ಶರಣ ಪರಿಚಯ : *ಶರಣ ಚಂದಿಮರಸ*
*ಶರಣ ಪರಿಚಯ : *ಶರಣ ಚಂದಿಮರಸ*
ಕಾಲ : ಸು. 1020. (ಬಸವಣ್ಣನವರ ಹಿರಿಯ ಸಮಕಾಲೀನರು.
ಚಂದಿಮರಸ ಹೆಸರಿನವರು ಒಬ್ಬರೋ ಇಬ್ಬರೋ ಎಂದು ಜ್ಞಿಜ್ಞಾಸೆ ಇದೆ.
ಈತ ಜೇಡರ ದಾಸಿಮಯ್ಯನಿಗಿಂತ ಹಿಂದೆ ಇದ್ದಿರಬೇಕೆಂದು ಸಂಶೋಧಕರಾದ ಡಿ.ಎಲ್.ನರಸಿಂಹಾಚಾರ್ ಅವರ ಅಭಿಪ್ರಾಯ.
ಕಾಯಕ : ಗುಲ್ಬರ್ಗ ಜಿಲ್ಲೆಯ ಕೆಂಭಾವಿಯಲ್ಲಿ ಅರಸನಾಗಿದ್ದರು.
ಲಭ್ಯವಾದ ವಚನಗಳು: 157
ಈತ ಚಾಡಿ ಮಾತುಗಳನ್ನು ಕೇಳಿ,ತಮ್ಮ ರಾಜ್ಯದ ಪ್ರಜೆಯಾಗಿದ್ದ ಭೋಗಣ್ಣನೆಂಬ ಶರಣರನ್ನು ಊರಿನಿಂದ ಓಡಿಸಿದನೆಂದೂ ಆತನ ಹಿಂದೆಯೇ ಆ ಊರಿನ ಲಿಂಗಗಳೆಲ್ಲ (ಶರಣರೆಲ್ಲ?)ಹೋಗಲು ರಾಜ ಭೋಗಣ್ಣ ಶರಣನನ್ನು ಹಿಂದಕ್ಕೆ ಕರೆಸಿ ತಾನು ವೀರಶೈವ ಧರ್ಮವನ್ನು ಸ್ವೀಕರಿಸಿ, ರಾಜ್ಯಕೋಶಗಳನ್ನು ತೊರೆದು, ಕೃಷ್ಣಾ ನದೀತೀರದ ಚಿಮ್ಮಲಿಗೆಯಲ್ಲಿ ವಾಸಿಸುತ್ತ ಗುರು ನಿಜಗುಣ ರಿಂದ ವೀರಶೈವ ದೀಕ್ಷೆ ಪಡೆದು ತಾನೂ ಗುರುವಿನಂತೆ ವಚನಕಾರನಾಗಿ ಧರ್ಮಪ್ರಸಾರ ಕೈಗೊಂಡು ಚಿಮ್ಮಲಿಗೆಯಲ್ಲಿಯೇ ಸಮಾಧಿಸ್ಥನಾದರೆಂದು ಪ್ರತೀತಿ. ಚಿಮ್ಮಲಿಗೆಯಲ್ಲಿ ಇವರ ಹೆಸರಿನಲ್ಲಿ ಒಂದು ಗುಡಿ ಇಂದಿಗೂ ಇದೆ. ಘನಲಿಂಗ ಈತನನ್ನು ಮಹಾತ್ಮನೆಂದು ತನ್ನ ವಚನಗಳಲ್ಲಿ ಹಾಡಿದ್ದಾನೆ.
ಅಂಕಿತ: ಸಿಮ್ಮಲಿಗೆಯ ಚೆನ್ನರಾಮ
ಅರಿವು, ಗುರು-ಶಿಷ್ಯರ ಸಂಬಂಧ, ಇಷ್ಟಲಿಂಗ ದೀಕ್ಷೆ, ದೈವ, ಮಾಯೆ, ಅರಿವು. ಆತ್ಮಜ್ಞಾನ, ಶರಣಸ್ತುತಿ, ಅನುಭಾವ ಈ ಮುಂತಾದ ವಿಷಯಗಳನ್ನು ಚಂದಿಮಸರರು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ.
"ತಮ್ಮ ಅರಿವೇ ತಮಗೆ ಗುರು" ಈ ಅರಿವನ್ನು ಪ್ರತಿಯೊಬ್ಬರು ಜಾಗೃತಗೊಳಿಸಿ ಬಾಳಬೇಕೆಂದು ಇವರ ವಚನಗಳಲ್ಲಿ ಮೂಡಿಬರುತ್ತವೆ. "ಮನುಷ್ಯನಲ್ಲೇ ದೇವರಿದ್ದಾನೆ. ಸತ್ಯವನ್ನರಿತು, ಸಾಧನೆ ಮಾಡಿದರೆ ತಾನೇ ದೇವನಾಗುವನು"'. "ಮಾನವನು ಶಿವಯೋಗ ಸಾಧನೆ ಮಾಡುತ್ತಾ ಕೊನೆಗೆ ಮಹಾಂತವನ್ನು ಹೊಂದಬಹುದು" ಎಂದು ತಮ್ಮ ವಚನದಲ್ಲಿ ತಿಳಿಸಿದ್ದಾರೆ. ಇವರು ವಾಸ್ತವವಾದಿ, ಬದುಕನ್ನು ಪ್ರೀತಿಸಿದವರು, ಇರುವಷ್ಟು ದಿನ ಚೆನ್ನಾಗಿ ಭಕ್ತಿಯಿಂದ ಗುರು ಲಿಂಗ ಜಂಗಮ ಸೇವೆ ಮಾಡುತ್ತಾ, ಅವರ ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜನರಿಗೆ ಕರೆ ನೀಡಿದವರಾಗಿದ್ದಾರೆ. ಸದಾಚಾರಿ, ಸದ್ಗುಣಿ, ಸಂಸಾರ ಮತ್ತು ಪಾರಮಾರ್ಥ ಎರಡನ್ನು ಸಮನಾಗಿ ಸ್ವೀಕರಿಸಿದವರು. "ಸಂಸಾರಿಯಾಗಿದ್ದುಕೊಂಡೇ ಶರಣರಾಗಬಹುದು, ಮುಕ್ತಿಯನ್ನು ಪಡೆಯಬಹುದು" ಎಂದು ತಮ್ಮ ಅನೇಕ ವಚನಗಳಲ್ಲಿ ತಿಳಿಸಿದ್ದಾರೆ. ಸಮಾಜದ ಓರೆ-ಕೋರೆಗಳನ್ನು ತಮ್ಮ ವಚನಗಳಲ್ಲಿ ಸೆರೆಹಿಡಿದಿದ್ದಾರೆ. ಇವರು ಮಹಾಮಹಿಮ ವೀರ ಶಿವಶರಣರು. "ಇವರ ವಚನಗಳು ಅಧ್ಯಾತ್ಮಿಕ ಜ್ಞಾನದಲ್ಲಿ ತುಂಬಾ ಶ್ರೇಷ್ಠತರವಾಗಿವೆ. ಇವರ ವಚನಗಳು ಶ್ರೇಷ್ಠತರವಾದುವೆಂದೂ ಇವರ ವಚನಗಳನ್ನು ಉದಾಹರಿಸದ ಯಾವ ವಚನ ಸಂಗ್ರಹಕಾರನೂ ಇಲ್ಲ"ವೆಂಬುದು ಮಾನ್ಯರಾದ ಫ ಗು ಹಳಕಟ್ಟಿಯವರು ಅಭಿಪ್ರಾಯ ಪಟ್ಟಿದ್ದಾರೆ.
*Sharana_Chandimarasa*
c:1020
Pen Name: Simmaligeya Chennaraama
There is difference of opinion whether he lived in 1020 or was a contemporary to Basavanna and whether there were two different Chandimarasa. He hailed from Chimmalige on the banks of Krishna near Alamatti. There is a memorial temple in Chimmalagi. Nijaguna Shivayogi was his guru. His 157 vachanas are available with the signature Simmaligeya Chennaraama.
*ಶರಣ ಚಂದಿಮರಸರ ವಚನಗಳು* :
1. ವಚನ:
#ಇಂದುವಿನ ಬೆಳಗಿನಿಂದ ಇಂದುವನು,
ಭಾನುವಿನ ಬೆಳಗಿನಿಂದ ಭಾನುವನು,
ದೀಪದ ಬೆಳಗಿನಿಂದ ದೀಪವನು ಕಾಂಬಂತೆ
ತನ್ನ ಬೆಳಗಿನಿಂದ ತನ್ನನೆ ಕಂಡುನಿಂದ ನಿಲವು ತಾನೆ ಸಿಮ್ಮಲಿಗೆಯ
ಚೆನ್ನರಾಮ.
- ಚಂದಿಮರಸ
Translation :
As seeing the moon through moonlight
As seeing the sun through sunlight
As seeing the lamp through the lamp-light
If you see yourself through your own light
You are what you are, Simmaligeya Chennaraama.
- Chandimarasa
ಅರ್ಥ:
ಚಂದ್ರನ ಬೆಳಗಿನಿಂದ ಚಂದ್ರನನ್ನು,
ಸೂರ್ಯನ ಬೆಳಗಿನಿಂದ ಸೂರ್ಯನನ್ನು,
ದೀಪದ ಬೆಳಗಿನಿಂದ ದೀಪವನು ಕಾಣುವಂತೆ,
ತನ್ನ ಜ್ಞಾನದ ಪ್ರಜ್ಞೆಯ ಅರಿವಿನ ಬೆಳಗಿನಿಂದ ತನ್ನನ್ನು ತಾನೇ ಕಂಡರೆ ತನ್ನಲ್ಲಿಯೇ ದೇವರಿದ್ದಾನೆ ಎಂಬ ಸತ್ಯವನ್ನರಿತು, ತಾನೇ ದೇವ (ಸಿಮ್ಮಲಿಗೆಯ ಚೆನ್ನರಾಮ) ನಾಗುವುನು.
2. ವಚನ:
#ಕವಿ ಗಮಕಿ ವಾದಿ ವಾಗ್ಮಿಯೆಂಬವರ ಮಾತಿಂಗಿಲ್ಲ.
ಶಾಸ್ತ್ರಿಕರ ಶಾಸ್ತ್ರಕ್ಕಿಲ್ಲ.
ತರ್ಕಿಗಳ ತರ್ಕಕ್ಕಿಲ್ಲ.
ಶಬ್ದಿಕರ ಶಬ್ದ ನೆರೆಯವ ತೋರುವಡೆ ವಿಷಯವಾಗಿರದು.
ಅರಿವೊಡೆ ಅತಕ್ರ್ಯ,
ಅದು ನಿನ್ನಲ್ಲಿಯೆ ಅದೆ,
ಸಿಮ್ಮಲಿಗೆಯ ಚೆನ್ನರಾಮಾ.
- ಚಂದಿಮರಸ
Translation :
Poets, singers, orators, theoreticians-
their words touch you not.
Nor the scriptures of the scholars,
nor the logic of logicians
nor the words of orators touch you.
It is not an object to be seen,
it is beyond logic to know,
it is within you, Simmaligeya Chennaraama.
- Chandimarasa
ಅರ್ಥ:
ಕವಿ ಗಮಕಿ ವಾದಿ ವಾಗ್ಮಿಯೆಂಬವರ ಜಾಣ ಮಾತಿಗೆ, ಶಾಸ್ತ್ರಿಗಳ ಶಾಸ್ತ್ರಕ್ಕೆ,
ತರ್ಕ ಮಾಡುವವರ ತರ್ಕಕ್ಕೆ,
ಶಬ್ದಿಕರ ಶಬ್ದಕ್ಕೆ ತೋರುವಂತೆ ಕಂಡರೂ ಪರಮಾತ್ಮನನ್ನು ಆರಿಯಲು ಸಾಧ್ಯವಿಲ್ಲ.
ಅರಿತು ನೋಡಿದರೆ ಪರಮಾತ್ಮ ಯಾವ ತರ್ಕಕ್ಕೂ ಸಿಗುವದಿಲ್ಲ. ಅವನು ಅತಕ್ರ್ಯ, ಪರವಸ್ತು ನಿನ್ನಲ್ಲಿಯೆ ಇದ್ದಾನೆ, ಸಿಮ್ಮಲಿಗೆಯ ಚೆನ್ನರಾಮಾ.
3. ವಚನ:
#ಕಾಳಕೂಟ ಹಾಳಾಹಳ ವಿಷಂಗಳು
ಕಡಿದವರಲ್ಲನಲ್ಲದೆ ಮಿಕ್ಕವರನೇನನೂ ಮಾಡಲಮ್ಮವು
ಸ್ತ್ರೀಯೆಂಬ ಕಡುನಂಜು ನೋಡಿದವರ, ನುಡಿಸಿದವರ,
ಕೇಳಿದವರ, ಕೂಡಿದವರ, ಗಡಣ ಸಂಗಮಾತ್ರದಿಂ
ಮಡುಹಿ ನರಕದಲ್ಲಿ ಕೆಡಹದೆ ಮಾಡಳು.
ದೇವ ದಾನವ ಮಾನವರನಾದಡು ಉಳಿಯಲೀಯಳು!
ಆವಂಗೆಯೂ ಗೆಲಬಾರದೀ ಮಾಯೆಯ!
ಗೆಲಿದಾತ ನೀನೆ ಸಿಮ್ಮಲಿಗೆಯ ದಾತ ನೀನೆ,
ಸಿಮ್ಮಲಿಗೆಯ ಚೆನ್ನರಾಮಾ!
- ಚಂದಿಮರಸ
Translation:
Poison of the snake and of other kinds
do no harm unless bitten.
But the great poison called Maya
affects those who see her,
speak with her, listen to her,
be in the company of those who unite with her
and drown you without doubt in great hell.
She will not allow gods, demons and men let live.
No one can conquer this Maya.
One Who conquers is only truely, Simmaligeya Chennaraama.
- Chandimarasa
ಅರ್ಥ:
ಮಾಯೆ ಯಾರನ್ನು ಬಿಡುವದಿಲ್ಲ.ನೋಡಿದವರ, ನುಡಿಸಿದವರ, ಕೇಳಿದವರ, ಕೂಡಿದವರ, ಸಂಗ ಮಾಡಿದವರನ್ನು ನರಕಕ್ಕೆ ತಳ್ಳುತ್ತಾಳೆ. ಮಾಯೆ ಎಂಬದು ವಿಷ. ದೇವ, ದಾನವ, ಮಾನವರಿಗೆ ಮಾಯೆಯಿಂದ ಉಳಿಗಾಲವಿಲ್ಲ.
ಇವರಾರಿಗೂ ಮಾಯೆಯನ್ನು ಗೆಲೆಯಲಾಗಲಿಲ್ಲ.
ಮಾಯೆಯನ್ನು ಗೆದ್ದವನು
ಸಿಮ್ಮಲಿಗೆಯ ಚೆನ್ನರಾಮ ಒಬ್ಬನೇ. ಮಾಯೆಯನ್ನು ಗೆದ್ದವರು ಸಿಮ್ಮಲಿಗೆಯ ಚೆನ್ನರಾಮ ದೇವ ಸಂಭೂತರು.
4. ವಚನ:
#ಕುರುಡ ಕಾಣನೆಂದು, ಕಿವುಡ ಕೇಳನೆಂದು
ಹೆಳವ ಹರಿಯನೆಂದು, ಮರುಳ ಬಯ್ದನೆಂದು,
ಪಿಶಾಚಿ ಹೊಯ್ದನೆಂದು ಮನಕತಬಡುವರೆ ಹೇಳಾ?
ತಾನರಿವುಳ್ಳಾತ ತತ್ವವನರಿಯದವರಲ್ಲಿ
ಗುಣದೋಷವನರಿಸುವರೆ ಹೇಳಾ,
ಸಿಮ್ಮಲಿಗೆಯ ಚೆನ್ನರಾಮಾ.
- ಚಂದಿಮರಸ
Translation:
Will any one worry that
the blind cannot see, the deaf cannot hear,
the lame cannot move or the mad has spoken harsh words?
One who knows, will he ever search for the defects of the ignorant?
Tell me Simmaligeya Chennaraama.
- Chandimarasa
ಅರ್ಥ:
ಕುರುಡನಿಗೆ ಕಣ್ಣು ಕಾಣಿಸದೆಂದು ಅವನ ತಪ್ಪು ಎಂದು ಹೇಳಬಹುದೇ? ಕಾಣನೆಂದು, ಕಿವುಡನಿಗೆ ಕೇಳಿಸದೆ ಇರುವುದು ಅವನ ತಪ್ಪು ಏನಬಹುದೇ?
ಹೆಳವ ನಡಿಯನೆಂದು, ತಪ್ಪು ಏನಬಹುದೇ? ಮರುಳ ಮೂರ್ಖ ಮನುಷ್ಯ ಬಯ್ದನೆಂದು ಅವನ ತಪ್ಪು ಎನಬಹುದೇ? ಪಿಶಾಚಿ ಹೊದರೆ ಮನ ತಲ್ಲಣವಾಗಬೇಕೆ ಹೇಳಾ?
ತನ್ನನ್ನು ತಾನು ಅರಿದಾತ, ತತ್ವ ಅರಿಯದವರಲ್ಲಿ ಮೂರ್ಖರಲ್ಲಿ ಗುಣ ದೋಷ ಅರಿಸಬಾರದು. ಅರಿವು ಉಳ್ಳವನು ತತ್ವಜ್ಞಾನ ಅರಿಯದವರಲ್ಲಿ ಅದು ಅವರ ಗುಣದೋಷವೆನ್ನದೆ ಜ್ಞಾನದ ಕೊರತೆ ಎಂದು ತಿಳಿದು ಕ್ಷಮಿಸಿ ಬಿಡಬೇಕು.
5. ವಚನ
#ತನ್ನ ಲೀಲೆಯಿಂದ ತಾನೇ ಸ್ವಯಂಭುಲಿಂಗವಾಯಿತ್ತು!
ಆ ಲಿಂಗದಿಂದಾಯಿತ್ತು ಶಿವಶಕ್ತ್ಯಾತ್ಮಕ,
ಆ ಶಿವಶಕ್ತ್ಯಾತ್ಮಕದಿಂದಾದುದು ಆತ್ಮ,
ಆತ್ಮನಿಂದಾದುದು ಆಕಾಶ,
ಆಕಾಶದಿಂದಾದುದು ವಾಯು
ವಾಯುವಿನಿಂದಾದುದು ಅಗ್ನಿ
ಅಗ್ನಿಯಿಂದಾದುದು ಅಪ್ಪು,
ಅಪ್ಪುವಿನಿಂದಾದುದು ಪೃಥ್ವಿ,
ಪೃಥ್ವಿಯಿಂದಾದುದು ಸಕಲಜೀವವೆಲ್ಲಾ.
ಇವೆಲ್ಲ ನಿಮ್ಮ ನೆನಹು ಮಾತ್ರದಿಂದಾದವು
ಸಿಮ್ಮಲಗೆಯ ಚೆನ್ನರಾಮಾ.
- ಚಂದಿಮರಸ
Translation:
The Indescribable Thing
through its own play (ಲೀಲೆ) became seIfborn Linga (ಸ್ವಯಂಭುಲಿಂಗ)
From that Linga the union of Shiva and Shakti ,
From the union of Shiva and Shakti the Soul,
From the Soul the Sky,
From the Sky the Air,
From the Air the Fire,
From the Fire the Water,
From the Water the Earth,
From the Earth all Living creatures.
All these came to be just through your thought(Chit-Shakti) Simmaligeya Chennaraama
- Chandimarasa
ಅರ್ಥ:
ಜಗತ್ತಿನ ಉತ್ಪತ್ತಿ ಸ್ವಯಂಭುಲಿಂಗದಿಂದ ಶಿವಶಕ್ತ್ಯಾತ್ಮಕ ತತ್ವದಿಂದ ಆದ ಬಗೆ ವರ್ಣಿಸಿದ್ದಾರೆ. ತನ್ನ ಲೀಲೆಯಿಂದ ತಾನೇ ನಿರಾಕಾರ ಬಯಲು ಸ್ವಯಂಭುಲಿಂಗವಾಯಿತು.
ಆ ಲಿಂಗದಿಂದ ಶಿವಶಕ್ತ್ಯಾತ್ಮಕ ತತ್ವಗಳು
ಉದಯಿಸಿದವು. ಆ ಶಿವಶಕ್ತ್ಯಾತ್ಮಕದಿಂದ ಆತ್ಮ,
ಆತ್ಮನಿಂದ ಆಕಾಶ, ಆಕಾಶದಿಂದ ವಾಯು
ವಾಯುವಿನಿಂದ ಅಗ್ನಿ, ಅಗ್ನಿಯಿಂದ ಅಪ್ಪು,
ಅಪ್ಪುವಿನಿಂದ ಪೃಥ್ವಿ, ಪೃಥ್ವಿಯಿಂದ ಸಕಲ ಜೀವಿ ಗಳು ಸೃಷ್ಠಿಯಾದವು. ಹೀಗೆ ಜಗತ್ ನಿರ್ಮಾಣ
ಪರಶಿವನ ನೆನಹು ಮಾತ್ರದಿಂದ ಆಯಿತು ಎನ್ನುತ್ತಾರೆ ಶರಣ ಚಂದಿಮರಸ.
6. ವಚನ
#ನಿಜವಸ್ತುವೊಂದೆ.
ತನ್ನ ಲೀಲೆಯಿಂದ ಎರಡಾಗಬಲ್ಲುದು ಅದೊಂದೆ.
ಬೇರೆ ತೋರ ಬಲ್ಲುದು ಅದೊಂದೆ,
ತನ್ನ ಮರೆಯ ಬಲ್ಲುದು ಅದೊಂದೆ.
ಆ ಮರವೆಯ ಬಲ್ಲುದು ಅದೊಂದೆ,
ತಾನಲ್ಲದೆ ಅನ್ಯವಿಲ್ಲೆಂದ ಅರಿದರಿವು ತಾನೆ,
ಸಿಮ್ಮಲಿಗೆಯ ಚೆನ್ನರಾಮಾ.
-- ಚಂದಿಮರಸ
Translation:
Nothing other than oneself
There is only One reality.
What becomes two by its own volition
is that One only.
What appears different is that One only.
Which can forget itself is that One only.
Which knows forgetfulness is that One only.
Other than me there is no other reality
— this Awareness is me,
Simmaligeya Chennaraama, Shiva.
— Chandmarasa
ಅರ್ಥ:
ಒಂದೇ ನಿಜ ವಸ್ತು
ತನ್ನ ಲೀಲೆಯಿಂದ ಆತ್ಮ ಪರಮಾತ್ಮನೆಂದು ಎರಡಾಗಬಲ್ಲುದು; ಎರಡೂ
ಬೇರೆಯಾಗಿ ತೋರಬಲ್ಲುದು; ಆತ್ಮವು ತಾನು ಆ ಪರಮಾತ್ಮನ ಅಂಶ ಎಂದು ತಿಳಿಯದೆ ತನ್ನನ್ನು ತಾನೇ ಮರೆಯಬಲ್ಲುದು.
ಆ ಮರವಿನ ಅರಿವು ಆತ್ಮಕ್ಕೆ ಬಂದು, ಆತ್ಮ ಪರಮಾತ್ಮ ಬೇರೆ ಅಲ್ಲ ಎಂದು ಅರಿವುನಿಂದ ಅರಿತರೆ ತಾನೇ ಆ ದೇವ ಸಿಮ್ಮಲಿಗೆಯ ಚೆನ್ನರಾಮನಾದಂತೆ.
7. ವಚನ:
#ಬಟ್ಟೆಗೊಂಡು ಹೋಗುತಿಪ್ಪ ಮನುಜನೊಬ್ಬ
ಹುಲಿ ಕಾಡುಗಿಚ್ಚು ರಕ್ಕಸಿ ಕಾಡಾನೆಗಳು
ನಾಲ್ಕೂ ದೆಸೆಯಲಟ್ಟುತ ಬರೆ
ಕಂಡು ಭಯದಿಂದ ಹೋಗ ದೆಸೆಯಿಲ್ಲದೆ
ಬಾವಿಯ ಕಂಡು ತಲೆಯನೂರಿ ಬೀಳುವಲ್ಲಿ
ಹಾವ ಕಂಡು ಇಲಿಗಡಿದ ಬಳ್ಳಿಯ ಹಿಡಿದು ನಿಲೆ
ಜೇನುಹುಳು ಮೈಯನೂರುವಾಗ
ಮೂಗಿನ ತುದಿಯಲೊಂದು ಹನಿ ಮಧು ಬಂದು ಬೀಳೆ
ಆ ಮಧುವ ಕಂಡು ಹಿರಿದಪ್ಪ ದುಃಖವೆಲ್ಲವೆಲ್ಲವ ಸೈರಿಸಿ
ನಾಲಗೆಯ ತುದಿಯಲ್ಲಿ ಆ ಮಧುವ ಸೇವಿಸುವಂತೆ
ಈ ಸಂಸಾರಸುಖ ವಿಚಾರಿಸಿ ನೋಡಿದಡೆ ದುಃಖದಾಗರ
ಇದನರಿದು ಸಕಲ ವಿಷಯಂಗಳಲ್ಲಿ ಸುಖವಿಂತುಟೆಂದು
ನಿರ್ವಿಷಯನಾಗಿ ನಿಂದ ನಿಲವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ.
- ಚಂದಿಮರಸ
Translation:
A man going on his way,
Was chased by a tiger, forest flame, demon and elephants
from all the four directions.
Full of fear, no where to go,
Jumped into a well head down.
Saw a snake,
and hung on to a creeper that was being gnawed by a rat.
Suddenly bees began to sting
and a drop of honey fell on the edge of his nose.
And tasting it he forgot all the great travails
and enjoyed its taste.
Similarly, the pleasures of the world,
if you think about it,
are nothing but an ocean of sorrow.
Knowing this, knowing the limitations of pleasures
if you stand without pleasure of sensual things,
You are Simmaligeya Chennaraama.
- Chandimarasa
ಅರ್ಥ:
ಸುಂದರ ಶಬ್ದ ಚಿತ್ರಣ.ಈ ಜಗತ್ತಿನಲ್ಲಿ ಹುಟ್ಟಿ ಬೆಳೆದು ಬಾಳಿ ಸಾಯುತ್ತಿರುವ ಮಾನವರಲ್ಲಿ ಬಹುತೇಕ ಮಂದಿಯ ಬದುಕಿನಲ್ಲಿ ನಾನಾ ರೀತಿಯ ಸಂಕಟ,ವೇದನೆ,ಸೋಲು,ಅಪಮಾನ,ನೋವಿನ ಪ್ರಸಂಗಗಳೇ ಹೆಚ್ಚಾಗಿದ್ದರೂ , ಇವುಗಳ ನಡುವೆಯೇ ತಮ್ಮ ಜೀವನದಲ್ಲಿ ದೊರೆಯುವ ಒಲವು ನಲಿವಿನ ಅವಕಾಶವನ್ನು ಕಳೆದುಕೊಳ್ಳದೆ, ಅದನ್ನು ಪಡೆದು ಆನಂದಪಡುವಂತಹ ಆಸಕ್ತಿಯನ್ನು ಮನದಲ್ಲಿ ಹೊಂದಿರಬೇಕೆಂಬುದನ್ನು ಮತ್ತು ಸ್ತಿತಿಪ್ರಜ್ಞ ನಾಗಿ ಸುಖ ದುಃಖಗಳನ್ನು ಒಂದೇ ತೆರನಾಗಿ ಸ್ವೀಕರಿಸಿ ದೇವ ಮಾನವರಾಗಿ ಎಂದು ಶಬ್ದಚಿತ್ರವೊಂದರ ಮೂಲಕ ಈ ವಚನದಲ್ಲಿ ಹೇಳಲಾಗಿದೆ.
- ✍️Dr Prema Pangi
Comments
Post a Comment