ಶರಣ ಪರಿಚಯ : ನುಲಿಯ ಚಂದಯ್ಯ
12 ನೆಯ ಶತಮಾನದ ಕಾಯಕಯೋಗಿ ಶರಣರು.
ಅಂಕಿತನಾಮ: ಚಂದೇಶ್ವರಲಿಂಗ
ಕಾಯಕ: ನುಲಿಯ ಕಾಯಕ.
ಹಗ್ಗ ಹೊಸೆದು ಮಾರುವುದು.
ಕಾಯಕಯೋಗಿ ಶರಣ ನುಲಿಯ ಚಂದಯ್ಯನವರು ಕಲ್ಯಾಣ ರಾಜ್ಯದ ಹೊರವಲಯದ ಕೆರೆಯ ಹಿನ್ನಿರ ದಡದಲ್ಲಿ ಬೆಳೆದ ಸೊಗಸಾದ ಹುಲ್ಲು ತಂದು ಹಗ್ಗ ಹೊಸೆದು, ಮಾರಿ ಬಂದ ಹಣದಿಂದ ಗುರು, ಜಂಗಮ ದಾಸೋಹ ನಡೆಸುತ್ತಿದ್ದರು.
ಕಾಲ : 1160.
ಹುಟ್ಟು : ಬಿಜಾಪುರ ಜಿಲ್ಲೆಯ ಶಿವಣಗಿ ಈತನ ಹುಟ್ಟೂರು.
ಲಿಂಗೈಕ್ಯ : ಚಿತ್ರದುರ್ಗದಿಂದ ಹೊಳಲ್ಕೆರೆಗೆ ಬರುವ ಮಾರ್ಗದ ನುಲೆನೂರು ಗ್ರಾಮದಲ್ಲಿ ಅನುಷ್ಠಾನ ಮಾಡಿ ಅಲ್ಲಿಯೇ ಲಿಂಗೈಕ್ಯರಾದರು.
ಚಂದಯ್ಯನವರ ತಂದೆ, ತಾಯಿ, ಗುರು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ.
'ಚಂದೇಶ್ವರ' ಅಂಕಿತದಲ್ಲಿ 48 ವಚನಗಳು ದೊರೆತಿವೆ. ಎಲ್ಲವೂ ಕಾಯಕದ ಮೌಲ್ಯವನ್ನು ಎತ್ತಿ ಹಿಡಿಯುತ್ತವೆ.
*ಇವರ ವಚನಗಳ ಸಾರ* :
ಗುರು, ಲಿಂಗ, ಜಂಗಮ ಎಲ್ಲರಿಗೂ ಕಾಯಕ ಕಡ್ಡಾಯ. ಭಾವ ಶುದ್ಧವಾಗಿ ಮಾಡುವುದೇ ನಿಜವಾದ ಕಾಯಕ. ಕಾಯಕಕ್ಕೆ ಸಮನಾದ ಕೂಲಿಯನ್ನು ಕೊಳ್ಳಬೇಕಲ್ಲದೆ ದುರಾಶೆ ಪಡಬಾರದು.
ಪುರಾಣ ಕಾವ್ಯಗಳಲ್ಲಿ ಚಂದಯ್ಯನ ಬದುಕಿನ ಘಟನೆಗಳು:
ಹುಲ್ಲು ಕೊಯ್ಯುವ ಕಾಯಕದಲ್ಲಿ ನಿರತರಾಗಿರುವಾಗ ಚಂದಯ್ಯನನ್ನು ಪರೀಕ್ಷಿಸಲು ಇಷ್ಟಲಿಂಗ ಹರಿದು ಜಾರಿ ಕೆಳಗೆ ಬೀಳುತ್ತದೆ. ಬಿದ್ದರೂ ಲೆಕ್ಕಿಸದೆ, ಎತ್ತಿಕೊಳ್ಳದೆ ಕಾಯಕ ಮುಂದುವರಿಸುತ್ತಾರೆ. ಕೊನೆಗೆ ಇಷ್ಟಲಿಂಗವೇ ನಾನು ಬಂದೆನು ಎಂದು ಚಂದಯ್ಯನ ಬೆನ್ನುಹತ್ತಿ ಬಂದಿತೆಂದು ತಿಳಿದು ಬರುತ್ತದೆ. ಮುನ್ನಡೆದ ಚಂದಯ್ಯನನ್ನು ಲಿಂಗವು ‘ನೀನೊಲ್ಲೆನೆಂದೊಡೆ ನಾ ಬಿಡೆ’ ಎಂದು ಹಿಂಬಾಲಿಸುತ್ತದೆ. ಕೊನೆಗೆ ನ್ಯಾಯ ಮಾಚಿದೇವರ ಮಧ್ಯಸ್ಥಿಕೆಯಲ್ಲಿ ಜಂಗಮ ಸೇವೆಗೆ ಲಿಂಗಯ್ಯ ನೆರವಾಗುವ ಕರಾರಿನ ಮೇಲೆ ಲಿಂಗ ಧರಿಸಲು ಒಪ್ಪುತ್ತಾರೆ. ಹುಲ್ಲನ್ನು ಚಂದಯ್ಯನ ಮನೆಗೆ ಹೊತ್ತು, ಹೊಸೆದು, ಮಾರಲು ತೆಗೆದುಕೊಂಡು ಹೋಗಬೇಕಾಗುತ್ತದೆ.
ಇಷ್ಟಲಿಂಗದ ಕೈಯಿಂದಲೇ ಹಗ್ಗ ಮಾರುವ ಕಾಯಕ ಮಾಡಿಸಿದವನೀತ ಎಂಬುದು ಈ ಕಥೆ .
ಲಿಂಗಯ್ಯ, ಮನೆಯ ಮಗನಾಗಿ ಇರುತ್ತಾನೆ. ಚಂದಯ್ಯನವರು ಹೊಸೆದ ಕಣ್ಣಿಗಳನ್ನ ಮಾರಿಕೊಂಡು ಬರಲು ಹೇಳುತ್ತಾರೆ. ಆವಾಗ ಲಿಂಗಯ್ಯ ಅಪ್ಪ ಬಸವಣ್ಣನವರ ಮನೆಗೆ ಹೋಗಿ ಕಣ್ಣಿಗಳನ್ನ ಮಾರಾಟ ಮಾಡಿ ಅದರ ಬೆಲೆಗಿಂತ ಜಾಸ್ತಿ ದುಡ್ಡು ತಂದಿರುತ್ತಾರೆ. ಅದನ್ನ ನೋಡಿದ ಚಂದಯ್ಯನವರು ಕೋಪಗೊಂಡು.
ಝಂಕಿಸುತ್ತಾರೆ. ಒಂದು ಕಣ್ಣಿ (ಹಗ್ಗ)ಕ್ಕೆ ಯಾರೊ ಸಾವಿರ ಹೊನ್ನು ಕೊಟ್ಟರೆಂದು ಅದನ್ನ ಹೊತ್ತು ತರಲು ನಿನಗೆ ಬುದ್ದಿ ಕೆಟ್ಟಿದೆಯೇ ಲಿಂಗಯ್ಯ? ಅಂತ, ಕಾಯಕಕ್ಕೆ ಸಮನಾದ ಕೂಲಿಯನ್ನು ಕೊಳ್ಳಬೇಕಲ್ಲದೆ ದುರಾಶೆ ಪಡಬಾರದು ಅಂತ ಕಾಯಕ ನಿಷ್ಠೆಯನ್ನ ಮೆರೆಯುತ್ತಾರೆ. ಲಿಂಗಯ್ಯಗೆ ಕಾಯಕ ಪ್ರತಿಫಲದ ಪ್ರಜ್ಞೆಯ ಪಾಠ ಮಾಡಿದ ಶ್ರೇಷ್ಠ ಅನುಭಾವಿಗಳು ನುಲಿಯ ಚಂದಯ್ಯನವರು.
ಲಿಂಗಯ್ಯನ ಅವಶ್ಯಕತೆಯಿಲ್ಲವೆಂದು ಅನುಭವ ಮಂಟಪದಲ್ಲಿ ಹೇಳಿದಾಗ ಅಲ್ಲಿನ ಶರಣರು ಚಂದಯ್ಯನಿಗೆ ಲಿಂಗ ಧರಿಸಲು ಸೂಚಿಸುತ್ತಾರೆ.
ಶರಣ ಹೆಂಡದ ಮಾರಯ್ಯನವರು ತನ್ನೊಂದು ವಚನದಲ್ಲಿ ,"ನುಲಿಯೊಡೆಯರೆ ನಿಮ್ಮಾಳ್ದರ ಕೊಳ್ಳಿರೆ. ಆಳ್ದರೆಂದವರಾರು ?" ಎಂದು ಇವರ ಘನವ್ಯಕ್ತಿತ್ವವನ್ನು ನಿರೂಪಿಸಿದ್ದಾರೆ.
ಕಲ್ಯಾಣ ಕ್ರಾಂತಿಯ ಸಮಯದಲ್ಲಿ
ವಚನ ಸಾಹಿತ್ಯ ಸಂರಕ್ಷಣೆಗಾಗಿ ವಚನ ಸಾಹಿತ್ಯದ ಕಟ್ಟುಗಳನ್ನು ಹೊತ್ತು ಅಕ್ಕನಾಗಮ್ಮ, ಚನ್ನಬಸವಣ್ಣ ನೇತೃತ್ವದಲ್ಲಿ ಶರಣರು ಉಳವಿಯತ್ತ ತೆರಳುತ್ತಾರೆ.
ನುಲಿಯ ಚಂದಯ್ಯನವರು ಕಲ್ಯಾಣ ರಕ್ತಕ್ರಾಂತಿಯ ಸಮಯದಲ್ಲಿ ಕಲ್ಯಾಣದಲ್ಲಿ ಇರದ ಕಾರಣ ಎಲ್ಲ ಶರಣರ ಜೊತೆಯಲ್ಲಿ ಉಳವಿಗೆ ಹೋಗಿರುವುದಿಲ್ಲ. ಕಲ್ಯಾಣ ಕ್ರಾಂತಿಯ ವಿಷಯ ತಿಳಿದು ಬಹಳ ನೊಂದು ಶರಣರನ್ನು ಕೂಡಿಕೊಳ್ಳಲು ಒಬ್ಬರೇ ಉಳವಿ ಕಡೆ ಬರುತ್ತಾರೆ. ಚಂದಯ್ಯನವರು ಬರುವಷ್ಟರಲ್ಲಿ ಬಹುತೇಕ ಎಲ್ಲಾ ಶರಣರು ವಚನ ಸಾಹಿತ್ಯದ ಉಳಿವಿಗಾಗಿ ಕೊನೆ ಉಸಿರಿರುವತನಕ ಹೋರಾಡಿ ಲಿಂಗೈಕ್ಯರಾಗಿರುತ್ತಾರೆ. ಉಳವಿಯಲ್ಲಿ ನೆಲೆನಿಂತ 6 ತಿಂಗಳಲ್ಲಿ ಚನ್ನಬಸವಣ್ಣನವರು ಲಿಂಗೈಕ್ಯರಾಗುತ್ತಾರೆ. ಇನ್ನು ಲಿಂಗಾಯತ ಧರ್ಮವನ್ನು ಬೆಳಸುವ, ಪಸರಿಸುವ ಹೊಣೆಯು ಅಕ್ಕನಾಗಮ್ಮ ತಾಯಿಯ ಮೇಲಿರುತ್ತದೆ. ಅಕ್ಕನಾಗಲಾಂಬಿಕೆ ತಾಯಿಯ ಸಾಧನೆ ಅದಾಗಲೇ ಎಲ್ಲ ಕಡೆ ಹರಡಿರುತ್ತದೆ ಅದಕ್ಕಾಗಿ ಶರಣ ರೇಚಣ್ಣನವರನ್ನ ಉಳವಿಯಲ್ಲೆ ಬಿಟ್ಟು, ನುಲಿಯ ಚಂದಯ್ಯನವರು ಅಕ್ಕನಾಗಲಾಂಬಿಕೆ ತಾಯಿವರನ್ನ ಒಡಗೂಡಿ ಧರ್ಮ ಪ್ರಸಾರ ಮಾಡುತ್ತಾ ಭದ್ರಾವತಿ ಸಮೀಪದ ತರೀಕೆರೆಗೆ ಬರುತ್ತಾರೆ. ನುಲಿಯ ಚಂದಯ್ಯ ಮುಂತಾದ ಶರಣರು ಧರ್ಮ ಪ್ರಚಾರ ಮಾಡುತ್ತಾ ತರೀಕೆರೆಯ ಸುತ್ತ ಸಂಚರಿಸುತ್ತಾರೆ.
ಅಕ್ಕನಾಗಲಾಂಬಿಕೆ ತಾಯಿಯವರಿಗೆ ಎಣ್ಣೆಹೊಳೆಯಲ್ಲಿಯೇ ಒಂದು ಮಠವನ್ನು ಸಿದ್ದವೀರಸ್ವಾಮಿ ಎಂಬುವವರು ಕಟ್ಟಿಸಿ ಕೊಡುತ್ತಾರೆ. ಅಕ್ಕನಾಗಮ್ಮ ಎಣ್ಣೆಹೊಳೆ ಮಠದಲ್ಲಿ ಲಿಂಗಾನುಷ್ಠಾನ ಮಾಡುತ್ತ
ಲಿಂಗೈಕ್ಯರಾಗುತ್ತಾರೆ.
ನುಲಿಯ ಚಂದಯ್ಯ ತರೀಕೆರೆ ಸಮೀಪದ ಕಲ್ಲತ್ತಗಿರಿ, ನಂದಿ ಎಂಬಲ್ಲಿ ಕೆಲವು ಕಾಲ ಇದ್ದು ಧರ್ಮ ಪ್ರಸಾರ ಮಾಡುತ್ತ ಆ ಭಾಗದ ಅನೇಕರಿಗೆ ಶರಣಧರ್ಮ ಬೋಧಿಸುತ್ತಾರೆ. ದುಮ್ಮಿರಾಯನ ಪತ್ನಿ ಪದ್ಮಾವತಿ, ಚಂದಯ್ಯನವರಿಂದ ದೀಕ್ಷೆ, ಧರ್ಮೊಪದೇಶವನ್ನ ಪಡೆದು, ಅವರ ಅಪ್ಪಣೆ ಮೇರೆಗೆ ಒಂದು ಕೆರೆಯನ್ನು ಕಟ್ಡಿಸುತ್ತಾರೆ. ಆ ಕೆರೆಗೆ ಇಂದಿಗೂ ಪದ್ಮಾವತಿ ಕೆರೆ ಅಂತ ಹೆಸರಿದೆ. ಕೆರೆ ಸಿದ್ಧವಾದ ಮೇಲೆ ಕೆರೆಯ ಏರಿಯ ಮೇಲೊಂದು ಶರಣ ಚಂದಯ್ಯನವರಿಗೊಸ್ಕರ ಮೂರಂಕಣದ ಮಠವೊಂದನ್ನ ಕಟ್ಟಿಸಿಕೊಡುತ್ತಾರೆ. ಆ ಮಠದಲ್ಲಿ ಚಂದಯ್ಯ ಶರಣರು ಜೀವನದ ಕೊನೆಯವರೆಗೂ ಅನುಭಾವ ಗೋಷ್ಠಿ ನಡೆಸುತಿದ್ದರು. ಕೆಲವು ವರ್ಷಗಳ ನಂತರ ಶರಣ ಚಂದಯ್ಯನವರು ಲಿಂಗೈಕ್ಯರಾಗಲು ಅವರ ಕ್ರಿಯಾ ಸಮಾಧಿಯನ್ನು ಅವರ ಮಠದಲ್ಲೇ ಮಾಡಿದರು. ಇವರ ಲಿಂಗೈಕ್ಯದ ನಂತರ ಪದ್ಮಾವತಿ ಊರು ನುಲಿಯ ಚಂದಯ್ಯನವರ ಕಾಯಕ ಸೂಚಿಸುವ 'ನುಲೆನೂರು' ಎಂದಾಗಿ ಕರೆಸಿಕೊಳ್ಳುತ್ತಿದೆ. ನುಲೇನೂರಿನಲ್ಲಿ ಚಂದಯ್ಯನವರು ನೆಲೆನಿಂತು ಶಿವಾನುಭವ ಗೋಷ್ಠಿ ನಡೆಸುತ್ತಿದ್ದರೆಂದು ತಿಳಿಸುವ ಜಾನಪದ ಸಾಹಿತ್ಯ ಇಂದಿಗೂ ಅಲ್ಲಿ ಕಂಡು ಬರುತ್ತದೆ
ನುಲಿಯ ಚಂದಯ್ಯನವರಿಗೆ ಸಂಬಂಧಿಸಿದ ಶಿಲಾಶಾಸನಗಳು ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಶಿಲಾ ಮಂಟಪದ ಕೆಳಭಾಗದಲ್ಲಿ ಇವರ ವಿಗ್ರಹ ಮತ್ತು ಹೆಸರು ಕೆತ್ತಲಾಗಿದೆ. ಅದರಲ್ಲಿ ನುಲಿಯ ಚಂದಯ್ಯನವರ, ಅಗ್ಗವಣಿಯ ಹೊನ್ನಯ್ಯ, ಮೋಳಿಗೆ ಮಾರಯ್ಯ, ಹಡಪದ ಅಪ್ಪಣ್ಣ, ಜೇಡರ ದಾಸಿಮಯ್ಯ, ಆಯ್ದಕಿ ಮಾರಯ್ಯ, ಹಾಳಿನ ಹಂಪಣ್ಣ, ಬ್ರಹ್ಮಯ್ಯ ಮೂರ್ತಿಗಳನ್ನ ಅವರವರ ಅಂಕಿತ ನಾಮದೊಡನೆ ಕೆತ್ತಿದ್ದಾರೆ. ನುಲಿಯ ಚಂದಯ್ಯನವರ ಜೀವನವು ಬಸವ ಪುರಾಣ, ಶೂನ್ಯಸಂಪಾದನೆ, ಚನ್ನಬಸವಪುರಾಣ ಮುಂತಾದವುಗಳಲ್ಲಿ ಉಲ್ಲೇಖವಾಗಿದೆ.
ಪ್ರತಿವರ್ಷ ಜೇಷ್ಠ ಮಾಸದ ಕೊನೆಗೆ ಚಂದಯ್ಯನವರ ಜಯಂತಿ ಆಚರಿಸಲಾಗುತ್ತದೆ. ಬಸವಕಲ್ಯಾಣದಲ್ಲಿದ್ದಾಗ ನಿತ್ಯ ಅನುಷ್ಠಾನ ಮಾಡುತ್ತಿದ್ದ ಗವಿಯನ್ನು ನುಲಿಯ ಚಂದಯ್ಯ ಗವಿ ಎಂದು ಈಗಲೂ ಅಲ್ಲಿ ನಿತ್ಯ ಪೂಜೆ ಮಾಡುತ್ತಾರೆ.
ನುಲಿಯ ಚಂದಯ್ಯ ಶರಣರ ವಚನಗಳು:
1. ವಚನ
#ಸತ್ಯ ಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ
ಚಿತ್ತ ವಿಚ್ಛಂದವಾಗದಿರಬೇಕು.
ನೇಮದ ಕೂಲಿಯಂದಿನ ನಿತ್ಯ ನೇಮದಲ್ಲಿ ಸಂದಿಲ್ಲದಿರಬೇಕು.
ನೇಮದ ಕೂಲಿಯ ಬಿಟ್ಟು ಹೇಮದಾಸೆಗೆ ಕಾಮಿಸಿ ದ್ರವ್ಯವ ಹಿಡಿದಡೆ
ತಾ ಮಾಡುವ ಸೇವೆ ನಷ್ಟವಯ್ಯಾ.
ನಿನ್ನಾಸೆಯ ವೇಷದ ಪಾಶಕ್ಕೆ ನೀನೆ ಹೋಗು.
ನನಗೆ ನಮ್ಮ ಜಂಗಮದ ಪ್ರಸಾದದಾಗೆ
ಚಂದೇಶ್ವರಲಿಂಗಕ್ಕೆ ಪ್ರಾಣವಯ್ಯಾ.
-ಶರಣ ನುಲಿಯ ಚಂದಯ್ಯ
ಅರ್ಥ:
ಸತ್ಯ ಶುದ್ಧ ಕಾಯಕದಿಂದ ಬಂದ ಗಳಿಕೆ ಯಿಂದ ಸಮಾಜ ಸೇವೆ ಮಾಡಿ ಸಂತೃಪ್ತ ನಾಗಿದ್ದೇನೆ. ಚಂದೇಶ್ವರಲಿಂಗಕ್ಕೆ ಜಂಗಮ ಪ್ರಸಾದ ವೇ ಪ್ರಾಣ. ಅದೇ ಲಿಂಗ ಪೂಜೆ. ಅದೇ ಲಿಂಗ ಪ್ರಸಾದ. ಆಶಯ ವೇಷದ ಪಾಶದಿಂದ ನಾನು ದೂರ. ದುಡಿದು ಗಳಿಸುವದನ್ನು ಬಿಟ್ಟು ದುಡಿಯದೆ ಗಳಿಸುವ ಹೇಮ ಧನದಾಸೆ ನನಗೆ ಬೇಡ ಎನ್ನುತ್ತಾರೆ ನುಲಿಯ ಚಂದಯ್ಯ ಶರಣರು.
2. ವಚನ
ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.
ಗುರುವಾದಡೂ ಚರಸೇವೆಯ ಮಾಡಬೇಕು.
ಲಿಂಗವಾದಡೂ ಚರಸೇವೆಯ ಮಾಡಬೇಕು.
ಜಂಗಮವಾದಡೂ ಚರಸೇವೆಯ ಮಾಡಬೇಕು
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು.
-ಶರಣ ನುಲಿಯ ಚಂದಯ್ಯ
ಅರ್ಥ:
ಈ ವಚನ ಕಾಯಕದ ಮೌಲ್ಯವನ್ನು ಎತ್ತಿ ಹಿಡಿಯುತ್ತವೆ. ಗುರು, ಲಿಂಗ, ಜಂಗಮರೆಲ್ಲರಿಗೂ ಕಾಯಕ ಕಡ್ಡಾಯ. ಭಾವ ಶುದ್ಧವಾಗಿ ಮಾಡುವುದೇ ನಿಜವಾದ ಕಾಯಕ. ಕಾಯಕ ಸತ್ಯ ಶುದ್ಧ ವಾಗಿರಬೇಕು. ಕಾಯಕದಿಂದ ಬಂದುದು ಮಾತ್ರ ಲಿಂಗಾರ್ಪಿತವಾಗುತ್ತದೆ.
3. ವಚನ
#ಎನ್ನಂಗದ ಸತ್ಕ್ರೀ ಸಂಗನಬಸವಣ್ಣನು
ಎನ್ನ ಲಿಂಗದ ಸತ್ಕ್ರೀ ಚನ್ನಬಸವಣ್ಣನು.
ಎನ್ನ ಅರುಹಿನ ಸತ್ಕ್ರೀ ಪ್ರಭುವೆ ನೀವು ನೋಡಾ!
ಎನ್ನ ದಾಸೋಹದ ನೈಷ್ಠೆಯೇ ಮಡಿವಾಳಯ್ಯನು!
ಇಂತೀ ಅಂಗ ಲಿಂಗ ಜ್ಞಾನ ದಾಸೋಹ
ಇವು ಮುಂತಾದವೆಲ್ಲವೂ ನಿಮ್ಮ ಪುರಾತನರಾದ ಕಾರಣ
ಚಂದೇಶ್ವರಲಿಂಗದಲ್ಲಿ ಚನ್ನಬಸವಣ್ಣನ ಕೃಪೆಯಿಂದ
ನಿಮ್ಮ ಶ್ರೀಪಾದವ ಬೆರಸಿದೆನಯ್ಯಾ ಪ್ರಭುವೇ!
- ನುಲಿಯ ಚಂದಯ್ಯ
ಅರ್ಥ:
ನನ್ನ ಅಂಗದ ಸತ್ ಕ್ರಿಯೆ ಸಂಗನಬಸವಣ್ಣನು
ನನ್ನ ಲಿಂಗದ ಸತ್ ಕ್ರಿಯೆ ಚನ್ನಬಸವಣ್ಣನು.
ನನ್ನ ಅರುಹಿನ ಸತ್ ಕ್ರಿಯೆ ಪ್ರಭುವೆ ನೀವು !
ನನ್ನ ದಾಸೋಹದ ನೈಷ್ಠೆ ಮಡಿವಾಳಯ್ಯನು!
ಹೀಗೆ ನಾನು ಮಾಡುತ್ತಿರುವ ಅಂಗ ಲಿಂಗ ಜ್ಞಾನ ದಾಸೋಹದ ಸತ್ ಕ್ರಿಯೆಗಳಿಗೆ ಈ ಶರಣಗುರು ಗಳು ಮಾರ್ಗದರ್ಶಕರು, ಕಾರಣಿ ಭೂತರು. ಅವರೆಲ್ಲರ ಕೃಪೆಯಿಂದ ಮತ್ತು ಚೆನ್ನ ಬಸವಣ್ಣನವರು ಮಾಡಿದ ದೀಕ್ಷೆಯ ಕೃಪೆಯಿಂದ ನಿಮ್ಮ ಶ್ರಿಪಾದವ ಬೆರೆಸಿದೆ ಎಂದು ಅಲ್ಲಮಪ್ರಭು ಗಳಿಗೆ ಅರಹುತ್ತಾರೆ.
4. ವಚನ
ಬೆಳೆದ ಹೊಡಕೆಯಹುಲ್ಲ ಕೊಯ್ದು
ಮತ್ತಮಾ ಕಣ್ಣ ತೆಗೆದು, ಕಣ್ಣಿಯ ಮಾಡಿ
ಇಹಪರವೆಂಬ ಉಭಯದ ಗಂಟನಿಕ್ಕಿ
ತುದಿಯಲ್ಲಿ ಮಾಟಕೂಟವೆಂಬ ಮನದ ಕುಣಿಕೆಯಲ್ಲಿ
ಕಾಯಕವಾಯಿತ್ತು.
ಇದು ಕಾರಣ ಚಂದೇಶ್ವರಲಿಂಗವೆಂಬ ಭಾವವೆನಗಿಲ್ಲ
- ನುಲಿಯ ಚಂದಯ್ಯ
ಅರ್ಥ:
ತಮ್ಮ ಕಾಯಕದ ಪರಿಭಾಷೆಯಲ್ಲಿ ಸಂಸಾರ, ಜೀವನ ಚಕ್ರ ವಿವೇಚಿಸಿದ್ದಾರೆ.
"ಕಾಯಕವೇ ನನ್ನ ಲಿಂಗಭಾವ" ಎಂದು ಲಿಂಗಪೂಜೆಗಿಂತ ಕಾಯಕವೇ ಮಹತ್ವದ್ದು ತಮಗೆ ಎಂದು ತಿಳಿಸಿದ್ದಾರೆ.
5.ವಚನ:
#ಕಾರೆಯ ಸೊಪ್ಪಾದರೂ
ಕಾಯಕದಿಂದ ಬಂದುದು ಲಿಂಗಕ್ಕರ್ಪಿತವಲ್ಲದೆ
ದುರಾಶೆಯಿಂದ ಬಂದುದು ಅನರ್ಪಿತ.
ಇದು ಕಾರಣ ಸತ್ಯಶುದ್ಧ ಕಾಯಕದ ನಿತ್ಯದ್ರವ್ಯವಾದರೆ
ಚಂದ್ರೇಶ್ವರಲಿಂಗಕ್ಕೆ ನೈವೇದ್ಯ ಸಂದಿತ್ತು ಕೇಳಯ್ಯಾ,
-- ನುಲಿಯ ಚಂದಯ್ಯ
ಅರ್ಥ:
ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದುದು ಮಾತ್ರ ಲಿಂಗಾರ್ಪಿತವಾಗುತ್ತದೆ. ಎಂಬಂಥ ಮಾತುಗಳಲ್ಲಿ ಇವರ ಕಾಯಕದ ಪರಿಕಲ್ಪನೆ ಸ್ಪಷ್ಟವಾಗಿದೆ. ಸತ್ಯ ಶುದ್ಧ ಕಾಯಕದಿಂದ ಬಂದ ಸೊಪ್ಪಿನ ಎಲೆಗಳು ಲಿಂಗಕ್ಕೆ ನೇವಿದ್ಯೆ ಯಾಗಿ ಅರ್ಪಿತ ವಾಗುತ್ತವೆ. ಆದರೆ ದುರಾಶೇ ಮೋಸ ದಿಂದ ಗಳಿಸಿದ ಧನ ಸಂಪತ್ತು ಲಿಂಗ ಪೂಜೆಯಲ್ಲಿ ನೇವಿದ್ಯೆ ಯಾಗಿ ಅರ್ಪಿತ ವಾಗುವದಿಲ್ಲ. ಲಿಂಗನಿಷ್ಟೆಗಿಂತ ಕಾಯಕನಿಷ್ಠೆಯೇ ಮೇಲು ಎಂದು ಸಾರಿದ ಶ್ರೇಷ್ಟ ಅನುಭಾವಿ ಶರಣರು ನುಲಿಯ ಚಂದಯ್ಯನವರು.
-✍️ Dr Prema Pangi
Comments
Post a Comment