ವಚನ ದಾಸೋಹ :ಗುರು ಸ್ವಾಯತವಾದ ಬಳಿಕ ಗುರುವ ಮರೆಯಬೇಕಯ್ಯಾ,
ವಚನ ದಾಸೋಹ: ಗುರು ಸ್ವಾಯತವಾದ ಬಳಿಕ ಗುರುವ ಮರೆಯಬೇಕಯ್ಯಾ,
#ಗುರು ಸ್ವಾಯತವಾದ ಬಳಿಕ ಗುರುವ ಮರೆಯಬೇಕಯ್ಯಾ,
ಲಿಂಗ ಸ್ವಾಯತವಾದ ಬಳಿಕ ಲಿಂಗವ ಮರೆಯಬೇಕಯ್ಯಾ,
ಜಂಗಮಸ್ವಾಯತವಾದ ಬಳಿಕ ಜಂಗಮವ ಮರೆಯಬೇಕಯ್ಯಾ,
ಪ್ರಸಾದ ಸ್ವಾಯತವಾದ ಬಳಿಕ ಪ್ರಸಾದವ ಮರೆಯಬೇಕಯ್ಯಾ.
ಇಂತೀ ಗುರುಲಿಂಗಜಂಗಮಪ್ರಸಾದದಲ್ಲಿ ಪರಿಣಾಮಿಯಾಗಿ,
ಸಮಯಭಕ್ತಿಯಲ್ಲಿ ಸಂತೋಷಿಯಾಗಿ ಬದುಕಿದೆನು ಕಾಣಾ,
ಕೂಡಲಸಂಗಮದೇವಾ. / 601
- ಗುರು ಬಸವಣ್ಣನವರು.
*ಅರ್ಥ*:
ಈ ವಚನದಲ್ಲಿ
ಇಷ್ಟಲಿಂಗ ಆಯತದಿಂದ ಸ್ವಾಯತ ಆದಮೇಲೆ ಪ್ರಾಣಲಿಂಗವೆಂಬ ಅಂತರಂಗದ ನಿರಾಕಾರ ನಿರ್ಗುಣ ಪೂಜೆಯಲ್ಲಿ ಬಹಿರಂಗದ ಅಷ್ಟಾವರಣಗಳನ್ನು ಮರೆಯಬೇಕು ಎನ್ನುತ್ತಾರೆ ಗುರು ಬಸವಣ್ಣನವರು. ಅಂತರಂಗದ ಪೂಜೆಯಲ್ಲಿ ಅಂತರಂಗದ ಅಷ್ಟಾವರಣಗಳನ್ನು ಅಳವಡಿಸಿಕೊಳ್ಳಬೇಕು. ಹೀಗೆ ಗುರು ಲಿಂಗ ಜಂಗಮ ಸ್ವಾಯತ್ತ ಆದ ಬಳಿಕ ಬಹಿರಂಗದ ವಸ್ತುವಿಷಯಗಳನ್ನು ಮರೆಯಬೇಕಾಗುತ್ತದೆ. ಅಂದರೆ ಮಾತ್ರ ಆಂತರ್ಯದಲ್ಲಿ ಪರಿಣಾಮದ ಪ್ರಸಾದದ ಆನಂದವನ್ನು ಅನುಭವಿಸುವದಕ್ಕೆ ಸಾಧ್ಯ ಎನ್ನುತ್ತಾರೆ ಗುರು ಬಸವಣ್ಣನವರು. ಹೀಗೆ ಲಿಂಗ ಆಯತದಿಂದ ಸ್ವಾಯತವಾದ ಮೇಲೆ ಅಂತರಂಗದಲ್ಲಿ ಉದಯವಾಗುವ "ಅರಿವೇ ಗುರು"ವಾಗುವುದು.
ಆಚಾರದಿಂದ ಲಿಂಗಾನುಸಂದವಾಗಿ ಒಳಹೊರಗೆ ಬೆಳಗುವ ಜ್ಯೋತಿಯೆ ಪ್ರಾಣಲಿಂಗವಾಗಿ ಬೆಳಗುವದು. "ಆಚಾರವೇ ಲಿಂಗ". ಲಿಂಗಾನುಭವವೇ ಜಂಗಮವಾಗುವುದು. "ಅನುಭಾವವೆ ಜಂಗಮ" . ಪ್ರಸಾದವೇ ತೃಪ್ತಿ ಆಗುವುದು. ಹೀಗೆ ಬಹಿರಂಗದ ಅಷ್ಟಾವರಣ ಗುರುಲಿಂಗಜಂಗಮಪ್ರಸಾದದಲ್ಲಿ ಉದಯಿಸಿದ ಅರಿವು, ಆಚಾರ, ಅನುಭಾವ, ತೃಪ್ತಿಗಳಿಂದ ಸಂಪೂರ್ಣ ಮಾರ್ಪಡಿಸಿ (ಪರಿಣಾಮಿಯಾಗಿ), ಸಮಯಭಕ್ತಿಯಲ್ಲಿ ಸಂತೋಷಿಯಾಗಿ ಬದುಕಿದೆನು ಎನ್ನುತ್ತಾರೆ ಗುರು ಬಸವಣ್ಣನವರು.
-✍️ Dr Prema Pangi
#ಗುರು_ಸ್ವಾಯತವಾದ_ಬಳಿಕ_ಗುರುವ
Comments
Post a Comment