ಪಂಚಾಚಾರ - ಶಿವಾಚಾರ
*ಶಿವಾಚಾರ*:
ಮೊದಲಿನ ಮೂರು ಆಚಾರಗಳಾದ ಲಿಂಗಾಚಾರ ಸದಾಚಾರ ಗಣಾಚಾರದ ನಿಷ್ಠೆಯ ಆಚರಣೆಯಿಂದ ಕರಸ್ಥಲದ ಇಷ್ಟಲಿಂಗ, ಕರಸ್ಥಲದಲ್ಲಿ ಮಾತ್ರ ಉಳಿಯದೆ ಅಂತರಂಗವನ್ನೂ ವ್ಯಾಪಿಸಿ
ಪ್ರಾಣಲಿಂಗ ಭಾವಲಿಂಗಗಳ ಅರಿವನ್ನೂ ಅನುಭಾವವನ್ನೂ ತಂದುಕೊಡುತ್ತದೆ. ಲಿಂಗಾಚಾರ ಸದಾಚಾರ ಗಣಾಚಾರಗಳನ್ನು ಅಳವಡಿಸಿಕೊಂಡು ಭಕ್ತಸ್ಥಲ, ಮಹೇಶ್ವರ
ಸ್ಥಲಗಳನ್ನು ದಾಟಿಬಂದ ಸಾಧಕನ ವಿಕಸಿತ ಜೀವನದಲ್ಲಿ, ಶಿವಾಚಾರ ಸಂಯುಕ್ತವಾಗುತ್ತದೆ. ಶಿವಾಚಾರದಲ್ಲಿ ಭಕ್ತಸ್ಥಲದ ಶ್ರದ್ಧಾಭಕ್ತಿ, ಮಹೇಶ್ವರ ಸ್ಥಲದ ನೈಷ್ಠಿಕಾಭಕ್ತಿಗಳನ್ನು ಆಚರಿಸುತ್ತ ಬಂದಂತೆಯೆ, ಶಿವಾಚಾರದ ಅವಧಾನ ಮತ್ತು ಅನುಭಾವ ಭಕ್ತಿಗಳು ಉದಯಿಸಿ ಸಾಧಕನನ್ನು ಒಳಗೊಳ್ಳುತ್ತವೆ. ಶಿವಾಚಾರದಲ್ಲಿ ವ್ಯಕ್ತಿ ತಾನು ಶಿವಸ್ವರೂಪನೆಂದು ಧ್ಯಾನ, ಅನುಭಾವದಿಂದ ಕಂಡುಕೊಳ್ಳುವುದರ ಜೊತೆಗೆಯೇ, ಸಕಲ ಚರಾಚರವು ಶಿವಸ್ವರೂಪವೆಂದು ಅರಿಯುತ್ತಾನೆ. ಅದರ ಉದ್ಧಾರಕ್ಕಾಗಿ
ತನ್ನ ಸಾಧನೆಯನ್ನು ತನ್ನನ್ನೂ ಸಮರ್ಪಿಸಿ ಕೊಳ್ಳುತ್ತಾನೆ. ಶಿವಾಚಾರವು ಅದಕ್ಕೆ ಅನುಗುಣವಾದ ನಡೆ ನುಡಿಗಳನ್ನು ಕೈಗೂಡಿಸಿಕೊಡುತ್ತದೆ. ಷಟ್ಸ್ಥಲದಲ್ಲಿ ಪ್ರಸಾದಿ ಪ್ರಾಣಲಿಂಗಿ ಸ್ಥಲಗಳಲ್ಲಿ ಆ ನಿಲುವನ್ನು ಕಾಣುತ್ತೇವೆ.
ಎಲ್ಲೆಲ್ಲಿಯೂ ಶಿವಸ್ವರೂಪವನ್ನು ಕಾಣುವುದೇ ಶಿವಾಚಾರ. ತಾನು ಶಿವಸ್ವರೂಪ
ನೆಂಬುದು ಮಾತ್ರವಲ್ಲ; ಸಕಲ ಚರಾಚರ ಜಗತ್ತನ್ನೆಲ್ಲಾ ಅವನ ಪ್ರಸಾದ, ಅವನ ಪ್ರತೀಕ ಎಂಬುದನ್ನು ಕಂಡುಕೊಳ್ಳುವುದು ಶಿವಾಚಾರ. ಆಗ ಸಾಧಕನಿಗೆ ಸಾಮಾಜಿಕವಾದ ಮೇಲೂ ಕೀಳುಗಳೂ ತಾರತಮ್ಯಗಳೂ ಇಲ್ಲವಾಗುತ್ತವೆ. ಎಲ್ಲರನ್ನೂ ಸಮಭಾವನೆಯಿಂದ ಕಾಣುತ್ತಾನೆ.
#“....ಲಿಂಗಾಚಾರವೇ ಪ್ರಾಣವಾಗಿ, ಬ್ರಾಹ್ಮಣಾದಿ
ಚಾಂಡಾಲಾಂತ್ಯಮಾದ ಅಷ್ಟಾದಶವರ್ಣಾಶ್ರಮದ ಕುಲದಲ್ಲಿ ಹುಟ್ಟಿ, ಪೂರ್ವ ಜಾತಿ ಮಂತ್ರಂಗಳಂ ಬಿಟ್ಟು ಗುರುಕರಜಾತರಾಗಿ ಇಷ್ಟಲಿಂಗ ಸಂಬಂಧಿಗಳಾಗಿ, ಭಕ್ತ ಜಂಗಮ
ಲಾಂಛನ ಯುಕ್ತರಾಗಿ ಆಚರಿಸುತ್ತಿಪ್ಪ ಶಿವಭಕ್ತ ಜಂಗಮರ ಪೂರ್ವಕುಲ ವರ್ಣಾಶ್ರಮಗಳ ವಿಚಾರಿಸದೆ, ಸಮಯಾಚಾರದಿಂದ ಲಿಂಗಾರ್ಪಿತ ಮಾಡುವುದೇ ಶಿವಾಚಾರವು”.
ಶರಣರು ಜಾತಿಯ ಕಟ್ಟುಗಳನ್ನು ಕತ್ತರಿಸಿ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿ
ಕೊಟ್ಟರು. ಎಲ್ಲರಲ್ಲೂ ಶಿವನ ಅಂಶವನ್ನೇ ಕಂಡ ಶರಣರಿಗೆ ಜಾತಿಯ ಬೇಧಭಾವ ಒಪ್ಪಿಕೊಳ್ಳುವುದು ಸಾಧ್ಯವಾಗಲಿಲ್ಲ.
#ಶ್ವಪಚನಾದಡೇನು ಲಿಂಗಭಕ್ತನೇ ಕುಲಜನು.
ನಂಬಿ ನಂಬದಿದ್ದಡೆ ಸಂದೇಹಿ, ನೋಡಾ.
ಕಟ್ಟಿದಡೇನು, ಮುಟ್ಟಿದಡೇನು, ಹೂಸಿದಡೇನು ಮನಮುಟ್ಟದನ್ನಕ್ಕ
ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು,
ಕೂಡಲಸಂಗಮದೇವ ಒಲಿದಂಗಲ್ಲದೆ. / 1224
ಭಾವಶುದ್ಧ ಇಲ್ಲದವರಲ್ಲಿ ಭಕ್ತಿ ನೆಲೆಗೊಳ್ಳದು,
ಎನ್ನುತ್ತಾರೆ ಬಸವಣ್ಣನವರು. ಭಾವಶುದ್ಧಿಯಿಂದ ಭಕ್ತಿನೆಲೆಗೊಂಡು ಶಿವನ ಒಲುಮೆ ಪಡೆದವರೆಲ್ಲರೂ ಶಿವಸ್ವರೂಪರು. ಅವರ ನಡೆಯೊಂದು ನುಡಿಯೊಂದು ಬೇರೆಯಾದರೆ ಶಿವಾಚಾರಕ್ಕವರು ಸಲ್ಲರು.
#ಶಿವಾಚಾರವೆಂಬುದೊಂದು ಬಾಳಬಾಯ ಧಾರೆ;
ಲಿಂಗ ಮೆಚ್ಚಬೇಕು, ಜಂಗಮ ಮೆಚ್ಚಬೇಕು,
ಪ್ರಸಾದ ಮೆಚ್ಚಿ ತನ್ನಲ್ಲಿ ಸ್ವಾಯತವಾಗಿರಬೇಕು.
ಬಿಚ್ಚಿ ಬೇರಾದಡೆ ಮೆಚ್ಚ ನಮ್ಮ ಕೂಡಲಸಂಗಮದೇವ / 1209
ಎಂಬ ಮಾತಿನಲ್ಲಿ ಬಸವಣ್ಣನವರು ಶಿವಾಚಾರದ ರಹಸ್ಯವನ್ನು ಹೇಳಿದ್ದಾರೆ. ಶಿವಾಚಾರದಲ್ಲಿ ಕಂಡುಬರುವ ಸಾಮಾಜಿಕ ಸಮಾನತೆ ಸಂಪೂರ್ಣವಾಗಿ ಸಾಧಿತವಾಗಬೇಕಾದರೆ ಅದು ಕೇವಲ ಮಾತು ಪ್ರತಿಪಾದನೆಗಳಿಂದ ಆಗಲಾರದು. ವೈಯಕ್ತಿಕವಾದ ವಿಕಾಸದಿಂದ ಅದು ನಡೆನುಡಿಗಳಲ್ಲಿ ಅಳವಡಬೇಕು. ಲಿಂಗ
ಜಂಗಮ ಮೆಚ್ಚುವಂತೆ ನಡೆದು,
ಪ್ರಸಾದವನ್ನು ಸ್ವಾಯತ ಮಾಡಿಕೊಂಡವರು ಶಿವಾಚಾರಿಗಳು. ಅವರು ಸಾಕ್ಷಾತ್ ಶಿವಸ್ವರೂಪರು. ಎಲ್ಲೆಲ್ಲಿಯೂ ಶಿವಸ್ವರೂಪವನ್ನೇ ಕಾಣಬಲ್ಲ ಶಿವಯೋಗಿಗಳು.
ಶಿವೈಕ್ಯ ಭಾವವುಳ್ಳವರಿಗೆ ಪುಣ್ಯಾತ್ಮನೇ ಆಗಲಿ, ಪಾಪಾತ್ಮನೇ ಆಗಲಿ, ಬ್ರಾಹ್ಮಣನೇ ಆಗಲಿ, ಅಂತ್ಯಜನೇ ಆಗಲಿ, ಎಲ್ಲರೂ ಸಮಾನರಾಗುವರು.
“ಸರ್ವಂ ಲಿಂಗಮಯಂ ಜಗತ್” ಎಂಬುದನ್ನು ಬೌದ್ಧಿಕವಾಗಿ ಮಾತ್ರವಲ್ಲ, ಅನುಭವಪೂರ್ವಕವಾಗಿ ಅರಿವಿಗೆ ತಂದುಕೊಡುತ್ತದೆ ಶಿವಾಚಾರ.
ದೃಢನಿಷ್ಠೆಯಿಂದ ಸಕಲ ಸೃಷ್ಟಿಯನ್ನೇ ಪರಿವರ್ತಿತ ಸ್ವರೂಪದಲ್ಲಿ ಭಾವಿಸುತ್ತಾ ಸಾಧನೆಯಲ್ಲಿ ಮುಂದುವರೆದ ಭಕ್ತ ಅವುಗಳನ್ನೆಲ್ಲಾ ಶಿವಸ್ವರೂಪವನ್ನಾಗಿಯೇ ಕಾಣುವ ಶಿವಾಚಾರದ ಶಿವದೃಷ್ಟಿಯನ್ನು ಪಡೆಯುತ್ತಾನೆ. ಪ್ರಸಾದಿ ಪ್ರಾಣಲಿಂಗಿ ಸ್ಥಲಗಳ ನಿಲವು ಶಿವಾಚಾರದಲ್ಲಿ ಕಂಡುಬರುತ್ತದೆ.
- ✍️Dr Prema Pangi
Comments
Post a Comment