ವಚನ ದಾಸೋಹ - ಗುರು ಸ್ವಾಯತವಾದ ಬಳಿಕ
#ಗುರು ಸ್ವಾಯತವಾದಬಳಿಕ ಗುರುವ ಮರೆಯಬೇಕಯ್ಯಾ
ಲಿಂಗ ಸ್ವಾಯತವಾದ ಬಳಿಕ ಲಿಂಗವ ಮರೆಯಬೇಕಯ್ಯಾ
ಜಂಗಮಸ್ವಾಯತವಾದ ಬಳಿಕ ಜಂಗಮವ ಮರೆಯಬೇಕಯ್ಯಾ
ಇಂತೀ ಗುರುಲಿಂಗಜಂಗಮ ಪ್ರಸಾದದಲ್ಲಿ ಪರಿಣಾಮಿಯಾಗಿ ಸಮಯಭಕ್ತಿಯಲ್ಲಿ ಸಂತೋಷಿಯಾಗಿ ಬದುಕಿದೆನು ಕಾಣಾ ಕೂಡಲಸಂಗಮದೇವಾ
- ಗುರು ಬಸವಣ್ಣನವರು
ಅರ್ಥ:
ಸೋಪಾದಿಕ ಅಷ್ಟಾವರಣ ಸ್ಥೂಲತನುವಿಗೆ,
ನಿರುಪಾದಿಕ ಅಷ್ಟಾವರಣ ಸೂಕ್ಷ್ಮತನುವಿಗೆ ಇವೆ. ಗುರು, ಲಿಂಗ, ಜಂಗಮ, ಪ್ರಸಾದ, ಪಾದೋದಕ, ವಿಭೂತಿ, ರುದ್ರಾಕ್ಷಿ, ಮಂತ್ರ ವೆಂಬ ಸೋಪಾದಿಕ ಅಷ್ಟಾವರಣಗಳನ್ನು ಆಶ್ರಯಿಸಿ ಅಂತರಂಗದೊಳಗೆ ಪ್ರಕಾಶಿಸುವ
ನಿರುಪಾದಿಕ ಅಷ್ಟಾವರಣಗಳನ್ನು ಅರಿಯಬೇಕು.
ಆಯತ ಸ್ವಾಯತ ಸನ್ನಿಹಿತ ಮೂರು ಕ್ರಿಯೆ ಗಳು. ಆಯತದಲ್ಲಿ ಇಷ್ಟಲಿಂಗದ ಪೂಜೆಯಿಂದ ಲಿಂಗ ಸ್ವಾಯತ ಆಗಿ, ಅಂತಃಪೂಜೆಯಾಗಿ ಪ್ರಾಣಲಿಂಗ ಪೂಜೆಯಲ್ಲಿ ವಿಕಾಸಗೊಳಿಸುತ್ತದೆ. ಅಂತಃಪೂಜೆಯು ಕಠಿಣವಾದುದೇನೋ ನಿಜ. ಆದ್ದರಿಂದಲೇ ಈ ಪ್ರಾಣಲಿಂಗದ ಪೂಜೆಗಿಂತ ಮೊದಲು ಇಷ್ಟಲಿಂಗ ಪೂಜೆಯ ಅವಶ್ಯಕತೆಯನ್ನು ತಿಳಿಸಿಕೊಟ್ಟಿರುವರು.
ಸರ್ಪಭೂಷಣ ಶಿವಯೋಗಿಗಳ ಪ್ರಾಣಲಿಂಗ ಪೂಜೆಯನ್ನು ತಿಳಿಸುವ "ಲಿಂಗ ಪೂಜೆಯ ಮಾಡಿರೋ ನಿಮ್ಮೊಳು ಪ್ರಾಣಲಿಂಗ ಪೂಜೆಯ ಮಾಡಿರೊ" ಎಂಬ ಪದ್ಯವು ಮಾರ್ಮಿಕವಾಗಿದೆ.
ಬಹಿರಂಗದ ಅಷ್ಟಾವರಣಗಳು:
ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ ಎಂಬ ಎಂಟು ಆವರಣಗಳು.
ಅಷ್ಟಾವರಣದಲ್ಲಿ ಮೊದಲ ಮೂರು
ಗುರು, ಲಿಂಗ, ಜಂಗಮ ಇವು ಪೂಜ್ಯನೀಯಗಳು.
ನಂತರದ ವಿಭೂತಿ, ರುದ್ರಾಕ್ಷಿ, ಮಂತ್ರ ಇವು ಪೂಜಕಗಳು (ಪೂಜಾ ಸಾಧನಗಳು).
ಕೊನೆಯ ಎರಡು ಪಾದೋದಕ ಮತ್ತು ಪ್ರಸಾದ ಇವು ಪೂಜಾಫಲಗಳು (ಚಿತ್ ಶಕ್ತಿಯ ಕರುಣೆಯ ಫಲಗಳು).
ಅಂತರಂಗದ ಅಷ್ಟಾವರಣಗಳು: ಆಚಾರ, ಆನಂದ, ಅನುಭಾವ, ಆಪ್ಯಾಯನ, ಚಿದ್ರಸ(ಜೀಹ್ವ), ಜ್ಞಾನಪ್ರಕಾಶ(ನೇತ್ರ), ಚಿದ್ಭಸ್ಮ(ತ್ವಕ್ವ), ನಾದಮಂತ್ರ(ಶೋತ್ರ) ಎಂಬಿವು ಅಂತರಂಗದ ಅಷ್ಟಾವರಣಗಳೆನಿಸಿವೆ.
ಬಹಿರಂಗದ ಅಷ್ಟಾವರಣಗಳನ್ನು ಅಂತರಂಗದ ಅಷ್ಟಾವರಣಗಳೊಡನೆ ಅನುಸಂಧಾನಿಸಿದರೆ ಅಂತರಂಗದ ಶುದ್ಧಿ ಮತ್ತು ಬಹಿರಂಗ ಶುದ್ಧಿಯಾಗುತ್ತದೆ. ಇಲ್ಲದಿದ್ದರೆ ಬಹಿರಂಗದ ಅಷ್ಟಾವರಣಗಳು ಬರೀ ಲಾಂಛನವಾಗಿ ಉಳಿದುಬಿಡುತ್ತವೆ. ಬಾಹ್ಯ ಅಷ್ಟಾವರಣಗಳಿಗೆ ಬೆಲೆ ಬರುವುದು ಆಂತರಿಕ ಅಷ್ಟಾವರಣಗಳೊಡನೆ ಅನುಸಂಧಾನ ಮಾಡಿದಾಗ ಮಾತ್ರ...
ಬಹಿರಂಗದ ಅಷ್ಟಾವರಣಗಳನ್ನು ಅಂತರಂಗದ ಅಷ್ಟಾವರಣಗಳೊಡನೆ ಅನುಸಂಧಾನ ಮಾಡುವ ವಿಧಾನ :
ಗುರು:
ಗುರುವಿನಿಂದ ಆಚಾರ, ಆಚಾರದಿಂದ ಅರಿವು ಪಡೆದು ಮುಂದೆ ಹಾಗೆ ಪಡೆದ ಅರಿವನ್ನೆ ಗುರುವಾಗಿ ಮಾಡಿಕೊಂಡು ಅಂತರಂಗದ ಸಾಧನೆ ಮಾಡಬೇಕು. ಹೀಗೆ "ಅರಿವೇ ಗುರು".
ಲಿಂಗ :
ಮೊದಲು ಇಷ್ಟಲಿಂಗಕ್ಕೆ ಬಾಹ್ಯ ಪೂಜೆ, ಮುಂದೆ ಪ್ರಾಣಲಿಂಗಾನುಸಂಧಾನದಿಂದ ಪ್ರಾಣಲಿಂಗ ಸ್ವಾಯತ ಆದಾಗ ಲಿಂಗ ಆನಂದ. ಚಿದಾನಂದ.
ಹೀಗೆ ಪ್ರಾಣಲಿಂಗಾನುಸಂಧಾನದಿಂದ ಆನಂದ.
ಜಂಗಮ:
ಮೊದಲು ಪರಿಪೂರ್ಣ ಪರವಸ್ತುವಿನ ಸುಜ್ಞಾನ ಕೊಟ್ಟು ಅನುಭಾವಕ್ಕೆ ಮಾರ್ಗದರ್ಶನ ನೀಡುವವನು ಜಂಗಮ. ಮುಂದೆ ಅಂತರಂಗದ ಅನುಭಾವವೆ ಜಂಗಮವಾಗಿ ಸಾಧನೆಗೆ ತೊಡಗಿಸುವುದು. ಪರಿಪೂರ್ಣ ಪರವಸ್ತುವಿನ ಜ್ಞಾನವೇ ಜಂಗಮವಾಗಿ ಮುಂದಿನ ಸಾಧನೆಯ ದಾರಿ ತೋರುವುದು. ಹೀಗೆ ಲಿಂಗ "ಅನುಭಾವವೇ ಜಂಗಮ".
ಮೊದಲಿನ ಮೂರು ಸ್ಥಲಗಳಲ್ಲಿ ಸಾಕಾರ ಇಷ್ಟಲಿಂಗ ಹಿಡಿದು ಸಾಕಾರ ಪೂಜೆ ಮುಂದಿನ ಮೂರು ಸ್ಥಲಗಳಲ್ಲಿ ಅಂತರಂಗದ ಪ್ರಾಣಲಿಂಗ, ಭಾವಲಿಂಗದ ನಿರಾಕಾರ ಪೂಜೆ.
ಈ ವಚನದಲ್ಲಿ ಗುರು ಬಸವಣ್ಣನವರು ಆಯತದಲ್ಲಿ ಗುರು, ಇಷ್ಟಲಿಂಗ,
ಜಂಗಮ; ಲಿಂಗ ಸ್ವಾಯತ ಆದ ಬಳಿಕ ಅವುಗಳನ್ನು ಮರೆತು ಅಂತರಂಗದಲ್ಲಿ ಸ್ಪುರಿಪಿಸಿದ ಅರಿವು, ಆನಂದ, ಅನುಭಾವ ಗಳಲ್ಲಿ ಸಾಧನೆ ಮುಂದುವರಿಸಬೇಕು ಎನ್ನುತ್ತಾರೆ.
ವಚನ ಚಿಂತನೆ:
ಲಿಂಗ ಆಯತದಿಂದ ಸ್ವಾಯತ ಆದಮೇಲೆ ಪ್ರಾಣಲಿಂಗವೆಂಬ ಅಂತರಂಗದ ನಿರಾಕಾರ ನಿರ್ಗುಣ ಪೂಜೆಯಲ್ಲಿ ಬಹಿರಂಗದ ಅಷ್ಟಾವರಣಗಳನ್ನು ಮರೆಯಬೇಕು ಎನ್ನುತ್ತಾರೆ ಗುರು ಬಸವಣ್ಣನವರು. ಅಂತರಂಗದ ಅಷ್ಟಾವರಣಗಳನ್ನು ಅಳವಡಿಸಿ ಕೊಳ್ಳಬೇಕು. ಲಿಂಗ ಸ್ವಾಯತ್ತ ಆದ ಬಳಿಕ ಬಹಿರಂಗದ ವಸ್ತುವಿಷಯಗಳನ್ನೂ ಮರೆಯಬೇಕಾಗುತ್ತದೆ. ಅಂದರೆ ಮಾತ್ರ ಆಂತರ್ಯದಲ್ಲಿ ಪರಿಣಾಮಿ ಪ್ರಸಾದದ (ತೃಪ್ತಿಯ ಅನುಗ್ರಹ) ಆನಂದವನ್ನು ಅನುಭವಿಸುವದಕ್ಕೆ ಸಾಧ್ಯ ಎನ್ನುತ್ತಾರೆ ಗುರು ಬಸವಣ್ಣನವರು. ಹೀಗೆ ಲಿಂಗ ಆಯತದಿಂದ ಸ್ವಾಯತವಾದ ಮೇಲೆ ತಮ್ಮಷ್ಟಕ್ಕೆ ತಾನೆ ಉದಯವಾಗುವ ಅರಿವೇ ಗುರುವಾಗುವುದು.
ಒಳಹೊರಗೆ ಬೆಳಗುವ ಜ್ಯೋತಿಯೆ ಪ್ರಾಣಲಿಂಗವಾಗಿ ಬೆಳಗುವದು. ಎಲ್ಲವೂ ಪರಮನೇ ಆಗುವುನು.
- ✍️Dr Prema Pangi
Comments
Post a Comment