ವಚನ ದಾಸೋಹ :ಸಾಕಾರ ಹದಿನೆಂಟು ಸ್ಥಲ, ಅಂಗದಲ್ಲಿ

ವಚನ ದಾಸೋಹ :
ಸಾಕಾರ ಹದಿನೆಂಟು ಸ್ಥಲ, ಅಂಗದಲ್ಲಿ
ವಚನ:
ಸಾಕಾರ ಹದಿನೆಂಟು ಸ್ಥಲ, ಅಂಗದಲ್ಲಿ ಆಚರಿಸುತ್ತ ಅಲ್ಲಲ್ಲಿಗೆ ಭಕ್ತಿ, ಅಲ್ಲಲ್ಲಿಗೆ ಮಹೇಶ್ವರ, ಅಲ್ಲಲ್ಲಿಗೆ ಪ್ರಸಾದಿಯಾಗಿಪ್ಪ ಆ ಸಾಕಾರವೇನೆಂದು ಉಪಸುವೆನಯ್ಯಾ?
ನಿರಾಕಾರ ಹದಿನೆಂಟು ಸ್ಥಲವ ಆತ್ಮನಲ್ಲಿ ಆಚರಿಸುತ್ತ ಅಲ್ಲಲ್ಲಿಗೆ ಪ್ರಾಣಲಿಂಗಿ, 
ಅಲ್ಲಲ್ಲಿಗೆ ಶರಣ, ಅಲ್ಲಲ್ಲಿಗೆ ಐಕ್ಯನಾಗಿರ್ಪ ಆ ನಿರಾಕಾರವನೇನೆಂದು ಉಪಮಿಸುವೆನಯ್ಯ? 
ಆ ಸಾಕಾರ ಹದಿನೆಂಟು ಸ್ಥಲವ ಅಂಗದಲ್ಲಿ ಆಚರಿಸುವುದು ಭಕ್ತಸ್ಥಲ,
ಆ ನಿರಾಕಾರ ಹದಿನೆಂಟು ಸ್ಥಲ ಆತ್ಮನಲ್ಲಿ ಆಚರಿಸುವುದು ಜಂಗಮ ಸ್ಥಲ.
ಇಂತೀ ಉಭಯ ಸ್ಥಲ ಒಂದಾಗಿ ನಿಂದ ನಿಜದ ನಿಲವು ನಮ್ಮ ಕೂಡಲ ಸಂಗಯ್ಯನಲ್ಲಿ ಲಿಂಗೈಕ್ಯವು. 
- ಗುರು ಬಸವಣ್ಣನವರು
*ಅರ್ಥ*:
ಶಿವಯೋಗ ಎಂಬುದು ಸಾಧಕ ಶಿವನೇ ಆಗಿ ವಿಕಾಸಗೊಳ್ಳುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಅನುಸರಿಸುವ ಪಥವೇ ಷಟ್ಸ್ಥಲ.
ಷಟ್ಸ್ಥಲ ವೆಂದರೆ ಸಾಧಕ ಅಜ್ಞಾನ ಸ್ಥಿತಿಯಿಂದ ಪರಮ ಸುಜ್ಞಾನ ಸ್ಥಿತಿಯೆಡೆಗೆ ತಲುಪಲು ಅನುಸರಿಸಬೇಕಾದ ದಿವ್ಯಪಥ. ಸ್ಥಲ ಎನ್ನುವ ಪದಕ್ಕೆ ಸ್ಥಾನ, ಮೆಟ್ಟಿಲು ಎಂಬ ಅರ್ಥವಿದೆ. ಸ್ಥಲವೆಂದರೆ ಈ ಪಥದಲ್ಲಿ ನಿರ್ಮಿತವಾದ ವಿವಿಧ ಹಂತಗಳು ಅಥವಾ ಮೆಟ್ಟಿಲುಗಳು. ಈ ಹಂತಗಳು ಆರು, ಒಟ್ಟಾರೆ ಇವನ್ನು ಷಟ್ಸ್ಥಲಗಳೆಂದು ಸೂಚಿಸುವುದು ರೂಢಿ. ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯಗಳೇ ಇವು. 
ಷಟ್ಸ್ಥಲ ವಿಂಗಡನೆ ವಿಪುಲವಾದ ವೈವಿಧ್ಯವನ್ನು ಪಡೆದಿದೆ. ಷಟ್ಸ್ಥಲಗಳನ್ನು ಒಂದು ಕಡೆ ಹದಿನೆಂಟು, ಮೂವತ್ತಾರು, ಇನ್ನೂರ ಹದಿನಾರು ಸ್ಥಳಗಳ ವಿವೇಚನೆಯೂ ಇದೆ. ಏಕೋತ್ತರ ಷಟ್ಸ್ಥಲ (ನೂರೊಂದು ಸ್ಥಲ) ಗಳಂತೂ ಪ್ರಸಿದ್ಧವಾಗಿವೆ. 
*36 ಸ್ಥಲಗಳು*:
 ಮೂವತ್ತಾರು ಸ್ಥಲಗಳ ವಿಭಾಗಕ್ರಮ ವಚನಶಾಸ್ತ್ರದಲ್ಲಿ ವಿಪುಲವಾಗಿ ಬರುತ್ತದೆ. ಇದರ ಹಿಂದಿರುವ ತತ್ವ ಗಮನಾರ್ಹವಾದುದು. ಭಕ್ತಸ್ಥಲದಿಂದ ಮಹೇಶ್ವರ ಸ್ಥಲಕ್ಕೆ ಮತ್ತು ಅಲ್ಲಿಂದ ಮುಂದೆ ಇತರ ಸ್ಥಲಗಳಿಗೆ ಸಾಧಕ ಮುನ್ನಡೆಯುತ್ತಿರುವಾಗ ಗೆರೆ ಕೊರೆದಂತೆ ಅದನ್ನು ವಿಭಜಿಸಿ ಸಾಧಕನನ್ನು ಯಾವುದೇ ಒಂದು ಸ್ಥಲಕ್ಕೆ ಮಾತ್ರ ಸೀಮಿತಗೊಳಿಸಲಾಗುವುದಿಲ್ಲ. ಭಕ್ತಸ್ಥಲದಲ್ಲಿರುವಾಗಲೇ ಮಹೇಶನ ಅಂಶಗಳು ಗೋಚರವಾಗಬಹುದು; ಪ್ರಸಾದಿ ಪ್ರಾಣಲಿಂಗಿಗಳು ಕಾಣಬಹುದು. ಅಂತೆಯೇ ಮುಂದಿನ ಸ್ಥಲಕ್ಕೆ ಹೋದಮೇಲೆ ಹಿಂದಿನದು ಬಿಟ್ಟು ಹೋಗುತ್ತದೆಂದೂ ಹೇಳುವಂತಿಲ್ಲ. ಮಹೇಶನ ಸ್ಥಲದಲ್ಲಿ ಭಕ್ತಸ್ಥಲವೂ ಅಡಕವಾಗಿರುತ್ತದೆ. ಈ ತಾತ್ವಿಕ ದೃಷ್ಟಿಯಿಂದ ಆರು ಸ್ಥಳಗಳಲ್ಲಿ ಒಂದೊಂದನ್ನು ಮತ್ತೆ ಆರು ಆರು ಸ್ಥಲಗಳನ್ನಾಗಿ ವಿಭಾಗಿಸಲಾಗಿದೆ.
೧. ಭಕ್ತಸ್ಥಲದಲ್ಲಿ : ಭಕ್ತನಭಕ್ತ, ಭಕ್ತನ ಮಹೇಶ, ಭಕ್ತನ ಪ್ರಸಾದಿ, ಭಕ್ತನ ಪ್ರಾಣಲಿಂಗಿ, ಭಕ್ತನ ಶರಣ, ಭಕ್ತನ ಐಕ್ಯ.
೨ ಮಹೇಶ ಸ್ಥಲದಲ್ಲಿ : ಮಹೇಶನ ಮಹೇಶ, ಮಹೇಶನ ಭಕ್ತ, ಮಹೇಶನ ಪ್ರಸಾದಿ, ಮಹೇಶನ ಪ್ರಾಣಲಿಂಗಿ, ಮಹೇಶನ ಶರಣ, ಮಹೇಶನ ಐಕ್ಯ,
೩ ಪ್ರಸಾದಿ ಸ್ಥಲದಲ್ಲಿ : ಪ್ರಸಾದಿಯ ಪ್ರಸಾದಿ, ಪ್ರಸಾದಿಯ ಭಕ್ತ, ಪ್ರಸಾದಿಯ ಮಹೇಶ, ಪ್ರಸಾದಿಯ ಪ್ರಾಣಲಿಂಗಿ, ಪ್ರಸಾದಿಯ ಶರಣ, ಪ್ರಸಾದಿಯ ಐಕ್ಯ
೪, ಪ್ರಾಣಲಿಂಗಿ ಸ್ಥಲದಲ್ಲಿ : ಪ್ರಾಣಲಿಂಗಿಯ ಪ್ರಾಣಲಿಂಗಿ, ಪ್ರಾಣಲಿಂಗಿಯ ಭಕ್ತ, ಪ್ರಾಣಲಿಂಗಿಯ ಮಹೇಶ, ಪ್ರಾಣಲಿಂಗಿಯ ಪ್ರಸಾದಿ, ಪ್ರಾಣಲಿಂಗಿಯ ಶರಣ, ಪ್ರಾಣಲಿಂಗಿಯ ಐಕ್ಯ,
೫. ಶರಣ ಸ್ಥಲದಲ್ಲಿ : ಶರಣನ ಶರಣ, ಶರಣನ ಭಕ್ತ, ಶರಣನ ಮಹೇಶ, ಶರಣನ ಪ್ರಸಾದಿ, ಶರಣನ ಪ್ರಾಣಲಿಂಗಿ, ಶರಣನ ಐಕ್ಯ.
೬. ಐಕ್ಯ ಸ್ಥಲದಲ್ಲಿ : ಐಕ್ಯನ ಐಕ್ಯ, ಐಕ್ಯನ ಭಕ್ತ, ಐಕ್ಯನ ಮಹೇಶ, ಐಕ್ಯನಪ್ರಸಾದಿ, ಐಕ್ಯನ ಪ್ರಾಣಲಿಂಗಿ, ಐಕ್ಯನ ಶರಣ. ಹೀಗೆ ಒಟ್ಟು ಮೂವತ್ತಾರು ಸ್ಥಲಗಳಾಗುತ್ತವೆ. ಮೂವತ್ತಾರು ಸ್ಥಲಗಳ ಕ್ರಮ ಹೆಚ್ಚು ಪ್ರಚಲಿತವಾಯಿತು. ಬಸವಾದಿ ಶರಣರ ವಚನಗಳಲ್ಲಿ ಹೆಚ್ಚು ಪಾಲು ಈ ಕ್ರಮದಲ್ಲಿಯೇ ಅಳವಟ್ಟಿವೆ. 

ಇವುಗಳಲ್ಲಿ ಷಟ್ಸ್ಥಲದ ಮೊದಲನೆಯ ಮೂರು ಭಕ್ತ, ಮಹೇಶ್ವರ, ಪ್ರಸಾದಿ  ಸ್ಥಲಗಳಲ್ಲಿ ಬರುವ ವಿಭಾಗಗಳನ್ನು ಸಾಕಾರ ಹದಿನೆಂಟು ಸ್ಥಲಗಳೆಂದೂ, ಷಟ್ಸ್ಥಲದ ಕೊನೆಯ ಮೂರು ಪ್ರಾಣಲಿಂಗಿ, ಶರಣ, ಐಕ್ಯ ಸ್ಥಲಗಳಲ್ಲಿ ಬರುವ ವಿಭಾಗಗಳನ್ನು ನಿರಾಕಾರ ಹದಿನೆಂಟು ಸ್ಥಲಗಳೆಂದೂ ಕರೆಯಲಾಗಿದೆ. 36 ಸ್ಥಲಗಳ ವಿಭಾಗಕ್ರಮ ತನುತ್ರಯಗಳ ಆಧಾರದ ಮೇಲೆ ಉಂಟಾದುದು. ಸ್ಥೂಲ, ಸೂಕ್ಷ್ಮ, ಕಾರಣ ಎಂಬ ಮೂರು ಕಾಯಗಳ ಆಚರಣೆಗೆ ಸಂಬಂಧಿಸಿದಂತೆ ಒಂದೊಂದು ಸ್ಥಲವೂ ಮೂರು ಭಾಗಗಳಾಗಿ  ಅಂಗಸ್ಥಲಗಳಲ್ಲಿ 18,  ಲಿಂಗಸ್ಥಲಗಳಲ್ಲಿ 18, ವಿಭಾಗಗಳಾಗಿ ಪರಿಣಮಿಸುತ್ತವೆ. 36 ಸ್ಥಲ ಗಳನ್ನು ಭಕ್ತಸ್ಥಲ, ಜಂಗಮಸ್ಥಲ ಎಂದು ಎರಡು ಮುಖ್ಯ ವಿಭಾಗಗಳನ್ನು ಮಾಡಿದ್ದಾರೆ. ಸಾಕಾರ ಹದಿನೆಂಟು ಸ್ಥಲಗಳನ್ನು ಅಂಗದಲ್ಲಿ ಆಚರಿಸುವುದು ಭಕ್ತಸ್ಥಲ.
ಆ ನಿರಾಕಾರ ಹದಿನೆಂಟು ಸ್ಥಲಗಳನ್ನು ಆತ್ಮನಲ್ಲಿ ಆಚರಿಸುವುದು ಜಂಗಮ ಸ್ಥಲ.
ಹೀಗೆ ಹದಿನೆಂಟು ಸ್ಥಲಗಳಲ್ಲಿ ಸಾಕಾರ ಪೂಜೆ, ಮುಂದಿನ ಹದಿನೆಂಟು ಸ್ಥಲಗಳಲ್ಲಿ ನಿರಾಕಾರ ಪೂಜೆಗಳಿಗೆ ಅನ್ವಯವಾಗುತ್ತದೆ.

ಹೀಗೆ ಅಂಗದಲ್ಲಿ ಶಿವಯೋಗ ಆಚರಿಸುತ್ತ ಅಲ್ಲಲ್ಲಿಗೆ ಭಕ್ತಿ, ಅಲ್ಲಲ್ಲಿಗೆ ಮಹೇಶ್ವರ, ಅಲ್ಲಲ್ಲಿಗೆ ಪ್ರಸಾದಿಯಾಗುವ ಆ ಸಾಕಾರವೇನೆಂದು ವರ್ಣಿಸಲಿ ಅಯ್ಯಾ? 
ಕೊನೆಯ ಹದಿನೆಂಟು ಸ್ಥಲವ ಆತ್ಮನಲ್ಲಿ ಆಚರಿಸುತ್ತ ಅಲ್ಲಲ್ಲಿಗೆ ಪ್ರಾಣಲಿಂಗಿ, ಅಲ್ಲಲ್ಲಿಗೆ ಶರಣ, ಅಲ್ಲಲ್ಲಿಗೆ ಐಕ್ಯನಾಗಿರ್ಪ ಆ ನಿರಾಕಾರವನೇನೆಂದು ವರ್ಣಿಸಲು ಅಯ್ಯಾ? ಈ ಸಾಕಾರ ನಿರಾಕಾರ ಸ್ಥಲಗಳನ್ನು ಯಾವುದಕ್ಕಾದರು ಹೋಲಿಸಿ ವರ್ಣಿಸಲು ಸಾಧ್ಯವೇ? ಎನ್ನುತ್ತಾರೆ ಗುರು ಬಸವಣ್ಣನವರು.
ಈ ಉಭಯಸ್ಥಲಗಳಾದ 18 ಭಕ್ತಸ್ಥಲಗಳು ಮತ್ತು 18 ಜಂಗಮಸ್ಥಲಗಳು ಸಮರಸವಾಗಿ ಒಂದಾಗಿ ನಿಂತ ನಿಜದ ನಿಲುವೇ ಲಿಂಗೈಕ್ಯಸ್ಥಲ ವೆಂದು ವಿವರಿಸುತ್ತಾರೆ ಗುರು ಬಸವಣ್ಣನವರು.
- ✍️Dr Prema Pangi 
#ಸಾಕಾರ_ಹದಿನೆಂಟು_ಸ್ಥಲ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma