*ಶರಣರ ಶಿವರಾತ್ರಿ*

ಶಿವರಾತ್ರಿಯ ಶುಭಾಶಯಗಳು🌷🌷🌷🌷*ಶರಣರ ಶಿವರಾತ್ರಿ*
ಶಿವನ ಕೀರ್ತಿಯೇ  ಬಸವಣ್ಣನ ಧರ್ಮ, 
ಶಿವನ ಸ್ತೋತ್ರವೇ ಬಸವಣ್ಣನ ಧರ್ಮ
ಶಿವನ ಮಂತ್ರೋಚ್ಚಾರಣೆಯೆ(ಓಂ ನಮಃ ಶಿವಾಯ) ಗುರುಬಸವಣ್ಣನವರ ಧರ್ಮವಯ್ಯಾ ಎನ್ನುತ್ತಾರೆ ಶಿವಯೋಗಿ ಸಿದ್ಧರಾಮೇಶ್ವರರು.
#ಶಿವನ ಕೀರ್ತಿ ಬಸವಣ್ಣನ ಧರ್ಮವಯ್ಯಾ,
ಶಿವನ ಸ್ತೋತ್ರ ಬಸವಣ್ಣನ ಧರ್ಮವಯ್ಯಾ,
ಶಿವನ ಮಂತ್ರೋಚ್ಚಾರಣೆ ಬಸವಣ್ಣನ ಧರ್ಮವಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ. / 1742

ಶರಣರಿಗೆ ಲಿಂಗಪೂಜೆ ಅಂದರೆ  ಶಿವನ ಪೂಜೆ, ಶಿವಯೋಗಮಾಡಿ ಸ್ವಯಂ ಶಿವನಾಗುವುದು. ದೇವರ ಪೂಜೆ ಮಾಡುತ್ತ ಮಾಡುತ್ತ ತಾನೇ ದೈವತ್ವಕ್ಕೇರುವುದು. ತಾನೇ ದೇವರಾಗುವುದು. ದೇವರಲ್ಲಿ ಬೇರ್ಪಡಿಸದಂತೆ ಐಕ್ಯನಾಗುವುದು. ಶಿವನಲ್ಲಿ ಶಿವನಾಗಿ ಸೇರಿಕೊಂಡಾಗಷ್ಟೇ ಶಿವರಾತ್ರಿಯಲ್ಲಿ ಬೆಳಕು ಜಗದ ಹೊರಗೂ, ತನ್ನ ಒಳಗೂ ಕಂಡೀತು.
1.
#ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ,
ಕೂಡಲಸಂಗನ ಶರಣನ
ಕಾಯವೆ ಕೈಲಾಸ ಕಾಣಿರೊ.
- ವಿಶ್ವಗುರು ಬಸವಣ್ಣನವರು
2.
ಶಿವಶರಣರಿಗೆ ನಿತ್ಯ ಶಿವಯೋಗ. ಅದು ಬರೀ ಪೂಜಾ ವಿಧಾನವಲ್ಲ. ಅರಿವು ಎಂಬ ಜ್ಞಾನದಿಂದ ಇಷ್ಟಲಿಂಗವೆಂಬ ಕುರುಹನ್ನು  ನಿರಾಕಾರ ನಿರಂಜನ ನಿರ್ಗುಣ ನಿರ್ಮಾಯ ಪರಶಿವನೆಂದು ತಿಳಿದು ಕರಹಸ್ತವೆಂಬ ಗದ್ದುಗೆಯಲ್ಲಿ ಸುಜ್ಞಾನವೆಂಬ ಬೆಳಕಿನಿಂದ ಮಾಡುವ ಪೂಜೆ. ಮಹಾಲಿಂಗವನ್ನು ನೆಲೆಗೊಳಿಸಿ,
ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನದಿಂದ ಅಭಿಷೇಕ ಮಾಡಿ ,
ಅಂತರಂಗದ ಬೆಳಗಿನ ಚಿದ್ವಿಭೂತಿಯ ಧರಿಸಿ,
ನಿರ್ಮಲವೆಂಬ ಗಂಧ, ಸುಜ್ಞಾನವೆಂಬ ಅಕ್ಷತೆ,
ನಿರ್ಭಾವವೆಂಬ ಪತ್ರಿಯನೇರಿಸಿ, ಯಾವುದೇ ದ್ವಂದ್ವವಿಲ್ಲದೆ ಧೂಪವ ತೋರಿಸಿ,
ಶರಣನು ನವರತ್ನವೆಂಬ ನವಚಕ್ರಗಳಲ್ಲಿ ಪಂಚವಿಷಯಗಳ ಮೇಲೆ ಏಕಾರ್ತಿ ಎಂಬ ಮನಸ್ಸನ್ನು ಕೇಂದ್ರೀಕರಿಸಿ ಅವನ್ನು  ಪಂಚದೀಪಗಳಾಗಿ ಮಾಡಿ,
ಆ ಲಿಂಗಕ್ಕೆ ಓಂ ನಮೋ ಓಂ ನಮೋ ಎಂದು ಶರಣರು ಬೆಳಗುತ್ತಾರೆ ಎನ್ನುತ್ತಾರೆ ಶರಣ ಜಕ್ಕಣಯ್ಯನವರು.

#ಒಬ್ಬ ಶಿವಶರಣನು ಶಿವರಾತ್ರಿಯಲ್ಲಿ
ನಿತ್ಯ ಶಿವಯೋಗವ ಮಾಡುವುದ ಕಂಡೆನಯ್ಯ.
ಅದು ಹೇಗೆಂದಡೆ: ಅರುಹೆಂಬ ಸಮ್ಮಾರ್ಜನೆಯ ಮಾಡಿ,
ಕುರುಹೆಂಬ ಗದ್ದುಗೆಯ ನೆಲೆಯಂಗೊಳಿಸಿ,
ಸುಜ್ಞಾನವೆಂಬ ರಂಗವಾಲಿಯ ತುಂಬಿ,
ಚಂದ್ರಸೂರ್ಯಾದಿಗಳೆಂಬ ದೀವಿಗೆಯ ಮುಟ್ಟಿಸಿ,
ಮಹಲಿಂಗವೆಂಬ ಮೂರ್ತಿಯಂ ನೆಲೆಯಂಗೊಳಿಸಿ,
ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವಂ ನೀಡಿ,
ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ,
ನಿರ್ಮಳವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು,
ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ,
ಒಬ್ಬ ಮೂರ್ತಿ ನವರತ್ನದ ಹರಿವಾಣದಲ್ಲಿ
ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ, ಪಂಚದೀಪಂಗಳ ರಚಿಸಿ,
ಆ ಲಿಂಗಕ್ಕೆ ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
- ಶರಣ ಜಕ್ಕಣಯ್ಯ
3. 
ಸಮಯವನ್ನು ವ್ಯರ್ಥವಾಗಿ ಕಳೆಯದೆ ವರ್ಷದಲ್ಲಿ  ಒಂದು ದಿನವನ್ನಾದರೂ ಶಿವರಾತ್ರಿ ಯಾಗಿ ಆಚರಣೆ ಮಾಡು ಮನಸ್ಸೇ ಎನ್ನುತ್ತಾರೆ ಶಿವಯೋಗಿ  ಸಿದ್ಧರಾಮೇಶ್ವರರು. ಇದು ಅನುಭವ ಮಂಟಪಕ್ಕೆ ಬರುವ ಮುನ್ನವೇ ಬರೆದ ವಚನ ಇರಬಹುದು.

#ಮದ್ದುತಿಂದ ಮನುಜನಂತೆ ವ್ಯರ್ಥಹೋಗದಿರಾ, ಮನವೆ,
ವರ್ಷದಲಾದಡೂ ಒಂದು ದಿವಸ ಶಿವರಾತ್ರಿಯ ಮಾಡು ಮನವೆ.
ಕಪಿಲಸಿದ್ಧಮಲ್ಲೇಶನೆಂಬ ಇಷ್ಟಲಿಂಗಕ್ಕೆ.
- ಶಿವಯೋಗಿ  ಸಿದ್ಧರಾಮೇಶ್ವರ
4.
ಸ್ವಾಮಿಗಳೇ ಸುಮ್ಮನೇಕೆ ದಿನ ಹೊತ್ತು ಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ? 
ನಿತ್ಯ ಶಿವರಾತ್ರಿಯ ಮಾಡಿ 
ಶಿವಾನುಭವವ ಕೇಳಿರಿ ಎನ್ನುತ್ತಾಳೆ  ಶರಣ ಅಜಗಣ್ಣನ ತಂಗಿ ಶರಣೆ ಮುಕ್ತಾಯಕ್ಕ

#ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ? 
ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ ? 
ಮಾಡ ಬನ್ನಿ ದಿನ ಶಿವರಾತ್ರಿಯ, 
ಕೇಳ ಬನ್ನಿ ಶಿವಾನುಭವವ, 
ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ. 
- ಶರಣೆ ಮುಕ್ತಾಯಕ್ಕ
5. 
ನಿತ್ಯ ಶಿವರಾತ್ರಿ ಮಾಡಿರಿ ಎನ್ನುತ್ತಾರೆ ಗುರು ಬಸವಣ್ಣನವರು. ನಾನು ನಿತ್ಯ ಶಿವರಾತ್ರಿ ಮಾಡ್ತೇನೆ, ಆ ನಿರಾಕಾರ ಶಂಭೋ ನನ್ನವನು (ಏಂಭೋ) ಎಂಬ ಭಾವ !  ಹೃದಯವೇ ಕತ್ತರಿಸಿ ಬಾಯಿಯ ತುದಿ ನಾಲಿಗೆಯಲ್ಲಿ  ಆಡಿಹದು ಏಂಭೋ ನನ್ನ ಶಂಭೋ, ಹಾಡಿಹೆನು ಏಂಭೋ ನನ್ನ ಶಂಭೋ !
ನಿತ್ಯ ನಿರಂತರ ಶಿವರಾತ್ರಿ ಮಾಡಿಹೆನು ಏಂಭೋ !
ಆನು ಎನ್ನಂತೆ, ಮನ ಮನದಂತೆ, ನಾನು ನನ್ನದೇ ಭಾವದಿಂದ ಮನಸ್ಸು ಮನಸ್ಸಿನ ಭಾವದಂತೆ 
ಕೂಡಲಸಂಗಮದೇವ ತಾನು ತನ್ನಂತೆ. ನಾನು  ನನಗೆ ತಿಳಿದಂತೆ, ಮನ ತನಗೆ ತಿಳಿದಂತೆ,  ಶಿವನು ಈ  ಕಾಯದಲ್ಲಿ ಇದ್ದು ತನಗೆ ತಿಳಿದಂತೆ ಪೂಜಿಸಿಕೊಳ್ಳುತ್ತಾನೆ ಎನ್ನುತ್ತಾರೆ.

#ಹೃದಯ ಕತ್ತರಿ, ತುದಿನಾಲಗೆ ಬೆಲ್ಲೇಂ ಭೋ !
ಆಡಿಹೆನು ಏಂ ಭೋ, ಹಾಡಿಹೆನು ಏಂ ಭೋ !
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿಹೆನು ಏಂ ಭೋ !
ಆನು ಎನ್ನಂತೆ, ಮನ ಮನದಂತೆ,
ಕೂಡಲಸಂಗಮದೇವ ತಾನು ತನ್ನಂತೆ. 
- ವಿಶ್ವ ಗುರು ಬಸವಣ್ಣನವರು
6.
ಸಂಸಾರದ ಬಂಧನ ಯಾಕಯ್ಯಾ! ನಿತ್ಯ ಶಿವರಾತ್ರಿಯ ಮಾಡುವುದು. ಬೇಗ ಬೇಗ ಇಷ್ಟಲಿಂಗಕ್ಕೆ ಅರ್ಚನೆ ಪೂಜೆ ಮಾಡಿ ಶಿವಯೋಗ ಮಾರ್ಗದಿಂದ ಶಿವನಲ್ಲಿ ಲೀನನಾಗುವುದು ಇದೇ ನನ್ನ ಶಿವರಾತ್ರಿ ಎನ್ನುತ್ತಾರೆ.

#ಅಚ್ಚಿಗವೇಕಯ್ಯಾ ಸಂಸಾರದೊಡನೆ?
ನಿಚ್ಚನಿಚ್ಚ ಶಿವರಾತ್ರಿಯ ಮಾಡುವುದು,
ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು,
ಕೂಡಲಸಂಗನ ಕೂಡುವುದು. /173 
7.
ಸೋಮವಾರ ಮಂಗಳವಾರವೆಂಬ ದಿನ ನೋಡಿ ಶಿವರಾತ್ರಿ ಮಾಡುವುದು ಸರಿ ಅಲ್ಲ. ದಿನ ಶ್ರೇಷ್ಠವೋ? ಲಿಂಗ ಶ್ರೇಷ್ಠವೋ? ಲಿಂಗ ಪೂಜೆಗೆ ದಿನ ಮೂಹೂರ್ತ ನೋಡುವ ಅವಶ್ಯಕತೆ ಯಾಕೆ? ಹಾಗೆ ದಿನ ನೋಡಿ ಪೂಜೆ ಮಾಡುವ ಭಕ್ತರು ಲಿಂಗಭಕ್ತರಿಗೆ ಸಮರಲ್ಲ. ನಿತ್ಯ ಶಿವರಾತ್ರಿ ಮಾಡಿರಿ ಎನ್ನುತ್ತಾರೆ ಚೆನ್ನಬಸವಣ್ಣನವರು.

#ಸೋಮವಾರ ಮಂಗಳವಾರ
ಶಿವರಾತ್ರಿಯೆಂದು ಮಾಡುವ ಭಕ್ತರ
ಲಿಂಗಭಕ್ತಂಗೆ ನಾನೆಂತು ಸರಿಯೆಂಬೆನಯ್ಯಾ ?
ದಿನ ಶ್ರೇಷ್ಠವೋ ? ಲಿಂಗ ಶ್ರೇಷ್ಠವೋ ?
ದಿನ ಶ್ರೇಷ್ಠವೆಂದು ಮಾಡುವ
ಪಂಚಮಹಾಪಾತಕರ ಮುಖವ ನೋಡಲಾಗದು.
" ಸೋಮೇ ಭೌಮೇ ವ್ಯತಿ ಪಾತೆ 
ಸಂಕ್ರಾಂತಿ ಶಿವರಾತ್ರಿಯೋ : !
ಏಕಭುಕ್ತೋಪವಾಸೇನ ನರಕೇ ಕಾಲಮಕ್ಷಯಂ !!
ಇದು ಕಾರಣ ಕೂಡಲಚೆನ್ನ ಸಂಗಯ್ಯಾ
ಇಂಥವರ ಮೂಖವ ನೋಡಲಾಗದು.
- ಚಿನ್ಮಯಜ್ಞಾನಿ ಚೆನ್ನಬಸವಣ್ಣ
ಶರಣರಿಗೆ ನಿತ್ಯ ಶಿವರಾತ್ರಿ ಎನ್ನುತ್ತಾರೆ ಅವಿರಳ ಜ್ಞಾನಿ ಚೆನ್ನಬಸವಣ್ಣನವರು.
-✍️ Dr Prema Pangi
#ಪ್ರೇಮಾ_ಪಾಂಗಿ
#ಶರಣರ_ಶಿವರಾತ್ರಿ
#ಶಿವನ_ಕೀರ್ತಿ_ಬಸವಣ್ಣನ_ಧರ್ಮವಯ್ಯಾ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma