ಚೆನ್ನಬಸವಣ್ಣನವರ ಜಯಂತಿ

🌷ಲಿಂಗಾಯತ ಧರ್ಮದ ಷಟ್ಸ್ತಲ ಚಕ್ರವರ್ತಿ ಶೂನ್ಯಪೀಠದ 2 ನೇ ಅಧ್ಯಕ್ಷ, ಚಿನ್ಮಯಜ್ಞಾನಿ, ವೈರಾಗ್ಯಮೂರ್ತಿ ಚೆನ್ನಬಸವೇಶ್ವರರ ಜನ್ಮ ಜಯಂತಿಯ ಶುಭಾಶಯಗಳು.🌷🌷🌷🌷
ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ಲಿಂಗಾಯತ ಧರ್ಮದ ಸಪ್ತ ಪ್ರಮಥರಲ್ಲಿ ಒಬ್ಬರು.  ಚೆನ್ನಬಸವಣ್ಣನವರು ಗುರು ಬಸವಣ್ಣನವರ ಅಕ್ಕ ನಾಗಲಾಂಬಿಕೆ ಮತ್ತು ಶಿವದೇವರಿಗೆ ಪುತ್ರನಾಗಿ ಕ್ರಿ. ಶ. ೧೧೪೪ ರಲ್ಲಿ ಜನಿಸಿದರು.  ಚೆನ್ನಬಸವಣ್ಣನವರು ಅತಿ ಚಿಕ್ಕ ವಯಸ್ಸಿನಲ್ಲೇ ಅಸಾಧರಣ ಕಾರ್ಯಗಳನ್ನು ಮಾಡಿದ ಮಹಾಪುರುಷರಾಗಿದ್ದಾರೆ.  ಚನ್ನಬಸವಣ್ಣನವರ ಜನ್ಮಸ್ಥಳ ಕಲ್ಯಾಣವೆಂದು ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ ಮತ್ತು ಇತರ ಕೃತಿಗಳು ಹೇಳುತ್ತವೆ.  ಸಿಂಗಿರಾಜ ಪುರಾಣ 'ಅಮಲಬಸವ ಚಾರತ್ರ್ಯ'ದಲ್ಲಿ  ಅಕ್ಕನಾಗಮ್ಮನ ಪತಿ ಶಿವದೇವ ಚನ್ನಬಸವಣ್ಣನ ತಂದೆ ಎಂದು ಉಲ್ಲೇಖಿಸಿದೆ. ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದ ಶರಣರಲ್ಲಿ ಅಗ್ರಗಣ್ಯನಾಗಿ ಆಚಾರ್ಯ ಪುರುಷನಾಗಿ ಬೆಳಗಿದ ಚೆನ್ನಬಸವಣ್ಣನವರು ಭಕ್ತಿ, ಜ್ಞಾನ, ವೈರಾಗ್ಯಮೂರ್ತಿಯಾಗಿ ಕಂಗೊಳಿಸಿದ್ದಾರೆ. ಚೆನ್ನಬಸವಣ್ಣನವರು ಅವಿರಳಜ್ಞಾನಿ, ಸದಮಲಜ್ಞಾನಿ, ಷಟುಸ್ಥಲ ಸ್ಥಾಪನಾಚಾರ್ಯ, ದಿವ್ಯಗುಣ ಸಂಪನ್ನ ಎಂದು ಕಲ್ಯಾಣದ ಶರಣರಿಂದ ಬಿರುದು ಪಡೆದವರು. ಗುರು ಬಸವಣ್ಣನವರ ಸೋದರಳಿಯ ಚೆನ್ನಬಸವಣ್ಣನವರು ಕೂಡಲಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿ ಪ್ರತಿಭಾಸಂಪನ್ನನಾದರು.
 ಕಲ್ಯಾಣಕ್ಕೆ ಬಂದ ನಂತರ ಬಸವಣ್ಣನವರ ಮಹಾಮನೆಯ ಕಾರ್ಯದಲ್ಲಿ ನೆರವಾಗಿ ಧರ್ಮೊದ್ಧಾರ ಕಾರ್ಯಗಳಲ್ಲಿ ಸಹಾಯಕರಾದರು. ಅನುಭವ ಮಂಟಪದ ಎಲ್ಲಾ ಕಾರ್ಯಗಳು ಚೆನ್ನಬಸವಣ್ಣನವರ ನೇತ್ರತ್ವದಲ್ಲಿ ನಡೆಯುತ್ತಿದ್ದವು. ಲಿಂಗಾಯತ ಧರ್ಮದ ಸಿದ್ಧಾಂತಗಳಾದ ಅಷ್ಟಾವರಣ, ಷಟ್ಸ್ಥಲ, ಪಂಚಾಚಾರಗಳನ್ನು ರೂಪಿಸಿ ಧರ್ಮಕ್ಕೆ ಆಚರಣೆಯ ಆಯಾಮ ನೀಡಿದವರು ಚನ್ನಬಸವಣ್ಣನವರು.  ಅಲ್ಲಮಪ್ರಭುವಿನ ಅಪ್ಪಣೆ ಮೇರೆಗೆ ಕಲ್ಯಾಣಕ್ಕೆ ಬಂದ ಸಿದ್ಧರಾಮರಿಗೆ ಲಿಂಗಧಾರಣೆ ಮಾಡಿದ ಮಹಾಮಹಿಮಶಾಲಿ. ಶಿವಯೋಗಿ ಸಿದ್ಧರಾಮರು ತಮ್ಮ ದೀಕ್ಷಾಗುರು ಚೆನ್ನಬಸವಣ್ಣನವರನ್ನು ಈ ರೀತಿ ಹಾಡಿಹೊಗಳಿದ್ದಾರೆ.
#ತ್ರಾಹಿಮಾಂ ಪರಮೇಶ್ವರ ಜಯ
ಭಕ್ತಿಜ್ಞಾನಮಾಕಾರ ನೀನೆಯಯ್ಯ ಚೆನ್ನಬಸವಣ್ಣ.
ಏಕೋದೇವ ದೇವಧರ್ಮ ಧರ್ಮಗುಣ ಗುಣಪ್ರಕಾಶ ಪ್ರಕಾಶ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
ನಿಮ್ಮಿಂದ ಪ್ರಾಣಲಿಂಗ ಸಂಬಂಧವಾಗಿ
ನಿಮಗೆ ನಮೋ ನಮೋ ಎನುತಿರ್ದೆನಯ್ಯಾ ಚೆನ್ನಬಸವಣ್ಣ.

#ಶುದ್ಧವನರಿದೆ ಚೆನ್ನಬಸವಣ್ಣಾ ನಿಮ್ಮಿಂದ;
ಸಿದ್ಧವನರಿದೆ ಚೆನ್ನಬಸವಣ್ಣಾ ನಿಮ್ಮಿಂದ;
ಪ್ರಸಿದ್ಧವನರಿದೆ ಚೆನ್ನಬಸವಣ್ಣಾ ನಿಮ್ಮಿಂದ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಚೆನ್ನಬಸವಣ್ಣ ಗುರುವಾಗಿ ಬಂದು
ಎನ್ನ ಜನ್ಮಕರ್ಮವ ನಿವೃತ್ತಿ ಮಾಡಿದನಯ್ಯಾ
ಹೀಗೆ ಬಗೆಬಗೆಯಾಗಿ ಶಿವಯೋಗಿ ಸಿದ್ದರಾಮೇಶ್ವರರು ವಯಸ್ಸಿನಲ್ಲಿ ತನಗಿಂತಲೂ ಚಿಕ್ಕವರಾದ ಚೆನ್ನಬಸವಣ್ಣನವರನ್ನು ತಮ್ಮ ಗುರುವಾಗಿ ಕಂಡಿದ್ದಾರೆ.

ಚೆನ್ನಬಸವಣ್ಣನವರು ಶಿವಪಥದಲ್ಲಿ ಆಚಾರ್ಯರಾಗಿದ್ದಂತೆಯೇ ರಾಜನೀತಿ ಶಾಸ್ತ್ರಜ್ಞರಾಗಿದ್ದರು. ಅಲ್ಲಮಪ್ರಭುದೇವರ ನಂತರ ಎರಡನೆಯ ಶೂನ್ಯಪೀಠದ ಅಧ್ಯಕ್ಷರಾದರು. ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ ಮುಂತಾದ ಮತಪ್ರಕ್ರಿಯೆಗಳನ್ನು ರೂಪಿಸಿದರು. ಇಷ್ಟೇ ಅಲ್ಲದೆ ಬಸವಪ್ರಣೀತ ಧರ್ಮದಲ್ಲಿ ಹುಟ್ಟಿನಿಂದ ಮರಣದವರೆಗಿನ ಎಲ್ಲಾ ವಿಧಾನಗಳ ರೂಪರೇಷೆಗಳಿಗೆ ಲಿಖಿತ ರೂಪ ಕೊಟ್ಟಿದ್ದಾರೆ. ಅಂದರೆ ದೀಕ್ಷೆ ವಿಧಿ, ಮದುವೆ, ಅಂತ್ಯಕಾರ್ಯ, ಗುರುವಿನ ಅರ್ಹತೆ, ಶಿಷ್ಯರ ಅರ್ಹತೆ, ಪೂಜಾವಿಧಿ, ಶಿವಯೋಗ ಹೀಗೆ ಪ್ರತಿಯೊಂದು ವಿಧಿ ವಿಧಾನಗಳ ಕಾರ್ಯಾಚರಣೆ ಹೇಗೆ ಇರಬೇಕೆಂದು ಅನೇಕ ವಚನಗಳ ಮೂಲಕ ಸ್ಪಷ್ಟತೆ ನೀಡಿದ್ದಾರೆ.
   ಚೆನ್ನಬಸವಣ್ಣನವರು ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಗುರು ಬಸವಣ್ಣನವರ ದಿವ್ಯ ಆದೇಶದಂತೆ ಶರಣರನ್ನು ಮತ್ತು ವಚನ ಸಾಹಿತ್ಯಸಂಪತ್ತನ್ನು ರಕ್ಷಿಸಲು ಪಣ ತೊಟ್ಟರು. ನಳನಾಮ ಸಂವತ್ಸರ ವೈಶಾಖ ಬಹುಳ ಬಿದಿಗೆ ಬುಧವಾರ ರೋಹಿಣಿ ನಕ್ಷತ್ರದಲ್ಲಿ ಚೆನ್ನಬಸವಣ್ಣನವರು ತಮ್ಮೊಡನೆ ತಾಯಿ ಅಕ್ಕನಾಗಲಾಂಬಿಕೆ, ಗಣಾಚಾರಿ ಮಡಿವಾಳ ಮಾಚಿದೇವರು ಹಾಗೂ ಹನ್ನೆರಡು ಸಾವಿರ ಶರಣರ ಜೊತೆಗೂಡಿ ವಚನಕಟ್ಟುಗಳ ಗಂಟುಗಳನ್ನು ಎತ್ತಿನ ಬಂಡೆಗಳಲ್ಲಿ, ಕುದುರೆಗಳ ಮೇಲೆ ಹಾಗೂ ತಲೆಯಮೇಲೆ ಹೊತ್ತು ಕಲ್ಯಾಣದಿಂದ ಉಳಿವಿಗೆ ತೆರಳಿದರು. ಸೊನ್ನಲಗಿಗೆ ಹೋಗಿ ಶರಣ ಸಿದ್ಧರಾಮರಿಗೆ ಶೂನ್ಯಪೀಠದ 3ನೆಯ ಅಧ್ಯಕ್ಷ ಸ್ಥಾನ ವಹಿಸಿ ಕೊಡುತ್ತಾರೆ. ಕೈಯಲ್ಲಿ ಖಡ್ಗವಿಡಿದು ಕಲ್ಯಾಣದ ಸೈನ್ಯದೊಡನೆ ಹೋರಾಡಿ ವಚನಗಳನ್ನು ರಕ್ಷಿಸಿ ಕಲ್ಯಾಣದಿಂದ ಉಳಿವಿಗೆ ಬಂದು ಬೀಡುಬಿಟ್ಟರು. ಅಲ್ಲಿಯೂ ಮಹಾಮನೆ ಸ್ಥಾಪಿಸಿದರು. ಜನಸಾಮಾನ್ಯರು ಮತ್ತು ಗುರುಗಳು ಲಿಂಗಾಯತ ಧರ್ಮದ ತತ್ವಗಳನ್ನು ತಿಳಿದುಕೊಳ್ಳಲು ಉಳವಿಗೆ ಚೆನ್ನಬಸವಣ್ಣನವರ ಹತ್ತಿರ ಬರಹತ್ತಿದರು.

ಕಲ್ಯಾಣದಿಂದ ಉಳವಿಯವರೆಗೆ ಸಾಗುವಾಗ ವಚನಗಳ ರಕ್ಷಣೆಗಾಗಿ ಹಾಗೂ ಪ್ರಚಾರಕ್ಕಾಗಿ ಅವರು ತಂಗಿದ ಸ್ಥಳಗಳಲ್ಲಿ ಅನೇಕ ಲಿಂಗಾಯತ ಮಠಗಳು ಸ್ಥಾಪಿತವಾದವು. ಈ ಲಿಂಗಾಯತ ಮಠಗಳಲ್ಲಿ, ಅಲ್ಲಿಯ ಭಕ್ತರ ಮನೆಗಳಲ್ಲಿ ವಚನಗಳು ಸಂರಕ್ಷಿಸಪಟ್ಟವು.  ಉಳವಿಯ ದಾರಿಯಲ್ಲಿ  ಶರಣರು ತಂಗಿದ, ಶರಣರ ತತ್ವ ಪ್ರಚಾರ ಮಾಡಿದ ಎಲ್ಲ ಸ್ಥಳಗಳಲ್ಲಿಯೂ ಚೆನ್ನಬಸವಣ್ಣನವರ ದೇವಸ್ಥಾನಗಳಿವೆ. ಹುಬ್ಬಳ್ಳಿಯ ಮೂರುಸಾವಿರ ಮಠ, ವಚನಗಳ ತಾಡೊಲೆ ಕಟ್ಟುಗಳನ್ನು ಇಟ್ಟ ಓಲೆಮಠ, ವಿದ್ಯಾನಗರದ ತಿಮ್ಮಸಾಗರ ಚೆನ್ನಬಸವಣ್ಣನವರ ದೇವಸ್ಥಾನ, ಉಣಕಲ ಕೆರೆಯ ಮೇಲಿರುವ ಚೆನ್ನಬಸವಣ್ಣನವರ ದೇವಸ್ಥಾನ, ಧಾರವಾಡದ ಉಳವಿ ಚೆನ್ನಬಸವಣ್ಣನವರ ದೇವಸ್ಥಾನ, ಬೂದಯ್ಯನ ಗುಡ್ಡದ ಚೆನ್ನಬಸವಣ್ಣನ ದೇವಸ್ಥಾನ ಮುಂತಾದವು ಪ್ರಮುಖವಾದವು.. ಅವರು ಬಯಲಾದುದು (ಲಿಂಗೈಕ್ಯ) ಉಳವಿಯಲ್ಲಿ. ಅಲ್ಲಿ ಅವರ ಸಮಾಧಿ, ದೇವಸ್ಥಾನಗಳಿವೆ. ಉಳವಿ ಇದು ಲಿಂಗಾಯತರ ಪವಿತ್ರ ಯಾತ್ರಾಸ್ಥಳವಾಗಿದೆ.
ಚೆನ್ನಬಸವಣ್ಣನವರು  ೧೭೬೩ ಷಟ್‌ಸ್ಥಲ ವಚನಗಳನ್ನು, ಕರಣ ಹಸಿಗೆ, ಮಿಶ್ರಾರ್ಪಣ, ಹಿರಿಯ ಮಂತ್ರಗೋಪ್ಯ, ಪದಮಂತ್ರಗೋಪ್ಯ, ೯೬ ಸಕೀಲಗಳು, ಘಟಚಕ್ರ ಅಲ್ಲದೇ ಅನುಭಾವಗೀತ ಎಂಬ ಅಧ್ಯಾತ್ಮಿಕ ಸಾಹಿತ್ಯ ರಚಿಸಿದಿದ್ದಾರೆ. ಇವುಗಳೆಲ್ಲದರಲ್ಲಿಯೂ ನಾವು ಲಿಂಗಾಯತ ಧರ್ಮದ ರೂಪರೇಷೆಗಳು, ಅಪಾರವಾದ ವೈಜ್ಞಾನಿಕ, ಸಾಮಾಜಿಕ, ಆಧ್ಯಾತ್ಮಿಕ ಅಂಶಗಳನ್ನು ಕಾಣುತ್ತೇವೆ. 
ಚೆನ್ನಬಸವಣ್ಣನವರ ಕೆಲವು ವಚನಗಳು
1.
ವಚನ -
#ಅಜಕೋಟಿ ವರುಷದವರೆಲ್ಲರೂ ಹಿರಿಯರೇ 
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ
ಮತಿಗೆಟ್ಟು ಒಂದನಾಡ ಹೋಗಿ ಒಂಬತ್ತನಾಡುವ 
ಅಜ್ಞಾನಿಗಳೆಲ್ಲರೂ ಹಿರಿಯರೇ? ಅನುವರಿದು ಘನವ 
ಬೆರೆಸಿ ಹಿರಿಕಿರಿದೆಂಬ ಭೇದವ ಮರೆದು ಕೂಡಲ ಚೆನ್ನಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ 
ನಮ್ಮ ಮಹಾದೇವಿಯಕ್ಕಂಗಾಯ್ತು. 
- ಚನ್ನಬಸವಣ್ಣನವರು
ಅನುಭವ ಮಂಟಪಕ್ಕೆ ಬಂದ ಅಕ್ಕ ಮಹಾದೇವಿ ಅಲ್ಲಮಪ್ರಭುಗಳ ಹಲವು ಪ್ರಶ್ನೆ ಎದುರಿಸಬೇಕಾಯಿತು. ಅವಳ ಉತ್ತರಗಳನ್ನು ಕೇಳಿ ಪ್ರಭಾವಿತರಾಗಿ, ಅಕ್ಕಮಹಾದೇವಿಯ ಧಿವ್ಯತ್ವವನ್ನು ಗ್ರಹಿಸಿದ ಚೆನ್ನಬಸವಣ್ಣನವರು, ಅಕ್ಕಮಹಾದೇವಿಯು ವಯಸ್ಸಿನಲ್ಲಿ ಚಿಕ್ಕವಳು ಆದರೂ, ಶಿವಯೋಗದಲ್ಲಿ ಹಿರಿದಾದ ಶಕ್ತಿ ಹೊಂದಿದ "ಅಕ್ಕ"ನನ್ನು  ಈ ರೀತಿ ಸ್ತುತಿಸಿದ್ದಾರೆ.
2. 
ವಚನ -
#ಮರೀಚಿಯೊಳಡಗಿದ ಬಿಸಿಲಿನಂತಿದ್ದಿತ್ತು,
ಕ್ಷೀರದೊಳಡಗಿದ ತುಪ್ಪದಂತಿದ್ದಿತು,
ಚಿತ್ರದೊಳಡಗಿದ ಚಿತ್ರದಂತಿದ್ದಿತು,
ನುಡಿಯೊಳಗಡಗಿದ ಅರ್ಥದಂತಿದ್ದಿತು,
ಕೂಡಲ ಚೆನ್ನಸಂಗಯ್ಯ ನಿಮ್ಮ ನಿಲುವು.
- ಚನ್ನಬಸವಣ್ಣನವರು
ಕಣ್ಣಿಗೆ ಕಾಣದಂತೆ ಇದ್ದರೂ ಸರ್ವವ್ಯಾಪಿ ಯಾಗಿ ಇರುವ ದೇವರ ನಿಲುವನ್ನು ರೂಪಕಗಳ ಮೂಲಕ ವರ್ಣಿಸಿದ್ದಾರೆ.
3. 
ವಚನ -
#ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ. 
ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿಹುದೆ ಸದಾಚಾರ. 
ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಚಾರ. 
ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ. ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ_ ಇಂತೀ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ ಪ್ರಭುವೆ ಕೂಡಲಚೆನ್ನಸಂಗಮದೇವಾ.
 -  ಚನ್ನಬಸವಣ್ಣನವರು
ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ ಪಂಚಾಚಾರಗಳ ರೂವಾರಿ ಚೆನ್ನಬಸವಣ್ಣನವರು.
4. 
ವಚನ - 
#ಕುಲವಳಿದು ಛಲವಳಿದು ಮದವಳಿದು ಮಚ್ಚರವಳಿದು
ಆತ್ಮತೇಜವಳಿದು ಸರ್ವಾಹಂಭಾವವಳಿದು ನಿಜ ಉಳಿಯಿತ್ತು.
ಲಿಂಗಜಂಗಮವೆಂಬ ಶಬ್ದವಿಡಿದು ಸಾಧ್ಯವಾಯಿತ್ತು ನೋಡಾ
ತಾನಳಿದು ತಾನುಳಿದು ತಾನುತಾನಾದ ಸಹಜ ನಿಜಪದವಿಯಲ್ಲಿ
ಕೂಡಲ ಚನ್ನಸಂಗ ಲಿಂಗೈಕ್ಯವು.
- ಚಿನ್ಮಯ ಜ್ಞಾನಿ ಚೆನ್ನಬಸವಣ್ಣ
ಒಮ್ಮೆ ಶರಣತ್ವ ಪಡೆದ ಮೇಲೆ ಕುಲ, ಛಲ, ಮದ, ಮತ್ಸರ, ಆತ್ಮತೇಜ, ಸರ್ವ ಅಹಂಭಾವ ಅಳಿಯಿತು. ಯಾವುದು ನಿಜವೋ, ಅದು ಒಂದು ಮಾತ್ರ ಉಳಿಯಿತು. ಆ ಸ್ಥಲವು ಲಿಂಗಜಂಗಮದ ಸಾಮಿಪ್ಯದಿಂದ ಸಾಧ್ಯವಾಯಿತು. ನಾನು ಎಂಬುದು ಅಳಿಯಿತು. ಲಿಂಗ ಮಾತ್ರ ಉಳಿಯಿತು. ತಾನು ತಾನೇ ಆಗಿ  ಸಹಜ ನಿಜಪದವಿಯಲ್ಲಿ  (ಸಹಜಸ್ಥಲ) ಕೂಡಲಸಂಗಮನಲ್ಲಿ 'ಐಕ್ಯ 'ವಾಯಿತು.
5.
ವಚನ : 
#ಅಂತರಂಗದಲ್ಲಿ ಅರಿವಾದಡೇನಯ್ಯಾ 
ಬಹಿರಂಗದಲ್ಲಿ ಕ್ರೀ ಇಲ್ಲದನ್ನಕ್ಕ ?
ದೇಹವಿಲ್ಲದಿರ್ದಡೆ ಪ್ರಾಣಕ್ಕಾಶ್ರಯವುಂಟೆ ?
ಕನ್ನಡಿಯಿಲ್ಲದಿರ್ದಡೆ ತನ್ನ ಮುಖವ ಕಾಣಬಹುದೆ ?
ಸಾಕಾರ ನಿರಾಕಾರ ಏಕೋದೇವ,
ನಮ್ಮ ಕೂಡಲಚೆನ್ನಸಂಗಯ್ಯನು.

ಅಂತರಂಗದಲ್ಲಿ ಶಿವನ ನಿರಾಕಾರ ನಿರ್ಗುಣ ಸ್ವರೂಪ ಅರಿವಾದರೂ ಸಹಿತ, ಬಹಿರಂಗದಲ್ಲಿ ಕ್ರಿಯೆ ಇಲ್ಲದಿದ್ದರೆ ಸಾಧನೆಯಾಗದು. ಜ್ಞಾನದೊಡನೆ  ಶಿವಯೋಗ ಕ್ರಿಯೆಯು ಬೇಕು.
ದೇಹವೇ ಇಲ್ಲದಿದ್ದರೆ ಪ್ರಾಣಕ್ಕೆ ಆಶ್ರಯ ಎಲ್ಲಿಯದು? ಕನ್ನಡಿಯಿಲ್ಲದೇ ತನ್ನ ಮುಖ ಕಾಣಬಹುದೇ? ಅದೇ ರೀತಿ ಇಷ್ಟಲಿಂಗ ಸಾಕಾರ,  ಶೂನ್ಯಲಿಂಗವು ಶಿವನು ನಿರಾಕಾರ ಸ್ವರೂಪ. ನಿರಾಕಾರವಾದ ಶೂನ್ಯಲಿಂಗವನ್ನು ಅರಿಯಲು, ಸಾಕಾರ ಇಷ್ಟಲಿಂಗ ಸಹಕಾರಿ ಮತ್ತು ಲಿಂಗವಂತರಿಗೆ ಅಗತ್ಯ. ಇಲ್ಲಿ ಸಾಕಾರ, ನಿರಾಕಾರವೆಂಬ ಎರಡು ಬೇರೆ ಬೇರೆ ದೇವರುಗಳಲ್ಲ. ಸಾಕಾರ ನಿರಾಕಾರ ಎರಡೂ ಒಬ್ಬನೇ ದೇವರು. ನಮ್ಮ ಕೂಡಲಚೆನ್ನಸಂಗಯ್ಯನು 'ಏಕೋದೇವ ' ಅಂದರೆ ಶರಣರಿಗೆ ಒಬ್ಬನೇ ದೇವರು ಎನ್ನುತ್ತಾರೆ ಅವಿರಳ ಜ್ಞಾನಿ ಚೆನ್ನಬಸವಣ್ಣ ನವರು.
-✍️ Dr Prema Pangi 
#ಚೆನ್ನಬಸವಣ್ಣನವರ_ಜಯಂತಿ

Comments

Popular posts from this blog

Ajna system

Shika chakra or Bindu chakra:Bindu visarga

ವಚನ ದಾಸೋಹ: ರೂಪನೆ ಕಂಡರು, ನಿರೂಪ ಕಾಣರು.