ವಚನ ದಾಸೋಹ - ಸಕಲಭೋಗ ವಿಲಾಸಿತ ಲಿಂಗಕ್ಕೆಂದಲ್ಲಿ
#ಸಕಲಭೋಗ ವಿಲಾಸಿತ ಲಿಂಗಕ್ಕೆಂದಲ್ಲಿ ತನ್ನಂಗಕ್ಕೆ ಶೃಂಗಾರವುಂಟೆ ?
ಶ್ರೀರುದ್ರಾಕ್ಷಿ ವಿಭೂತಿಯ ಸ್ವಸ್ಥಾನದಲ್ಲಿ
ತನ್ನಂಗಕ್ಕೆ ಶೃಂಗಾರವೆಂದು ಮಾಡಿದಡೆ,
ಆ ನಿಜಪದದಂಗವೊಂದು ಇಲ್ಲ ಎಂದನಂಬಿಗ ಚೌಡಯ್ಯ.
- ಅಂಬಿಗರ ಚೌಡಯ್ಯನವರು
ಸಮಗ್ರ ವಚನ ಸಂಪುಟ: 6 ವಚನದ ಸಂಖ್ಯೆ: 266
ಅಂಬಿಗ ಚೌಡಯ್ಯ ಶರಣರು, ವಿಭೂತಿ ರುದ್ರಾಕ್ಷಿ ಗಳ ಮಹತ್ವವನ್ನು ಅರಿಯದೆ ತನ್ನ ಅಂಗದ ಬಾಹ್ಯ ಶೃಂಗಾರಕ್ಕೆ ಆಡಂಬರಕ್ಕಾಗಿ ಬಳಸುವವರನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಾರೆ. ಅಂತಹ ಡಾಂಬಿಕರಿಗೆ ನಿಜ ಪದದ ಅಂಗತತ್ವಗಳು ಅಂದರೆ ಲಿಂಗ ದೇವನ ತತ್ವಗಳಿಲ್ಲ. ಅವರ ಅಂಗ ತತ್ವಗಳು ಪರಶಿವನ ಲಿಂಗತತ್ವಗಳಾಗಿ ಮಾರ್ಪಾಡುವಾಗುವದಿಲ್ಲ. ಹೀಗೆ ಅವರು ಅಂಗ-ಲಿಂಗ ಸಮರಸದಿಂದ ವಂಚಿತರಾಗುವವರು. ವಿಭೂತಿ ರುದ್ರಾಕ್ಷಿಗಳ ಶೃಂಗಾರದ ಸಮರ್ಪಿತ ಭಾವವನ್ನು ಅಂಬಿಗರ ಚೌಡಯ್ಯ ಸೂಚಿಸಿದ್ದಾರೆ. ಮನ ಶುಚಿಯಾಗದೆ ತನು ಬತ್ತಲೆಯಾದರೇನು ? ಭಾವ ಬಯಲಾಗದೆ ಮಂಡೆ ಬೋಳಾದರೇನು? ಕೇವಲ ಬಹಿರಂಗದ ಕ್ರಿಯೆ ಆಚರಣೆ ಆಗಬಾರದು ಎನ್ನುತ್ತಾರೆ ಅಲ್ಲಮ ಪ್ರಭುಗಳು.
ಅಲ್ಲಮ ಪ್ರಭುಗಳು ವಿಭೂತಿ ರುದ್ರಾಕ್ಷಿ ಗಳನ್ನು ಶೃಂಗಾರಕ್ಕೆ ಲೋಕದ ಜನರನ್ನು ಮೆಚ್ಚಿಸಲಿಕ್ಕೆ ಧರಿಸುವ ಡಾಂಭಿಕ ಭಕ್ತರನ್ನು ಖಂಡಿಸುತ್ತಾರೆ.
"ಭಸ್ಮವ ಪೂಸಿದೊಡೇನು ಕರಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ ?” ಎಂದು ಆಶೆಯ ವೇಷಕ್ಕೆ ಗುರಿಯಾದವರನ್ನು ಖಂಡಿಸುತ್ತಾರೆ.
ಮಡಿವಾಳ ಮಾಚಯ್ಯನವರು ವಿಭೂತಿ ರುದ್ರಾಕ್ಷಿ ಮಂತ್ರಗಳನ್ನು ಅನುವರಿಯದೆ ಆಡಂಬರಕ್ಕಾಗಿ ಬಳಸುವವರನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಾರೆ.
“ವಿಭೂತಿಯನ್ನಿಟ್ಟು ರುದ್ರಾಕ್ಷಿಯಂ ಧರಿಸಿ ಪಂಚಾಕ್ಷರಿಯ ಜಪಿಸಿ ಕೃತಾರ್ಥರಾದೆವೆಂಬ ಪಂಚಮಹಾಪಾತಕರು ನೀವು ಕೇಳಿರೋ ಆದಂತೆಂದೊಡೆ : ವಿಭೂತಿಯನ್ನಿಟ್ಟು ವಿಶ್ವಾಸವಿಲ್ಲವಾಗಿ, ರುದ್ರಾಕ್ಷಿಯ ಧರಿಸಿ, ರುದ್ರಗಣಂಗಳನರಿಯರಾಗಿ, ಪಂಚಾಕ್ಷರಿಯ ಜಪಿಸಿ ಪಂಚಮಹಾಪಾತಕಂಗಳ ಬಿಡರಾಗಿ....”ಎಂದು ಮುಂತಾಗಿ ಮುಂದುವರಿಯುವ ದೀರ್ಘವಾದ ವಚನದಲ್ಲಿ ನಡೆನುಡಿಗಳ ಸಮನ್ವಯವಿಲ್ಲದ ಈ ಆಡಂಬರಗಳು ವ್ಯರ್ಥವೆಂದು ಸಾರಿದ್ದಾರೆ.
ಶರಣ ಧರ್ಮದಲ್ಲಿ ವಿಭೂತಿ ರುದ್ರಾಕ್ಷಿಗಳು, ಅಲಂಕಾರದ, ಶೃಂಗಾರದ, ತೋರಿಕೆಯ ಡಾಂಭಿಕ ಆಚರಣೆಯ, ಜನರನ್ನು ಮೆಚ್ಚಿಸಲು ಧರಿಸುವ ಸಾಧನಗಳಲ್ಲ.
ಶರಣರು ಅಂತರಂಗದ ಅನುಭವಕ್ಕೆ ಪ್ರೇರಕವಾಗುವಂತೆ, ಅಂತರಂಗ ಪರಿವರ್ತನೆಗೆ ಸಂಕೇತವಾಗಬೇಕೆಂಬ ದೃಷ್ಠಿಯಿಂದ ವಿಭೂತಿ, ರುದ್ರಾಕ್ಷಿಗಳನ್ನು ತಮ್ಮ ಆಚರಣೆಯಲ್ಲಿ ಅಳವಡಿಸಿಕೊಂಡಿದ್ದಾರೆ.
ವಿಭೂತಿಯು ಶರೀರದಲ್ಲಿಯ ಶಕ್ತಿಚೇತನವನ್ನು ಸಂವಾಹನ ಮಾಡುವಲ್ಲಿ, ನಿರ್ದೇಶಿಸುವಲ್ಲಿ, ನಿಯಂತ್ರಿಸುವಲ್ಲಿ ನೆರವಾಗುವ ಸಾಮರ್ಥವನ್ನು ಪಡೆದಿದೆ. ವಿಭೂತಿ ಸಾತ್ವಿಕ ಗುಣದ ಪ್ರತೀಕವೂ ಹೌದು ಮತ್ತು ಭಕ್ತಿ ಮುಕ್ತಿಗೆ ಸಾಧನವೂ ಹೌದು ಎನ್ನುತ್ತಾರೆ ಶರಣರು. ಆ "ಮಹಾಪರವಸ್ತುವಿನ ದಿವ್ಯತೇಜದ ಸಂಕೇತ, ಶಿವನ ಚಿತ್ಪ್ರಭೆ" ವೆಂಬ ಭಾವನೆಯಿಂದ ವಿಭೂತಿಯನ್ನು ಧರಿಸಬೇಕೆನ್ನುತ್ತಾರೆ ಶರಣರು. ಅವರಿಗೆ ಭೂಮಿ ಜಲಾಗ್ನಿ ಮರುತಾಕಾಶ ಇವೆಲ್ಲಾ ಶ್ರೀ ವಿಭೂತಿಮಯವಾಗಿ ತೋರುತ್ತವೆ. ಮನ ಚಕ್ಷುರಾದಿ ಇಂದ್ರಿಯಗಳೆಲ್ಲವೂ ವಿಭೂತಿಮಯವಾಗಿ ತೋರುತ್ತವೆ. ಚಂದ್ರಾದಿತ್ಯ ಸರ್ವದೇವತಾ ರೂಪವೆಲ್ಲಾ ಶ್ರೀ ವಿಭೂತಿಮಯವಾಗಿ ತೋರುತ್ತವೆ. “ಶಿವ ಶಿವಾ ಈ ಪರಿಯಿಂದ ತೋರಿ ವ್ಯಾಪಕವಾಗಿ ಬೆಳಗುವ ಪರಂಜ್ಯೋತಿ ಸ್ವರೂಪ ಶ್ರೀವಿಭೂತಿ ಎಂದು ಒಲಿದು ಧರಿಸಿದವನೇ ಜೀವನ್ಮುಕ್ತನಯ್ಯ ” ಎಂದು ವಿಶ್ವರೂಪ ಸದೃಶವಾಗಿ ವಿಭೂತಿಯನ್ನು ಕಂಡಿದ್ದಾರೆ ಶರಣರು. ನಿರುಪಾದಿಕ ವಿಭೂತಿ ಅಂದರೆ, ಜ್ಞಾನದ ಅಗ್ನಿಯಲ್ಲಿ ಅರಿಷಡ್ವರ್ಗಗಳನ್ನು ಸುಟ್ಟು, ಚಿತಾಗ್ನಿ (ಚಿತ್ ಅಗ್ನಿ- ಮನ ಲಯ ಗೊಳಿಸುವ ಭಸ್ಮ) ಧರಿಸುವುದು. ಮೂರೆಳೆ ವಿಭೂತಿ "ಸೃಷ್ಟಿ ಸ್ಥಿತಿ ಲಯ"ದ ಸಂಕೇತ. ಮೂರೆಳೆ ವಿಭೂತಿ "ಸತ್ ಚಿತ್ ಆನಂದ"ದ ಸಂಕೇತ. ಮೂರೆಳೆ ವಿಭೂತಿ "ಗುರು ಲಿಂಗ ಜಂಗಮ"ದ ಸಂಕೇತ ಎನ್ನುತ್ತಾರೆ ಶರಣರು.
ತ್ರಿವಿದ ಅಕ್ಷರಗಳ ಸಂಕೇತವಾದ ಮೂರಳೆಯ ಭಸ್ಮವನ್ನು ಧರಿಸುವುದರಿಂದ ಅಜ್ಞಾನ ಅಹಂಕಾರ ನಾಶವಾಗಿ ರಕ್ಷಣೆ ಸಿಗುವುದು. ಇದೇ ರೀತಿ ಬಹಿರಂಗದಲ್ಲಿ ರುದ್ರಾಕ್ಷಿಗಳನ್ನು ಧರಿಸುವುದು ತತ್ವ ಚಿಂತಾಮಣಿಗಳೆಂಬ ಆಂತರ್ಯದ ರುದ್ರಾಕ್ಷಿಗಳನ್ನು ಧರಿಸಿರುವುದಕ್ಕೆ ಸಂಕೇತವಾಗಬೇಕು. ಭಕ್ತಿಭಾವದಿಂದ ಅವುಗಳನ್ನು ಸರಗೊಳಿಸಿ ಯುಕ್ತಿಯಿಂದ ಧರಿಸಬೇಕು. ಶಿವನ "ಜ್ಞಾನಚಕ್ಷು" ವೆಂದು ವಿದಿತ ವಾಗಿರುವ ರುದ್ರಾಕ್ಷಿ, ಅಂತರಂಗದ ಅರಿವನ್ನು ಎಚ್ಚರಗೊಳಿಸುವುದಕ್ಕೆ ಸಾಧನವಾಗಬೇಕು. ವಿಭೂತಿ ರುದ್ರಾಕ್ಷಿಗಳು, ಸಾಧಕನನ್ನು ರಕ್ಷಿಸುವ ಆವರಣ (ಕವಚ)ಗಳಾಗಬೇಕು ಎಂದು ಮೂಲ ಶೈವ ಸಂಸ್ಕೃತಿಯ ಆಚರಣೆಗಳನ್ನು ಅನು ಅರೆದು ಅಂದರೆ ಅರ್ಥ ಮಾಡಿಕೊಂಡು ಅಳವಡಿಸಿಕೊಂಡರು ಶರಣರು. ವಿಭೂತಿ ರುದ್ರಾಕ್ಷಿಗಳ ನಿರುಪಾದಿಕ ಮಹತ್ವ ಅರಿತು ಅಳವಡಿಸಿಕೊಂಡರೆ ಹೊರತು ಅಂಧಾನುಕರಣೆ ಯಾಗಿ ಮೂಢನಂಬಿಕೆಗಳಾಗಿ ಅಲ್ಲ.
ಕರ್ಮಿಗಳ ಆಡಂಬರಭಕ್ತಿಯನ್ನು ಹಳಿಯುತ್ತಾ ದಾಸಿಮಯ್ಯಶರಣರು ಹೇಳುವ : “ಹೊರವೇಷದ ವಿಭೂತಿ ರುದ್ರಾಕ್ಷಿಯ ಪೂಸಿದಡೇನು ? ತೆರನನರಿದು ಮರವೆಯ ಕಳೆದು, ಮಾತಿನಂತೆ- ನೀತಿ ಯುಳ್ಳೋಡೆ, ಅವರ ಅಜಾತರೆಂಬೆ” ಎಂಬ ಮಾತಿನಲ್ಲಿಯೂ ಇದೇ ಅಭಿಪ್ರಾಯ ಕಂಡು ಬರುತ್ತದೆ.
ಅಂಬಿಗರ ಚೌಡಯ್ಯ ನವರೂ ಇನ್ನೊಂದು ವಚನದಲ್ಲಿಯೂ ಸಹ ಇದೆ ಮಾತನ್ನು ಹೇಳಿದ್ದಾರೆ
#ಆರ್ಚನೆಯ ಮಾಡುವಲ್ಲಿ ವೇಷವರತಿರಬೇಕು ;
ಪೂಜೆಯ ಮಾಡುವಲ್ಲಿ ಪುಣ್ಯ ಮೂರ್ತಿಯಾಗಿರಬೇಕು, ಕೊಳುಕೊಡೆಯಲ್ಲಿ ಭೂತಹಿತವಾಗಿರಬೇಕು,
ಹೀಗೆ ವೇಷವರತು, ಪುಣ್ಯಮೂರ್ತಿಯಾಗಿ ಷಟ್ಸ್ಥಲ ಪಥವನ್ನು ಸಾಧಿಸುವುದಕ್ಕೆ ಸಹಾ ಯಕವಾಗುವಂತೆ ಅಷ್ಟಾವರಣಗಳನ್ನು ಅಳವಡಿಸಿಕೊಳ್ಳಬೇಕೆಂಬ ಮಾತು ಎಲ್ಲ ಸಾಧನೆಗೂ ಅರ್ಥವತ್ತಾಗಿ ಅನ್ವಯಿಸುತ್ತದೆ.
-✍️ Dr Prema Pangi
Comments
Post a Comment