ವಚನ ದಾಸೋಹ : ಕ್ರಿಯೆಯೆ ಜ್ಞಾನ, ಆ ಜ್ಞಾನವೆ ಕ್ರಿಯೆ.

ವಚನ ದಾಸೋಹ : ಕ್ರಿಯೆಯೆ ಜ್ಞಾನ, ಆ ಜ್ಞಾನವೆ ಕ್ರಿಯೆ.
ವಚನ:
#ಕ್ರಿಯೆಯೆ ಜ್ಞಾನ, ಆ ಜ್ಞಾನವೆ ಕ್ರಿಯೆ.
 ಜ್ಞಾನವೆಂದಡೆ ತಿಳಿಯುವುದು,
ಕ್ರಿಯೆಯೆಂದಡೆ ತಿಳಿದಂತೆ ಮಾಡುವುದು
 ಪರಸ್ತ್ರೀಯ ಭೋಗಿಸಬಾರದೆಂಬುದೆ ಜ್ಞಾನ;
 ಅದರಂತೆ ಆಚರಿಸುವುದೆ ಕ್ರಿಯೆ. ಅಂತು
 ಆಚರಿಸದಿದ್ದಡೆ ಅದೆ ಅಜ್ಞಾನ ನೋಡಾ,
 ಕೂಡಲಚೆನ್ನಸಂಗಮದೇವಾ
- ಅವಿರಳ ಜ್ಞಾನಿ ಚೆನ್ನಬಸವಣ್ಣನವರು 
*ಅರ್ಥ*:
ವಚನದ ಅರ್ಥ ಸರಳ ಮತ್ತು ನೇರವಾಗಿದೆ. ಯಾವುದು ಜ್ಞಾನ, ಯಾವುದು ಕ್ರಿಯೆ, ಯಾವುದು ಅಜ್ಞಾನ ಎಂದು ಒಂದು  ಉದಾಹರಣೆ ಕೊಟ್ಟು ಸರಳವಾಗಿ ತಿಳಿಸಿದ್ದಾರೆ ಅವಿರಳ ಜ್ಞಾನಿ ಚೆನ್ನಬಸವಣ್ಣನವರು.
"ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,
......ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ" ಎಂಬ ವಚನದಲ್ಲಿ ಗುರು ಬಸವಣ್ಣನವರು ತಿಳಿಸಿದಂತೆ ಪರಸ್ತ್ರೀ ಪರಧನ ಪರದೈವಗಳನ್ನು ಶರಣನು ನಿರಾಕರಿಸಬೇಕು. ಪರಸ್ತ್ರೀಯ ಭೋಗಿಸಬಾರದೆಂಬುದೆ ಜ್ಞಾನ; ಆ ಜ್ಞಾನದಂತೆ ನಡೆದುಕೊಂಡರೆ ಅದು ಕ್ರಿಯೆ (ಸತ್ಕ್ರಿಯೆ). ಹಾಗೆ ತಿಳಿದೂ ಆಚರಿಸದಿದ್ದರೆ ಆಗ ಅದು ಅಜ್ಞಾನವಾಗುತ್ತದೆ.
*ವಚನ ಚಿಂತನೆ*:
ಸಂಪೂರ್ಣಜ್ಞಾನ ಅರಿಯಲು ಕ್ರಿಯೆ ಬೇಕು. ಕ್ರಿಯೆಗಳ ಆಚರಣೆಗೆ ಜ್ಞಾನ ಬೇಕು. ಹೀಗೆ ಅವು ಒಂದಕ್ಕೊಂದು ಪೂರಕವಾಗಿವೆ.
ಜ್ಞಾನವಿಲ್ಲದೆ ಕ್ರಿಯೆ ಮಾಡಿದರೆ,
ಅದು ಕಣ್ಣಿಲ್ಲದವನ ನಡೆಯಂತೆ, ಎತ್ತೆತ್ತಲೋ ಕರೆದುಕೊಂಡು ಹೋಗುತ್ತವೆ. ಸರಿಯಾಗಿ ನಡೆಯಲು ಕಣ್ಣುಗಳು ಮಾರ್ಗದರ್ಶನ ಮಾಡುವಂತೆ ಯಾವುದೇ ಕ್ರಿಯೆಗೆ, ಕಾರ್ಯಕ್ಕೆ ಮಾರ್ಗದರ್ಶನ ಮಾಡಲು ಜ್ಞಾನ, ಅರಿವು, ಪ್ರಜ್ಞೆ ಬೇಕಾಗುತ್ತದೆ. ಯಾವ ಕಾರ್ಯ ನ್ಯಾಯವಾದದ್ದು ಸರಿಯಾದದ್ದು; ಯಾವುದು ಅನ್ಯಾಯ, ತಪ್ಪು ಎಂದು ನಮ್ಮ ಜ್ಞಾನ, ಅರಿವು ತಿಳಿಸುತ್ತದೆ. ಯಾವ ಕ್ರಿಯೆಯಿಂದ  ನಮಗೂ ಸಮಾಜಕ್ಕೂ ಒಳ್ಳೆಯದಾಗುತ್ತದೆ? ಯಾವ ಕ್ರಿಯೆಯಿಂದ ನಮಗೆ ಮತ್ತು ಸಮಾಜಕ್ಕೆ ಕೇಡು ಆಗುತ್ತದೆ? ಎಂದು ಸಹ ನಮ್ಮ ಪ್ರಜ್ಞೆ ತಿಳಿಸುವುದು.
ಇನ್ನೂ 
ಎಲ್ಲ ತರಹದ ಜ್ಞಾನ ಪಡೆದುಕೊಂಡು ಅದರ ಬೆಳಕಿನಲ್ಲಿ ಕಾರ್ಯ ನಿರ್ವಹಿಸದಿದ್ದರೆ ನಮ್ಮ ಜ್ಞಾನದಿಂದ ನಮಗೂ ಸಮಾಜಕ್ಕೂ ಯಾವುದೆ ಪ್ರಯೋಜನವಾಗದಿದ್ದರೆ ಅಂಥ ಜ್ಞಾನ ನಿಷ್ಪ್ರಯೋಜಕ ವಾಗುತ್ತದೆ. ಜ್ಞಾನವಿದ್ದೂ ತಪ್ಪು ಮಾರ್ಗದಲ್ಲಿ ನಡೆದರೆ ಆ ಜ್ಞಾನದಿಂದ  ವ್ಯಕ್ತಿಗೂ ಸಮಾಜಕ್ಕೂ ಎನು ಪ್ರಯೋಜನ?

 "ಜ್ಞಾನವಿಲ್ಲದ ಕ್ರೀ ಜಡನು;
ಕ್ರೀಯಿಲ್ಲದ ಜ್ಞಾನ ವಾಗ್ಜಾಲ ಭ್ರಾಂತು, ಜ್ಞಾನದಲ್ಲಿ ಅರಿದಡೇನಯ್ಯಾ ಸತ್ಕ್ರೀಯನಾಚರಿಸದನ್ನಕ್ಕ? 
ಇದು ಕಾರಣ ಸಿದ್ಧ ಸೋಮನಾಥನಲ್ಲಿ ಎರಡೂ ಬೇಕು" ಎನ್ನುತ್ತಾರೆ ಶರಣರು.
ಸತ್ ಚಿತ್ ಆನಂದ ಸ್ವರೂಪನಾದ ನಿಜಗುರು ಆದಿಗುರು ನಿರಾಕಾರ ಶಿವನಲ್ಲಿ ಬೆರೆಯಲು ಶಿವಯೋಗದ ಜ್ಞಾನ ಮತ್ತು ಸಾಧನೆಯ ಕ್ರಿಯೆ ಎರಡೂ ಬೇಕು.
ಶರಣ ಸ್ವತಂತ್ರ ಸಿದ್ಧಲಿಂಗೇಶ್ವರರು. ಜ್ಞಾನ ಮತ್ತು ಕ್ರಿಯೆ ಎರಡೂ ಸದಾಚಾರದ ನಿತ್ಯ ಜೀವನಕ್ಕೆ ಆದ್ಯಾತ್ಮ ಸಾಧನೆಗೆ ಅವಶ್ಯವಾಗಿಬೇಕು ಎನ್ನುತ್ತಾರೆ.
"ಅಂತರಂಗದಲ್ಲಿ ಅರಿವಾದಡೇನಯ್ಯಾ 
ಬಹಿರಂಗದಲ್ಲಿ ಕ್ರೀ ಇಲ್ಲದನ್ನಕ್ಕ?"

#ಜ್ಞಾನರಹಿತನಾಗಿ ಕ್ರೀಯನೆಷ್ಟು ಮಾಡಿದಡೇನು?
ಅದು ಕಣ್ಣಿಲ್ಲದವನ ನಡೆಯಂತೆ.
ಕ್ರೀರಹಿತನಾಗಿ ಜ್ಞಾನಿಯಾದಡೇನು?
ಅದು ಕಾಲಿಲ್ಲದವನ ಇರವಿನಂತೆ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ನಿಜವ ಬೆರಸುವಡೆ
ಜ್ಞಾನವೂ ಕ್ರೀಯೂ ಎರಡು ಅವಶ್ಯ.
- ✍️Dr Prema Pangi 
#ಕ್ರಿಯೆಯೆ_ಜ್ಞಾನ_ಆ_ಜ್ಞಾನವೆ_ಕ್ರಿಯೆ.
ಶರಣು ಶರಣಾರ್ಥಿ 🙏

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma