ವಚನ ದಾಸೋಹ: ಜೋಳವಾಳಿಯಾನಲ್ಲ
ವಚನ ದಾಸೋಹ: ಜೋಳವಾಳಿಯಾನಲ್ಲ
#ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ.
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.
ಕೇಳು, ಕೂಡಲಸಂಗಮದೇವಾ,
ಮರಣವೆ ಮಹಾನವಮಿ. / 669
- ಗುರು ಬಸವಣ್ಣನವರು
ಅರ್ಥ:
ಈ ವಚನದಲ್ಲಿ ಸಮಾನತೆಗಾಗಿ, ಸತ್ಯಕ್ಕಾಗಿ, ಸಮಾಜದ ಏಳ್ಗೆಗಾಗಿ ಹಗಲಿರುಳು ಚಿಂತಿಸಿ ಕಾರ್ಯ ಪ್ರವೃತ್ತಿಯಾದ ತಾವು ಸಮಯ ಬಂದರೆ ಎಲ್ಲ ಬಗೆಯ ತ್ಯಾಗಕ್ಕೂ ಬಲಿದಾನಕ್ಕೂ ಸಿದ್ಧ ಎನ್ನುತ್ತಾರೆ ಗುರು ಬಸವಣ್ಣನವರು. ಶರಣರ ಸಾಮಾಜಿಕ ಸಮಾನತೆ ಪರಿಕಲ್ಪನೆಯ ನಿಲುವು, ಸಾಮಾಜಿಕ ಕ್ರಾಂತಿಯ ಉದ್ಭವಕ್ಕೆ ಕಾರಣವಾಗಿತ್ತು. "ಆವ ಕುಲವಾದಡೇನು ಶಿವಲಿಂಗವಿದ್ದವನೆ ಕುಲಜನು, ಕುಲವನರಸುವರೆ ಶರಣರಲ್ಲಿ", ಎನ್ನುವ ಸಿದ್ಧಾಂತ ರೂಪಿಸಿ ಶರಣರು ಅದೇ ರೀತಿ ಬದುಕಿದರು.
ಇದು ಬಸವಣ್ಣನವರ ಗಣಾಚಾರದ ವಚನ.
ಕಲ್ಯಾಣ ಕ್ರಾಂತಿಗೆ ಮೂಲ ಕಾರಣವಾಗಿದ್ದು ಶರಣ ಹರಳಯ್ಯ ಮತ್ತು ಮಧುವರಸರ ಮಕ್ಕಳ ಕಲ್ಯಾಣೋತ್ಸವ. ತಾವು ಕೈಗೊಂಡ ಈ ಕಾರ್ಯಕ್ಕೆ ಬಸವಣ್ಣನವರು ತಾವು ಸ್ನೇಹಿತನಾದ ರಾಜ ಬಿಜ್ಜಳನ ಉದ್ಯೋಗಿಯಾದರೂ ಅವನ ಅಧಿಕಾರದ ಹಂಗನ್ನು ತಿರಸ್ಕರಿಸಿದರು. ತಮ್ಮ ಅಧಿಕಾರ ಮತ್ತು ಅಂತಸ್ತಿಗೆ ಆಶ್ರಯನಾಗಿರುವ ಬಿಜ್ಜಳನ ಓಲೈಸಲು ಕಾರ್ಯ ವಿಮುಖರಾಗಲಿಲ್ಲ. ತಾವು ಧರೆಗೆ ಬಂದ ಮೂಲ ಉದ್ದೇಶಕ್ಕಾಗಿ, ಸಾಮಾಜಿಕ ಅನ್ಯಾಯದ ವ್ಯವಸ್ಥೆಯ ಅಧೀನಕ್ಕೆ ಸಿದ್ಧರಲ್ಲದ ಬಸವಣ್ಣನವರು ಸಾಯಲೂ ಸಿದ್ಧವಾಗಿ ಮರಣವೇ ಮಹಾನವಮಿ ಎಂದರು.
*ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ.
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ*
‘ತನ್ನ ಜೀವಿತಕ್ಕೆ ಆಧಾರವಾಗಿರುವ ಆಹಾರಾದಿಗಳನ್ನು ಕೊಡುವ ಧಣಿಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಪದ್ಧತಿಯನ್ನು ಜೋಳವಾಳಿ ಎಂದೂ, ಯುಕ್ತ ಸಮಯಕ್ಕೆ ಸರಿಯಾಗಿ ನೆರವಿಗೆ ಬರುವ ಪದ್ಧತಿಯನ್ನು ವೇಳವಾಳಿ ಎಂದೂ ಕರೆಯಲಾಗುತ್ತಿತ್ತು.’
ತನ್ನ ವೈಯಕ್ತಿಕ ಆಹಾರಾದಿ ಜೀವಿತಕ್ಕೆ ಆಧಾರವಾಗಿರುವ ಧಣಿಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಜೋಳವಾಳಿ ತಾನಲ್ಲ, ಸಮಾಜದ ಯುಕ್ತ ಸಮಯಕ್ಕೆ ನೆರವಿಗೆ ಬರುವ ವೇಳವಾಳಿ ನಾನು. ತಾವು ವೇಳವಾಳಿಯವರೇ ಹೊರತು ಜೋಳವಾಳಿಯವರಲ್ಲ.
ಈ ಮರ್ತ್ಯಲೋಕದ ಮಹಾಮನೆಯನ್ನು ನಾಶ ಮಾಡಿ ಓಡಿ ಹೋಗುವ ಹೇಡಿ ನಾನಲ್ಲ, ಇಲ್ಲಿ ಏನೆ ಸಮಸ್ಯೆಗಳಿದ್ದರೂ ಅವುಗಳನ್ನು ಎದುರಿಸಿ ದಿಟ್ಟತನದಿಂದ ಹೋರಾಟ ಮಾಡಲು ಬಂದಿರುವೆ. ನಾನು ಬಂದಿರುವುದು ಈ ಮರ್ತ್ಯಲೋಕದ ಮಹಾಮನೆಯಲ್ಲಿ ಜಾತಿಮುಕ್ತ ಸಮಸಮಾಜ ಸ್ಥಾಪಿಸಲು; ದೀನದಲಿತರ ಕಣ್ಣೀರು ಒರೆಸಿ ಅವರಿಗೆ ಸಮಾನತೆಯ ಅಧ್ಯಾತ್ಮದ ಶ್ರೇಷ್ಠ ಜೀವನದ ಹಕ್ಕು ಕೊಡಲು; ಸಮಾಜಮುಖಿ ಜಂಗಮಧರ್ಮ ಸ್ಥಾಪಿಸಲು; ಸಕಲ ಜೀವಾತ್ಮಗಳಿಗೆ ಲೇಸನ್ನ ಬಯಸಿ, ಸರ್ವರಿಗೂ ಸಮಬಾಳು ಸಮಪಾಲು ಕೊಡಲು. ನನ್ನನ್ನು ಈ ಸಮಾಜ ಕಾರ್ಯಕ್ಕೆ ಅರ್ಪಿಸಿಕೊಂಡು ಮುಂದೆ ನಡೆಯುವಾಗ ಅಡೆತಡೆ, ಆರೋಪ, ನಿಂದನೆ, ಮೃತ್ಯು ಬಂದರೆ ಹೆದರುವನು ನಾನಲ್ಲ. ಮೃತ್ಯುವನ್ನೂ ಸಹ ಮಹಾ ನವಮಿಯ ಹಬ್ಬದಂತೆ ಸಂಭ್ರಮಿಸುವೆ.
*ಕೇಳು, ಕೂಡಲಸಂಗಮದೇವಾ, ಮರಣವೆ ಮಹಾನವಮಿ.*
ನಾನು ಸತ್ಯಕ್ಕಾಗಿ, ಸಮಾನತೆಗಾಗಿ ಹೋರಾಟ ಮಾಡಲು ನನ್ನ ಪ್ರಾಣವನ್ನೂ ಸಹ ಸಮರ್ಪಣೆ ಮಾಡುತ್ತೇನೆ. ಶರಣರು ಯಾರಿಗೂ ಅಂಜುವುದಿಲ್ಲ, ನಾಳೆ ಬರುವುದು ನಮಗಿಂದೆ ಬರಲಿ, ಇಂದು ಬರುವುದು ನಮಗೀಗಲೆ ಬರಲಿ, ಆಯುಷ್ಯ ತೀರಿದಲ್ಲದೆ ಮರಣವಿಲ್ಲ, ಅಂಜುವುದೇಕೆ ಈ ಲೋಕದ ಬೆದರಿಕೆಗೆ, 'ಜಾತಸ್ಯ ಮರಣಂ ಧ್ರುವಂ' ಎನ್ನುವ ಹಾಗೆ ಆ ದೇವರು ಬರೆದ ಬರಹವನ್ನು ತಪ್ಪಿಸಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಶರಣರಿಗೆ ಮರಣವೆ ಮಹಾನವಮಿ ಅರ್ಥಾತ್ ಸತ್ಯಕ್ಕಾಗಿ ಹೋರಾಟ ಮಾಡುವಾಗ ನಮಗೆ ಮರಣ ಬಂದರು ಸಹಿತ ಅದೊಂದು ನಮಗೆ ಹಬ್ಬವೆಂದೆ ಸ್ವೀಕಾರ ಮಾಡಿ ಆಚರಿಸಿ, ನಗುನಗುತ್ತಲೇ ಈ ಸಮಾಜಕ್ಕೆ ನನ್ನ ಪ್ರಾಣವನ್ನೆ ತ್ಯಾಗ ಮಾಡುತ್ತೇನೆ, ಮಹಾ ನವಮಿಯನ್ನು ಹೇಗೆ ಸಂಭ್ರಮದಿಂದ ಆಚರಿಸುತ್ತೇವೆಯೋ ಅದರಂತೆ ನನ್ನ ಸಾವನ್ನು ಸಹ ಅಷ್ಟೆ ಸಂಭ್ರಮದಿಂದ ಸಮಾನವಾಗಿ ಸ್ವೀಕಾರ ಮಾಡುತ್ತೇನೆ ಎಂದು ಬಸವಣ್ಣನವರು ತಮ್ಮ ಗಣಾಚಾರದ ಮಾತುಗಳನ್ನ ಆಡಿದ್ದಾರೆ.
*ವಚನ ಚಿಂತನೆ*:
ಸಮಾಜದಲ್ಲಿ ಎಲ್ಲರಿಗೂ ಎಲ್ಲ ರೀತಿಯಲ್ಲೂ ಸಮಾನತೆ ಸಿಗಬೇಕೆಂಬುದೆ ಅವರ ಮೂಲ ಆಶಯವಾಗಿತ್ತು.
ಶರಣರು ಹಿಡಿದ ಗುರಿಯನ್ನು ಸದಾಚಾರ ಶಿವಾಚಾರ ದೃಷ್ಟಿಯಲ್ಲಿ ಸಾಧಿಸುವರೇ ಹೊರತು ಸಾವಿಗೆ ಅಂಜುವವರಲ್ಲ. ಸಾಧನೆಯ ಮಾರ್ಗದಲ್ಲಿ ಮರಣ ಬಂದರೆ ಮರಣವನ್ನು ಪರಮಾನಂದದಲ್ಲಿ ಮಹಾನವಮಿಯೆಂದು ಸ್ವೀಕರಿಸುವರು. ಶರಣರು ತಮ್ಮ ತನು ಮನ ಧನ ಶಿವನಿಗೆ ಸಮರ್ಪಿಸಿ ಶರಣಾಗಿರುವದರಿಂದ ಮರಣಕ್ಕೆ ಸಾಮಾನ್ಯರಂತೆ ದುಃಖ ಪಡುವವರಲ್ಲ."ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು, ಸಾವೆಂಬುದು ಸಯವಲ್ಲ" 'ಮರಣವೇ ಮಾಹಾನವಮಿ' ಎಂದಿದ್ದಾರೆ.
ಸಾಧಕ ಕೈಕೊಂಡ ಮಾರ್ಗದಲ್ಲಿ ಅಪಾರವಾದ ಶ್ರದ್ಧೆಯಿಂದ ಮುನ್ನಡೆಯುತ್ತಾ, ಸ್ವಸ್ವರೂಪ ದರ್ಶನದ ಪ್ರಯತ್ನದಲ್ಲಿರುವ ಭಕ್ತರಿಗೆ ಅಗತ್ಯವಾಗಿದ್ದು ಅದನ್ನು ಹಾಗೆಯೇ ಬೆಳೆಸಿಕೊಂಡು ಹೋಗುವ ಏಕೈಕ ನಿಷ್ಠೆ.
ಶ್ರದ್ದೆ ಮತ್ತು ನಿಷ್ಠೆ ಎರಡು ಸಾಧಕ ಜೀವನದ ಎರಡು ಆಧಾರಸ್ತಂಭಗಳು. ಸಾಧನೆಯ ಎಲ್ಲ ಹಂತಗಳಲ್ಲಿ ಈ ನಿಷ್ಟಾಭಕ್ತಿ ಅಚಲವಾಗಿ ಅಳವಡಬೇಕು. ಭಕ್ತಿಯ ಮಾಡುವಲ್ಲಿ ಹಿಡಿದು, ಬಿಡೆನೆಂಬ ಛಲಬೇಕು. ಗುರು ಬಸವಣ್ಣನವರ ಪ್ರಕಾರ ನಿಷ್ಟೆ ಹೇಗೆ ಇರಬೇಕೆಂದರೆ "ಕಾಯದ ಕಳವಳಕಂಜಿ ಕಾಯಯ್ಯ ಎನ್ನುವುದಿಲ್ಲ. ಜೀವನೋಪಾಯಕ್ಕಂಜಿ ಕಾಯಯ್ಯ" ಎನ್ನುವುದಿಲ್ಲ. ಆತನ ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವಿಲ್ಲ. ಮರಣವನ್ನು ಮಹಾನವಮಿ ಎಂದು ಎದುರು
ಗೊಳ್ಳುವ ಶ್ರೀಮಂತಿಕೆ ಶರಣರದು. .
*ಗಣಾಚಾರ*:
12ನೇ ಶತಮಾನದ ಶರಣರು ಅಸಮಾನತೆ ಯನ್ನು ಪ್ರತಿಭಟಿಸಲು ಎಷ್ಟು ಹೆಣಗಿರಬೇಕೆಂಬುದನ್ನು ನಾವು ಊಹಿಸಬಹುದು.
ಈ ಏಕೈಕನಿಷ್ಠೆ ಗಣಾಚಾರದಲ್ಲಿ ಕಂಡುಬರುವ ಬಹುಮುಖ್ಯವಾದ ಅಂಶ.
“ಪಂಚಾಚಾರ, ಅಷ್ಟಾವರಣಂಗಳ ಮೇಲೆ ನಿಂದೆ ಕುಂದುಗಳು ಬಂದು ತಟ್ಟಿದಲ್ಲಿ ಗಣಸಮೂಹದೊಡಗೂಡಿ ಆ ಸ್ಥಲವ ತ್ಯಜಿಸುವುದೇ ಗಣಾಚಾರವೆಂಬೆನಯ್ಯಾ"ಎಂಬ ವಚನದ ಸಾಲುಗಳಂತೆ, ಶರಣರು ಅಪಾರ ಸಾವು ನೋವು ಅನುಭವಿಸಿ ಕಲ್ಯಾಣ ಬಿಟ್ಟು ವಚನಗಳ ಕಟ್ಟು ಹೊತ್ತುಗೊಂಡು ಉಳವಿ ಮಾರ್ಗ ಹಿಡಿದರು.
ಶರಣರ ಗಣಾಚಾರವು ಶ್ರೇಷ್ಠವಾದುದನ್ನು ಮಾತ್ರ ಪುರಸ್ಕರಿಸುತ್ತೇನೆಂಬ ಸತ್ಯನಿಷ್ಠೆಯಿಂದ ಪ್ರೇರಿತವಾದದ್ದು. ಅಸತ್ಯದೊಡನೆ, ಅನ್ಯಾಯದೊಡನೆ ಹೇಗೋ ಹೊಂದಿಕೊಂಡು ಹೋಗಬೇಕೆಂಬುದಕ್ಕೆ ಅದು ವಿರುದ್ಧವಾದುದು. ನೇರವಾದ ನಡೆಯುಳ್ಳವನು ಕುಟಿಲ ಕುಹಕ
ಕುತ್ಸಿತ ಕುಬುದ್ಧಿಗಳನ್ನು ದಿಟ್ಟತನದಿಂದ ಖಂಡಿಸುತ್ತಾನೆ. ಅದನ್ನು ತಡೆಯಲು
ಪ್ರಯತ್ನಿಸುತ್ತಾನೆ. ಆ ವಿಚಾರದಲ್ಲಿ ಆತ ಯಾರಿಗೂ ಅಂಜುವವನಲ್ಲ. ಭಕ್ತಿ ಭಂಡಾರಿ
ಬಸವಣ್ಣನವರು ಸಹ “ನ್ಯಾಯ ನಿಷ್ಠುರಿ ; ದಾಕ್ಷಿಣ್ಯಪರನು ನಾನಲ್ಲ" ಎಂದು ಸತ್ಯನಿಷ್ಠೆ
ಯನ್ನು ವ್ಯಕ್ತಪಡಿಸಿದ್ದಾರೆ. ಉರಿ ಬರಲಿ, ಸಿರಿ ಬರಲಿ ಬೇಕು ಬೇಡೆನ್ನದೆ” ಅದನ್ನು
ಎತ್ತಿಹಿಡಿದಿದ್ದಾರೆ. 'ಮರಣವೇ ಮಹಾನವಮಿ' ಎಂದು ಕಾರ್ಯಪ್ರವೃತ್ತರಾಗಿದ್ದಾರೆ.
ಗಣಸಮೂಹದ ಅಂದರೆ ಸಮಾಜದ ಸಮಷ್ಟಿ ಹಿತಕ್ಕಾಗಿ ನಿರ್ಭೀತ ಮನೋಧರ್ಮ
ದಿಂದ ಕೈಗೊಳ್ಳುವ ಶಿವಪರವಾದ ಕಾರ್ಯಗಳೆಲ್ಲವೂ ಗಣಾಚಾರಗಳೇ, ಆ ಕಾರ್ಯಕ್ಕೆ ಒದಗುವ ವಿರೋಧಗಳನ್ನು ಆತ ಎದುರಿಸುತ್ತಾನೆ. ಅವುಗಳನ್ನು ಹಿಮ್ಮೆಟ್ಟಿಸುವುದರಲ್ಲಿ ಒಂದುವೇಳೆ ಅವನು ವಿಫಲನಾದರೆ ಆ ಸ್ಥಳವನ್ನೇ ಬಿಟ್ಟು ಹೋಗುತ್ತಾನೆ ; ಅಮಂಗಳದ
ಕಾರ್ಯದಲ್ಲಿ ಭಾಗಿಯಾಗುವುದಿಲ್ಲ.
ಶರಣರು ಈ ಗಣಾಚಾರದಲ್ಲಿ ಭೂಮಿಕೆಯಲ್ಲಿ ಕೆಲವು ಕಟುವಾದ ಮಾತುಗಳನ್ನು ಹೇಳಿರುವುದು ಕಂಡುಬರುತ್ತದೆ. ಆ ಕಾಲದ ಹಿನ್ನೆಲೆ ಮತ್ತು ಅವರ ಉದ್ದೇಶಗಳನ್ನು
ಅರ್ಥಮಾಡಿಕೊಂಡು ಆ ಮಾತುಗಳನ್ನು ನೋಡಬೇಕು. ಆಗ ಆ ಕಟುತ್ವದ ಹಿಂದಿರುವ
ಕರುಣೆ ಗೋಚರವಾಗುತ್ತದೆ. ಶರಣರ ಕೋಪ ತಾಮಸಿಕ ವೃತ್ತಿಯಿಂದ ಪ್ರೇರಿತವಾದ
ದ್ದಲ್ಲ. ಅದು ಅನ್ಯಾಯ ದುರ್ಗುಣ ಅಮಂಗಳಗಳನ್ನು ಪರಿವರ್ತಿಸಿ ಸರ್ವಹಿತಕ್ಕೆ
ಕಾರಣವಾಗುವ ಅಪಾರವಾದ ಅನುಕಂಪನೆ ತೋರುವ ಇನ್ನೊಂದು ಮುಖ. ಅದು ವಿನಾಶಕಾರಿಯಲ್ಲ; ಉದ್ಧಾರಕ ಶಕ್ತಿ. ಗಣಾಚಾರದ ಈ ಸಾಮಾಜಿಕ ಮುಖದಂತೆ ಅದರ ವೈಯಕ್ತಿಕ ಸ್ವರೂಪವನ್ನೂ ಗಮನಿಸಬೇಕು. ಸದಾಚಾರದ ಮತ್ತು ಲಿಂಗಾಚಾರದ ನಿಯಮಗಳನ್ನು ವ್ಯಕ್ತಿ ದೃಢ
ನಿಷ್ಠೆಯಿಂದ ಆಚರಿಸಬೇಕೆಂಬುದನ್ನು ಇದು ಒತ್ತಿ ಹೇಳುತ್ತದೆ. ಸದಾಚಾರದ
ನಿಷ್ಠೆಯನ್ನು ಗಣಾಚಾರ ಒತ್ತಿ ಹೇಳುತ್ತದೆ.
ಭಕ್ತನಾದಮೇಲೆ ಆ ಮಾರ್ಗದಲ್ಲಿ ದೃಢ ನಿಶ್ಚಯದಿಂದ ನಡೆಯಬೇಕು. ಇದೂ
ಒಂದು ರೀತಿಯ ಹಠ, ಛಲ. ಆದರೆ ಇದು ಅಹಂಕಾರ ಅಸೂಯಾದಿಗಳಿಂದ ಪ್ರೇರಿತ
ವಾದದ್ದಲ್ಲ, ಸತ್ವಶಕ್ತಿಯ ಶಾಂತ ಮನೋಧರ್ಮದಿಂದ ಪೋಷಿತವಾದದ್ದು.
ಕಟ್ಟಿ ಬಿಡುವನೆ ಶರಣನು ?
ಬಿಟ್ಟು ಹಿಡಿವನೆ ಶರಣನು ? ನಡೆದು ತಪ್ಪುವನೆ ಶರಣನು ? ನುಡಿದು ಹುಸಿವನೆ
ಶರಣನು ?” ಎಂದು ಕೇಳುತ್ತಾರೆ ಬಸವಣ್ಣನವರು, “ಹುಲಿಯ ಹಾಲು ಹುಲಿಗಲ್ಲದೆ ಹೊಲದ ಹುಲ್ಲೆಗೆ ಉಣಬಾರದು. ಕಲಿಯ ಕಾಲ ತೊಡರು ಛಲದಾಳಿಗಲ್ಲದೆ ಇಕ್ಕಬಾರದು.” ಅಂತೆಯೇ ಆಧ್ಯಾತ್ಮಿಕದ ಅಮೃತರಸವನ್ನು ಕುಡಿಯುವುದು ಅಳಿಯಾಸೆಯ ಚಂಚಲ ಚಿತ್ತರಿಗೆ ಸಲ್ಲಲಾರದು. ಅದನ್ನು ಪಡೆಯಲು ಸಾಧಕ ದೃಢನಿಷ್ಠೆಯ ವೀರವ್ರತಿಯಾಗಬೇಕು. ಅಂತಹವರನ್ನು ಶರಣರು ಮೆಚ್ಚಿದರು. ಇದಕ್ಕೆ ಹೊರತಾದ ಕುಟಿಲ ಕುಹಕಿಗಳ ಆಡಂಬರವನ್ನು ಖಂಡಿಸಿದರು. ಸತ್ಯನಿಷ್ಠೆಯನ್ನು ಕುರಿತ ಈ
ಆಗ್ರಹವು ವೈಯಕ್ತಿಕ ಮತ್ತು ಸಾಮಾಜಿಕ ಮಟ್ಟಗಳೆರಡರಲ್ಲೂ ಆವಶ್ಯಕ, ಇದೇ ಗಣಾ
ಚಾರದ ಹಿರಿಯ ಮನೋಧರ್ಮ.
#ಬಾರದು ಬಪ್ಪದು ಬಪ್ಪದು ತಪ್ಪದು.
ಉರಿಬರಲಿ ಸಿರಿ ಬರಲಿ ಬೇಕು ಬೇಡೆಂದೆನ್ನೆ.
ನಾಳೆ ಬಪ್ಪುದು ನಮಗಿಂದೆ ಬರಲಿ.
ಇಂದು ಬಪ್ಪುದು ನಮಗೀಗಲೆ ಬರಲಿ.
ಇದಕಾರಂಜುವರು, ಇದಕಾರಳುಕುವರು
ಜಾತಸ್ಯ ಮರಣಂ ಧೃವಂ
ಎಂಬುದು ಬಸವಣ್ಣನವರ ವಚನ ಸತ್ಯವನ್ನು ಪ್ರತಿಪಾದನೆ ಮಾಡಲು ಧೀರವಾದ ಮನಸ್ಸು ಬೇಕು. ಸತ್ಯ ಶುದ್ಧವಾದ ಕಾಯಕವೂ ಇರಬೇಕು.
-✍️ Dr Prema Pangi
#ಜೋಳವಾಳಿಯಾನಲ್ಲ
Comments
Post a Comment