ವಚನ ದಾಸೋಹ: ರೂಪನೆ ಕಂಡರು, ನಿರೂಪ ಕಾಣರು.
ವಚನ ದಾಸೋಹ: ರೂಪನೆ ಕಂಡರು, ನಿರೂಪ ಕಾಣರು.
#ರೂಪನೆ ಕಂಡರು, ನಿರೂಪ ಕಾಣರು.
ಅನುವನೆ ಕಂಡರು, ತನುವನೆ ಕಾಣರು.
ಆಚಾರವನೆ ಕಂಡರು, ವಿಚಾರವನೆ ಕಾಣರು.
ಗುಹೇಶ್ವರಾ-ನಿಮ್ಮ ಕುರುಹನೆ ಕಂಡರು,
ಕೂಡಲರಿಯದೆ ಕೆಟ್ಟರು ! / 1375
- ಅಲ್ಲಮ ಪ್ರಭುಗಳು
*ಅರ್ಥ*:
ಅಲ್ಲಮಪ್ರಭುಗಳು 12 ನೇ ಶತಮಾನದ ಪರಮ ಜಂಗಮಮೂರ್ತಿಗಳು, ಅತೀಂದ್ರಿಯ ಸಂತಶರಣರು ಮತ್ತು ಕನ್ನಡ ಭಾಷೆಯ ವಚನಕಾರ ಕವಿಗಳು. ಸ್ವಯಂ ಮತ್ತು ನಿರಾಕಾರ ಶಿವನ ಏಕೀಕೃತ ಪ್ರಜ್ಞೆಯನ್ನು ಪ್ರಚಾರ ಮಾಡಿದವರು. ಅಲ್ಲಮಪ್ರಭುಗಳು ಪ್ರಸಿದ್ಧ ಆಧ್ಯಾತ್ಮಿಕ ಜಂಗಮರು ಮತ್ತು ಮಧ್ಯಕಾಲೀನ ಕರ್ನಾಟಕ ಸಮಾಜ ಮತ್ತು ಆಧ್ಯಾತ್ಮಿಕ ಲೋಕವನ್ನು ಮತ್ತು ಕನ್ನಡ ಸಾಹಿತ್ಯವನ್ನು ಮರುರೂಪಿಸಿದವರು. ಗುರು ಬಸವಣ್ಣನವರ ಲಿಂಗಾಯತ ಚಳುವಳಿಗೆ ಹೊಸ ತಿರುವು ಕೊಟ್ಟ ಅತಿ ಮಹತ್ವದ ಮಾರ್ಗದರ್ಶಕರು, ಶೂನ್ಯಸಿಂಹಾಸನದ ಪ್ರಥಮ ಅಧ್ಯಕ್ಷರು.
*#ರೂಪನೆ ಕಂಡರು, ನಿರೂಪ ಕಾಣರು* ಜನರು ದೇವರ ಸಾಕಾರ ಮಾನವ ರೂಪವನ್ನು ಕಲ್ಪಿಸಿಕೊಂಡು ಅದನ್ನೇ ಪೂಜಿಸಿ ಅದನ್ನೇ ಕಂಡರು ಅಂದರೆ ಅದು ಅವರ ಮನಸ್ಸಿನಲ್ಲಿ ಮೂಡಿದ ಕಲ್ಪನೆ ಅಷ್ಟೇ, ರೂಪವೇ ಇಲ್ಲದ ನಿರೂಪ, ನಿಜವಾದ ನಿರಾಕಾರ ಪರವಸ್ತುವನ್ನು ಕಾಣಲೇ ಇಲ್ಲ.
.
*#ಅನುವನೆ ಕಂಡರು, ತನುವನೆ ಕಾಣರು*.
ಅನು(ಸಕ್ರಿಯೆ) ಪೂಜೆಯನ್ನು ಕಂಡರೆ ವಿನಃ ತಮ್ಮದೇ ತನುವಿನಲ್ಲಿಯ ದೇವರನ್ನು ಕಾಣಲಿಲ್ಲ.
*#ಆಚಾರವನೆ ಕಂಡರು, ವಿಚಾರವನೆ ಕಾಣರು*.
ಎಲ್ಲರೂ ತಮ್ಮ ತಮ್ಮ ಧರ್ಮಗಳಲ್ಲಿಯೂ ಆಚರಣೆಗಳನ್ನು ಮಾಡಿದರೆ ವಿನಃ ವೈಚಾರಿಕತೆಯನ್ನು ಅರಿಯಲೆ ಇಲ್ಲ. ಬಾಹ್ಯಾಚಾರಗಳಲ್ಲಿ ಕಾಲ ಕಳೆದರೇ ಹೊರತು ನಿಜವಾದ ವಿಚಾರ, ಸತ್ಯದರ್ಶನ ಅರಿಯಲಿಲ್ಲ.
*#ಗುಹೇಶ್ವರಾ-ನಿಮ್ಮ ಕುರುಹನೆ ಕಂಡರು,
ಕೂಡಲರಿಯದೆ ಕೆಟ್ಟರು !*
ದೇವರ ಕುರುಹುವಾದ ಮೂರ್ತಿಗಳು, ಸ್ಥಾವರಲಿಂಗ, ಇಷ್ಟಲಿಂಗದಿಂದ ತಮ್ಮ ಇಷ್ಟಾರ್ಥ ಗಳಿಗಾಗಿ ಪೂಜಿಸಿ ಪ್ರಾಥಿಸಿದರೆ ವಿನಃ ತಮ್ಮನ್ನೇ ಸಂಪೂರ್ಣ ಸಮರ್ಪಣೆ ಮಾಡಿ ಅವನಲ್ಲಿ ಕೂಡುವದನ್ನು ತಿಳಿಯಲಿಲ್ಲ. ಅವನಲ್ಲಿಯೆ ಕೂಡಿಕೊಳ್ಳುವಿಕೆಯಾದ ಅಂಗ ಲಿಂಗ ಸಮರಸವನ್ನು ಅರಿಯದೆ ಬ್ರಷ್ಟರಾದರು.
*ವಚನ ಚಿಂತನೆ*:
ರೂಪ - ನಿರೂಪ, ಅನು - ತನು,
ಆಚಾರ - ವಿಚಾರ ಹೀಗೆ ಕನ್ನಡ ಪದ ಕೂಡಿಸಿ ವಚನ ರಚನೆ ಮಾಡಿದ್ದು ಅವರ ಕನ್ನಡ ಪದ ಶ್ರೀಮಂತಿಕೆಗೆ ಸಾಕ್ಷಿ. ಇದನ್ನು ಅವರ ಹಲವು ವಚನಗಳಲ್ಲಿಯೂ ಕಾಣಬಹುದು. ಸತತ ದೇಶ ಸಂಚರಿಸುತ್ತಿದ್ದ ಪರಮ ಜಂಗಮ ಅಲ್ಲಮ ಪ್ರಭುಗಳ ಕನ್ನಡದ ಪ್ರೀತಿ, ವಿದ್ವತ್ತು ನಿಜಕ್ಕೂ ಶಾಘ್ಲನೀಯ.
ರೂಪುದಿಂದ ನಿರೂಪಕ್ಕೆ (ಸಾಕಾರದಿಂದ ನಿರಾಕಾರಕ್ಕೆ), ಸುಕ್ರಿಯೆ ಆದ ಪೂಜೆಯಿಂದ ಅನು, ಶುಷ್ಕ ಆಚಾರದಿಂದ ವಿಚಾರಕ್ಕೆ ಹೋಗುವುದು ಇವೆಲ್ಲ ಆಧ್ಯಾತ್ಮಿಕ ಪಯಣದ ಮೆಟ್ಟಿಲುಗಳು. ದೇವರ ಕುರುಹುಗಳಾದ ಮೂರ್ತಿ, ಸ್ಥಾವರಲಿಂಗ, ಇಷ್ಟಲಿಂಗದಿಂದ ಅವನಲ್ಲಿಯೆ ಕೂಡಿಕೊಳ್ಳುವಿಕೆಯಾದ ಅಂಗ ಲಿಂಗ ಸಮರಸಕ್ಕೆ ಇದು ಅಧ್ಯಾತ್ಮದ ಗುರಿ. ಇದೊಂದು ಆಧ್ಯಾತ್ಮಿಕ ಪಯಣ. ಷಟ್ ಸ್ಥಲದ ಮೆಟ್ಟಿಲುಗಳು. ಇಷ್ಟಲಿಂಗ ಆಯತದಿಂದ, ಪ್ರಾಣಲಿಂಗ ಸ್ವಾಯತಕ್ಕೆ, ಪ್ರಾಣಲಿಂಗದ ಸ್ವಾಯತದಿಂದ ಭಾವಲಿಂಗದ ಸನ್ನಿಹತಕ್ಕೆ ಹೋದರೆ ಮಾತ್ರ ಶರಣತ್ವ. ಇದನ್ನರಿಯದೆ, ಜೀವಮಾನವಿಡೀ ದೇವರ ಮೂರ್ತಿ, ಸ್ಥಾವರಲಿಂಗ, ಇಷ್ಟಲಿಂಗವೆಂಬ ಕುರುಹುಗಳನ್ನೆ ಹಿಡಿದು ಅರಿವಿಲ್ಲದೆ ನಾಶವಾಗುವವರೇ ಭ್ರಷ್ಟರು ಎನ್ನುತ್ತಾರೆ ಅಲ್ಲಮಪ್ರಭುಗಳು.
*ಇದೇ ಅರ್ಥದ ಅಲ್ಲಮಪ್ರಭುಗಳ ವಚನಗಳು*
#ಅಗ್ಘವಣಿ ಪತ್ರೆ ಧೂಪ ದೀಪ ನಿವಾಳಿಯಲ್ಲಿ
ಪೂಜಿಸಿ, ಪೂಜಿಸಿ, ಬಳಲುತ್ತೈದಾರೆ!
ಏನೆಂದರಿಯರು! ಎಂತೆಂದರಿಯರು!
"ಜನ ಮರುಳೋ ಜಾತ್ರೆ ಮರುಳೋ"
ಎಂಬಂತೆ ಎಲ್ಲರೂ ಪೂಜಿಸಿ ಏನನೂ ಕಾಣದೆ
ಲಯವಾಗಿ ಹೋದರು, ಗುಹೇಶ್ವರ!
#ವರ್ಣವಿಲ್ಲದ ಲಿಂಗಕ್ಕೆ ರೂಪಪ್ರತಿಷ್ಠೆಯ ಮಾಡುವರು!
ಪ್ರಳಯವಿಲ್ಲದ ಲಿಂಗಕ್ಕೆ ಪ್ರಾಣಪ್ರತಿಷ್ಠೆಯ ಮಾಡುವರು!
ನುಡಿಯಬಾರದ ಲಿಂಗಕ್ಕೆ ಜಪ ಸ್ತೋತ್ರ ಪೂಜೆಯ ಮಾಡುವರು!
ಮುಟ್ಟಬಾರದ ಲಿಂಗಕ್ಕೆ ಕೊಟ್ಟು ಕೊಂಡಾಡಿದೆವೆಂಬರು!
ಬೊಟ್ಟಿಡಲು ಎಡೆಯಿಲ್ಲದ ಲಿಂಗವ ಮುಟ್ಟಿ ಪೂಜಿಸಿಹೆನೆಂಬ
ಭ್ರಷ್ಟರ ನೋಡಾ, ಗುಹೇಶ್ವರ!
#ಆಡಿಂಗೆ ದಾಯಾದ್ಯರಾದಿರಲ್ಲಾ. ಕಾಡ ಗಿಡುವಿಂಗೆ ಮ್ಯತ್ಯುವಾದಿರಲ್ಲಾ. ಅರಿವನರಿಯ ಹೇಳಿ, ಶ್ರೀಗುರು ಕುರುಹ ಕೈಯಲ್ಲಿ ಕೊಟ್ಟಡೆ ಅರಿವನೆ ಮರೆದು ಕುರುಹ ಪೂಜಿಸುವ ಕುರಿಗಳ ನೋಡಾ ಗುಹೇಶ್ವರಾ
#ಬಂಡಿ ತುಂಬಿದ ಪತ್ರೆಯ ತಂದು
ಕಂಡ ಕಂಡಲ್ಲಿ ಮಜ್ಜನಕ್ಕೆರೆವಿರಯ್ಯ!
ತಾಪತ್ರಯವ ಕಳೆದು ಪೂಜಿಸಿ;
ತಾಪತ್ರಯವ ಲಿಂಗನೊಲ್ಲ!
ಕೂಡಲಸಂಗಮದೇವ ಬರಿಯುದಕದಲ್ಲಿ ನೆನೆವನೇ ?
ಬಂಡಿ ಬಂಡಿ ತುಂಬಿದ ಪತ್ರೆಯನ್ನು ತಂದು
ದೇವರ ಮೂರ್ತಿ ಕಂಡ ಕಂಡ ಸ್ಥಳಗಳಲ್ಲಿ ಮಜ್ಜನ (ನೀರಿನ ಅಭಿಷೇಕ) ಮಾಡುವುರು.
ನಿಮ್ಮ ನಿಮ್ಮ ತಾಪತ್ರಯಗಳಿಗಾಗಿ ಪೂಜಿಸಬೇಡಿ. ಕಷ್ಟ ತಾಪತ್ರಯಗಳನ್ನು ನಿಮ್ಮ ಸ್ವಯಂ ಶಕ್ತಿಯಿಂದ ಕಳೆದು ದೇವರನ್ನು ಪೂಜಿಸಿರಿ. ವಿಶ್ವಚೈತನ್ಯಾತ್ಮಕವಾದ ಪರಶಿವನನ್ನು ನೀವು ಮಾಡುವ ಅಭಿಷೇಕದ ನೀರಿನಿಂದ ನೆನೆಸಲು ಸಾಧ್ಯವೆ? ಈ ಮರುಳುಬುದ್ಧಿಯನ್ನು ಬಿಡಿ. ನಿರಾಕಾರ ನಿಷ್ಕಲ, ನಿರ್ಮಾಯ, ನಿರಂಜನ, ಅಪ್ರಳಯ ಲಿಂಗಕ್ಕೆ ಮಾನವರು ರೂಪಕಲ್ಪನೆ ಮಾಡಿ ರೂಪಾರಾಧನೆಯನ್ನು ಮಾಡುವದನ್ನು ಬಿಟ್ಟು ಯೋಗ ಅನುಸಂಧಾನದಿಂದ ಪರಶಿವನಲ್ಲಿ ಸಮರಸವಾಗಿರಿ ಎನ್ನುತ್ತಾರೆ ಅಲ್ಲಮ ಪ್ರಭುಗಳು.
- ✍️Dr Prema Pangi
#ರೂಪನೆ_ಕಂಡರು_ನಿರೂಪ_ಕಾಣರು
Comments
Post a Comment