🌷May1 ವಿಶ್ವ ಕಾರ್ಮಿಕ ದಿವಸದ ಶುಭಾಶಯಗಳು🌷

🌷May1 ವಿಶ್ವ ಕಾರ್ಮಿಕ ದಿವಸದ ಶುಭಾಶಯಗಳು🌷
*ಬಸವ ಧರ್ಮದಲ್ಲಿ ಕಾಯಕ*:
ಕೆಲಸಕ್ಕೆ ಕಾಯಕವೆಂದು ಕರೆದು ದುಡಿಯುವ ವರ್ಗಕ್ಕೆ ಘನತೆ ಗೌರವ ತಂದು ಕೊಟ್ಟ ಬಸವಾದಿ ಶರಣರಿಗೆ ಶರಣು ಶರಣಾರ್ಥಿ🙏
*ಕಾಯಕ* :
ಹನ್ನೆರಡನೆಯ ಶತಮಾನದಲ್ಲಿದ್ದ 
ಶಿವಶರಣ ಶರಣೆಯರ ನಿಲುವಿನಲ್ಲಿ
 ‘ಕಾಯಕ‘ ಎಂದರೆ ವ್ಯಕ್ತಿಯು ಮಾಡುವ ಕಸುಬು. ಅವನಿಗೆ ಮತ್ತು ಅವನ ಕುಟುಂಬಕ್ಕೆ  ನೆಮ್ಮದಿಯನ್ನು ತಂದುಕೊಡುವಂತೆಯೇ,
ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಿದ್ದು, ಒಟ್ಟು ಜನಸಮುದಾಯದ ಹಿತಕ್ಕೆ ನೆರವಾಗುವಂತಿರುವ ದುಡಿಮೆ.
 ವ್ಯಕ್ತಿಯು ತನ್ನ ಪಾಲಿನ ಕಾಯಕವನ್ನು ಒಲವು ನಲಿವು ಮತ್ತು ಪ್ರಾಮಾಣಿಕತನದಿಂದ ಮಾಡಿದರೆ, ಅದು ಅವನ ಬದುಕಿನ ಏಳಿಗೆಗೆ ಕಾರಣವಾಗುವುದರ ಜತೆಜತೆಗೆ  ಸಮಾಜಕ್ಕೂ ಒಳಿತನ್ನುಂಟುಮಾಡಿ, ಜನರು ವಾಸಮಾಡುತ್ತಿರುವ ನೆಲೆಯನ್ನೇ ನೆಮ್ಮದಿಯ ಬೀಡು  ಅರ್ಥಾತ್ ಕೈಲಾಸ ವನ್ನಾಗಿ ಮಾಡುತ್ತದೆ ಎಂಬ ತಿರುಳನ್ನು ಒಳಗೊಂಡಿದೆ.
ಶಿವಲಿಂಗದ ಪೂಜೆಯಾಗಿದ್ದರೂ ಅದು ಕೂಡ ನಾವು ಮಾಡುವ ಕಾಯಕದಲ್ಲೇ ಸೇರಿಕೊಂಡಿದೆ. 
ಕಾಯಕಕ್ಕಿಂತ ಮಿಗಿಲಾದ ಪೂಜೆಯಿಲ್ಲ. ಅದಕ್ಕಿಂತ ಮಹತ್ವದ ನೇಮವಿಲ್ಲ. ಕಾಯಕ ಮನುಷ್ಯನ ಘನತೆ. ಕಾಯಕ ಮನುಷ್ಯನ ಧರ್ಮ. ಆದ್ದರಿಂದಲೇ ಎಂಥಾ ಸನ್ನಿವೇಶದಲ್ಲೂ ಬಿಡದೆ ಕಾಯಕ ಮಾಡಬೇಕು. ಮೊದಲ ಆದ್ಯತೆ ಅದಕ್ಕೇ ಮೀಸಲಿರಬೇಕು. ದಿನದ ಪ್ರತಿ ತುತ್ತನ್ನೂ ನಮ್ಮ ದುಡಿಮೆಯ ಫಲವಾಗಿ ಉಣ್ಣಬೇಕು. 
ಕಾಯಕಕ್ಕೆ ನಮ್ಮ ಶರಣ ಪರಂಪರೆ ಕೊಟ್ಟ ಮಹತ್ವ ಅದ್ಭುತ, ಅದ್ವಿತೀಯವಾದದ್ದು.

*ಕಾಯಕವೇ ಕೈಲಾಸ* :
12ನೆಯ ಶತಮಾನದ ಶರಣ ಆಯ್ದಕ್ಕಿ ಮಾರಯ್ಯನವರು ಕಾಯಕವು ಗುರು ಲಿಂಗ ಜಂಗಮ ಸೇವೆಗಳಿಗಿಂತಲೂ ಹೆಚ್ಚಿನದು ಎಂದು ತಿಳಿಸಿ ಕಾಯಕವೇ ಕೈಲಾಸ ವೆಂಬ ಯುಗಘೋಷ ಮಾಡಿದರು.
#ಕಾಯಕದಲ್ಲಿ ನಿರತನಾದರೆ ಗುರು ದರುಶನವಾದರೂ ಮರೆಯಬೇಕು; ಲಿಂಗಪೂಜೆಯಾದರೂ ಮರೆಯಬೇಕು; 
ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು ; ಕಾಯಕವೇ ಕೈಲಾಸವಾದ ಕಾರಣ, ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು.
- ಶರಣ ಆಯ್ದಕ್ಕಿ ಮಾರಯ್ಯ 
ಕಾಯಕವ  ಕೈಗೊಂಡು, ಅದನ್ನು ಒಲವು ನಲಿವುಗಳಿಂದ ಮಾಡಬೇಕೆಂಬ ಆಸೆಯಿಂದ ಕೂಡಿ, ಅದರಲ್ಲಿಯೇ ತನ್ನ ಮೈಮನಗಳನ್ನು ತೊಡಗಿಸಿಕೊಂಡು ದುಡಿಯುತ್ತಿರುವಾಗ; ದುಡಿಮೆಯ ಸಮಯದಲ್ಲಿ ಗುರು ತನ್ನ ಬಳಿ ಬಂದರೂ, ದುಡಿಮೆಯನ್ನು ಕೈ ಬಿಟ್ಟು, ಗುರುವನ್ನು ಉಪಚರಿಸಲು ಹೋಗಬಾರದು. ಏಕೆಂದರೆ ಗುರುಸೇವೆಗಿಂತಲೂ ಕೈಯ್ಗೊಂಡಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವುದು ಮೊದಲ ಗುರಿಯಾಗಿರಬೇಕು. ಲಿಂಗವನ್ನು ಪೂಜಿಸುವುದಕ್ಕಿಂತಲೂ ಈಗ ಮಾಡುತ್ತಿರುವ ದುಡಿಮೆಯು ದೊಡ್ಡದು ಎಂಬುದನ್ನು ಅರಿತಿರಬೇಕು. ಜಂಗಮನು ತನ್ನ ಬಳಿಸಾರಿ ಬಂದು ನಿಂತಿದ್ದರೂ, ಅವನತ್ತ ಗಮನ ಹರಿಸದೆ, ವ್ಯಕ್ತಿಯು ತಾನು ಮಾಡುತ್ತಿರುವ ಕೆಲಸದಲ್ಲಿ ತೊಡಗಿರಬೇಕು. ವ್ಯಕ್ತಿಯು ತಾನು ಕೈಗೊಂಡಿರುವ ಕಾಯಕದಲ್ಲಿ ತಲ್ಲೀನತೆಯಿಂದ ತೊಡಗಿಸಿಕೊಳ್ಳಬೇಕೆಂಬುದನ್ನು ಈ ವಚನದಲ್ಲಿ ಹೇಳಲಾಗಿದೆ. ಇದು ಕಾಯಕವೇ ಕೈಲಾಸ ಎಂಬ ಯುಗಘೋಷಣೆಯನ್ನು ನೀಡಿದ ವಚನ. 

*ಕಾಯಕ ಶುದ್ದವಾಗಿರಬೇಕು*. 
ಕಳ್ಳತನ, ಮೋಸತನˌ ಸುಳ್ಳು ಹೇಳಿ ದ್ರೋಹ ಮಾಡಿ ಸಂಪತ್ತು ಕ್ರೋಢಿಕರಿಸುವದಲ್ಲ. ಬರೀ ಹಣ ಗಳಿಸುವುದಕ್ಕೆ ನಿಂತು, ಮೌಲ್ಯಗಳನ್ನೆಲ್ಲ ಬಿಟ್ಟು ˌ ಅನೈತಿಕ ಮಾರ್ಗದಲ್ಲಿ  ಹಣಗಳಿಕೆˌ ಕಳ್ಳತನˌ ಮೋಸತನˌ ವ್ಯಭಿಚಾರˌ ಭ್ರಷ್ಟಾಚಾರ, ವಂಚನೆ ಮಾಡಿದರೆ ಅತಿವೇಗವಾಗಿ ಸುಲಭವಾಗಿ ಶ್ರಮವಿಲ್ಲದೆ ಸಾಕಷ್ಟು ಹಣ ಗಳಿಸಬಹುದು. ಆದರೆ ಅನಾಚರಗಳನ್ನೆಲ್ಲ ಮಾಡಿ ಹಣ ಮಾಡಿದರೆ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಹಣ ನಮ್ಮ ಅವಶ್ಯಕತೆಗೆ ತಕ್ಕಂತೆ ಕಡಿಮೆಯು ಆಗದೇ, ಹೆಚ್ಚು ಆಗದೇ  ಅವಶ್ಯಕತೆಯಿದ್ದಷ್ಟು, ಶ್ರದ್ಧೆಯಿಂದ ನಿಯತ್ತನಿಂದ ದುಡಿದರೆ ಸಂತೋಷವಾಗಿರಬಹುದು. ಹಣ ಮಾಡುವುದೇ ಜೀವನದ ಗುರಿಯಲ್ಲ. ಗುರಿಯೆಡೆಗೆ ಸಾಗಿಸುವ ಸಾಧನವಾಗಬೇಕು. ಮನುಷ್ಯನ ದುರಾಸೆಯೆ ಮನುಷ್ಯನ ಎಲ್ಲಾ ರೋಗಗಳ ಮೂಲ. ಆ ದುರಾಸೆ ನಮ್ಮೊಳಗಿನ ಎಲ್ಲ ಭ್ರಷ್ಟಾಚಾರಗಳಿಗೂ ಕಾರಣ. ಕಾಯಕದಿಂದ ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸುವಂತೆ ಇಲ್ಲ. ಅಗತ್ಯಕ್ಕೆ ತಕ್ಕಂತೆ ಕಾಯಕ ಮಾಡುವದು.  ಬಸವಣ್ಣವರು ಶ್ರಮಿಕ ಸಮಾಜದ ಕನಸು ಕಂಡಿದ್ದರು. ಇದು ಬಸವಣ್ಣನ ಅತ್ಯಂತ ಸರಳವಾದ ಅರ್ಥನೀತಿ. ಬಸವಣ್ಣನವರ ಕಲ್ಯಾಣದಲ್ಲಿ ಎಲ್ಲರೂ ಸತ್ಯಶುದ್ಧ ಕಾಯಕ ನಿರತರು. ಸತ್ಯಶುದ್ಧ ಕಾಯಕದಿಂದ ಬಂದ ಸಂಪಾದನೆಯಲ್ಲಿ ತಾವು ಸರಳಜೀವನ ನಡೆಸಿ ಉಳಿದ ಧನವನ್ನು ಸಮಾಜಕ್ಕೆ ನೀಡಲು ಸಿದ್ಧರಿರುವರೇ ವಿನಃ ಬೇಡುವವರಿಲ್ಲ. ಬೇಡುವ ಜನರಿಲ್ಲದ ಕಾರಣ ನೀಡಲು ಆಗದು, ನೀಡಲಾಗದ ಕಾರಣ ನಾನು ಬಡವನಾದೆ ಎಂದು ಬಸವಣ್ಣನವರೇ ಹೇಳುತ್ತಾರೆಂದರೆ  ಕಾಯಕದ ಮಹತ್ವವನ್ನು ಶರಣರು ಯಾವ ರೀತಿ ಅರಿತುಕೊಂಡು ಸಮಾಜವನ್ನೇ ಬದಲಿಸಿದರು ಎಂದು ಅರ್ಥವಾಗುತ್ತದೆ. 
#ಕಂದಿದೆನಯ್ಯಾ ಎನ್ನ ನೋಡುವರಿಲ್ಲದೆ, ಕುಂದಿದೆನಯ್ಯಾ ಎನ್ನ ನುಡಿಸುವರಿಲ್ಲದೆ, ಬಡವಾದೆನಯ್ಯಾ ಎನ್ನ ತನು ಮನ ಧನವ ಬೇಡುವರಿಲ್ಲದೆ. ಕಾಡುವ ಬೇಡುವ ಶರಣರ ತಂದು ಕಾಡಿಸು ಬೇಡಿಸು ಕೂಡಲಸಂಗಮದೇವಾ.
- ಗುರು ಬಸವಣ್ಣನವರು

*ಬಸವ ಕಾಯಕದ ಗುರುಬೀಜ* 
 ಜನಪದರು ಕಾಯಕಕ್ಕೆ ಗೌರವ ಘನತೆ ಕೊಟ್ಟ ಗುರು ಬಸವಣ್ಣನವರನ್ನು, ಬಸವಾದಿ ಶರಣರನ್ನು ಹಾಡಿ ಹೊಗಳಿದ್ದಾರೆ. ದುಡಿಯುವ ವರ್ಗ ತಮ್ಮ ಕೀಳರಿಮೆಯನ್ನು ಬಿಟ್ಟು ಸತ್ಯ ಶುದ್ಧ ಕಾಯಕ ಮಾರ್ಗದ ಮಹತ್ವ, ಅದರಿಂದ ಸಿಗಬೇಕಾದ ಗೌರವ ಅರಿತರು.

#ಬಸವ ಭಕ್ತಿಯ ಬೀಜ 
ಬಸವ ಮುಕ್ತಿಯ ತೇಜ , 
ಬಸವ ಕಾಯಕದ ಗುರುಬೀಜ,
ಬಸವ ಕಾಯಕದ ಗುರುಬೀಜ, ಶಿವಮತಕೆ 
ಬಸವ ಓಂಕಾರ ಶಿವನಾಮ. 

*ಗುರು ಲಿಂಗ ಜಂಗಮರಿಗೂ ಕಾಯಕ ಕಡ್ಡಾಯ*.
#ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು
ಜಂಗಮವಾದರೂ ಕಾಯಕದಿಂದಲೇ ವೇಷ ಪಾಶ ಹರಿವುದು
ಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು"
ಎಂದು ನುಲಿಯ ಚಂದಯ್ಯನವರು
ಕಾಯಕದ ಮಹತ್ವವನ್ನು ಸಾರಿದ್ದಾರೆ. 

*ಕಾಯಕ ಮತ್ತು ದಾಸೋಹದಿಂದ ಮಾತ್ರ ದೇವರ ಕೃಪೆ ಸಾಧ್ಯ*. 
ಶರಣೆ ಆಯ್ದಕ್ಕಿ ಲಕ್ಕಮ್ಮನವರು  ಶಿವ ಜೀವರ ಐಕ್ಯ, ಬರಿ ಓದಿನಿಂದ ಬರುವದಿಲ್ಲ; ಕಾಯಕ ಮತ್ತು ದಾಸೋಹದಿಂದ ಮಾತ್ರ ಐಕ್ಯ ಸ್ಥಿತಿ ಸಾಧ್ಯವೆಂದಳು. ಕಾಯಕವು ಗುರು ಲಿಂಗ ಜಂಗಮ ಭಕ್ತ ಎಲ್ಲರಿಗೂ ಕಡ್ಡಾಯವಾಯಿತು.
#ಕಾಯಕವಳಿದ ಠಾವಿನಲ್ಲಿ ಜೀವನ ಸುಳಿವುಂಟೆ?
ದಾಸೋಹವಳಿದ ಠಾವಿನಲ್ಲಿ ದೇವರ ಕೃಪೆಯುಂಟೆ ?
ಕಾಯಕ ದಾಸೋಹವಳಿದ ಠಾವಿನಲ್ಲಿ ದೇವರಕೃಪೆಯುಂಟೇ
ಕಾಯಕ ದಾಸೋಹಗಳು ಕೂಡಿದಲ್ಲಿ ಅದೇ
ಶಿವ ಜೀವೈಕ್ಯವು ; ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದಲ್ಲಿ
-- ಶರಣೆ ಆಯ್ದಕ್ಕಿ ಲಕ್ಕಮ್ಮ

#ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯ ಶುದ್ಧವಿಲ್ಲದುದು ಕಾಯಕವಲ್ಲ
ಆಸೆಯಂಬುದು ಭವದ ಬೀಜ, ನಿರಾಶೆಯೆಂಬುದು
ನಿತ್ಯ ಮುಕ್ತಿ, ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವ !
- ಉರಿಲಿಂಗ ಪೆದ್ದಿಗಳ ಧರ್ಮಪತ್ನಿ ಕಾಳವ್ವೆ

*ಮೋಸದ, ಅನ್ಯಾಯದ, ಅಪ್ರಮಾಣಿಕ ಮಾರ್ಗದಲ್ಲಿ ಮಾಡುವ ಕಾಯಕ ಕಾಯಕವೇ ಅಲ್ಲ*. 
ವಿಪರೀತ ಆಸೆಗಳು ಸಂಕಷ್ಟಕ್ಕೆ ದಾರಿಯಾಗುತ್ತದೆ. ಅದರಿಂದ ನಿರೀಕ್ಷಿತ ಸಾಧನೆ ಸಾಧ್ಯವಿಲ್ಲ. ಕಾಯಕದಲ್ಲೇ ಮುಕ್ತಿಯನ್ನು ಪಡೆಯಬಹುದು  ಎಂಬುದು ಉರಿಲಿಂಗಪೆದ್ದಿಗಳ ಧರ್ಮ ಪತ್ನಿ ಕಾಳವ್ವೆಯವರ ಅಭಿಮತ.
೧೨ನೇ ಶತಮಾನದಲ್ಲಿ ಅತಿ ಸಾಮಾನ್ಯ, ಅತ್ಯಂತ ಹಿಂದುಳಿದ, ಅಸ್ಪೃಶ್ಯ ಮೂಲದ ಶ್ರಮಜೀವಿ ಮಹಿಳೆ ಇಂತಹ ಅತ್ಯುನ್ನತ ವಿಚಾರಗಳನ್ನು ವ್ಯಕ್ತಪಡಿಸಿದ್ದು ಅತ್ಯಂತ ಮಹತ್ವದ್ದು.

*ಕಾಯಕ ವ್ರತ ಪಾಲನೆಗಿಂತ ಹೆಚ್ಚು ಮಹತ್ವದ್ದು*
#ವ್ರತ ತಪ್ಪಲು ಸೈರಿಸಬಹುದು
ಕಾಯಕ ತಪ್ಪಲು ಎಂದೂ ಸೈರಿಸಬಾರದು
ಕರ್ಮಹರ ಕಾಳೇಶ್ವರ
--ಬಾಚಿಕಾಯಕದ ಬಸವಯ್ಯಗಳ ಧರ್ಮಪತ್ನಿ ಕಾಳವ್ವ

*ಕಾಯಕದಲ್ಲಿ ಸಮಾನತೆ*
#ದೇವ ಸಹಿತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡಡೆ ನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ತಲೆದಂಡ! ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆ ನಿಮ್ಮ ರಾಣಿವಾಸದಾಣೆ." 
- ಗುರು ಬಸವಣ್ಣನವರು
ಬಸವಣ್ಣನವರು ವಿವಿಧ ಕಾಯಕಗಳಲ್ಲಿ ಸರ್ವಸಮಾನತೆಯನ್ನು ಕಾಣುತ್ತಾರೆ. ಯಾವ ಕಾಯಕವೂ ಚಿಕ್ಕದಲ್ಲ ಅಥವಾ ದೊಡ್ಡದಲ್ಲ. 
ಸತ್ಯಶುದ್ದವಾಗಿ ದುಡಿಯದಿದ್ದರೇ ಅದು ಕಾಯಕವಲ್ಲ. ಎಲ್ಲ ತರದ ಕಾಯಕಗಳಿಗೂ ಸನ್ಮಾನ ಕೊಟ್ಟು  ಸಮಾಜದಲ್ಲಿ ಸರ್ವ ಸಮಾನತೆ ತರಲು ಪ್ರಯತ್ನಿಸಿದರು. 
ಕಾಯಕˌ ದಾಸೋಹ ಮತ್ತು ಆಧ್ಯಾತ್ಮಿಕ ಅನುಭಾವ ಶರಣರ ತತ್ವಗಳಾದವು. ಲಿಂಗ ತಾರಮ್ಯತೆ, ವರ್ಣಿಕೃತˌ ವರ್ಗಿಕೃತ ವ್ಯವಸ್ಥೆಯನ್ನು ವಿರೋಧಿಸಿ ಸಮಾನತೆ ಸಾರಿದರು. ಧಾರ್ಮಿಕ ಶೋಷಣೆಗಳಿಂದ ಜನರನ್ನು ಬಿಡುಗಡೆಮಾಡಿ ಅನುಭಾವದ ಮೂಲಕ ಆಧ್ಯಾತ್ಮದ ಶಿಖರವೆರಿದರು. ಅವರ ಕಾಯಕ ಗಳಲ್ಲಿಯೆ ಅನುಭಾವ ಕಂಡುಕೊಂಡು ಅನೇಕ ವಚನಗಳಲ್ಲಿ ಅವರವರ ಕಾಯಕದ ರೂಪಕಗಳನ್ನು ಮೂಡಿಸಿ ಜಗತ್ತಿನ ಶ್ರಮಜೀವಿಗಳ ಅನುಭಾವದ ಏಕೈಕ ಸಾಹಿತ್ಯ ವಾಗಿಸಿದ್ದಾರೆ. ತಮ್ಮ ವಚನಗಳನ್ನು ಅಪೂರ್ವ ಅನುಪಮ ಭಂಡಾರ ವಾಗಿಸಿದ್ದಾರೆ.  ಶರಣರು ಹೇಳಿದ ಪ್ರತಿ ವಚನಗಳು ಅವರು ತಮ್ಮದೇ ಆದ ಅನುಭಾವದಿಂದ ಕಂಡುಕೊಂಡ ಸರ್ವಕಾಲೀಕ ಸತ್ಯಗಳು.  
- ✍️ Dr Prema Pangi
#ಪ್ರೇಮಾ_ಪಾಂಗಿ,
#ಕಾಯಕದಲ್ಲಿ_ನಿರತನಾದರೆ_ಗುರು,
#ಕಂದಿದೆನಯ್ಯಾ_ಎನ್ನ_ನೋಡುವರಿಲ್ಲದೆ,
#ಗುರುವಾದರೂ_ಕಾಯಕದಿಂದಲೇ_ಜೀವನ್ಮುಕ್ತಿ #ಬಸವ_ಕಾಯಕದ_ಗುರುಬೀಜ,
#ಕಾಯಕವಳಿದ_ಠಾವಿನಲ್ಲಿ_ಜೀವನ,
#ಕೃತ್ಯ_ಕಾಯಕವಿಲ್ಲದವರು_ಭಕ್ತರಲ್ಲ
#ವ್ರತ_ತಪ್ಪಲು_ಸೈರಿಸಬಹುದು
#ದೇವ_ಸಹಿತ_ಮನೆಗೆ_ಬಂದಡೆ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma