ವಚನ ದಾಸೋಹ :ಅಂಗಸೋಂಕೆಂಬುದು ಅಧಮವು.

ವಚನ ದಾಸೋಹ : ಅಂಗಸೋಂಕೆಂಬುದು ಅಧಮವು.

ವಚನ:
#ಅಂಗಸೋಂಕೆಂಬುದು ಅಧಮವು.
ಉರಸೆಜ್ಜೆಯೆಂಬುದು ಎದೆಯ ಗೂಂಟ.
ಕಕ್ಷೆಯೆಂಬುದು ಕವುಚಿನ ತವರುಮನೆ.
ಅಮಳೋಕ್ಯವೆಂಬುದು ಬಾಯ ಬಗದಳ.
ಮುಖಸೆಜ್ಜೆಯೆಂಬುದು ಪಾಂಡುರೋಗ.
ಕರಸ್ಥಳವೆಂಬುದು ಮರವಡದ ಕುಳಿ.
ಉತ್ತಮಾಂಗವೆಂಬುದು ಸಿಂಬಿಯ ಕಪ್ಪಡ.
ಎಲ್ಲರಿಗೆಯೂ ಸೋಂಕಾಯಿತ್ತು !
ಈ ಹಸಿಯ ಗೂಂಟದಲ್ಲಿ ಕಟ್ಟಿ, ಒಣಗಿದ ಗೂಂಟದಲ್ಲಿ ಬಿಡುವ
ಬಾಲಭಾಷೆಯ ಭಂಡರ ನುಡಿಯ ಕೇಳಲಾಗದು ಗುಹೇಶ್ವರಾ.
- ಅಲ್ಲಮ ಪ್ರಭುಗಳು 
ಸಮಗ್ರ ವಚನ ಸಂಪುಟ: 2   ವಚನದ ಸಂಖ್ಯೆ: 722
 ಅರ್ಥ:
ಬಹುಜನರು ದೇಹದ ಮೇಲೆ ಎದ್ದು ಕಾಣುವ ಹಾಗೆ ಅಂಗಸೋಂಕು, ಉರಸೆಜ್ಜೆ, ಕಕ್ಷೆ, ಅಮಳೋಕ್ಯ , ಮುಖಸಜ್ಜೆ, ಕರಸ್ಥಲ, ಉತ್ತಮಾಂಗ ಎಂಬ  ಈ ಆರು ಸ್ಥಾನಗಳಲ್ಲಿ ಆಗಮಶಾಸ್ತ್ರಗಳ ಪ್ರಕಾರ  ಬಾಹ್ಯಲಿಂಗಧಾರಣ ಮಾಡುತ್ತಿದ್ದರು. ಈ  ಷಡುಸ್ಥಲಗಳಲ್ಲಿ ಅಂದರೆ ಆರು ಸ್ಥಳದ ಒಂದು ಸ್ಥಳದಲ್ಲಿ ಇಷ್ಟಲಿಂಗ ಧರಿಸುತ್ತಿದ್ದರು.
ಅಂಗಸೋಂಕು - ನಾಭಿಗಿಂತ ಮೇಲೆ
ಉರಸೆಜ್ಜೆ - ಎದೆ 
ಕಕ್ಷೆ - ಕಂಕುಳ, ಬಗಲು, ರಟ್ಟೆಯಲ್ಲಿ ಕಟ್ಟುವುದು.
ಅಮಳೋಕ್ಯ- ಬಾಯಿ, ಕಿರು ನಾಲಿಗೆ
ಮುಖಸಜ್ಜೆ - ಮುಖವಿವರ, ಲಲಾಟ. 
ಕರಸ್ಥಲ - ಕೈ. 
ಉತ್ತಮಾಂಗ - ಶಿರಸ್ಸು.
ಈ ಷಡುಸ್ಥಲಗಳಲ್ಲಿ ಲಿಂಗ ಧರಿಸುತ್ತಿದ್ದರು. ಇದರಲ್ಲಿ ಉತ್ತಮಾಂಗದಲ್ಲಿ ಲಿಂಗ ಧರಿಸುವವರು ಶ್ರೇಷ್ಠ ಎಂದು ಪರಿಗಣಿಸುತ್ತಿದ್ದರು. ತಮ್ಮ ಯೋಗ ಸಾಧನೆಯ ಹಂತ ಜನರಿಗೆ ಗೊತ್ತಾಗಲಿ ಎಂದು ಹಾಗೆ ಧರಿಸುತ್ತಿದ್ದರು. 
ಇವು ತಮ್ಮ ಸಾಧನೆಯು ಜನರ ಕಣ್ಣಿಗೆ ಕಾಣಲೆಂದು ಬಹಿರಂಗದಲ್ಲಿ ಧರಿಸುವ ವೇಷಲಾಂಛನವಾದ ಲಿಂಗಧಾರಣೆ.
ಶಿರಸ್ಸು, ಲಲಾಟ, ಕಂಠ, ಎದೆ, ಕೈ ಹಾಗೂ ಕಂಕುಳ - ಈ ಆರು ಸ್ಥಾನಗಳಲ್ಲಿ ಲಿಂಗಧಾರಣೆ ಮಾಡುತ್ತಿದ್ದರು. ಆದರೆ ಇದು ಪರಿಣಾಮಶೂನ್ಯವಾದ ಪದ್ಧತಿ. ಇವೆಲ್ಲವೂ ನಿರರ್ಥಕ ! ಹೀಗೆ ಧಾರಣ ಮಾಡುವ ಪದ್ಧತಿಯಿಂದ ಯಾವುದೇ ಪ್ರಯೋಜನವಿಲ್ಲ. ಇವುಗಳನ್ನು ಅಲ್ಲಮಪ್ರಭುಗಳು ಬಹಿರಂಗದ ವೇಷಲಾಂಛನವೆಂದು ಅಲ್ಲಗಳೆದಿದ್ದಾರೆ.
ಅಂಗಕ್ಕೆ ಅಧಮ, ಉರಕ್ಕೆ ಎದೆಗಂಡ, ಕಂಕುಳಿಗೆ ಕವುಚು, ಬಾಯಿಗೆ ಉಗುಳುವ
ತಾಂಬೂಲ, ಮುಖಕ್ಕೆ ಬಿಳುಚಿಕೊಳ್ಳುವ ಪಾಂಡುರೋಗ, ಕರಸ್ಥಲಕ್ಕೆ ವಸ್ತುವನ್ನು
ಮರೆತುಬಿಡುವಿಕೆ, ಉತ್ತಮಾಂಗಕ್ಕೆ ಬಳಸಿ
ಬಿಸಾಡುವ ಸಿಂಬಿಕಪ್ಪಡ ಈ ವಿಕಾರಗಳಿವೆ 
ಈ ಅಂಗವಿಕಾರಗಳು ಆಯಾ ಅಂಗಭಾಗದಲ್ಲಿಯ ಧರಿಸುವ ಲಿಂಗಗಳಿಗೆ ಲಿಂಗವಿಕಾರಗಳಾಗಿ ಬಿಡುತ್ತವೆ. ಬರೀ ಬಾಹ್ಯದಲ್ಲಿಯ ಸಾಕಾರ ವಸ್ತು ನಚ್ಚಿಕೊಂಡವರಿಗೆ ಆಂತರಿಕ ಸತ್ವದ ಸ್ಫುರಣೆ ಸಾಧ್ಯವಿಲ್ಲ. ಇಂಥವರ ನಡೆ ನುಡಿ ಬಾಲಭಾಷೆಯ ಭಂಡರ ನುಡಿ. ಇದನ್ನು  ಕೇಳಲಾಗದು ಗುಹೇಶ್ವರಾ ಎನ್ನುತ್ತಾರೆ ಅಲ್ಲಮಪ್ರಭುಗಳು.
ಅಂಗದ ಮೇಲೆ ಲಿಂಗಸಾಹಿತ್ಯವೆಂದರೆ  ಆಯತ. ಇದು ಕಲಿಯುವಿಕೆಯಲ್ಲಿ ಬಾಲ ಭಾಷೆ ಇದ್ದಂತೆ ! ಲಿಂಗಸ್ವಾಯತ, ಲಿಂಗಸನ್ನಿಹಿತವಾಗಿ "ಸರ್ವಾಂಗಲಿಂಗಿ" ಎಂಬುದು ಶರಣರ ಭಾಷೆ. ಶರಣರು ಅಂತರಂಗದ ಲಿಂಗಸಂಗಿಗಳು, ಸರ್ವಾಂಗಲಿಂಗಿಗಳು.
ವಚನ ಚಿಂತನೆ : ಶರಣರು ಬಹಿರಂಗದ ಲಿಂಗ ಸ್ಥಾನ ಗಳಿಗೆ ಪ್ರಾಮುಖ್ಯತೆ ಕೊಡದೆ,
ಅಂತರಂಗದ ಲಿಂಗಸ್ಥಾನಗಳಿಗೆ ಪ್ರಾಮುಖ್ಯತೆ ಕೊಟ್ಟಿದ್ದಾರೆ.
ಶಿವಯೋಗದ ಲಿಂಗಸ್ಥಾನಗಳು:
ಶಿವಯೋಗದಲ್ಲಿ ಲಿಂಗಸ್ಥಾನಗಳು ಹತ್ತು. ಯೋಗಿಗಳು ಈ ದೇಹವೆಂಬ ದೇವಾಲಯದಲ್ಲಿ  ಏಳು ಶಕ್ತಿ ಕೇಂದ್ರಗಳನ್ನು ಗುರುತಿಸಿದ್ದಾರೆ. ಮೊದಲನೆಯದು ಮೂಲಾಧಾರ ಚಕ್ರ, ನಂತರ ಕ್ರಮವಾಗಿ  ಸ್ವಾಧಿಷ್ಟಾನ ಚಕ್ರ, ಮಣಿಪೂರಕ ಚಕ್ರ, ಅನಾಹತ ಚಕ್ರ  ಮತ್ತು ವಿಶುದ್ಧಿ ಚಕ್ರ, ಆಜ್ಞಾ ಚಕ್ರ, ಸಹಸ್ರಾರ ಚಕ್ರ. ಶಿವಯೋಗಿಗಳು ಸಹಸ್ರಾರ ಚಕ್ರದ ಮೇಲೆ ಮತ್ತೆ ಮೂರು ಚಕ್ರ ಸಾಧಿಸಿಕೊಂಡರು. ಅವೇ ಕ್ರಮವಾಗಿ  ಶಿಖಾ ಚಕ್ರ, ಪಶ್ಚಿಮ ಚಕ್ರ, ಅಣುಚಕ್ರ .

ಲಿಂಗಾಂಗಯೋಗದ ಲಿಂಗ ಸ್ಥಾನಗಳು;

ಲಿಂಗಾಂಗ ಯೋಗ: ಬಸವಾದಿ ಶರಣರ ಕಾಲದಲ್ಲಿ ಅನೇಕ ಅನರಕ್ಷಿತ ಕಾಯಕ ಜೀವಿಗಳು, ಲಿಂಗವಂತರಾದಾಗ ಅವರ ಸಾಧನೆಗೆ ಒಂದು ಅತ್ಯಂತ  ಸರಳ ನೇರ ವಿಶಾಲ ಮಾರ್ಗದ ಅವಶ್ಯಕತೆ ಉಂಟಾಯಿತು. ದೃಷ್ಟಿಯೋಗ ಬಳಿಸಿ ಇಷ್ಟಲಿಂಗ ನಿರೀಕ್ಷಣೆಯ ಲಿಂಗಾಂಗಯೋಗ ಅವಿಷ್ಕಾರವಾಗುತ್ತದೆ. ಇದು ನೇರವಾಗಿ ಆಜ್ಞಾ ಚಕ್ರಕ್ಕೆ ಹೋಗುವ ಪಥ ವಾಗಿರುವದರಿಂದ ಶರಣರು ಇದನ್ನೇ ಶಿವಯೋಗದ ರಾಜಯೋಗ ಎಂದು ಕರೆದಿದ್ದಾರೆ.
ಬಸವಾದಿ ಶರಣರ ಪ್ರಕಾರ ಲಿಂಗಾಂಗ ಯೋಗದಲ್ಲಿ ದೇಹದ ಅಂತರಂಗದಲ್ಲಿ ನಾಲ್ಕು ಪವಿತ್ರವಾದ ಲಿಂಗಸ್ಥಾನಗಳಿವೆ. ಇವುಗಳಲ್ಲಿ ಅಂತರ್ಲಿಂಗಧಾರಣೆ ಮಾಡಿಕೊಳ್ಳಬೇಕು. ಒಂದನೆಯದು - ಬ್ರಹ್ಮರಂಧ್ರ. ಸಹಸ್ರಾರ ಚಕ್ರದ ಮಧ್ಯ.
ಎರಡನೆಯದು - ಭ್ರೂಮಧ್ಯ. ಆಜ್ಞಾ ಚಕ್ರ ಬ್ರಹ್ಮರಂಧ್ರದ ನೇರ ಕೆಳಗೆ,  
ಮೂರನೆಯದು - ನಾಸಿಕಾಗ್ರ. ಇದನ್ನು ಪೂರ್ವಭ್ರೂಮಧ್ಯ ಎನ್ನುತ್ತಾರೆ. ನಾಸಿಕ ಮತ್ತು ದೃಷ್ಟಿ ಮಾರ್ಗಗಳು (ನಾಡಿಗಳು) ಕೂಡುವ ಸ್ಥಾನ. 
ನಾಲ್ಕನೆಯದು - ಚೌಕಮಧ್ಯ.  
ಲಿಂಗಾಂಗ ಯೋಗದಲ್ಲಿ ಶರಣರು ನಾಸಿಕಾಗ್ರ ಪೂರ್ವಭ್ರೂಮಧ್ಯದಲ್ಲಿ ಪ್ರಸಾದಲಿಂಗವನ್ನು,  ಭ್ರೂಮಧ್ಯದಲ್ಲಿ ಜಂಗಮಲಿಂಗವನ್ನು, ಬ್ರಹ್ಮರಂಧ್ರದಲ್ಲಿ ನಿಃಕಲಲಿಂಗವನ್ನು,  ಚೌಕಮಧ್ಯದಲ್ಲಿ ಅನುಭಾವಲಿಂಗವನ್ನು  ಶರಣರು ತಮ್ಮ ಸಾಧನೆಯಿಂದ ಗುರುತಿಸುತ್ತಾರೆ. ಈ ನಾಲ್ಕು ಸ್ಥಾನಗಳಲ್ಲದೆ ಇನ್ನೊಂದು ಪವಿತ್ರವಾದ ಲಿಂಗಸ್ಥಳವಿದೆ. ಅದು ಹೃದಯ ಚಕ್ರದ (ಪ್ರಾಣ ಚಕ್ರ) ಅಷ್ಟದಳಕಮಲ.
 ಅಲ್ಲಿ ಪ್ರಾಣಲಿಂಗದ ನೆಲೆ. ಇದು ಹನ್ನೆರಡು ದಳದ ಅನಾಹುತ ಚಕ್ರವಲ್ಲ. ಇದು ಸಹ ಇರುವ ಸ್ಥಳ ಮಿದುಳಿನ ಚಿದಾಕಾಶ.  ಆ ಲಿಂಗಕ್ಕೆ ಮೇಲಿನ ನಾಲ್ಕು ಲಿಂಗಗಳ ಕಳೆ. ಆದ್ದರಿಂದಲೆ ಅದು "ಸರ್ವಸ್ವಾಯತ ಲಿಂಗ" ಎನಿಸಿದೆ.
ಅದಕ್ಕೆ ಶರಣರು ಅಂತರಂಗದಲ್ಲಿ ಸದಾ ಲಿಂಗಸಂಗಿಗಳು, .
ಲಿಂಗಕ್ಕೂ ಶರಣರಿಗೂ ಅನ್ನೋನ್ಯತೆ ಲಿಂಗ ಸನ್ನಿಹಿತದಲ್ಲಿ ಇದೆ. ಹೃದಯಕಮಲದಲ್ಲಿ ಸದಾ ಸ್ವಾಯತವಾಗಿರುವ ಪ್ರಾಣಲಿಂಗದ ನಿತ್ಯ ನೆನಹು, ಸಾನ್ನಿಧ್ಯ ಹಾಗೂ ಅನುಸಂಧಾನ ಹೊಂದಿರುವುದರಿಂದ ಶರಣರು ನಿತ್ಯಸನ್ನಿಹಿತರು.
- ✍️Dr Prema Pangi
#ಪ್ರೇಮಾ _ಪಾಂಗಿ,

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma