ಶರಣ ಪರಿಚಯ : ಮೆರೆಮಿಂಡಯ್ಯ
ಶರಣ ಪರಿಚಯ : ಮೆರೆಮಿಂಡಯ್ಯ
ಇವರು ಬಸವಾದಿಶರಣರ ಸಮಕಾಲೀನರು. ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲಿ ಇವರೂ ಒಬ್ಬ ವಚನಕಾರ ಶರಣರು.
ಕಾಲ : 1160.
ಇವರು ತಮಿಳುನಾಡಿನ 63 ಪುರಾತನರಲ್ಲಿ ಒಬ್ಬನಾಗಿರುವ 'ಮೆರೆಮಿಂಡದೇವ' ಬೇರೆ ಇವರು ಬೇರೆ.
ವಚನಾಂಕಿತ : "ಐಘಟದೂರ ರಾಮೇಶ್ವರ ಲಿಂಗ'
ರೇವಣಸಿದ್ಧರ ಮಗ ರುದ್ರಮುನಿಯಿಂದ ಲಿಂಗದೀಕ್ಷೆ ಪಡೆದ ಮೆರೆಮಿಂಡಯ್ಯನವರು ರೇವಣಸಿದ್ಧರನ್ನು ಗುರು ಎಂದೇ ಸ್ತೋತ್ರ ಮಾಡಿದ್ದಾರೆ.
ಲಭ್ಯವಿರುವ ವಚನಗಳು: ೧೧೦
ವಚನಗಳಲ್ಲಿ ಅಷ್ಟಾವರಣ, ಲಿಂಗಾಂಗ ಸಾಮರಸ್ಯ ಈ ಮೊದಲಾದ ತಾತ್ವಿಕ ವಿಷಯ, ಸಾಮಾಜಿಕ ವಿಡಂಬನೆಗಳು ಸರಳ ಶೈಲಿಯಲ್ಲಿ ನಿರೂಪಿತವಾಗಿವೆ. ಅನೇಕ ಶರಣರನ್ನು ಗೌರವದಿಂದ ಸ್ಮರಿಸಿದ್ದಾರೆ.
ಇವರ ಕಾಯಕದ ಬಗ್ಗೆ ಮಾಹಿತಿಯಿಲ್ಲ. ಆದರೆ ಕಾಯಕದ ಮಹತ್ವವನ್ನು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ.
'ಯಾವುದೇ ಕಾಯಕವಿರಲಿ, ಅದನ್ನು ಮಾಡುವಾಗ ಹುಸಿಯಿಲ್ಲದಿರಬೇಕು, ಅದು ಶಿವನವರ, ಪಶುಪತಿಯ ವಾಸಸ್ಥಾನ, ಅದು ಪ್ರತ್ಯಕ್ಷ ಪರಮೇಶ್ವರ' ಎಂದು ಕಾಯಕದ ಬಗ್ಗೆ ತುಂಬಾ ಆದರ ಗೌರವದಿಂದ ಬರೆದಿದ್ದಾರೆ. ಗುರುವಾಗಿ ದೀಕ್ಷೆಯನ್ನು ಅನುಗ್ರಹಿಸಿ ಆ ಭಕ್ತರ ಮನೆಯಲ್ಲಿ ಉಣ್ಣಲೊಲ್ಲದೆ ಅಕ್ಕಿ ತುಪ್ಪವನ್ನು ಪಡೆದು, ಪ್ರತ್ಯೇಕವಾಗಿ ಅಡುಗೆ ಮಾಡಿ ಉಣ್ಣುವ ಗುರುವನ್ನು ತೀವ್ರವಾಗಿ ಟೀಕಿಸಿರುವರು.
ಶರಣ ಮೆರೆಮಿಂಡಯ್ಯನವರ ವಚನಗಳು:
1.ವಚನ:
#ಎನ್ನ ಘ್ರಾಣ ಶುದ್ಧವಾಯಿತ್ತಯ್ಯಾ,
ಏಕೋರಾಮಿತಂದೆಗಳ ಧರ್ಮದಿಂದ.
ಎನ್ನ ಜಿಹ್ವೆ ಶುದ್ಧವಾಯಿತ್ತಯ್ಯಾ,
ಪಂಡಿತಾರಾಧ್ಯರ ಧರ್ಮದಿಂದ.
ಎನ್ನ ನೇತ್ರ ಶುದ್ಧವಾಯಿತ್ತಯ್ಯಾ.
ರೇವಣಸಿದ್ಧೇಶ್ವರದೇವರ ಧರ್ಮದಿಂದ.
ಎನ್ನ ತ್ವಕ್ಕು ಶುದ್ಧವಾಯಿತ್ತಯ್ಯಾ,
ಸಿದ್ಧರಾಮೇಶ್ವರದೇವರ ಧರ್ಮದಿಂದ.
ಎನ್ನ ಹೃದಯ ಶುದ್ಧವಾಯಿತ್ತಯ್ಯಾ.
ಮರುಳಸಿದ್ಧೇಶ್ವರದೇವರ ಧರ್ಮದಿಂದ
ಸಕಳೇಶ ಮಾದಿರಾಜಯ್ಯಗಳ ಧರ್ಮದಿಂದ.
ಎನ್ನ ಅಂತರಂಗ ಶುದ್ಧವಾಯಿತ್ತಯ್ಯಾ,
ತೆಲುಗುಜೊಮ್ಮಯ್ಯಗಳ ಧರ್ಮದಿಂದ.
ಎನ್ನ ಬಹಿರಂಗ ಶುದ್ಧವಾಯಿತ್ತಯ್ಯಾ,
ಕೇಶಿರಾಜಯ್ಯಗಳ ಧರ್ಮದಿಂದ.
ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ,
ಬಸವಣ್ಣ, ಚನ್ನಬಸವಣ್ಣ, ಪ್ರಭು, ವೀರಮಡಿವಾಳಯ್ಯಗಳ ಧರ್ಮದಿಂದ.
ಐಘಟದೂರ ರಾಮೇಶ್ವರಾ, ನಿಮ್ಮ ಶರಣರ ಧರ್ಮದಿಂದ ನಾನು ಶುದ್ಧನಾದೆನಯ್ಯಾ./1311
- ಶರಣ ಮೆರೆಮಿಂಡಯ್ಯ
ಅರ್ಥ:
ಏಕೋರಾಮಿತಂದೆಗಳ ಧರ್ಮದಿಂದ.
ಪಂಡಿತಾರಾಧ್ಯರ ಧರ್ಮದಿಂದ.
ರೇವಣಸಿದ್ಧೇಶ್ವರದೇವರ ಧರ್ಮದಿಂದ.
ಸಿದ್ಧರಾಮೇಶ್ವರದೇವರ ಧರ್ಮದಿಂದ.
ಮರುಳಸಿದ್ಧೇಶ್ವರದೇವರ ಧರ್ಮದಿಂದ
ತಮ್ಮ ಪ್ರತಿ ಜ್ಞಾನೇಂದ್ರಿಯ, ತನ್ಮಾತ್ರೆ , ಕರಣಗಳು ಶುದ್ಧವಾದವು.
ಸಕಳೇಶ ಮಾದಿರಾಜಯ್ಯಗಳ ಧರ್ಮದಿಂದ.
ತೆಲುಗುಜೊಮ್ಮಯ್ಯಗಳ ಧರ್ಮದಿಂದ, ಕೇಶಿರಾಜಯ್ಯಗಳ ಧರ್ಮದಿಂದ ಅಂತರಂಗ, ಬಹಿರಂಗ ಶುದ್ಧವಾಯಿತು. ಬಸವಣ್ಣ, ಚನ್ನಬಸವಣ್ಣ, ಪ್ರಭು, ವೀರಮಡಿವಾಳಯ್ಯಗಳ ಧರ್ಮದಿಂದ ಎನ್ನ ಸರ್ವಾಂಗ ಶುದ್ಧವಾಯಿತು,
ನಿಮ್ಮ ಶರಣರ ಧರ್ಮದಿಂದ ನಾನು ಶುದ್ಧನಾದೆ ಎಂದು ಇಷ್ಟದೈವ ಐಘಟದೂರ ರಾಮೇಶ್ವರನಲ್ಲಿ ತಮ್ಮ ಲಿಂಗಾಂಗ ಸಾಧನೆಯು ಹೇಗೆ ವಿವಿಧ ಗುರುಗಳಿಂದ ನಡೆದು ತಾವು ಹೇಗೆ ಹಂತ ಹಂತವಾಗಿ ಸರ್ವಾಂಗ ಶುದ್ಧಿ ಪಡೆದೆ ಎಂದು ಅರಹುತ್ತಾರೆ. ಹೀಗೆ ಇವರು ಪಂಚಪೀಠಗಳ ಗುರುಗಳಾದ ಏಕೋರಾಮ, ಪಂಡಿತಾರಾಧ್ಯ, ರೇವಣಸಿದ್ಧೇಶ್ವರ, ಮರುಳಸಿದ್ಧೇಶ್ವರರನ್ನೂ, ಅನುಭವ ಮಂಟಪದ ಶರಣ ಗುರುಗಳಾದ ಸಿದ್ಧರಾಮೇಶ್ವರ, ಸಕಳೇಶ ಮಾದಿರಾಜಯ್ಯ,
ತೆಲುಗುಜೊಮ್ಮಯ್ಯ, ಕೇಶಿರಾಜಯ್ಯ, ಬಸವಣ್ಣನವರು, ಚನ್ನಬಸವಣ್ಣ, ಅಲ್ಲಮಪ್ರಭು, ವೀರಮಡಿವಾಳಯ್ಯ ಎಲ್ಲರನ್ನೂ ನೆನೆಯುತ್ತಾರೆ. ಇವರೆಲ್ಲರ ಧರ್ಮದಿಂದ ತಮ್ಮ ಜ್ಞಾನೇಂದ್ರಿಯಗಳು, ತನ್ಮಾತ್ರೆಗಳು, ಕರಣಗಳು , ಅಂತರಂಗ, ಬಹಿರಂಗಗಳು ಶುದ್ಧವಾದವು. ಇದು ಆ ಕಾಲದಲ್ಲಿ ಇದ್ದ ಪಂಚಪೀಠಗಳ ಮತ್ತು ಅನುಭವ ಮಂಟಪಗಳ ( ಈಗಿನ ಗುರು ಮತ್ತು ವಿರಕ್ತ ಎರಡು ಸಂಪ್ರದಾಯಗಳ) ನಡುವಿನ ಅನ್ಯೋನ್ಯ ಸಂಬಂಧ ಮತ್ತು 12 ನೆಯ ಶತಮಾನದಲ್ಲಿಯೆ ಇದ್ದ ಪಂಚಪೀಠಗಳ ಅಸ್ತಿತ್ವವನ್ನು ಸಹ ಬಿಂಬಿಸುತ್ತದೆ. ಇದು ಒಂದು ಐತಿಹಾಸಿಕ ದೃಷ್ಟಿಯಲ್ಲಿ ಮಹತ್ವದ ವಚನ. ಈ ಎಲ್ಲಾ ಗುರುಗಳು ಒಂದೇ ಕಾಲಮಾನದಲ್ಲಿ ಅಂದರೆ 11-12 ಶತಮಾನದಲ್ಲಿ ಇದ್ದರು ಎಂದು ತಿಳಿಯಬಹುದು.
2. ವಚನ:
#ಅಂಗದಲ್ಲಿದ್ದು ಕೈಗೆ ಬಂದೆ.
ಕೈಯಿಂದ ಮನಕ್ಕೇಕೆ ಬಾರೆಯಯ್ಯಾ ?
ನಾ ಹಾಡಿ ನೀ ಕೇಳಿ, ಬಾಯಿ ಕಿವಿ ನೋವಿಲ್ಲವೆ ಅಯ್ಯಾ?
ನೀ ಸಾವ ದಿನವಿಲ್ಲ, ನಾನುಳಿವ ದಿನವಿಲ್ಲ.
ನಿನ್ನಂಗವಡಗದು, ಎನ್ನ ಮನವುಡುಗದು.
ಕ್ರೀಯೆಂಬ ಹಾವಸೆಯಲ್ಲಿ ಸಿಕ್ಕಿ,
ಮೇಲನರಿಯದೆ ತೊಳಲುತ್ತೈದೇನೆ.
ಐಘಟಕ್ಕೆ ಠಾವ ಹೇಳಾ, ಐಘಟದೂರ ರಾಮೇಶ್ವರಲಿಂಗವೆ./2
- ಶರಣ ಮೆರೆಮಿಂಡಯ್ಯ
ಅರ್ಥ:
ಇಷ್ಟಲಿಂಗ ಸಾಧನೆಗೆ, ಅಂಗ ಲಿಂಗ ಸಮರಸ ಸಾಧಿಸುವ ತೊಳಲಾಟವನ್ನು ಶರಣ ಮೆರೆಮಿಂಡಯ್ಯನವರು ಈ ವಚನದಲ್ಲಿ ಮನವರಿಕೆ ಮಾಡಿಕೊಡುತ್ತಾರೆ..
ಅಂತರಂಗದಲ್ಲಿನ ಪ್ರಾಣಲಿಂಗವೇ ಇಷ್ಟಲಿಂಗವಾಗಿ ಅಂಗೈಗೆ ಬಂದಿದೆ. ಆದರೂ
ಕೈಯಿಂದ ಮನಕ್ಕೇಕೆ ಬಾರೆಯಯ್ಯಾ ? ಕರಸ್ಥಲದಿಂದ ಪ್ರಾಣಸ್ಥಲಕ್ಕೆ ಏಕೆ ಬಾರೆಯಾ?
ನಾ ನಿನ್ನನ್ನು ಹಾಡಿ, ನೀನು ಅದನ್ನು ಕೇಳಿ,
ಬಾಯಿ ಕಿವಿ ನೋಯಲಿಲ್ಲವೆ ಅಯ್ಯಾ?ಎಂದು ಅಂತರಂಗದಲ್ಲಿನ ಪ್ರಾಣಲಿಂಗವೇ ಇಷ್ಟಲಿಂಗವಾಗಿ ಅಂಗೈಗೆ ಬಂದ ಕಾರಣ ಅದನ್ನು ಕುರಿತಾಗಿಯೇ ಸಂಭಾಷಣೆ ಮಾಡುವ ರೀತಿಯಲ್ಲಿ ಅಂಗದಿಂದ ಅಂಗೈಗೆ ಬಂದೆ ಆದರೆ ಮನಕ್ಕೇಕೆ ಬರುತ್ತಿಲ್ಲ ಎಂದು ಅತ್ಯಂತ ಆತ್ಮಿಕವಾಗಿ ಕೇಳುತ್ತಾರೆ.
"ನೀ ಸಾವ ದಿನವಿಲ್ಲ, ನಾನುಳಿವ ದಿನವಿಲ್ಲ".
ನೀ ಜಂಗಮವಾದ್ದರಿಂದ ನಿನಗೆ ಸಾಯುವ ದಿನ ಇಲ್ಲ. ಆದರೆ ಈ ನಾನೆಂಬ ಶರೀರಕ್ಕೆ ಸಾವಿದೆ.
"ನಿನ್ನಂಗವಡಗದು, ಎನ್ನ ಮನವುಡುಗದು"
ನಿನ್ನಂಗವಡಗದು ಅಂದರೆ ಅಂಗತತ್ವಗಳು ಹೋಗಿ ಲಿಂಗತತ್ವಗಳಿಂದ ಸರ್ವಾಂಗಲಿಂಗಿ ಆಗುವುದು. ಮನವುಡುಗದು ಅಂದರೆ ಮನಸ್ಸು ಲಯ ವಾಗುವುದು. ನನ್ನ ಮನೋಲಯವಾಗದೆ ಅಂಗತತ್ವಗಳು ಲಿಂಗತತ್ವಗಳಾಗಿ ಮಾರ್ಪಟ್ಟು ನಾನು ಲಿಂಗಸ್ವರೂಪಿ ಆಗುವದಿಲ್ಲ.
ತಮ್ಮ ಕರಸ್ಥಲದಲ್ಲಿಯ ಇಷ್ಟಲಿಂಗಕ್ಕೆ ತಮ್ಮ ಮನೋಲಯಮಾಡಿ ತಮ್ಮನ್ನು "ಸರ್ವಾಂಗ ಲಿಂಗಿ"ಯಾಗಿಸಲು ಯಾಚನೆ ಮಾಡುತ್ತಿದ್ದಾರೆ.
ಹೀಗೆ ಇಷ್ಟಲಿಂಗದ ಈ ಕ್ರಿಯಾತ್ಮಕ ಆಚರಣೆಯಲ್ಲಿ ಹಾವಸೆಯಲ್ಲಿ ಜಾರಿ ಜಾರಿ ಬೀಳುತ್ತಿದ್ದೇನೆ. ಮೇಲೆ ಏರಲು ಅರಿಯದೆ ತೊಳಲುಟ್ಟಿದ್ದೇನೆ.
ಹಾಗಾಗಿ ಸಾಧಕ ಮುಟ್ಟಬೇಕಾದ ಅಂತಿಮ ಸ್ಥಳದ ನೆಲೆಯನ್ನು (ಐಘಟಕ್ಕೆ ಠಾವ) ಸ್ಪಷ್ಟಪಡಿಸು ಎಂದು ತಮ್ಮ ಇಷ್ಟದೇವರಾದ ಐಘಟದೂರ ರಾಮೇಶ್ವರಲಿಂಗವೆ ಎಂದು ತಮ್ಮ 'ಇಷ್ಟಲಿಂಗ'ಕ್ಕೇ ಕೇಳಿದ್ದಾರೆ
3 ವಚನ:
#ಮನೆಯ ಹೊರಗಿದ್ದವನ, ಮನೆಯ ಒಳಗಿದ್ದವ ಕರೆದಡೆ
ವಿರೋಧವುಂಟೆ ಅಯ್ಯಾ ?
ಕ್ರೀ ಹೊರಗಾಗಿ ಆತ್ಮನೊಳಗಾದಲ್ಲಿ, ನಾನೆಂಬನ್ನಕ್ಕ ಕ್ರೀ ಶೂನ್ಯವಿಲ್ಲದಿರಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./84
- ಶರಣ ಮೆರೆಮಿಂಡಯ್ಯ
ಅರ್ಥ:
ದೇಹದ ಹೊರಗಿದ್ದ ಕರಸ್ಥಲದ ಇಷ್ಟಲಿಂಗವನ್ನು ದೇಹದ ಒಳಗಿದ್ದ ಪ್ರಾಣಲಿಂಗ ಕರೆದರೆ
ವಿರೋಧ ವಾಗಬಾರದು.
ಕ್ರೀಯೆ ಹೊರಗೆ ಆದರೂ ಸಹ ಆತ್ಮನು ಒಳಗೆ ನಾನೇ ಎನ್ನುವಾಗ.
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ
ಕ್ರೀಯೆ ಶೂನ್ಯವಿಲ್ಲದಿರಬೇಕು. ದೇಹದ ಒಳಗೆಯೇ ಇರುವ ಆತ್ಮವನ್ನು ಅರಿಯುವುದಕ್ಕೆ ಹೊರಗಿನ ಕ್ರಿಯೆಯೂ ಅವಶ್ಯಕ ಎಂದು ಕ್ರಿಯೆಯ ಮಹತ್ವ ವಿವರಿಸಿದ್ದಾರೆ. ಚೈತನ್ಯಸ್ವರೂಪಿ ದೇವನ ಅಂಶಿಕನಾದ ನಾವು ಕೂಡ ಆ ದೇವನನ್ನು ಅರಿಯಲು ಅನುಭಾವ ಕ್ರಿಯೆ ಮಾಡಲೇಬೇಕು.
4.ವಚನ:
#ತಾ ಮೀವನ್ನಕ್ಕ ಲಿಂಗಕ್ಕೆ ಮಜ್ಜನ.
ತಾನುಂಬನ್ನಕ್ಕ ಲಿಂಗಕ್ಕೆ ನೈವೇದ್ಯ.
ತನ್ನ ತನು ಭೋಗವ ಮಾಡುವನ್ನಕ್ಕ
ಲಿಂಗಾರ್ಪಿತವಾಗಬೇಕು.
ಇದು ಸದ್ಭಕ್ತಮಾರ್ಗದಿರವು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./58
- ಶರಣ ಮೆರೆಮಿಂಡಯ್ಯ
ಅರ್ಥ:
ಇಲ್ಲಿ ಪ್ರಸಾದಿ ಸ್ಥಲದ ಲಿಂಗಪ್ರಸಾದಿಯ ನಿಲುವಿನ ವರ್ಣನೆ ಇದೆ. ಪ್ರಸಾದಿ ಸ್ನಾನ ಮಾಡಿದರೆ ಅದು ಲಿಂಗಕ್ಕೆ ಮಜ್ಜನ.
ಪ್ರಸಾದಿ ಊಟ ಮಾಡಿದರೆ ಅದು ಲಿಂಗಕ್ಕೆ ನೈವೇದ್ಯ. ಪ್ರಸಾದಿಯ ಎಲ್ಲ ತನು ಭೋಗವು
ಲಿಂಗಾರ್ಪಿತವಾಗಬೇಕು.
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ
ಇದು ಸದ್ಭಕ್ತರ ಮಾರ್ಗದ ಅರಿವು.
5. ವಚನ:
#ಮನ ಮುಟ್ಟದ ಪೂಜೆ,
ಮಣ್ಣುಗೋಡೆಯ ತೊಳೆದು, ನಿರ್ಮಲವನರಸುವನಂತೆ.
ವಸ್ತುವ ಮುಟ್ಟದ ಅರ್ಪಿತ,
ಕುಕ್ಕರ ಅಸ್ಥಿಯ ಕಡಿದು, ತನ್ನಯ ಶೋಣಿತಕ್ಕೆ ಚಪ್ಪರಿವಂತೆ,
ಇದು ನಿಶ್ಚಯದ ಮುಟ್ಟಲ್ಲ,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./1367
- ಶರಣ ಮೆರೆಮಿಂಡಯ್ಯ
ಅರ್ಥ:
ಮನವನ್ನು ಮುಟ್ಟದ ಪೂಜೆ ಎಂದರೆ
ಮಣ್ಣುಗೋಡೆಯನ್ನು ತೊಳೆದಂತೆ. ಮಣ್ಣುಗೋಡೆಯನ್ನು ನೀರಿನಿಂದ ತೊಳೆದರೆ ಕೆಸರು ಮಣ್ಣೆ ಬರುವುದು ಹೊರತು ನಿರ್ಮಾಲ್ಯವಲ್ಲ. ಅದು ಡಾಂಭಿಕ ಪೂಜೆ. ಮನವನ್ನು ಮುಟ್ಟದ ಪೂಜೆ ಎಂದರೆ
ಪರಮನನ್ನು ಮುಟ್ಟದೆ ಅರ್ಪಿತ ಮಾಡಿದಂತೆ. ಅದು ದೇವರಿಗೆ ತಲುಪುವುದೇ ಇಲ್ಲ. ಮನ ಮುಟ್ಟದ ಪೂಜೆ ಯಿಂದ ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ ಸಾಧ್ಯವಿಲ್ಲ. ಇದು ನಿಶ್ಚಯದ ನಿಷ್ಠೆಯ ಪೂಜೆಯಲ್ಲ ಲಿಂಗವನ್ನು ಮುಟ್ಟಲ್ಲ,
6.ವಚನ:
#ನೀರೊಳಗಣ ಕಿಚ್ಚಿಗೆ ನೀರೆ ತಾಯಿ.
ಕಲ್ಲೊಳಗಣ ಕಿಚ್ಚಿಗೆ ಕಲ್ಲೆ ತಾಯಿ.
ಮರದೊಳಗಣ ಕಿಚ್ಚಿಗೆ ಮರನೆ ತಾಯಿ.
ಅವು ಹೊರಹೊಮ್ಮಿದಾಗ ತಾಯ ತಿಂದು, ತಾವು ತಲೆದೋರುವಂತೆ
ಕುರುಹಿಂದ ಅರಿವನರಿತು
ಅರಿವು ಕುರುಹು ನಷ್ಟವ ಮಾಡಿ ನಿಂದಲ್ಲಿಯೆ,
ಐಘಟದೂರ ರಾಮೇಶ್ವರಲಿಂಗ, ಅಂಗವ ಅರಿತು ನಿಂದ ನಿಲವು./63
– ಶರಣ ಮೆರೆಮಿಂಡಯ್ಯ
ಅರ್ಥ:
ನೀರಿನ ಒಳಗಡೆ ಇರುವ ಕಿಚ್ಚಿಗೆ ನೀರೆ ತಾಯಿ.
ಕಲ್ಲಿನಲ್ಲಿ ಇರುವ ಕಿಚ್ಚಿಗೆ ಕಲ್ಲೆ ತಾಯಿ.
ಮರದ ಒಳಗೆ ಇರುವ ಕಿಚ್ಚಿಗೆ ಮರನೇ ತಾಯಿ.
ನೀರು, ಕಲ್ಲು ಮತ್ತು ಮರದ ಒಳಗಿನ ಕಿಚ್ಚು ಹೊರಹೊಮ್ಮಿದಾಗ ಅವು ತಮ್ಮ ಮೂಲವಸ್ತುವನ್ನೆ ನಾಶಪಡಿಸಿದಂತೆ ತೋರುವುದು. ನೀರು, ಕಲ್ಲು, ಮರದಲ್ಲಿರುವ ‘ಕಿಚ್ಚು’ ಹೊರಹೊಮ್ಮಿದಾಗ, ಆ ‘ಕಿಚ್ಚು’ ತಾಯಿ ಯನ್ನೇ ತಿಂದಂತೆ ತಲೆದೋರುವುದು.
ಹೀಗೆ ಇಷ್ಟಲಿಂಗ ವೆಂಬ ಕುರುಹಿನಿಂದ ಅರಿವು ಆಗಿ, ಪ್ರಾಣಲಿಂಗ ಸಾಧನೆಯಲ್ಲಿ ಆ ಅರಿವು ಕುರುಹನ್ನು ತಿಂದಂತೆ ತೋರುವುದು. ಕುರುಹಾದ ಇಷ್ಟಲಿಂಗ ಹೋಗಿ ಪ್ರಾಣಲಿಂಗ ಸಾಕ್ಷಾತ್ಕಾರ ವಾಗುವುದು.
7.ವಚನ:
#ಐಶ್ವರ್ಯವುಳ್ಳವಂಗೆ ನಿಜಭಕ್ತಿಯಿಲ್ಲ.
ಡಂಬಕದ ವೇಷಧಾರಿಗೆ ನಿಜತತ್ವದ ಜ್ಞಾನವಿಲ್ಲ.
ಕುಟಿಲರ ನೆಮ್ಮಿಗೆ ಘನಲಿಂಗದ ನೆಮ್ಮಿಗೆಯಿಲ್ಲ,
ಐಘಟದೂರ ರಾಮೇಶ್ವರಲಿಂಗ./28
- ಶರಣ ಮೆರೆಮಿಂಡಯ್ಯ
ಅರ್ಥ:
ಐಶ್ವರ್ಯವುಳ್ಳ ಸಿರಿವಂತನಿಗೆ ನಿಜಭಕ್ತಿಯಿಲ್ಲ. ಇತರರ ಮುಂದೆ ತಾನು ಸಿರಿವಂತನೆಂದು ತೋರಿಸಿಕೊಳ್ಳುವುದಕ್ಕಾಗಿ ಅತಿಯಾಗಿ ಹಣವನ್ನು ವೆಚ್ಚಮಾಡುತ್ತ, ಆಡಂಬರದಿಂದ ದೇವರನ್ನು ಪೂಜಿಸುವ ವ್ಯಕ್ತಿಯಲ್ಲಿ ನಿಜವಾದ ಭಕ್ತಿ ಇರುವದಿಲ್ಲ.
ಡಂಬಕದ ವೇಷಧಾರಿಗೆ ನಿಜತತ್ವದ ಜ್ಞಾನವಿಲ್ಲ. ಬಾಯಲ್ಲಿ ಒಳ್ಳೆಯ ಮಾತುಗಳನ್ನಾಡುತ್ತ, ವೇಷಧಾರಿ ನಯವಂಚಕನು ಕಾವಿ ತೊಟ್ಟರೂ ಒಳ್ಳೆಯ ಅರಿವನ್ನು ಪಡೆದಿರುವುದಿಲ್ಲ. ಒಳ್ಳೆಯ ಅರಿವು ಜ್ಞಾನ ಅವನಲ್ಲಿ ಇದ್ದಿದ್ದರೆ, ಆತ ತೋರಿಕೆಯ ವೇಷ ಧರಿಸದೆ ಸರಳವಾದ ಮತ್ತು ನೇರವಾದ ನಡೆನುಡಿಗಳಿಂದ ಬಾಳುತ್ತಿದ್ದನು. ಕುಟಿಲ ಮೋಸಗಾರರಿಗೆ ಘನಲಿಂಗದ ನೆಮ್ಮಿಗೆಯಿಲ್ಲ.
8.ವಚನ:
#ತನ್ನ ತಾನರಿದಡೆ, ತನ್ನರಿವೆ ಗುರು,
ತಾನೆ ಲಿಂಗ, ತನ್ನ ನಿಷ್ಠೆಯೇ ಜಂಗಮ.
ಇಂತೀ ತ್ರಿವಿಧವು ಒಂದಾದಡೆ,
ಐಘಟದೂರ ರಾಮೇಶ್ವರಲಿಂಗವು ತಾನೆ./56
- ಶರಣ ಮೆರೆಮಿಂಡದೇವ
ಅರ್ಥ:
ವ್ಯಕ್ತಿಯು ತನ್ನನ್ನು ತಾನು ಅರಿತುಕೊಂಡು ಬಾಳುವಂತಾದರೆ ತನ್ನ ಪ್ರಜ್ಞೆಯಿಂದ ತನ್ನ ವ್ಯಕ್ತಿತ್ವವನ್ನು ತಾನೇ ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಬಲ್ಲನು.
ಅರಿವೇ ಗುರು, ತಾನೆ ಲಿಂಗ, ತನ್ನ ನಿಷ್ಠೆಯೇ ಜಂಗಮ. ತನ್ನನ್ನು ತಾನು ಅರಿತುಗೊಂಡರೆ ಈ ಮೂರೂ ಒಂದಾಗಿ, ಆ ಶರಣನೆ ಶಿವಸ್ವರೂಪಿ ಯಾಗುತ್ತಾನೆ.
9 ವಚನ:
#ಅಸಿಯಾಗಲಿ ಕೃಷಿಯಾಗಲಿ,
ವಾಚಕ ವಾಣಿಜ್ಯ ಮಸಿಯಾಗಲಿ,
ಮಾಡುವಲ್ಲಿ ಹುಸಿಯಿಲ್ಲದಿರಬೇಕು.
ಅದು ಅಸಮಾಕ್ಷನ ಬರವು, ಪಶುಪತಿಯ ಇರವು, ಐಘಟದೂರ ರಾಮೇಶ್ವರಲಿಂಗ ತಾನೆ. /14
- ಶರಣ ಮೆರೆಮಿಂಡಯ್ಯ
ಅರ್ಥ:
ಸಣ್ಣ ಉದ್ಯೋಗ, ಕೃಷಿ, ಕವಿ ವಾಚಕ, ವ್ಯಾಪಾರ ಹೀಗೆ ಯಾವುದೇ ಕಾಯಕವಿರಲಿ ಹುಸಿ ಅಸತ್ಯವಿಲ್ಲದೆ ಮಾಡಬೇಕು. ಅಂಥ ಸತ್ಯ ಶುದ್ದ ಕಾಯಕದಲ್ಲಿ, ನಡೆ ನುಡಿ ಒಂದಾದಲ್ಲಿ ಅಲ್ಲಿಯೇ ಪಶುಪತಿ ಶಿವನು ವಾಸಿಸುತ್ತಾನೆ.
10. ವಚನ:
#ಕಾಮದಲ್ಲಿ ಅಳಿದು, ಕ್ರೋಧದ ದಳ್ಳುರಿಯಲ್ಲಿ ಬೆಂದು,
ಮೋಹದ ಸಮುದ್ರದಲ್ಲಿ ಮುಳುಗಿ,
ನಾನಾ ಭವರಸಂಗಳನುಂಡು ಘೋರಸರಾಗಬೇಡ.
ಅರಿ, ಐಘಟದೂರ
ರಾಮೇಶ್ವರಲಿಂಗವ./36
- ಶರಣ ಮೆರೆಮಿಂಡಯ್ಯ
ಅರ್ಥ:
ಕಾಮದಲ್ಲಿ ನಾಶವಾಗಿ ಕ್ರೋಧದ ಉರಿಯಲ್ಲಿ ಬೆಂದು, ಮೋಹದಲ್ಲಿ ಮುಳುಗಿ,
ನಾನಾ ತರದ ಭವದ ಪಾಶದಲ್ಲಿ ಮೈ ಮರೆತು ಘೋರನಾಗಬೇಡ.
ಐಘಟದೂರ ರಾಮೇಶ್ವರಲಿಂಗವೆಂಬ ಶಿವನಲ್ಲಿ ಅರಿತುಕೊಂಡು ಬೆರೆ.
-✍️ Dr Prema Pangi
Comments
Post a Comment