ವಚನ ದಾಸೋಹ : ಅಗ್ನಿಮುಟ್ಟಲು ತೃಣವಗ್ನಿಯಪ್ಪುದು ತಪ್ಪದಯ್ಯ

ವಚನ ದಾಸೋಹ : ಅಗ್ನಿಮುಟ್ಟಲು ತೃಣವಗ್ನಿಯಪ್ಪುದು ತಪ್ಪದಯ್ಯ
ವಚನ:
#ಅಗ್ನಿಮುಟ್ಟಲು ತೃಣವಗ್ನಿಯಪ್ಪುದು ತಪ್ಪದಯ್ಯ.
ಗುರುಪ್ರಸಾದವಂಗವ ಸೋಂಕಿದಲ್ಲಿ
ಸರ್ವಾಂಗ ಗುರುವಪ್ಪುದು ತಪ್ಪದಯ್ಯ.
ಲಿಂಗಪ್ರಸಾದ ಮನವ ಸೋಂಕಿದಲ್ಲಿ
ಮನ ಲಿಂಗವಪ್ಪುದು ತಪ್ಪದಯ್ಯ.
ಜಂಗಮಪ್ರಸಾದ ಅರಿವ ಸೋಂಕಿದಲ್ಲಿ
ಅಖಂಡಿತ ಪ್ರಸನ್ನಪ್ರಸಾದವಪ್ಪುದು ತಪ್ಪದಯ್ಯ.
ಶಿವಶಿವಾ, ಪ್ರಸಾದದ ಮಹಿಮೆಯನೇನೆಂದುಪಮಿಸುವೆ ?
ಪ್ರಸಾದವೇ ಗುರು, ಪ್ರಸಾದವೇ ಲಿಂಗ, ಪ್ರಸಾದವೇ ಜಂಗಮ,
ಪ್ರಸಾದವೇ ಪರಾತ್ಪರ, ಪ್ರಸಾದವೇ ಪರಮಾನಂದ,
ಪ್ರಸಾದವೇ ಪರಮಾಮೃತ, ಪ್ರಸಾದವೇ ಪರಮಜ್ಞಾನ,
ಪ್ರಸಾದವೇ ವಾಙ್ಮನೋತೀತ, ಪ್ರಸಾದವೇ ನಿತ್ಯಪರಿಪೂರ್ಣ.
ಇಂತಪ್ಪ ಪ್ರಸಾದವ ಕೊಂಡು ಬದುಕಿದೆನಯ್ಯ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. / 11
ಎನ್ನುತ್ತಾರೆ ಉರಿಲಿಂಗ ಪೆದ್ದಿ ಶರಣ ಗುರುಗಳು.

*ಅರ್ಥ*: 
ಗುರುಪ್ರಸಾದದಿಂದ ಸರ್ವಾಂಗವೂ ಗುರುವಾಗುವುದು. ಲಿಂಗಪ್ರಸಾದದಿಂದ ಸರ್ವಮನವೂ ಲಿಂಗವಾಗುವುದು.
ಜಂಗಮಪ್ರಸಾದದಿಂದ ಅಖಂಡಿತ ಪ್ರಸನ್ನತೆಯು ಪ್ರಸಾದವಾಗುವುದು. ಪ್ರಸಾದವೇ ಗುರು, ಪ್ರಸಾದವೇ ಲಿಂಗ, ಜಂಗಮ, ಪರಾತ್ಪರ, ಪರಮಾನಂದ,
ಪರಮಾಮೃತ, ಪರಮಜ್ಞಾನ, ವಾಙ್ಮನೋತೀತ, ನಿತ್ಯಪರಿಪೂರ್ಣ ಎಂಬ ಮಾತು ಪ್ರಸಾದದ ಮಹತ್ವ ಮತ್ತು ಅದರಿಂದಾಗುವ ಪರಿಣಾಮವನ್ನು ಅರ್ಥವತ್ತಾಗಿ ಸೂಚಿಸುತ್ತಿದೆ.

*ವಚನ ಚಿಂತನೆ*:
ಶರಣರಲ್ಲಿ 'ಪ್ರಸಾದ' ಎಂಬುದಕ್ಕೆ ವ್ಯಾಪಕವಾದ ಅರ್ಥವಿದೆ. 
“ನೈರ್ಮಲ್ಯಂ ಮನಸೋ ಲಿಂಗಂ ಪ್ರಸಾದ ಇತಿ ಕಥ್ಯತೇ” ಅಂದರೆ ಮನಸ್ಸಿನ ಈ ಪ್ರಸನ್ನತೆಗೆ ಕಾರಣವಾಗುವ ಎಲ್ಲವನ್ನೂ ಶರಣರು ಪ್ರಸಾದವೆಂದೇ ಕರೆದಿದ್ದಾರೆ. ಮನಸ್ಸಿನ ನಿರ್ಮಲತ್ವದ, ಪ್ರಸನ್ನತೆಯ  ಚಿಹ್ನೆಯೇ ಪ್ರಸಾದ.
ಶಿವಪ್ರಸಾದೋ ಯದ್ಧವ್ಯಂ ಶಿವಾಯ ವಿನಿವೇದಿತಂ |
ನಿರ್ಮಾಲ್ಯಂ ತತ್ತು ಶೈವಾನಾಂ ಮನೋನೈರ್ಮಲ್ಯ ಕಾರಣಂ || 
ಅಂದರೆ "ಯಾವ ವಸ್ತು ಶಿವನಿಗೆ ಸಮರ್ಪಿತವಾಗುವುದೋ ಅದು ಪ್ರಸಾದ".  ಶಿವಪ್ರಸಾದವು ಮನೋನೈರ್ಮಲ್ಯಕ್ಕೆ ಕಾರಣವಾಗುತ್ತದೆ. "ಯಾವುದು ಮನೋನೈರ್ಮಲ್ಯಕ್ಕೆ ಕಾರಣವಾಗುವುದೋ ಅದು ಪ್ರಸಾದ". ಹೀಗೆ ಶರಣರು ಪ್ರಸಾದತತ್ವವನ್ನು ಎರಡು ರೀತಿಯಲ್ಲಿ ವಿವೇಚಿಸಿದ್ದಾರೆ. ತಾನೇ ಈಶ್ವರನಿಗೆ ಪ್ರಸಾದವಾಗಿ ಪರಿಣಮಿಸುವಿಕೆ ಒಂದಾದರೆ;
ಇಡೀ ಸೃಷ್ಟಿಯೆಲ್ಲಾ ಈಶ್ವರನ ಪ್ರಸಾದವೆಂಬ ಅರಿವು ಇನ್ನೊಂದು ಬಗೆಯಾಗಿ.

*ಶರಣ ಧರ್ಮದಲ್ಲಿ ಪ್ರಸನ್ನತೆಯೇ ಪ್ರಸಾದ*. "ಸತ್ಯ, ಸದಾಚಾರ, ಸತ್ಕ್ರೀಯೆ, ಸಮ್ಯಜ್ಞಾನ,
ಸದ್ಭಕ್ತಿಗಳಿಂದ ಸಿಗುವ ಆನಂದದ ಅನುಭೂತಿಯೆ ಪ್ರಸಾದ". 
"ನಾವು ಮಾಡುವ ಕಾಯಕವೇ 
ಕ್ರಿಯಾಪ್ರಸಾದ".
"ಶುದ್ಧ ಚಿತ್ತದಿಂದ ನಾವು ಯೋಚಿಸುವ ಪರಿಶುದ್ಧ ವಿಚಾರಗಳೇ ವಿಚಾರಪ್ರಸಾದ".
"ಶಿವಯೋಗದ ಲಿಂಗಾಂಗ ಸಾಮರಸ್ಯದ
ಆನಂದದ ತುಟ್ಟತುದಿ ತಲುಪುವುದೇ 
ಅನುಭಾವಪ್ರಸಾದ"
"ಲಿಂಗಾಂಗ ಸಾಮರಸ್ಯದ ಸ್ಥಿತಿ ಮುಟ್ಟಿದ ಶರಣನ  ಅನಂದಾನುಭವವೇ 
ಆನಂದಪ್ರಸಾದ" .
"ಪರಮಜ್ಞಾನ ವೈಚಾರಿಕ ಪ್ರಜ್ಞೆಯೇ ಅರಿವಿನ ಜ್ಞಾನಪ್ರಸಾದ".
"ಶರಣರ ಪ್ರಸನ್ನತೆಯ ಭಾವವೇ 
ಭಾವಪ್ರಸಾದ".
-✍️ Dr Prema Pangi 
#ಅಗ್ನಿಮುಟ್ಟಲು_ತೃಣವಗ್ನಿಯಪ್ಪುದು

Comments

Popular posts from this blog

ವಚನ ದಾಸೋಹ: ರೂಪನೆ ಕಂಡರು, ನಿರೂಪ ಕಾಣರು.

Ajna system

Shika chakra or Bindu chakra:Bindu visarga