ಬಯಲು 1

ಬಯಲು 1 : 
ಬಯಲು  1 :
"ಬಯಲು " ಅಂದರೆ ಶೃಷ್ಟಿ ರಚನೆಯಲ್ಲಿ ಕಾರ್ಯರೂಪವಾದ ಜಗತ್ತು  ಹಾಗೂ ಕಾರಣರೂಪವಾದ ಮಹಾಲಿಂಗ  ಇವೆರಡಕ್ಕೂ ಮೊದಲಿನ ಸ್ಥಿತಿ.  ಬಯಲು ವಿಶ್ವವೂ ಅಲ್ಲ ಮಹಾಲಿಂಗವೂ ಅಲ್ಲ. ಅದು ಏನೂ ಅಲ್ಲ ಮತ್ತು ಅದರಲ್ಲಿ  ಏನೂ ಇಲ್ಲದ್ದರಿಂದ, ಅದು ಬರಿಬಯಲು, ಬಟ್ಟಬಯಲು, ನಿರಾವಲಂಬ ಬಯಲು.
ಬಯಲಲ್ಲಿ ಬಯಲಾಗುವುದು :
ಶರಣ ಧರ್ಮದ ಶಿವಯೋಗದಲ್ಲಿ "ಬಯಲು"  ಆನಂದಮಯವಾದ ಮುಕ್ತಾ ಮುಕ್ತ ಸ್ಥಿತಿ. 
 ಶರಣ ಧರ್ಮದಲ್ಲಿ " ಬಯಲಾಗುವುದು" ಅಂದರೆ ಅಷ್ಟಮದಗಳನ್ನೆಲ್ಲಾ ನಿರಸನಗೊಳಿಸಿದ ನಂತರದ ವಿಕಾಸಗೊಂಡ ಆತ್ಮವು ವಿಶ್ವಾತ್ಮನೊಡನೆ ಸಮರಸಗೊಳ್ಳುವ ಪರಿಪೂರ್ಣ ಸ್ಥಿತಿ.  ಸಾಧನಾ ಮಾರ್ಗದಲ್ಲಿ ಸಾಕಾರ ಹಿಡಿದು ನಿರಾಕಾರ ಅರಿಯಬೇಕು. ನಿರಾಕಾರ ಹಿಡಿದು ನಿರಾವಲಂಬ ಬಯಲು ಅರಿಯಬೇಕು. ಸಹಸ್ರಾರ ಚಕ್ರದ ಆಚೆಯ ಶಿಖಾಚಕ್ರದ ನಂತರ ಬರುವ ಪಶ್ಚಿಮ ಚಕ್ರದ ಸಾಧನೆ ಮಾಡಬೇಕು
ಶಿವಯೋಗಿಗಳು ತಮ್ಮ ಶರೀರವನ್ನೇ ಮಾಧ್ಯಮ ವಾಗಿಟ್ಟುಕೊಂಡು ತನ್ನನ್ನು ಪರಿಮಿತಗೊಳಿಸುವ ಆಸೆ ದ್ವೇಷ ಮೋಹಗಳನ್ನೆಲ್ಲಾ ನಾಶಗೊಳಿಸಿ,  ಯೋಗದಿಂದ ಲಿಂಗಸಾಧನೆ, ಲಿಂಗಾಂಗ ಸಾಮರಸ್ಯದಿಂದ ಮಹಾಲಿಂಗ ಮಹಾಬೆಳಗನ್ನು ಕಂಡು, ತನ್ನ "ಚತುಷ್ಟ ಕರಣ"ಗಳನ್ನು ಶೂನ್ಯದಲ್ಲಿ ಲೀನಗೊಳಿಸಿ ಸಮರಸವಾಗುವುದು ಎಂಬ ಅರ್ಥವನ್ನು ಬಯಲಾಗುವುದು ಎಂಬ ಮಾತಿನಲ್ಲಿ ಕಾಣುತ್ತೇವೆ. ಜಗತ್ತು  “ಏನೆಂದೆನಲಿಲ್ಲದ ಬಯಲು” ಸ್ವರೂಪವಾಗಿರುವುದನ್ನು ಶರಣರು ತಾತ್ವಿಕ ಮುಖದಲ್ಲಿ ಕಂಡು, ಅನುಭಾವದ ನಿಲುವಿನಲ್ಲಿ ಏರಿ ಮುಟ್ಟಿದ್ದಾರೆ. 
ಆತ್ಮವು ವಿಶ್ವಾತ್ಮನೊಡನೆ ಸಮರಸಗೊಳ್ಳುವ ಪರಿಪೂರ್ಣ ಬಯಲಾಗುವ ಸ್ಥಿತಿಯಲ್ಲಿ  ಎಲ್ಲವೂ ತಾನೇ ಆಗಿ ಪರಿಣಮಿಸುವ ನಿಲುವು ಕಾಣುತ್ತೇವೆ. 
#ಏನೆಂಬೆ, ಏನೆಂಬೆ ಒಂದೆರಡಾದುದ
ಏನೆಂಬೆ, ಏನೆಂಬೆ ಎರಡೊಂದಾದುದ
ಏನೆಂಬೆ, ಏನೆಂಬೆ ಅವಿರಳ ಘನವ
ಮಹಾದಾನಿ ಕೂಡಲಸಂಗಮದೇವಯ್ಯ ತಾನೆ ಬಲ್ಲ. / 396
 ಎಂದು ಬಸವಣ್ಣನವರು ಹೇಳಿದ ಮಾತನ್ನು ನೋಡಬಹುದು, ಒಂದು ಎರಡಾಗುವುದು ಪ್ರಕೃತಿ ಮಾರ್ಗವಾದರೆ;  ಎರಡು ಒಂದಾಗುವದು ನಿವೃತ್ತಿ ಮಾರ್ಗ. ಅವಿರಳ ಸಮರಸ - ಅದೇ ಬಯಲಾಗುವುದು.

ಷಣ್ಮುಖ ಸ್ವಾಮಿಗಳು, ಬಯಲು, ನಿರವಯಲು, ನಿರಾಳ, ನಿಶೂನ್ಯ ಈ ಮೊದಲಾದ ಮಾತುಗಳನ್ನು ಅರ್ಥಗರ್ಭಿತವಾಗಿ ಬಳಸಿಕೊಂಡು ಬೆಡಗಿನ ಮಾತಿನಲ್ಲಿ ಸುಂದರವಾದ ಸಾದೃಶ್ಯದಿಂದ ಲಿಂಗಾಂಗ ಸಾಮರಸ್ಯ ನಿಲವನ್ನು ಹೀಗೆ ವರ್ಣಿಸಿದ್ದಾರೆ.

#ಬಯಲ ಸ್ತ್ರೀಯಳ ನಿರವಯಲ ಪುರುಷ ಬಂದು ಕೂಡಲು
ಚಿದ್ಬಯಲೆಂಬ ಶಿಶು ಹುಟ್ಟಿತ್ತು.
ಆ ಶಿಶುವನು ಮಹಾಬಯಲೆಂಬ ತೊಟ್ಟಿಲಲ್ಲಿ ಮಲಗಿಸಿ
ನಿರಾಳ ನಿಃಶೂನ್ಯವೆಂಬ ನೇಣ ಕಟ್ಟಿ ತೂಗಿ ಜೋಗುಳವಾಡಲು,
ಆ ಶಿಶುವು ತನ್ನಿಂದ ತಾನೇ ತಂದೆ ತಾಯಿಗಳಿಬ್ಬರನೂ ನುಂಗಿತ್ತು.
ಆ ತಂದೆ ತಾಯಿಗಳ ನುಂಗಲೊಡನೆ ಜೋಗುಳದ ಉಲುಹು ಅಡಗಿತ್ತು.
ಆ ಜೋಗುಳದ ಉಲುಹು ಅಡಗಿದೊಡನೆ
ನಿರಾಳ ನಿಃಶೂನ್ಯವೆಂಬ ನೇಣು ಹರಿಯಿತ್ತು.
ಆ ನಿರಾಳ ನಿಃಶೂನ್ಯವೆಂಬ ನೇಣು ಹರಿಯಲೊಡನೆ
ಆ ಶಿಶು ತೊಟ್ಟಿಲಸಹವಾಗಿ ಬಟ್ಟಬಯಲಾಯಿತ್ತು.
ಆ ಶಿಶು ತೊಟ್ಟಿಲಸಹವಾಗಿ ಬಟ್ಟಬಯಲಾಗಲೊಡನೆ
ಅಖಂಡೇಶ್ವರನೆಂಬ ಬಯಲಿನ ಬಯಲ ಬಚ್ಚಬರಿಯ
ಘನಗಂಭೀರ ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ. / 466

ಬೇರೆ ಬೇರೆ ದೃಷ್ಟಿಗಳಿಂದ ವಿವರಿಸಿದಷ್ಟು ವಿಸ್ತಾರವಾದ ಅರ್ಥವನ್ನು ಕೊಡುವ 
ಆಧ್ಯಾತ್ಮಿಕ ಅನುಭವ ಇಲ್ಲಿರುವಂತೆ ತೋರುತ್ತದೆ. ಹೀಗೆ ಬಚ್ಚ ಬಯಲು, ಬರಿಬಚ್ಚ ಬಯಲು, ಘನಗಂಭೀರ ಮಹಾಬಯಲೊಳಗೆ ಅಡಗಿ "ಎತ್ತ ಹೋದೆನೆಂಬ ಭಾವನೆಯ ಅಳಿದ ಆನಂದದ ನಿಲವನ್ನು" ಪಡೆಯುವುದನ್ನು ಶರಣರು ತಮ್ಮ ಸಾಧನೆಯ ಮಾರ್ಗದಲ್ಲಿ ರೂಪಿಸಿದ್ದಾರೆ. ಅವರ ಉಪಾಸನೆಯಲ್ಲಿ ಈ ಬಯಲಿನ ಕಲ್ಪನೆಯ  ಜ್ಞಾನಮಾರ್ಗವೇ ಪ್ರಧಾನವಾಗಿ ಕಾಣುತ್ತದೆ.

 ಬಯಲೇ ಮೂರ್ತಗೊಂಡು ಬಂದ ಆ ಪರಶಿವನನ್ನು ಮಾನವ ರೂಪದಿಂದ ಪೂಜಿಸುವುದಕ್ಕಿಂತ ಬಯಲಿನ ಸಂಕೇತದಿಂದಲೇ ಅನುಸಂಧಾನ ಮಾಡುವುದು ಅವರಿಗೆ ಹೆಚ್ಚು ಪ್ರಿಯವಾಗಿ ತೋರಿತು,
ಬಯಲು ಸ್ಥಿತಿಯನ್ನು  ಷಣ್ಮುಖ ಸ್ವಾಮಿಗಳು- ಆದಿ ಇಲ್ಲದ ಬಯಲು, ಅನಾದಿ ಇಲ್ಲದ ಬಯಲು, ಶೂನ್ಯವಿಲ್ಲದ ಬಯಲು, ನಿಶ್ಶೂನ್ಯವಿಲ್ಲದ ಬಯಲು ಎಂದು ತಮ್ಮ ಅನುಭಾವದ ಸ್ಥಿತಿಯಲ್ಲಿ ವರ್ಣಿಸಿದ್ದಾರೆ.

ಅಲ್ಲಮ ಪ್ರಭುಗಳು ಲಿಂಗಯೋಗದ ಅನುಭಾವವನ್ನು ತಮ್ಮದೇ ಶೈಲಿಯಲ್ಲಿ ಚಿತ್ರಿಸಿದ್ದಾರೆ.
#ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ಬಯಲ ಜೀವನ ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ. / 1164
 ಅಲ್ಲಮಪ್ರಭುವಿನ ವಚನ, 'ಬಯಲು' ಮಾತಿನ ತಾತ್ವಿಕ ಕಲ್ಪನೆ ವಿಶಾಲ ವ್ಯಾಪಕತೆಯನ್ನು ವ್ಯಕ್ತಪಡಿಸುತ್ತದೆ. ಬಯಲನ್ನು ಬಿತ್ತಿ ಬಯಲನ್ನು ಬೆಳೆದದ್ದು ಈ ಸೃಷ್ಟಿ, ಇದು ಒಂದರ್ಥದಲ್ಲಿ ಬಯಲೇ. ಕೊನೆಯಲ್ಲಿ ಇದು ಬಯಲಿನಲ್ಲಿ ಬಯಲಾಗುತ್ತದೆ ; ಅಷ್ಟೇ ಅಲ್ಲ ಬಯಲು ಅತಿ ಬಯಲಾಗುತ್ತದೆ ಎಂಬ ಮಾತು ದ್ವಂದ್ವಾತೀತವಾದ ಸರ್ವಶೂನ್ಯ ನಿರಾಲಂಬ ಸ್ಥಿತಿಯನ್ನು ಸೂಚಿಸುತ್ತದೆ. ಶರಣರು ಎಲ್ಲ ತತ್ವ ಗಳನ್ನು ಒಳಗೊಂಡ ಪರಿಪೂರ್ಣತೆಯನ್ನು "ಶೂನ್ಯ "ವೆಂದು ನಿರ್ದೇಶಿಸಿದ್ದಾರೆ. ಈ ತೋರಿಕೆಯ ಸೃಷ್ಟಿಯ ಎಲ್ಲವೂ ಪೂರ್ಣ ಸ್ವರೂಪದ ಆ ಶೂನ್ಯಲಿಂಗದಿಂದ ಹೊರಹೊಮ್ಮಿದುದು ; ಮತ್ತು ಅಲ್ಲಿಯೇ ಅಡಗಿ ಬಯಲಾಗುವಂತಹುದು.

ಹಾಗೆಯೇ ಶರಣ ಹಡಪದ ಅಪ್ಪಣ್ಣನವರು
#ಬಯಲಿಂದಲೆ ಹುಟ್ಟಿ, ಬಯಲಿಂದಲೆ ಬೆಳೆದು,
ಬಯಲಾಮೃತವನೆ ಉಂಡು, ಬಯಲನೆ ಉಟ್ಟು,
ಬಯಲನೆ ತೊಟ್ಟು, ಬಯಲು ಬಯಲೊಳಗೆ ಬೆರೆದ ಭೇದವ,
ಈ ಭುವನದೊಳಗೆ ಇಪ್ಪ ಭವಭಾರಿಗಳು ಎತ್ತಬಲ್ಲರು, ಭವವಿರಹಿತ ಶರಣರ ನಿಲವ,ಬಸವಪ್ರಿಯ ಕೂಡಲಚನ್ನಬಸವಣ್ಣಾ ?

 ಎಂದು  ಕೇಳುತ್ತಾರೆ. ಶರಣರು ಭವವಿರಹಿತರು. ಅವರದು ಬಯಲು ಸ್ಥಿತಿ. ಶರಣರೆಂಬ ಬಯಲು ಮಹಾ ಬಯಲಿನಲ್ಲಿ ಬೆರೆಯುವ ಬೇಧೋಪಾಯ ಭವಭಾರಿ ಸಾಮಾನ್ಯ ಮನುಜರು  ತಿಳಿಯ ಬಲ್ಲವರಲ್ಲ ಎನ್ನುತ್ತಾರೆ.
ಷಣ್ಮುಖಸ್ವಾಮಿಗಳು ತಮ್ಮ ನಿರ್ವಾಣ ಸ್ಥಿತಿ ಹೇಳುವುದು :
#ಆದಿಯಿಲ್ಲದ ಬಯಲು, ಅನಾದಿಯಿಲ್ಲದ ಬಯಲು,
ಶೂನ್ಯವಿಲ್ಲದ ಬಯಲು, ನಿಃಶೂನ್ಯವಿಲ್ಲದ ಬಯಲು,
ಸುರಾಳವಿಲ್ಲದ ಬಯಲು, ನಿರಾಳವಿಲ್ಲದ ಬಯಲು,
ಸಾವಯವಿಲ್ಲದ ಬಯಲು, ನಿರಾವಯವಿಲ್ಲದ ಬಯಲು,
ಅಖಂಡೇಶ್ವರನೆಂಬ ಬಯಲಿನ ಬಯಲು
ಮಹಾಘನ ಬಚ್ಚಬರಿಯ ಬಯಲೊಳಗೆ
ಎಚ್ಚರವಡಗಿ ನಾನೆತ್ತ ಹೋದೆನೆಂದರಿಯೆನು. / 69
ಈ ಬಯಲು ಸ್ಥಿತಿಯೇ ಮೋಕ್ಷ, ಇದೇ ಲಿಂಗಾಂಗ ಸಾಮರಸ್ಯ ಎಂಬುದನ್ನು ಇಂತಹ ಅನೇಕ ವಚನಗಳಲ್ಲಿ ಶರಣರು ಪ್ರತಿಪಾದಿಸಿದ್ದಾರೆ . ಒಬ್ಬೊಬ್ಬ ಶರಣರು ಇದನ್ನು ತಮ್ಮ ತಮ್ಮ ಹಂತಕ್ಕನುಗುಣವಾಗಿ ನಿರೂಪಿಸಿದ್ದಾರೆ, ಮುಖ್ಯವಾಗಿ ಗಮನಿಸಬೇಕಾದುದೆಂದರೆ ಅವರೆಲ್ಲರೂ ಕಂಡ ತಾತ್ವಿಕ ದರ್ಶನ ಒಂದೇ; ಎರಿದ ನಿಲುವು ಒಂದೇ. 
ಅಲ್ಲಮ ಪ್ರಭುಗಳು" ನಿರ್ವಾಣದಲ್ಲಿ ನಿಂದು ಅಗಮ್ಯನಾಗಿ ಭಕ್ತಿಕಂಪಿತನೆನಿಸಿದೆ" ಎಂದು ನಿರ್ವಾಣ ಸಮಾದಿಯ ಅನುಭಾವ ಸ್ಥಿತಿ ಆರುಹಿದ್ದಾರೆ.

#ಬಯಲ ಮೂರ್ತಿಗೊಳಿಸಿದನೊಬ್ಬ ಶರಣ.
ಆ ಮೂರ್ತಿಯಲ್ಲಿ ಭಕ್ತಿಸ್ವಾಯತವ ಮಾಡಿದನೊಬ್ಬ ಶರಣ.
ಆ ಭಕ್ತಿಯನೆ ಸುಜ್ಞಾನ ಮುಖವ ಮಾಡಿದನೊಬ್ಬ ಶರಣ.
ಆ ಸುಜ್ಞಾನವನು ಲಿಂಗಮುಖವಾಗಿ ಧರಿಸಿದನೊಬ್ಬ ಶರಣ.
ಆ ಲಿಂಗವನೆ ಸರ್ವಾಂಗದಲ್ಲಿ ವೇದಿಸಿಕೊಂಡನೊಬ್ಬ ಶರಣ.
ಆ ಸರ್ವಾಂಗವನೆ ನಿರ್ವಾಣಸಮಾದಿಯಲ್ಲಿ ನಿಲಿಸಿದನೊಬ್ಬ ಶರಣ.
ನಾನು ನಿರ್ವಾಣದಲ್ಲಿ ನಿಂದು ಅಗಮ್ಯನಾದೆನೆಂದಡೆ,
ಭಕ್ತಿಕಂಪಿತನೆನಿಸಿ ಎನ್ನ ತನ್ನಲ್ಲಿಗೆ ಬರಿಸಿಕೊಂಡನೊಬ್ಬ ಶರಣ.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದವ ಕಂಡು
ಶರಣೆಂದು ಬದುಕಿದೆನು / 1162
ಎಂದು  ಆ ಬಯಲ ಸಾಕಾರ ಸ್ವರೂಪವೇ ಇಷ್ಟಲಿಂಗ ಹಾಗೂ ಬಯಲನ್ನು ಮೂರ್ತಿ ಸ್ವರೂಪ ವಾಗಿ ಮಾಡಿದ ಬಸವಣ್ಣನವರಿಗೆ ಶರಣು ಎಂದಿದ್ದಾರೆ. ಆ ಇಷ್ಟಲಿಂಗದಲ್ಲಿ ಭಕ್ತಿಸ್ವಾಯತವ ಮಾಡಿ ಆ ಭಕ್ತಿಯನ್ನೇ ಸುಜ್ಞಾನವಾಗಿಸಿ ಲಿಂಗಮುಖವಾಗಿ, ಸರ್ವಾಂಗಲಿಂಗಯಾಗಿಸಿ ನಿರ್ವಾಣದಲ್ಲಿ ನೆಲೆ ನಿಂತೆ ಎಂದು ಶರಣರಿಗೆ ಇಷ್ಟಲಿಂಗ, ಲಿಂಗಯೋಗದ ಮಹತ್ವ ತಿಳಿಸಿದ್ದಾರೆ.

ಗುರು ಬಸವಣ್ಣನವರು  "ಬಯಲನ್ನು ರೂಪ ಮಾಡಬಲ್ಲಾತನೇ ಶರಣನು. ಆ ರೂಪವನ್ನು ಮತ್ತೇ ಬಯಲು ಮಾಡಬಲ್ಲಾತನೇ ಲಿಂಗಾನುಭಾವಿ " ಎಂದು ಉಭಯ ಬೆರೆಯಬೇಕು. ಬೆಳಗು ಬೆಳಗನೆ ಕೂಡಿದಂತಾಗಬೇಕು ಎಂದಿದ್ದಾರೆ. 

#ಬಯಲ ರೂಪ ಮಾಡಬಲ್ಲಾತನೆ ಶರಣನು,
ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನಂಬೆ
ಆ ರೂಪ ಬಯಲು ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿಯೆಂಬೆ
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೆ
ಕೂಡಲಸಂಗಮದೇವಾ / 909
- ಗುರು ಬಸವಣ್ಣನವರು
 ನಿರಾಕಾರ, ನಿರ್ಗುಣ, ನಿರ್ವಯ  ಬಯಲನ್ನು  "ಇಷ್ಟಲಿಂಗ"ವಾಗಿ ಕಂಡು ಕರಸ್ಥಲದಲ್ಲಿ ನಿರ್ನಿಮೇಷವಾಗಿ ಪೂಜಿಸಿ ಮತ್ತು ಲಿಂಗಾಂಗ ಯೋಗದಿಂದ ಆ ರೂಪವನ್ನು ಮತ್ತೇ ಬಯಲು ಮಾಡಬಲ್ಲಾತನೇ ಲಿಂಗಾನುಭಾವಿ  ಶರಣನು.
 ಶರಣನು ಶಿವಯೋಗಸಾಧನೆಯಿಂದ  ಇಷ್ಟಲಿಂಗರೂಪವಾದ ಶಿವನನ್ನು  "ಪ್ರಾಣಲಿಂಗ"  "ಭಾವಲಿಂಗ"ವಾಗಿ, ಪಶ್ಚಿಮ ಚಕ್ರದಲ್ಲಿ  ಬಯಲಿ ನಲ್ಲಿ ಬಯಲಾಗುವವನು ಲಿಂಗಾನುಭವಿ ಯಾಗುತ್ತಾರೆ. ಇಷ್ಟಲಿಂಗದಲ್ಲಿ "ಆಯತ" ಪ್ರಕ್ರಿಯೆಯಾದರೆ, ಪ್ರಾಣಲಿಂಗದಲ್ಲಿ "ಸ್ವಾಯತ" ಪ್ರಕ್ರಿಯೆ , ಭಾವಲಿಂಗದಲ್ಲಿ "ಸನ್ನಿಹಿತ" ಪ್ರಕ್ರಿಯೆ ಯಾಗುವುದು. ನಂತರ ಸಾಧನೆ ಮುಂದುವರೆದಾಗ ಪಶ್ಚಿಮಚಕ್ರದಲ್ಲಿ ಅನಾದಿ ಶಿವನ ನಿರಾವಲಂಬ ಬಯಲು ಸ್ವರೂಪ ದರ್ಶನ ವಾಗುವುದು.  ಬಯಲನ್ನು ರೂಪವಾಗಿಸಿ ಇಷ್ಟಲಿಂಗರೂಪದಲ್ಲಿ  ನೋಡಲು ಅರಿಯದಿದ್ದಡೆ  ಅವನು ಶರಣನಲ್ಲ. ಸ್ವರೂಪವಾದ  ಇಷ್ಟಲಿಂಗವನ್ನು  ಬಯಲು ಮಾಡಲು ಅರಿಯದಿದ್ದಡೆ ಅವನು ಲಿಂಗಾನುಭಾವಿ ಅಲ್ಲ.
ಈ ಉಭಯ ಅಂದರೆ ರೂಪು ಮತ್ತು ನಿರೂಪ ಬಯಲು  - ಇವು ಒಂದರಲ್ಲಿ ಒಂದು ಅಡಗಬೇಕು. ಅದು ಲಿಂಗ-ಅಂಗ ಒಂದಾಗಿ ನಿಂತ ಸ್ಥಿತಿ.

ಶರಣರ  ಸಾಧನಾ ಮಾರ್ಗದಲ್ಲಿ ಸಾಕಾರ ಹಿಡಿದು ನಿರಾಕಾರ ಅರಿಯಬೇಕು. ನಿರಾಕಾರ ಹಿಡಿದು ನಿರಾವಲಂಬ ಬಯಲು ಅರಿಯಬೇಕು. ಶರಣ ಧರ್ಮದಲ್ಲಿ ಸಾಕಾರವೆಂದರೆ ಇಷ್ಟಲಿಂಗ. ಸ್ಥಾವರಲಿಂಗವಲ್ಲ. ಸಾಕಾರವೆಂದರೆ ಪುರಾಣದ ಶಿವನಲ್ಲ. ಇಷ್ಟಲಿಂಗವೇ ಸಾಕಾರ. ಇಷ್ಟಲಿಂಗವು ಬಯಲನ್ನು ಸಾಕ್ಷಾತ್ಕಾರ ಗೊಳಿಸುವ ನಿರಾಕಾರ ಪರಶಿವನ ಸಾಕಾರ ಕುರುಹು. ಪರಶಿವ ನೆಂದರೆ ನಿರಾಕಾರ ನಿರ್ಗುಣ ನಿರಂಜನ ಪರಮಾತ್ಮ, ಪರವಸ್ತು, ಪರಬ್ರಹ್ಮ.

ಪರವಸ್ತುವನ್ನು ಮೊದಲು ಇಷ್ಟಲಿಂಗ ರೂಪದಲ್ಲಿ, ನಂತರ ಪ್ರಾಣಲಿಂಗವಾಗಿಸಿ  ಭಾವದೃಷ್ಟಿಯಿಂದ ಕಂಡು ಭಾವಲಿಂಗವಾಗಿಸಿ, ಅಭಿನ್ನಭಾವದಿಂದ ಬೆರೆಸಿ ಲಿಂಗಾಂಗಸಮರಸ  ಅನುಭವಿಸಿದಾಗ,  ಅಂಗ ಲಿಂಗ ಸಮರಸವಾಗಿ 36 ತತ್ವಗಳು ( 25 ಅಂಗ ತತ್ವ,11 ಲಿಂಗ ತತ್ವಗಳು ) ಒಂದರಲ್ಲಿ ಒಂದು ಅಡಗುತ್ತ ಹೋಗುತ್ತವೆ. ಇದು ಶೃಷ್ಟಿಯ ನಿರ್ವತ್ತಿ ಮುಖ. " ಸೃಷ್ಟಿ ರಚನೆ ಬಯಲಿನ ಪ್ರವರ್ತಿ ಮಾರ್ಗವಾದರೆ, ಶಿವಯೋಗದಿಂದ ಬಯಲಿನಲ್ಲಿ ಬಯಲಾಗುವದು ನಿರ್ವತ್ತಿ ಮಾರ್ಗ".
ಪ್ರಥ್ವಿ, ಆಕಾಶ, ಅಪ್ಪು, ತೇಜ, ವಾಯು 5 ಪಂಚ ಭೂತ ತತ್ವಗಳು, 5 ಜ್ಞಾನೇಂದ್ರಿಯಗಳು,5 
ಕರ್ಮೆಂದ್ರಿಯಗಳು 11 ಲಿಂಗ ತತ್ವಗಳು ಬಯಲಾಗುತ್ತವೆ. ಆಗ ದಿವ್ಯಲಿಂಗ  'ವಾರಿಕಲ್ಲು ಕರಗಿ ನೀರಾದಂತೆ' ಸರ್ವಶೂನ್ಯವಾಗಿ ಯೋಗಿಯಲ್ಲಿ ಪರಮಾನಂದ ಆವರಿಸುತ್ತದೆ. ನಿರಾವಲಂಬ ಸ್ಥಿತಿ ಉಂಟಾಗುತ್ತದೆ.
ಬೆರೆತೆನೆಂಬ ಭಾವವೂ ಇಲ್ಲ, ಪರವಸ್ತುವೂ ಇಲ್ಲ. ಭಾವ ಬಯಲಾಗಿ ಅರುಹು ಶೂನ್ಯವಾಗಿ  ಅಖಂಡ ನಿರಾಳವೆನಿಸುವ ಸ್ಥಿತಿ. ಏನೂ ಇಲ್ಲದ ಬಚ್ಚಬರಿಯ ಬಯಲು.

#ಒಳಗೆ ನೋಡಿದರೆ ಒಳಗೆ ಬಯಲು
ಹೊರಗೆ ನೋಡಿದರೆ ಹೊರಗೂ ಬಯಲು
ನೆನೆವೆನೆಂದರೆ ನೋಡಾ ಮನ ಬಯಲು
ನೆನೆಸಿಕೊಂಬೆನೆಂದರೆ ನೀನಿಲ್ಲವಾದೆ ನಾ
ಬಯಲು ನೀ ಬಯಲು ನೋಡಾ
ಭಾವಿಸಿಕೊಂಬ ವಸ್ತು ಇನ್ನಿಲ್ಲವಾಗಿ
ಭಾವ ಬಯಲೆಂಬೆನು ನೋಡಾ
ಮಹಾಲಿಂಗ ಗುರು ಸಿದ್ಧೇಶ್ವರ ಪ್ರಭುವೇ.
 - ಶ್ರೀ ತೋಂಟದ ಸಿದ್ಧಲಿಂಗೇಶ್ವರರು

ಕಲ್ಯಾಣ ಕ್ರಾಂತಿಯ ನಂತರ ಅನುಭವ ಮಂಟಪದ ಪರಿಕಲ್ಪನೆ ಹದಿನೈದನೆ ಶತಮಾನದವರೆಗೂ ಪುನಃ ಆಕಾರ ಪಡೆದಿರಲಿಲ್ಲ. ಇಂತಹ ಸಂದರ್ಭದಲ್ಲಿ ಹದಿನೈದನೆಯ ಶತಮಾನದ ಮಧ್ಯದಲ್ಲಿ ತೋಂಟದ ಸಿದ್ಧಲಿಂಗೇಶ್ವರ ಯತಿಗಳು ಅದನ್ನು ಮತ್ತೆ ಅಸ್ತಿತ್ವಕ್ಕೆ ತಂದು ಪುನರುಜ್ಜೀವನಗೊಳಿಸಿದರು. ಇವರ ಶಿಷ್ಯರಾದ ಘನಲಿಂಗಿದೇವರು ಇವರನ್ನು “ತೋಂಟದ ಅಲ್ಲಮ” ದ್ವಿತೀಯ ಅಲ್ಲಮ  ಎಂದು ಕರೆದಿದ್ದಾರೆ. 
ಶ್ರೀ ತೋಂಟದ ಸಿದ್ಧಲಿಂಗೇಶ್ವರರು ಶಿವಾಯೋಗದ  ತನ್ಮತೆಯ ಸ್ಥಿತಿಯನ್ನು, ಈ ವರ್ಣನಾತೀತ  ಸ್ಥಿತಿಯನ್ನು , ಪರಮಾನಂದ ಸ್ಥಿತಿಯನ್ನು ' ಒಳಗೂ ಬಯಲು ಹೊರಗೂ ಬಯಲು. ಭಾವ ಬಯಲು' ಎಂದು ಮಾರ್ಮಿಕವಾಗಿ ಚಿತ್ರಿಸಿದ್ದಾರೆ.
- ✍️ Dr Prema Pangi
#ಪ್ರೇಮಾ_ಪಾಂಗಿ,#ಬಯಲು1
 #ಒಳಗೆ_ನೋಡಿದರೆ_ಒಳಗೆ_ಬಯಲು
#ಬಯಲರೂಪ_ಮಾಡಬಲ್ಲಾತನೆ_ಶರಣನು,
#ಬಯಲ_ಮೂರ್ತಿಗೊಳಿಸಿದನೊಬ್ಬ_ಶರಣ. #ಆದಿಯಿಲ್ಲದ_ಬಯಲು_ಅನಾದಿಯಿಲ್ಲದ
#ಬಯಲಿಂದಲೆ_ಹುಟ್ಟಿ_ಬಯಲಿಂದಲೆ_ಬೆಳೆದು,
#ಬಯಲು_ಬಯಲನೆ_ಬಿತ್ತಿ_ಬಯಲು_ಬಯಲ
#ಬಯಲ_ಸ್ತ್ರೀಯಳ_ನಿರವಯಲ_ಪುರುಷ
#ಏನೆಂಬೆ_ಏನೆಂಬೆ_ಒಂದೆರಡಾದುದ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma