದಾಸೋಹ: ಪ್ರಾಣ ಲಿಂಗಕ್ಕೆ ಕಾಯವೆ ಸೆಜ್ಜೆ,



ವಚನ ದಾಸೋಹ: ಪ್ರಾಣ ಲಿಂಗಕ್ಕೆ ಕಾಯವೆ ಸೆಜ್ಜೆ,
ವಚನ:
#ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ,
 ಆಕಾಶಗಂಗೆಯಲ್ಲಿ ಮಜ್ಜನ.
 ಹೂವಿಲ್ಲದ ಪರಿಮಳದ ಪೂಜೆ!
 ಹೃದಯಕಮಳದಲ್ಲಿ `ಶಿವಶಿವಾ' ಎಂಬ ಶಬ್ದ,
ಇದು ಅದ್ವೈತ ಕಾಣಾ ಗುಹೇಶ್ವರಾ.
- ಅಲ್ಲಮ ಪ್ರಭುಗಳು
ಅರ್ಥ:
ವ್ಯೋಮಾಕಾಯ ಅಲ್ಲಮಪ್ರಭುಗಳು ಈ ವಚನದಲ್ಲಿ ನಿಜವಾದ ಅದ್ವೈತಿಗಳ ಮತ್ತು ಅದ್ವೈತ ಸಾಧಿಸಿದವರ ಪೂಜೆ ಹೇಗೆ ಇರಬೇಕು? ಎಂದು ವಿವರಿಸಿದ್ದಾರೆ. 

*ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ* 
ಪ್ರಾಣಲಿಂಗ ಎಂದರೆ ಪ್ರಾಣಾಗತ ಲಿಂಗ/ ಲಿಂಗ ಸ್ವರೂಪದ ಪ್ರಾಣಶಕ್ತಿ / ಸೂಕ್ಷ್ಮ ಶರೀರದಲ್ಲಿ ಅಭಿವ್ಯಕ್ತವಾದ ಶಿವತತ್ವ/ ಸೂಕ್ಷ್ಮ ಶರೀರದ ಅಂತರಂಗದಲ್ಲಿ ನೆಲೆಗೊಂಡ ಜ್ಞಾನ ತೇಜದ ಲಿಂಗ ಎಂದು ಅರ್ಥ.
 'ಕಾಯ' ಎಂದರೆ ಶರೀರ, ಇಲ್ಲಿ ಸೂಕ್ಷ್ಮಶರೀರ.
'ಸೆಜ್ಜೆ' ಎಂದರೆ ಕರಡಿಗೆ/ ಲಿಂಗದ ಸ್ಥಳ/ ಪ್ರಾಣಲಿಂಗದ ನಿಲಯ.  ಸೂಕ್ಷ್ಮಶರೀರದಲ್ಲಿಯ  ಪ್ರಾಣಶಕ್ತಿ , ಚಕ್ರಗಳು ನಾಡಿಗಳು, ಅಂತಃಕರಣ ಚತುಷ್ಟಯಗಳಾದ ಮನಸ್ಸು ಬುದ್ಧಿ ಚಿತ್ತ  ಅಹಂಕಾರ.  ಪ್ರಾಣಲಿಂಗಕ್ಕೆ ಸೂಕ್ಷ್ಮಶರೀರವೇ  ನಿವಾಸ.
ಪ್ರಾಣಲಿಂಗ ಪೂಜೆಯ ವರ್ಣನೆ ಹೇಗೆಂದರೆ 

 *ಆಕಾಶಗಂಗೆಯಲ್ಲಿ ಮಜ್ಜನ*
ಪ್ರಾಣಲಿಂಗದ ಪೂಜೆ ಎಂದರೆ ಕುಂಡಲಿನಿ ಯೋಗಸಾಧನೆಯಿಂದ ಮೂಲಾಧಾರ ಚಕ್ರದಿಂದ ಸಹಸ್ರಾರ ಚಕ್ರಕ್ಕೆ ಪ್ರಾಣಶಕ್ತಿ ಆರೋಹಣವಾಗಿ  'ಅಲ್ಲಿಯ  ಪ್ರಾಣಲಿಂಗದ ಮೇಲೆ ಆಕಾಶಗಂಗೆಯಂತೆ  ಚಿದಾಕಾಶದ  ಶಿರೋಮಧ್ಯದಲ್ಲಿರುವ
ಬ್ರಹ್ಮರಂಧ್ರದಿಂದ ಹನಿ ಹನಿಯಾಗಿ  ಅಮೃತದ ಆನಂದಜಲ ದ ಅಭಿಷೇಕ (ಮಜ್ಜನ) ವಾಗುವುದು.  ಅಮೃತದ ಆನಂದಜಲ ಒಸರುವುದು ಅಲ್ಲಿಯೇ ಇರುವ ಶಂಖ ಗ್ರಂಥಿ ಯಿಂದ (ಪೀನಿಯಲ್ ಗ್ಲಾಂಡ್ ದಿಂದ). ಆಕಾಶ ಗಂಗೆ ಯಂತೆ  ಬ್ರಹ್ಮರಂಧ್ರದಿಂದ ಹರಿವ ಅಮೃತ ಜಲದಲ್ಲಿ ಪ್ರಾಣಲಿಂಗಕ್ಕೆ ಮಜ್ಜನ.

*ಹೂವಿಲ್ಲದ ಪರಿಮಳದ ಪೂಜೆ* 
ಹೂವಿಲ್ಲದ ಪರಿಮಳ' ಎಂದರೆ  ಲಿಂಗದಿಂದ ತಾನು ಭಿನ್ನನಲ್ಲ ಎಂಬ ಅನನ್ಯಭಾವ. ಈ ಪವಿತ್ರ ಭಾವವನ್ನು ಆ ಲಿಂಗಕ್ಕೆ ಅರ್ಪಿಸುತ್ತಾನೆ. ಇದೇ ಭಾವಲಿಂಗ ಪೂಜೆ. ಸದ್ಭಾವ ಪರಿಮಳ ಪೂಜೆ. 

*ಹೃದಯಕಮಲದಲ್ಲಿ ಶಿವಶಿವಾ ಎಂಬ ಶಬ್ದ ; ಇದು ಅದ್ವೈತ ಕಾಣಾ ಗುಹೇಶ್ವರಾ!*
 ಹೃದಯ ಕಮಲದಲ್ಲಿ ಅಂದರೆ ಅಷ್ಟದಳ ಕಮಲದ ಚಕ್ರದಲ್ಲಿ ಶಿವೋsಹಂ, ಶಿವೋsಹಂ ಎಂಬ ಮಂತ್ರಘೋಷ.  ಪ್ರಾಣಲಿಂಗ ಪೂಜೆಯಲ್ಲಿ ಮಂತ್ರ ಅನುಸಂಧಾನ ನಡೆಯಬೇಕು. ಅದರ ಪರಿಣಾಮವಾಗಿ ಆ ಲಿಂಗವೇ ತಾನು ಎಂಬ ಅದ್ವೈತದ ಅನುಭವ ವುಂಟಾಗುತ್ತದೆ. ಇದುವೆ ನಿಜವಾದ ಪ್ರಾಣಲಿಂಗ ಪೂಜೆ.  
ವಚನ ಚಿಂತನೆ:
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗ-ಈ ಮಾತುಗಳಲ್ಲಿ ಶರಣರು ಕಂಡ ಆಂತರಿಕ ಅನುಭವದ ದೃಷ್ಟಿ ಪ್ರಧಾನವಾಗಿ ಗೋಚರಿಸುತ್ತದೆ. ದೇವಾಲಯಗಳಲ್ಲಿಟ್ಟು ಪೂಜಿಸುವ ಸ್ಥಾವರಲಿಂಗಗಳಿಂದ ಬೇರೆಯಾದುದು ಇಷ್ಟಲಿಂಗ. ಇದು ದೇಹದ ಮೇಲೆ ಆಯತವಾಗಿ, ಶಡ್ವೈರಿ ಗಳನ್ನು ದೂರಗೊಳಿಸಿ, ಲಿಂಗಾಂಗ ಸಾಮರಸ್ಯದ ಇಷ್ಟಾರ್ಥವನ್ನು ಸಾಧಿಸಿಕೊಡುವ ಸಾಧನ, ಅರುಹನ್ನು ಅರಿಯಲು ಕೊಟ್ಟ ಕುರುಹು ಇದು. ಭಕ್ತ ಮಹೇಶ ಪ್ರಸಾದಿ ಸ್ಥಲಗಳು ಇದರ ಅನುಸಂಧಾನದ ಮಾರ್ಗದಲ್ಲಿ ಕಂಡುಬಂದ ವಿಕಾಸದ ಹೆಜ್ಜೆಗಳು, ಅಂಗದ ಮೇಲೆ ಲಿಂಗವನ್ನು ಧರಿಸಿದ ವ್ಯಕ್ತಿ ಅದನ್ನು ಅನನ್ಯ ಶ್ರದ್ಧೆಯಿಂದ ನಂಬುತ್ತಾನೆ; ಏಕೈಕ ನಿಷ್ಠೆಯಿಂದ ಉಪಾಸಿಸುತ್ತಾನೆ; ಸಾವಧಾನ ಭಕ್ತಿಯಿಂದ ತನ್ನನ್ನು ಅದಕ್ಕೆ ಆರ್ಪಿಸಿಕೊಂಡು ತಾನೇ ಪ್ರಸಾದರೂಪನಾಗಿ ಪರಿಣಮಿಸುತ್ತಾನೆ. ಇದರ ಮುಂದಿನ ಹೆಜ್ಜೆಯೇ ಪ್ರಾಣಲಿಂಗ ಪೂಜೆ.

ಇದು ಇಷ್ಟಲಿಂಗದ ಶ್ರದ್ಧೆ, ಪೂಜೆ, ನಿಷ್ಠೆ, ಅರ್ಪಣೆಗಳ ಒಳಗೊಂಡು ಆಂತರಿಕ ಜಗತ್ತನ್ನು ಪ್ರವೇಶಿಸುತ್ತದೆ. "ಲಿಂಗದಲ್ಲಿ ಪ್ರಾಣವನಿಲಿಸಿ, ಪ್ರಾಣದಲ್ಲಿ ಲಿಂಗವನಿರಿಸಿ ನೆನೆವುತ್ತಿದ್ದ ಕಾರಣ ಪ್ರಾಣಲಿಂಗವಾಯಿತು” ಎನ್ನುತ್ತಾರೆ ಶರಣರು. ಅಂದರೆ ಪ್ರಾಣದಲ್ಲಿ ಲಿಂಗವನ್ನು ನಿಲ್ಲಿಸುವುದೇ ಪ್ರಾಣಲಿಂಗ. 
 ಪ್ರಾಣಲಿಂಗಸ್ಥಲದಲ್ಲಿ ಸಾಧನೆ ಧ್ಯಾನದ ಕಡೆಗೆ ಯೋಗಅನುಸಂಧಾನದ ಕಡೆಗೆ ತಿರುಗುತ್ತದೆಂಬುದನ್ನು  ಗಮನಿಸಬೇಕು. ಇಲ್ಲಿ ಲಿಂಗ, ಉಪಾಸ್ಯವಾದ ಸ್ಥೂಲವಸ್ತು ಮಾತ್ರವಾಗಿ ಉಳಿಯುವುದಿಲ್ಲ. ಅದು ಅಂತರಂಗ ಬಹಿರಂಗವನ್ನೆಲ್ಲಾ ವ್ಯಾಪಿಸಿದ ಶಕ್ತಿಯಾಗುತ್ತದೆ. ಅದು ಅಂತರಂಗದಲ್ಲಿ ಆವರಿಸಿ ಬಹಿರಂಗದಲ್ಲಿ ತೋರಿದೆ ಕಂಗಳ ಕೊನೆಯಲ್ಲಿ ಮೂರುತಿಯಾಗಿ ಮನದ ಕೊನೆಯಲ್ಲಿ” ತೊಳಗಿದೆ. 
#ಅಂತರಂಗದಲ್ಲಿ ನಿರ್ಮಲ ಪರಂಜ್ಯೋತಿ ಪ್ರಾಣಲಿಂಗವನರಿಯದೆ ಬಹಿರಂಗದಲ್ಲಿ ಬಳಲುತ್ತಿದ್ದರಲ್ಲಾ !
ಒಳಗೆ ತೊಳಗಿ ಬೆಳಗಿ ತೋರುವ ಚಿದಾಕಾಶ ಪರಬ್ರಹ್ಮ
ಪ್ರಾಣಲಿಂಗವನ್ನು ಅವರೆತ್ತ ಬಲ್ಲರು? ಮಹಾನುಭಾವದಿಂದ ತಿಳಿದು ನೋಡಲು, ತನ್ನಲ್ಲಿಯೇ ತೋರುತ್ತಿದೆ. 
ಹೇಳೆ, ಹೇಳಿಹೆನೆಂದಡೆ ನುಡಿಗೊಳಗಾಗದು,
ತಿಳಿದು ನೋಡಲು ತಾನಲ್ಲದೆ ಮತ್ತೇನೂ ಇಲ್ಲ.
ಅದೇ ಪ್ರಾಣಮಯಲಿಂಗ ತಾನೆ ನಿಜಗುರುಸ್ವತಂತ್ರ ಸಿದ್ಧಲಿಂಗೇಶ್ವರನು

ಇಷ್ಟಲಿಂಗದ ಬಹಿರಂಗ ಪೂಜೆ ದ್ವೈತ, ಅಂತರಂಗದ ನಿರ್ಮಲ ಪರಂಜ್ಯೋತಿ ಪ್ರಾಣಲಿಂಗ ಪೂಜೆ ಅದ್ವೈತ. ಹೀಗೆ ಸಾಧಕ ದ್ವೈತದ ನೆಲೆಯಿಂದಲೆ,  ಮುಂದೆ ಸಾಗಿ ಅದ್ವೈತಿ ಆಗುತ್ತಾನೆ.
- ✍️Dr Prema Pangi

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma