ಶರಣ ಪರಿಚಯ: ಮಹಾಶರಣ ಹರಳಯ್ಯನವರು

12ನೇ ಶತಮಾನದಲ್ಲಿ ಬಸವಾದಿ ಶರಣರ ಸಾಲಿನಲ್ಲಿ ಅತ್ಯಂತ ಹಿರಿಯ ಮತ್ತು ಸಮರ್ಥ ಸಿದ್ಧಿಯೋಗಿ ಸಂಕಲ್ಪ ಸಾಧಕ ಶರಣರು ಸಮಗಾರ ಹರಳಯ್ಯನವರು. ಬಸವಧರ್ಮವನ್ನು ಎತ್ತಿ ಹಿಡಿದ ಮಹಾಮಾನವತಾವಾದಿ ಶರಣರು. 
ತಂದೆ :ಪಾರಪಯ್ಯ,
ತಾಯಿ : ಹೊನ್ನಮ್ಮ
ಜನ್ಮಸ್ಥಳ : ವಿಜಯಪುರ ಜಿಲ್ಲೆ ಕಲಿಗೂಡು
ದವನದ ಹುಣ್ಣಿಮೆಯಂದು ಹರಳ ಪೂಜೆಯ ಫಲವಾಗಿ ಜನಿಸಿದನೆಂದು  ಹರಳಯ್ಯಎಂದು ನಾಮಕರಣ ಮಾಡುತ್ತಾರೆ. ಆ ಮನೆತನಕ್ಕೆ ಇಂದಿಗೂ ಹರಳಯ್ಯನ ಮಠ ಎಂದು ಕರೆಯುತ್ತಾರೆ.
“ದವಣದ ಹುಣ್ಣಿಮೆ ದಿನ ಬಂತು ಧರೆ ದೇವ ಹರಳಯ್ಯ ಧರೆಗೆ ಬಂದಾನೊ” ಜನಪದದಲ್ಲಿ ಶರಣ ಹರಳಯ್ಯನ ಜನನವನ್ನು  ಪದ ಕಟ್ಟಿ ಜಾನಪದರು ಹಾಡುತ್ತಾರೆ. ಅರಳಲಿಂಗ ಪೂಜೆಯ ಫಲವಾಗಿ ಜನಿಸಿದ ಶರಣನೇ ಅರಳಲಿಂಗ ಮುಂದೆ ಜಾನಪದರಲ್ಲಿ ಹರಳಯ್ಯ ಎಂದು ಪ್ರಸಿದ್ಧ ಶರಣನಾದನು.

ಹರಳಯ್ಯನವರು ಬಾಲ್ಯದಲ್ಲಿಯೇ ಅನೇಕ ಪವಾಡಗಳನ್ನು ಮಾಡಿದ್ದರು. ಬಾಯಿಂದ ಬಂದ ಮಾತು ದಿಟವಾಗುವಂತ ಮಹಾನ ಚೇತನಶಕ್ತಿ ಆವರಲ್ಲಿತ್ತು. ಬಸವಕಲ್ಯಾಣ ಸೇರುವ ಪೂರ್ವದಲ್ಲಿಯೇ ಹರಳಯ್ಯ ಸಾತ್ವಿಕ ಶರಣರಾಗಿದ್ದರು. ಅವರ ಅನೇಕ ಪವಾಡ ಕಥೆಗಳಿವೆ. ಇಡೀ ಬಡಾವಣೆಗೆ ಬೆಂಕಿ ಹತ್ತಿ ಉರಿಯುತ್ತಿರುವಾಗ ಮಳೆ ತರಿಸಿದ್ದರು, ತನ್ನ ಪ್ರದೇಶದ ರಾಜನಿಗೆ ಹಾವು ಕಚ್ಚಿದಾಗ ತಮ್ಮ ಶಕ್ತಿಯಿಂದ ಬದುಕುಳಿಯುವಂತೆ ಮಾಡಿದ್ದರು.  

ಹರಳಯ್ಯ ಮತ್ತು ಕಲ್ಯಾಣಮ್ಮ  ದಂಪತಿಗಳು ಇಂದಿನ ಗುಲಬರ್ಗಾ ಜಿಲ್ಲೆಯ ಮುದೇನೂರ ದಲ್ಲಿ  ವಾಸಿಸುತ್ತಿದ್ದರು. ತಮ್ಮ ಕುಲ ಕಸುಬಾದ ಪಾದರಕ್ಷೆ ತಯಾರಿಸುತ್ತಿದ್ದರು. ಗುರು ಬಸವಣ್ಣನವರ ಕೀರ್ತಿಯನ್ನು ಕೇಳಿ ಅವರ ಸಮಸಮಾಜ ನಿರ್ಮಾಣ ಕಾರ್ಯದ ಕ್ರಾಂತಿಕಾರಕ ವಿಚಾರಗಳಿಂದ  ಪ್ರಭಾವಿತರಾಗಿ ತಾವು ಇದನ್ನು ಕಂಡು ಪುನಿತರಾಗಿ ಸಾಧ್ಯವಾದರೆ ಕಾರ್ಯದಲ್ಲಿ ಭಾಗಿಯಾಗಲು ಅಮರೇಶ್ವರ ಮಾರಯ್ಯ ಮತ್ತು ಲಕ್ಕಮ್ಮ ದಂಪತಿಗಳೊಂದಿಗೆ ಕಲ್ಯಾಣಕ್ಕೆ ಬಂದರು.

ಒಮ್ಮೆ ಕಲ್ಯಾಣ ಪಟ್ಟಣದ ರಾಜ ಬೀದಿಯಲ್ಲಿ, ದಿನ ನಿತ್ಯದಂತೆ ಹರಳಯ್ಯನವರು ಪಾದರಕ್ಷೆಗಳನ್ನು ಮಾರಿಕೊಂಡು ಬರುತ್ತಿದ್ದರು. ಆಕಸ್ಮಿಕವೋ ಏನೋ, ಅದೇ ಸಮಯಕ್ಕೆ ಗುರು ಬಸವಣ್ಣನವರು ಹರಳಯ್ಯನವರಿಗೆ
 ಎದುರಾದರು. ಇವರನ್ನು ಕಂಡ ತಕ್ಷಣ್ ಹರಳಯ್ಯನವರು; “ಗುರು ಬಸವ ತಂದೆ ಶರಣು” ಎಂದು ಕೈ ಮುಗಿದರು. ಅದಕ್ಕೆ ಪ್ರತಿಯಾಗಿ ಬಸವಣ್ಣನವರು, “ಶರಣು ಶರಣಾರ್ಥಿಗಳು ಹರಳಯ್ಯನವರಿಗೆ”; ಎಂದು ಬಾಗಿ ನಮಸ್ಕರಿಸಿದರು. ಬಸವಣ್ಣನವರು; “ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ” ಎಂಬ ಬೃತ್ತ್ಯಾಚಾರ ಪಾಲಿಸುವವರು. ಪ್ರತಿ ಕಾಯಕಯೋಗಿ ಶಿವಭಕ್ತರನ್ನು ಕಂಡಾಗ ಹರ್ಷಗೊಂಡು ಕೈ ಮುಗಿಯುವವರು.

ತನ್ನ ಒಂದು “ಶರಣು" ಸ್ವೀಕರಿಸಿದರೆ ತನ್ನ ಜನ್ಮವೇ ಪಾವನವಾಯಿತೆಂದು ತಿಳಿದ ಹರಳಯ್ಯನನವರಿಗೆ; ಗುರು ಬಸವಣ್ಣನವರು ಪ್ರತಿಯಾಗಿ ಎರಡು ಬಾರಿ ಶರಣು ಹೇಳಿದ್ದು ಕೇಳಿಸಿಕೊಂಡಾಗ ಆಶ್ಚರ್ಯ, ಸಂತೋಷ, ದಿಗಿಲು, ಆತಂಕ ಒಟ್ಟಿಗೆ ಆದವು. ಸಾಮಾನ್ಯ ಹೀನಕುಲ-ಕಸುಬಿನವನಾದ ತನಗೆ ಬಸವಣ್ಣ ಎರಡು ಸಲ ಶರಣಾರ್ಥಿ ಎಂದರಲ್ಲಾ ಎಂದು ಹರಳಯ್ಯನ ಮನಸ್ಸಿನಲ್ಲಿ ಕಳವಳ ಉಂಟಾಯಿತು. ಅದೇ ಭಾವದಲ್ಲಿ  ಮನೆಗೆ ತೆರಳಿದಾಗ ಪತ್ನಿ ಕಲ್ಯಾಣಮ್ಮ, ಕೈ ಕಾಲು ಮುಖ ತೊಳೆದುಕೊಳ್ಳಲು, ನೀರು ಕೊಡಲು ಹೋದಾಗ, ಹರಳಯ್ಯನವರ ಚಿಂತಾಕ್ರಾಂತವಾದ ಮುಖ ಗಮನಿಸಿ ತಾನೂ ಆತಂಕಗೊಳ್ಳುತ್ತಾಳೆ. ಗಂಡನ ಚಿಂತಾಕ್ರಾಂತಕ್ಕೆ  ಕಾರಣ ತಿಳಿಯಲು  ಹರಳಯ್ಯ, ತಾನು ದಾರಿಯಲ್ಲಿ ಬರುವಾಗಿನ ಘಟನೆಯನ್ನೆಲ್ಲ, ಸವಿವರವಾಗಿ ಪತ್ನಿಗೆ ವಿವರಿಸಿ ಹೇಳಿದಾಗ ಅವಳೂ ಮೂಕವಿಸ್ಮಿತಳಾದಳು. ಮಾನಸಿಕವಾಗಿ ಹೊರಲಾರದ ಹೊರೆಯನ್ನು ಇಳಿಸಿಕೊಳ್ಳಲು ಪರಿಹಾರ ಕಂಡುಕೊಂಡ ಕಲ್ಯಾಣಮ್ಮ,  ಗುರು ಬಸವಣ್ಣನವರಿಗೆ ಸುಂದರವಾದ ಚಮ್ಮಾವುಗೆಗಳನ್ನು ಮಾಡಿ, ಅವುಗಳ ಅಟ್ಟಿಯಲ್ಲಿ ನಮ್ಮ ತೊಡೆಯ ಚರ್ಮವನ್ನು ಸೇರಿಸೋಣ. ಗುರು ಬಸವಣ್ಣನವರು ಮೆಟ್ಟಿದರೆ ನಾವು ಪುನೀತರಾಗುತ್ತೇವೆ ಎಂದು ಪತಿಗೆ ಸಲಹೆ ನೀಡಿದಳು. ಹರಳಯ್ಯನವರಿಗೆ ಒಪ್ಪಿಗೆಯಾಯಿತು. 
ಮರುದಿನ ಬಸವನಾಮ ಸ್ಮರಿಸುತ್ತ, ಹರಳಯ್ಯನವರು ತಮ್ಮ ಬಲ ತೊಡೆಯ, ಕಲ್ಯಾಣಮ್ಮನವರು ತಮ್ಮ ಎಡ ತೊಡೆಯ ಚರ್ಮ ಕೊಯ್ದು ಅಟ್ಟೆಯಲ್ಲಿ ಸೇರಿಸಿದರು.

#ಹರಳಯ್ಯ ಕೊರೆದ ಬಲದೊಡಿ ಚರ್ಮ
ಹರನೆಂದು ಮಡದಿಯೆಡದೊಡೆಯ ತಾ ಕೊಯ್ದು
ಭರದಿ ಹದಮಾಡಿ ಒಣಗಿಸಿದ ||

ಕೂಡಲೇ ಶ್ರದ್ಧೆ, ಭಕ್ತಿ, ಸಮರ್ಪಣಾ ಭಾವಗಳಿಂದ ಹರಳಯ್ಯ ಮತ್ತು  ಕಲ್ಯಾಣಮ್ಮ ನವರು ತಮ್ಮ ತೊಡೆಗಳಿಂದ ಸುಲಿದು ತೆಗೆದ ಚರ್ಮವನ್ನು ಜೋಡಿಸಿ ಅಪೂರ್ವವಾದ ಪಾದುಕೆಗಳನ್ನು ತಯಾರಿಸಿದರು. ಸಡಗರದಿಂದ ರೇಶ್ಮೆಯ ನವಿರಾದ ಬಟ್ಟೆಯಲ್ಲಿ ಅವುಗಳನ್ನು ಸುತ್ತಿಕೊಂಡು ಬಸವಣ್ಣನಿಗೆ ಅರ್ಪಿಸಲೆಂದು ಮಹಾಮನೆಗೆ  ಹೊರಟರು.
ಗುರು ಬಸವಣ್ಣನವರು ದೂರದಿಂದಲೇ ಕಲ್ಯಾಣಮ್ಮ ಮತ್ತು ಹರಳಯ್ಯನವರನ್ನು ಕಂಡು, ಸತ್ಕರಿಸಿ ಒಳಗೆ ಕರೆದೊಯ್ದರು.

ಹರಳಯ್ಯನವರು ಮಹಾಮನೆಗೆ ಬಂದಾಗ..
#ಹಳ್ಳುಗ ಬಂದಿಹನೆಂದು ಬಸವಣ್ಣಗೆ
ಮೆಲ್ಲನೆ ಕಿವಿಯೊಳರುಹೆಂದ ಪ್ರಾಣದ
ವಲ್ಲಭನೊಡನೆ ಉಸುರಿದ ॥ 

ಚಿತ್ರ ಸಂಗಮನಾಥ ಚಿತ್ರದಿಂದಲಿ ಹೋಗಿ
ಚಿತ್ತದೊಳಗೆ ಅರುಹಿದನು ಬಾಗಿಲಿಗೆ 
ಭಕ್ತ ಬಂದಿಹನು ಬಸವಣ್ಣ ॥

ಬಂದುದನರಿದನು ತಂದೆ ಬಸವಣ್ಣನು
ಮುಂದಣ ಹರೆಯ ಹೋಯಿಸಿದ ಬಸವಣ್ಣ 
"ನಂದಿಯ ಧ್ವಜವ" ತರಿಸಿದ ॥

ಬಾಗಿಲಿಗೆ ಬಂದಿಹನು ನಾಗಧರನ ಭಕ್ತ
ಸಾಗಿಸುವರಿಲ್ಲ ಓಳಯಿಕೆ ಇಂದಕ್ಕೆ 
ನಾಗಲೆದೇವಿಗರುಹಿದ ॥

"ನಂದಿಯ ಧ್ವಜವನು" ಮುಂದೆ ಗುಡಿ ತೋರಣ
ದುಂದುಭಿ ಹರೆ ಮೊಳಗಿಸಿದ ಬಸವಣ್ಣ 
ಗಂಧದುಪ್ಪರಿಗೆಯಿಂದ ಹೊರಟ ॥

ಕಸ್ತುರಿ ಬಾಗಿಲ ಮತ್ತೆ ಹೊರಹೊಂಟನು
ಸ್ವಸ್ತದಿಂದಲಿ ನಡೆಗೊಂಡ ಬಸವಣ್ಣ 
ಮಸ್ತಕ ಮಣೆದು ನಮಿಸಿದ॥
- ಶ್ರೀ ಹರಳಯ್ಯಗಳ ತ್ರಿಪದಿ

ಶರಣ ಹರಳಯ್ಯನವರು, ತಾವು ತಂದ ಚಮ್ಮಾವುಗೆಗಳನ್ನು ಗುರು ಬಸವಣ್ಣನವರಿಗೆ ಕೊಟ್ಟು, ಅವನ್ನು ಸ್ವೀಕರಿಸಬೇಕೆಂದು  ಬೇಡಿಕೊಂಡರು.
ಹರಳಯ್ಯನವರು ಈ ಚಮ್ಮಾವುಗೆಗಳನ್ನು ಒಯ್ದು ಬಸವಣ್ಣನವರಿಗೆ ಕೊಟ್ಟಾಗ, ಅವರು ಮೂಕವಿಸ್ಮಿತರಾದರು. ಭಾವಪರವಶರಾಗಿ  “ಈ ಪವಿತ್ರ ಚಮ್ಮಾವುಗೆಗೆಳನ್ನು ಮೆಡುವ ಯೋಗ್ಯತೆ, ನನ್ನದಲ್ಲ. ಇವುಗಳ ಸ್ಥಾನ ನನ್ನ ಶಿರಸ್ಸು ಎಂದು ಹೇಳುತ್ತಾ ಅವುಗಳನ್ನು ತಮ್ಮ ತಲೆಯ ಮೇಲೆ ಇಟ್ಟುಕೊಂಡರು. "ಕೂಡಲ ಸಂಗಮನಿಗಲ್ಲದೆ ನನಗೆ ಸಲ್ಲವು, ಇವು ದೇವರ ಪಾದರಕ್ಷೆಗಳು’ ಅಲ್ಲಿಯೇ ಸಮರ್ಪಿಸಿ"ಎಂದರು. ಬಸವ ಪುರಾಣ, ಭೈರವೇಶ್ವರಕಾವ್ಯ, ಕಥಾಮಣಿಸೂತ್ರರತ್ನಾಕರ, ಶರಣ ಲೀಲಾಮೃತ ಗ್ರಂಥಗಳಿಂದ ಇದರ ವಿವರ ಗೊತ್ತಾಗುತ್ತದೆ.

#ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದು;
ಸರಿಯಲ್ಲ ನೋಡಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಚಮ್ಮಾವುಗೆಗೆ! 

ಚರ್ಮದ ಕರ್ಮವ । ತೊಳೆವ ಪರುಷ ನೀನು।
ವರ್ಮವ ಬಲ್ಲವರಾರು ಹರಳಯ್ಯ ।
ನಿರ್ಮಲ ದೇಹಿ ಶರಣಾರ್ಥಿ
- ಹರಳಯ್ಯನ ತ್ರಿಪದಿ /64

ಪಾದುಕೆ ದೇವರಿಗೇ ಸರ್ಪಿಸಲು ಹೊರಟಾಗ, ಬ್ರಾಹ್ಮಣ ಮಂತ್ರಿ ಮಧುವರಸರು ಎದುರಾಗಿ ಪಾದುಕೆಗಳನ್ನು ಬಹುವಾಗಿ ಇಷ್ಟಪಟ್ಟು ಬೇಡ ಎಂದರೂ ಕೇಳದೆ ಬಲವಂತದಿಂದ ಆ ಪಾದುಕೆಗಳನ್ನು ಮೆಟ್ಟಿಕೊಳ್ಳಲು ಪ್ರಯತ್ನಿಸಿದರು. ಮಧುವರಸ ಬ್ರಾಹ್ಮಣ ಕುಲದಲ್ಲಿ ಹುಟ್ಟಿ ಕಲ್ಯಾಣದ ಬಿಜ್ಜಳನಲ್ಲಿ ಒಬ್ಬ ಶ್ರೇಷ್ಠ ಅಧಿಕಾರಿ ಎನಿಸಿದ್ದರು. ಹರಳಯ್ಯನವರು ತಯಾರಿಸಿದ ಪಾದುಕೆಗಳನ್ನು ಮೆಟ್ಟಿದ ಫಲವಾಗಿ ಮೈಯೆಲ್ಲ ಉರಿಯದ್ದು ಪರಿತಪಿಸಿದರು. ಯಾವುದೇ ಉಪಚಾರದಿಂದ ಉರಿ ಕಡಿಮೆಯಾಗದಿದ್ದಾಗ ಹಾಗೂ ಆ ಉರಿಯನ್ನು ಕಳೆದುಕೊಳ್ಳಲು ಹರಳಯ್ಯನವರ ಮನೆಯಲ್ಲಿ  ಸುಣ್ಣದ ನೀರನ್ನು ಹಾಕಿ ಚರ್ಮವನ್ನು ನೆನೆಸಿ ಹದ ಮಾಡಲು ಬಳಸುವ ಅಗಲಬಾಯಿಯ ಮಣ್ಣಿನ ಪಾತ್ರೆಯಲ್ಲಿ ಇರುವ 'ಕರಿಬಾನಿ' ನೀರಿನಿಂದ ತೊಳೆಯಲು ಉರಿ ನಿಂತಿತು. ಶರಣರ ಮಹಿಮೆಯನ್ನು ಅರಿತು ಮಧುವರಸರೂ ಬಸವಣ್ಣನ ಅನುಯಾಯಿಗಳಾದರು.

ಮುಂದೆ  ಸಮಗಾರ ಕುಲ ಪೂರ್ವಾಶ್ರಮದಿಂದ ಬಂದ ಶರಣ ಹರಳಯ್ಯನ ಮಗನಾದ ಶೀಲವಂತನಿಗೂ ಮತ್ತು ಬ್ರಾಹ್ಮಣಕುಲ ಪೂರ್ವಾಶ್ರಮದಿಂದ ಬಂದ ಶರಣ ಮಧುವರಸನ ಮಗಳಾದ ಲಾವಣ್ಯವತಿ ಪರಸ್ಪರ ಮೆಚ್ಚಿ ಮದುವೆ ಮಾಡಿಕೊಳ್ಳಲು ಇಚ್ಚಿಸಿದಾಗ ಅನುಭವ ಮಂಟಪದಲ್ಲಿ ಎಲ್ಲ ಶರಣರ ಚರ್ಚೆಯಾಗಿ ಇಬ್ಬರೂ ಹೊಸ ಧರ್ಮ ಸ್ವೀಕರಿಸಿರುವದರಿಂದ ಇದು ವರ್ಣಸಂಕರವಾಗದೆಂದು ಶರಣರು ಅಭಿಪ್ರಾಯ ಪಡುತ್ತಾರೆ.
  ಶರಣರು, ತಮಗೆ ಬರಬಹುದಾದ ಮರಣಕ್ಕೆ ಅಂಜದೆ ‘ಮರಣವೇ ಮಹಾನವಮಿ’ ಎಂದು ಎಂದು ನಿಶ್ಚಯಿಸಿ ಮದುವೆ ಮಾಡಿದರು.

ಆದರೆ ಸಮಗಾರ ವರನಿಗೆ ಬ್ರಾಹ್ಮಣ ಕನ್ಯೆಯನ್ನು ಕೊಡುವುದು ಧರ್ಮಬಾಹಿರವಾದ ವಿಲೋಮ ವಿವಾಹ ಎಂದು ಸಂಪ್ರದಾಯವಾದಿ ಪುರೋಹಿತಶಾಹಿಗಳು ದೊರೆ ಬಿಜ್ಜಳನ ಬಳಿ ವರ್ಣಸಂಕರ ವಾಯಿತೆಂಬ ನ್ಯಾಯ ಮಂಡಿಸುತ್ತಾರೆ. ಆಸ್ಥಾನದ ಹಿರಿಕ ನಾರಾಯಣ ಕ್ರಮಿತರು ಹಾಗೂ ಕೊಂಡೆ ಮಂಚಣ್ಣ ರು ಬಸವಣ್ಣವರ  ಅಭಿವೃದ್ಧಿ , ಅವರ ಜನಪ್ರಿಯತೆ, ಶರಣಧರ್ಮದ ಪ್ರಸಿದ್ಧಿ, ಅದನ್ನು ಸ್ವೀಕರಿಸುವ ಜನರ ದಂಡು ಕಂಡು ಅಸೂಯೆಗೊಂಡಿದ್ದರು.  ಇವರಿಗೆ ಅನುಭವ ಮಂಟಪದಲ್ಲಿ ನಡೆದ ಅಂತರಜಾತಿ ವಿವಾಹವು ಅಸ್ತ್ರವಾಯಿತು.  ಬಿಜ್ಜಳನ ಆಜ್ಞೆಯಂತೆ ಗುರುಬಸವಣ್ಣನವರನ್ನು ಗಡೀಪಾರು ಮಾಡಿ ರಾಜ್ಯದಿಂದ ಹೊರಕಳಿಸಿದರು. ಶೀಲವಂತ, ಮಧುವರಸ ಮತ್ತು ಹರಳಯ್ಯಯನವರಿಗೆ ಎಳೆಹೊಟೆ ಎಂಬ ಉಗ್ರ ಶಿಕ್ಷೆ ಯಾಯಿತು. ಹರಳಯ್ಯ, ಮಧುವರಸ, ಹಾಗು ಶೀಲವಂತರಿಗೆ ಎಳೆಹೊಟೆ ಶಿಕ್ಷೆಯನ್ನು ಕೊಂಡೆ ಮಂಚಣ್ಣ ಪ್ರಕಟಿಸಿದನು. "ಹರಹರ ಮಹಾದೇವ, ಮರಣವೇ ಮಹಾನವಮಿ, ಶ್ರೀ ಗುರು ಬಸವ ಲಿಂಗಾಯ ನಮಃ, ಓಂ ನಮಃ ಶಿವಾಯ" ಎನ್ನುತ್ತಾ ಕ್ರೂರ ಶಿಕ್ಷೆಯನ್ನು ಸಾತ್ವಿಕ ನಿಷ್ಠೆಯಿಂದ ಅನುಭವಿಸಿದರು. ಎಳೆಹೊಟೆ ಶಿಕ್ಷೆಯಲ್ಲಿ ಮಧುವರಸ, ಹಾಗು ಶೀಲವಂತ ಅಲ್ಲಿಯೇ ಲಿಂಗೈಕ್ಯರಾದರು. ಪ್ರಭುತ್ವ ವಿರೋಧಿಯೆಂದು ಭಾವಿಸಲಾದ ಸಾವಿರಾರು ಅಮೂಲ್ಯ ವಚನ ಕಟ್ಟುಗಳನ್ನು  ಬೆಂಕಿಗೆಸೆದು ಸುಡಲಾಯಿತು. ಕಲ್ಯಾಣದಲ್ಲಿ ರಕ್ತದ ಹೊಳೆಯೇ ಹರಿಯಿತು. ಕಳಚೂರ ಮತ್ತು ಚಾಲುಕ್ಯರ ವೈರತ್ವದ ರಾಜಕೀಯ ಘಟನೆಗಳೂ ಇದರ ಜೊತೆ ಸೇರಿ ಈ ಕ್ರಾಂತಿಯು ಕಲ್ಯಾಣಿ ಚಾಲುಕ್ಯರ ಸಾಮಂತರಾದ ಜಗದೇವ ಮತ್ತು ಮಲ್ಲಿಬೊಮ್ಮರಿಂದ ಬಿಜ್ಜಳನ ಕೊಲೆಯಲ್ಲಿ ಪರ್ಯವಸಾನವಾಯಿತು. ಬಿಜ್ಜಳನು ತನ್ನ  ದಾಯಾದಿಗಳಾದ ಕಲ್ಯಾಣಿ ಚಾಲುಕ್ಯರ ರಾಜ ನನ್ನು ಸೋಲಿಸಿ, ರಾಜ್ಯ ಆಕ್ರಮಿಸಿ ರಾಜನನ್ನು ಬಂಧಿ ಯಾಗಿರಿಸಿದ್ದನು. ಜಗದೇವ ಮತ್ತು ಮಲ್ಲಿಬೊಮ್ಮ ಇಬ್ಬರೂ ಶರಣರಾಗಿದ್ದರಿಂದ ಈ ಕೊಲೆಯ ಆರೋಪ  ಶರಣರ ಮೇಲೆ ಬಂದು ಕಂಡ ಕಂಡಲ್ಲಿ ಬಿಜ್ಜಳನ ಮಗ ಸೋಮಿದೇವನ ಸೈನಿಕರು ಎಲ್ಲಾ ಅಮಾಯಕ ಸಾತ್ವಿಕ ಶರಣರನ್ನು ಕೊಲ್ಲಲಾರಂಬಿಸಿದರು.
ಮುಂದೆ ಶರಣರು ಉಳವಿಗೆ ತೆರಳುವ ನಿರ್ಧಾರ ದ ಸಮಯದಲ್ಲಿ ಚನ್ನಬಸವಣ್ಣನವರಿಗೆ ಈ ಪಾದರಕ್ಷೆಗಳ ಸಂರಕ್ಷಣೆಯ  ಚಿಂತೆಯುಂಟಾಯಿತು. ಅವರು ಗವಿಸಿದ್ದಪ್ಪ ಎಂಬ ಶರಣನನ್ನು ಕರೆದು ಈ ಪಾದರಕ್ಷೆಗಳನ್ನು ಅವನಿಗೆ ಒಪ್ಪಿಸಿ, ದಕ್ಷಿಣ ದಿಕ್ಕಿನಲ್ಲಿ ಮೂರು ಹಗಲು ಮೂರು ರಾತ್ರಿ ನಡೆದು ಹೋಗಿ ಆಗ ತಲುಪಿದ ಊರಲ್ಲಿ ಈ ಪಾದರಕ್ಷೆಗಳನ್ನು ಸುರಕ್ಷಿತವಾಗಿ ಇರಿಸಲು ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು. ಅವನು ಈ ರೀತಿ ಬಿಜ್ಜನಹಳ್ಳಿಗೆ ಬಂದು  ಪಾದರಕ್ಷೆಗಳನ್ನು ತಂದನು. ಬಿಜ್ಜನಹಳ್ಳಿ ಈಗಿನ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿಯ ಒಂದು ಚಿಕ್ಕ ಗ್ರಾಮ. ಗವಿ ಸಿದ್ದಪ್ಪ ಶರಣನ ಸಮಾಧಿಯೂ ಈ ಊರಲ್ಲಿ ಇದೆ. 
ನೆಲಮನೆಯಿಂದ ಕಟ್ಟಡದಲ್ಲಿ ಸಮಾಧಿಯಿದ್ದು ಮೇಲೆ ಚೌಕ ಆಕಾರದ ಕಟ್ಟೆ ಇದೆ. ಹೀಗೆ ಎಂಟನೂರು ವರ್ಷಗಳಿಂದಲೂ ಸಂರಕ್ಷಿಸಲ್ಪಟ್ಟ ಪೂಜೆಗೊಳ್ಳುತ್ತಿರುವ ಈ ಪಾದರಕ್ಷೆಗಳು ಬಸವಣ್ಣವರಿಗಾಗಿ ತಯಾರಿಸಿದ, ಬಸವಣ್ಣನವರು ಅವುಗಳನ್ನು ಕಾಲಲ್ಲಿ ಮೆಟ್ಟಿಕೊಳ್ಳದೆ ತಲೆಯ ಮೇಲಿರಿಸಿಕೊಂಡ ಪಾದರಕ್ಷೆಗಳು ಸುರಕ್ಷಿತವಾಗಿ ಕಾಯ್ದಿರಿಸಿದ್ದಾರೆ. ಈಗ ಆ ಪಾದರಕ್ಷೆಗಳು ಸೊಲಬ ಮನೆತನದವರ ಸುಪರ್ದಿ ಯಲ್ಲಿದ್ದು, ಒಂದು ಚಿಕ್ಕ ಮಂದಿರದಲ್ಲಿ, ಗಾಜಿನ ಚೌಕೋನಿ ಪೆಟ್ಟಿಗೆಯಲ್ಲಿ ಇರಿಸಿ  ಅವರಿಂದ ನಿತ್ಯವೂ  ಪೂಜೆ ನಡೆಯುತ್ತಿದೆ.  ಪಾದರಕ್ಷೆಗಳು ಸುಸ್ಥಿತಿಯಲ್ಲಿ ಇವೆ. ಈ ಪಾದರಕ್ಷೆಗಳಲ್ಲಿ ಉಪಯೋಗಿಸಿರುವ ಚರ್ಮ ಮಾನವ ಚರ್ಮ ಎಂದು ಪ್ರಯೋಗ ಶಾಲಾ ಪರೀಕ್ಷೆ ನಡೆಸಿ ಹೇಳಿದ್ದಾರೆ. ಊರಿನ ಜನ ಇವು ಗುರು ಬಸವಣ್ಣನವರ ಪಾದರಕ್ಷೆಗಳು ಎಂದು ತಿಳಿದು  ತಮ್ಮ ಪ್ರಾಣಕ್ಕೆ ಮಿಗಿಲಾಗಿ ಕಾಪಾಡುತ್ತಿದ್ದಾರೆ. 
   ಶ್ರೀ ಕ್ಷೇತ್ರ ಉಳವಿಯತ್ತ ಪ್ರಯಾಣ ಬೆಳೆಸಿದ  ಶರಣರ ತಂಡ ತಿಗಡಿ ಗ್ರಾಮದಲ್ಲಿ ತಂಗಿದ್ದಾಗ ಹರಳಯ್ಯನವರ ಧರ್ಮ ಪತ್ನಿ ಕಲ್ಯಾಣಮ್ಮ ಕಾಲವಾದರು. ಕಲ್ಯಾಣಮ್ಮಳ ಸಮಾಧಿ  ಬೆಳಗಾವಿ ಜಿಲ್ಲೆಯ ತಿಗಡಿಯಲ್ಲಿ ಈಗಲೂ ಇದೆ.

ಎಳೆಹೊಟೆ ಶಿಕ್ಷೆಗೆ ಒಳಗಾಗಿ ಅರಜೀವವಾದ ಹರಳಯ್ಯನವರನ್ನು ಶರಣರು ವಿಜಯಪುರ ತಾಲ್ಲೂಕಿನ ಮಮದಾಪುರ ಗ್ರಾಮದ ಸಮೀಪದ ಶೇಗುಣಸಿ ಗ್ರಾಮದ ಹತ್ತಿರ ಇರುವ ಹರಳಯ್ಯನ ಗುಂಡಿ ಎಂಬ ಸ್ಥಳಕ್ಕೆ ಕೊಂಡೈದು, ಜೀವಕ್ಕೆ ಅಪಾಯ ವಿದ್ದುದರಿಂದ  ಅಡಗಿಸಿಟ್ಟು  ಹಲವು ದಿನ ಶುಶ್ರೂಷೆ ಮಾಡಿ ಬದುಕಿಸಿದರು. ನಂತರ ದಕ್ಷಿಣಕ್ಕೆ ಈಗಿನ  ಚಾಮರಾಜನಗರಕ್ಕೆ ಹೊರಟ ಶರಣರ ತಂಡ(ಮಾದಾರಿ ಮಾದಯ್ಯ ಮತ್ತು ಮಂಟೇ ಸ್ವಾಮಿ) ಸೇರಿಕೊಂಡು ಅಲ್ಲಿ ಹಲವು ವರ್ಷಗಳ ಕಾಲ ಗುರು ಬಸವಣ್ಣನವರ ತತ್ವ ಪ್ರಚಾರ ಮಾಡಿದರು. ಚರ ಜಂಗಮರಾಗಿ ಲೋಕ ಕಲ್ಯಾಣಕ್ಕಾಗಿ ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ಹಲವಡೆ ಸಂಚಾರ ಮಾಡಿ ಶರಣ ಹರಳಯ್ಯನವರು  ಸ್ಥಾಪಿಸಿದ 34 ಕೇಂದ್ರಗಳು ಇಂದು ಪವಾಡ ಕ್ಷೇತ್ರಗಳಾಗಿವೆ.  ಅವರ ಸ್ಮಾರಕ ಸಮಾಧಿ ಚಾಮರಾಜನಗರದ ಜಿಲ್ಲೆಯ ಕೊಳ್ಳೆಗಾಲದ ಪಕ್ಕದ ಹರಳೆ ಎಂಬ ಗ್ರಾಮದಲ್ಲಿ ಇವೆ. ಹರಳಯ್ಯನವರ ವಚನಗಳು ಲಭ್ಯವಾಗಿಲ್ಲ. ಕರ್ನಾಟಕದ ವಿವಿಧ ಭಾಗಗಳಲ್ಲಿ ಇಂದಿಗೂ ವಿಜೃಂಭಣೆಯಿಂದ ಅವರ ಜಯಂತಿ, ಜಾತ್ರೆ ಆಚರಿಸಿಕೊಂಡು ಬರಲಾಗುತ್ತಿದೆ. ಗುರು ಬಸವಣ್ಣನವರ ಪರುಷ ಸ್ಪರ್ಶಕ್ಕೆ ಸಿಕ್ಕು ಪರಿವರ್ತಿತರಾದ ಮಹಾಶರಣ ಹರಳಯ್ಯನವರು ಎಲ್ಲ ದೀನದಲಿತ ವರ್ಗಗಳ ಅಭ್ಯುದಯ ಮಾಡಿ ಮಹಾಶರಣರಾದರು. ಕಲ್ಯಾಣ ರಕ್ತ ಕ್ರಾಂತಿಯಲ್ಲಿ ಹರಳಯ್ಯ ಮತ್ತು ಇತರ ಬಸವಾದಿ ಶರಣರು ಮಾಡಿದ ತ್ಯಾಗ ಇಂದಿಗೂ ಶರಣರ  ಹೃದಯಗಳಲ್ಲಿ ನಿರಂತರ ನೋವಿನ ಜ್ವಾಲೆಯಾಗಿ ಉಳಿದಿದೆ.

- ✍️ Dr Prema Pangi
#ಪ್ರೇಮಾ_ಪಾಂಗಿ, #ಮಹಾಶರಣ_ಹರಳಯ್ಯ ನವರು

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma