ಅಷ್ಟಾವರಣ - ರುದ್ರಾಕ್ಷಿ



*ಅಷ್ಟಾವರಣ - ರುದ್ರಾಕ್ಷಿ :
ರುದ್ರಾಕ್ಷಿ ಇದು ಸಾಧಕನನ್ನು ರಕ್ಷಿಸುವ ಪವಿತ್ರ ವಸ್ತು ಎಂದು ಪರಿಗಣಿಸಲ್ಪಟ್ಟು ಅಷ್ಟಾವರಣದಲ್ಲಿ ಸ್ಥಾನ ಪಡೆದಿದೆ.
ಶರಣಧರ್ಮದಲ್ಲಿ ವಿಭೂತಿ ಮತ್ತು ರುದ್ರಾಕ್ಷಿ ಬಹಿರಂಗದ ಆಚರಣೆಗಳಾದರೂ ಅವನ್ನು ಅಂತರಂಗದ ಅನುಭಾವಕ್ಕೆ ಪ್ರೇರಕ ಶಕ್ತಿಯಾಗಿ ಅಳವಡಿಸಿಕೊಳ್ಳಲಾಗಿದೆ. ಶಿವಪರಮಾತ್ಮನ ಉಪಾಸನೆಯಲ್ಲಿ ರುದ್ರಾಕ್ಷಕ್ಕೆ ಅತ್ಯಂತ ಪ್ರಮುಖ ಸ್ಥಾನ. ”ರುದ್ರ” ಹಾಗೂ “ಅಕ್ಷ” ಈ ಎರಡು ಪದಗಳಿರುವ ಶಬ್ದ ರುದ್ರಾಕ್ಷ, ಅಂದರೆ ರುದ್ರನ ಕಣ್ಣು. ”ರುದ್ರಸ್ಯ ಅಕ್ಷಿಃ ರುದ್ರಾಕ್ಷಃ”. ರುದ್ರಾಕ್ಷಿಯಲ್ಲಿ ವಿಶೇಷ ಕಂಪನದ ಪ್ರಭಾವವಿದ್ದು, ದೈವಿಕ ಶಕ್ತಿ ಇದೆ ಎಂದು ನಂಬಲಾಗುತ್ತದೆ.
ಗುರು ಬಸವಣ್ಣನವರು 'ಎನ್ನ ಮುಕ್ತಿಪಥಕ್ಕೆ ಶ್ರೀಮಹಾರುದ್ರಾಕ್ಷಿಯೆ ಸಾಧನವಯ್ಯಾ' ಎಂದು ರುದ್ರಾಕ್ಷಿ ಮಹಿಮೆಯನ್ನು ವರ್ಣಿಸಿದ್ದಾರೆ.


#ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾವನವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಕಾರಣವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಾಧನವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಿದ್ಧಿ,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾಪಕ್ಷಯವು.
ಅಯ್ಯಾ ನಿಮ್ಮ ಪಂಚವಕ್ತ್ರಂಗಳೆ
ಪಂಚಮುಖದ ರುದ್ರಾಕ್ಷಿಗಳಾದವಾಗಿ,
ಅಯ್ಯಾ ಕೂಡಲಸಂಗಮದೇವಯ್ಯಾ,
ಎನ್ನ ಮುಕ್ತಿಪಥಕ್ಕೆ ಶ್ರೀಮಹಾರುದ್ರಾಕ್ಷಿಯೆ ಸಾಧನವಯ್ಯಾ. / 63

ಶರಣರಲ್ಲಿ ನೈತಿಕ ನಿಯಮ ನಿಷ್ಠೆಗಳನ್ನು ಸದಾ ಜಾಗ್ರತವಾಗಿಡಲು ಸಹಾಯಕವಾಗುತ್ತದೆ.
ರುದ್ರಾಕ್ಷಿಧಾರಣಯುಕ್ತನಾದವನ ವರ್ತನೆ ಹೇಗಿರಬೇಕೆಂಬುದನ್ನು ಹೇಳುವ ಈ ಕೆಳಗಿನ ಮಾತನ್ನು ನೋಡಬಹುದು :
#ಹಸ್ತಕಡಗ ಕೈಗಧಿಕ ನೋಡಾ ! 
ಕೊಡಲಹುದು ಕೊಳಲಹುದು.
ಬಾಹು ಬಳೆ ತೋಳಿಗಧಿಕ ನೋಡಾ, ಪರವಧುವನಪ್ಪಲಾಗದು.
ಕರ್ಣಕುಂಡಲ ಕಿವಿಗಧಿಕ ನೋಡಾ, 
ಶಿವನಿಂದೆಯ ಕೇಳಲಾಗದು.
ಕಂಠಮಾಲೆ ಕೊರಳಿಂಗಧಿಕ ನೋಡಾ, ಅನ್ಯದೈವಕ್ಕೆ ತಲೆವಾಗಲಾಗದು.
ಆಗಳೂ ನಿಮ್ಮವ ನೆನೆದು, ನಮ್ಮ ಕೂಡಲಸಂಗನ ಪೂಜಿಸಿ ಸದಾ ಸನ್ನಹಿತನಾಗಿಪ್ಪನು ||

ರುದ್ರಾಕ್ಷಿ, ವಿಭೂತಿ ಧಾರಣೆ ಪ್ರದರ್ಶನಕ್ಕಾಗಲೀ ಆಡಂಬರಕ್ಕಾಗಲೀ ಅಲ್ಲ. ಅಂತರಂಗದ ವಿಕಾಸಕ್ಕೆ  ಸಹಾಯಕವಾದಾಗಲೇ ಅವುಗಳ ಸಾರ್ಥಕತೆ ಎಂಬುದನ್ನೇ ಶರಣರು ಎತ್ತಿಹಿಡಿದರು. 


#ಸಕಲ ಭೋಗ ವಿಲಾಸ ಲಿಂಗಕ್ಕೆಂದಲ್ಲಿ ತನ್ನಂಗಕ್ಕೆ ಶೃಂಗಾರವುಂಟೇ ?
ಶ್ರೀ ರುದ್ರಾಕ್ಷಿ ವಿಭೂತಿ ಸ್ವಸ್ಥಾನದಲ್ಲಿ ತನ್ನಂಗಕ್ಕೆ ಶೃಂಗಾರವೆಂದು ಮಾಡಿದಡೆ,
ಆ ನಿಜಪದದಂಗೆ ಒಂದೂ ಇಲ್ಲೆಂದನಂಬಿಗ ಚೌಡಯ್ಯ/
ಎಂಬಲ್ಲಿ ವಿಭೂತಿ ರುದ್ರಾಕ್ಷಿಗಳ ಶೃಂಗಾರದ ಅರ್ಪಿತ ಭಾವವನ್ನು ಅಂಬಿಗರ ಚೌಡಯ್ಯ ಸೂಚಿಸಿದ್ದಾರೆ. ಮನ ಶುಚಿಯಾಗದೆ ತನು ಬತ್ತಲೆಯಾದರೇನು ? ಭಾವ ಬಯಲಾಗದೆ ಮಂಡೆ ಬೋಳಾದರೇನು? ಕೇವಲ ಬಹಿರಂಗದ ಕ್ರಿಯೆ ಆಚರಣೆ ಆಗಬಾರದು ಎನ್ನುತ್ತಾರೆ ಅಲ್ಲಮ ಪ್ರಭುಗಳು.
ಹೊರಗಿನ ರುದ್ರಾಕ್ಷಿಗಳನ್ನು ಧರಿಸುವುದು ತತ್ವಾಚಿಂತಾಮಣಿಗಳೆಂಬ ಆಂತರ್ಯದ ರುದ್ರಾಕ್ಷಿಗಳನ್ನು ಧರಿಸಿರುವುದಕ್ಕೆ ಸಂಕೇತವಾಗಬೇಕು. ಭಕ್ತಿಭಾವದಿಂದ ಅವುಗಳನ್ನು ಸರಗೊಳಿಸಿ ಯುಕ್ತಿಯಿಂದ ಧರಿಸಬೇಕು. ಅಂತರಂಗದ ಅರಿವನ್ನು ಎಚ್ಚರಗೊಳಿಸುವುದಕ್ಕೆ ಅವು ಸಾಧನವಾಗಬೇಕು. ಸಾಧಕನನ್ನು ರಕ್ಷಿಸುವ ಆವರಣ (ಕವಚ)ಗಳಾಗಬೇಕು. ರುದ್ರಾಕ್ಷಿ - ರುದ್ರ+ಅಕ್ಷಿ.  ತ್ರಿಪುರಸಂಹಾರದಲ್ಲಿ ರುದ್ರನ ಕಣ್ಣಿನಿಂದ ಉದುರಿದ ಕಣ್ಣೀರ ಹನಿ ರುದ್ರಾಕ್ಷಿಯಾಯಿತು ಎನ್ನುತ್ತಾರೆ. 

ರುದ್ರಾಕ್ಷಿ ಬಹಿರಂಗದ ಅಷ್ಟಾವರಣವಾದರೆ, ಅಂತರಂಗದ ಸೂಕ್ಷ್ಮ ದೇಹದಲ್ಲಿ ರುದ್ರಾಕ್ಷಿ "ಚಿದ್ರುದ್ರಾಕ್ಷಿ" ಎಂದು ಕರೆಯಲ್ಪಡುತ್ತದೆ. ಚಿದ್ರುದ್ರಾಕ್ಷಿ ಅಂದರೆ ಜ್ಞಾನ ಚಕ್ಷು, ಜ್ಞಾನನೇತ್ರ. ಜ್ಞಾನನೇತ್ರ ತೆರೆಯುವದು(ಅರಿವು) ಅಂದರೆ ತಾನಾರೆಂಬ ಅರಿವು ಉತ್ಪನ್ನವಾಗುವುದು. ಜ್ಞಾನನೇತ್ರ ತೆರೆಯಲು ತ್ರಿಪುಟಿಗಳು ಅಂದರೆ ಜ್ಞಾತೃ ಜ್ಞಾನ ಜ್ಞೇಯ ಒಂದೇ ಆಗಬೇಕು. ಆಗ ಅರಿವಿನ ಕಣ್ಣಾದ ಅಂತರಂಗದ ಚಿದ್ರುದ್ರಾಕ್ಷಿಯ ಉತ್ಪನ್ನ.  ಜ್ಞಾತೃ ಜ್ಞಾನ ಜ್ಞೇಯ ಮೂರೂ ಒಂದೇ ಆದಾಗ ಜೀವ ಪರಮರ ಐಕ್ಯವಾಗುವುದು. ಆ ಜೀವ ಶಿವ ಐಕ್ಯವಾದಾಗ ಮನಲಯ ವಾಗುವುದು, ಶೂನ್ಯವಾಗುವುದು. ಮನಲಯವಾದ ಬಳಿಕ ಇನ್ನು ಧ್ಯಾನಿಸಲು ಎನು ಇಲ್ಲ. ಅರಿಯಲೂ ಎನು ಇಲ್ಲ. ಬಾಹ್ಯಮುಖವಾದ ಇಂದ್ರಿಯಗಳ,
ಮನದ ವಿಕಾರಗಳು ಅಳಿದು ಅವಿದ್ಯಾವಾಸನೆ ಅಡಗಿ, ಅಹಂಕಾರ ನಾಶವಾಗಿ, ಜೀವನು ಮುಕ್ತನಾಗಿ ಸರ್ವಶೂನ್ಯವಾಗಿ ಸಾಧಕ ಶರಣ
ಸಮುದ್ರ ಮಧ್ಯದ ತುಂಬಿದ ಕೊಡದಂತೆ ಇರುತ್ತಾನೆ ಎನ್ನುತ್ತಾರೆ ಶರಣರು. ಆಗ ಐಕ್ಯಸ್ಥಳ ಪ್ರಾಪ್ತಿಯಾಗಿ ದೇವರ ಸ್ವರೂಪ ತಾನೆಂಬ ಅರಿವು ಉಂಟಾಗುತ್ತದೆ.

*ಪುರಾಣದ ಕೃತಿಗಳಲ್ಲಿ ರುದ್ರಾಕ್ಷಿ* :
 ತ್ರಿಪುರಾಸುರ ರಾಕ್ಷಸನ ಸಂಹಾರದ ನಂತರ, ಪರಶಿವನ ಕಣ್ಣಿನಿಂದ ಬಂದ ಆನಂದದ ಅಶ್ರು ಬಿಂದುಗಳು ರುದ್ರಾಕ್ಷಿ ಮಣಿಗಳಾದವು.ಆತನ ಸೂರ್ಯನೇತ್ರದಿಂದ ಕಪಿಲವರ್ಣದ ಹನ್ನೆರಡು ಪ್ರಕಾರದ ರುದ್ರಾಕ್ಷಿಗಳೂ, ಚಂದ್ರನೇತ್ರದಿಂದ ಬಿಳಿಬಣ್ಣದ ಹದಿನಾರು ಪ್ರಕಾರದ ರುದ್ರಾಕ್ಷಿಗಳೂ, ಅಗ್ನಿ ನೇತ್ರದಿಂದ ಕಪ್ಪು ಬಣ್ಣದ ಹತ್ತು ಬಗೆಯ ರುದ್ರಾಕ್ಷಿಗಳೂ, ಪರಶಿವನ ಜ್ಞಾನ ಚಕ್ಷುವಿನಿಂದ ಹದಿಮೂರು ರುದ್ರಾಕ್ಷಿಗಳು ಉದಯವಾದುದೆಂದು ಶಿವಶರಣರು ಭಾವಿಸುತ್ತಾರೆ : ವಿಭೂತಿಯೊಡನೆ ಅವುಗಳನ್ನೂ ಧರಿಸಿ ಶಿವಸ್ವರೂಪನಾಗಿ ಶಿವನನ್ನು ಅರ್ಚಿಸಬೇಕೆಂಬುದನ್ನು ಸೂಚಿಸುತ್ತಾರೆ. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ ಮಣಿಗಳು ಶಿವಭಕ್ತರ ಕೊರಳ ಮಣಿ-ಮಾಲೆಯಾಗಿ ಉಪಯೋಗಿಸಲ್ಪಡುತ್ತದೆ. ಇದನ್ನು ಜಪಮಾಲೆಯಾಗಿಯೂ ಉಪಯೋಗಿಸುತ್ತಾರೆ.
ಇನ್ನೊಂದು ಕಥೆ ಪ್ರಕಾರ ಶಿವನು ದೀರ್ಘಕಾಲ ಧ್ಯಾನನಿರತನಾಗಿ ನಂತರ ಕಣ್ಣುಬಿಟ್ಟಾಗ ಅವನ ಕಣ್ಣಿನಿಂದ ಬಿದ್ದ ಒಂದು ಆನಂದ ಭಾಷ್ಪ ರುದ್ರಾಕ್ಷಿಯಗಿ ಅದರಿಂದ ರುದ್ರಾಕ್ಷಿಯ ಮರ ಹುಟ್ಟಿತೆಂದು ಹೇಳಲಾಗಿದೆ. ಅದೇ ಮರದ ಸಂತತಿ ರುದ್ರಾಕ್ಷ್ಷಿಗಳನ್ನು ಕೊಡುತ್ತಿವೆ.
ಅದು ಶಿವನ ಮೂರನೇ ಕಣ್ಣಿನ ರೂಪವಾದದ್ದರಿಂದ ಜನರ ಕಣ್ಣೀರನ್ನು ಒರೆಸುವ ಎಂದರೆ ದುಃಖವನ್ನು ದೂರಮಾಡುವ ಗುಣ ಹೊಂದಿದೆ ಮತ್ತು ನಮ್ಮ ಮೂರನೆಯ ಕಣ್ಣು ಅಂದರೆ ಜ್ಞಾನ ಕಣ್ಣು ತೆರೆಯುವ ಶಕ್ತಿ ಇದೆ ಎಂದು ಹೇಳುತ್ತಾರೆ.

ರುದ್ರಾಕ್ಷವೆಂಬುದು ಒಂದು ಮರ. ಆ ಮರದ ಬೀಜವೇ ರುದ್ರಾಕ್ಷಿ. ಶಿವ ಪುರಾಣ, ವಿದ್ಯೇಶ್ವರ ಸಂಹಿತಾ ಹಾಗೂ ಶ್ರೀ ದೇವೀಭಾಗವತಗಳಲ್ಲಿ ರುದ್ರಾಕ್ಷಕ್ಕೆ ಸಂಬಂಧಿಸಿದ ವಿಷಯಗಳಿವೆ.  ರುದ್ರಾಕ್ಷಿ (Elaeocarpus Ganitrus) ಒಂದು  ಗಿಡದ ಬೀಜ. ಬೀಜದಲ್ಲಿ ಮೂಡಿರುವ ಗೆರೆಗಳನ್ನು ಮುಖಗಳೆಂದು ಗುರುತಿಸಿ  ಒಂದರಿಂದ ಇಪ್ಪತೊಂದು ಮುಖದ ರುದ್ರಾಕ್ಷಿ ಗಳಿಗೆ ಬೇರೆ ಬೇರೆ ಶಕ್ತಿ ಇದೆ ಎಂದು ಸಂಶೋಧಿಸಿ  ಧಾರ್ಮಿಕ ಮಹತ್ವ ಕೊಟ್ಟಿದ್ದಾರೆ. ಐದರಿಂದ ಹದಿನಾಲ್ಕು ಮುಖದ ರುದ್ರಾಕ್ಷಿಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತವೆ. ರುದ್ರಾಕ್ಷಿ ಔಷಧೀಯ ಗುಣಗಳನ್ನು ಹೊಂದಿದ ಹಣ್ಣು. ಅದರ ವೈದ್ಯಕೀಯ ಗುಣಗಳು ವ್ಯಕ್ತಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸುವ ಶಕ್ತಿ ಹೊಂದಿವೆ. ಅದರ Electromagnet ಮತ್ತು Paramagnet ಎಂಬ ಹೊರಹೊಮ್ಮುವ Bio-Electric Signal ಗಳು ಮೆದುಳನ್ನು ಚುರುಕುಗೊಳಿಸುವ ಮತ್ತು ತಂಪಾಗಿರಿಸುವ ಗುಣ ಹೊಂದಿದೆ. ನಮ್ಮಲ್ಲಿರುವ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ.  

 ಒಂದುಮರದಲ್ಲಿ ಸುಮಾರು ೨೦೦೦ ದಷ್ಟು ಹಣ್ಣುಬಿಡುವುದು. ಹಿಮಾಲಯದ ಯತಿಗಳು ಆ ಮರದ ಹಣ್ಣುಗಳನ್ನು  ಅಮೃತ ಫಲವೆಂದು ತಿನ್ನುತ್ತಾರೆ. ರುದ್ರಾಕ್ಷಿ ಹಿಮಾಲಯ ತಪ್ಪಲು ಪ್ರದೇಶದಲ್ಲಿ, ನೇಪಾಳದಲ್ಲಿ ಮತ್ತು ಆಗ್ನೇಯ ಏಷಿಯಾ ದೇಶಗಳಲ್ಲಿ ಬೆಳೆಯುತ್ತದೆ. ರುದ್ರಾಕ್ಷಿ ಕಾಯಿ ನೋಡಲು ನಸು ನೀಲಿ ಬಣ್ಣದ್ದಾಗಿರುತ್ತದೆ. ಇದು ಸಿಪ್ಪೆಯ ಭಾಗ. ಸಿಪ್ಪೆ ಸುಲಿದರೆ , ಒಳಗಡೆ ಹಸಿರು ಬಣ್ಣದ ರುದ್ರಾಕ್ಷಿ ಸಿಗುತ್ತದೆ. ಅದು ಚೆನ್ನಾಗಿ ಒಣಗಿದ ನಂತರ ನಸು ಶ್ವೇತವರ್ಣ, ತಾಮ್ರದ ನಸು ಕೆಂಪು, ಹಾಗೂ ನಸು ಕಪ್ಪು ಬಣ್ಣದವು ಸಿಗುತ್ತವೆ. ಸೂಜಿಯನ್ನು ಉಪಯೋಗಿಸಿ ಮಡಿಕೆಗಳಿರುವ ರುದ್ರಾಕ್ಷಿಯ ಗೆರೆಗಳನ್ನು ಬಿಡಿಸುತ್ತಾರೆ. ಗೆರೆಗಳ ಆಕಾರವನ್ನು ನೋಡಿ ರುದಾಕ್ಷಿಯ ಮುಖಗಳನ್ನು ಗುರ್ತಿಸುತ್ತಾರೆ. ಅದರಲ್ಲಿ ಒಂದು ಮುಖದಿಂದ ಹಿಡಿದು ೨೧ ಮುಖಗಳವರೆಗೂ ಇರವ ರುದ್ರಾಕ್ಷಿ ಸಿಗುವುದೆಂದು ಹೇಳುತ್ತಾರೆ. ಆದರೆ ೫ ಮುಖದಿಂದ ೧೪ ಮುಖಗಳಿರುವ ರುದ್ರಾಕ್ಷಿಗಳು ಹೆಚ್ಚು ಇರುತ್ತವೆ. ಏಕಮುಖ ರುದ್ರಾಕ್ಷಿ ಬಹಳ ವಿರಳವಾಗಿ ದೊರೆಯುತ್ತವೆ. ಪಂಚಮುಖಿ ರುದ್ರಾಕ್ಷಿ ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತದೆ. ಒಂದೊಂದು ಬಗೆಯ ರುದ್ರಾಕ್ಷಿಗೂ ಅದರದೇ ಮಹತ್ವವಿದೆ. ಒಂದೊಂದು ಮುಖಕ್ಕೂ ಒಬ್ಬೊಬ್ಬ ದೇವತೆಯನ್ನು ಗುರುತಿಸುತ್ತಾರೆ. 
ರುದ್ರಾಕ್ಷಿಯ ಉಪಯೋಗಗಳು ಹೀಗಿವೆ.
- ರುದ್ರಾಕ್ಷಿಗೆ ಔಷಧೀಯ ಗುಣಗಳಿವೆ. ಅನೇಕ ರೋಗಗಳಿಗೆ ಆಯುರ್ವೇದದಲ್ಲಿ ರುದ್ರಾಕ್ಷಿಯನ್ನು ಉಪಯೋಗಿಸುತ್ತಾರೆ.
-ಅದರಲ್ಲಿ 108 ಮಣಿಗಳ ಜಪಮಾಲೆಗಳನ್ನು ಮಾಡುತ್ತಾರೆ. 
- ಧರಿಸುವುದರಿಂದ ತನು-ಮನಗಳಲ್ಲಿ ಪವಿತ್ರತೆಯ ಸಂಚಾರವಾಗುತ್ತದೆ. ಪಾಪಗಳನ್ನು ರುದ್ರಾಕ್ಷಿ ನಾಶಪಡಿಸುತ್ತದೆ. ಋಷಿಗಳ ಗುರುಗಳ ನಿರ್ದೇಶನದಂತೆಯೇ  ರುದ್ರಾಕ್ಷಿಯನ್ನು ಧರಿಸಬೇಕು. ಸುಖ ಹಾಗೂ ಮೋಕ್ಷವನ್ನು ಬಯಸುವ ಜನರು ರುದ್ರಾಕ್ಷದ ಮಾಲೆಯನ್ನು ಧರಿಸಬೇಕು.
ಉರಿಲಿಂಗಪೆದ್ದಿ ಶರಣರು ಪಂಚಮುಖದ ರುದ್ರಾಕ್ಷಿ ಎಂದರೆ ಪಂಚಬ್ರಹ್ಮನ ಸದ್ಯೋಜಾತ ವಾಮದೇವ ತತ್ಪುರುಷ ಅಘೋರ ಈಶಾನ್ಯವೆಂಬ ಐದು ಮುಖಗಳ ಸದಾಶಿವ ತತ್ವವನ್ನು ಪ್ರತಿನಿಧಿಸುತ್ತವೆ ಎನ್ನುವರು. ಶರಣ ಧರ್ಮದಲ್ಲಿ ರುದ್ರನೆಂದರೆ ನಿರಾಕಾರ ಪರಶಿವನ ಒಬ್ಬ ಗಣ ಮಾತ್ರ.

#ಸದ್ಯೋಜಾತ ವಾಮದೇವ ತತ್ಪುರುಷ ಅಘೋರ ಈಶಾನ್ಯವೆಂಬ ಪಂಚಬ್ರಹ್ಮವೇ ಮೊದಲಾದ ಪಂಚಮುಖದ ರುದ್ರಾಕ್ಷಿ.
ಆ ರುದ್ರಾಕ್ಷಿಯ ಹಸ್ತ ತೋಳು ಕರ್ಣ ಕಂಠ
ಮಸ್ತಕದಲ್ಲಿ ಧರಿಸಿಪ್ಪ ಶಿವಭಕ್ತನೇ ರುದ್ರನು.
ಆತನ ದರ್ಶನದಿಂದ ಭವರೋಗ ದುರಿತ ಇರಲಮ್ಮವು ನೋಡಾ.
`ಓಂ ಅತ ಏವ ರುದ್ರಾಕ್ಷಧಾರಣಾತ್ ರುದ್ರಃ'
ಎಂದುದಾಗಿ
ರುದ್ರಪದವಿಯನೀವ ರುದ್ರಾಕ್ಷಿಯಂ ಧರಿಸಿಪ್ಪ ಭಕ್ತರಿಗೆ ಶರಣೆಂಬೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. / 342

ಪಂಚಮುಖದ ರುದ್ರಾಕ್ಷಿ  ಅಂದರೆ ಸದ್ಯೋಜಾತ ವಾಮದೇವ ತತ್ಪುರುಷ ಅಘೋರ ಈಶಾನ್ಯವೆಂಬ ಐದು ಮುಖಗಳ ಸಾಕ್ಷಾತ್ ಪಂಚಬ್ರಹ್ಮ. ಪಂಚಮುಖದ ರುದ್ರಾಕ್ಷಿ ಶ್ರೇಷ್ಟವಾದುದು. ಆ ರುದ್ರಾಕ್ಷಿಯ  ಹಸ್ತ, ತೋಳು, ಕಿವಿ, ಕುತ್ತಿಗೆ, ತಲೆ ಮೇಲೆ ಧರಿಸಿಧ ಶಿವಭಕ್ತನೇ ರುದ್ರನು. ಈ ರೀತಿ ರುದ್ರಾಕ್ಷಿ ಧರಿಸಿದ ಶಿವಭಕ್ತನ ದರ್ಶನದಿಂದ ಭವರೋಗ ನೋವು ನಾಶವಾಗುವವು. ಹೀಗೆ ರುದ್ರಪದವಿ ನೀಡುವ ರುದ್ರಾಕ್ಷಿಯ ಧರಿಸಿದ್ದ ಶಿವಭಕ್ತರಿಗೆ ಶರಣು ಎಂದಿದ್ದಾರೆ ಉರಿಲಿಂಗಪೆದ್ದಿ ಶರಣರು.
ರುದ್ರಾಕ್ಷಿಗಳು ಪರಶಿವನ ಜ್ಞಾನ ಚಕ್ಷುವಿನಿಂದ ಉದಯವಾದುದೆಂದು ಶಿವಶರಣರು ಭಾವಿಸುತ್ತಾರೆ. ವಿಭೂತಿಯೊಡನೆ ಅವುಗಳನ್ನೂ ಧರಿಸಿ ಶಿವಸ್ವರೂಪನಾಗಿ ಶಿವನನ್ನು ಅರ್ಚಿಸಬೇಕೆಂಬುದನ್ನು ಸೂಚಿಸುತ್ತಾರೆ. “ಪರಶಿವನ ಜ್ಞಾನಚಕ್ಷುವಿನಲ್ಲಿ ಉದಯವಾದ ರುದ್ರಾಕ್ಷಿಯ, ಹಸ್ತದೊಳು, ಉರು ಕಂಠ ಮಸ್ತಕದಲ್ಲಿ ಧರಿಸಿದ ಶಿವಶರಣವೇ ರುದ್ರನು....” ಮೊದಲಾದ ಮಾತುಗಳಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. 

ರುದ್ರಾಕ್ಷಿಯ ಧಾರಣೆಯಿಂದ ನಿಮ್ಮ ಸ್ವಂತ ಶಕ್ತಿಯ ಕೇಂದ್ರ ರಚಿಸುತ್ತದೆ
ರುದ್ರಾಕ್ಷಿಯಲ್ಲಿರುವ ಮ್ಯಾಗ್ನೆಟಿಕ್‌ ಗುಣಗಳು ಮೆದುಳಿನ ಮೇಲೆ ಪ್ರಭಾವ ಬೀರಿ ಮನಸ್ಸನ್ನು ಶಾಂತವಾಗಿರಿಸುತ್ತದೆ. 
ಆತ್ಮವಿಶ್ವಾಸ ಹೆಚ್ಚಿಸಿ, ನಮ್ಮ ಅಂತಃಸತ್ವ ಉದ್ದೀಪನೆಯಾಗುವಂತೆ ಮಾಡುತ್ತದೆ.
ರುದ್ರಾಕ್ಷಿಯು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆಯನ್ನು ನೀಡುತ್ತದೆ.
108 ರುದ್ರಾಕ್ಷಿಗಳಿರುವ ಮಾಲೆಯನ್ನು ಧರಿಸುವುದರಿಂದ ಸಮಸ್ತ ಕಾರ್ಯಗಳಲ್ಲೂ ಯಶಸ್ಸು ಸಿಗುವುದು. ಇಷ್ಟಾರ್ಥವನ್ನು ಪೂರೈಸಲು ಹಾಗೂ ಜಪ ತಪಾದಿ ಕಾರ್ಯಗಳಲ್ಲಿ ಇದನ್ನು ಬಳಸುತ್ತಾರೆ
ರುದ್ರಾಕ್ಷಿಗಳಿರುವ ಮಾಲೆಯನ್ನು ಧರಿಸುವುದರಿಂದ ಸಾಹಸ, ಪರಾಕ್ರಮ ಹಾಗೂ ಉತ್ತಮ ಆರೋಗ್ಯ ಪ್ರಾಪ್ತಿಯಾಗುವುದು.  ದೀರ್ಘಾಯುಷಿಯಾಗಬಹುದು
 ಸಂಪತ್ತು,ಶುಭ ಪ್ರಾಪ್ತಿಯಾಗುವುದು.
 ವಿಘ್ನಗಳು ನಿವಾರಣೆಯಾಗುವುದು.
ಮಲಗುವಾಗ ರುದ್ರಾಕ್ಷಿ ಧರಿಸಬಾರದು 
ಮಾಂಸಾಹಾರ, ಮದ್ಯಪಾನ ಮಾಡುವಾಗಲೂ ಧರಿಸಬಾರದು. 

ಘನ ಮಹಾತ್ಮರೆಲ್ಲ ರುದ್ರಾಕ್ಷಿ ಧರಿಸಿದವರೇ ಆಗಿದ್ದಾರೆ ಎಂದು ಶರಣ ಉರಿಲಿಂಗಪೆದ್ದಿ ರುದ್ರಾಕ್ಷಿ ಮುಕ್ತಿಗೆ ಸಾಧನ ಎಂದು ತಿಳಿಸುತ್ತಾರೆ. ರುದ್ರಾಕ್ಷಿ ಯನ್ನು ಧರಿಸುವ ಕ್ರಮವನ್ನು ಉರಿಲಿಂಗ ಪೆದ್ದಿ ಹೀಗೆ ನಿರೂಪಿಸಿದ್ದಾರೆ.

#ಘನಕ್ಕೆ ಘನ ಮಹಿಮೆಯ ಪಡೆವರೆಲ್ಲರು ರುದ್ರಾಕ್ಷಿಯ ಧರಿಸಿಪ್ಪರು,
ಆ ಮನುಜರು ಮರ್ತ್ಯರಲ್ಲ ನೋಡಿರೆ.
ಮುನ್ನೊಬ್ಬ ವ್ಯಾಧನು ಶ್ವಾನನ ಕೊರಳಲ್ಲಿ ರುದ್ರಾಕ್ಷಿಯ ಕಟ್ಟಲು
ಆ ಶ್ವಾನವೂ ರುದ್ರಲೋಕಕ್ಕೆ ಐದಿತೆಂಬುದು ಪುರಾಣಿಸಿದ್ಧ ನೋಡಿರೆ. ಅದು ಕಾರಣ,
ಶಿಖೆಯಲ್ಲಿ ಒಂದು, ಶಿರದಲ್ಲಿ ಮೂವತ್ತಾರು,
ಗಳದಲ್ಲಿ ಮೂವತ್ತೆರಡು,ಕರ್ಣದ್ವಯದಲ್ಲೆರಡು
ಹಾರದಲ್ಲಿ ನೂರೆಂಟು,ತೋಳಿನಲ್ಲಿ ಹದಿನಾರು,
ಕರದಲ್ಲಿ ಹನ್ನೆರಡು, ಜಪದಲ್ಲಿ ಇಪ್ಪತ್ತೆಂಟು
ಈ ಕ್ರಮವರಿದು ರುದ್ರಾಕ್ಷಿಯ ಧರಿಸಿದಾತನೇ ರುದ್ರನು, ಆತನೇ ಸದ್ಯೋನ್ಮುಕ್ತನು,
ಆತನೇ ಇಹಲೋಕ ಪರಲೋಕ ಪೂಜ್ಯನು, ಅಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. / 114

ರುದ್ರಾಕ್ಷಿಯ ಧರಿಸಿದವರು ಬರೀ ಮಾನವರಾಗಿ ಉಳಿಯುವುದಿಲ್ಲ. ಅವರು ಧಿವ್ಯ ಚೇತನಾತ್ಮರಾಗುತ್ತಾರೆ. ಒಬ್ಬ ಬೇಟೆಗಾರ ತನ್ನ ಶ್ವಾನಕ್ಕೆ ರುದ್ರಾಕ್ಷಿಯ ಕಟ್ಟಲು ಅದೂ ಸಹಿತ ಆ ರುದ್ರಾಕ್ಷಿಯ ಮಹಿಮೆಯಿಂದ ರುದ್ರಲೋಕ ಪ್ರವೇಶ ಪಡೆಯುತ್ತದೆ. ಶಿಖೆಯಲ್ಲಿ ಒಂದು ರುದ್ರಾಕ್ಷಿಯನ್ನು, ಶಿರ ಅಂದರೆ ತಲೆಯ ಮೇಲೆ 36 ರುದ್ರಾಕ್ಷಿಗಳನ್ನು, ಗಳ ಅಂದರೆ ಕೊರಳಿನ ಸುತ್ತಲೂ 32 ರುದ್ರಾಕ್ಷಿಗಳನ್ನು, ಕರ್ಣ ಅಂದರೆ ಕಿವಿಗಳಲ್ಲಿ (ಒಂದೊಂದು ಕಿವಿಯಲ್ಲಿ ಎರಡು) ಎರಡು ರುದ್ರಾಕ್ಷಿಗಳನ್ನು, 108 ರುದ್ರಾಕ್ಷಿಗಳಿಂದ ಮಾಡಿದ ರುದ್ರಾಕ್ಷಿಯ ಹಾರವನ್ನು, ಎರಡೂ ತೋಳಿನಲ್ಲಿ ಹದಿನಾರು ರುದ್ರಾಕ್ಷಿಗಳನ್ನು, ಕೈಗಳೆರಡಕ್ಕೂ ಹನ್ನೆರಡು ರುದ್ರಾಕ್ಷಿಗಳನ್ನು ಮತ್ತು ಜಪ ಮಾಡಲು 28 ರುದ್ರಾಕ್ಷಿಗಳನ್ನು ಧರಿಸಿದ ರುದ್ರ ದೇವರು ಸದ್ಯೋನ್ಮುಕ್ತನು, ಅವರಿಗೆ ಉತ್ಪತ್ತಿ ಸ್ಥಿತಿ ಲಯವಿಲ್ಲ. ಅವನು ಸದಾ ಸತ್ಯನು, ಮುಕ್ತನು.
ಆತನೇ ಇಹಲೋಕದಲ್ಲಿಯೂ ಪರಲೋಕದಲ್ಲಿಯೂ ಪೂಜ್ಯನು
ಎಂದು ಶರಣ ಉರಿಲಿಂಗಪೆದ್ದಿಯವರು ಈ ವಚನದಲ್ಲಿ ತಿಳಿಸಿದ್ದಾರೆ.

15 ನೆಯ ಶತಮಾನದ ಎರಡನೆಯ ಅಲ್ಲಮ ರೆಂದೇ ಪ್ರಖ್ಯಾತರಾದ ಎಡೆಯೂರು ಸಿದ್ದಲಿಂಗೇಶ್ವರರು ರುದ್ರಾಕ್ಷಿ ಯ ಮಹತ್ವ ಮಹಿಮೆಯನ್ನು  ಅರುಹಿದ್ದಾರೆ.

#ಪರಶಿವನ ಜ್ಞಾನಚಕ್ಷುವಿನಲ್ಲಿ ಉದಯವಾದ ರುದ್ರಾಕ್ಷೆಯ ಹಸ್ತ ತೋಳು ಉರ ಕಂಠ ಕರ್ಣ ಮಸ್ತಕದಲ್ಲಿ ಧರಿಸಿದ ಶಿವಶರಣನೇ ರುದ್ರನು. ಆ ರುದ್ರಾಕ್ಷೆಯ ಜಪಿಸಿದಾತನೇ ಸದ್ಯೋನ್ಮುಕ್ತನು. 
ಇದು ಕಾರಣ
ಅಜ ಹರ ಸುರ ಮನು ಮುನೀಶ್ವರರು ಶ್ರೀವಿಭೂತಿ ರುದ್ರಾಕ್ಷೆಯನೆ ಧರಿಸಿ ಶಿವಲಿಂಗಾರ್ಚನೆಯ ಮಾಡುತ್ತಿಪ್ಪರು. ಪ್ರಮಥಗಣ ರುದ್ರಗಣ ಮುಖ್ಯವಾದ ಗಣಾದ್ಥೀಶ್ವರರು ವಿಭೂತಿ ರುದ್ರಾಕ್ಷೆಯನೆ ಧರಿಸಿ
ಪ್ರಣವ ಪಂಚಾಕ್ಷರಿಯನೆ ಜಪಿಸಿ
ಪ್ರಣವ ಸ್ವರೂಪಿಗಳಾಗುತ್ತಿಪ್ಪರು. ನೋಡಿದವರು ಮುಟ್ಟಿದವರು ಧರಿಸಿದವರು ಜಪಿಸಿದವರೆಲ್ಲ ಸಕಲ ಪ್ರಪಂಚನಳಿದು ಪರಶಿವ ಸ್ವರೂಪರಪ್ಪುದು ತಪ್ಪದು ನೋಡಾ. ಇದು ಕಾರಣ
ನಾನು ವಿಭೂತಿ ರುದ್ರಾಕ್ಷೆಯನೆ ಧರಿಸಿ
ಶಿವಲಿಂಗಾರ್ಚನೆಯನೆ ಮಾಡಿ ಪ್ರಣವ ಪಂಚಾಕ್ಷರಿಯನೆ ಜಪಿಸುತ್ತಿದ್ದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

Medicinal value of Rudraksh.:
 Rudraksha (Elaeocarpusganitrus) owes an important status for its curative and spiritual benefits. It  is a revered medicinal plants in India. Rudraksha beads were reported to exhibit immense medicinal value due to its electromagnetic properties. Rudraksha beads possess weak ferromagnetic behaviour with marked differences in different mukhi beads magnetization potential. There are scientific evidences about the magnetic characteristics of Rudraksha and their pharmacological mechanism of action.  Rudraksha beads come under "natural magnetic 
wood" It has pharmacological actions against  medical ailments like anxiety, lack of concentration, insomnia, depression, hypertension, palpitation, infertility, rheumatism and asthma.
Bio electric signals and bio electric energy are produced by sensory and moter nerve conduction and every body parts or organs have a special type of bioelectric energy which is necessary for their organs proper working. If it's disturbed, then the organ functioning is also disturbed. 

How Ishtalinga, Drashti Yoga, applying Vibhuti, Chanting Om Nama Shivaya mantra and wearing  Rudrakshi act and correct these bioenergy fields and bring about peace, happiness and behavioural, curative and spiritual benefits  in sadhaka needs further scientific study. Our maths, mahasabhas, samitis should take up this study.🙏
 -✍️ Dr Prema Pangi
#ಪ್ರೇಮಾ_ಪಾಂಗಿ, #ರುದ್ರಾಕ್ಷಿ, #ಅಷ್ಟಾವರಣ
Picture post created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma