ವಚನ ದಾಸೋಹ :ಕಲ್ಲದೇವರು ದೇವರಲ್ಲ, ಮಣ್ಣದೇವರು ದೇವರಲ್ಲ

ವಚನ ದಾಸೋಹ :
ಕಲ್ಲದೇವರು ದೇವರಲ್ಲ, ಮಣ್ಣದೇವರು ದೇವರಲ್ಲ ,
ವಚನ:
#ಕಲ್ಲದೇವರು ದೇವರಲ್ಲ, ಮಣ್ಣದೇವರು ದೇವರಲ್ಲ ,
ಮರದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ,
ಸೇತುರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ
ಅಷ್ಟಾಷಷ್ಠಿಕೋಟಿ ಪುಣ್ಯಕ್ಷೇತ್ರಂಗಳಲ್ಲಿಹ ದೇವರು ದೇವರಲ್ಲ.
ತನ್ನ ತಾನರಿದು ತಾನಾರೆಂದು ತಿಳಿದಡೆ 
ತಾನೇ ದೇವ ನೋಡಾ,
ಅಪ್ರಮಾಣಕೂಡಲಸಂಗಮದೇವ. / 603

ಅರ್ಥ: 
ಈ  ವಚನವನ್ನು ಬಾಲಸಂಗಯ್ಯ ಶರಣರು ರಚಿಸಿದ್ದಾರೆ. ಇವರು ಬಸವೋತ್ತರಯುಗದ ಮಹತ್ವದ ವಚನಕಾರರು. ನಿಜನಾಮ 'ಅಪ್ರಮಾಣದೇವ'.
ಬಾಲಸಂಗಯ್ಯ ಶರಣರು ಅದ್ವಿತೀಯ ಪಂಡಿತರಾಗಿದ್ದು, ಸರ್ವ ಧರ್ಮಶಾಸ್ತ್ರ, ಪುರಾಣ, ವೇದ, ಉಪನಿಷತ್ತು, ಆಗಮಗಳನ್ನು ಬಲ್ಲವನಾಗಿದ್ದರು. 'ಬಾಲಸಂಗಯ್ಯ'ನವರ ವಚನಗಳು ಶಾಸ್ತ್ರ ಸಮ್ಮತ, ನೀತಿಪ್ರಧಾನ, ತತ್ವ ಪ್ರಬೋಧಕವಾಗಿವೆ. 'ಸಕಲಾಗಮ ಶಿಖಾಮಣಿ'  ಅಪ್ರಮಾಣದೇವರ ಕೃತಿಯ ಹೆಸರು, ಇದರಲ್ಲಿ 'ಅಪ್ರಮಾಣ ಕೂಡಲ ಸಂಗಮದೇವ' ಅಂಕಿತದ ಒಟ್ಟು ೯೨೦ ವಚನಗಳು ಸಂಕಲನಗೊಂಡಿವೆ. ಇದು ಒಂದು ಎಂಬ ಶುದ್ಧ ತಾತ್ವಿಕ ಶಾಸ್ತ್ರ. ಚೆನ್ನಬಸವಾದಿಗಳು ಹೇಳಿದ ಲಿಂಗಾಯತ ಧರ್ಮತತ್ವಗಳನ್ನು ವ್ಯವಸ್ಥಿತವಾಗಿ ಪ್ರತಿಪಾದಿಸುವುದೇ ಇದರ ಗುರಿ. 
*ನಿರ್ವಚನ*:
ಲಿಂಗಾಯತ ಧರ್ಮದ ಗಹನವಾದ ವೈಚಾರಿಕ ಏಕತ್ರದ ವಿಚಾರಗಳು ಈ ವಚನದಲ್ಲಿ ಇರುವದರಿಂದ ವಚನವನ್ನು ಮೂರಾಗಿ ವಿಂಗಡಿಸಿ ನಿರ್ವಚನ ಮಾಡಲಾಗಿದೆ.
1.
*ಕಲ್ಲದೇವರು ದೇವರಲ್ಲ, ಮಣ್ಣದೇವರು ದೇವರಲ್ಲ ,
ಮರದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ*

ಭಾರತದ ಸಂಸ್ಕೃತಿಯಲ್ಲಿ ಮೂರ್ತಿಪೂಜೆ (ವಿಗ್ರಹಾರಾಧನೆ) ತುಂಬಾ ವ್ಯಾಪಕವಾಗಿ ಅಸ್ತಿತ್ವದಲ್ಲಿರುವುದನ್ನು ನಾವು ಗಮನಿಸಬಹುದು. ಕಲ್ಲು, ಮಣ್ಣು, ಮರ, ಪಂಚಲೋಹ ಇತ್ಯಾದಿ ಭೌತಿಕ ವಸ್ತುಗಳನ್ನು ಬಳಸಿ ನಿರ್ಮಿಸಲ್ಪಟ್ಟ ಒಂದು ಆಕೃತಿಗೆ ದೇವರೆಂದು  ಭಿನ್ನ ಭಿನ್ನ ರೂಪ, ಹೆಸರು ಸ್ಥಾನ ಕೊಟ್ಟು ಆರಾಧಿಸುತ್ತಾ ಬಂದಿದ್ದಾರೆ. ಅದೇ ರೀತಿ ಪಂಚಭೂತಗಳನ್ನು, ಮರ ನದಿಗಳನ್ನು ಸಹ ಮಾನವನ ನಿತ್ಯ ಜೀವನದಲ್ಲಿ ಅವಶ್ಯಕವಾಗಿರುವುದರಿಂದ ಜನರು ಪೂಜಿಸುತ್ತ ಬಂದಿದ್ದಾರೆ. ಆದರೆ ಶರಣರ ನಿಲುವು ಬೇರೆಯದೇ ಇತ್ತು. ವಚನ ಸಾಹಿತ್ಯ ಕಾಲಘಟ್ಟದ ಬಹುತೇಕ ವಚನಕಾರರು ಬಹುದೇವತಾ ಪೂಜೆ, ಮೂರ್ತಿಪೂಜೆಯ ಖಂಡನೆಯನ್ನು ಮಾಡಿ ಇಷ್ಟದೈವ ಏಕದೇವತಾರಾಧನೆಯ ನಿಲುವನ್ನು ಪ್ರತಿಪಾದಿಸುತ್ತಾ ಬಂದರು. 
 ಕಲ್ಲಿನಿಂದ ಮಾಡಿದ, ಮಣ್ಣಿನಿಂದ ಮಾಡಿದ, ಮರದಿಂದ ಮಾಡಿದ, ಪಂಚಲೋಹದಲ್ಲಿ ಮಾಡಿದ ದೇವರು ನಿಜವಾದ ದೇವರಲ್ಲ.
ಇವೆಲ್ಲ ದೇವರ ವಿಚಾರವಾಗಿ ನಾವು ಮಾಡಿಕೊಂಡ ಕಲ್ಪನೆಗಳ ಮೂರ್ತಿಗಳು.
ವಚನ ಸಾಹಿತ್ಯದಲ್ಲಿ ವಿಗ್ರಹಾರಾಧನೆಯ ಖಂಡನೆಯು ವಚನಕಾರರು ತಳೆದ ಪ್ರಮುಖ ನಿಲುವುಗಳಲ್ಲಿ ಒಂದು. ಅದಕ್ಕೆ ಮೂಲ ಕಾರಣ ಶರಣರು ಕಂಡ ದೇವರದು "ಅಮೂರ್ತ ಸ್ವರೂಪ".
ದೇವರೆಂಬ ವ್ಯಕ್ತಿ ಇಲ್ಲ. ಅದೊಂದು ಕಲ್ಪನೆ - ಭಾವನೆ - ಗ್ರಹಿಕೆ. ನಿಸ್ಸಹಾಯಕರಿಗೆ ಆಶಾಕಿರಣ - ದುರ್ಬಲರಿಗೆ ಆತ್ಮವಿಶ್ವಾಸ - ಕುತಂತ್ರಿಗಳಿಗೆ ಶೋಷಣೆಯ ಅಸ್ತ್ರ.  ಅದಕ್ಕೆ ಮೂರ್ತರೂಪ ಕೊಟ್ಟು ತಮಗೆ ಬೇಕಾದಂತೆ ಬಳಸುವ ಸಾಧನ ವಾಗಿಸಿದ್ದಾರೆ; ಇದು ತಪ್ಪು ಎನ್ನುತ್ತಾರೆ ಶರಣರು.
ಈ ಬ್ರಹ್ಮಾಂಡವನ್ನೇ ಸೃಷ್ಟಿಸುವ ಸಲಹುವ ಲಯಸುವ ದೇವರು, ಹೇಗಿದ್ದಾನೆಂದು ಯಾರಿಗೂ ಗೊತ್ತಿಲ್ಲ. ದೇವರ ಕುರುಹಾಗಿ ಮನುಷ್ಯರು ತಮಗೆ ಬೇಕಾದ ಆಕಾರ ಮತ್ತು ಹೆಸರಿನಲ್ಲಿ ವಿಗ್ರಹ ಮಾಡಿಕೊಂಡು ಪೂಜಿಸುತ್ತಾರೆ. ದೇವರ ಬಗೆಗೆ ಒಬ್ಬೊಬ್ಬರಿಗೆ ಒಂದೊಂದು ಪರಿಕಲ್ಪನೆ ಪರಿಭಾವನೆ ಇರುವುದು ತೀರ ಸಹಜ. ಮಾನವ ಆಕಾರ ಕಲ್ಪಿಸುವ ನಾವು ನಮ್ಮಂತೆಯೇ ಇನ್ನೂ ಹಲವು ಜೀವ ಜಾತಿಗಳಿಗೆ ಒಡೆಯ ಅವನು ಎಂದು ಮರೆಯುತ್ತೇವೆ. ಆದರೆ ವೈಚಾರಿಕತೆಯ ವೈಜ್ಞಾನಿಕ ಹಾದಿಯಲ್ಲಿ  ಸತ್ಯದ ಮಾರ್ಗವಾಗಿ ಪರಿಶೋಧಿಸುತ್ತಾ ನಡೆದಾಗ ಕೊನೆಗೆ ದೇವರು ಶರಣರಿಗೆ ಕಾಣುವುದು ಅಣುಅಣುವಿನಲ್ಲಿ, ತೃಣ ತೃಣದಲ್ಲಿ, ಪ್ರತಿಯೊಂದೂ ಜೀವಕೋಶದಲ್ಲಿ, ಇಡಿ ಸೃಷ್ಟಿಯಾಗಿ ಅಥವಾ ಬ್ರಹ್ಮಾಂಡವಾಗಿ, ಅಲ್ಲಿರುವ ಚೈತನ್ಯವಾಗಿ. ಸೈದ್ಧಾಂತಿಕ ಭೌತಿಕ ಶಾಸ್ತ್ರಜ್ಞರಿಗೆ ಅಣುಅಣುವಿನಲ್ಲಿ, ತೃಣ ತೃಣದಲ್ಲಿ ( Theoretical  physicists  see in atomic and subatomic particles), 
 ಜೀವ ಶಾಸ್ತ್ರಜ್ಞ, ವೈದ್ಯರಿಗೆ ಪ್ರತಿಯೊಂದೂ ಜೀವಕೋಶದಲ್ಲಿ (Biologists and  doctors  see in every living cells)
ಖಗೋಳ ಶಾಸ್ತ್ರಜ್ಞಗೆ ಇಡಿ ಸೃಷ್ಟಿ, ಬ್ರಹ್ಮಾಂಡವಾಗಿ (Astrophysicists see in Nature and Universe as a whole). ಬ್ರಹ್ಮಾಂಡದಲ್ಲಿ ಡಾರ್ಕ್ ಎನರ್ಜಿ-96%, ಡಾರ್ಕ್ ಮ್ಯಾಟರ್ -3.99% , ಇನ್ವಿಸಿಬಲ್ ಇಂಟರ್ಸ್ಟೆಲ್ಲರ್ ಡಸ್ಟ್ - 00.01% ಬಾಹ್ಯಾಕಾಶ- ಆಕಾಶಕಾಯಗಳು-ಗ್ರಹಗಳು ನಕ್ಷತ್ರಗಳು-ಮಿಲ್ಕಿ ವೇ ಮುಂತಾದುವು ಭೂಮಿಯೂ ಸೇರಿದಂತೆ....ಇಂತಹ ಮನುಷ್ಯನ ಗ್ರಹಿಕೆಗೂ ನಿಲುಕದ ಅನೇಕ ವಿಸ್ಮಯಗಳಿವೆ. ಅದಕ್ಕೇ ವಿಜ್ಞಾನಿಗಳಿಗೂ ಸಹ ಸೃಷ್ಟಿಕರ್ತ ದೇವರನ್ನು ಅರಿಯುವುದರಲ್ಲಿ ವಿಶೇಷ ಆಸಕ್ತಿ. 
ಆದರೆ ದೇವರನ್ನು ನಮ್ಮ ಜ್ಞಾನೇಂದ್ರಿಯ, ಕರ್ಮೆಂದ್ರಿಯ, ಕರಣೆಂದ್ರಿಯಗಳಾದ ಬುಧ್ಧಿ ಜ್ಞಾನ ಚಿತ್ತ ಮನಗಳಿಂದ ಅರಿಯುವುದು ಅಸಾಧ್ಯ ಎಂದು ಬಹುತೇಕರಿಗೆ ಅರ್ಥ ವಾಗಿದೆ.
ದೇವರು ವರ್ಣಾತಿತ, ನಾಮಾತಿತ, ಶಬ್ದಾತೀತ ವಸ್ತುಆತಿತವಾಗಿದ್ದಾನೆ. ಹಾಗಾಗಿ ಆತನು ಅಪ್ರತಿಮನು ಅಪ್ರಮಾಣನು. ಕಾಣದ ದೇವರು ಎಲ್ಲರಲ್ಲೂ ಸ್ವಯಂ ಬೆಳಕಾಗಿದ್ದಾನೆ.

ಶರಣರು ಹೇಳಿದ್ದು. "ದೇವರು ಎಲ್ಲೆಲ್ಲಿಯೋ ಇಲ್ಲ. ಆತ ನಿನ್ನೊಳಗೇ ಅಡಗಿದ್ದಾನೆ". ನಿನ್ನನ್ನು ನೀನು ಅರಿ. ಈ ನಿಟ್ಟಿನಲ್ಲಿ ಶರಣರದು ಶಿವಾದ್ವೈತ. "ಅಹಂ ಬ್ರಹ್ಮಸ್ಮಿ" : " ಸತ್ಯಸ್ಯ ಸತ್ಯಂ ತತ್ ತತ್ವಮಸಿ", ಸತ್ಯದ ಸತ್ಯ ನೀನು ಅದೇ ಆಗಿದ್ದೀಯೇ, ಅಹಂ ಬ್ರಹ್ಮಸ್ಮಿ- ನಾನೇ ಬ್ರಹ್ಮ ಅಥವಾ ನಾನೇ ದೇವರು. ಶರಣರ ಶಿವಯೋಗದಲ್ಲಿ ಈ "ತುರಿಯ" ಅವಸ್ಥೆ ದಾಟಿದ ನಂತರವೇ ಪ್ರಸಾದಿಕರಣ ಮತ್ತು ಸಮರ್ಪಣೆಯಿಂದ ಅಂಗ-ಲಿಂಗ ಸಮರಸವಾಗಿ "ತುರಿಯಾತೀತ" ವಾದ ಐಕ್ಯ ಸ್ಥಲ ಲಭ್ಯವಾಗುತ್ತದೆ.
 ಶರಣರು ವೈಚಾರಿಕ-ವೈಜ್ಞಾನಿಕ ದೃಷ್ಟಿಗಳಿಂದಲೇ ತಮ್ಮ ವಚನಗಳಲ್ಲಿ ಅರಿವಿನ ಸಾರವನ್ನು ತುಂಬಿದ್ದಾರೆ.
ಶರಣರ ಧರ್ಮ ವೈಚಾರಿಕ, ವೈಜ್ಞಾನಿಕವಾಗಿದೆ. ಅದರಲ್ಲಿ ಮೂಢನಂಬಿಕೆಗಳಿಗೆ, ಕಾಲ್ಪನಿಕ ದೇವರ ಆಕಾರಗಳಿಗೆ, ಹಲವು ನಾಮಗಳಿಗೆ, ಹಲವು ದೇವರುಗಳಿಗೆ, ಪೂಜೆ ಪುನಸ್ಕಾರಗಳಿಗೆ, ಅಂಧ ವಿಶ್ವಾಸಗಳಿಗೆ, ದೇವರ ಹೆಸರಿನಲ್ಲಿಯ ಸುಲಿಗೆಗಳಿಗೆ  ಅವಕಾಶವಿಲ್ಲ.
 #ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ.

ಎಂದು ಶರಣಧರ್ಮದ ಏಕದೇವ ಉಪಾಸನೆ ಯನ್ನು ಮತ್ತು ತಾವು ಪೂಜಿಸುವ ದೇವರ ಅಮೂರ್ತತೆಯನ್ನು ಎತ್ತಿಹಿಡಿಯುತ್ತಾರೆ ಗುರು ಬಸವಣ್ಣನವರು.

#ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತ ಹೋದರೊ ?
ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕನರಕ-ಗುಹೇಶ್ವರಾ / 609

ಎನ್ನುತ್ತಾರೆ ಅಲ್ಲಮ ಪ್ರಭುಗಳು.
ಕಲ್ಲಿನ ದೇಗುಲಗಳನ್ನು ಕಟ್ಟಿ ಅಲ್ಲಿ ಕಲ್ಲಿನಿಂದ ಕಟೆದ ಕಲ್ಲುದೇವರ ಮೇಲೆ  ಕಲ್ಲೊಂದು ಬಿದ್ದು ಕಲ್ಲು ಛಿದ್ರ ಮಾಡಿದರೆ, ಅಲ್ಲಿದ್ದ ದೇವರು ಎತ್ತ ಹೋದರು ಎಂದು ಪ್ರಶ್ನಿಸುತ್ತಾರೆ ಅಲ್ಲಮರು. ತನ್ನನ್ನು ತಾನು ರಕ್ಷಿಸಿಕೊಳ್ಳಲಾಗದ ಕಲ್ಲಿನದೇವರು ನಮ್ಮನ್ನು ಹೇಗೆ ರಕ್ಷಿಸುತ್ತಾನೆ? ಎಂದು ಪ್ರಶ್ನಿಸುತ್ತಾರೆ. ಲಿಂಗಪೂಜೆಯನ್ನು ಎಂದರೆ, ಬಹಿರಂಗ ಪೂಜೆಯನ್ನೇ ಪ್ರತಿಷ್ಠೆಯನ್ನಾಗಿ ಮಾಡಿ ಮೆರೆದವರಿಗೆ ಇದರಿಂದ ನಾಯಕನರಕ ಎಂಬುದು ಅಲ್ಲಮಪ್ರಭುಗಳ ಮಾತು. 

#ಮತ್ರ್ಯಲೋಕದ ಮಾನವರು;
ದೇಗುಲದೊಳಗೊಂದು ದೇವರ ಮಾಡಿದಡೆ,
ಆನು ಬೆರಗಾದೆನು.
ನಿಚ್ಚಕ್ಕೆ ನಿಚ್ಚ ಅರ್ಚನೆ ಪೂಜೆಯ ಮಾಡಿಸಿ,
ಭೋಗವ ಮಾಡುವರ ಕಂಡು ನಾನು ಬೆರಗಾದೆನು.
ಗುಹೇಶ್ವರಾ ನಿಮ್ಮ ಶರಣರು, ಹಿಂದೆ ಲಿಂಗವನಿರಿಸಿ ಹೋದರು. / 1275

ಪ್ರಸ್ತುತ ವಚನದಲ್ಲೂ ಅಲ್ಲಮರು ಮಾನವರು ದೇವಾಲಯ ಒಂದನ್ನು ಕಟ್ಟಿ ದೇಗುಲದೊಳಗೊಂದು ದೇವರ ಇರಿಸಿ, ಅದಕ್ಕೆ ಪೂಜೆಮಾಡಿ, ಸಕಲಭೋಗದ  ಜೀವನವ ನಡೆಸುವವರ ಕಂಡು ಬೆರಗಾದೆ ಎಂದು ನಮ್ಮ ಶರಣರು ಸ್ಥಾವರಲಿಂಗವನ್ನು ಹಿಂದೆ ಬಿಟ್ಟು ಮುಂದೆ ಸಾಗಿದರು ಎನ್ನುತ್ತಾರೆ.

 ಕಲ್ಲಿನಿಂದ ಮಾಡಿದ, ಮಣ್ಣಿನಿಂದ ಮಾಡಿದ, ಮರದಿಂದ ಮಾಡಿದ, ಪಂಚಲೋಹದಲ್ಲಿ ಮಾಡಿದ ದೇವರು ನಿಜವಾದ ದೇವರಲ್ಲ ಎಂದು ಕಾರಣ ಸಹಿತ ವಿವರಿಸುತ್ತಾರೆ ಶರಣ ವೀರ ಬೀರೇಶ್ವರರು.
#ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.
ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು.
ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು.
ಇಂತಿವನೆಲ್ಲವನರಿವ ಚಿತ್ತ ದೇವರಲ್ಲ.
ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು.
ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ : ಕಂಡವರೊಳಗೆ ಕೈಕೊಂಡಾಡದೆ,
ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ,
ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ,
ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ,
ವೀರಬೀರೇಶ್ವರಲಿಂಗದೊಳಗಾದ ಶರಣ/88.

ಈ ನಿಟ್ಟಿನಲ್ಲಿಯೇ “ಕಲ್ಲು ಲಿಂಗವಲ್ಲ.ಲಿಂಗ ಕಲ್ಲಲ್ಲ” ಎಂಬ ಸಿದ್ದರಾಮೇಶ್ವರರ ಮಾತು.
 #ಕಟೆದ ಕಲ್ಲು ಲಿಂಗವೆನಿಸಿತ್ತು. 
ಕಟೆಯದ ಕಲ್ಲು ಕಲ್ಲೆನಿಸಿತ್ತು. 
ಪೂಜಿಸಿದ ಮಾನವ ಭಕ್ತನೆನಿಸಿದನು, ಪೂಜಿಸದ ಮಾನವ ಮಾನವನೆನಿಸಿದನು ಕಲ್ಲಾದಡೇನು? ಪೂಜೆಗೆ ಫಲವಾಯಿತ್ತು ಮಾನವನಾದಡೇನು? ಭಕ್ತಿಗೆ ಕಾರಣಿಕನಾದನು. 
"ಕಲ್ಲು ಲಿಂಗವಲ್ಲ, ಲಿಂಗ ಕಲ್ಲಲ್ಲ ನೋಡಾ ಕಪಿಲಸಿದ್ಧ ಮಲ್ಲಿಕಾರ್ಜುನಾ".ಎನ್ನುತ್ತಾರೆ ಶಿವಯೋಗಿ ಸಿದ್ಧರಾಮರು.

ಪೃಥ್ವಿಯ ಮೇಲಣ ಶಿಲೆಯ ತಂದು, ಪ್ರತಿಮೆಗಳ ಮಾಡೆ, ಕಲ್ಲು ಕುಟಿಕನಲ್ಲಿಯೆ ಗುರುವಾದ, ಕಲ್ಲು ಶಿಷ್ಯನಾದ” ಎಂದಿರುವ ಮಾತಿನಲ್ಲಿ ಕಲ್ಲುದೇವರು ಶಿಲ್ಪಿಯಿಂದ ನಿರ್ಮಿತ.  ಒಂದು ಕಲ್ಲನ್ನು ದೇವರಾಗಿ ಪರಿವರ್ತಿಸುವ ಕಲ್ಲುಕುಟಿಕ ಅಥವಾ ಶಿಲ್ಪಿ ಆ ಕಲ್ಲಿಗೆ ಗುರುವು ಅಲ್ಲವೇ? ಹಾಗಾದರೆ ಕಲ್ಲು ಶಿಷ್ಯ; ಶಿಲ್ಪಿ ಗುರುವೇ? ಎಂದು ಪ್ರಶ್ನಿಸುತ್ತಾರೆ. 

#ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕಯ್ಯಾ ?
ಎರಡಕ್ಕೆ ಹೇಳಲಿಲ್ಲಯ್ಯಾ.
ಗುಹೇಶ್ವರಾ ನೀನು ಕಲ್ಲಾದಡೆ ನಾನು ಏನಪ್ಪನು ? / 948

ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕಯ್ಯಾ? ನೀನೇ ಕಲ್ಲಾದಡೆ ನಾನು ಏನಪ್ಪನು ? ಎಂದು ಕೇಳುತ್ತಾರೆ ಅಲ್ಲಮಪ್ರಭುಗಳು. 
ತನ್ನ ಬಿಟ್ಟು ದೇವರಿಲ್ಲ, ಮಣ್ಣ ಬಿಟ್ಟು ಮಡಕೆ ಇಲ್ಲ. ದೇವರು ಎಲ್ಲೆಲ್ಲೂ ಇದ್ದಾನೆಂದಮೇಲೆ ತನ್ನೊಳಗೂ ಇರಲೇಬೇಕಲ್ಲವೇ? ಎಂದು ಆತ್ಮಾವಲೋಕನ ಮಾಡಿಕೊಂಡ ಶರಣರು ತಮ್ಮಲ್ಲಿಯೇ ಇದ್ದ ನಿರಾಕಾರ ನಿರ್ಗುಣಪರಬ್ರಹ್ಮ/ ಪರಶಿವನ ಅಮೂರ್ತ ಸ್ವರೂಪವನ್ನೇ ದೇವರಾಗಿ ಕಂಡಿದ್ದಾರೆ.
 ಶರಣರು ದೇವರನ್ನು ಒಪ್ಪುತ್ತಾರೆ, ಅತ್ಯಂತ ಅಚಲ ನಿಷ್ಠೆಯಿಂದ ನಂಬುತ್ತಾರೆ, ಪೂಜಿಸುತ್ತಾರೆ. ಆದರೆ ಉಳಿದ ಧರ್ಮಗಳ ದೇವರು ಮೂರ್ತರೂಪದಲ್ಲಿದ್ದರೆ, ಇವರ ದೇವರು ಅಮೂರ್ತನಾಗಿದ್ದಾನೆ. ಈ ಅಮೂರ್ತ ದೇವರ ಪೂಜೆಯು ವಿಶೇಷ ವಾಗಿದೆ.  ಆ ಪರಮಾತ್ಮನನ್ನು ಕಾಣಲು ಇಷ್ಟಲಿಂಗವೆಂಬುದು ಒಂದು ಪೂಜೆಯ ಮತ್ತು ಶಿವಯೋಗದ ಮಾಧ್ಯಮವಾಗಿದೆ.   
 2.
   *ಸೇತುರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ
ಅಷ್ಟಾಷಷ್ಠಿಕೋಟಿ ಪುಣ್ಯಕ್ಷೇತ್ರಂಗಳಲ್ಲಿಹ ದೇವರು ದೇವರಲ್ಲ*
ಸೇತುಬಂಧ ರಾಮೇಶ್ವರ, ಕಾಶಿ, ಗೋಕರ್ಣ, ಕೇದಾರ ಮೊದಲಾದ ಕ್ಷೇತ್ರಗಳಲ್ಲಿ ದೇವಸ್ಥಾನ ನಿರ್ಮಿಸಿ ಅವು ಪುಣ್ಯತೀರ್ಥ ಕ್ಷೇತ್ರಗಳು; ಅಲ್ಲಿ ಇರುವಂತಹ ದೇವರು ಶ್ರೇಷ್ಠ; ಅಲ್ಲಿಯೇ ವಾಸಿಸುತ್ತಾನೆ; ಅಲ್ಲಿ ಬಂದು ದರ್ಶನ ಮಾಡಿದರೆ ಎಲ್ಲ ಪಾಪ ನಾಶವಾಗಿ ಪುನೀತರಾಗುತ್ತಾರೆ ಎಂಬ ಮೂಢ ನಂಬಿಕೆಗಳನ್ನು ಬೆಳೆಸಿದರು ಅರ್ಚಕರು. ಮಾನವ ನಿರ್ಮಿತ ವಸ್ತುಗಳಲ್ಲಿಯೂ, ವಿಶ್ವದ ಕೆಲವೇ ಕೆಲವು ಸ್ಥಾನಗಳಲ್ಲಿ  ಸರ್ವಾಂತರಗಾಮಿ ದೇವರು  ಹೇಗೆ ನೆಲೆಸಿದ ? ಆಲ್ಲಿ ಮಾತ್ರ ದೇವರಾಗಿ ನೆಲಿಸಿ ವರ ಕೊಡುವ ಪರಿ ಹೇಗೆ ? ಎಂಬುದು ಇಲ್ಲಿಯ ಪ್ರಶ್ನೆ. 
#ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎಂದು ಗುರು ಬಸವೇಶ್ವರರು  
ಜಗತ್ತು, ಆಕಾಶ, ಪಾತಾಳದ ಆಳದ ಎಲ್ಲೆಯನ್ನೂ ಮೀರಿ, ಇಡೀ ಬ್ರಹ್ಮಾಂಡವನ್ನೂ ಮೀರಿದ ಪರಶಿವನ ವ್ಯಾಪ್ತಿಯನ್ನು ಹೇಳುತ್ತಾರೆ. ಅವರಿಗೆ ಪರಶಿವನು ಅಗಮ್ಯನು (ಯಾರೂ ಹೋಗಿ ಮುಟ್ಟಲಾರದ), ಅಪ್ರಮಾಣ (ಯಾವ ಅಳತೆಗೂ ಸಿಗದಷ್ಟು ವಿಶಾಲ), ಅಗೋಚರ (ಯಾರ ಕಣ್ಣಿಗೂ ಕಾಣದ) ಮತ್ತು ಅಪ್ರತಿಮ; ಏಕಮೇವಾದ್ವಿತೀಯವಾದ ಲಿಂಗ.  ನೀವು ಈ ಸಣ್ಣ ಇಷ್ಟಲಿಂಗದ ರೂಪದಲ್ಲಿ ನನ್ನ ಕರಸ್ಥಲಕ್ಕೆ ಬಂದಿರುವಿರಿ” ಎಂದು ಗುರು ಬಸವಣ್ಣನವರು ಶರಣರ ಕಂಡ ದೇವರನ್ನು ವರ್ಣಿಸಿದ್ದಾರೆ.
ಶರಣರಿಗೆ “ಎಲ್ಲವೂ ಲಿಂಗಮಯವಾಗಿದೆ. ಲಿಂಗವಲ್ಲದ ಏನೇನೂ ಇಲ್ಲ".
ಈ ವಚನಕಾರನ ಹೆಸರು ಅಪ್ರಮಾಣದೇವ. ಅವನ ಹೆಸರಿನಲ್ಲಿಯೇ ದೇವರ ಆಗಾಧತೆಯ ಕಲ್ಪನೆ ಇದೆ. ಇಂತಹ ವಿಶ್ವವ್ಯಾಪಿ ದೇವರು ಕೇವಲ ಕೆಲವು ಪುಣ್ಯಕ್ಷೇತ್ರಂಗಳಲ್ಲಿ ಇರಲು ಸಾಧ್ಯವಿಲ್ಲ ಎನ್ನುತ್ತಾರೆ ಶರಣರು.
  3.
*ತನ್ನ ತಾನರಿದು ತಾನಾರೆಂದು ತಿಳಿದಡೆ 
ತಾನೇ ದೇವ ನೋಡಾ,
ಅಪ್ರಮಾಣಕೂಡಲಸಂಗಮದೇವ*. 

 ಎಲ್ಲ ದೇವರುಗಳನ್ನು ನಿರಾಕರಿಸಿದ ಲಿಂಗಾಯತ ಧರ್ಮವು ಆತ್ಮನನ್ನೇ ಪರಮಾತ್ಮನೆಂದು ಭಾವಿಸಿದೆ. ನರನನ್ನೇ ಹರನೆಂದು ತಿಳಿದುಕೊಂಡಿದೆ. ಸ್ಥಾವರಕ್ಕಿಂತ ಜಂಗಮ (ಚಲನಶೀಲತೆ) ಶ್ರೇಷ್ಠವೆನ್ನುತ್ತದೆ. ಹೀಗಾಗಿ ಶರಣರ ದೇವರ ಪರಿಕಲ್ಪನೆ ಇತರರಿಗೆ ಬೇಗನೆ ಅರ್ಥ ಆಗುವದಿಲ್ಲ.
ದೇವರ ನಿಲುವು ಮೂರ್ತವಾದುದಲ್ಲ. ಅದು ಅಮೂರ್ತವಾದುದೆಂದು ಶರಣ ಬಾಲಸಂಗಯ್ಶ ತನ್ನ ವಚನದಲ್ಲಿ ತಿಳಿಸುತ್ತಾರೆ.
#ತಿಲದೊಳಗಣ ತೈಲದಂತೆ, ಕ್ಷೀರದೊಳಗಣ ಘೃತದಂತೆ,
ಪುಷ್ಪದೊಳಗಣ ಪರಿಮಳದಂತೆ, ತುಪ್ಪದೊಳಗಣ ರುಚಿಯಂತೆ,
ಎಪ್ಪತ್ತೆರಡುಸಾವಿರ ನಾಡಿಗಳೆಲ್ಲವ
ಶಿವನು ಬೆರೆಸಿ ಭೇದವಿಲ್ಲದಿಹನು ನೋಡಾ
ಅಪ್ರಮಾಣಕೂಡಲಸಂಗಮದೇವಾ. / 667

#ತಾನೆ ಚಿತ್ಪ್ರಕಾಶ ತಾನೆ ಚಿದಾಕಾಶ 
ತಾನೆ ಬಿಂದ್ವಾಕಾಶ ನೋಡಾ.
ತಾನೆ ಮಹದಾಕಾಶ ತಾನೆ ಪರಾಕಾಶ ನೋಡಾ.
ತನ್ನಿಂದಧಿಕವಾಗಿಹ ಪರಶಿವತತ್ವವಿಲ್ಲವಾಗಿ ತಾನೆ ಪರಬ್ರಹ್ಮ ನೋಡಾ
ಅಪ್ರಮಾಣಕೂಡಲಸಂಗಮದೇವಾ. / 656*
ಎನ್ನುತ್ತಾರೆ ಬಾಲ ಸಂಗಯ್ಯ ಶರಣರು.

*ಇಷ್ಟಲಿಂಗ*
ಸ್ಥಾವರ ದೇವರುಗಳನ್ನು ನಿರಾಕರಿಸಿದ ಈ ಶರಣರು ಇಷ್ಟಲಿಂಗ ಪೂಜೆಯ ಮಹತ್ವವನ್ನು ಹೇಳಿದ್ದಾರೆ. ಲಿಂಗಾಯತ ಧರ್ಮದ ವ್ಯೆಶಿಷ್ಟ್ಯ ಪೂರ್ಣ ಉಪಾಸನಾ ಸಾಧನ ಇಷ್ಟಲಿಂಗ.  ಜಗತ್ತಿನ ಮತ್ತಾವ ಧರ್ಮಗಳಲ್ಲಿಯೂ ಇರದ ದೇವನನ್ನು ವಿಶ್ವದ ಆಕಾರದಲ್ಲಿ ತಾತ್ವಿಕವಾಗಿ ರೂಪಿಸಿ ಪೂಜಿಸುವ ಪರಿಪೂರ್ಣತೆಯನ್ನು ಇಲ್ಲಿ ಕಾಣಬಹುದು. ನಿರಾಕಾರವನ್ನು ಸಾಕಾರ ಮೂಲಕ ಗ್ರಹಿಸಿಕೊಳ್ಳುವ ಪರಿಪಾಠ ಆಧ್ಯಾತ್ಮಿಕ ವ್ಯವಹಾರಿಕವಾಗಿದೆ. ನಿರಾಕಾರವಾದ ವೇಳೆಯನ್ನ ಅರಿಯಲಿಕ್ಕೆ ಸಾಕಾರವಾದ ಗಡಿಯಾರವು ಸಾಧನವಾಗುವಂತೆ, ನಿರಾಕಾರವಾದ ದೇವರನ್ನು ಅರಿಯಲಿಕ್ಕೆ ಇಷ್ಟಲಿಂಗವು ಸಾಕಾರವಾದ ಕುರುಹು. ಇಷ್ಟಲಿಂಗವು ಕ್ರಿಯಾದೀಕ್ಷೆಯಿಂದ ಸಂಪನ್ನನಾದ ಶರಣನನ್ನು ಪರಿಚಯಿಸುವ ಒಂದು ಬಾಹ್ಯಚಿಹ್ನೆ ಜೊತೆಗೆ ಶಿವಯೋಗದ ತ್ರಾಟಕಕ್ಕೆ ಯೋಗಸಾಧನ ವಾಗಿದೆ.  ಶಿವನನ್ನು ಸಂಕೇತಿಸುವ ಜಗತ್ತನ್ನೆಲ್ಲ ತುಂಬಿಕೊಂಡಿರುವ ಪರಮಾತ್ಮನ 
ಶರೀರವಾದ ಬ್ರಹ್ಮಾಂಡವು ಗೋಲಾಕಾರದಲ್ಲಿ ಇರುವದರಿಂದ ಆ ಆಕಾರದಲ್ಲಿ ರೂಪಿಸಿಕೊಂಡ ಕುರುಹು. 
ಇಷ್ಟಲಿಂಗಕ್ಕೆ ಕಪ್ಪಾದ ಕಾಂತಿಯುಕ್ತವಾದ ಕಂಥೆಯು ರಕ್ಷಣಾಕವಚವಾಗಿ ಗೋಳಾಕಾರದಲ್ಲಿ  ಕಂತಿ (ಕಾಂತಿ)ಕಟ್ಟಿರುತ್ತಾರೆ  ಹಾಗೂ  ಅದಕ್ಕೆ  ಹೊಳಪು  ನೀಡಲಾಗಿರುತ್ತದೆ. ಕಣ್ಣಿನ  ಕಪ್ಪು- ಕಂಥೆಯ ಕಪ್ಪು ಪರಸ್ಪರ ಆಕರ್ಶಿಸಲ್ಪಟ್ಟು ಬೇಗನೆ ಚಿತ್ತ ಏಕಾಗ್ರತೆಯ ಅನುಭವವಾಗುವುದು. ತ್ರಾಟಕ ಯೋಗದಲ್ಲಿ ನಿರೀಕ್ಷಣಾ ಕ್ಷಮತೆ  ಹೊಂದುವುದು. ಇದರಿಂದ ಮೆದುಳಿನ ಪಿನಿಯಲ್ ಗ್ಲಾಂಡ ಮೇಲಟೋನಿನ್ ರಸ ಉತ್ಪತ್ತಿಯಾಗುತ್ತದೆ, ಮೇಲಟೋನಿನ್ ರಸದಿಂದ ಮನುಷ್ಯ ಅತ್ಯಂತ ಚೈತ್ಯನ್ಯದಿಂದ ಇರಲು ಸಾಧ್ಯ. 
ಉಪಾಸನೆಯಲ್ಲಿ ಎರಡು ವಿಧ ಪ್ರತೀಕೋಪಾಸನೆ ಮತ್ತು ಅಹಂಗ್ರಹೋಪಾಸನೆ ಎಂದು ವೇದಾಂತ, ಉಪನಿಷತ್ ಹೇಳುತ್ತದೆ.
ಇಷ್ಟಲಿಂಗೋಪಾಸನೆಯು ಪ್ರತೀಕೋಪಾಸನೆಯಲ್ಲ. ಅದು ಅಹಂಗ್ರಹೋಪಾಸನೆ. 
ಏಕೆಂದರೆ ಇಷ್ಟಲಿಂಗವು ತನ್ನ ಆತ್ಮದ ಜ್ಯೋತಿಯ ಪ್ರತಿಕೃತಿ ಮತ್ತು ಆ ಲಿಂಗದಲ್ಲಿ  ಸದ್ಗುರುವು  ಶಿಷ್ಯನ ಪ್ರಾಣ ಪ್ರತಿಷ್ಠಾಪನೆ ಮಾಡಿರುತ್ತಾನೆ. ಬ್ರಹ್ಮಾಂಡ ಚೈತನ್ಯ ಶಿವನಲ್ಲಿ, ಪಿಂಡಾಂಡ ಚೈತನ್ಯ ಶರಣನು ಇಂಬಿಡಲ್ಪಟ್ಟಿರುವುದರಿಂದ ಪರಶಿವನ ಕುರುಹಾದ ಬಾಹ್ಯಲಿಂಗದಲ್ಲಿ ಶರಣನ ಕುರುಹಾದ ಪಂಚಸೂತ್ರ ಲಿಂಗವು ಇಂಬಿಡಲ್ಪಟ್ಟಿದೆ. ಅವೆರಡನ್ನೂ ಒಂದರಲ್ಲಿ ಇನ್ನೊಂದನ್ನಿಟ್ಟು ಒಂದೇ ಚಿತ್ಕಾಂತಿಯುತ ಸಾಕಾರರೂಪು ರಚಿಸಿ ಕರಕಮಲದಲ್ಲಿ, ಉರಸಜ್ಜೆಯಲ್ಲಿ ಇಷ್ಟಲಿಂಗವಾಗಿ ಧರಿಸಿ ನಾನು-ನೀನು ಒಂದೇ ಎಂಬ ಶಿವಾದ್ವೈತ ಭಾವನೆಯಿಂದ ಅದನ್ನು, ಶರಣನು ನಿತ್ಯವೂ ಪೂಜಿಸುತ್ತಾನೆ. ಆದ್ದರಿಂದ "ಪಿಂಡ ಬ್ರಹ್ಮಾಂಡಯಾರೈಕ್ಯಂ" ಎಂಬ ಶ್ರುತಿ ವಾಕ್ಯವನ್ನು ವಾಸ್ತವವಾಗಿ ಹಸ್ತಗತಮಾಡಿಕೊಂಡವರು ಲಿಂಗವಂತರು. ಹೀಗೆ 'ತನ್ನ' ಪೂಜೆಯಾದ ಕಾರಣ ಲಿಂಗಪೂಜೆ ಅಹಂಗ್ರಹೋಪಾಸನೆ. ಪ್ರತಿಯೊಬ್ಬ ಶರಣನು ಕೂಡ ತಮ್ಮ ತಮ್ಮ ಎಡ ಅಂಗೈಯಲ್ಲಿರುವ ಇಷ್ಟಲಿಂಗವನ್ನು ಸೋsಹಂ ಭಾವದಿಂದ ಪೂಜಿಸುತ್ತಾನೆ. ನಿರಂತರವಾಗಿ ಮಾಡುವ ಈ  ರೀತಿಯ ಉಪಾಸನೆಯಿಂದ ಲಿಂಗಾಂಗ ಸಾಮರಸ್ಯ ಐಕ್ಯವು  ಪ್ರಾಪ್ತವಾಗುತ್ತದೆ.  
ಇದೇ ಪಾರಮಾರ್ಥಿಕ ಫಲ.
ಇಷ್ಟಲಿಂಗ ಒಂದು ಶ್ರೇಷ್ಠ ಯೋಗಸಾಧನ ವಾಗಿದೆ. ತ್ರಾಟಕಕ್ಕೆ ಸಹಕಾರಿ. ಇಷ್ಟಲಿಂಗವೇ ಕೇಂದ್ರವಾದ ಶಿವಯೋಗವು, ರಾಜ ಯೋಗ(ತ್ರಾಟಕ ಯೋಗ), ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ(ಕಾಯಕ ಯೋಗ) ಕ್ರಿಯಾಯೋಗ, ಕುಂಡಲಿನಿಯೋಗ ಮುಂತಾದ ಎಲ್ಲವುಗಳಿಂದ ಕೂಡಿದ ಸರ್ವಯೋಗ ಸಮನ್ವಯ ಸಾರವಾಗಿದೆ. ಆದರೆ ಸ್ಥಾವರಲಿಂಗ ಪೂಜೆ, ವಿಗ್ರಹ ಪೂಜೆಯಲ್ಲಿ ಕೇವಲ ಭಕ್ತಿಯೋಗವಿದೆ. ಅಂತರಂಗಾನುಸಂಧಾನಕ್ಕೆ ಅವು ಸಾಧನವಾಗಲಿಲ್ಲ.
-✍️ Dr Prema Pangi 
#ಕಲ್ಲದೇವರು_ದೇವರಲ್ಲ_ಮಣ್ಣದೇವರು, #ವಚನ, #ಬಾಲಸಂಗಯ್ಯ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma