ವಚನ ದಾಸೋಹ - ಮಠವೇಕೋ, ಪರ್ವತವೇಕೋ
#ಮಠವೇಕೋ, ಪರ್ವತವೇಕೋ ;
ಜನವೇಕೋ, ನಿರ್ಜನವೇಕೋ ;
ಸತ್ಯ ಸಮಾಧಾನವುಳ್ಳ ಶರಣಂಗೆ?
ಮತ್ತೆ ಹೊರಗಣ ಚಿಂತೆ, ಧ್ಯಾನ, ಮೌನ, ಜಪವೇಕೋ, ತಪವೇಕೋ,
ತನ್ನ ತಾನರಿದವಂಗೆ ಗುಹೇಶ್ವರಾ?
- ಅಲ್ಲಮ ಪ್ರಭುದೇವರು
ಅರ್ಥ:
ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಆಧ್ಯಾತ್ಮಿಕ ವಿಚಾರ ಸಂಕಿರಣದಲ್ಲಿ ಅಲ್ಲಮ ಪ್ರಭುಗಳು ಶರಣನ ಗುಣ ಲಕ್ಷಣ ತಿಳಿಸುವ ವಚನ ಇದು. ಅಲ್ಲಮ ಪ್ರಭುಗಳು ಪ್ರಶ್ನೆ ಮಾಡುತ್ತಲೆ ಉತ್ತರವನ್ನೂ ಸೂಚಿಸಿದ್ದಾರೆ.
*ಮಠವೇಕೋ, ಪರ್ವತವೇಕೋ ;
ಜನವೇಕೋ, ನಿರ್ಜನವೇಕೋ ;
ಸತ್ಯ ಸಮಾಧಾನವುಳ್ಳ ಶರಣಂಗೆ?*
ಸತ್ಯ ಶಾಂತಿ ಸೈರಣೆ ಸಮಾಧಾನವಿರುವವರು ಯಾವುದೇ ಮಠಕ್ಕೆ, ದೇವಸ್ಥಾನಕ್ಕೆ, ಪರ್ವತಕ್ಕೆ ಹೋಗುವ ಅವಶ್ಯಕತೆ ಇರುವುದಿಲ್ಲ, ಶಾಂತಿಯನ್ನು ಹುಡುಕಿಕೊಂಡು, ನಿರ್ಜನ ಪ್ರದೇಶಕ್ಕೆ ಹೋಗುವ ಅವಶ್ಯಕತೆಯೂ ಇರುವುದಿಲ್ಲ. ನಿರಾಕಾರನಾದ ಶಿವನನ್ನು ಇಷ್ಟಲಿಂಗ ರೂಪದಲ್ಲಿ, ಲಿಂಗಸ್ವಾಯತ್ತ ಮಾಡಿ ಪ್ರಾಣಲಿಂಗ ಸ್ವರೂಪವಾಗಿ, ಪ್ರಾಣಲಿಂಗ ಶಿವನನ್ನು ಭಾವಲಿಂಗವಾಗಿ ಬಯಲಾಗಿ ಕಾಣಬಲ್ಲವನು ಶರಣನು. ಈ ಶರಣನು ಸದಾಕಾಲ ಶಾಂತಿ, ಸತ್ಯ ಮತ್ತು ಸಮಾಧಾನದಿಂದ ಇರುವವನು. ಇಂಥಹ ಶರಣರಿಗೆ ಶಾಂತಿ ಅರಸುತ್ತಾ ಧ್ಯಾನ ಮಾಡಲು ನಿರ್ಜನ ಪ್ರದೇಶಕ್ಕೆ ಕಾಡಿಗೆ ಹೋಗುವ ಅವಶ್ಯಕತೆ ಇಲ್ಲ. ದೇವರನ್ನು ಅರೆಸುತ್ತಲೋ, ಜನರನ್ನು, ಸಮಾಜವನ್ನು ಮೆಚ್ಚಿಸಲೋ ಯಾವುದೇ ಮಠಕ್ಕೆ, ದೇವಸ್ಥಾನಕ್ಕೆ, ಪರ್ವತಕ್ಕೆ ಹೋಗುವ ಅವಶ್ಯಕತೆ ಇಲ್ಲ.
*ಹೊರಗಣ ಚಿಂತೆ, ಧ್ಯಾನ, ಮೌನ, ಜಪವೇಕೋ, ತಪವೇಕೋ,
ತನ್ನ ತಾನರಿದವಂಗೆ ಗುಹೇಶ್ವರಾ?*
ಹೊರಗಡೆ ದೇವರನ್ನು ಹುಡುಕಿಕೊಂಡು ಹೋಗುವ ಚಿಂತೆ, ಧ್ಯಾನ, ಮೌನಾಚರಣೆ, ಜಪ, ತಪ ಮಾಡುವ ಬಹಿರಂಗದ ಆರಾಧನೆಯ ಅವಶ್ಯಕತೆಯೂ ಇರುವುದಿಲ್ಲ. ಶರಣರು ಅಂತರಂಗದಲ್ಲಿ ದೇವರನ್ನು ಸಾಕ್ಷಾತ್ಕಾರ ಮಾಡಿಕೊಂಡವರು. ದೇಹವನ್ನೇ ದೇಗುಲವಾಗಿ ಮಾಡಿಕೊಂಡು ಪ್ರಾಣಲಿಂಗ ಪೂಜಿಸುವವರು. ಸತ್ ಚಿತ್ ಆನಂದ ನಿರಂಜನ ಪರಮ ಸತ್ಯದ ಅರಿವನ್ನು ತಿಳಿದವರು. ತನ್ನನ್ನು ತಾನು ಅರಿದವರಿಗೆ ಜಪ, ತಪಸ್ಸು, ಮೌನ ಮತ್ತು ಧ್ಯಾನದ ಹಂಗೂ ಇರುವುದಿಲ್ಲ. ಸದಾಕಾಲ ಶಾಂತಚಿತ್ತದಿಂದ ಇರುವ ಕಾರಣ ಶಾಂತಿಗಾಗಿ ಜಪ ತಪ ಧ್ಯಾನಮಾಡುವ ಅವಶ್ಯಕತೆ ಇಲ್ಲ. ತಾನೇ ಪರಮಾತ್ಮನ ಅಂಶ ಸ್ವರೂಪ; ತನ್ನಲ್ಲೇ ದೇವನು ಇರುವನೆಂಬ ಅರಿವಿನ ಸಾಕ್ಷಾತ್ಕಾರವಾದ ಬಳಿಕ ಬಾಹ್ಯ ಡಂಭಾಚಾರದ ಆಚರಣೆಗಳ ಅವಶ್ಯಕತೆ ಇಲ್ಲ. ಇಂಥ ಶರಣ ಸದಾಕಾಲ ಶಾಂತಿ ಸಮಾಧಾನದಿಂದ ಇರುತ್ತಾನೆ ಎನ್ನುತ್ತಾರೆ ಅಲ್ಲಮ ಪ್ರಭುಗಳು.
ಇಂತಹದೇ ಅರ್ಥಪೂರ್ಣ ವಿಚಾರಗಳನ್ನು ಸರ್ವಜ್ಞನವರು ತಿಳಿಸಿದ್ದಾರೆ.
#ಮನೆಯೇನು ವನವೇನು, ನೆನಹು ಇದ್ದರೆ ಸಾಕು, ಮನಮುಟ್ಟಿ ಶಿವನ ನೆನೆಯದವನು, ಬೆಟ್ಟದಾ ಕೊನೆಯಲ್ಲಿದ್ದೇನು ಸರ್ವಜ್ಞ.
#ದೇಹ ದೇವಾಲಯವು, ಜೀವವೇ ಶಿವಲಿಂಗ, ಬಾಹ್ಯಾಂಗಳಳಿದು ಭಜಿಪಂಗೆ, ಮುಕ್ತಿಸಂದೇಹವಿಲ್ಲೆಂದು ಸರ್ವಜ್ಞ.
#ಮನದಲ್ಲಿ ನೆನೆವಂಗೆ, ಮನೆಯೇನು ಮಠವೇನು? ಮನದಲ್ಲಿ ನೆನೆಯದಿರುವವನು, ದೇಗುಲದ ಕೊನೆಯಲ್ಲಿದ್ದೇನು ಸರ್ವಜ್ಞ.
ದೇಹವೆ ದೇವಾಲಯವು, ಜೀವವೇ ಶಿವಲಿಂಗ, ಬಾಹ್ಯಾಂಗಳ ಅಳಿದು ಭಜಿಸಿರಿ ಎಂದು ನಿಮ್ಮೊಳಗೆಯೇ ಇರುವ ದೇವರನ್ನು ಹೊರಗಡೆ ಅರಿಸದೇ ಅಂತರಂಗದಲ್ಲಿ ಮನದ ನೆನಹಿನಿಂದ ಅರಿಸಿ ಸಾಕ್ಷಾತ್ಕಾರ ಮಾಡಿಕೊಳ್ಳಲು ಸೂಚಿಸುತ್ತಾರೆ.
ಗುಹೇಶ್ವರ ಪ್ರಿಯ ನಿರಾಳಲಿಂಗ ಎಂಬ ಅಂಕಿತ ನಾಮ ವಿರುವ ಗುಹೇಶ್ವರಯ್ಯ ಎಂಬ ಬಸವೊತ್ತರ ಶರಣರು ಶ್ಲೋಕ ಉದಾಹರಣೆ ಕೊಟ್ಟು ಇದೇ ಅರ್ಥದ ವಚನ ರಚಿಸಿದ್ದಾರೆ.
#ಅರುಹಿನ ಕುರುಹ ಕಾಣದೆ ಗಿರಿ ಕೋಡಗಲ್ಲ ಮೇಲೆ
ತಲೆಕೆಳಗೆ ಮಾಡಿ ತಪಸ್ಸವ ಮಾಡಿದಡಿಲ್ಲ,
ಕಾಲಕರ್ಮಂಗಳ ದಂಡಿಸಿದಡಿಲ್ಲ,
ಪೃಥ್ವಿ ತಿರುಗಿ, ತೀರ್ಥಂಗಳ ಮಿಂದು, ನಿತ್ಯನೇಮಂಗಳ ಮಾಡಿದಡಿಲ್ಲ.
ಜಲಸಮಾಧೀಯಲ್ಲಿ ಕುಳಿತಡಿಲ್ಲ,
ಇದಕ್ಕೆ ಶ್ಲೋಕ :
ಪೂಜಾಕೋಟಿಸಮಂ ಸ್ತೋತ್ರಂ ಸ್ತೋತ್ರಕೋಟಿಸಮಂ ಜಪಃ ||
ಜಪಕೋಟಿಸಮಂ ಧ್ಯಾನಂ ಧ್ಯಾನಕೋಟಿಮನೋಲಯಂ ||
ಇಂತೆಂದುಂದಾಗಿ, ಸುತ್ತಿಸುಳಿವ ಮನವನು ಚಿತ್ತದಲ್ಲಿರಿಸಿ
ನಿಶ್ಚಿಂತವಾದಡೆ ನಿತ್ಯಪ್ರಕಾಶ ಗುರು ಗುಹೇಶ್ವರಲಿಂಗವು
ಮತ್ತೆ ಅರಸಲುಂಟೇನಯ್ಯಾ?
ಮಠವ್ಯಾಕೊ, ಪರ್ವತವ್ಯಾಕೊ, ಜನವ್ಯಾಕೋ, ನಿರ್ಜನವ್ಯಾಕೊ
ಚಿತ್ತ ಸಮಾಧನವುಳ್ಳ ಪುರುಷಂಗೆ ?
ಹೊರಗಣ ಧ್ಯಾನ ಮೌನ ಜಪತಪ ನಿತ್ಯನೇಮಂಗಳ್ಯಾಕೊ
ತನ್ನ ತಾನರಿದ ಶರಣಂಗೆ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ?
ಶರಣ ಸ್ಥಲ:
ಇದು ಶಟ್ಸ್ಥಳದ 5 ನೆಯ ಸ್ಥಲವಾದ ಶರಣ ಸ್ಥಲದ ವಚನ. ಅಂಗಸ್ಥಲಗಳು ಲಿಂಗಸ್ಥಲಗಳಾಗಿ ಸಮರಸವಾಗಿ ಅಂಗಲಿಂಗಸಂಗಿಯಾದ ಶರಣನ ಅಂಗವೆಲ್ಲ ಲಿಂಗವೇ. ಅಂಗಲಿಂಗದ ಸಮರಸದ ಕೂಟವನ್ನು ಪಡೆದ ಶರಣ ಅನುಭಾವದ ಆನಂದದ ನಿಬ್ಬೆರಗಿನಲ್ಲಿ ನಿಲ್ಲುತ್ತಾನೆ. ಆತನ ಮನವೆಲ್ಲ ಅವಿರಳ ಜ್ಞಾನವೇ. ಆತನ ಭಾವ ಅಡಗಿ ನಿರ್ಭಾವವಾಗಿ ಸಮತೆಯಲ್ಲಿ ನಿಂದು, ಅದು ನಿಜಶಾಂತಿಯಲ್ಲಿ ಪರಿಣಮಿಸುತ್ತದೆ. ಇಂತಹ ಶರಣನು ಲಿಂಗದ ನಡೆಯಂತೆ ಪರಮಾತ್ಮನ ಇಚ್ಛೆಯಂತೆ ನಡೆಯುವವ. ಡಂಬಾಚಾರಿ ಅಲ್ಲ. ಲೋಕದ ಮೆಚ್ಚುಗೆಗಾಗಿ ಲೋಕದಿಚ್ಚೆಯಂತೆ ನಡೆಯುವವನಲ್ಲ. ಅಲ್ಲಮಪ್ರಭುಗಳು ಡಾಂಭಿಕತೆ, ಅಂಧಶ್ರದ್ಧೆ ಅಜ್ಞಾನಗಳನ್ನು ನಿಷ್ಠುರವಾಗಿ ಖಂಡಿಸಿದ್ದಾರೆ.
-✍️ Dr Prema Pangi
#ಮಠವೇಕೋ_ಪರ್ವತವೇಕೋ
Picture post designed and created by me. A small service to popularise Vachana Sahitya
Comments
Post a Comment