ವಚನ ದಾಸೋಹ - ಪಿಂಡದೊಳಗೆ ಪ್ರಾಣವಿರ್ಪುದ ಎಲ್ಲರೂ ಬಲ್ಲರಲ್ಲದೆ


ವಚನ ದಾಸೋಹ :

#ವಚನ:
#ಪಿಂಡದೊಳಗೆ ಪ್ರಾಣವಿರ್ಪುದ ಎಲ್ಲರೂ ಬಲ್ಲರಲ್ಲದೆ,
ಪ್ರಾಣದೊಳಗೆ ಶಬ್ದವಿರ್ಪುದನಾರೂ ಅರಿಯರಲ್ಲ.
ಪ್ರಾಣದೊಳಗೆ ಶಬ್ದವಿರ್ಪುದ ಎಲ್ಲರೂ ಬಲ್ಲರಲ್ಲದೆ,
ಶಬ್ದದೊಳಗೆ ನಾದವಿರ್ಪುದನಾರೂ ಅರಿಯರಲ್ಲ.
ಶಬ್ದದೊಳಗೆ ನಾದವಿರ್ಪುದ ಎಲ್ಲರೂ ಬಲ್ಲರಲ್ಲದೆ,
ನಾದದೊಳಗೆ ಮಂತ್ರವಿರ್ಪುದನಾರೂ ಅರಿಯರಲ್ಲ.
ಮಂತ್ರದೊಳಗೆ ಶಿವನಿರ್ಪುದ ಎಲ್ಲರೂ ಬಲ್ಲರಲ್ಲದೆ,
ಶಿವನ ಕೂಡುವ ಅವಿರಳಸಮರಸವನಾರೂ
ಅರಿಯರಲ್ಲ ಅಖಂಡೇಶ್ವರಾ.
- ಷಣ್ಮುಖಸ್ವಾಮಿಗಳು
ಸಮಗ್ರ ವಚನ ಸಂಪುಟ: 14   ವಚನದ ಸಂಖ್ಯೆ: 680 
*ಅರ್ಥ*:
ಜೇವರಗಿಯ ಷಣ್ಮುಖಸ್ವಾಮಿಗಳು ವಚನ ವಾಗ್ಮಯದ ಮೂರನೆ ಘಟ್ಟದ ಪ್ರಮುಖರು. ಇವರ ವಚನಗಳು ಹಾಗೂ ಸ್ವರಪದಗಳು ಅನುಭಾವಪೂರ್ಣವಾಗಿ, ಭಾವೋದ್ದೀಪಕವಾಗಿ ಅಂತರಾತ್ಮತೇಜೋಯುಕ್ತವಾಗಿವೆ. ಇವರು ಅಖಂಡೇಶ್ವರ ಗುರುಗಳ ಉತ್ತರಾಧಿಕಾರಿಯಾಗಿ, ಜೇವರಗಿ ವಿರಕ್ತ ಮಠಕ್ಕೆ ಸ್ವಾಮಿಯಾದವರು.
 ಆ ಕಾಲದ ಸಾಮಾಜಿಕ ಅಂತರದ ವಿರುದ್ಧ ಹೋರಾಡಿದ ಕ್ರಾಂತಿಕಾರಿ ಶರಣಗುರುಗಳು. ದಲಿತರ ಉದ್ಧಾರಕ್ಕಾಗಿ ಶ್ರಮಿಸಿ ಅವರೊಡನೆ ಸಹಪಂಕ್ತಿಭೋಜನ ಮತ್ತು ಸಮಾನತೆಗಳನ್ನು ಬೋಧಿಸಿ, ಹಾಗೆಯೇ ನಡೆದು ತೋರಿದ ಶಿವಯೋಗಿಗಳು. ಲೋಕ ಸಂಚಾರ ಕೈಕೊಂಡು ಧರ್ಮತತ್ವ ಬೋಧೆ ಮಾಡಿ ಅನೇಕರಿಗೆ ಶಿವದೀಕ್ಷೆಯನ್ನೂ ಕೊಟ್ಟವರು. ಅನುಭಾವ-ತತ್ವ-ಸಾಹಿತ್ಯ ಈ ಮೂರು ಇವರ ವಚನಗಳಲ್ಲಿ ಕಂಡು ಬರುತ್ತವೆ. 
 ವಚನ ನಿರ್ವಚನ:
*ಪಿಂಡದೊಳಗೆ ಪ್ರಾಣವಿರ್ಪುದನೆಲ್ಲರೂ ಬಲ್ಲರಲ್ಲದೆ
ಪ್ರಾಣದೊಳಗೆ ಶಬ್ದ ವಿರ್ಪುದನಾರೂ ಅರಿಯರಲ್ಲ !*

ಪಿಂಡದೊಳಗೆ ಪ್ರಾಣವಿದೆ ಎಂದು ತಿಳಿದವರು, ಆ ಪ್ರಾಣದೊಳಗೆ ಶಬ್ದವಿದೆ ಎಂದು  ಅರಿಯಲಿಲ್ಲ! ಪಿಂಡವೆಂದರೆ ಇಲ್ಲಿ ಪಂಚ ಭೂತಾತ್ಮಕವಾದ ಶರೀರ. ಶರೀರದಲ್ಲಿ ಅತಿ ಮುಖ್ಯವಾದುದೇ ಉಸಿರಿನಿಂದ ನಡೆಯುವ ಪ್ರಾಣಶಕ್ತಿಯ ಸಂಚಲನ. ಜಡಶರೀರವು ಉಸಿರಾಟದ ಪ್ರಾಣಶಕ್ತಿಯ ಸಹಾಯದಿಂದ ಚಟುವಟಿಕೆಯ ಆಗರವಾಗುವುದು. ಉಸಿರು ನಿಂತುಹೋದರೆ ದೇಹವು ನಿಷ್ಕ್ರಿಯವಾಗಿ ಜಡಶರೀರವಾಗುವುದು. ಉಸಿರಿನಿಂದ ದೇಹದಲ್ಲಿ ಚೈತನ್ಯ ಒಡಮೂಡಿ ಉಸಿರಿನ ಆಧಾರದಲ್ಲಿಯೇ ಜೀವನು ಬಾಳುವನು.  ಆ ಉಸಿರಾಟದ ಹಿಂದೆ ಒಂದು ಬಗೆಯ ಶಬ್ದವಿದೆ. ಅದು ಸೊಂಯ್ ಸೊಂಯ್ ಎಂದು ಅನಿಸಿದರೂ, ಸೂಕ್ಷ್ಮರೀತಿಯಿಂದ ಅವಲೋಕಿಸಿದರೆ ಉಸಿರನ್ನು ಎಳೆದುಕೊಳ್ಳುವಾಗ ' ಸೋ' ಎಂಬ ಶಬ್ದವು, ಬಿಡುವಾಗ ' ಹಂ' ಎಂಬ ಶಬ್ದವು ಕೇಳಿಸುತ್ತದೆ. ' ಸೋ ಹಂ' ಎಂಬುದೇ ಆ ಶಬ್ದ. 

*ಪ್ರಾಣದೊಳಗೆ ಶಬ್ದ ವಿರ್ಪುದನೆಲ್ಲರು ಬಲ್ಲರಲ್ಲದೆ
ಶಬ್ದದೊಳಗೆ ನಾದವಿರ್ಪುದನಾರೂ ಅರಿಯರಲ್ಲ !*

ಪ್ರಾಣದೊಳಗೆ ಶಬ್ದವಿದೆ ಎಂಬುದನ್ನು ತಿಳಿದವರು ಆ ಶಬ್ದದೊಳಗೆ ನಾದವಿದೆ ಎಂದು ಅರಿಯಲಿಲ್ಲ! ಎಲ್ಲ ಶಬ್ದಗಳು, ನಾದವಲ್ಲ. ಶಬ್ದವು ತಾಳ ಲಯ ಬದ್ಧವಾಗಿ ಅರ್ಥಗರ್ಭಿತವಾಗಿದ್ದರೆ ನಾದವೆನಿಸುವದು. ಉಸಿರಿನ ಶಬ್ದವು ತಾಳ ಲಯ ಬದ್ಧವಾಗಿರುವದರಿಂದ ಅದು "ನಾದ" ವಾಗಿದೆ.

*ಶಬ್ದದೊಳಗೆ ನಾದವಿರ್ಪುದನೆಲ್ಲರೂ ಬಲ್ಲರಲ್ಲದೆ
ನಾದದೊಳಗೆ ಮಂತ್ರವಿರ್ಪುದನಾರೂ ಅರಿಯರಲ್ಲ !*

ಶಬ್ದದೊಳಗೆ ನಾದವಿದೆ ಎಂದು ತಿಳಿದವರು 
ನಾದದೊಳಗೆ ಮಂತ್ರವಿದೆ ಎಂದು  ಅರಿಯಲಿಲ್ಲ ! ನಾದದಲ್ಲಿಯೇ ಮಂತ್ರವಿದೆ. ಉಸಿರಿನ ನಾದವನ್ನು ನಿಯಂತ್ರಿಸಿ ಕ್ರಮಬದ್ದ ಗೊಳಿಸಿದರೆ ಆಗ ಅದು 'ಸೋಹಂ' ಎಂದು ಭಾಸವಾಗುತ್ತದೆ.  ಸೋ- ಅಹಂ ಅವನೇ ನಾನು ಎಂದು ಅರ್ಥಗರ್ಭಿತವಾಗಿದೆ. ಲಕ್ಷ್ಯವಿಟ್ಟು ಹಾಗೆ ಉಚ್ಚರಿಸುತ್ತಾ ಹೋದಾಗ ಸ ಮತ್ತು ಹ ಕಳೆದಾಗ ಅದು 'ಓಂ' ಆಗಿ ಗೋಚರವಾಗುತ್ತದೆ. ಇದುವೇ ಓಂಕಾರನಾದ. ಹೀಗೆ ಉಸಿರಿನ ನಾದದಲ್ಲಿ "ಓಂ ಕಾರ" ವೆಂಬ ಏಕಾಕ್ಷರ ಮಂತ್ರವು ಹುದುಗಿರುತ್ತದೆ.   

*ನಾದದೊಳಗೆ ಮಂತ್ರವಿದೆ ಎಂದು  ತಿಳಿದವರು ಮಂತ್ರದೊಳಗೆ ಶಿವನಿದ್ದಾನೆ ಎಂದು  ಅರಿಯಲಿಲ್ಲ !*

ಈ ಓಂಕಾರವೇ ಶಿವನ ಹೆಸರು.
"ಓಂಕಾರ"ವನ್ನು ಪಿಂಡ ದೃಷ್ಟಿಯಿಂದ ನೋಡಿದರೆ ಅದು ಪ್ರತ್ಯಗಾತ್ರ; ಬ್ರಹ್ಮಾಂಡದ ದೃಷ್ಟಿಯಿಂದ ನೋಡಿದರೆ ಅದು ಪರಮಾತ್ಮ. 

*ಮಂತ್ರದೊಳಗೆ ಶಿವನಿದ್ದಾನೆ ಎಂದು ತಿಳಿದ ಬಲ್ಲವರು
ಆ ಶಿವನ ಕೂಡುವ ಅವಿರಳ ಸಮರಸವನ್ನು ಅರಿಯಲಿಲ್ಲ. ಅಖಂಡೇಶ್ವರಾ ! *

ಓಂ ಕಾರವು ಶಿವನ ಸ್ವರೂಪವೇ ಆಗಿರುತ್ತದೆ. ಪರಮಾತ್ಮನ ನಿಜಾನುಸಂಧಾನ ಮಾಡಿದಾಗ ಅವನೊಡನೆ ಒಂದುಗೂಡಿಸುವ ಸಾಮರ್ಥ್ಯ ಹೊಂದಿರುತ್ತದೆ. ಓಂಕಾರ ಮಂತ್ರದೊಳಗೆ ಶಿವನಿದ್ದಾನೆ ಎಂದು ತಿಳಿದ ಜ್ಞಾನಿಗಳು ಸಹ ಆ ಶಿವನನ್ನು ಕೂಡುವ ಅವಿರಳ ಸಮರಸವನ್ನು ಅರಿಯಲಿಲ್ಲ ಎನ್ನುತ್ತಾರೆ ಷಣ್ಮುಖ ಶಿವಯೋಗಿಗಳು. ಶಿವನನ್ನು ಕೂಡುವ ಅವಿರಳ ಸಮರಸವು ಅನುಭಾವ ವೇದ್ಯವಾದದ್ದು. ಶಿವಯೋಗದಿಂದ ಮಾತ್ರ ಸಾಧ್ಯ ಹೊರತು ಬರೀ ವೇದ ಆಗಮ ಶಾಸ್ತ್ರ ಜ್ಞಾನದಿಂದ ಸಾಧ್ಯವಿಲ್ಲ ಎನ್ನುತ್ತಾರೆ ಷಣ್ಮುಖ ಶಿವಯೋಗಿಗಳು.
*ವಚನ ಚಿಂತನ*:
"ಓಂ" ಎಂಬುದು ಒಂದು ಪವಿತ್ರ ಪ್ರಣವ ಬೀಜಾಕ್ಷರ ಮಂತ್ರ.  ಹಿಂದೂ, ಸಿಕ್, ಜೈನ ಮತ್ತು ಬೌದ್ಧ ಧರ್ಮಗಳಲ್ಲಿಯೂ ಓಂಕಾರವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. 
ಓಂ ಶಬ್ಧವು ಸರ್ವೋಚ್ಚ ಶಕ್ತಿಯ ನಿರ್ಗುಣ ರೂಪವನ್ನು ಪ್ರತಿನಿಧಿಸುತ್ತದೆ. "ಓಂ" ನಿಂದಲೇ ಸೃಷ್ಟಿರಚನೆ ಪ್ರಾರಂಭವಾಯಿತು.
ಓಂ ಎನ್ನುವುದು ಸರ್ವೋತ್ತಮ ಪ್ರಜ್ಞೆ.
 ಓಂ(AUM) ಸಮಯದ, ಮನಸ್ಸಿನ ಎಲ್ಲ ಸ್ಥಿತಿಗಳನ್ನು ಪ್ರತಿನಿಧಿಸುತ್ತದೆ. 
"ಅ"ಕಾರ (A) ಮನಸ್ಸಿನ ಎಚ್ಚರ ಸ್ಥಿತಿಯನ್ನು, "ಉ"ಕಾರ (U) ಕನಸಿನ ಸ್ಥಿತಿಯನ್ನು ಮತ್ತು  
"ಮ"ಕಾರ (M) ಮನಸ್ಸಿನ ಆಳವಾದ ನಿದ್ರೆಯ ಸ್ಥಿತಿಯನ್ನು ಸೂಚಿಸುವುದು.
ಓಂ.... ಅನ್ನುವಾಗ ಕೊನೆಯಲ್ಲಿ  ಉಚ್ಚರಿಸಲಾಗುವ ವಿರಾಮದೊಂದಿಗೆ 'ತುರಿಯಾ' ಅಥವಾ ಅನಂತ ಪ್ರಜ್ಞೆಯ ಸ್ಥಿತಿ ಎಂದು ಸೂಚಿಸುವುದು.

ಶರಣ ಆಯ್ದಕ್ಕಿ ಮಾರಯ್ಯನವರು "ಶಿವನೆ ಮಂತ್ರತಂತ್ರಯಂತ್ರೋಪಕರಣವಾಗಿ ಬಂದ ಲೋಕಹಿತಾರ್ಥ" ಎಂದು ಮಂತ್ರದ ಮಹತ್ವ ತಿಳಿಸಿದ್ದಾರೆ. "ನಮಃ ಶಿವಾಯ" ವೆಂಬ ಪಂಚಾಕ್ಷರ ಮಂತ್ರ ಸಕಲ ಪಂಚಬ್ರಹ್ಮರೂಪ  ಶಿವನನ್ನು ಬೋಧಿಸಿದರೆ, "ಓಂಕಾರ" ಮಂತ್ರ ನಿಷ್ಕಲ ಶಿವನನ್ನು ಬೋಧಿಸುತ್ತದೆ.
-  ✍️Dr Prema Pangi
#ಪ್ರೇಮಾ_ಪಾಂಗಿ,#ಷಣ್ಮುಖಸ್ವಾಮಿಗಳು,
#ಪಿಂಡದೊಳಗೆ_ಪ್ರಾಣವಿರ್ಪುದ_ಎಲ್ಲರೂ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma