ವಚನ ದಾಸೋಹ - ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ

ವಚನ:
ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ;
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ,
 ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನ್ನಕ್ಕರ.
-- ಶರಣೆ ಆಯ್ದಕ್ಕಿ ಲಕ್ಕಮ್ಮ
*ಅರ್ಥ*:
ಮನ ಶುದ್ಧವಿಲ್ಲವರಿಗೆ ದ್ರವ್ಯದ ಬಡತನ, ಹಣದ ಕೊರತೆ ಉಂಟಾಗುತ್ತದೆ. ಆದರೆ ಚಿತ್ತ ಮನ ಶುದ್ಧವಾಗಿ ಸತ್ಯ ಶುದ್ಧ ಕಾಯಕದಲ್ಲಿ,  ತೊಡಗಿಸಿಕೊಂಡವರಿಗೆ, ಎಲ್ಲೆಡೆಯೂ ಲಕ್ಷ್ಮಿಯೇ ಕಂಡು ಬರುತ್ತಾಳೆ. ಎಲ್ಲೆಡೆಯೂ
ಸುಖ ಸಮೃದ್ಧಿಯೇ ಕಂಡುಬರುತ್ತದೆ, ಯಾವ ಕೊರತೆಯೂ ಉಂಟಾಗುವುದಿಲ್ಲ ಎನ್ನುತ್ತಾಳೆ ಶರಣೆ ಆಯ್ದಕ್ಕಿ ಲಕ್ಕಮ್ಮ. ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯಲ್ಲಿ ತೊಡಗಿದವರಿಗೆ ಎಲ್ಲೆಡೆಯೂ ಲಕ್ಷ್ಮಿಯೇ ಕಂಡು ಬರುತ್ತಾಳೆ. 
*ವಚನ ವಿವೇಚನೆ*: 
ಆಸೆಯೇ ಸಕಲ ದುಃಖಕ್ಕೆ ಕಾರಣವೆಂಬ ಭಗವಾನ ಬುದ್ಧರ ಹೇಳಿಕೆಯಂತೆ,
 ಆಸೆಗೆ ಬಲಿಯಾದ ಮನಸ್ಸು, ನ್ಯಾಯ ಅನ್ಯಾಯಗಳ ವಿವೇಚನೆಯನ್ನೇ ಕಳೆದುಕೊಂಡು, ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹಗಳಿಗೆ ಗುರಿಯಾಗಿ ಅಶುದ್ಧವಾಗುತ್ತದೆ. ಸಂತೃಪ್ತಿ ಇಲ್ಲದೇ ಸದಾ ತೊಳಲುತ್ತದೆ. ತನ್ನ ಸುತ್ತಮುತ್ತಲೆಲ್ಲ ಅಶಾಂತಿಯಿಂದ ನಕಾರಾತ್ಮಕ ಭಾವನೆಗಳನ್ನು ಪಸರಿಸುತ್ತದೆ.
   ನಿಜ ಅರ್ಥದಲ್ಲಿ ನೋಡಿದರೆ ಸರಳವಾಗಿ ಬದುಕಲು ಅವಶ್ಯಕತೆಗಳು ಕಡಿಮೆ. ಬದುಕಲು ಅವಶ್ಯಕವಾದವುಗಳಿಗಿಂತ ಹೆಚ್ಚಿನವುಗಳನ್ನು ಆಶಿಸುವುದು ಆಸೆ ಎನ್ನಿಸಿಕೊಳ್ಳುತ್ತವೆ.
ಇದನ್ನು ಅರಿತು ಚಿತ್ತವನ್ನು ಶುದ್ಧವಾಗಿಟ್ಟುಕೊಂಡವನಿಗೆ ಎಲ್ಲೆಡೆಯೂ ಲಕ್ಷ್ಮಿ ಕಂಡು ಬರುತ್ತಾಳೆ. ಏಕೆಂದರೆ ಆತನು ತನ್ನ ಆವಶ್ಯಕತೆಗಿಂತ ಹೆಚ್ಚಿನದನ್ನು ಬಯಸುವುದಿಲ್ಲ. ತನಗೆ ಅವಶ್ಯಕವಾದುದನ್ನು ತನ್ನ ಸತ್ಯ ಶುದ್ದ ಕಾಯಕದಿಂದ ಪಡೆದುಕೊಳ್ಳುವುದರಿಂದ ಆತ ಸದಾ ಕಾಲ ಸಂತೃಪ್ತನಾಗಿರುತ್ತಾನೆ. ಆ ದುಡಿಮೆಯಲ್ಲಿಯೇ ಆತ ಸಮಾಜದ ಸೇವೆ, ಪರಮಾತ್ಮನ ಸೇವೆಯನ್ನು ಕಾಣುತ್ತಾನೆ. ಹೆಚ್ಚಿನದನ್ನು  ಗುರು ಲಿಂಗ ಜಂಗಮರ ಸೇವೆಗೆ ಅರ್ಪಿಸುತ್ತಾನೆ. ಸಮರ್ಪಣೆಯಿಂದ ಮಾಡುವ ಕಾಯಕವು ಉದಾತ್ತತೆಯನ್ನು ಪಡೆದುಕೊಳ್ಳುತ್ತದೆ. ಆ ಕಾಯಕದಿಂದ ಬರುವ ದ್ರವ್ಯವು ಸಂಭಾವನೆಯಾಗದೆ ಪರಮಾತ್ಮನ ಪ್ರಸಾದವಾಗುತ್ತದೆ. ಅದರಲ್ಲಿ ತನಗೆ ಅಗತ್ಯವಾದಷ್ಟನ್ನು ಇಟ್ಟುಕೊಂಡು ಉಳಿದುದನ್ನು  ಸಮಾಜಕ್ಕೆ ಅರ್ಪಿಸುವುದು ನಿಜವಾದ ದಾಸೋಹ. ಅದೇ ಅಮರೇಶ್ವರಲಿಂಗದ ಸೇವೆ ಎಂದು  ಹೇಳುತ್ತಾಳೆ ಉದಾತ್ತ ವಿಚಾರವಾದಿ ಶರಣೆ ಆಯ್ದಕ್ಕಿ ಲಕ್ಕಮ್ಮ. 
- ✍️Dr Prema Pangi
#ಪ್ರೇಮಾ_ಪಾಂಗಿ,#ಆಯ್ದಕ್ಕಿ_ಲಕ್ಕಮ್ಮ,
#ಮನ ಶುದ್ಧವಿಲ್ಲದವಂಗೆ ದ್ರವ್ಯದ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma