ವಚನ ದಾಸೋಹ : ಶ್ವಪಚನಾದಡೇನು ? ಲಿಂಗಭಕ್ತನೇ ಕುಲಜನು.
ವಚನ ದಾಸೋಹ:
ಶ್ವಪಚನಾದಡೇನು ? ಲಿಂಗಭಕ್ತನೇ ಕುಲಜನು.
#ಶ್ವಪಚನಾದಡೇನು ? ಲಿಂಗಭಕ್ತನೇ ಕುಲಜನು. ನಂಬಿ ನಂಬದಿದ್ದಡೆ ಸಂದೇಹಿ, ನೋಡಾ,
ಕಟ್ಟಿದಡೇನು, ಮುಟ್ಟಿದಡೇನು, ಹೂಸಿದಡೇನು
ಮನಮುಟ್ಟದನ್ನಕ್ಕ?
ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು,
ಕೂಡಲಸಂಗಮದೇವನೊಲಿದಂಗಲ್ಲದೆ,
ಅರ್ಥ:
“ಕೂಡಲಸಂಗಮದೇವ (ಪರಶಿವ, ಲಿಂಗದೇವ) ಒಲಿಯಬೇಕಾದರೆ ಭಾವಶುದ್ಧಿ ಯಾಗಬೇಕು. ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು''. ಭಾವಶುದ್ಧಿಯನ್ನು ಪಡೆದು ಲಿಂಗಭಕ್ತನಾದವನೇ ಕುಲಜ. ಕುಲ ಎಂಬುದು ಹುಟ್ಟಿನಿಂದ ಬರುವುದಿಲ್ಲ. ಆಚಾರ ವಿಚಾರಗಳಿಂದ, ನಡೆನುಡಿಗಳಿಂದ ಬರುತ್ತದೆ. ಹುಟ್ಟಿನಿಂದ ಶ್ವಪಚನಾದರೂ(ಶೂದ್ರರಲ್ಲಿಯೇ ಅತಿ ಕೆಳಗಿನ ವರ್ಗ) ಲಿಂಗಭಕ್ತಿ, ಅಳವಟ್ಟರೆ ಆತ ಉತ್ತಮರಿಗಿಂತ ಉತ್ತಮನಾಗುತ್ತಾನೆ ; ಶರಣನಾಗುತ್ತಾನೆ. ಬರಿಲಿಂಗ ಧರಿಸಿದರೆ ಸಾಲದು ; ಲಿಂಗಗುಣಗಳು ಅಳವಡಬೇಕು. ಇಲ್ಲವಾದರೆ ನಂಬಿಯೂ ನಂಬದ ಸಂದೇಹಿಯಾಗುತ್ತಾನೆ. ಲಿಂಗ ಕಟ್ಟಿ, ವಿಭೂತಿ ಧರಿಸಿ, ಬಹಿರಂಗವಾಗಿ ಆರಾಧಿಸಿದರೇನು ? ಮನಸ್ಸು ಲಿಂಗದಲ್ಲಿ ಲೀನವಾಗಬೇಕು, ಭಾವಶುದ್ಧವಾಗಬೇಕು. ಆಗ ಮಾತ್ರ ಭಕ್ತಿ ನೆಲಗೊಳ್ಳುತ್ತದೆ. ಬಹಿರಂಗ ಶುದ್ಧಿಯ ಜೊತೆಯೇ ಭಾವಶುದ್ಧಿಯೂ ಬೇಕು. ಅಂತಃಶುದ್ಧಿ ಇಲ್ಲದೆ ಯಾವ ಕಾರ್ಯಗಳನ್ನು ಮಾಡಿದರೂ ಅವುಗಳಿಗೆ ನೈತಿಕದೃಷ್ಟಿಯಲ್ಲಿ ಬೆಲೆಯಿಲ್ಲ. ಆಡಂಬರಕ್ಕೆ ಮಾಡಿದಂತೆ ಆಗುತ್ತದೆ.
ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ ಹೇಗೆ ಸಾಧಿಸುವುದು?
ಕಳ್ಳತನ ಮಾಡದಿರುವುದು, ಹಿಂಸಿಸದಿರುವುದು, ಸುಳ್ಳಾಡದಿರುವುದು. ಕೋಪಮಾಡಿಕೊಳ್ಳದಿರುವುದು, ಅನ್ಯರ ಬಗೆಗೆ ಅಸಹನೆ ಪಡದಿರುವುದು, ತನ್ನನ್ನು ತಾನು ಹೊಗಳಿಕೊಳ್ಳದಿರುವುದು, ಇತರರನ್ನು ನಿಂದಿಸದಿರುವುದು-ಈ ಸಪ್ತ ಶೀಲಗಳನ್ನು ಪಾಲಿಸುವುದರಿಂದ ಅಂತರಂಗ ಶುದ್ಧಿಯೂ ಉಂಟಾಗುತ್ತದೆ, ಬಹಿರಂಗ ಶುದ್ಧಿಯೂ ಉಂಟಾಗುತ್ತದೆ ಎನ್ನುತ್ತಾರೆ ಬಸವಣ್ಣನವರು. ತ್ರಿಕರಣಶುದ್ಧಿಯಂದರೆ ದೇಹ, ಮಾತು ಮತ್ತು ಮನಸ್ಸು ಇವುಗಳ ಶುದ್ಧಿ.
- ✍️Dr Prema Pangi
#ಶ್ವಪಚನಾದಡೇನು?
Comments
Post a Comment