ಶರಣ ಪರಿಚಯ - ಹಡಪದ ಅಪ್ಪಣ್ಣ
🌷ನಿಜಸುಖಿ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿಯ ಶುಭಾಶಯಗಳು🌷🌷🌷
ಕಾಲ: ಕ್ರಿ.ಶ.1160
ಹೆಂಡತಿ: ನಿಜಮುಕ್ತ ಹಡಪದ ಲಿಂಗಮ್ಮ
ದೊರೆತಿರುವ ವಚನಗಳು: 251
ಬಿರುದು : ನಿಜಲಿಂಗಯೋಗಿ, ನಿಜಸುಖಿ
ಜಯಂತಿ : ಗುರುಪೂರ್ಣಿಮೆ/ಕಡ್ಲಿಗಡಬು ಹುಣ್ಣಿಮೆ,
ಅಂಕಿತ: ಬಸವಪ್ರಿಯ ಕೂಡಲ ಚೆನ್ನಬಸವಣ್ಣ ತಮ್ಮ ಗುರುಗಳಾದ ಚೆನ್ನಬಸವಣ್ಣನವರ ನಾಮವನ್ನು ಅಂಕಿತ ಮಾಡಿ ವಚನಗಳನ್ನು ರಚಿಸಿದ್ದಾರೆ.
ಆರಾಧ್ಯದೈವ : ಚೆನ್ನಮಲ್ಲೇಶ್ವರ
ಊರು: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದವರು.
ಸಮಾಧಿ : ವಿಜಯಪುರ ಜಿಲ್ಲೆಯ ತಂಗಡಗಿ. ಅಲ್ಲಿಯೆ ಇವರ ಸಮಾಧಿಯೂ ಸಹ ಇದೆ.
ಕಾಯಕ:
1.ಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿ
2. ವೀಳ್ಯ(ತಾಂಬೂಲ)ವನ್ನು ನೀಡುವುದು. ಕಲ್ಯಾಣದಲ್ಲಿ, ಬಸವಣ್ಣನವರ ಮಹಾಮನೆಯಲ್ಲಿ ವೀಳ್ಯವನ್ನು ವಿತರಣೆ ಮಾಡುವ ಕಾಯಕ
3. ಕ್ಷೌರಿಕ ಕಾಯಕ
(1.ಹಡಪ ಎಂಬ ಪದಕ್ಕೆ ಎರಡು ಆರ್ಥ ಇದೆ.
ಎಲೆ ಅಡಕೆಗಳನ್ನು ಇಟ್ಟುಕೊಳ್ಳುವ ಚೀಲ
2.ಗಡ್ಡ ಮೀಸೆ ತಲೆಗೂದಲನ್ನು ಕತ್ತರಿಸುವ ಕೆಲಸಕ್ಕಾಗಿ ಬಳಸುವ ಸಲಕರಣೆಗಳನ್ನು ಇಟ್ಟುಕೊಳ್ಳುವ ಚಿಕ್ಕಪೆಟ್ಟಿಗೆ)
ಬೆಳಿಗ್ಗೆ ಎದ್ದು ಕ್ಷೌರಿಕರ ಮುಖ ನೋಡಿದರೆ ಆ ದಿನ ಯಾವುದೇ ಕೆಲಸಗಳು ಆಗುವುದಿಲ್ಲ ಎನ್ನುವುದು ವೈದಿಕ ಜನರ ಮೂಢನಂಬಿಕೆ. ಆದರೆ ಬಸವಣ್ಣನವರು ಈ ಮೂಢ ನಂಬಿಕೆಗೆ ವಿರುದ್ದವಾಗಿ ತಮ್ಮ ಆಪ್ತ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ ಅವರನ್ನೇ ನೇಮಕ ಮಾಡಿದ್ದರು ಮತ್ತು ಯಾರೇ ಪ್ರಧಾನ ಮಂತ್ರಿ ಬಸವಣ್ಣನವರನ್ನು ಕಂಡು ಮಾತನಾಡಬೇಕಾದರೆ ಅವರು ಮೊದಲು ಬಸವಣ್ಣನವರ ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣ ನವರನ್ನು ಭೇಟಿಯಾಗಲೇಬೇಕಿತ್ತು.
ಇದು ಬಸವಣ್ಣನವರು ಮಾಡಿರುವ ಮೂಢ ನಂಬಿಕೆ, ಜಾತಿವ್ಯವಸ್ಥೆಯ ವಿರುದ್ಧ ಹೋರಾಟದ ಭಾಗ.
ಹಡಪದ ಅಪ್ಪಣ್ಣನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಬಸವಣ್ಣನವರ ಬಹಳ ಹತ್ತಿರದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದರು. ಬಸವಣ್ಣನವರ ಅತ್ಯಂತ ಆಪ್ತವಲಯದಲ್ಲಿ ಗುರುತಿಸಿ ಕೊಂಡವರು.
ಶರಣೆ, ಮಹಾನ್ ಸಾಧಕಿ ಮತ್ತು ವಚನಕಾರ್ತಿ ಹಡಪದ ಲಿಂಗಮ್ಮನವರು ಇವರ ಧರ್ಮಪತ್ನಿ. ಸತಿ ಪತಿ ಇಬ್ಬರೂ ಸತ್ಯ ಸಂಧರು, ವಚನಕಾರರು, ಮಹಾನ್ ಅನುಭಾವಿಗಳು.
ದೀಕ್ಷಾಗುರು : ಚೆನ್ನಬಸವೇಶ್ವರರು
ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಗುರು ಬಸವಣ್ಣನವರು ಗಡಿಪಾರಾಗಿ ಕೂಡಲಸಂಗಮಕ್ಕೆ ಹೋಗುವಾಗ ಚೆನ್ನಬಸವಣ್ಣ, ಪತ್ನಿ ನೀಲಾಂಬಿಕೆ ಗಂಗಾಂಬಿಕೆ, ಅಕ್ಕ ನಾಗಲಾಂಬಿಕೆ ಇತರ ಶರಣರು ಗುರು ಬಸವಣ್ಣನವರ ಜೊತೆ ಹೋಗಲು ಇಚ್ಛಿಸುತ್ತಾರೆ. ಆದರೆ ಅವರಿಗೆಲ್ಲ ಶರಣರ ಮತ್ತು ವಚನ ಸಾಹಿತ್ಯದ ರಕ್ಷಣೆಯ ಕಾರ್ಯ ವಹಿಸಿ, ಹಡಪದ ಅಪ್ಪಣ್ಣನವರು ಮಾತ್ರ ನನ್ನೊಂದಿಗೆ ಬರಲಿ ಎನ್ನುತ್ತಾರೆ. ಅಷ್ಟು ಆಪ್ತತೆ ಇತ್ತು ಅಪ್ಪಣ್ಣನವರಲ್ಲಿ. ಅಪ್ಪಣ್ಣನವರು ಕಲ್ಯಾಣಕ್ಕೆ ಮೇಲಿಂದ ಮೇಲೆ ಹೋಗಿ ಅಲ್ಲಿ ನಡೆಯುತ್ತಿರುವ ವಿಷಯಗಳನ್ನು ಗುರು ಬಸವಣ್ಣನವರಿಗೆ ತಿಳಿಸುತ್ತಿದ್ದರು. ಮುಂದೆ ಚಾಲುಕ್ಯರ ಸಾಮಂತರಿಂದ ಬಿಜ್ಜಳ ರಾಜನ ಕೊಲೆಯಾಗಿ ಆ ಆರೋಪ ಶರಣರ ಮೇಲೆ ಬಂದು ಬಿಜ್ಜಳನ ಮಗ ಸೋಮಿದೇವನಿಂದ ಶರಣರ ಕಗ್ಗೊಲೆ, ವಚನ ಸುಡುವುದು ನಡೆಯುತ್ತದೆ. ಆಗ ಗುರು ಬಸವಣ್ಣನವರ ಅಪ್ಪಣೆಯ ಮೇರೆಗೆ ಕಲ್ಯಾಣಕ್ಕೆ ಹೋಗಿ ಗುರು ಬಸವಣ್ಣನವರ ವಿಚಾರಪತ್ನಿ ನೀಲಾಂಬಿಕೆ ಯವರನ್ನು ಕರೆತರಲು ಹೋದಾಗ, ನೀಲಾಂಬಿಕೆ ತಾಯಿ "ಅಲ್ಲಿಯ ಸಂಗಯ್ಯ ನಮ್ಮ ಇಷ್ಟಲಿಂಗದಲ್ಲಿಯೇ ಇದ್ದಾನೆ, ಇಲ್ಲಿ ಶರಣ ಮಕ್ಕಳ ಸೇವೆ ರಕ್ಷಣೆಯ ಹೊಣೆಯಲ್ಲಿ ತೊಡಗುವೆ" ಎಂದು ಸಂದೇಶ ಕಳಿಸುತ್ತಾರೆ. ಮುಂದೆ ಗುರು ಬಸವಣ್ಣನವರು ತಾವು ಬಂದ ಲೋಕಕಾರ್ಯ(ಮಣಿಹ) ಮುಗಿದಿದೆ ಎಂದು ಇಚ್ಛಾಮರಣ ಹೊಂದಲು ನಿರ್ಧಾರ ತೆಗೆದುಕೊಂಡು, ಶರಣರನ್ನು ಮತ್ತು ವಚನ ಸಾಹಿತ್ಯ ಕಾಪಾಡಲು ತಕ್ಷಣ ಕಲ್ಯಾಣ ಬಿಟ್ಟು ಉಳವಿಗೆ ಹೋಗಲು ಚೆನ್ನಬಸವಣ್ಣನವರಿಗೆ ಆದೇಶ ಕೊಟ್ಟು ಕಳಿಸುತ್ತಾರೆ. ಹಡಪದ ಅಪ್ಪಣ್ಣನವರು ನೀಲಾಂಬಿಕೆ ತಾಯಿಯವರನ್ನು ಕರೆದುಕೊಂಡು ತಂಗಡಿಗೆಗೆ ಬರುವಷ್ಟರಲ್ಲಿ ಬಸವಣ್ಣನವರು ತಾವು ಬಂದ ಕಾರ್ಯ ಮುಗಿದಿದೆ ಎಂದು ಕೂಡಲಸಂಗಮನಲ್ಲಿ ಇಚ್ಛಾಮರಣದಿಂದ ಬಯಲಲ್ಲಿ ಬಯಲಾಗುತ್ತಾರೆ. ಆಮೇಲೆ ನೀಲಾಂಬಿಕೆ ತಾಯಿ ಮತ್ತು ಅಪ್ಪಣ್ಣ ಅವರೂ ಸಹ ನಾವು ಬಂದ ಕಾರ್ಯ ಮುಗಿಯಿತು ಎಂದು ಕೃಷ್ಣಾ ನದಿಯ ಆಚೆಯ ದಡದ ತಂಗಡಗಿಯಲ್ಲಿ ಯೋಗಮಾರ್ಗದಿಂದ ಲಿಂಗೈಕ್ಯರಾಗುತ್ತಾರೆ. ಅವರ ಸಮಾಧಿ ಸ್ಥಳ ತಂಗಡಗಿಯಲ್ಲಿ ಈಗಲೂ ಇದೆ.
ಬನವಾಸಿಯ ಮಧುಕೇಶ್ವರ ದೇವಾಲಯದ ಶಿವೋತ್ಸವ ಮಂಟಪದ ಗಗ್ಗರಿ ಕಲ್ಲಿನ ಮೇಲಿರುವ ಶರಣರ ಶಿಲ್ಪಗಳಲ್ಲಿ ಅಪ್ಪಣ್ಣನ ವಿಗ್ರಹವು ಇದೆ.
ಹಡಪದ ಅಪ್ಪಣ್ಣನವರ ವಚನಗಳಲ್ಲಿ ಬೆಡಗಿನವು ಅಧಿಕ. ಷಟ್-ಸ್ಥಲ ತತ್ವನಿರೂಪಣೆಗೆ ಆದ್ಯತೆ. ಕೆಲವು ಕಥನಶೈಲಿಯನ್ನು ಅಳವಡಿಸಿಕೊಂಡಿವೆ. ಬೆಡಗಿನ ವಚನಗಳು ಹೆಚ್ಚು ಷಟ್-ಸ್ಥಲ ವಿಷಯ ಪ್ರಧಾನವಾಗಿದೆ. ವಚನಗಳು ಗ್ರಹಿಸಲು ಸುಲಭವಾಗಿವೆ.
ಹಡಪದ ಅಪ್ಪಣ್ಣನವರ ವಚನಗಳು :
1. ವಚನ
#ತನ್ನ ತಾನರಿಯದೆ ತನ್ನ ತಾ ನೋಡದೆ,
ತನ್ನ ತಾ ನುಡಿಯದೆ, ಅನ್ಯರ ಸುದ್ದಿಯ ನುಡಿದಾಡುವ ಕುನ್ನಿಗಳಿಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ.
ಅವನು ಸರ್ವಾಪರಾಧಿ,
ಅವನ ಮುಖವ ನೋಡಲಾಗದು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
- ನಿಜಸುಖಿ ಹಡಪದ ಅಪ್ಪಣ್ಣ
ಅರ್ಥ:
ಮೊದಲು ತನ್ನನ್ನು ತಾನು ತಿಳಿದುಕೊಂಡು ಅರಿತುಕೊಂಡು ಅದರಂತೆ ನುಡಿ- ನಡೆ ಒಂದಾಗಿ ನಡೆದರೆ ಮಾತ್ರವೇ ಆಗ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಲಭ್ಯವಾಗುತ್ತವೆ. ಅದನ್ನು ಬಿಟ್ಟು ಕೇವಲ ಅನ್ಯರ ತಪ್ಪುಗಳನ್ನೇ ಎತ್ತಿ ತೋರಿಸುತ್ತ ಅವರ ಬಗ್ಗೆಯೇ ಆಡಿ ಕೊಂಡಿದ್ದರೆ ಅಂಥವರ ಪಾಲಿಗೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಎಂದಿಗೂ ಲಭ್ಯವಾಗದು.
ಅಂತಹವರು ಸದಾ ಸರ್ವಾಪರಾಧಿ. ಅಂಥವರ ಮುಖವ ನೋಡಲಾಗದು ಎನ್ನುತ್ತಾರೆ ಹಡಪದ ಅಪ್ಪಣ್ಣನವರು. ಮತ್ತೊಬ್ಬರ ಕಡೆಗೆ ಬೆರಳನ್ನೆತ್ತುವ ಮೊದಲಿಗೆ ತನ್ನನ್ನು ತಾ ತಿಳಿದುಕೊಂಡು, ತನ್ನ ಆತ್ಮಪರಿಶೀಲನೆ ಮಾಡಿ ಆತ್ಮಸಾಕ್ಷಿಯಂತೆ ನಡೆ ನುಡಿ ಒಂದಾಗಿಸಿ ನಡೆಯಬೇಕು ಎಂದಿದ್ದಾರೆ ಹಡಪದ ಅಪ್ಪಣ್ಣನವರು.
2. ವಚನ
#ಆಸೆ ರೋಷವೆಂಬ ದ್ವೇಷವ ಬಿಟ್ಟು,
ದೋಷ ದುರಿತವ ಬಿಟ್ಟು,
ಕ್ಲೇಶವ ಹರಿದು, ಸಾಸಿರಮುಖದೊಳು ಸೂಸುವ ಮನವ ನಿಲ್ಲಿಸಿ, ನಿರಾಶಿಕನಾಗಿ ನಿಂದರೆ,
ಬಸವಪ್ರಿಯ ಕೂಡಲ ಚೆನ್ನಬಸವಣ್ಣ.
- ನಿಜಸುಖಿ ಹಡಪದ ಅಪ್ಪಣ್ಣ
ಅರ್ಥ:
ಈ ಆಸೆಯಿಂದಲೆ ರೋಷ ಹುಟ್ಟುತ್ತದೆ. ದ್ವೇಷ ಚಿಗುರುತ್ತದೆ. ಸಹಜವಾಗಿ ಮನಸ್ಸು ದುಗುಡ ಹೊಂದುತ್ತದೆ. ಆಸೆ ರೋಷ ವೆಂಬ ದ್ವೇಷವನ್ನು ಬಿಟ್ಟು, ಮನದ ಚಿಂತೆ ತೊಂದರೆಯನ್ನು ನಾಶ ಮಾಡಿ, ಸಾಸಿರಮುಖದೊಳು ಹರಿಯುವ ಮನಸ್ಸನ್ನು ಒಂದೆಡೆ ನಿಲ್ಲಿಸಿದಾಗಲೆ ನಮಗೆ ಶರಣ ಮಾರ್ಗದ ಅರಿವು ಉಂಟಾಗುತ್ತದೆ. ಹರಿದಾಡುವ ಮನಸ್ಸು ಯಾವಾಗಲೂ
ಸ್ವೇಚ್ಛವಾಗಿ ಸಾವಿರ ದಿಕ್ಕಿನಲ್ಲಿ ಹರಿದಾಡುವಂತದ್ದು. ಅದನ್ನು ಕಟ್ಟಿ ನಿಲ್ಲಿಸದೆ ಹೋದರೆ, ಅದು ಸೂತ್ರವಿಲ್ಲದ ಪಟದಂತೆ ಆಕಾಶದಿಂದ ಉದುರಿ ಬೀಳುತ್ತದೆ. ಮನಸ್ಸಿನ ಹೋಯ್ದಾಟವನ್ನು ತಡೆಯದೆ ಹೋದರೆ ಅದು ಹಲವಾರು ವಿಷಯಗಳನ್ನು ತನ್ನ ಒಳಗೆ ಬಚ್ಚಿಟ್ಟುಕೊಂಡು ಕಾಡತೊಡಗುತ್ತದೆ. ಬಸವಾದಿ ಶರಣರು ಬರುವುದಕ್ಕಿಂತ ಪೂರ್ವದಲ್ಲಿ ಹೆಣ್ಣು ಹೊನ್ನು ಮಣ್ಣು ಮಾಯೆ ಎಂದು ಕರೆದಿದ್ದರೆ ಶರಣರು ಮಾತ್ರ ಮನದ ಮುಂದಣ ಆಸೆಯೆ ಮಾಯೆ ಎಂದು ಖಚಿತವಾಗಿ ಹೇಳಿದರು.
3. ವಚನ
#ವಂದನೆಗೆ ನಿಲ್ಲಬೇಡ
ನಿಂದೆಗಂಜಿ ಓಡಲಿಬೇಡ
ಹಿಂದು ಮುಂದು ಆಡಲಿಬೇಡ
ಸಂದೇಹಗೊಳಲಿಬೇಡ
ದ್ವಂದ್ವಬುದ್ಧಿಯ ಕಳೆದು ನಿಂದಿರೆ
ಬಸವಪ್ರಿಯ ಕೂಡಲ ಚೆನ್ನಬಸವಣ್ಣ
- ನಿಜಸುಖಿ ಹಡಪದ ಅಪ್ಪಣ್ಣ
ಅರ್ಥ:
ತನ್ನ ಬಗ್ಗೆ ಇತರರು ಆಡುವ ಹೊಗಳಿಕೆಯ ನುಡಿಯನ್ನು ಕೇಳಿಸಿಕೊಳ್ಳುತ್ತಿದ್ದಂತೆಯೇ , ವ್ಯಕ್ತಿಯ ಮನದಲ್ಲಿ ತಾನು ಇತರರಿಗಿಂತ ದೊಡ್ಡವನು ಎಂಬ ಅಹಂಕಾರ ಮೂಡುತ್ತದೆ. ಹೊಗಳಿಕೆಯ ಮಾತಿನ ಗುಂಗಿನಲ್ಲಿ ಸಿಲುಕಿದ ವ್ಯಕ್ತಿಯು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಬದಲು, ಇನ್ನುಳಿದ ಜೀವನದ ಉದ್ದಕ್ಕೂ ತನ್ನನ್ನು ತಾನು ಮೆರೆಸಿಕೊಳ್ಳುವುದರಲ್ಲಿಯೇ ಮಗ್ನನಾಗುತ್ತಾನೆ. ಆದ್ದರಿಂದ ಹೊಗಳಿಕೆಯ ನುಡಿಗಳನ್ನು ಕೇಳಿದಾಗ ವ್ಯಕ್ತಿಯು ಉಬ್ಬಬಾರದು.
ಅದೇ ರೀತಿ ಇತರರಿಂದ ನಿಂದೆ, ತೆಗಳಿಕೆ, ಕಡೆಗಣಿಕೆ, ತಿರಸ್ಕಾರಕ್ಕೆ ಗುರಿಯಾದಾಗ, ನಿನ್ನಿಂದ ಯಾವ ತಪ್ಪು ಆಗದೆ, ಇತರರು ನಿನಗೆ ಅಪಮಾನವನ್ನು ಮಾಡಬೇಕೆಂಬ ಕೆಟ್ಟ ಉದ್ದೇಶದಿಂದ ತೆಗಳುತ್ತಿದ್ದರೆ , ಅದನ್ನು ಲೆಕ್ಕಿಸದೆ ಗಟ್ಟಿಮನಸ್ಸಿನಿಂದ ಜೀವನದಲ್ಲಿ ಮುಂದೆ ಸಾಗು.
ವ್ಯಕ್ತಿ ತಮ್ಮ ಮುಂದಿದ್ದಾಗ, ತುಂಬಾ ಚೆನ್ನಾಗಿ ಮಾತನಾಡುತ್ತ,ಅವರು ಇಲ್ಲದಾಗ ಇತರರ ಮುಂದೆ ಆತನ ಬಗ್ಗೆ ಕೆಟ್ಟನುಡಿಗಳನ್ನಾಡುವುದು ಈ ರೀತಿ ‘ಮುಂದೆ ಒಂದು ಮಾತು, ಹಿಂದೆ ಒಂದು ಮಾತು ಆಡುವುದನ್ನು ಮಾಡಬಾರದು.
ಜೊತೆಗೂಡಿ ಬಾಳುವಾಗ ಒಬ್ಬರು ಮತ್ತೊಬ್ಬರನ್ನು ನಂಬಬೇಕು. ಇಂತಹ ನಂಬಿಕೆಯಿಂದಲೇ ಮಾನವನ ಬದುಕು ನಡೆಯುತ್ತಿದೆ. ನಾವು ವ್ಯವಹರಿಸುತ್ತಿರುವ ವ್ಯಕ್ತಿಗಳ ಬಗ್ಗೆ ನಂಬಿಕೆಯನ್ನು ಕಳೆದುಕೊಂಡು ಅವರ ನಡೆನುಡಿಗಳನ್ನು ಅನುಮಾನದಿಂದ ಕಾಣತೊಡಗಿದಾಗ, ವ್ಯಕ್ತಿಗಳ ನಡುವಣ ಸಂಬಂಧ ಮುರಿದುಬೀಳುತ್ತದೆ. ಜೀವನದಲ್ಲಿ ಎಲ್ಲರನ್ನೂ ಸಂಶಯದಿಂದ ಕಾಣುವಂತಹ ಗುಣವನ್ನು ಬೆಳೆಸಿಕೊಳ್ಳಬೇಡ.
ಯಾವುದೇ ಕೆಲಸವನ್ನು ಮಾಡುವಾಗ ಇಬ್ಬಗೆಯ ಮನ ಇರಬಾರದು. ಒಂದೇ ಮನಸ್ಸಿನಿಂದ ನಿಸಂದೇಹವಾಗಿ ಮಾಡಿ ಮುಗಿಸಬೇಕು.
4. ವಚನ
#ಅಯ್ಯಾ ನಿಮ್ಮ ಶರಣರು ವೇಷವ ತೋರಿ ಗ್ರಾಸವ ಬೇಡುವರಲ್ಲ.
ದೇಶವ ತಿರುಗಿ ಕಲಿತಮಾತ ನುಡಿವರಲ್ಲ.
ಲೇಸಾಗಿ ನುಡಿವರು, ಆಶೆ ಇಲ್ಲದೆ ನಡೆವರು, ರೋಷವಿಲ್ಲದೆ ನುಡಿವರು.
ಹರುಷವಿಲ್ಲದೆ ಕೇಳುವರು, ವಿರಸವಿಲ್ಲದೆ ಮುಟ್ಟುವರು.
ಸರಸವಿದ್ದಲ್ಲಿಯೇ ವಾಸಿಸುವರು.
ಇಂತಪ್ಪ ಬೆರಸಿ ಬೇರಿಲ್ಲದ ನಿಜೈಕ್ಯಂಗೆ ನಮೋ ನಮೋ ಎಂಬೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.
ಇಂತಪ್ಪ ಶರಣರ ನೆಲೆಯ ನಾನೆತ್ತ ಬಲ್ಲೆನಯ್ಯಾ ?
- ನಿಜಸುಖಿ ಹಡಪದ ಅಪ್ಪಣ್ಣ
ಅರ್ಥ:
ನಮ್ಮ ಶರಣರು ವೇಷಲಾಂಛನ ಧರಿಸಿ ಊಟ ವನ್ನು ಬೇಡುವವರಲ್ಲ. ದೇಶಸಂಚಾರ ಮಾಡುವಾಗ ಕಲಿತ ಸಾಮಾನ್ಯರ ಮಾತು ಮಾತನಾಡುವುದಿಲ್ಲ. ಯಾವಾಗಲೂ ಶುಭವನ್ನೇ ನುಡಿಯುವವರು. ಆಶೆಯಿಲ್ಲದೆ ಕೇಳುವವರು, ವಿರಸವಿಲ್ಲದೆ ಮುಟ್ಟುವರು.
ಸರಸ ಸಂತೋಷವಿದ್ದಲ್ಲಿಯೇ ವಾಸಿಸುವರು.
ಇಂತಪ್ಪ ಬೆರಸಿ ಬೇರಿಲ್ಲದ ನಿಜೈಕ್ಯರಿಗೆ ನಮೋ ನಮೋ ಎಂಬೆನು. ಬಸವಪ್ರಿಯ ಕೂಡಲಚೆನ್ನಬಸವಣ್ಣ ಗುರುವೇ,
ಇಂತಪ್ಪ ಶರಣರ ಏರಿದ ಸಾಧನೆಯ ನೆಲೆಯನ್ನು ನಾನೆತ್ತ ಬಲ್ಲೆನಯ್ಯಾ ?
5. ವಚನ
#ಅನ್ನವನ್ನಿಕ್ಕಿದರೇನು ?
ಹೊನ್ನ ಕೊಟ್ಟರೇನು ?
ಹೆಣ್ಣು ಕೊಟ್ಟರೇನು ? ಮಣ್ಣು ಕೊಟ್ಟರೇನು ? ಪುಣ್ಯ ಉಂಟೆಂಬರು.
ಅವರಿಂದಾದೊಡವೆ ಏನು ಅವರೀವುದಕ್ಕೆ ?
ಇದಕ್ಕೆ ಪುಣ್ಯವಾವುದು, ಪಾಪವಾವುದು ?
ನದಿಯ ಉದಕವ ನದಿಗೆ ಅರ್ಪಿಸಿ, ತನತನಗೆ ಪುಣ್ಯ ಉಂಟೆಂಬ ಬಡಹಾರುವರಂತೆ,
ಸದಮಳ ಶಾಶ್ವತ ಮಹಾಘನಲಿಂಗವನರಿಯದೆ,
ಇವೇನ ಮಾಡಿದರೂ ಕಡೆಗೆ ನಿಷ್ಪಲವೆಂದಾತ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
- ನಿಜಸುಖಿ ಹಡಪದ ಅಪ್ಪಣ್ಣ
ಅರ್ಥ:
ಊಟಕ್ಕೆ ಅನ್ನ, ಸುಖಜೀವನಕ್ಕೆ ಹೊನ್ನು,
ಮದುವೆಯಾಗಲು ಕನ್ಯೆ, ಉದರ ಪೋಷಣೆಗೆ ಭೂಮಿ ಕೊಟ್ಟರೆ ಪುಣ್ಯ ಬರುವುದು ಎನ್ನುವುರು..
ಇವೆಲ್ಲವನ್ನೂ ಅವರೇನು ಸೃಷ್ಠಿಸಿದ್ದಾರೆಯೇ ದಾನ ಮಾಡಿ ಪುಣ್ಯ ಪಡೆಯುವುದಕ್ಕೆ?
ಇದಕ್ಕೆ ಪುಣ್ಯ ಯಾವುದು, ಪಾಪ ಯಾವುದು ?
ನದಿಯ ನೀರನ್ನು ನದಿಗೆ ಅರ್ಪಿಸಿ(ತರ್ಪಣ ಕೊಟ್ಟು), ತನ ತನಗೆ ಪುಣ್ಯ ಬಂದಿತು ಎನ್ನುವ ಬಡ ಹಾರುವರಂತೆ, ಪರಮಾತ್ಮನ ವಸ್ತು ಪರಮಾತ್ಮನಿಗೆ ಕೊಟ್ಟು ಪುಣ್ಯ ಬಂದಿತು ಎಂದಂತೆ ಆಯಿತು.
ಸದಮಳ ಶಾಶ್ವತ ಮಹಾಘನಲಿಂಗವನ್ನು
ಅರಿಯದೆ, ಇವೇನೆಲ್ಲ ಮಾಡಿದರೂ ಕಡೆಗೆ ನಿಷ್ಪಲ ವಾಗುವದೆಂದರು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ಗುರುಗಳು.
6. ವಚನ
#ಹೊತ್ತುಹೊತ್ತಿಗೆ ಲಿಂಗಪೂಜೆಯ ಮಾಡಿಯೂ
ಮತ್ತೆಯು ಸತ್ಯವಾವುದು, ನಿತ್ಯವಾವುದೆಂದರಿಯದೆ ಕೆಟ್ಟರೆಲ್ಲ ಜಗವು.
ಸತ್ಯವಾಗಿ ನುಡಿವ ಶರಣರ ಕಂಡರೆ, ಕತ್ತೆಮಾನವರೆತ್ತಬಲ್ಲರೊ ?
ಅಸತ್ಯವನೆ ನುಡಿದು, ಹುಸಿಯನೆ ಬೋಧಿಸುವ ಹಸುಕರ ಕಂಡರೆ,
ಇತ್ತ ಬನ್ನಿ ಎಂಬರು.
ಇಂತಪ್ಪ ಅನಿತ್ಯದೇಹಿಗಳ ಭಕ್ತರೆಂದು ಜಂಗಮವೆಂದು
ನೋಡಿದರೆ, ನುಡಿಸಿದರೆ, ಮಾತನಾಡಿದರೆ, ನೀಡಿದರೆ,
ಅಘೋರನರಕವೆಂದು ನಮ್ಮ ಆದ್ಯರ ವಚನ ಸಾರುತಿದೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
- ನಿಜಸುಖಿ ಹಡಪದ ಅಪ್ಪಣ್ಣ
ಅರ್ಥ:
ಹೊತ್ತುಹೊತ್ತಿಗೆ ಸರಿಯಾಗಿ ಲಿಂಗಪೂಜೆಯ ಮಾಡಿದರೂ ಸತ್ಯಯಾವುದು, ನಿತ್ಯಯಾವುದು ಎಂದು ಅರಿಯದೆ ಜಗವದ ಮಾನವರೆಲ್ಲ ಕೆಟ್ಟರು. ಸತ್ಯವಾಗಿ ನುಡಿಯುವ ಶರಣರನ್ನು ಕಂಡರೆ, ಕತ್ತೆಮಾನವರಂಥ ಬುದ್ಧಿಗೇಡಿ ಮನುಜರು ಎತ್ತಬಲ್ಲರೊ ?
ಅಸತ್ಯವನ್ನೆ ನುಡಿದು, ಅಸತ್ಯವನ್ನೇ ಬೋಧಿಸುವ ಹಸುಕರ ಕಂಡರೆ, ಮರ್ಯಾದೆ ಕೊಟ್ಟು ಇತ್ತ ಬನ್ನಿರಿ ಎನ್ನುವುರು. ಹೀಗೆ ಇರುವ ಅನಿತ್ಯದೇಹಿಗಳನ್ನು ಭಕ್ತರೆಂದು ಜಂಗಮವೆಂದು ನೋಡಿದರೆ, ನುಡಿಸಿದರೆ, ಮಾತನಾಡಿದರೆ, ದಾನ ನೀಡಿದರೆ, ಅಘೋರನರಕ ದೊರೆಯುವುದು ಎಂದು ನಮ್ಮ ಆದ್ಯರ ವಚನ ಸಾರುತ್ತದೆ ಬಸವಪ್ರಿಯ ಕೂಡಲಚೆನ್ನಬಸವಣ್ಣ ಗುರುವೇ.
7. ವಚನ
#ಅಯ್ಯಾ ಎನ್ನಂಗದ ಮೇಲಿಪ್ಪ ಲಿಂಗವು ಕರ್ಪೂರದಂತಾಯಿತ್ತು.
ಎನ್ನ ಪ್ರಾಣದ ಮೇಲಿಪ್ಪ ಲಿಂಗವು ಪರಂಜ್ಯೋತಿಯಂತಾಯಿತ್ತು.
ಎನ್ನ ನಿಃಪ್ರಾಣದ ಮೇಲಿಪ್ಪ ಲಿಂಗವು ನಿರಂಜನದಂತಾಯಿತ್ತು.
ಈ ತ್ರಿವಿಧವು ಏಕವಾದ ಭೇದವ ಹೇಳಿಹೆನು ಕೇಳಿರಣ್ಣಾ !
ಎನ್ನ ಅಂಗದ ಮೇಲಿದ ಕರ್ಪೂರದಂತಿರ್ದ ಲಿಂಗ,
ಪ್ರಾಣದ ಮೇಲಿಪ್ಪ ಪರಂಜ್ಯೋತಿ ಲಿಂಗವ ಬೆರೆಯಿತ್ತು .
ಎನ್ನ ಪ್ರಾಣದ ಮೇಲಿಪ್ಪ ಪರಂಜ್ಯೋತಿ ಲಿಂಗ,
ನಿಃಪ್ರಾಣದ ಮೇಲಿಪ್ಪ ನಿರಂಜನ ಲಿಂಗವ ಬೆರೆಯಿತ್ತು.
ಈ ತ್ರಿವಿಧವು ಏಕವಾದ ಮೇಲೆ, ಒಂದಲ್ಲದೆ ಎರಡುಂಟೆ ?
ಇದಕ್ಕೆ ಸಂದೇಹ ಬೇರಿಲ್ಲವಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ. /22
- ನಿಜಸುಖಿ ಹಡಪದ ಅಪ್ಪಣ್ಣ
ಅರ್ಥ -
ನನ್ನ ಅಂಗದಲ್ಲಿದ್ದ ಸ್ಥೂಲಕಾಯದ ಇಷ್ಟಲಿಂಗವು ಪ್ರಾಣದಲಿದ್ದ ಸೂಕ್ಷ್ಮಕಾಯದಲ್ಲಿ ಇರುವ ಪ್ರಾಣಲಿಂಗವನ್ನು ಬೆರೆಯಿತು. ಕರ್ಪೂರವು ಪರಂಜ್ಯೋತಿಯಲ್ಲಿ ಬೆರೆತಂತೆ ಇಷ್ಟಲಿಂಗವು ಪ್ರಾಣಲಿಂಗದಲ್ಲಿ ಬೆರೆಯಿತು. ಹೀಗೆ ಬಹಿರಂಗದ ದೇಹಭಾವ ನಾಶವಾಗಿ ಭಕ್ತಿ ಎಂಬ ಸುವಾಸನೆ ಹರಡಿ ಅಂತರಂಗದ ಪ್ರಾಣಭಾವ ಉಳಿಯಿತು.
ನನ್ನ ಪ್ರಾಣದಲ್ಲಿದ್ದ ಪರಂಜ್ಯೋತಿ ಸ್ವರೂಪದ ಪ್ರಾಣಲಿಂಗವು ನಿಃಪ್ರಾಣದ ಮೇಲಿದ್ದ ನಿರಂಜನ ಲಿಂಗದಲ್ಲಿ ಬೆರೆಯಿತು. ಈ ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗ ಈ ತ್ರಿವಿಧವು ಏಕವಾದ ಮೇಲೆ, ಜೀವ-ಶಿವರು ಒಂದೇ ಆಗುವುರು. ಎರಡು ಆಗಿರಲು ಸಾಧ್ಯವಿಲ್ಲ. ಇದಕ್ಕೆ ಸಂದೇಹವಿಲ್ಲ ಬಸವಪ್ರಿಯ ಕೂಡಲಚೆನ್ನಬಸವಣ್ಣ ಗುರುವೇ.
8. ವಚನ
#ಆಯತಲಿಂಗದಲ್ಲಿ ನೀವೆನಗೆ ಆಚಾರವ ತೋರಿದಿರಾಗಿ,
ಸ್ವಾಯತಲಿಂಗದಲ್ಲಿ ನೀವೆನಗೆ ಅರುಹ ತೋರಿದಿರಾಗಿ,
ಸನ್ನಹಿತಲಿಂಗದಲ್ಲಿ ನೀವೆನಗೆ ಪರಿಣಾಮವ ತೋರಿದಿರಾಗಿ.
ಈ ತ್ರಿವಿಧದವರ ನೆಲೆಯ ತೋರಿ, ಈ ತ್ರಿವಿಧದ ಸಂಬಂಧವನು ಹರಿದು,
ಎನ್ನ ಭವವ ದಾಂಟಿಸಿದ ಕಾರಣ,
ಭವವಿರಹಿತನೆಂದು ಚೆನ್ನಮಲ್ಲೇಶ್ವರನ ನಂಬಿ, ಕೆಟ್ಟು ಬಟ್ಟಬಯಲಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣ./58
- ನಿಜಸುಖಿ ಹಡಪದ ಅಪ್ಪಣ್ಣ
ಅರ್ಥ -
ಲಿಂಗ ಆಯತ ಕ್ರಿಯೆಯಲ್ಲಿ ನೀವು ನನಗೆ ಆಚಾರವನ್ನು ತೋರಿದಿರಿ. ಲಿಂಗ ಸ್ವಾಯತ ಕ್ರಿಯೆಯಲ್ಲಿ ನೀವು ನನಗೆ ಅರುವನ್ನು ತೋರಿದಿರಿ.
ಲಿಂಗ ಸನ್ನಹಿತ ಕ್ರಿಯೆಯಲ್ಲಿ ನೀವು ನನಗೆ ಪರಿಣಾಮವನ್ನು ತೋರಿದಿರಿ. ಈ ಆಚಾರ, ಅರಿವು, ಪರಿಣಾಮ ಎಂಬ ತ್ರಿವಿಧದ ನೆಲೆಯ ತೋರಿ, ಈ ತ್ರಿವಿಧದ ಸಂಬಂಧವನ್ನು ಹರಿದು, ನನ್ನನ್ನು ಭವದಿಂದ ದಾಟಿಸಿದ ಕಾರಣ,
ಭವ ವಿರಹಿತನಾಗಿ ಆರಾಧ್ಯದೈವ ಚೆನ್ನಮಲ್ಲೇಶ್ವರ ದೇವರನ್ನು ನಂಬಿ, ಬಟ್ಟಬಯಲಾದೆನು ಬಸವಪ್ರಿಯ ಕೂಡಲಚೆನ್ನಬಸವಣ್ಣ ಗುರುವೇ.
9. ವಚನ
#ಆಧಾರ, ಸ್ವಾಧಿಷ್ಠನ, ಮಣಿಪೂರಕ, ಅನಾಹತ, ವಿಶುದ್ಧಿ,
ಆಜ್ಞಾಚಕ್ರವೆಂಬ ಷಡಾಧಾರಚಕ್ರವನರಿದು,
ಏರಿ ಏರಿ ಇಳಿದು ಆದಿಯ ನೋಡಿಕೊಂಡು,
ಆದಿ ಅನಾದಿ ಎಂಬ ಭೇದವ ನೋಡಿ, ಶೋಧಿಸಿ,
ಸಪ್ತಧಾತುವಿನ ನೆಲೆಯ ಕಂಡು, ಮನ ಬುದ್ಧಿ ಚಿತ್ತವ ಏಕಹುರಿಯ ಮಾಡಿ,
ಉತ್ಪತ್ತಿ ಸ್ಥಿತಿ ಲಯವೆಂಬ ಕಾಲಮೂಲಾದಿಗಳ ಸುಟ್ಟು, ಧ್ಯಾನದಲ್ಲಿ ನಿಂದು,
ಅಂಗ ಲಿಂಗ ಹಸ್ತ ಮುಖ ಅರ್ಪಿತ ಅವಧಾನವೆಂಬ ಷಟ್ಸ್ಥಲವ ಮೆಟ್ಟಿನಿಂದು,
ಆರರಿಂದ ವಿೂರಿ ತೋರುವ ಬೆಳಗ ಕಂಡು, ನಾನು ಒಳಹೊಕ್ಕು ನೋಡಲಾಗಿ,
ಒಳಹೊರಗೆ ತೊಳತೊಳಗಿ ಬೆಳಗುತ್ತ
ಇಳೆ ಬ್ರಹ್ಮಾಂಡ ತಾನೆಯಾಗಿರ್ದ
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ./56
- ನಿಜಸುಖಿ ಹಡಪದ ಅಪ್ಪಣ್ಣ
ಅರ್ಥ -
ಆಧಾರ, ಸ್ವಾಧಿಷ್ಠನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾಚಕ್ರವೆಂಬ ಷಡಾಚಕ್ರಗಳನ್ನು ಅರಿತು, ಎಲ್ಲ ಚಕ್ರಗಳಲ್ಲಿ
ಏರಿ ಇಳಿದು, ಆಜ್ಞೆ ಚಕ್ರದಲ್ಲಿ ಸೃಷ್ಠಿಯ ಆದಿಯ ನೋಡಿಕೊಂಡು, ಅದಕ್ಕೂ ಮೊದಲಿನ ಅನಾದಿಯ ನಿರಾಕಾರ ಅರಿತು, ಆದಿ ಅನಾದಿ ಎಂಬ ಭೇದವನ್ನು ನೋಡಿ, ಸ್ವಯಂ ಅರ್ಥ ಮಾಡಿಕೊಂಡು, ಸಪ್ತಧಾತುವಿನ ನೆಲೆಯ ಕಂಡು, ಅಂತಃಕರಣ ಗಳಾದ ಮನ ಬುದ್ಧಿ ಚಿತ್ತವನ್ನು ಏಕಹುರಿಯ ಮಾಡಿ,
ಉತ್ಪತ್ತಿ ಸ್ಥಿತಿ ಲಯವೆಂಬ ಕಾಲದ ಮೂಲಗಳನ್ನು ಸುಟ್ಟು, ಧ್ಯಾನದಲ್ಲಿ ನಿಂತು, ಅಂಗ ಲಿಂಗ ಹಸ್ತ ಮುಖ ಅರ್ಪಿತ ಅವಧಾನವೆಂಬ ಷಟ್ಸ್ಥಲಗಳ ಮೆಟ್ಟಿಲುಗಳನ್ನೂ ಏರಿ ನಿಂತು ಈ
ಆರು ಮೆಟ್ಟಿಲುಗಳ ಮೇಲೆ ತೋರುವ ಬೆಳಗು ಕಂಡು, ನಾನು ಆ ಬೆಳಗಿನ ಒಳಗೆ ಹೊಕ್ಕು ನೋಡಲಾಗಿ, ಅಲ್ಲಿ ಒಳಗೆ ಹೊರಗೆ ತೊಳತೊಳಗಿ ಬೆಳಗುತ್ತಿದ್ದನು ನನ್ನ ಇಷ್ಟದೇವ ಕೂಡಲಚೆನ್ನಬಸವಣ್ಣ. ಭೂಮಿ ಮತ್ತು ಬ್ರಹ್ಮಾಂಡ ಈ ಎರಡೂ ಅವನೇ. ಹೀಗೆ ಸರ್ವವ್ಯಾಪಿ ಆಗಿದ್ದನು ಆ ಬಯಲಮೂರ್ತಿ ಕೂಡಲಚೆನ್ನಬಸವಣ್ಣ ಎಂದು ತಾನು ಅನುಭವಿಸಿದ ಅನುಭಾವವನ್ನು ಗುರು ಚೆನ್ನಬಸವಣ್ಣನವರಿಗೆ ತಿಳಿಸುತ್ತಿದ್ದಾರೆ.
10. ವಚನ
#ಸಾವಾಗ ದೇವನೆಂದರೆ, ಸಾವು ಬಿಡುವುದೇ ?
ಇದಾವ ಮಾತೆಂದು ನುಡಿವಿರಿ.
ಎಲೆಯಣ್ಣಗಳಿರಾ, ಬಾಳುವಲ್ಲಿ , ಬದುಕುವಲ್ಲಿ ,
ಗುರು ಲಿಂಗ ಜಂಗಮವನರಿಯದೆ,
ಹಾಳುಹರಿಯ ತಿಂದ ಶುನಕನಂತೆ ಕಾಲ್ಗೆಡೆದು ಓಡಾಡಿ ಏಳಲಾರದೆ ಬಿದ್ದಾಗ, ಶಿವ ಶಿವ ಎಂದರೆ, ಅಲ್ಲಿ ದೇವನಿಪ್ಪನೆಂದು ಇದ ನೋಡಿ ನಾಚಿ ನಗುರ್ತಿರ್ದೆ,ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
- ನಿಜಸುಖಿ ಹಡಪದ ಅಪ್ಪಣ್ಣ
ಅರ್ಥ-
ಬದುಕಿ ಬಾಳುವಾಗ ಗುರು ಲಿಂಗ ಜಂಗಮವನ್ನು ಅರಿಯದೆ, ಹಾಳು ತಿಂದ ನಾಯಿಯಂತೆ ಅತ್ತಿತ್ತ ಓಡಾಡಿ ಏಳಲಾರದೆ ಹಾಸಿಗೆಯಲ್ಲಿ ಬಿದ್ದಾಗ, ಶಿವ ಶಿವ ಎಂದರೆ, ಸಾವು ಬಂದಾಗ ಶಿವ ಶಿವ ಎಂದರೆ ಸಾವು ಬಿಡುವುದೇ? ಇಂಥಹದನ್ನು ನೋಡಿ ನಾಚಿ ನಗುತ್ತಿದ್ದೆನು..
- ✍️Dr Prema Pangi
ಪ್ರೇಮಾ _ಪಾಂಗಿ, ಹಡಪದ_ಅಪ್ಪಣ್ಣ
Comments
Post a Comment