ಬಸವಾದಿ ಶರಣರು ಮತ್ತು ಆಹಾರ ಪದ್ದತಿ


*ಬಸವಾದಿ ಶರಣರು ಮತ್ತು ಆಹಾರ ಪದ್ಧತಿ*

12 ನೆಯ ಶತಮಾನದ ಬಸವಾದಿ ಶರಣರ ಆಹಾರ ಪದ್ಧತಿ ಸಸ್ಯಾಹಾರವು ಯಾವುದೇ ಸಸ್ಯಾಹಾರ ಮೇಲು, ಮಾಂಸಾಹಾರ ಕೀಳು ಎಂಬ ಭಾವನೆ ಮೇಲೆ ಬಂದುದಲ್ಲ. ಅದು "ಅಹಿಂಸೆ, ಪ್ರಾಣಿದಯೆ" ಯಿಂದ ಪ್ರೇರಿತವಾದುದು.
'ಸರ್ವ ಜೀವ ದಯಾಪಾರಿ' ಯಾದವನು ಯಾವ ಜೀವಿಯನ್ನೂ ಹಿಂಸಿಸಲಾರ. 
ಅಪಾರವಾದ ಅನುಕಂಪತೆಯಿಂದ ತನ್ನಂತೆ ಎಲ್ಲ ಪ್ರಾಣಿಗಳನ್ನೂ ಕಂಡ ಶರಣರು
ಹಿಂಸೆಯನ್ನು ಯಾವುದೇ ಕಾರಣಕ್ಕಾಗಲೀ  ಒಪ್ಪಲಿಲ್ಲ.
ದಯೆಯೇ ಧರ್ಮದ ಮೂಲವಯ್ಯ ಎಂದ ಶರಣರು ಎಲ್ಲ ಧರ್ಮ ಸಾಧನೆಗೂ ಮೂಲಭೂತವಾದದ್ದು," ದಯೆ" ಎನ್ನುತ್ತಾರೆ.

#ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. / 726
ಎಂದು ಗುರು ಬಸವಣ್ಣನವರು ಇದನ್ನು ಬಹಳ ಸುಂದರವಾಗಿ ಪ್ರತಿಪಾದಿಸಿದ್ದಾರೆ. 

#ನಾನೊಂದು ಸುರಗಿಯನೇನೆಂದು ಹಿಡಿವೆನು? ಏನ ಕಿತ್ತೇನನಿರಿವೆನು?
ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ.
/ 103
 ಜಗವೆಲ್ಲಾ ಪರಮಾತ್ಮನೇ ಆಗಿರುವಾಗ ಸುರಗಿಯನ್ನು( ಕತ್ತಿಯಂಥ ಆಯುಧ) ಹಿಡಿದು ಎನನ್ನೂ ಕಿತ್ತಲಿ? ಏನನ್ನು ಕತ್ತರಿಸಲಿ?  ಯಾವ ಜೀವವನ್ನು, ಯಾರನ್ನು ಹಿಂಸಿಸಿದರೂ ಅದು ಆತ್ಮ ಹಿಂಸೆಯೇ ಆಗುತ್ತದೆ ಎನ್ನುತ್ತಾರೆ ಶರಣರ ಗುರು ದಾಸಿಮಯ್ಯನವರು. ಜಗತ್ತಿನ ಪ್ರತಿ ಅಣು ಅಣುವಿನಲ್ಲಿ ಕಣಕಣದಲ್ಲೂ ಪರಮಾತ್ಮನನ್ನೇ ಕಂಡವರು ಶರಣರು.

ಧರ್ಮದ ಹೆಸರಿನಲ್ಲಿ ಯಜ್ಞಯಾಗಾದಿಗಳಲ್ಲಿ ಮತ್ತು ಉಗ್ರದೇವತೆಗಳಿಗೆ ಬಲಿಗಳ ರೂಪದಲ್ಲಿ ನಡೆಯುತ್ತಿದ್ದ ಹಿಂಸೆಯನ್ನೂ ಶರಣರು ಕಟುವಾಗಿ ಖಂಡಿಸಿದರು. ಸಾತ್ವಿಕ ಪೂಜೆಯನ್ನು ಸಾತ್ವಿಕ ಆಹಾರವನ್ನು ತಮ್ಮ ಧರ್ಮದ ಅನಿವಾರ್ಯವಾದ ಅಂಗವನ್ನಾಗಿ ಮಾಡಿಕೊಂಡರು. ಯಜ್ಞಯಾಗಾದಿಗಳಲ್ಲಿ ನಡೆಯುತ್ತಿದ್ದ ಹಿಂಸೆಯನ್ನು ಕಂಡು

#ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೇ ಅಳು, ಕಂಡಾ !
ವೇದವನೋದಿದವರ ಮುಂದೆ ಅಳು, ಕಂಡಾ !
ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ !
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ. / 1048
ಎಂದು ವಿಡಂಬಿಸುತ್ತಾರೆ. ಆ ವಿಡಂಬನೆಯ ಹಿಂದಿರುವ ಶರಣರ ಪ್ರಾಣಿದಯೆ ಮುಖ್ಯವಾದದ್ದು. ಯಜ್ಞಕ್ಕೆ ತಂದ ಹರಕೆಯ ಕುರಿಯನ್ನು ಕಂಡು ಅವರು ಮರುಗುತ್ತಾರೆ. 
ದೇವರ ಹೆಸರಿನಲ್ಲಿ, ಯಜ್ಞಗಳ ಹೆಸರಿನಲ್ಲಿ ಪ್ರಾಣಿಗಳ ವಧೆ ಮಾಡಿ ಕದ್ದು ಮುಚ್ಚಿ ಮಾಂಸಾಹಾರ ಸೇವಿಸಿ ಶಾಖಾಹಾರ ವೈಭವೀಕರಿಸುವ ಡಂಭಾಚಾರಿಗಳ ಬಣ್ಣ ಬಯಲಿಗೆಳೆದಿದ್ದಾರೆ. 

#ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ,
ಬಾಯಲಿ ಸುರೆಯ ಗಡಿಗೆ, ಕೊರಳಲಿ ದೇವರಿರಲು
ಅವರ ಲಿಂಗನೆಂಬೆ, ಸಂಗನೆಂಬೆ,
ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು./
ವೃತ್ತಿಯಿಂದ ಚಾಂಡಾಲನೇ ಆಗಿರಲಿ. ಪ್ರವೃತ್ತಿಯಿಂದ ಮಾಂಸಾಹಾರಿ, ಸುರೆ ಸೇವಿಸುವವನಾಗಿರಲಿ, ಅಂಥವನು ಕೂಡಾ ಶರಣಸಿದ್ಧಾಂತವನ್ನು ಪಾಲಿಸಿದರೆ, ಪರಶಿವನ ಪ್ರತೀಕವಾದ ಲಿಂಗ ಧರಿಸಿದರೆ ಅವನನ್ನು ಸಂಗಯ್ಯನೆಂದೇ ಕಾಣುತ್ತೇನೆ ಎಂದು ಈ ವಚನದಲ್ಲಿ ಗುರು ಬಸವಣ್ಣನವರು ಹೇಳಿದ್ದಾರೆ ಅಂದರೆ ಮಾಂಸಾಹಾರ ಪ್ರತಿಪಾದನೆ ಅಲ್ಲ. ಭಕ್ತಿ ಭಾವನೆ,ಲಿಂಗಾಚಾರ ಪ್ರತಿಪಾದನೆ. 

ಆದರೆ ಈ ಅಹಿಂಸೆಯ ಮಿತಿಯನ್ನೂ ಸಹ ಶರಣರು ಕಂಡುಕೊಂಡರು. “ಅಹಿಂಸಾ ಪರಮೋ ಧರ್ಮ” ಎಂಬ ಮಾತನ್ನು ಜೈನಧರ್ಮದಷ್ಟು ಅತಿರೇಕಕ್ಕೆ ಎಳೆಯಲಿಲ್ಲ. 

#ಜೀವಕ್ಕೆ ಜೀವವೇ ಆಧಾರ
ಜೀವತಪ್ಪಿಸಿ ಜೀವಿಸಬಾರದು.
"ಪೃಥ್ವೀಬೀಜಂ ತಥಾ ಮಾಂಸಂ ಅಪ್‍ದ್ರವ್ಯಂ ಸುರಾಮಯಂ. ಆತ್ಮಾ ಜೀವಸಮಾಯುಕ್ತಂ ಜೀವೋ ಜೀವೇನ ಭಕ್ಷಯೇತ್ ಎಂದುದಾಗಿ ಅಹಿಂಸಾ ಪರಮೋಧರ್ಮವೆಂಬ ಶ್ರಾವಕರನು ಕಾಣೆ.
ಲಿಂಗಾರ್ಪಿತವಾದುದೆಲ್ಲ ಶುದ್ಧ; ಉಳಿದುದೆಲ್ಲ ಜೀವನ್ಮಯ ಕಾಣಾ, ಗುಹೇಶ್ವರಾ.
ಸಮಗ್ರ ವಚನ ಸಂಪುಟ: 2   ವಚನದ ಸಂಖ್ಯೆ: 1210

ಜೀವ ಜೀವವನ್ನೆ  ಭಕ್ಷ ಮಾಡುವುದರಿಂದ, ಪ್ರತಿ ಜೀವಕ್ಕೆ ಜೀವವೇ ಆಧಾರ , ಗಿಡಕ್ಕೆ ಬೀಜವೇ ಆಧಾರ, ಜೀವ ತಪ್ಪಿಸಿ ಜೀವಿಸಲು ಸಾಧ್ಯವಿಲ್ಲ . ಬೀಜದಲ್ಲೂ ಸಸ್ಯದಲ್ಲೂ ಜೀವವಿದೆ. ಕಾರಣ ಅಹಿಂಸೆಯೆ ಪರಮ ಧರ್ಮವೆಂಬ ಶ್ರಾವಕರ (ಜೈನರ) ವಿಚಾರ ಸಾಧ್ಯವಿಲ್ಲದ ಮಾತು. ಲಿಂಗಾರ್ಪಿತವಾದ್ದುದೆಲ್ಲ ಶುದ್ಧ  ಎಂದು ಪ್ರಸಾದಿಕರಣ ಮಾಡಿ ಶುದ್ಧ ಪ್ರಸಾದವಾಗಿ ಸೇವಿಸಬೇಕು. ಉಳಿದುದೆಲ್ಲ ಜೀವನ್ಮಯ ಕಾಣಾ ಗುಹೇಶ್ವರಾ ಎಂದು  ಪದಾರ್ಥವನ್ನು ಲಿಂಗಕ್ಕೆ ಅರ್ಪಿಸುವದರಿಂದ ಪ್ರಸಾದವಾಗಿ, ಸೇವಿಸಲು ಯೋಗ್ಯವಾಗುವುದು ಎನ್ನುವರು.

ನಿಸರ್ಗ ಧರ್ಮದ ಬಗೆಗೆ ಅವರೆಲ್ಲೂ ಅವಾಸ್ತವಿಕ, ಅವೈಜ್ಞಾನಿಕ, ಆದರ್ಶಗಳನ್ನಿಟ್ಟು ಕೊಂಡವರಾಗಿರಲಿಲ್ಲ. ಹೀಗೆ ಶರಣರು  ಅಂಹಿಸೆಯನ್ನು ವ್ಯಾವಹಾರಿಕ ಮಟ್ಟದಲ್ಲಿ ಅದನ್ನು ಅನುವರಿತು ಅಳವಡಿಸಿಕೊಂಡರು. ಒಂದಲ್ಲ ಒಂದು ಬಗೆಯ ಹಿಂಸೆಯಿಲ್ಲದೆ ಜೀವನ ನಿರ್ವಹಣೆಯೇ ಅಸಾಧ್ಯವೆಂಬುದನ್ನು ಸಹ ಅವರು ಅರಿತಿದ್ದರು.

#ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು
ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ
ಇನ್ನಾವುದು ವಿಧಿಯಯ್ಯಾ
ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ
ಜೀವಜಾಲದಲ್ಲಿದೆ ಚರಾಚರವೆಲ್ಲ.
ಅದು ಕಾರಣ,
ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು
ನಿರ್ದೋಷಿಗಳಾಗಿ ಬದುಕಿದರು. / 1020

ಮರ ಗಿಡ ಬಳ್ಳಿ ಧಾನ್ಯಗಳೆಲ್ಲವೂ ಜೀವಿಗಳೇ. ಅವುಗಳನ್ನು ಹಿಂಸಿಸದೆ  ಬದುಕು ನಡೆಯಲಾರದು. ಜೀವನ ನಿರ್ವಹಣೆಗೆ ಅನಿವಾರ್ಯವಾದ ಮಟ್ಟಿಗೆ ಪ್ರಕೃತಿಯೊಡನೆ ಹೊಂದಿಕೊಳ್ಳಬೇಕಾಗುತ್ತದೆ.  ನಾನು ಎಂಬ ಅಹಂಕಾರವನ್ನು ಬಿಟ್ಟು ಎಲ್ಲವನ್ನೂ ಲಿಂಗಕ್ಕರ್ಪಿಸಿ ಪ್ರಸಾದರೂಪದಲ್ಲಿ ಕಂಡು ನಿರ್ದೋಷಿಗಳಾಗಿ ಬದುಕಬೇಕೆನ್ನುತ್ತಾರೆ ಶರಣರು.

"ಅಹಿಂಸೆ" ಎಂಬುದು ಪ್ರಾಣಿಗಳನ್ನು ಕೊಲ್ಲದಿರುವಿಕೆ ಎಂಬರ್ಥಕ್ಕೆ ಮಾತ್ರ ಸೀಮಿತವಾದದ್ದಲ್ಲ. 
 “ಒಬ್ಬರ ಮನವ ನೋಯಸಿ ಒಬ್ಬರ ಮನೆಯ ಘಾತವ ಮಾಡಿ ಗಂಗೆಯಲ್ಲಿ ಮುಳುಗಿದರೆ ಆಗುವದೇನಯ್ಯ?” ಎಂದು ಹೇಳುವಂತೆ ಒಬ್ಬರ ಮನಸ್ಸನ್ನು ನೋಯಿಸುವುದೂ ಹಿಂಸೆಯೇ ಎಂದು ದಯೆ, ಕರುಣೆಯ ಮತ್ತು ಕ್ಷಮೆಯ ಮೌಲ್ಯವನ್ನು ತಿಳಿಸಿದರು. 

#ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಛೆಗೆ,
ಒಲ್ಲೆನಯ್ಯಾ ಪರಸತಿಯರ ಸಂಗವ,
ಬಲ್ಲೆನಯ್ಯಾ ಮುಂದೆ ತೊಡಕುಂಟೆಂಬುದ.
ಬಳ್ಳದ ಬಾಯಂತೆ ಒಂದೆ ಮನ ಮಾಡಿ
ನಿಲ್ಲೆಂದು ನಿಲಿಸಯ್ಯಾ, ಕೂಡಲಸಂಗಮದೇವಾ.
ಸಮಗ್ರ ವಚನ ಸಂಪುಟ: 1ವಚನದ ಸಂಖ್ಯೆ: 736
 ಎಂದು ಸ್ವತಃ ಮಾಂಸಾಹಾರವನ್ನು ಗುರು ಬಸವಣ್ಣನವರು ಇಚ್ಛಿಸಲಿಲ್ಲ. ಆದರೆ ಇಲ್ಲಿ ಮುಖ್ಯವಾಗಿದ್ದು  ಬಸವಾದಿ ಶರಣರು ಸಸ್ಯಾಹಾರಿಗಳನ್ನು  ಮೇಲು, ಮಾಂಸಾಹಾರ ಸೇವಿಸುವವರನ್ನು ಕೀಳಾಗಿಯೂ ಕಾಣಲಿಲ್ಲ. ಆಹಾರದ ವಿಚಾರದಲ್ಲಿ ಶರಣರದು  ಅಭಿಪ್ರಾಯಗಳೇ ಹೊರತು ಅದನ್ನು ಬೇರೆಯವರ ಮೇಲೆ ಹೇರಿಕೆ ಯಾಗಿ ಮಾಡಲಿಲ್ಲ ಎಂಬುದನ್ನು ನಾವು ಗಮನಿಸಬೇಕಿದೆ. ಬಸವಾದಿ ಶರಣರು ಮಾಂಸಹಾರಿ, ವೇಶ್ಯೆ, ಕಳ್ಳ, ಕುಡುಕ ಎಂದು ಯಾವ ಭೇದ ಭಾವ ಮಾಡದೆ  ದೀಕ್ಷೆ ಕೊಟ್ಟು ಇವನಾರವ ಇವನಾರವ ಎನ್ನದಿರಿ ಎಂದು ಎಲ್ಲರಲ್ಲಿ ಸಮಾನತೆ ಸೌಹಾರ್ದತೆ ಭಾವನೆ  ಬೆಳಿಸಿ, ಅನುಭವ ಮಂಟಪದಲ್ಲಿ ನಿರಂತರ ಚಿಂತನ ಮಂಥನ, ಸಮಾಲೋಚನೆಗಳಿಂದ ಬದಲಾವಣೆಗೆ ಯತ್ನಿಸಿದರು.
ಗುರು ಬಸವಣ್ಣನವರು, ಅಲ್ಲಮ ಪ್ರಭುಗಳು, ಸಿದ್ಧರಾಮೇಶ್ವರರು , ಅಕ್ಕಮಹಾದೇವಿ ಮುಂತಾದ 12ನೇ ಶತಮಾನದ ಶರಣರು ಯಾವುದೇ ಆಹಾರ ಪದ್ಧತಿಯನ್ನು ತುಚ್ಛೀಕರಿಸಿಲ್ಲ. 

ಸಮಾಜದಲ್ಲಿ ನಾಯಿ ಮಾಂಸ ತಿನ್ನುವವರನ್ನು ಶ್ವಪಚ ಎಂದು ನಿಕೃಷ್ಟರಾಗಿ ಕಾಣುತ್ತಾರೆ. ಕರೆಯುತ್ತಾರೆ. ಶರಣರು  ನಾಯಿಮಾಂಸ ಸೇವಿಸುತ್ತಿದ್ದ ಶ್ವಪಚರನ್ನೂ, ತಿರಸ್ಕರಿಸದೆ, ಕೊರಳಲಿ ದೇವರಿರಲು ಅವರಲ್ಲಿಯೂ ಶಿವಸ್ವರೂಪವನ್ನು ಕಂಡರು. "ಶಿವನಾದಿಯಂತವನರಿದಡೆ, ಸಾಮವೇದಿಗಳು ಶ್ವಪಚಯ್ಯಂಗೆ ಶಿಷ್ಯರಾಗಲೇಕೆ ? ವಾದಿಸಿದರೆಲ್ಲರು ಪ್ರತಿವಾದಿಗಳಾದರು ನಿಮ್ಮಂತವನರಿಯದೆ. ಅಭೇದ್ಯವು, ಘನಕ್ಕೆ ಘನವು, ಶಂಭು ಸೊಡ್ಡಳಾ"ಎಂದು ಶಿವಭಕ್ತ 
ಶ್ವಪಚಯ್ಯ ನಿಗೆ ಸಾಮವೇದಿಗಳು ಶಿಷ್ಯರಾಗಿದ್ದರು ಎಂದು ನೆನಪಿಸುತ್ತಾರೆ ಸೊಡ್ಡಳ ಬಾಚಿರಸರು.
"ಶ್ವಪಚಯ್ಯನ ಸನ್ನಿಧಿಯಿಂದ ಭಕ್ತಿಯ ಸದ್‍ಗುಣವ ನಾನು ಅರಿವೆನಯ್ಯಾ" 
ಎನ್ನುತ್ತಾರೆ ಗುರು ಬಸವಣ್ಣನವರು.
"ಶ್ವಪಚೋಪಿಗಳಾಗಲಿ, ಕೂಡಲಸಂಗಯ್ಯಾ ನೀನಿದ್ದವನೆ ಕುಲಜನು" ಎಂದರು. ಅದನ್ನು ಸಮರ್ಥಿಸಲು  ಶ್ರುತಿಯನ್ನು, ಲಿಂಗ ಪುರಾಣವನ್ನು ಉದಾಹರಿಸಿದರು. 
#ಶ್ವಪಚೋಪಿ ಮುನಿಶ್ರೇಷ್ಠಶ್ಶಿವ ಸಂಸ್ಕಾರಸಂಯುತಃ | ಶಿವಸಂಸ್ಕಾರಹೀನಶ್ಚ ಬ್ರಾಹ್ಮಣಃ ಶ್ವಪಚಾಧಮಃ || 

#ಬ್ರಾಹ್ಮಣದೇಹಿಕನಲ್ಲ, ಕ್ಷತ್ರಿಯದೇಹಿಕನಲ್ಲ, ವೈಶ್ಯದೇಹಿಕನಲ್ಲ, ಶೂದ್ರದೇಹಿಕನಲ್ಲ, ಭಕ್ತದೇಹಿಕ ದೇವನೆಂದು ಕೇಳಿಯೂ ಅರಿಯರು. ಶ್ವಪಚನಾದಡೆಯೂ ಲಿಂಗಭಕ್ತನೇ ಕುಲಜನೆಂದುದು. "ಲೈಂಗ್ಯಪುರಾಣೇಃ `ನ ಲಿಂಗೀ ಸರ್ವವೇದಜ್ಞೋ ಯಸ್ತು ಚಾಂಡಾಲವದ್ಭವೀ ಲಿಂಗಾರ್ಚಕಶ್ಚ ಶ್ವಪಚೋ ದ್ವಿಜಕೋಟಿವಿಶೇಷಿತಃ" _ಎಂದುದಾಗಿ,
 ಅಂಗದ ಮೇಲೆ ಲಿಂಗವಿದ್ದ ಶ್ವಪಚನಾದಡೆಯೂ ಆತನೆ ಸದ್ಬ್ರಾಹ್ಮಣ. ಅಂಗದ ಮೇಲೆ ಶಿವಲಿಂಗವಿಲ್ಲದ ಬ್ರಾಹ್ಮಣರೊಂದು ಕೋಟಿಯಾದಡೆಯೂ ಶ್ವಪಚರಿಂದ ಕರಕಷ್ಟ ನೋಡಾ, ಕೂಡಲಚೆನ್ನಸಂಗಮದೇವಾ.
ಎನ್ನುತ್ತಾರೆ ಚನ್ನಬಸವಣ್ಣನವರು.
ಅಂಗದ ಮೇಲೆ ಲಿಂಗಸನ್ನಿಹಿತ ಮಾಡಿಕೊಂಡವರು  ಶ್ವಪಚನಾದಡೆಯೂ ಆತನು ಸದ್ಬ್ರಾಹ್ಮಣ. ಅಂಗದ ಮೇಲೆ ಶಿವಲಿಂಗವಿಲ್ಲದವ ಬ್ರಾಹ್ಮಣನಾದರೂ ಶ್ವಪಚರಗಿಂತ ಕಡೆ ಎಂದು ಜನ್ಮದಿಂದ ಆಹಾರ ಪದ್ದತಿಯಿಂದ ಬಂದ ಜಾತಿ ಮುಖ್ಯವಲ್ಲ.  ಅದಕ್ಕಿಂತ ಕರ್ಮ ಭಕ್ತಿ ಸಾಧನೆಯಿಂದ ಬಂದ ಜಾತಿ ಮುಖ್ಯ ವೆನ್ನುತ್ತಾರೆ ಬಸವಾದಿ ಶರಣರು. 
ತಿನ್ನುವ ಆಹಾರ ಸಸ್ಯಾಹಾರವೋ ಮಾಂಸಾಹಾರವೋ ಮುಖ್ಯವಲ್ಲ; ಅವನ ಸಾಧನೆ, ಸದ್ವರ್ತನೆಯೆ ಮುಖ್ಯ.

#ಕುರಿ ಕೋಳಿ ಕಿರಿಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು.
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ
ಮಾದಿಗ ಕೀಳುಜಾತಿಯೆಂಬರು.
ಅವರೆಂತು ಕೀಳುಜಾತಿಯಾದರು ? ಜಾತಿಗಳು ನೀವೇಕೆ ಕೀಳಾಗಿರೊ ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು.
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು.
ಅದೆಂತೆಂದಡೆ : ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು.
ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ ನಾಯಕನರಕ ತಪ್ಪದಯ್ಯಾ.
ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.
ಸಮಗ್ರ ವಚನ ಸಂಪುಟ: 5   ವಚನದ ಸಂಖ್ಯೆ: 733
ಅಂದಿನ ಕಾಲದ  ವಿಪ್ರರು ಕುರಿ ಕೋಳಿ ಮೀನು ತಿನ್ನುತಿದ್ದರು. ಹೀಗೆ ಕುರಿ ಕೋಳಿ ಕಿರಿಮೀನು ತಿನ್ನು ವವರರು ತಮ್ಮನ್ನು  ಕುಲಜ ಕುಲಜರೆಂದು ತಿಳಿಯುತ್ತಾರೆ. ಆದರೆ ಶಿವನಿಗೆ ಪಂಚಾಮೃತವ ಕರೆಯುವ ಆಕಳನ್ನು ತಿನ್ನುವ ಮಾದಿಗರನ್ನು  ಕೀಳುಜಾತಿಯೆಂದು ಕರೆವರು. ಅವರು ಹೇಗೆ ಕೀಳುಜಾತಿಯಾದರು ? ಜಾತಿಗಳು ನೀವೇಕೆ ಕೀಳಾಗಿರೊ ? ಸತ್ತ ದನದ ಚರ್ಮದಲ್ಲಿ ಮಾಡಿದ ‘ಸಗ್ಗಳೆ, ಸಿದ್ದಲಿಕೆ’ ಎಂಬ ಚೀಲಗಳಲ್ಲಿ ನೀರು, ತುಪ್ಪ ತುಂಬಿ ವಿಪ್ರರು ಸೇವಿಸುವುದನ್ನು ವಚನಕಾರ್ತಿ ಕಾಳವ್ವೆ ಪ್ರಶ್ನಿಸಿದ್ದಾರೆ. ಶೂದ್ರಾತಿ ಶೂದ್ರರ ಆಹಾರ ಪದ್ಧತಿ ಕುರಿತು ಸ್ವಾಭಿಮಾನದ ಪ್ರಶ್ನೆ ಎತ್ತಿದ್ದಾಳೆ. ಈ ವಚನ ದಲ್ಲಿ ಮಾಂಸಾಹಾರ ವರ್ಜ್ಯವೆಂದು ಅವಳು ಹೇಳಿಯೇ ಇಲ್ಲ. ಬದಲಾಗಿ ಮಾಂಸಹಾರಿಗಳಲ್ಲಿಯೇ ಕೋಳಿ, ಕುರಿ, ಮೀನು ತಿನ್ನುವವರನ್ನು ಶ್ರೇಷ್ಠ ಕುಲದವರೆಂದು, ಸತ್ತ ದನದ ಮಾಂಸ ತಿನ್ನುವವರನ್ನು ಕೀಳು ಕುಲದವರೆಂದು ಭೇದ ಕಲ್ಪಿಸುವದೇಕೆ? ಎಂದು ಪ್ರಶ್ನಿಸಿದ್ದಾಳೆ.
ಮಾಂಸಾಹಾರಿಗಳಲ್ಲೂ ವರ್ಗೀಕರಣ ಮಾಡಿದ ಧೂರ್ತತನವನ್ನು ಕಾಳವ್ವೆ `ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು' ಎಂದು ಕಟುಕುತ್ತಾಳೆ. ಸಣ್ಣ ಪ್ರಾಣಿಗಳನ್ನು ಒಂದಿಂಚೂ ಬಿಡದೆ ಪೂರ್ತಿ ತಿನ್ನುವ ಮೇಲ್ವರ್ಗಕ್ಕಿಂತ ಮುದಿ ದನದ ಮಾಂಸ ತಿಂದು ಮೇಲಿನ ಚರ್ಮ ಹದ ಮಾಡಿ ಅದರಿಂದ ತುಪ್ಪ ತುಂಬುವ ಸಗ್ಗಳಿಕೆ ಮತ್ತು ನೀರು ತುಂಬಿಸಬಹುದಾದ ಸಿದ್ದಲಿಕೆ ಮಾಡುವ ದುಡಿಯುವ ವರ್ಗವೇ ಗೌರವಕ್ಕೆ ಪಾತ್ರ ಎಂದು ಹೇಳುತ್ತಾಳೆ. ದಲಿತರ ಆಹಾರ ಪದ್ಧತಿಯನ್ನು ಟೀಕಿಸುವರಿಗೆ ನಾಯಕ ನರಕ ತಪ್ಪದೆಂದು ಎಚ್ಚರಿಸುತ್ತಾಳೆ.
ಮಾದಿಗರುಂಡುದು ಸಿದ್ದಲಿಕೆ, ಸಗ್ಗಳೆಯಾಗಿ ಬ್ರಾಹ್ಮಣಗೆ ಶೋಭಿತವಾಯಿತು.
ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ ನಾಯಕನರಕ ತಪ್ಪದಯ್ಯಾ. ಆಕಳಿನ ಕ್ಷೀರ(ಹಾಲು) ಮತ್ತು ಸಗ್ಗಳೆಯ ನೀರನ್ನು ಕೂಡಿಸಿ ಕುಡಿಯುವವರು ಎಂತಹ ಉಚ್ಚ  ಕುಲದವರು ಎಂದು ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಪ್ರಶ್ನಿಸುತ್ತಾಳೆ.

ತಮ್ಮ  ಮುತ್ತಿನ ಹಾರದಂತ  ಮಧುರ ಮಾತುಗಳಿಂದ ಮಾಂಸಹಾರಿ ಗಳನ್ನು ಸಸ್ಯಾಹಾರಿಗಳನ್ನಾಗಿ ಪರಿವರ್ತಿಸಿದರು. ಆದರೆ ಮಾಂಸಾಹಾರಿಗಳನ್ನ ಎಂದೂ ಕೀಳಾಗಿ ಕಾಣಲಿಲ್ಲ. ಅವರ ಸರಿಸಮಾನತ್ವದ ದೃಷ್ಟಿಕೋನ ಆಹಾರ ಪದ್ದತಿಯನ್ನೂ ಮೀರಿ ಬೆಳೆದಿತ್ತು. ಶರಣರ ಸದ್ವರ್ತನೆ, ಮಾನವೀಯ ಕಳಕಳಿಗಳು, ಮೇಲು ಕೀಳು ಇಲ್ಲದ ಸಮಾನತ್ವ ಭಾವನೆ ನಮಗೆಲ್ಲರಿಗೆ  ದಾರಿದೀಪಗಳು.
- ✍️ Dr Prema Pangi
#ಪ್ರೇಮಾ_ಪಾಂಗಿ, 
#ಬಸವಾದಿ_ ಶರಣರ_ಆಹಾರ_ಪದ್ಧತಿ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma