ದಾಸ ಶ್ರೇಷ್ಠ ಕನಕದಾಸರು



Kanakadasa - 
*Happy Kanakadas jayanti to all*.

Kanakadas was a poet, philosopher, musician and composer from Karnataka. He was born as Timmappa Nayaka, joined Haridasa movement and became a follower of Vyasaraya who named him as Kanakadasa. He is known for his Keertanas and Ugabhoga. His compositions are in the Kannada language and sung in Karnatik (Carnatik) music.

Born: 6 November 1509, Baada, Shiggaon
Died: 1609
Parents: Beeregowda (Beerappa nayaka), Beechamma
Teacher : Vyasaraya
All his Karnataka Music compositions end with mudra (signature) Kaginele Adhikeshava.

 In addition to being a poet he worked as a social reformer made people to give up their age old obsolete social practices, superstitions, caste discrimination  and adapt to the changing world. He effectively used music to convey his philosophy. He is one of the greatest musicians, composers, poets, social reformers, philosophers and saints that India has ever seen.
*ದಾಸಶ್ರೇಷ್ಠ_ಕನಕದಾಸರ ಜಯಂತಿಯ ಶುಭಾಶಯಗಳು.*
"ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರು ಬಲ್ಲಿರಾ ಬಲ್ಲಿರಾ" ಎನ್ನುವ ಕನಕದಾಸರು ಎಲ್ಲ ಜಾತಿ ಪದ್ಧತಿಗಳ ಮೂಲವನ್ನೇ ಪ್ರಶ್ನಿಸಿದವರು. ಅತ್ಯಂತ ಶ್ರೇಷ್ಠ ಸಂದೇಶಗಳನ್ನು ನೀಡಿ, ತಮ್ಮ ಭಕ್ತಿಯ ಶಕ್ತಿಯಿಂದ ಉಡುಪಿ ಶ್ರೀ ಕೃಷ್ಣನನ್ನು ಒಲಿಸಿಕೊಂಡ ಕಾಗಿನೆಲೆ ಆದಿಕೇಶವರಾಯರ ಪರಮಭಕ್ತ "ದಾಸ ಶ್ರೇಷ್ಠ ಕನಕದಾಸರ" ಜಯಂತಿಯ ಶುಭಾಶಯಗಳು.‌ ಕನಕದಾಸರು ಹದಿನೈದು – ಹದಿನಾರನೇ ಶತಮಾನಗಳಲ್ಲಿದ್ದ  ಭಕ್ತಿ ಪಂಥದ ಪ್ರಮುಖ ಹರಿದಾಸರಲ್ಲಿ ಒಬ್ಬರು. ಪುರಂದರದಾಸರ ಸಮಕಾಲೀನರು. ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಅಮೂಲ್ಯ ಕಾಣಿಕೆಗಳನ್ನಿತ್ತವರು. ಜನ್ಮ ಹೆಸರು ತಿಮ್ಮಪ್ಪ ನಾಯಕ ನಂತರ ಅವರಿಗೆ ದೊರೆತ ಹೊನ್ನ ನಿಧಿಯಿಂದ ಕನಕನಾಯಕರೆಂಬ ಹೆಸರನ್ನು ಪಡೆದು ಮುಂದೆ ಭಕ್ತಿಪಂಥದ ಅನುಯಾಯಿಯಾಗಿ ಕನಕದಾಸರೆಂದು ಪ್ರಸಿದ್ಧಿ ಪಡೆದರು. ಕನಕದಾಸರು ಜನಿಸಿದ್ದು ಧಾರವಾಡ ಜಿಲ್ಲೆಯ ಬಾಡ ಎಂಬಲ್ಲಿ.  ನಂತರ ಈಗಿನ ಹಾವೇರಿ ಜಿಲ್ಹೆಯ ಕಾಗಿನೆಲೆಗೆ ಬಂದು ನೆಲೆಸಿದರು. ಅವರು ತಮಗೆ ದೊರೆತ ನಿಧಿಯಿಂದ ಕಾಗಿನೆಲೆಯ ನರಸಿಂಹ ದೇವಾಲಯವನ್ನು ಜೀರ್ಣೋದ್ದಾರ ಮಾಡಿದರು. ಬಾಡ ಗ್ರಾಮದಲ್ಲಿದ್ದ ಆದಿಕೇಶವ ಮೂರ್ತಿಯನ್ನು ತಂದು ಕಾಗಿನೆಲೆಯಲ್ಲಿ ಪ್ರತಿಷ್ಠೆ ಮಾಡಿದರು.  ಕನಕದಾಸರ ಕೀರ್ತನೆಗಳೆಲ್ಲವೂ ಕಾಗಿನೆಲೆಯ ಕೇಶವನ ಅಡಿದಾವಾರೆಗಳಿಗೇ ಅರ್ಪಿತ.  
ಕನಕದಾಸರು ವ್ಯಾಸರಾಯರ ನೆಚ್ಚಿನ ಶಿಷ್ಯರೂ ಹೌದು. 
ಜನ್ಮ:  ನವಂಬರ್ 1509,
 ಜನ್ಮ ಸ್ಥಳ : ಬಾಡ, ಶಿಗ್ಗಾಂವ ತಾಲೂಕು
ಮರಣ : 1609
ತಂದೆ: ಬೀರಪ್ಪನಾಯಕ , 
ತಾಯಿ: ಬಚ್ಚಮ್ಮ
ಬೀರಪ್ಪನಾಯಕನು 16ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಬಂಕಾಪುರ ಪ್ರಾಂತ್ಯದ ಬಾಡ ಪಟ್ಟಣದ ದಳಪತಿಯಾಗಿದ್ದನು. ಬಚ್ಚಮ್ಮ ಬೀರಪ್ಪನ ಹೆಂಡತಿ. ತಿರುಪತಿ ತಿಮ್ಮಪ್ಪನ ಕೃಪೆಯಿಂದ ಮಗು ಹುಟ್ಟಿದ್ದರಿಂದ ‘ತಿಮ್ಮಪ್ಪ’ ಎಂದೇ ಹೆಸರಿಟ್ಟರು. ತಿಮ್ಮಪ್ಪ ನಾಯಕ ಬಾಲ್ಯದಲ್ಲಿಯೇ ಅಕ್ಷರಾಭ್ಯಾಸದ ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತನು. ತಂದೆಯ ಕಾಲಾನಂತರ ಬಂಕಾಪುರ ಪ್ರಾಂತ್ಯಕ್ಕೆ ದಳಪತಿಯಾದನು.

ತಿಮ್ಮಪ್ಪನು ಹೊಸ ಮನೆ ಕಟ್ಟಿಸುವಾಗ ಆ ಸ್ಥಳದಲ್ಲಿ ಆತನಿಗೆ ಚಿನ್ನ, ವಜ್ರಗಳಿಂದ ತುಂಬಿದ ಒಂದು ಕೊಪ್ಪರಿಗೆ ಸಿಕ್ಕಿತು. ಉದಾರಿಯಾದ ಆತನು ಹೀಗೆ ಸಿಕ್ಕ ಧನ ಕನಕ ಗಳನ್ನು ಬಡವರಿಗೆ ದಾನ ಮಾಡಿದ. ಆದುದರಿಂದ ಜನರು ಆತನನ್ನು ‘ಕನಕನಾಯಕ’ ಎಂದು ಕರೆಯತೊಡಗಿದರು.

ಕನಕನ ಇಷ್ಟದೇವರು ಶ್ರೀ ಆದಿಕೇಶವ. ಆದುದರಿಂದಲೇ ಅವನು ಬಾಡಕ್ಕೆ ಸಮೀಪದ ಕಾಗಿನೆಲೆಯಲ್ಲಿ ಆದಿಕೇಶವ ದೇವಾಲಯವನ್ನು ಕಟ್ಟಿಸಿದ. ಒಮ್ಮೆ ಯುದ್ಧವೊಂದರಲ್ಲಿ ಕನಕ ಗಾಯಗೊಂಡು ಅರೆ ಜೀವವಾಗಿ ಬಿದ್ದಾಗ, ಆತನಿಗೆ ಆದಿಕೇಶವನ "ದಾಸನಾಗು "ಎಂಬ ವಾಣಿ ಕೇಳಿಸಿತು. ಕನಕನು ಆ ಕರೆಗೆ ಓಗೊಟ್ಟು ದಾಸನಾದನು.

ಸ್ವಲ್ಪ ಕಾಲ ಕಾಗಿನೆಲೆಯ ಗುಡಿಯಲ್ಲೇ ದೈವಸ್ತುತಿಯಲ್ಲಿ ತೊಡಗಿದ್ದನು. ಬಳಿಕ ಕನಕನಾಯಕರು ವಿಜಯನಗರದಲ್ಲಿ ಕೃಷ್ಣದೇವರಾಯನ ಗುರುಗಳಾಗಿದ್ದ ವ್ಯಾಸರಾಯರ ಬಳಿ ಬಂದು ಅವರ ಶಿಷ್ಯ ರಾದರು. ವ್ಯಾಸರಾಯರು ಮೇಲೆ ಕೀಳು ಬೇಧ ಮಾಡದೆ ಕನಕದಾಸರ ಭಕ್ತಿ ಪ್ರತಿಭೆಗೆ ಮೆಚ್ಚಿ ಶಿಷ್ಯನಾಗಿ ಸ್ವೀಕಾರ ಮಾಡಿದರು.
ಕನಕದಾಸ ಎಂದು ನಾಮಕರಣ ಮಾಡಿದರು. 

ಜಾತಿಯಲ್ಲಿ ದಲಿತನಾದರೂ ನಿಜ ಅರ್ಥದಲ್ಲಿ ದೇವರ ದಾಸನಾದ ಅಪಾರ ಪ್ರತಿಭೆ ಉಳ್ಳ ಕನಕದಾಸರ ಮೇಲೆ ಗುರುಗಳಿಗೆ ಹೆಚ್ಚು ಪ್ರೀತಿ. ಇದರಿಂದ ಉಳಿದ ಮೇಲು ಜಾತಿಯ ಶಿಷ್ಯರಿಗೆ ಹೊಟ್ಟೆಕಿಚ್ಚು. ಒಂದು ಸಲ ಶ್ರೀ ವ್ಯಾಸರಾಯರು ತಮ್ಮ ಶಿಷ್ಯರನ್ನೆಲ್ಲ ಕರೆದು, ‘ಇಂದು ಏಕಾದಶಿ. ಹಸಿವಿನ ಬಾಧೆಯನ್ನು ತಡೆಯಲು ಆಗದು. ಒಂದೊಂದು ಬಾಳೆ ಹಣ್ಣನ್ನು ನಿಮಗೆ ಕೊಡುತ್ತೇನೆ. ಜನರಿಲ್ಲದ ಸ್ಥಳದಲ್ಲಿ, ಯಾರೂ ನೋಡದಂತೆ ಈ ಹಣ್ಣು ತಿನ್ನಿರಿ’ ಎಂದು ಹೇಳಿದರು. ಶಿಷ್ಯರಿಗೆ ಬಾಳೆಹಣ್ಣುಗಳನ್ನು ಕೊಟ್ಟರು. ಕನಕದಾಸರನ್ನು ಬಿಟ್ಟು ಇತರ ಶಿಷ್ಯರು- ಒಬ್ಬನು ದನದ ಕೊಟ್ಟಿಗೆಯಲ್ಲಿ, ಮತ್ತೊಬ್ಬ ಕತ್ತಲೆ ಕೋಣೆಯಲ್ಲಿ, ಮೂರನೆಯವನು ಊರ ಹೊರಗೆ ಬಯಲಿನಲ್ಲಿ , ಹೀಗೆ ಅವರೆಲ್ಲ ಬಾಳೆಹಣ್ಣನ್ನು ತಿಂದು ಬಂದರು.
ವ್ಯಾಸರಾಯರು ಎಲ್ಲರನ್ನೂ ಕರೆದು, ‘ನನ್ನ ಮಾತನ್ನು ಪಾಲಿಸಿದ್ದೀರಾ? ಯಾರೂ ಇಲ್ಲದ ಕಡೆ ಹಣ್ಣು ತಿಂದಿರಾ?’ ಎಂದು ಕೇಳಿದರು. ‘ಓಹೋ, ಹಣ್ಣು ತಿಂದು ಬಂದೆವು, ಹಣ್ಣು ತಿನ್ನುವಾಗ ನಮ್ಮನ್ನು ಯಾರೂ ನೋಡಲಿಲ್ಲ’ ಎಂದು ಶಿಷ್ಯರು ಹೆಮ್ಮೆಯಿಂದ ಹೇಳಿದರು. ‘ಕನಕ, ನಿನಗೆ ಕೊಟ್ಟ ಬಾಳೆಹಣ್ಣನ್ನು ನೀನು ಎಲ್ಲಿ ತಿಂದೆಯಪ್ಪಾ?’ ಎಂದು ಕನಕದಾಸರನ್ನು ಕೇಳಿದರು. ವ್ಯಾಸರಾಯರು ಕೊಟ್ಟಿದ್ದ ಬಾಳೆಹಣ್ಣನ್ನು ಕನಕನು ಅವರ ಮುಂದಿಟ್ಟು, ‘ಸ್ವಾಮೀ, ಯಾರೂ ಇಲ್ಲದ ಸ್ಥಳ ನನಗೆ ತೋರಲಿಲ್ಲ. ಎಲ್ಲಿ ಹೋದರಲ್ಲಿ ಭಗವಂತನ ಕಣ್ಣುಗಳು ನನ್ನ ಮೇಲೆ ನೆಟ್ಟಿದ್ದವು. ಭಗವಂತನು ಇಲ್ಲದ ಸ್ಥಳವೆಲ್ಲಿ? ಆದುದರಿಂದ ಹಣ್ಣನ್ನು ತಿನ್ನದೆ ಮರಳಿ ತಂದಿದ್ದೇನೆ’ ಎಂದನು. ಕನಕದಾಸರ ಈ ತಿಳುವಳಿಕೆ ಕಂಡು ವ್ಯಾಸರಾಯರು ತುಂಬಾ ಸಂತೋಷಪಟ್ಟರು. ಉಳಿದ ಶಿಷ್ಯಂದಿರು, ‘ಛೇ, ನಮಗೆ ಇಷ್ಟೂ ತಿಳಿಯಲಿಲ್ಲವಲ್ಲ’ ಎಂದು ಕೈ ಕೈ ಹಿಸುಕಿಕೊಂಡರು.
ತಮ್ಮ ಅನೇಕ ಕೀರ್ತನೆಗಳ ಮುಖಾಂತರ ಅರಿವು ಮೂಡಿಸಿ ಭಕ್ತಿ ಪ್ರಧಾನ ಜ್ಯಾತ್ಯಾತೀತ ಸಮಾಜ ನಿರ್ಮಾಣಕ್ಕಾಗಿ ಕೊಡುಗೆ ನೀಡಿದ ದಾಸರು ಇವರು.  ದೇವರನ್ನು ತಿಳಿದವನೇ ನಿಜವಾಗಿ ಶ್ರೇಷ್ಠ ಎಂದು ಸಮಾಜದ ಮೇಲು-ಕೀಳು, ಜಾತಿ, ಕುಲ, ಮತಗಳ ಸಂಕುಚಿತತೆಯನ್ನು ಕಿತ್ತೆಸೆದು, ಭಕ್ತಿಮಾರ್ಗದ ಮೂಲಕ ಸಾಮಾಜಿಕ ಸುಧಾರಣೆಗೆ ಕಾರಣಕರ್ತರಾದ ದಾರ್ಶನಿಕ, ದಾಸಶ್ರೇಷ್ಠ ಶ್ರೀ ಕನಕದಾಸರು. ಅವರನ್ನು ಪಡೆದ ಕನ್ನಡನಾಡು ಧನ್ಯ. 

*Major works*
Nalacharithre (ನಳಚರಿತ್ರೆ)
Haribhakthisara (ಹರಿಭಕ್ತಿಸಾರ)
Nrisimhastava (ನೃಸಿಂಹಸ್ತವ)
Ramadhanyacharithre (ರಾಮಧಾನ್ಯಚರಿತೆ), Mohanatarangini (ಮೋಹನತರಂಗಿಣಿ)

Kanaka Dasavani:
1.*ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ*
#ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೂ

ಬಯಲು ಆಲಯದೊಳಗೊ, ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೊ

ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ

ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ

ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ

ಕುಸುಮದೊಳು ಗಂಧವೊ,ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ

ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ
- ಕನಕದಾಸರು
*Translation*:
Are you imbedded in Maya the illusion 
Or is that Maya within you ?

Do you reside inside the body? or Is the body inside you?

Whether the space is inside the habitation
Or both habitation and space are in the sight of the eye?

Is the vision an ability of mind and knowledge,
or the mind is in the vision ?
Or O God, both the mind and the vision dwell in you?

Does sweetness lie in sugar, or sugar in sweetness?
 Or do both sweetness and sugar lie in the tongue?

Is the tongue (sweetness)in mind or the mind in the sweetness?
O! God Hari, is the tongue (sweetness) and the mind within you?

 Does fragrance is in the flower? Or the flower in fragrance?
Whether both aroma and flower in the olfactory sense of  the nose?

 O Lord Adikeshava of Kaginele, O! peerless one.
Reality is - All things are within you!
ಅರ್ಥ: 
ದೇವ, ನೀ ನನ್ನ ದೇಹದೊಳಗೊ, ಅಥವಾ ನಾನೇ  ನಿನ್ನೊಳು ಇದ್ದೇನೆಯೋ?
ಜೀವನಲ್ಲಿ ದೇವ ಇರುವನೋ, ಬ್ರಹ್ಮಾಂಡ ವೆಂಬ ದೇವರಲ್ಲಿ ಜೀವ ಇರುವನೋ ? ಯಾವುದು ಸತ್ಯ? ಇದೆಲ್ಲ ಬರಿ ಮಾಯ ವೋ? ಜೀವ ದೇವರ ಸಂಭಂದ ವೆಂದರೆ ದೃಷ್ಟಿ - ಕಣ್ಣು,  ಗಂಧ -ಘ್ರಾಣ, ಸವಿ- ಜಿಹ್ವೆ, ಆಲಯ- ಬಯಲು, ಉಸಿರು- ದೇವ ಇದ್ದಂತೆ. ಗೋಚರ- ಅಗೋಚರ ಇದ್ದಂತೆ ಭಿನ್ನತೆ ಇಲ್ಲ.
2.*ತಲ್ಲಣಸಿದಿರು ಕಂಡ್ಯ ತಾಳು ಮನವೆ*
 #ತಲ್ಲಣಿಸದಿರು ಕಂಡ್ಯ ತಾಳು ಮನವೆ. 
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ
ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರೊ
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದ ಮೇಲೆ
ಗಟ್ಯಾಗಿ ಸಲಹುವನು ಇದಕೆ ಸಂಶಯ ಬೇಡ

ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗಡಿಗೆ ಆಹಾರವಿತ್ತವರು ಯಾರೊ
ಹಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ

ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ
ಅಲ್ಲಲ್ಲಿಗೆ ಆಹಾರವಿತ್ತವರು ಯಾರೊ
ಬಲ್ಲಿದನು ಕಾಗಿನೆಲೆಯಾದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ.

 3.*ಕುಲ ಕುಲವೆನ್ನುತಿಹರು  ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ*
#ಕುಲ ಕುಲ ಕುಲವೆನ್ನುತಿಹರು  ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ. 

ಕೆಸರೊಳು ತಾವರೆ ಪುಟ್ಟಲು ಅದ ತಂದು ಬಿಸಜನಾಭನಿಗರ್ಪಿಸಲಿಲ್ಲವೆ.
ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವ ವಸುಧೆಯೊಳಗೆ ಭೂಸುರರುಣಲಿಲ್ಲವೆ.

ಮೃಗಗಳ ಮೈಯಲಿ ಪುಟ್ಟಿದ ಕತ್ತುರಿಯ ತೆಗೆದು ಪೂಸುವರು ದ್ವಿಜರೆಲ್ಲರು. ಒಗೆಯಿಂದ ನಾರಾಯಣನ್ಯಾವ ಕುಲ ಅಗಜವಲ್ಲಭನ್ಯಾತರ ಕುಲದವನು. 

ಆತ್ಮ ಯಾವ ಕುಲ ಜೀವ ಯಾವ ಕುಲ ತತ್ವೇಂದ್ರಿಯಗಳ ಕುಲ ಪೇಳಿರಯ್ಯ. ಅಂತರಾತ್ಮ ನೆಲೆಯಾದಿಕೇಶವನು
ಆತನೊಲಿದ ಮೇಲೆ ಯಾತರ ಕುಲವಯ್ಯ. 

4.*ಕುಲಕುಲವೆಂದು ಹೊಡೆದಾಡದಿರಿ*
#ಕುಲಕುಲವೆಂದು ಹೊಡೆದಾಡದಿರಿ,
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?
ಹುಟ್ಟದ ಯೋನಿಗಳಿಲ್ಲ,
ಮೆಟ್ಟದ ಭೂಮಿಗಳಿಲ್ಲ,
ಅಟ್ಟು ಉಣ್ಣದ ವಸ್ತುವು ಇಲ್ಲ,
ಗುಟ್ಟು ಕಾಣಿಸಬಂತು. ಹಿರಿದೆನು? ಕಿರಿದೇನು?
ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜಾ.
ಜಲವೇ ಸಕಲ ಕುಲಕ್ಕೆ ತಾಯಲ್ಲವೆ?
ಜಲಜ ಕುಲವನೆನಾದರೂ ಬಲ್ಲಿರಾ?
ಜಲದ ಬೋಬ್ಬುಳಿಯಂತೆ ಸ್ಥಿರವಿಲ್ಲವೀ ದೇಹಾ?
ನೆಲೆಯರಿತು ನೀ ನೆನೆಕಂಡ್ಯ ಮನುಜಾ. 
- ಕನಕದಾಸರು
ಅರ್ಥ: ಜಾತಿ ಪದ್ದತಿ ಇತ್ತೀಚಿನದು. ಅದಕ್ಕಿಂತ ಮೊದಲಿದ್ದದು ಬರೀ ಮಾನವ ಕುಲ. ಭೂಮಿ, ನೀರಿಗೆ ಯಾವುದೇ ಜಾತಿ ಕುಲ ಗಳಿಲ್ಲ.

5. *ಶಿವ ಶಿವ ಶಿವ ಎನ್ನಿರೊ* 
#ಶಿವ ಶಿವ ಶಿವ ಎನ್ನಿರೊ – ಮೂಜಗದವರೆಲ್ಲ
ಶಿವ ಶಿವ ಶಿವ ಎನ್ನಿರೊ ||pa||

ಆಗಮ ಸಿದ್ಧಾಂತ ಮೂಲದ ಜಪವಿದು ಶಿವಶಿವಶಿವ ಎನ್ನಿರೋ –
ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವಶಿವಶಿವ ಎನ್ನಿರೊ ||a.pa||

ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವಶಿವಶಿವ ಎನ್ನಿರೋ –
ನಿಮ್ಮತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವಶಿವಶಿವ ಎನ್ನಿರೊ
ಅಪರಾಧಕೋಟಿ ತ್ಯಜಿಸಬೇಕಾದರೆ

 ಶಿವಶಿವಶಿವ ಎನ್ನಿರೋ –

ಮುಂದೆ

ಉಪಮಿತರೋರ್ಮಿತರರಿಯದ ಜಪವಿದು ಶಿವಶಿವಶಿವ ಎನ್ನಿರೊ||1||

ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವಶಿವಶಿವ ಎನ್ನಿರೋ –
ನಿಜಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ
ಭುವನಕೆ ಬಲ್ಲಿದರಾಗಬೇಕಾದರೆ 

ಶಿವಶಿವಶಿವ ಎನ್ನಿರೋ –
ನೀವುಭವನ ಪದವಿಯನು ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ ||2||

ಗುರುಲಿಂಗ ಜಂಗಮವ ಅರಿಯಬೇಕಾದರೆ ಶಿವಶಿವಶಿವ ಎನ್ನಿರೋ –
ಮುಂದೆಪರಮಾತ್ಮನ ನೀವು ತಿಳಿಯಬೇಕಾದರೆ ಶಿವಶಿವಶಿವ ಎನ್ನಿರೊ
ಪೃಥ್ವಿಗೆ ಸದ್ಗುರು ಆಗಬೇಕಾದರೆ 

ಶಿವಶಿವಶಿವ ಎನ್ನಿರೋ –
ನೀವುತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ಶಿವಶಿವಶಿವ ಎನ್ನಿರೊ||3||

ಕನ್ನಡ ನಾಡಿನ ಶರಣರ, ದಾಸರ ಭಕ್ತಿ,  ಅರಿವು, ಅನುಭಾವ, ಉಪದೇಶಗಳ ಬೆಳಕಿನಲ್ಲಿ ಮೇಲು ಕೀಳು ಎಂದು ಬೇಧವ ಮಾಡದ, ಎಲ್ಲರನ್ನೂ ನಮ್ಮವರೇ ಎನ್ನುವ ಸಶಕ್ತ ಸಮಾಜ ನಿರ್ಮಾಣವಾಗಲಿ.
ದಾಸಶ್ರೇಷ್ಠ_ಕನಕದಾಸರ ಜಯಂತಿಯ ಶುಭಾಶಯಗಳು.*
-✍️Dr Prema Pangi
#ಪ್ರೇಮಾ_ಪಾಂಗಿ,
#Kanakadasa_jayanti,#Kanakadasa,
#ಕನಕದಾಸ, #ಕನಕದಾಸ_ಜಯಂತಿ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma