ವಚನ ದಾಸೋಹ : ನಡೆವ ನುಡಿವ ಚೈತನ್ಯವುಳ್ಳನಕ್ಕ ಒಡಲ
ವಚನ ದಾಸೋಹ : ನಡೆವ ನುಡಿವ ಚೈತನ್ಯವುಳ್ಳನಕ್ಕ ಒಡಲ
#ನಡೆವ ನುಡಿವ ಚೈತನ್ಯವುಳ್ಳನಕ್ಕ ಒಡಲ ಗುಣಂಗಳಾರಿಗೂ ಕಾಣವು.
ನೋಡುವ ನಯನ, ಕೇಳುವ ಶೋತ್ರ, ವಾಸಿಸುವ ಘ್ರಾಣ, ಮುಟ್ಟವ ತ್ವಕ್ಕು, ರುಚಿಸುವ ಜಿಹ್ವೆ ತಾಗಿತ್ತೆನಬೇಡ.
ನೋಡುತ್ತ ಕೇಳುತ್ತ ವಾಸಿಸುತ್ತ ಮುಟ್ಟುತ್ತ ರುಚಿಸುತ್ತ, ಲಿಂಗಾರ್ಪಿತವಮಾಡಿ ಲಿಂಗಭೋಗೋಪಭೋಗಿಯಾದ ಪ್ರಸಾದಿಗಳಿಗೆ ಸರ್ವಾಂಗಶುದ್ಧವೆಂಬುದಿದೆಯಯ್ಯಾ. ಕಾಯತ್ರಯಂಗಳ ಜೀವತ್ರಯಂಗಳ ಭಾವತ್ರಯಂಗಳನೊಂದು ಮಾಡಿ, ಸುಖ-ದುಃಖ, ಗುಣ-ನಿರ್ಗುಣಂಗಳೆಂಬ ಉಭಯವ, ಲಿಂಗದಲ್ಲಿ ಏಕವ ಮಾಡಿ, ಅಹುದು ಅಲ್ಲ, ಬೇಕು ಬೇಡೆಂಬ ಸಂಶಯವ ಕಳೆದು, ಕೂಡಲಚೆನ್ನಸಂಗನ ಆದಿಯ ಪುರಾತನರು ಮಾಡಿದ ಪಥವಿದು.
- ಅವಿರಳ ಜ್ಞಾನಿ ಚೆನ್ನಬಸವಣ್ಣನವರು
*ಅರ್ಥ*:
ನಡೆಯುವ ನುಡಿಯುವ ಚೈತನ್ಯಯುಕ್ತ ಒಡಲ ಗುಣಗಳು ಯಾರಿಗೂ ಕಾಣಿಸದು.
ಪಂಚೇಂದ್ರಿಯಗಳಾದ ಕಣ್ಣು, ಕಿವಿ, ನಾಲಗೆ, ಮೂಗು, ತ್ವಕ್ಕುಗಳು ಇವುಗಳ ವಿಷಯಗಳಾದ ನೋಡುವ ನಯನ, ಕೇಳುವ ಶೋತ್ರ, ವಾಸಿಸುವ ಘ್ರಾಣ, ಮುಟ್ಟವ ತ್ವಕ್ಕು, ರುಚಿಸುವ ಜಿಹ್ವೆಗಳ ವಿಷಯಗಳು ತಟ್ಟುವುದಿಲ್ಲ.
ನೋಡುತ್ತ ಕೇಳುತ್ತ ವಾಸಿಸುತ್ತ ಮುಟ್ಟುತ್ತ ರುಚಿಸುತ್ತ, ಇವೆಲ್ಲದರ ಅನುಭವವನ್ನು ಲಿಂಗಾರ್ಪಿತವ ಮಾಡಿ ಭೋಗಿಸುವವರೆ ಪ್ರಸಾದಿಗಳು. ಲಿಂಗದಲ್ಲಿ ಅನನ್ಯಾನುಭವಿಯವಾಗಿ ಭಿನ್ನವಳಿದು "ಲಿಂಗಭೋಗೋಪಭೋಗಿ" ಯಾಗುತ್ತಾನೆ. ಸರ್ವವೂ ಶಿವನ ಪ್ರಸಾದವೆಂಬ ಭಾವದ ಪ್ರಸಾದಿ ಸ್ಥಲ ಇದು. ಇಂತಹ ಪ್ರಸಾದಿಗಳು ಎಲ್ಲವನ್ನು ಅನುಭವಿಸಿಯೂ ಸರ್ವಾಂಗಶುಧ್ಧಿಗಳು. ಕಾಯತ್ರಯ ಜೀವತ್ರಯ ಭಾವತ್ರಯಗಳನ್ನು ಒಂದಾಗಿಸಿ, ಸುಖ-ದುಃಖ, ಗುಣ-ನಿರ್ಗುಣ ಗಳೆಂಬ ಉಭಯ ದ್ವಂಧತ್ವವನ್ನು ತ್ಯಜಿಸಿದವರು. ಇಂಥ ಪ್ರಸಾದಿಗಳಿಗೆ ಸುಖ-ದುಃಖ ಎಲ್ಲವೂ ಒಂದೇ. ಎಲ್ಲವನ್ನೂ ಪ್ರಸಾದವೆಂದೇ ಸ್ವೀಕರಿಸುತ್ತಾರೆ. ಪ್ರಸಾದಿ ತತ್ವದ ನಿರ್ಲಿಪ್ತತೆ ಈ ಜಗತ್ತಿನಿಂದ ಆತನನ್ನು ಜೀವನ ವಿಮುಖನನ್ನಾಗಿ ಮಾಡುವುದಿಲ್ಲ. ಲಿಂಗದಲ್ಲಿ ಎಲ್ಲವನ್ನು ಸಮರ್ಪಿಸಿ, ಅಹುದು- ಅಲ್ಲ, ಬೇಕು ಬೇಡೆಂಬ ಸಂಶಯಗಳನ್ನು ಕಳೆದುಕೊಂಡು ಸರ್ವಾಂಗ ಪ್ರಸಾದಿಯಾಗುತ್ತಾನೆ. ಈ
ಸ್ಥಿತಿಪ್ರಜ್ಞೆ ಸಮನ್ವಯ ನೀತಿಯನ್ನು , ಅದರ ಪಥವನ್ನು ಪರಶಿವನ (ಕೂಡಲಚೆನ್ನಸಂಗನ) ಆದಿಯ ಪುರಾತನರು ತೋರಿದ್ದಾರೆ ಎನ್ನುತ್ತಾರೆ ಅವಿರಳ ಜ್ಞಾನಿ ಚೆನ್ನಬಸವಣ್ಣ ನವರು.
*ವಚನ ಚಿಂತನ*:
ಇದು ಪ್ರಸಾದಿಸ್ಥಲದ ವಚನ.
ಪ್ರಸಾದಿಸ್ಥಲ ಇದನ್ನು "ಅನಲಕಾಷ್ಠನ್ಯಾಯಸ್ಥಲ" ಎಂದು ಕರೆಯುತ್ತಾರೆ. ಇಲ್ಲಿಯ ಭಕ್ತಿಯು ಚಿತ್ತಶುದ್ಧಿಯ ಮೂಲಕ "ಅವಧಾನಭಕ್ತಿ" ಎನಿಸುತ್ತದೆ. ಕಾಷ್ಠಕ್ಕೆ ಸೋಂಕಿದ ಬೆಂಕಿಯು ಕಾಷ್ಠವನ್ನು ಹೊರಗೊಳಗೆ ಸಂಪೂರ್ಣವಾಗಿ ವ್ಯಾಪಿಸಿ ಸುಟ್ಟು ಹೇಗೆ ಕಾಷ್ಠದ ಗುಣಗಳನ್ನು ಕಳೆಯುತ್ತದೆಯೋ ಅದರಂತೆ ಈಶ್ವರ ಪ್ರೇಮವು (ಕೃಪೆಯು) ಇಲ್ಲಿ ಅವಧಾನವೆನಿಸಿ, ತ್ರಿಕರಣಗಳನ್ನು ವ್ಯಾಪಿಸಿ ಅಲ್ಲಿಯ ಶಬ್ದ, ಸ್ಪರ್ಶ ಮುಂತಾದ ತನ್ಮಾತ್ರೆಗಳಿಗೆ ವಿಷಯಗಳೆನಿಸಿದ ತ್ವಕ್, ಚಂದನಾದಿಗಳನ್ನು ಭಸ್ಮಗೊಳಿಸಿ, ಅವನ್ನು ಪ್ರಸಾದರೂಪವಾಗಿ ಪರಿವರ್ತಿಸುತ್ತದೆ. ಆಗ ಸಾಧಕನಲ್ಲಿ ಚಿತ್ತಪ್ರಸನ್ನತೆ ಮೂಡುತ್ತದೆ. ಅಂಥ ಭಕ್ತನ ವ್ಯವಹಾರವೆಲ್ಲ ಶಿವರೂಪ, ಅವನ ಆಚಾರ ಶಿವಾಚಾರ, ಆಗ ಅವನು "ಪ್ರಸಾದಕಾಯ" ನೆನಿಸುತ್ತಾನೆ.
ಕಾಯಕದಿಂದ ಬಂದಿದ್ದೆಲ್ಲವನ್ನೂ ಲಿಂಗಕ್ಕೆ ಅರ್ಪಿಸಿ ಕೈಕೊಳ್ಳುವುದು ಪ್ರಸಾದಿಯ ಒಂದು ಮುಖವಾದರೆ, ತನ್ನನ್ನೇ ಸಂಪೂರ್ಣವಾಗಿ ಲಿಂಗಕ್ಕೆ ಅರ್ಪಿಸಿಕೊಳ್ಳುವುದು ಇನ್ನೊಂದು ಮುಖ. ತನ್ನನ್ನು, ತನ್ನ ಕಾಯಕವನ್ನು ಲಿಂಗಕ್ಕೆ ಅರ್ಪಿಸಿ ಅದರಿಂದ ಬಂದಿದ್ದನ್ನು 'ಪ್ರಸಾದ' ವೆಂದು ಸ್ವೀಕರಿಸುವೆ ಎನ್ನುವ ಕಲ್ಪನೆಯನ್ನೂ ಮೀರಿ "ತರ್ಕಸಿ ನಿಮ್ಮುವವನಪ್ಪಿಕೊಂಡೊಡೆ ನಿಶ್ಚಯ ಪ್ರಸಾದ”ವೆಂದು "ಅಂಗ, ಪ್ರಾಣ, ಮನ, ಭಾವ, ಅರಿವುಗಳ ಅರ್ಪಣೆ" ಎನ್ನುವ ತುಂಬಾ ವ್ಯಾಪಕ ಹಂತಕ್ಕೆ ಅದು ಬೆಳೆಯುತ್ತ ಹೋಗುತ್ತದೆ.
ಈ ಸ್ಥಲದ ಭಕ್ತಿ ಅವಧಾನ ಭಕ್ತಿ.
*ಅವಧಾನ ಭಕ್ತಿ*:
ಅವಧಾನ ಅಂದರೆ ಗಮನ ಕೇಂದ್ರೀಕರಣ (ಅಟೆನ್ಷನ್). ಅವಧಾನವಿಡುವುದು ಎಂದರೆ, ಕಾರ್ಯೋನ್ಮುಖ ಸ್ಥಿತಿಯನ್ನು ಹೊಂದುವುದು. ಕೆಲವು ವಸ್ತುಗಳನ್ನು ಗ್ರಹಿಸಲು, ಕೆಲವು ಕೆಲಸಗಳನ್ನು ನಡೆಸಲು ಸಿದ್ಧವಾಗುವುದು-ಎಂದು
ಹೇಳಬಹುದು. ಪ್ರಜ್ಞಾವಸ್ಥೆಯಲ್ಲಿ ಮನಸ್ಸು ಎಲ್ಲ ಇಂದ್ರಿಯ ವಿಷಯಗಳ ಕಡೆಗೂ ಹರಿದಿರುತ್ತದಾದರೂ ಉದ್ದಿಷ್ಟ ವಿಷಯದಲ್ಲಿ ಮಾತ್ರ ವಿಶಿಷ್ಟವಾಗಿ ಕೆಲಸ ಮಾಡುತ್ತಿರುತ್ತದೆ. ಉಳಿದೆಲ್ಲ ವಿಷಯಗಳಲ್ಲಿ ಅದು ಅಷ್ಟು ಸ್ಪಷ್ಟವಾಗಿ ಗಮನ ಹರಿಸುವುದಿಲ್ಲ. ಗಮನದ ತೀವ್ರತೆ ಹೆಚ್ಚಿದಂತೆ ಅರಿವಿನ ತೀವ್ರತೆಯೂ ಹೆಚ್ಚಿಗೆ ಆಗುತ್ತದೆ.
ಎಲ್ಲ ಇಂದ್ರಿಯ ಶಕ್ತಿಗಳನ್ನೂ ಏಕೀಭವಿಸುವಂತೆ ಮಾಡಿ ಪ್ರಕೃತ ವಿಷಯದತ್ತ ಮಾತ್ರ ಉಪಯೋಗಿಸಿದಲ್ಲಿ ಅವಧಾನ ಅತಿ ತೀವ್ರವಾಗುತ್ತದೆ. ಇದನ್ನೇ ಚಿತ್ತೈಕಾಗ್ರತೆ ಎನ್ನುವುದು. ಮನಸ್ಸು ಗುರಿಯನ್ನಲ್ಲದೆ ಬೇರೆಯದನ್ನು ಯೋಚಿಸಬಾರದು. ಪಂಚೇಂದ್ರಿಯಗಳಾದ ಕಣ್ಣು, ಕಿವಿ, ನಾಲಗೆ, ಮೂಗು, ತ್ವಕ್ಕುಗಳು ಅದಕ್ಕೆ ಸಹಕಾರಿಗಳಾಗಬೇಕು.
ಅವಧಾನ ನಮ್ಮ ವರ್ತನೆಯ ಮತ್ತು ಜಾಗೃತದ ಆವಸ್ಥೆಯ ಒಂದು ಗುಣವಿಶೇಷ ವಾಗಿದೆ. ಎಲ್ಲ ಪಂಚೇಂದ್ರಿಯ ಶಕ್ತಿಗಳನ್ನೂ ಮತ್ತು ಮನಸ್ಸನ್ನು ಏಕೀಭವಿಸುವಂತೆ ಮಾಡಿ ಪರಶಿವನತ್ತ ಮಾತ್ರ ಉಪಯೋಗಿಸಿದಲ್ಲಿ ಅವಧಾನ ಅತಿ ತೀವ್ರವಾಗುತ್ತದೆ. ಭಕ್ತಸ್ಥಲದ ಶ್ರದ್ಧಾಭಕ್ತಿ, ಮಹೇಶ್ವರ ಸ್ಥಲದ ಅಚಲನಿಷ್ಠೆ ಇಲ್ಲಿ ನಿರಂತರ ಜಾಗೃತಿಯಿಂದ ಉದಾತ್ತ ಮತ್ತು ದೈವಿಕರಣವಾಗುತ್ತವೆ."ಅವಧಾನ" ಎಂದರೆ ಸದಾ ಎಚ್ಚರಿಕೆಯಿಂದ ಮುನ್ನಡೆದು ಪಡೆಯುವ ನಿಲುವು. ಇದು ಸಾಧಕರು ಪಡೆಯಬಹುದಾದ ಅತ್ಯುನ್ನತ ಸಾಕಾರ ರೂಪದ ಅನುಭವ. ಮಣಿಪೂರಕ ಚಕ್ರ ಪ್ರಸಾದಿ ಸ್ಥಲದ ಚಕ್ರ. ಪ್ರಸಾದಿಯು ಕ್ರಿಯಾಯೋಗದಲ್ಲಿ ನಾಭಿಚಕ್ರಕ್ಕೆ ಧಾರಣ ಮಾಡುತ್ತಾನೆ. ಚೆನ್ನಬಸವಣ್ಣನವರು ಇನ್ನೊಂದು ವಚನದಲ್ಲಿ ಪ್ರಸಾದಿಯ ಅರ್ಪಿತ ಕ್ರಿಯೆ ವಿವರಿಸಿದ್ದಾರೆ.
#ತನುಮುಟ್ಟದ ಮುನ್ನ ಲಿಂಗಾರ್ಪಿತವ ಮಾಡಬೇಕು,
ಮನಮುಟ್ಟದ ಮುನ್ನ ಲಿಂಗಾರ್ಪಿತವ ಮಾಡಬೇಕು,
ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ಪರುಶನ ಮುಟ್ಟದ ಮುನ್ನ
ಲಿಂಗಾರ್ಪಿತವ ಮಾಡಬೇಕು,
ಕೂಡಲಚೆನ್ನಸಂಗಮನಲ್ಲಿ ಪ್ರಸಾದಿಯಾದಡೆ. / 678
- ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರು.
ಕಾಯವೇ ಲಿಂಗಾರ್ಪಿತ ; ಅರ್ಪಿತವೇ ಪ್ರಸಾದ' ಎನ್ನುತ್ತಾರೆ ಚನ್ನಬಸವಣ್ಣನವರು
- ✍️Dr Prema Pangi
#ನಡೆವ_ನುಡಿವ_ಚೈತನ್ಯವುಳ್ಳನಕ್ಕ
Comments
Post a Comment