ವಚನ ದಾಸೋಹ: #ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ
ವಚನ ದಾಸೋಹ:
#ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ
#ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು
ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ ಇನ್ನಾವುದು ವಿಧಿಯಯ್ಯಾ
ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ ಜೀವಜಾಲದಲ್ಲಿದೆ ಚರಾಚರವೆಲ್ಲ.
ಅದು ಕಾರಣ,
ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು
ನಿರ್ದೋಷಿಗಳಾಗಿ ಬದುಕಿದರು. / 1020
- ಗುರು ಬಸವಣ್ಣನವರು
*ಅರ್ಥ*:
ಮರ ಗಿಡ ಬಳ್ಳಿ ಧಾನ್ಯಗಳೆಲ್ಲವೂ ಜೀವಿಗಳೇ. ಅವುಗಳನ್ನು ಹಿಂಸಿಸದೆ ಬದುಕು ನಡೆಯಲಾರದು. ಜೀವನ ನಿರ್ವಹಣೆಗೆ ಅನಿವಾರ್ಯವಾದ ಮಟ್ಟಿಗೆ ಪ್ರಕೃತಿಯೊಡನೆ ಹೊಂದಿಕೊಳ್ಳಬೇಕಾಗುತ್ತದೆ. ನಾನು ಎಂಬ ಅಹಂಕಾರವನ್ನು ಬಿಟ್ಟು ಎಲ್ಲವನ್ನೂ ಲಿಂಗಕ್ಕರ್ಪಿಸಿ ಪ್ರಸಾದರೂಪದಲ್ಲಿ ಕಂಡು ನಿರ್ದೋಷಿಗಳಾಗಿ ಬದುಕಬೇಕೆನ್ನುತ್ತಾರೆ ಶರಣರು.
#ನಾನೊಂದು ಸುರಗಿಯನೇನೆಂದು ಹಿಡಿವೆನು? ಏನ ಕಿತ್ತೇನನಿರಿವೆನು?
ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ.
/ 103
- ಶರಣ ದಾಸಿಮಯ್ಯನವರು
ಜಗವೆಲ್ಲಾ ಪರಮಾತ್ಮನೇ ಆಗಿರುವಾಗ ಸುರಗಿಯನ್ನು (ಕತ್ತಿಯಂಥ ಆಯುಧ) ಹಿಡಿದು ಎನನ್ನೂ ಕಿತ್ತಲಿ? ಏನನ್ನು ಕತ್ತರಿಸಲಿ? ಯಾವ ಜೀವವನ್ನು, ಯಾರನ್ನು ಹಿಂಸಿಸಿದರೂ ಅದು ಆತ್ಮ ಹಿಂಸೆಯೇ ಆಗುತ್ತದೆ ಎನ್ನುತ್ತಾರೆ ಶರಣರಾದ ದಾಸಿಮಯ್ಯನವರು. ಜಗತ್ತಿನ ಪ್ರತಿ ಅಣು ಅಣುವಿನಲ್ಲಿ ಕಣಕಣದಲ್ಲೂ ಪರಮಾತ್ಮನನ್ನೇ ಕಂಡವರು ಶರಣರು.
ಅಹಿಂಸೆಯ ಮಿತಿಯನ್ನೂ ಸಹ ಶರಣರು ಕಂಡುಕೊಂಡರು. “ಅಹಿಂಸಾ ಪರಮೋ ಧರ್ಮ” ಎಂಬ ಮಾತನ್ನು ಜೈನಧರ್ಮದಷ್ಟು ಅತಿರೇಕಕ್ಕೆ ಎಳೆಯಲಿಲ್ಲ.
#ಜೀವಕ್ಕೆ ಜೀವವೇ ಆಧಾರ
ಜೀವತಪ್ಪಿಸಿ ಜೀವಿಸಬಾರದು.
"ಪೃಥ್ವೀಬೀಜಂ ತಥಾ ಮಾಂಸಂ ಅಪ್‍ದ್ರವ್ಯಂ ಸುರಾಮಯಂ. ಆತ್ಮಾ ಜೀವಸಮಾಯುಕ್ತಂ ಜೀವೋ ಜೀವೇನ ಭಕ್ಷಯೇತ್ ಎಂದುದಾಗಿ ಅಹಿಂಸಾ ಪರಮೋಧರ್ಮವೆಂಬ ಶ್ರಾವಕರನು ಕಾಣೆ.
ಲಿಂಗಾರ್ಪಿತವಾದುದೆಲ್ಲ ಶುದ್ಧ; ಉಳಿದುದೆಲ್ಲ ಜೀವನ್ಮಯ ಕಾಣಾ, ಗುಹೇಶ್ವರಾ.
- ಅಲ್ಲಮ ಪ್ರಭುಗಳು
ಸಮಗ್ರ ವಚನ ಸಂಪುಟ: 2 ವಚನದ ಸಂಖ್ಯೆ: 1210
ಜೀವ ಜೀವವನ್ನೆ ಭಕ್ಷ ಮಾಡುವುದರಿಂದ, ಪ್ರತಿ ಜೀವಕ್ಕೆ ಜೀವವೇ ಆಧಾರ , ಗಿಡಕ್ಕೆ ಬೀಜವೇ ಆಧಾರ, ಜೀವ ತಪ್ಪಿಸಿ ಜೀವಿಸಲು ಸಾಧ್ಯವಿಲ್ಲ . ಬೀಜದಲ್ಲೂ ಸಸ್ಯದಲ್ಲೂ ಜೀವವಿದೆ. ಕಾರಣ ಅಹಿಂಸೆಯೆ ಪರಮ ಧರ್ಮವೆಂಬ ಶ್ರಾವಕರ ವಿಚಾರ ಸಾಧ್ಯವಿಲ್ಲದ ಮಾತು. ಲಿಂಗಾರ್ಪಿತವಾದ್ದುದೆಲ್ಲ ಶುದ್ಧ ಎಂದು ಪ್ರಸಾದಿಕರಣ ಮಾಡಿ ಶುದ್ಧ ಪ್ರಸಾದವಾಗಿ ಸೇವಿಸಬೇಕು. ಉಳಿದುದೆಲ್ಲ ಜೀವನ್ಮಯ ಕಾಣಾ ಗುಹೇಶ್ವರಾ ಎಂದು ಪದಾರ್ಥವನ್ನು ಲಿಂಗಕ್ಕೆ ಅರ್ಪಿಸುವದರಿಂದ ಪ್ರಸಾದವಾಗಿ, ಸೇವಿಸಲು ಯೋಗ್ಯವಾಗುವುದು ಎನ್ನುವರು ಅಲ್ಲಮಪ್ರಭುಗಳು.
ಶರಣರು ನಿಸರ್ಗ ಧರ್ಮದ ಬಗೆಗೆ ಅವರೆಲ್ಲೂ ಅವಾಸ್ತವಿಕ, ಅವೈಜ್ಞಾನಿಕ, ಆದರ್ಶಗಳನ್ನಿಟ್ಟು ಕೊಂಡವರಾಗಿರಲಿಲ್ಲ. ಹೀಗೆ ಶರಣರು ಅಂಹಿಸೆಯನ್ನು ವ್ಯಾವಹಾರಿಕ ಮಟ್ಟದಲ್ಲಿ ಅದನ್ನು ಅನುವರಿತು ಅಳವಡಿಸಿಕೊಂಡರು. ಒಂದಲ್ಲ ಒಂದು ಬಗೆಯ ಹಿಂಸೆಯಿಲ್ಲದೆ ಜೀವನ ನಿರ್ವಹಣೆಯೇ ಅಸಾಧ್ಯವೆಂಬುದನ್ನು ಸಹ ಅವರು ಅರಿತಿದ್ದರು. ಮಾಂಸಾಹಾರವನ್ನು ಗುರು ಬಸವಣ್ಣನವರು ಇಚ್ಛಿಸಲಿಲ್ಲ, ಸೇವಿಸಲಿಲ್ಲ. ಆದರೆ ಇಲ್ಲಿ ಮುಖ್ಯವಾಗಿದ್ದು ಬಸವಾದಿ ಶರಣರು ಸಸ್ಯಾಹಾರಿಗಳನ್ನು ಮೇಲು, ಮಾಂಸಾಹಾರ ಸೇವಿಸುವವರನ್ನು ಕೀಳಾಗಿಯೂ ಕಾಣಲಿಲ್ಲ. ಆಹಾರದ ವಿಚಾರದಲ್ಲಿ ಶರಣರದು ಅಭಿಪ್ರಾಯಗಳೇ ಹೊರತು ಅದನ್ನು ಬೇರೆಯವರ ಮೇಲೆ ಹೇರಿಕೆಯಾಗಿ ಮಾಡಲಿಲ್ಲ ಎಂಬುದನ್ನು ನಾವು ಗಮನಿಸಬೇಕಿದೆ. ಬಸವಾದಿ ಶರಣರು ಮಾಂಸಹಾರಿ, ವೇಶ್ಯೆ, ಕಳ್ಳ, ಕುಡುಕ ಎಂದು ಯಾವ ಭೇದ ಭಾವ ಮಾಡದೆ ದೀಕ್ಷೆ ಕೊಟ್ಟು ಇವನಾರವ ಇವನಾರವ ಎನ್ನದಿರಿ ಎಂದು ಎಲ್ಲರಲ್ಲಿ ಸಮಾನತೆ ಸೌಹಾರ್ದತೆ ಭಾವನೆ ಬೆಳಿಸಿ, ಅನುಭವ ಮಂಟಪದಲ್ಲಿ ನಿರಂತರ ಚಿಂತನ ಮಂಥನ, ಸಮಾಲೋಚನೆಗಳಿಂದ ಅವರಲ್ಲಿ ತಾತ್ವಿಕ ಬದಲಾವಣೆಗೆ ಯತ್ನಿಸಿದರು.
- ✍️Dr Prema Pangi
#ಮರ_ಗಿಡು_ಬಳ್ಳಿ_ಧಾನ್ಯಂಗಳ_ಬೆಳಸೆಲ್ಲವ
ಶರಣು ಶರಣಾರ್ಥಿ 🙏
Comments
Post a Comment