ಬಯಲು 5
ಬಯಲು 5
ಶಿವಯೋಗದಲ್ಲಿ ಅಂಗತತ್ವಗಳು ಲಿಂಗತತ್ವ ಗಳಾದ ನಂತರ ಲಿಂಗಾಂಗ ಸಾಮರಸ್ಯದಿಂದ ಬಯಲು ಎಂಬ ನಿರಾಕಾರ ನಿರ್ಗುಣ ಅನುಭಾವ ಸಾಕ್ಷಾತ್ಕಾರವಾಗುತ್ತದೆ. ಭಕ್ತನಾದವನು ದೇವರ ಸಂಬಂಧದಿಂದ ಬದಲಾವಣೆಯಾಗುತ್ತಾ. ಸಾಧನೆಯಿಂದ ಪರಿಪೂರ್ಣದೆಡೆಗೆ ಸಾಗುತ್ತಾನೆ.
ಪುಣ್ಯ ಮಾಡಿದವರು ಸ್ವರ್ಗಕ್ಕೆ ಪಾಪ ಮಾಡಿದವರು ನರಕಕ್ಕೆ ಹೋಗುತ್ತಾರೆಂಬುದನ್ನು ಶರಣರು ಒಪ್ಪಲಿಲ್ಲ. ದ್ವೈತ ಸಿದ್ಧಾಂತ ಹೇಳುವಂತೆ ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಇತ್ಯಾದಿ ವಿವಿಧ ಹಂತದ ಮುಕ್ತಿಯಿದೆಯೆಂಬುದನ್ನೂ ಅವರು ಅಂಗಿಕರಿಸಲಿಲ್ಲ. ಗುರು ಬಸವಣ್ಣನವರ ಮಾತಿನಲ್ಲಿ
#ಈ ಲೋಕದ ಭೀತರು, ಆ ಲೋಕದ ಕಲಿಗಳು,
ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯರೆಲ್ಲರು ಅಜನಿತಂಗೆ ಸರಿಯೆ,
ಮೂಜಗದಲ್ಲಿ ನಿರತರು ಕೂಡಲಸಂಗನ ಶರಣರು ತ್ರಿವಿಧವನರಿಯರು. / 273
"ಲಿಂಗ ಗುಣಗಳ ತಿಳಿದು, ಅಂಗಗುಣಗಳನತಿಗಳೆದು ಲಿಂಗವಾದುದೇ ಸ್ವರ್ಗ' ಎನ್ನುತ್ತಾರೆ ಶಿವಯೋಗಿ ಸಿದ್ಧರಾಮರು. ಕೈಲಾಸವನ್ನು ಕುರಿತು ಅವರು ಹೇಳುವುದು :
#ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿಲಾ ಕೇಳಿರಯ್ಯ, .....
ಅಂಗಾಂಗ ಸಮರಸವ ತಿಳಿದು ನಿಮ್ಮ ಪಾದ ಪದ್ಮದೊಳು
ಬಯಲಾದ ಪದವಿ ಕೈಲಾಸವಯ್ಯ ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ,
"ಇಲ್ಲಿ ಬಯಲಾಗು ” ಎಂಬ ಮಾತು ಬರುತ್ತದೆ. ಶರಣರ ಮೋಕ್ಷದ ಕಲ್ಪನೆಯಲ್ಲಿ ಈ ಮಾತು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. “ಬಯಲು, 'ನಿರವಯ', ನಿರ್ವಯಲು, 'ಶೂನ್ಯ', 'ನಿಶೂನ್ಯ' ಈ ಮಾತುಗಳಲ್ಲಿ ಲಿಂಗಾಂಗ ಸಾಮರಸ್ಯ ನಿಲುವನ್ನು ಹೇಳಲು ಶರಣರು ಪ್ರಯತ್ನಿಸಿದ್ದಾರೆ. ಷಟ್‌ಸ್ಥಲದಲ್ಲಿ ಕೊನೆಯದಾದ ಐಕ್ಯಸ್ಥಲದ ವಿವೇಚನೆಯಲ್ಲಿ ಅನುಭವ ಪೂರ್ವಕವಾಗಿ ಇದನ್ನು ವ್ಯಕ್ತಪಡಿಸಿದ್ದಾರೆ. ಅವರೆಲ್ಲರೂ ಕಂಡ ತಾತ್ವಿಕ ದರ್ಶನ ಒಂದೇ ಎರಿದ ನಿಲುವು ಒಂದೇ, ಭಾವ ಬಯಲಾಗಿ ಅರುಹು ಶೂನ್ಯವಾಗಿ ಅಖಂಡ ನಿರಾಳವಾಗುವ ಸ್ಥಿತಿ.
ಬೌದ್ಧರ ನಿರ್ವಾಣಕ್ಕೂ ಶರಣರ ಬಯಲಿಗೂ ಇರುವ ವ್ಯತ್ಯಾಸ:
"ನಿರ್ವಾಣ' ಬೌದ್ಧ ಧರ್ಮದಲ್ಲಿ ಯಾವ ಭಾವವೂ ಇಲ್ಲದ ಒಂದು ಸ್ಥಿತಿ". ಶರಣರಿಗೆ
" ಲಂಭತೇ ಬ್ರಹ್ಮ ನಿರ್ವಾಣ0” ಎಂಬಂತೆ ನಿರ್ವಾಣ ಎಂಬುದು ಆನಂದಮಯವಾದ ಸ್ಥಿತಿ. ಶರಣ ಧರ್ಮದಲ್ಲಿ ಬಯಲು ಆನಂದಮಯವಾದ ಸ್ಥಿತಿ. ವ್ಯಕ್ತಿ ತನ್ನನ್ನು ಪರಿಮಿತಗೊಳಿಸುವ ಆಸೆ ದ್ವೇಷ ಮೋಹಗಳನ್ನೆಲ್ಲಾ ನಾಶಗೊಳಿಸಿ ತನ್ನ ವ್ಯಕ್ತಿತ್ವವನ್ನು ಪರಿಪೂರ್ಣ ಶೂನ್ಯದಲ್ಲಿ ಲೀನಗೊಳಿಸಿ ಅದರೊಡನೆ ಸಮರಸವಾಗುವುದು ಎಂಬ ಅರ್ಥವನ್ನು ಬಯಲು ಎಂಬ ಪದದಲ್ಲಿ ಕಾಣುತ್ತೇವೆ.
ಬೌದ್ಧರ ನಿರ್ವಾಣವು ಆಶೆ ದ್ವೇಷ ಮೋಹಗಳನ್ನೆಲ್ಲಾ ನಿರಸನಗೊಳಿಸಿದನಂತರ ವಿಕಾಸಗೊಂಡ ಅಭಾವ ಸ್ವಿತಿ, ಆದರೆ ಶರಣರ ಬಯಲು, ಅದಕ್ಕಿಂತಲೂ ಮುಂದಿನ ಸ್ಥಿತಿ. 'ಆಶೆ ದ್ವೇಷ ಮೋಹಗಳನ್ನೆಲ್ಲಾ ನಿರಸನಗೊಳಿಸಿದ ನಂತರದ ವಿಕಾಸಗೊಂಡ ಆತ್ಮವು ವಿಶ್ವಾತ್ಮನೊಡನೆ ಸಮರಸಗೊಳ್ಳುವ ಪರಿಪೂರ್ಣ ಸ್ಥಿತಿ '. ಬೌದ್ಧರ ನಿರ್ಮಾಣದಲ್ಲಿ ವ್ಯಕ್ತಿ ಏನೂ ಇಲ್ಲದವನಾಗುತ್ತಾನೆ. ಆದರೆ ಶರಣರ ಬಯಲು ಎಲ್ಲವೂ ತಾನೇ ಆಗಿ ಪರಿಣಮಿಸುವ ನಿಲುವು.
“ಘನ ಗಂಭೀರ ಮಹಾ ಘನದೊಳಗೆ ಘನಕ್ಕೆ ಘನನಾಗಿರ್ದೆನಯ್ಯಾ: ಕೂಡಲಸಂಗಮದೇವನೆಂಬ ಮಹಾಬೆಳಗಿನೊಳಗಿರ್ದು ಶಬ್ದ ಮುಗ್ಧವಾದುದೇನೆಂಬೆನಯ್ಯ” ಎಂಬ ಬಸವಣ್ಣನವರ ವಚನದಲ್ಲಿ ಬರುವ, ಘನಕ್ಕೆ ಘನವಾಗುವುದು, ಮಹಾ ಬೆಳಗಿನೊಳಗೆ ಶಬ್ದ ಮುಗ್ಧವಾಗುವುದು. ಈ ಮಾತುಗಳು ಅದರ ಅರ್ಥವ್ಯಾಪ್ತಿಯನ್ನು ಸೂಚಿಸುತ್ತವೆ.
ಶೂನ್ಯವೇ ಮೂರ್ತಗೊಂಡು ಬಯಲಿನ ಕುರುಹಾಗಿ ಬಂದ ಇಷ್ಟಲಿಂಗದ ಅನುಸಂಧಾನ, ಆ ಬಯಲಿನ ನಿಲವಿಗೆ ಸಾಧಕನನ್ನೂ ತರುತ್ತದೆ ಎಂಬುದನ್ನು ಅವರು ಕಂಡುಕೊಂಡರು. ಈ ಕೆಳಗಿನ ಶರಣ ಷಣ್ಮುಖ ಸ್ವಾಮಿಗಳ ವಚನ, ಶರಣರ ಶೂನ್ಯದ ವ್ಯಾಪಕತೆಯನ್ನು ಅವರ ಮೋಕ್ಷದ ಕಲ್ಪನೆಯನ್ನು ಬಯಲು ಬಯಲು ಬೆರೆತಂತೆ, ಹಾಲು ಹಾಲು ಬೆರೆತಂತೆ, ಉರಿ ಕರ್ಪೂರ ಸಂಯೋಗವಾದಂತೆ ಎಂದು ಸುಂದರ ರೂಪಕವಾಗಿ ಮಾಡಿಕೊಡುತ್ತದೆ.
#ಬಯಲು ಬಯಲು ಬೆರೆದಲ್ಲಿ ಮೇರೆಯುಂಟೆ ಅಯ್ಯಾ?
ಕ್ಷೀರ ಕ್ಷೀರವ ಕೂಡಿದಲ್ಲಿ ಪದರುಂಟೆ ಅಯ್ಯಾ?
ಉರಿಕರ್ಪುರಸಂಯೋಗ ನಿಷ್ಪತ್ತಿಯಾದಲ್ಲಿ
ಮರಳಿ ರೂಪಿಸಿ ಹಿಡಿಯಲುಂಟೆ ಅಯ್ಯಾ?
ನಿಮ್ಮೊಳೊಡವೆರೆದ ನಿಜೈಕ್ಯನ ಕುರುಹ
ಮರಳಿ ತೋರಲುಂಟೆ ಅಯ್ಯಾ ಅಖಂಡೇಶ್ವರಾ? / 467
ಷಟ್‌ಸ್ಥಲದಲ್ಲಿ ಕೊನೆಯದಾದ ಐಕ್ಯಸ್ಥಲದ ವಿವೇಚನೆಯಲ್ಲಿ ಅನುಭವಪೂರ್ವಕವಾಗಿ ಶರಣರು ಇದನ್ನು ವ್ಯಕ್ತಪಡಿಸಿದ್ದಾರೆ.
ಲಿಂಗಾಂಗ ಸಾಮರಸ್ಯ ನಿಲವನ್ನು ಹೇಳುವಾಗ “ಉರಿಯುಂಡ ಕರ್ಪೂರದಂತೆ” ಎಂಬ ಮಾತು ಶರಣರಿಗೆ ಬಹಳ ಪ್ರಿಯವಾದುದು.
ಶರಣ ಹಾವಿನಹಾಳ ಕಲ್ಲಯ್ಯನವರು ಇದೇ ಅಭಿಪ್ರಾಯವನ್ನು ಕರ್ಪುರದ ಕಳ್ಳನನ್ನು ಬೆಂಕಿ ಬಂದು ಬಿಡಿಸಿತು” ಎಂಬ ಸಾದೃಶ್ಯದಿಂದ ಹೇಳಿದ್ದಾರೆ. ಬೆಂಕಿಯ ಸ್ಪರ್ಷದಿಂದ ಕರ್ಪೂರದ ಕಟ್ಟಿದ್ದ ಹುಲ್ಲಿನ ಕಟ್ಟುಗಳು ಸುಟ್ಟು, ಕರ್ಪೂರ ಅದರಲ್ಲಿ ಆಡಗಿಹೋಗುವಂತೆ ; ಬಯಲು, ಶರಣನಿಗೆ ಕಟ್ಟಿದ ಬಯಲ ಪಾಶಗಳು ಬೆಂದು ಬಯಲು ಬಯಲೇಕವಾಯಿತು - ಎಂಬ ಈ ಮಾತು ಕೇವಲ ಅನುಭವವೇದ್ಯವಾಗಬಹುದಾದ ಅನುಭಾವದ ಮಟ್ಟಕ್ಕೆ ಏರುತ್ತದೆ.
#ಕರ್ಪುರದ ಕಳ್ಳನ ಹುಲ್ಲಿನಲ್ಲಿ ಕಟ್ಟಿಸಲು,
ಅಗ್ನಿಯೆಂಬ ಹಿತವ ಬಂದು ಬಿಡಿಸಲಾಗಿ,
ಪಾಶ ಬೆಂದು ಕಳ್ಳ ತನ್ನಲ್ಲಯೆ ಅಡಗಿದಂತೆ,
ಶರಣಂಗೆ ಬಯಲಪಾಶ ಬಂದು ಕಟ್ಟಿರಲು,
ಬಯಲಲಿಂಗ ಬಂದು ಬಿಡಿಸಲು, ಬಯಲು ಬಯಲು ಏಕವಾಯಿತ್ತು.
ಮಹಾಲಿಂಗ ಕಲ್ಲೇಶ್ವರನೆಂಬ ಸಂಪತ್ತು ಸದಾಶೂನ್ಯವಾಯಿತ್ತು. / 37
ಕರ್ಪೂರದ ಕಳ್ಳ, ಅವರಿಗೆ ಹುಲ್ಲಿನ ಬಂಧನ ಎಂಬ ಅಸಾಧಾರಣ ರೂಪಕದಿಂದ ಶರಣರ ಮುಕ್ತಿ ಮಾರ್ಗ(ಬಯಲಾಗುವುದು) ವಿವರಿಸಿದ್ದಾರೆ. ಇಲ್ಲಿ ಶರಣರು ಕರ್ಪೂರದ ಪುತ್ಥಳಿಗಳು. ಅವರನ್ನು ಬಂಧಿಸಿದ ಬಂಧನ ಬಯಲಪಾಶ ಹುಲ್ಲಿನದು. ಅಂತರಂಗದ ಅರಿವೆಂಬದು ಬಯಲುಲಿಂಗ. ಅಗ್ನಿ ರೂಪದಲ್ಲಿ ಬಂದು ಹುಲ್ಲಿನ ಬಂಧನಕ್ಕೆ ತಾಗಿದರೆ ಹುಲ್ಲಿನ ಬಂಧನ ಸುಟ್ಟು ಹೋಗಿ ಒಳಗಿನ ಕರ್ಪೂರ ತನ್ನ ಸುತ್ತ ಸುವಾಸನೆ ಬೀರಿ ಬಯಲಾಗುವಂತೆ ; ಶಿವಯೋಗ ಸಾಧಕನು ಎಲ್ಲಾ ಬಂಧನಗಳಿಂದ ಬಿಡುಗಡೆಗೊಂಡು ತನ್ನ ಕರ್ಪೂರದ ರೂಪವನ್ನು ಕಳೆದುಕೊಂಡು ತನ್ನ ಅರುವಿನ ಜ್ಞಾನದ ಸುವಾಸನೆಯ ಬೀರಿ ಲಿಂಗಸ್ವರೂಪ ಬಯಲು ಸ್ವರೂಪ ಹೊಂದುತ್ತಾನೆ.
ಶರಣ ಹಾವಿನಹಾಳ ಕಲ್ಲಯ್ಯನವರು ಬಯಲಿನಿಂದ ಸೃಷ್ಟಿರಚನೆ ಆದ ವಿಧಾನವನ್ನು ಹಲವು ಅದ್ಭುತ ರೂಪಕಗಳಿಂದ ವಿವರಿಸಿದ್ದಾರೆ. ಬಯಲು ತನ್ನ ನೆನಹನ್ನೇ ಶಕ್ತಿಯಾಗಿಸಿ (ಚಿತ್ ಶಕ್ತಿಯಾಗಿಸಿ), ಮಳೆಯ ನೀರು ಘನೀಕೃತ ಗೊಂಡು ವಾರಿಕಲ್ಲು ಆಗುವಂತೆ ; ಬಯಲು ಮತ್ತು ಚಿತ್ ಶಕ್ತಿಯ ಸಮರತಿಯಿಂದ ಬ್ರಹ್ಮಾಂಡದ ಆದಿಯಾಯಿತು. ವಾರಿಕಲ್ಲು ಘನೀಕೃತಗೊಂಡು ರೂಪದಲ್ಲಿ ಬದಲಾವಣೆಗೊಂಡರೂ ಮೂಲದಲ್ಲಿ ನೀರೇ ಇರುವಂತೆ: ಈ ಸೃಷ್ಠಿಯು ರೂಪದಲ್ಲಿ ಹಲವು ವಿಧವಾಗಿ ಕಂಡರೂ ಮೂಲದಲ್ಲಿ ಬಯಲೇ ಆಗಿದೆ.
#ಬಯಲು ಮೊಳಗಿ, ಮಳೆ ಸೃಜಿಸೆ, ಆ ಬಯಲು ಆ ಮಳೆಯನೊಡಗೂಡಿ,
ದೃಷ್ಟವಪ್ಪ ವಾರಿಕಲ್ಲಾಗಿ ತೋರಿದಂತೆ, ನಿನ್ನ ನೆನಹೆ ನಿನಗೆ ಶಕ್ತಿಯಾಯಿತ್ತಲ್ಲಾ.
ಆ ನಿಮ್ಮಿಬ್ಬರ ಸಮರತಿಯೆ,
ನಿಮಗೆ ಅಖಂಡವೆಂಬ ನಾಮ ಸೂಚನೆಯಾಯಿತ್ತಲ್ಲಾ.
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಆದಿಗೆ, ಇದೇ ಪ್ರಥಮವಾಯಿತ್ತಲ್ಲಾ. / 68
- ✍️Dr Prema Pangi
#ಈ_ಲೋಕದ_ಭೀತರು_ಆ_ಲೋಕದ_ಕಲಿಗಳು
#ಕೈಲಾಸ_ಕೈಲಾಸವೆಂದು_ಬಡಿದಾಡುವ_ಅಣ್ಣ
#ಬಯಲು_ಬಯಲು_ಬೆರೆದಲ್ಲಿ_ಮೇರೆಯುಂಟೆ
#ಕರ್ಪುರದ_ಕಳ್ಳನ_ಹುಲ್ಲಿನಲ್ಲಿ_ಕಟ್ಟಿಸಲು,
#ಬಯಲು_ಮೊಳಗಿ_ಮಳೆ_ಸೃಜಿಸೆ_ಆ_ಬಯಲು
Comments
Post a Comment