ವಚನ ದಾಸೋಹ : ಮರ ಮರ ಮಥನಿಸಿ

ವಚನ ದಾಸೋಹ : ಮರ ಮರ ಮಥನಿಸಿ 
ವಚನ:
#ಮರ ಮರ ಮಥನಿಸಿ ಕಿಚ್ಚು ಹುಟ್ಟಿ
ಸುತ್ತಣ ತರುಮರಾದಿಗಳ ಸುಡಲಾಯಿತ್ತು
ಆತ್ಮವಾತ್ಮ ಮಥನಿಸಿ ಅನುಭಾವ ಹುಟ್ಟಿ
ಹೊದ್ದಿರ್ದ ತನುಗುಣಾದಿಗಳ ಸುಡಲಾಯಿತ್ತು
ಇಂತಪ್ಪ ಮಹಾನುಭಾವರ ಅನುಭಾವವ ತೋರಿ
ಎನ್ನನುಳುಹಿಕೊಳ್ಳಾ, ಚೆನ್ನಮಲ್ಲಿಕಾರ್ಜುನ
- ವೀರ ವಿರಾಗಿಣಿ ಅಕ್ಕ ಮಹಾದೇವಿ 
#ಅರ್ಥ:
ಕಾಡಿನಲ್ಲಿ ಮರಕ್ಕೆ ಮರ ಘರ್ಷಿಸಿ ಬೆಂಕಿ (ಕಾಡು ಕಿಚ್ಚು) ಹತ್ತಿದರೆ ಸುತ್ತಲಿನ ಗಿಡ ಮರ ತರುಗಳು ಸುಟ್ಟು ಬೂದಿಯಾಗುತ್ತವೆ. ಅದೇ ರೀತಿ ಶುದ್ಧ ಆತ್ಮ ಆತ್ಮಗಳು ಘರ್ಷಿಸಿದರೆ, ಅನುಭವ ತೋರಿ ಈ ಹೊದ್ದಿದ್ದ ದೇಹದ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಸುಟ್ಟು ಬೂದಿಯಾಗುತ್ತವೆ.
ಅಂತಹ ಮಹನುಭಾವಿ ಶರಣರ ಅನುಭಾವದ ಮಾರ್ಗ ತನಗೆ ತೋರಿ ತನ್ನೊಳಗಿನ ಅಂತರಂಗವನ್ನು ಶುದ್ಧವಾಗಿಸಿ ತನ್ನನ್ನು ಕಾಪಾಡು ಎಂದು ಚೆನ್ನಮಲ್ಲಿಕಾರ್ಜುನನಲ್ಲಿ ನಿವೇದಿಸಿಕೊಳ್ಳುತ್ತಾಳೆ. ಗುರು ಬಸವಣ್ಣನವರು ಮತ್ತು ದೇಶದ  ಮೂಲೆಯಿಂದ ಆಗಮಿಸಿದ  ಶರಣರ ಬಗ್ಗೆ ಮತ್ತು ಅನುಭವ ಮಂಟಪದ ವಿಚಾರಕ್ರಾಂತಿಯ ಗೋಷ್ಠಿಗಳ ಬಗ್ಗೆ ಮತ್ತು  ಅವರೆಲ್ಲ ಮಾಡುತ್ತಿದ್ದ ಧರ್ಮಕ್ರಾಂತಿಯ ವಿಚಾರ ಕೇಳಿ ಒಮ್ಮೆ ತಾನು ಸಹ ಆ ಅನುಭವ ಮಂಟಪದಲ್ಲಿ ಶರಣರ ಸತ್ಸಂಗದಲ್ಲಿ, ಅವರ ಹೊಸ ವಿಚಾರಗಳನ್ನು ಅರಿತು ಅವರ ಮಾರ್ಗದರ್ಶನವನ್ನು ಪಡೆದು ಮುಂದೆ ಸಾಗಬೇಕು ಎಂದು ಕಲ್ಯಾಣಕ್ಕೆ ಬಂದವಳು. ಅಕ್ಕನ ವೈರಾಗ್ಯದ ಪ್ರಭೆ ಅನುಭಾವಮಂಟಪದಲ್ಲಿ ಬಸವಾದಿ ಶರಣರ ಸತ್ಸಂಗದಲ್ಲಿ ಇನ್ನಷ್ಟು ಉಜ್ವಲವಾಗಿ ಹೊಳೆಯುತ್ತದೆ. ಶರಣರ ಸತ್ಸಂಗದಲ್ಲಿ  ಅಕ್ಕ ಮಹಾದೇವಿಯವರು ವೈರಾಗ್ಯದ, ಅನುಭಾವದ ತುತ್ತ ತುದಿಗೇರಿದರು.
#ಸತ್ಸಂಗ:
ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಮ್ |
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ || 9
ಪುರಾತನ ಕಾಲದಿಂದಲೂ ಸನಾತನ ಸಂಸ್ಕೃತಿಯಲ್ಲಿ ಸತ್ಸಂಗಕ್ಕೆ ಬಹಳ ಪ್ರಾಮುಖ್ಯತೆ ಇದೆ. ಶರಣರು ಅಲ್ಲಿಯ ಅನೇಕ ಒಳ್ಳೆಯ ಅಂಶಗಳನ್ನು ಒಪ್ಪಿಕೊಂಡು ಕಾಲ ಕಾಲಕ್ಕೆ ಕೂಡಿಕೊಂಡ ಅನೇಕ ದೋಷಗಳ ವಿರುದ್ದ ಸಮರ ಸಾರಿ ಮೇಲು ಕೀಳು, ಜಾತಿ, ಲಿಂಗ ಎಂಬ ಬೇಧವಿಲ್ಲದ ಎಲ್ಲರಿಗೂ ಅನ್ವಯವಾಗುವ ಒಂದು ಶುಧ್ಧ ನೈತಿಕ ಸಾಮಾಜಿಕ ಆಧ್ಯಾತ್ಮಿಕ ಮಾರ್ಗ ತೋರಿಸಿದರು. ಅನೇಕ ಶರಣರು ತಮ್ಮ ಶರಣಪಥದಲ್ಲಿ ಸತ್ಸಂಗದ ಪ್ರಭಾವ ಮತ್ತು ಅದರ ಅವಶ್ಯಕತೆ ಎಷ್ಟು ಎಂದು ವಿವರಿಸಿದ್ದಾರೆ.

#ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ,
ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ.
- ಗುರು ಬಸವಣ್ಣನವರು
 ಬೆಳಕು ಜ್ಞಾನದ ಸಂಕೇತ, ಕತ್ತಲೆ ಅಜ್ಞಾನದ ಕುರುಹು. ಈ ಜ್ಞಾನವೆಂಬ ಬೆಳಕಿನ ಬಲದಿಂದ ಅಜ್ಞಾನವೆಂಬ ಕತ್ತಲು ಹರಿಯುತ್ತದೆ. ಜ್ಞಾನದ ಬೆಳಕಿನಲ್ಲಿ ಸತ್ಯ, ವಿವೇಕ ಅರಳುತ್ತವೆ.  ಸತ್ಯವು ಬೆಳಕಿಗೆ ಬಂದಾಗ ಅಸತ್ಯವು ಅಳಿದುಹೋಗುತ್ತದೆ. ಪರುಷ ಮಣಿಯ ಸ್ಪರ್ಶದಿಂದ ಅವಲೋಹವು ಕೂಡ ತನ್ನ ಅವಲೋಹತ್ವವನ್ನು ಕಳೆದುಕೊಂಡು ಚಿನ್ನವಾಗುತ್ತದೆ. ಜ್ಞಾನ, ಜ್ಯೋತಿ, ಸತ್ಯ, ಮತ್ತು ಪರುಷಗಳ ಬಲದಿಂದ ಅಜ್ಞಾನ, ಕತ್ತಲೆ, ಅಸತ್ಯ ಮತ್ತು ಅವಲೋಹಗಳು ನಾಶವಾಗುತ್ತವೆಯೋ ಹಾಗೆಯೇ ಅನುಭಾವಿ ಶರಣರ ಒಡನಾಟ, ಅವರ ಅನುಭಾವದ ನುಡಿಗಳಿಂದ, ಸತ್ಸಂಗದಿಂದ ಅಜ್ಞಾನ ಅಡಗಿ ಭವದ ಭಾವಗಳು ಇಲ್ಲವಾಗುತ್ತವೆ. ಹೀಗೆ ಭವದ ನಾಶವಾಗಿ, ಅನುಭಾವದ ಬೆಳಕು ಕಾಣಿಸಿ ಜ್ಞಾನದ ಜ್ಯೋತಿ ಪ್ರಕಾಶಮಾನ ವಾಗಿ ಸದಾ ಪ್ರಾಪಂಚಿಕ ವಿಷಯಗಳಲ್ಲಿ ಮುಳುಗುವುದನ್ನು ತಪ್ಪಿಸುತ್ತದೆ ಎಂದು ಹೇಳುತ್ತಾರೆ ಗುರು ಬಸವಣ್ಣನವರು.

 #ಅಯ್ಯಾ, ನರರೊಳು ಹುಟ್ಟಿ, ಮರಹಿನೊಳಗೆ ಬಿದ್ದವಳ ತಂದು,
ಮಹಾಶರಣರು ಎನಗೆ ಕುರುಹ ತೋರಿದರು.
ಗುರುವೆಂಬುದನರುಹಿದರುದ ಜಂಗಮವೆ ಜಗದ ಕರ್ತುವೆಂದರುಹಿದರು.
ಅವರ ನೆಲೆವಿಡಿದು ಮನವ ನಿಲಿಸಿದೆ, ಕಾಯ ಜೀವವೆಂಬುದನರಿದೆ,
ಭವಬಂಧನವ ಹರಿದೆ, ಮನವ ನಿರ್ಮಲವ ಮಾಡಿದೆ.
ಬೆಳಗಿದ ದರ್ಪಣದಂತೆ ಚಿತ್ತ ಶುದ್ಭವಾದಲ್ಲಿ,
ನೀವು ಅಚ್ಚೊತ್ತಿದ್ದ ಕಾರಣದಿಂದ ನಿಮ್ಮ ಪಾದವಿಡಿದು ನಾನು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
- ಶರಣೆ ಲಿಂಗಮ್ಮ
ಶರಣೆ ಲಿಂಗಮ್ಮ ಶರಣರ ಸತ್ಸಂಗದ ಮಹತ್ವ ಶರಣರ ಸತ್ಸಂಗದಲ್ಲಿ ನಡೆದ ತನ್ನ ಸಾಧನಾ ಪಥ ವರ್ಣಿಸಿದ್ದಾರೆ. ಪೂರ್ವಾಶ್ರಮದ ಯಾವುದೇ ಇರಲಿ, ಶರಣರ ಸತ್ಸಂಗ ದೊರೆತರೆ ಸತ್ಯದರ್ಶನ ಮಹಾಬೆಳಗಿನಲ್ಲಿ ಸಮರಸ ಸಾಧ್ಯವಾಗಿ ಆಧ್ಯಾತ್ಮದ ಉನ್ನತ ಶಿಖರ ತಲುಪಬಹುದೆಂದು ತಿಳಿಸಿದ್ದಾಳೆ.
#ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮರಲ್ಲಿ ಬೆಳೆದೆ
ಸತ್ಯಶರಣರ ಪಾದವಿಡಿದೆ, ಆ ಶರಣರ
 ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ
ಜಂಗಮವ ಕಂಡೆ, ಪಾದೋದಕವ ಕಂಡೆ
ಪ್ರಸಾದವ ಕಂಡೆ, ಇಂತಿವರ ಕಂಡೆನ್ನ ಕಂಗಳ
ಮುಂದಣ ಕತ್ತಲೆ ಹರಿಯಲೊಡನೆ ಮಂಗಳದ
ಮಹಾಬೆಳಗಿನೊಳೊಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚನ್ನಬಸವಣ್ಣ
-  ಶರಣೆ ಲಿಂಗಮ್ಮ
- ✍️ Dr Prema Pangi 
#ಮರ_ಮರ_ಮಥನಿಸಿ

Comments

Popular posts from this blog

Ajna system

Shika chakra or Bindu chakra:Bindu visarga

ವಚನ ದಾಸೋಹ: ರೂಪನೆ ಕಂಡರು, ನಿರೂಪ ಕಾಣರು.