ವಚನ ದಾಸೋಹ : ಭಾನು ಶಶಿ ಕಳೆಗುಂದಿ,
ಭಾನು ಶಶಿ ಕಳೆಗುಂದಿ,
ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ
ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ-
ವಾಯುವನರಿಯವೊ!
ಆದಿಪ್ರಣಮವನರಿದಹೆನೆಂಬವಂಗೆ,
ಬಯಲು ಆಕಾಶದೊಳಗೊಂದು ರಸದ ಬಾವಿ!
ಮುನ್ನಾದವರೆಲ್ಲಿಯವರೆಂದೆನಬೇಡ
ಗುಹೇಶ್ವರನೆಂಬ ಲಿಂಗವು ತಾನೆ ಕಂಡೆಲವೊ! / 1238*
- ಅಲ್ಲಮ ಪ್ರಭುಗಳು
*ಅರ್ಥ*:
ಅಲ್ಲಮಪ್ರಭುಗಳು ಬಸವ ತತ್ವದ ಅರಿವು ಆಚಾರ ಅನುಷ್ಠಾನಕ್ಕೆ ಮಹಾಮಾರ್ಗ ತೋರಿದ ನಿರಂಜನ ಜಂಗಮ ಮೂರ್ತಿ. ಶರಣರನ್ನು ಒರಿಗೆ ಹಚ್ಚಿ ತಿಕ್ಕಿ ನೋಡಿ ಜಗತ್ತಿಗೆ ಅವರ ಧಿವ್ಯತೆಯನ್ನು ಪರಿಚಯಿಸಿದ ಚರಜಂಗಮ ಗುರುಗಳು. ಅಲ್ಲಮಪ್ರಭುಗಳು ವಚನ ಸಾಹಿತ್ಯದ ಸರ್ವಕಾಲಿಕ ಎಚ್ಚರದ ಪ್ರತೀಕ.ಈ ವಚನ ದಲ್ಲಿ ಪ್ರಾಣಲಿಂಗಿ ಸ್ಥಲದ ಲಿಂಗಾನುಭೂತಿಯ ದೈವಿ ಆನಂದ ಸ್ಥಿತಿಯನ್ನು ಅದನ್ನು ಪಡೆಯುವ ವಿಧಾನ ವನ್ನು ತಿಳಿಸಿಕೊಡುತ್ತಾರೆ.
*ಬಾನು ಶಶಿ ಕಳೆಗುಂದಿ*
ಅಷ್ಟಾಂಗಯೋಗ ಕ್ರಿಯೆಯ ಪ್ರಾಣಾಯಾಮದಲ್ಲಿ ಭಾನು - ಈ ಶಬ್ದವು ವಾಯುವಿನ ರೇಚಕ ಗತಿ. ವಾಯುವು ಹೊರಹರಿದು ಹೋಗುವುದು ರೇಚಕ.
ಶಶಿ - ಈ ಶಬ್ದವು ಇಲ್ಲಿ ವಾಯುವಿನ ಪೂರಕ ಗತಿ. ವಾಯುವು ಒಳಗೆ ಹರಿದು ಬರುವುದು ಪೂರಕ. ಇವೆರಡೂ ಅವ್ಯಾಹತವಾಗಿ ನಡೆಯುವ ಪ್ರಾಣ ಗತಿಗಳು. ದೈಹಿಕ ಮತ್ತು ಮನಸ್ಸಿನ ಚಲನೆ ಎಲ್ಲವೂ ಈ ಗತಿಗಳನ್ನು ಅವಲಂಬಿಸಿರುತ್ತವೆ. ಪ್ರಾಣಲಿಂಗದ ಅನುಸಂಧಾನ ಮಾಡುವ ಯೋಗಿಯ ತನ್ನ ಸಾಧನೆಯಲ್ಲಿ ಮಗ್ನವಾದಂತೆಯೇ ಈ ರೇಚಕ ಪೂರಕ ಗತಿಗಳು ಮಂದವಾಗುತ್ತವೆ .
ಶಿವಯೋಗದಲ್ಲಿ
ಬಲಕ್ಕಿರುವ ಪಿಂಗಳ ನಾಡಿಯನ್ನು ಸೂರ್ಯನಾಡಿ ಎಂದು ಕರೆಯುತ್ತಾರೆ. ಇದು ಭಾನು, ನಮ್ಮ ಕ್ರಿಯಾಶಕ್ತಿ.
ಎಡಕ್ಕಿರುವ ಇಡಾ ನಾಡಿಯನ್ನು ಚಂದ್ರನಾಡಿ ಎಂದು ಕರೆಯುತ್ತಾರೆ. ಇದು ಶಶಿ, ನಮ್ಮ ಇಚ್ಛಾಶಕ್ತಿ. ಕ್ರಿಯಾಶಕ್ತಿ ಮಂದವಾದರೆ ದೇಹ ನಿಶ್ಚಲ. ಇಚ್ಛಾ ಶಕ್ತಿ ಮಂದವಾದರೆ ಮನಸ್ಸು ನಿಶ್ಚಲ. ಆಗ ಪ್ರಾಣಶಕ್ತಿ ಮಧ್ಯದಲ್ಲಿರುವ ಸುಶುಮ್ನ ನಾಡಿಯಲ್ಲಿ ಊರ್ಧಮುಖ ವಾಗಿ ಹರಿಯುತ್ತದೆ.
*ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ
ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ-
ವಾಯುವನರಿಯವೊ!*
ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಮತ್ತು
ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ ಇವು ಹತ್ತು ವಾಯುಗಳು. ಮೊದಲಿನ ಐದು ಪ್ರಮುಖ ವಾಯುಗಳು. ನಂತರದ ಐದು ಉಪವಾಯುಗಳು. ದೇಹದ, ಇಂದ್ರಿಯ, ದಮನ ಮತ್ತು ಬುದ್ಧಿಗಳು ಈ ಎಲ್ಲ ಕ್ರಿಯೆಗಳಿಗೆ ಈ ವಾಯುಗಳು ಕಾರಣವಾಗಿದೆ. ಇವುಗಳ ಗತಿ ಹೆಚ್ಚಿದಷ್ಟೂ ದೈಹಿಕ, ಮಾನಸಿಕ ಚಲನ ಹೆಚ್ಚುತ್ತದೆ. ಕಡಿಮೆಯಾದಷ್ಟೂ ದೇಹ, ಮನಸ್ಸುಗಳು ನಿಶ್ಚಲಗೊಳ್ಳುತ್ತವೆ. ಇವು ನಮ್ಮ ಅರಿವಿಗೆ ಬರದಷ್ಟು ಸೂಕ್ಷ್ಮವಾಗಿರುತ್ತವೆ.
ಒಟ್ಟಿನಲ್ಲಿ ಸಾಧನೆ ಮುಂದುವರೆದಂತೆ ಸಾಧಕನ ದೇಹ ಸ್ಥಿರಗೊಳ್ಳುತ್ತದೆ. ಮನಸ್ಸು ನಿಶ್ಚಲವಾಗುತ್ತದೆ.
ವಾಯುಗಳ ಗತಿ ಕಡಿಮೆಯಾಗಿ, ದೇಹ ಸ್ಥಿರವಾಗಿ, ಮನಸ್ಸು ನಿಶ್ಚಲವಾದಾಗ, ಆದಿ ಪ್ರಣವ ದರ್ಶನ ವಾಗುತ್ತದೆ.
*ಆದಿಪ್ರಣಮವನರಿದಹೆನೆಂಬವಂಗೆ,
ಬಯಲು ಆಕಾಶದೊಳಗೊಂದು ರಸದ ಬಾವಿ!*
ಆದಿಪ್ರಣವ ಎಂದರೆ ಸೃಷ್ಟಿಯ ಆದಿಯೊಳಗಿರುವ ಪ್ರಣವ "ಓಂ". ಅಂದರೆ ಅದು ಮಹಾಲಿಂಗ, ಆ ಮಹಾಲಿಂಗ ತೇಜವು ಹೃದಯದಲ್ಲಿ ಅಭಿವ್ಯಕ್ತವಾದಾಗ ಪ್ರಾಣಲಿಂಗ ವೆನಿಸುತ್ತದೆ, ಆದ್ದರಿಂದ ಪ್ರಾಣಲಿಂಗವೂ ಕೂಡ ಪ್ರಣವವೇ. ವಾಯುವನ್ನು ನಿರೋಧಿಸಿ ದೃಷ್ಟಿಯನ್ನು ಅನಿಮಿಷನ ಗೊಳಿಸಿ ಹೃದಯಕಮಲದಲ್ಲಿ ಲಿಂಗಸಾಧನೆಗೆ ತೊಡಗಿದ ಸಾಧಕನ ಪ್ರಶಾಂತ ಮನಸ್ಸಿನಲ್ಲಿ ಆದಿ ಪ್ರಣವದ ಅವಿರ್ಭಾವ ವಾಗುತ್ತದೆ. ಆಗ ಸಾಧಕ ಪ್ರಾಣಲಿಂಗಿ ಸ್ಥಲದಲ್ಲಿ ತನ್ಮಯ.
ಬಯಲ ರೂಪವಾದ ಲಿಂಗವು ಅಭಿವ್ಯಕ್ತ ವಾಗುವ ತಾಣ ಪರಿಶುದ್ಧವಾದ ಹೃದಯ
ಅಂದರೆ ನಿರ್ವಿಷಯ ಆನಂದ
ಆ ಹೃದಯವನ್ನು ತುಂಬಿಕೊಳ್ಳುತ್ತದೆ. ಪ್ರಾಣಲಿಂಗದ ಧ್ಯಾನದಲ್ಲಿ ನಿಮಗ್ನನಾದ ಶರಣನು ಆ ಅಲೌಕಿಕ ಆನಂದರಸವನ್ನು ಆಸ್ವಾದಿಸುತ್ತಾನೆ. ಅದರಲ್ಲಿಯೇ ಮೈಮರೆಯುತ್ತಾನೆ.
*ಮುನ್ನಾದವರೆಲ್ಲಿಯವರೆಂದೆನಬೇಡ
ಗುಹೇಶ್ವರನೆಂಬ ಲಿಂಗವು ತಾನೆ ಕಂಡೆಲವೊ*
ಇಂಥ ರಸಾನುಭೂತಿಯನ್ನು ಪೂರ್ವಕಾಲದಲ್ಲಿ ಅನೇಕರು ಪಡೆದಿದ್ದಾರೆ. ಮುನ್ನಾದವರು ಅಂದರೆ ಪೂರ್ವಕಾಲದಲ್ಲಿ ಈ ಪ್ರಾಣಲಿಂಗ ಸಾಧನೆ ಮಾಡಿದ ಮಹಂತರು, ಯೋಗಿಗಳು. ಪ್ರಾಣಸ್ಥಲದಲ್ಲಿ ಲಿಂಗ ವಿಟ್ಟು ಆ ಲಿಂಗದಲ್ಲಿ ತಮ್ಮನ್ನು ಅನುಸಂಧಾನ ಮಾಡಿದವರು. ಇವರು ಏನಾದರು ಎಂಬ ಪ್ರಶ್ನೆ ಬೇಡ. ಅವರು ಆ ಮಹಾಲಿಂಗದಲ್ಲಿ ಐಕ್ಯರಾದ ಮಹಾಲಿಂಗ ಸ್ವರೂಪಿಗಳೇ. ಅವರು ದೈಹಿಕವಾಗಿ ಇಲ್ಲವಾದರೂ ಆತ್ಮಿಕವಾಗಿ ಗುಹೇಶ್ವರ ಲಿಂಗದಲ್ಲಿ ಒಂದಾಗಿದ್ದಾರೆ.
ವಚನ ಚಿಂತನೆ :
ಇದು ಪ್ರಾಣಲಿಂಗಿ ಸ್ಥಲದ ವಚನ. ಪ್ರಾಣಲಿಂಗಿ ಸ್ಥಲದಲ್ಲಿ ಲಿಂಗ ಸಾಧನೆಗೆ ತೊಡಗಿದ ಶರಣನ ಅಂಗ ಕ್ರಿಯೆಗಳು ನಿಲ್ಲುತ್ತದೆ. ಈ ಮನಸ್ಸು ನಿಸಂಗ ನಿರಾಳವಾಗುತ್ತದೆ. ಆಗ ಆ ಶರಣರ ಮನಃಸ್ಥಲದಲ್ಲಿ ಪ್ರಾಣಲಿಂಗದ ದರ್ಶನವಾಗಿ ಸಾಧಕ ಆ ಕ್ಷಣ ಆ ಲಿಂಗದೊಂದಿಗೆ ಬೆರೆತು ಹೋಗುತ್ತಾನೆ. ಅದ್ಭುತವಾದ ದೈವೀ ಆನಂದವನ್ನು ಅನುಭವಿಸುತ್ತಾನೆ. ಈ ವಚನ
ಪ್ರಾಣಲಿಂಗಾನುಭವದ ಆನಂದಾವಸ್ಥೆ ಯನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ.
- ✍️ Dr Prema Pangi
Comments
Post a Comment