ವಚನ ದಾಸೋಹ: ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನವೆಂಬ
ವಚನ ದಾಸೋಹ: ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನವೆಂಬ
#ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನವೆಂಬ ಪಂಚಕರಣಂಗಳಿರವ ಹೇಳಿಹೆ ಕೇಳಿರಯ್ಯಾ,
ಮನವೆಂಬುದು ಸಂಕಲ್ಪ ವಿಕಲ್ಪಕ್ಕೊಳಗಾಯಿತ್ತು
ಇಲ್ಲದುದ ಕಲ್ಪಿಸುವುದೆ ಸಂಕಲ್ಪ, ಇದ್ದುದನರಿಯದುದೆ ವಿಕಲ್ಪ,
ಕಲ್ಪಿಸಿ ರಚಿಸುವುದೆ ಬುದ್ಧಿಯಯ್ಯಾ,
ಕಲ್ಪಿಸಿ ಮಾಡುವುದು ಚಿತ್ತವಯ್ಯಾ,
ಮಾಡಿದುದಕ್ಕೆ ನಾನೆಂಬುದು ಅಹಂಕಾರವಯ್ಯಾ,
ಮಾಡುವ ನೀಡುವ ಭಾವ ಶಿವಕೃತ್ಯವೆಂದಡೆ ಜ್ಞಾನ ವೈರಾಗ್ಯವಯ್ಯಾ,
ಅರಿಯದ ಅರಿವು ಮಹಾಜ್ಞಾನ, ಮೋಕ್ಷದ ಇರವು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ
- ಶಿವಯೋಗಿ ಸಿದ್ಧರಾಮೇಶ್ವರರು
*Translation*:
Listen Oh Ayya! I am talking about Mind, Intellect, Chitta, Ego and Knowledge which are the the five Anthakaranas.
The mind is subjected to Sankalpa (resolution) and Vikalpa (doubt)!
Thinking and imagining of that ‘which is not present now’ is Sankalpa,
Not knowing ‘that which is present’ is Vikalpa!
Making the thoughts come true is Intellect, Ayya!
Putting the thoughts into action is Chitta, Ayya!
Saying that ‘I did it’ is Ego, Ayya!
Considering all doing and giving as divine work, is Renunciation and Knowledge, Ayya!
Awareness of not knowing that I know is the greatest knowledge and the state of Liberation, you see Ayya! KapilaSiddaMallikarjuna!
*ಅರ್ಥ*:
ಇಲ್ಲಿ ಸಿದ್ಧರಾಮೇಶ್ವರರು ಐದು ಅಂತಃಕರಣಗಳನ್ನು ವಿವರಿಸುತ್ತ ಭಾವಲಿಂಗ ಪೂಜೆಯ ಆತ್ಮಜ್ಞಾನದ (ಆತ್ಮನ ಅರಿಯುವಿಕೆ) ಕೊನೆಯ ಮೆಟ್ಟಿಲುಗಳನ್ನು ಸ್ಪಷ್ಟಪಡಿಸುತ್ತಿದ್ದಾರೆ. ಸಾಮಾನ್ಯವಾಗಿ 'ಅಂತಃಕರಣ ಚತುಷ್ಟಯ' ಗಳೆಂದು ಹೇಳುವ ಇವು ಮನ, ಬುದ್ಧಿ, ಚಿತ್ತ, ಅಹಂಕಾರಗಳು. ಇಲ್ಲಿ ಶಿವಯೋಗಿ ಸಿದ್ಧರಾಮೇಶ್ವರರು ಮಹಾಜ್ಞಾನವನ್ನು ಸೇರಿಸಿ ಇವನ್ನು ಐದಾಗಿಸಿದ್ದಾರೆ. ಮನ, ಬುದ್ಧಿ, ಚಿತ್ತ, ಅಹಂಕಾರ ಮತ್ತು ಮಹಾಜ್ಞಾನ ಇವುಗಳು ನಮ್ಮಲ್ಲಿ ಇರುವ ರೀತಿಯನ್ನು ನಮ್ಮ ಮನಸ್ಸು ಕಾರ್ಯ ಮಾಡುವ ಬಗೆಯನ್ನು ತಿಳಿಸುತ್ತಾರೆ. ಮನದ ಚಲನವಲನಗಳು ನೂರಾರು. ಮನವು ಯಾವಾಗಲೂ ಒಂದೇ ತರಹ ಇರುವುದಿಲ್ಲ. ಅದು ಸಂಕಲ್ಪ ಮತ್ತು ವಿಕಲ್ಪಗಳಿಗೆ ಒಳಗಾಗುತ್ತದೆ.
ಸಂಕಲ್ಪ:
ಸಂಕಲ್ಪವೆಂದರೆ, ತಾನು ಏನೋ ಮಾಡಬೇಕೆಂದು ಧೃಡವಾಗಿ ನಿರ್ಧರಿಸುವುದು. ಅಂದರೆ ತನ್ನಲ್ಲಿ ಇಲ್ಲದೆ ಇರುವುದನ್ನು ಮಾಡಬೇಕೆಂದು ತೀರ್ಮಾನಿಸುವುದು. ಇದನ್ನೇ ಶಿವಯೋಗಿ ಸಿದ್ಧರಾಮರು ಇಲ್ಲದುದನ್ನು ಕಲ್ಪಿಸುವುದು ಎನ್ನುತ್ತಾರೆ. ತನ್ನಲ್ಲಿ ಇಂತಹುದು ಇಲ್ಲ, ಆದ್ದರಿಂದ ಅದನ್ನು ತಾನು ಸಾಧಿಸಬೇಕು ಎನ್ನುವುದು ಸಂಕಲ್ಪ.
ವಿಕಲ್ಪ :
ವಿಕಲ್ಪ ಎಂದರೆ, ಅನುಮಾನ, ಸಂದಿಗ್ಧತೆ, ಸಂದೇಹ. ಅಂದರೆ ತನ್ನಲ್ಲಿ ಇರುವುದನ್ನು ಅರಿಯದೆ ಇರುವುದು. ತನ್ನಲ್ಲಿ ಇದೆಯೋ ಇಲ್ಲವೋ ಅಂದುಕೊಳ್ಳುವುದು, ತನ್ನಲ್ಲಿ ಇರುವುದನ್ನು ನಿರ್ದಿಷ್ಟವಾಗಿ, ಸ್ಪಷ್ಟವಾಗಿ ತಿಳಿಯದೆ ಇರುವುದು ವಿಕಲ್ಪ.
ಬುದ್ಧಿ :
“ಇದು ಹೀಗಿರಬೇಕು” ಎಂದು ಕಲ್ಪಿಸಿಕೊಂಡು ಅದರ ಚಿತ್ರವನ್ನು ರಚಿಸುವುದೆ ಬುದ್ಧಿ.
ಚಿತ್ತ:
ಬುದ್ಧಿಯಿಂದ ಕಲ್ಪಿಸಿಕೊಂಡುದನ್ನು ಮಾಡುವುದೇ ಚಿತ್ತ ಎನ್ನುತ್ತಾರೆ. ಕಲ್ಪಿಸಿಕೊಂಡದ್ದನ್ನೆಲ್ಲ ಯಾವಾಗಲೂ ಮಾಡಲಾಗುವುದಿಲ್ಲ. ಆದರೆ ಹಾಗೆ ಮಾಡಿದಾಗ ಕೂಡಲೆ “ನಾನು ಮಾಡಿದೆ” ಎಂಬ ಭಾವ ಹುಟ್ಟುತ್ತದೆ.
ಅಹಂಕಾರ:
ನಾನು ಮಾಡಿದೆ ಎಂದು ಕೊಳ್ಳುವುದೇ ಅಹಂಕಾರ.
ಜ್ಞಾನ ವೈರಾಗ್ಯ:
ನಾನು ಮಾಡಿದೆ, ನಾನು ನೀಡಿದೆ ಎಂಬ ಭಾವವನ್ನು ಬಿಟ್ಟು ಎಲ್ಲವೂ ಶಿವನ ಕೃತ್ಯ, ಎಲ್ಲವೂ ಶಿವನ ಇಚ್ಛೆ, ಎಲ್ಲವೂ ಶಿವನ ಚಿತ್ತ ಎಂದು ತಿಳಿದರೆ ಅದು ಜ್ಞಾನ ವೈರಾಗ್ಯವಾಗುತ್ತದೆ.
ಮಹಾಜ್ಞಾನ (Divine knowledge):
ನನಗೆ ಅರಿವು ಉಂಟಾಗಿದೆ ಎಂದು ಅರಿಯದಿರುವುದೇ, ಅಂದರೆ ಅಹಂಕಾರರಹಿತವಾಗಿರುವುದೇ ಮಹಾಜ್ಞಾನ, ಅದೇ ಮೋಕ್ಷದ ಲಕ್ಷಣ ಎನ್ನುತ್ತಾರೆ ಸಿದ್ಧರಾಮೇಶ್ವರರು.
*ವಚನ ಚಿಂತನೆ* :
ಶಿವಯೋಗಿ ಸಿದ್ಧರಾಮೇಶ್ವರರು ಐದು ಅಂತಃಕರಣಗಳಲ್ಲಿಯು ಸೂಕ್ಷ್ಮ ವ್ಯತ್ಯಾಸಗಳನ್ನು, ಅವುಗಳ ಗುಣ ಲಕ್ಷಣಗಳನ್ನು ತಿಳಿಸುತ್ತಾರೆ. ಇದರಿಂದ ನಾವು ಪ್ರತಿ ಹಂತದಲ್ಲಿಯೂ ನಮ್ಮ ನಮ್ಮ ಭಾವನೆಗಳನ್ನು, ನಮ್ಮ ಮನದ ಚಲನವಲನಗಳನ್ನು ಗಮನಿಸಿಕೊಂಡು ಮನ, ಬುದ್ಧಿ, ಚಿತ್ತ, ಅಹಂಕಾರ, ಜ್ಞಾನಗಳನ್ನು ಗುರುತಿಸಿಕೊಳ್ಳಲು ಮತ್ತು ಆ ಮೂಲಕ ಆತ್ಮೋನ್ನತಿಯ ಹಾದಿ ಹಿಡಿಯಬೇಕು.
ಮನೋ ನಿಗ್ರಹ:
ನಮಗೆ ಆರೋಗ್ಯಕರ ಆಹಾರ ಯಾವುದೆಂದು ಗೊತ್ತಿದೆ. ಆದರೆ ಅದನ್ನು ಅನುಸರಿಸಲು ನಮಗೆ ಕಷ್ಟವಾಗುತ್ತದೆ. ನಾವು ಪ್ರತಿದಿನ ಯೋಗ, ವ್ಯಾಯಾಮ ಮಾಡಲು ಬಯಸುತ್ತೇವೆ. ಆದರೆ ಕಷ್ಟವಾಗುತ್ತದೆ. ನಮಗೆ ಆರೋಗ್ಯಕರ ಜೀವನ ನಡೆಸುವ ಮಾರ್ಗ ಗೊತ್ತಿದೆ. ಆದರೆ ಅದನ್ನು ಮುಂದುವರಿಸಲು ನಮಗೆ ಕಷ್ಟವಾಗುತ್ತದೆ. ಅದು ಏಕೆ?
ಅದಕ್ಕಾಗಿ ನಮ್ಮ ನಿರ್ಧಾರ ತೆಗೆದುಕೊಳ್ಳುವ ಒಟ್ಟು ಮನಸ್ಸಿನ ಪ್ರಕ್ರಿಯೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನಮಗೆ ತಿಳಿದಿದ್ದರೆ, ನಾವು ಅದನ್ನು ಉತ್ತಮವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ.
ಮನಸ್ಸು : ನಾವು, ವಿವಿಧ ಸಂವೇದನಾ ಅಂಗಗಳು, ಕೈಗಳು ಮತ್ತು ಕಾಲುಗಳೊಂದಿಗೆ ಭೌತಿಕ ದೇಹವನ್ನು ಹೊಂದಿದ್ದೇವೆ. ಆದರೆ ದೇಹವನ್ನು ನಿಯಂತ್ರಿಸುವದು ಮನಸ್ಸು. ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಮನಸ್ಸು ಹೇಳುತ್ತದೆ ಮತ್ತು ವಿವಿಧ ಸಂವೇದನಾ ಅಂಗಗಳ ಮೂಲಕ ಆನಂದವನ್ನು ಅನುಭವಿಸುತ್ತದೆ. ಮನಸ್ಸು ಚಂಚಲ, ಪ್ರಕ್ಷುಬ್ಧ, ಹಠಮಾರಿ ಮತ್ತು ಅತ್ಯಂತ ಬಲಶಾಲಿಯಾಗಿದೆ ಮತ್ತು ಅದನ್ನು ನಿಗ್ರಹಿಸುವುದು ಗಾಳಿಯನ್ನು ನಿಯಂತ್ರಿಸುವುದಕ್ಕಿಂತ ಹೆಚ್ಚು ಕಷ್ಟಕರವೆಂದು ತೋರುತ್ತದೆ.
ಆದರೆ ಮನಸ್ಸು ಹತೋಟಿಯಲ್ಲಿದ್ದಾಗ ಅದೇ ಮನಸ್ಸು ಆತ್ಮೀಯ ಗೆಳೆಯನಾಗಬಹುದು
ಮನಸ್ಸನ್ನು ಗೆದ್ದವನಿಗೆ ಮನಸ್ಸೇ ಆತ್ಮೀಯ ಗೆಳೆಯ; ಆದರೆ ಹಾಗೆ ಮಾಡಲು ವಿಫಲನಾದವನಿಗೆ ಅವನ ಮನಸ್ಸು ದೊಡ್ಡ ಶತ್ರುವಾಗಿ ಉಳಿಯುತ್ತದೆ.
ನಾವು ಏನು ಮಾಡಬೇಕು ಮತ್ತು ಏನು ಮಾಡಬಾರದು, ಹೇಗೆ ವರ್ತಿಸಬೇಕು ಎಂದು ನಮ್ಮ ಬುದ್ಧಿಯು ಮನಸ್ಸನ್ನು ನಿಯಂತ್ರಿಸುತ್ತದೆ.
ಬುದ್ಧಿ : ಬುದ್ಧಿಶಕ್ತಿಯು ಮನಸ್ಸನ್ನು ನಿಯಂತ್ರಿಸುವ ಅಸ್ತ್ರವಾಗಿದೆ
ನಿಸ್ಸಂದೇಹವಾಗಿ ಚಂಚಲ ಮನಸ್ಸನ್ನು ನಿಗ್ರಹಿಸುವುದು ಬಹಳ ಕಷ್ಟ, ಆದರೆ ಸೂಕ್ತ ಅಭ್ಯಾಸ ಮತ್ತು ನಿರ್ಲಿಪ್ತತೆಯಿಂದ ಅದು ಸಾಧ್ಯ. ಬುದ್ಧಿವಂತರು ಬುದ್ಧಿವಂತಿಕೆಯ ಮೂಲಕ ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ.
ಅಹಂ: ಇದು ಜೀವಂತ ಅಸ್ತಿತ್ವದ ಗುರುತು. ಭೌತಿಕ ಜಗತ್ತಿನಲ್ಲಿ ಮಾತ್ರ, ಆದರೆ ಆತ್ಮದ ಗುರುತು ಅಲ್ಲ .ಇಂದ್ರಿಯಗಳಿಗಿಂತ ಮನಸ್ಸು ಉನ್ನತವಾಗಿದೆ; ಮನಸ್ಸಿಗಿಂತ ಬುದ್ಧಿವಂತಿಕೆಯು ಉನ್ನತವಾಗಿದೆ ; ಮತ್ತು ಆತ್ಮವು ಬುದ್ಧಿವಂತಿಕೆಗಿಂತ ಉನ್ನತವಾಗಿದೆ.
ಆತ್ಮ: ಇದು ಆಧ್ಯಾತ್ಮಿಕ ಮತ್ತು ಜೀವಂತ ಅಸ್ತಿತ್ವದ ನೈಜ ಗುರುತು. ಇದು ನಿಮ್ಮೊಳಗಿನ ನಿಜವಾದ ನೀವು. ಆ ನಿಜವಾದದನ್ನು ಕಂಡುಹಿಡಿಯುವುದು ಎಲ್ಲಾ ಜ್ಞಾನಮಾರ್ಗಗಳ ಗುರಿಯಾಗಿದೆ. ಆತ್ಮನು ನಮ್ಮ ಒಟ್ಟು ಶರೀರ ವ್ಯವಸ್ಥೆಯ ನಿಜವಾದ ಮುಖ್ಯಸ್ಥ.
#ಆತ್ಮಾನ್ ರಥಿನಂ ವಿದ್ಧಿ ಶರೀರಂ ರಥಮೇವ ತು । ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ಚ ।।
ಇಂದ್ರಿಯಾಣಿ ಹಯಾನಾಹುರ್ವಿಷಯಾಂ ಸ್ತೇಷು ಗೋಚರಾನ್ । ಆತ್ಮೇನ್ದ್ರಿಯಮನೋಯುಕ್ತಂ ಭೋಕ್ತೇತ್ಯಾಹುರ್ಮನೀಷಿಣಃ ।।
- ಕಥಾ-ಉಪನಿಷದ್ (1.3.3-4)
ಆತ್ಮನು ರಥದ ಯಜಮಾನ, ದೇಹವು ರಥ, ಬುದ್ಧಿಯು ಸಾರಥಿ, ಮತ್ತು ಮನಸ್ಸು ಲಗಾಮು, ಸಂವೇದನಾ ಅಂಗಗಳು ಕುದುರೆಗಳು. ಆತ್ಮನು ರಥದ ಯಜಮಾನ, ದೇಹವು ರಥ, ಬುದ್ಧಿಯು ಸಾರಥಿ, ಮತ್ತು ಮನಸ್ಸು ಲಗಾಮು, ಸಂವೇದನಾ ಅಂಗಗಳು ಕುದುರೆಗಳು. ಹೀಗೆ ಆತ್ಮನು ಈ ದೇಹವೆಂಬ ರಥದಲ್ಲಿ ತನ್ನ ಬುದ್ಧಿಶಕ್ತಿಯನ್ನು ಸಾರಥಿ ಯಾಗಿ ಮಾಡಿಕೊಂಡು ಇಂದ್ರಿಯಗಳಿಂದ ಚಲಿತ ವಿರುವ ಮನಸ್ಸನ್ನು ನಿಯಂತ್ರಿಸುತ್ತಾನೆ.
- ✍️Dr Prema Pangi
#ಮನ_ಬುದ್ಧಿ_ಚಿತ್ತ_ಅಹಂಕಾರ_ಜ್ಞಾನವೆಂಬ
Comments
Post a Comment