🌷ಶಿವಶರಣ ಹೂಗಾರ ಮಾದಯ್ಯ🌷
🌷ಶಿವಶರಣ ಹೂಗಾರ ಮಾದಯ್ಯನವರ ಜಯಂತಿಯ ಶುಭಾಶಯಗಳು 🌷
ಹೂಗಾರ ಮಾದಯ್ಯನವರು ಬಸವಾದಿ ಶರಣರ ಸಮಕಾಲೀನರು. ಹೂಗಾರ ಸಮಾಜಕ್ಕೆ ಹೆಸರು ತಂದುಕೊಟ್ಟ ಅವರು ಹೂಗಾರ ಕಾಯಕದ ಶ್ರೇಷ್ಠತೆ ಮೆರೆದರು. ಬಸವಣ್ಣನವರ ಅಚ್ಚುಮೆಚ್ಚಿನವರಾಗಿದ್ದರು. ಬಸವಣ್ಣನವರು ಸಾರಿದ ಕಾಯಕವೇ ಕೈಲಾಸ ಎಂಬುದಕ್ಕೆ ಹೂಗಾರ ಮಾದಯ್ಯ ಶರಣರು ಉತ್ತಮ ನಿದರ್ಶನವಾಗಿದ್ದರು. ಕಾಯಕನಿಷ್ಠರು, ಬಸವತತ್ವಕ್ಕಾಗಿ ನಿಷ್ಟುರವಾದಿಗಳು, ವೀರಗಣಾಚಾರಿಗಳು. ಏಕದೇವ ನಿಷ್ಠೆಯನ್ನು ಹೊಂದಿದವರು. ತಮ್ಮ ಕಾಯಕವಾದ ಹೂ ಮಾಲೆ ಕಟ್ಟುವಾಗ ವಚನಗಳನ್ನು ನಿತ್ಯ ಪಾರಾಯಣ ಮಾಡಿದ ಯೋಗಿಗಳು. ಕಲ್ಯಾಣ ಪಟ್ಟಣದಲ್ಲಿ ಬಿಜ್ಜಳನ ಅರಸೊತ್ತಿಗೆಯ ಭೂಮಿ, ತ್ರಿಪೂರಾಂತಕ ಕೆರೆಯ ದಂಡೆಯ ಮೇಲೆ ಹೂ ಪತ್ರೆಯ ಕೈ ತೋಟ ಮಾಡಿಕೊಂಡು, ನಿಷ್ಕಲ್ಮಶವಾಗಿ ನಿಷ್ಠೆಯ ಕಾಯಕವ ಮಾಡುತ್ತ, ಅನುಭವ ಮಂಟಪದ ಕಲಾಪಗಳಲ್ಲಿ ತೊಡಗಿಕೊಳ್ಳುತಿದ್ದರು.
ಹೂಗಾರ ಮಾದಯ್ಯನವರು, ಕಾಯಕದಲ್ಲಿ ಮುಕ್ತಿ ಮಾರ್ಗವಿದೆ ಎಂದು ಜಗತ್ತಿಗೆ ಸಾರಿದ್ದಾರೆ. ಕಾಯಕ ಜೀವಿಯಾಗಿದ್ದ ಶರಣ ಹೂಗಾರ ಮಾದಯ್ಯನವರದು ಹೂವಿನ ಮನಸ್ಸು. ಯಾರ ಮನಸ್ಸಿಗೂ ನೋವು ಮಾಡಿದವರಲ್ಲ.
ಪತ್ನಿ : ಶರಣೆ ಶ್ರೀ ಮಾದೇವಿ
ಕಾಯಕ : ಹೂಗಾರ ಕಾಯಕ. ಕಲ್ಯಾಣದಲ್ಲಿ ಶರಣರ ಮನೆ-ಮನೆಗಳಿಗೆ ಹೂ- ಪತ್ರಗಳು, ಹೂಮಾಲೆಯನ್ನು ದಿನ ಸುಪ್ರಭಾತ ಸಮಯದಲ್ಲಿ ನೀಡುವ ಕಾಯಕ ಮಾಡಿಕೊಂಡಿದ್ದರು.
ಇವರಿಗೆ ಲಿಂಗಣ್ಣನೆಂಬ ಮಗನಿದ್ದನೆಂದು ತಿಳಿದು ಬರುತ್ತದೆ.
ಸ್ಥಳ : ಬಸವ ಕಲ್ಯಾಣ (ಬೀದರ ಜಿಲ್ಲೆ) ಜಯಂತಿ : ಅನಂತ ಹುಣ್ಣಿಮೆಯಂದು
ವಚನಗಳು : ಲಭ್ಯವಾಗಿಲ್ಲ
ಹೂಗಾರ ಮಾದಯ್ಯ ಜೀವನ ಕುರಿತಾಗಿ " ಭೈರವೇಶ್ವರ ಕಥಾಮಣಿಸೂತ್ರ" ದಲ್ಲಿ ಹರಿಹರನ ರಗಳೆಗಳಲ್ಲಿ' ಮತ್ತು ಕನ್ನಡ ಜಾನಪದ ಗೀತೆಗಳು' ಎಂಬ ಗ್ರಂಥದಲ್ಲಿ ಸುಮಾರು ಎಪ್ಪತ್ತಕ್ಕೂ ಮಿಕ್ಕಿ ತ್ರಿಪದಿಗಳಲ್ಲಿ ಕಂಡುಬರುತ್ತಿವೆ. ಜಾನಪದ ಗೀತೆಗಳ ತ್ರಿಪದಿಗಳಲ್ಲಿ ಇವರು ''ಹೂಗಾರ ಸಮಾಜ'' ದ ಮೂಲಪುರುಷರಾಗಿದ್ದು, ಮೂಲ ಗುರುವೆನಿಸಿದ್ದಾರೆ. ಆ ಸಮಾಜದವರು ಇವರ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಕಲ್ಯಾಣದಲ್ಲಿ ಅನುಭವ ಮಂಟಪದ ಕೆಳಗೆ, ಬಿಲ್ವಪತ್ರೆ ವನವನ್ನು ನಿರ್ಮಾಣ ಮಾಡಿದ ಈ ಶರಣ ದಂಪತಿಗಳ ಐಕ್ಯ ಗವಿಗಳು ಈಗಲೂ ಬಸವಕಲ್ಯಾಣದಲ್ಲಿ ಕಾಣಬಹುದಾಗಿದೆ.
ಜಾನಪದದಲ್ಲಿ ಹೂಗಾರ ಮಾದಯ್ಯ:
ಇವರ ಕಾಯಕ ನಿಷ್ಠೆಗೆ ಕೈಲಾಸವಾಸಿ ಈಶ್ವರನು ಮೆಚ್ಚಿ, ಇವರನ್ನು ಕೈಲಾಸಕ್ಕೆ ಆಹ್ವಾನಿಸಿದನೆಂದು, ಇವರು ಅದನ್ನು ನಿರಾಕರಿಸಿ, ಕೈಲಾಸದಲ್ಲಿರುವ ಋಷಿ- ಮುನಿಗಳು ಮೈಗಳ್ಳರೆಂದು, ನಮ್ಮ ಬಸವಾದಿ ಶರಣರ ಸಹವಾಸ, ಸೇವೆಯಲ್ಲಿ ತೃಪ್ತಿ ಹೊಂದಿದ್ದು "ಶರಣರ ಕಾಯ ಮತ್ತು ಕಾಯಕ ಎರಡೂ ಕೈಲಾಸ" ವೆಂದು ಆ
ಈಶ್ವರನಿಗೆ ತಿಳಿಹೇಳಲು, ಕೈಲಾಸದ ಈಶ್ವರನು ಇವರಿಗೆ ಆಶಿರ್ವದಿಸಿದನೆಂದು ಜಾನಪದ ಸಾಹಿತ್ಯದಲ್ಲಿ ಉಲ್ಲೇಖವಾಗಿದೆ..
ಮೇದರ ಕೇತಯ್ಯನವರು ತಮ್ಮ ಇಷ್ಟಲಿಂಗದಲ್ಲಿ ಐಕ್ಯವಾದುದನ್ನು ಇವರು ಕಂಡು, ಕಲ್ಯಾಣಕ್ಕೆಲ್ಲಾ ತಿಳಿಸಿದರೆಂಬ ಪ್ರತೀತಿಯಿದೆ.
ಇವರ ಬಗೆಗಿನ ತ್ರಿಪದಿಗಳಲ್ಲಿ ಹೀಗೆ ವರ್ಣಿಸಿದ್ದಾರೆ."ಕಾಯಕ ಭಕ್ತ ಶಿವಶರಣ"
"ಕಾಯಕವೇ ಅಧಿಕವೆಂದು ಮಾದಯ್ಯ ಸಾರಿದನು"
- ✍️Dr Prema Pangi
#ಹೂಗಾರ ಮಾದಯ್ಯ
Comments
Post a Comment