🌷ವೀರರಾಣಿ ಬೆಳವಡಿ ಮಲ್ಲಮ್ಮ🌷
🌷ವೀರರಾಣಿ ಬೆಳವಡಿ ಮಲ್ಲಮ್ಮ🌷
ಬೆಳವಡಿ ಮಲ್ಲಮ್ಮ ಛತ್ರಪತಿ ಶಿವಾಜಿ ಮಹಾರಾಜರ ಸಮಕಾಲೀನ ಕರ್ನಾಟಕದ ವೀರರಾಣಿ. ಸುಸಜ್ಜಿತ ಮಹಿಳಾ ಸೈನ್ಯವನ್ನು ಸಂಘಟಿಸಿದ ಮೊದಲ ಮಹಿಳೆ. 500 ವರ್ಷಗಳ ಹಿಂದೆ ಸುಸಜ್ಜಿತ ಎರಡು ಸಾವಿರ ಮಹಿಳಾ ಸೈನ್ಯ ಕಟ್ಟಿ ಪ್ರಭಲ ಮರಾಠಾ ಸೈನ್ಯದೊಂದಿಗೆ ಹೋರಾಡಿದವಳು ಬೆಳವಡಿಯ ವೀರರಾಣಿ ಮಲ್ಲಮ್ಮ. ಸಮಕಾಲೀನ ಬ್ರಿಟಿಷ್ ಕೃತಿಯೊಂದರ ಪ್ರಕಾರ ಈ ಯುದ್ಧದ ಸಮಯದಲ್ಲಿ ಶಿವಾಜಿ ತಾನೇ ಮುಂದೆ ನಿಂತು ಮಲ್ಲಮ್ಮನ ಕೋಟೆಯನ್ನು ಮುತ್ತಿಗೆ ಹಾಕಲು ಯತ್ನಿಸಿದ. ಈ ಪ್ರಯತ್ನದಲ್ಲಿ ದಖನಿನ (ಬಿಜಾಪುರದ) ಎಲ್ಲಾ ಮೊಘಲ್ ಅರಸರಿಂದ ಅನುಭವಿಸಿದಕ್ಕಿಂತ ಹೆಚ್ಚು ಮುಖಭಂಗವನ್ನು ಮಲ್ಲಮ್ಮನಿಂದ ಅನುಭವಿಸಿದ ಎಂದು ತಿಳಿದುಬರುತ್ತದೆ. "ಎಷ್ಟೋ ರಾಜ್ಯಗಳನ್ನು ಗೆದ್ದ ಶಿವಾಜಿಗೆ ಬೆಳವಡಿಯ ದೇಸಾಯಿ ವಂಶದ ರಾಣಿ ಮಲ್ಲಮ್ಮಳನ್ನು ಬಗ್ಗಿಸಲು ಸಾಧ್ಯವಾಗಲಿಲ್ಲ".
ಮಲ್ಲಮ್ಮ ಸ್ವಾದಿ ಅರಸು ರಾಜ ಮಧುಲಿಂಗನಾಯಕ ಮತ್ತು ರಾಣಿ ವೀರಮ್ಮಳ ಹೆಮ್ಮೆಯ ಕುವರಿಯಾಗಿ ಕ್ರಿ.ಶ 1650 ಅಗಷ್ಟ 18 ರಂದು ಜನಿಸಿದಳು. ಇವಳು ಸೋದೆ ರಾಜ ಸದಾಶಿವನಾಯಕನ ತಂಗಿ. ಸೋಗಲದ ಸೋಮೇಶ್ವರ ದೇವರು ಇವರ ಆರಾದ್ಯ ದೈವ. ಅವಳು ಬೆಳೆದಂತೆ ದೈವಭಕ್ತಿ ಬೆಳೆಯುತ್ತಾ ಸಾಗಿತು. ಕನ್ನಡ, ಮರಾಠಿ, ಸಂಸ್ಕೃತ, ಉರ್ದು, ಹಲವು ಭಾಷೆಗಳಲ್ಲಿ , ಕವಿತ್ವದಲ್ಲಿ, ಕುದುರೆಸವಾರಿ, ಕತ್ತಿವರಸೆ, ಬಿಲ್ಲುಬಾಣ ಯುದ್ಧದಲ್ಲಿ ಪ್ರಾವೀಣ್ಯತೆ ಪಡೆದಳು. 16ನೆಯ ವರ್ಷಕ್ಕೆ ಗುರು ಹಿರಿಯರ ಇಚ್ಛೆಯಂತೆ ಬೆಳವಡಿಯ ರಾಜ ಈಶಪ್ರಭು ದೇಸಾಯಿಯೊಂದಿಗೆ ವಿವಾಹವಾಯಿತು.
1678 ರಲ್ಲಿ ಶಿವಾಜಿಯ ಸೈನ್ಯ ಆನೆಗೊಂದಿ ಅರಸರ ಗೌರವ ಸ್ವೀಕರಿಸಿ, ಕೊಪ್ಪಳದ ಕೋಟಿ, ಗದಗ, ಧಾರವಾಡ ವಶಪಡಿಸಿಕೊಂಡು ಬೆಳವಡಿ ಸಂಸ್ಥಾನದ ಯಾದವಾಡದಲ್ಲಿ ತಂಗುತ್ತದೆ. ಬೆಳವಡಿಯ ರಾಜ ಈಶ್ವರಪ್ರಭು (ಈಶಪ್ರಭು) ಅವರನ್ನು ಬರಮಾಡಿಕೊಂಡು ಗೌರವಿಸಲು ಪ್ರತಿನಿಧಿ ಕಳಿಸುತ್ತಾರೆ. ಆದರೆ, ಗೆಲುವಿನ ಮದದಲ್ಲಿದ್ದ ಶಿವಾಜಿಯ ಸೈನಿಕರು ಆ ಪ್ರತಿನಿಧಿಯನ್ನು ಅಪಮಾನ ಪಡಿಸುತ್ತಾರೆ ಮತ್ತು ಶಿವಾಜಿಗೆ ತಿಳಿಸದೆ ತಮ್ಮ ಪುಂಡಾಟದಿಂದ ಕೃಷಿಜನರ ದನಕರುಗಳನ್ನು ದಾಸ್ತಾನುಗಳನ್ನು ಕದ್ದುಸಾಗಿಸುತ್ತಾರೆ. ರಾಣಿ ಚೆನ್ನಮ್ಮ ತನ್ನ ಮಹಿಳಾ ಸೈನ್ಯದೊಂದಿಗೆ ಹೋಗಿ ಮಿಂಚಿನ ಆಕ್ರಮಣಮಾಡಿ ದನಕರುಗಳನ್ನು ಬಿಡಿಸಿಕೊಂಡು ಬರುತ್ತಾಳೆ. ಮಹಿಳಾ ಸೈನ್ಯದ ಆಕ್ರಮಣ ನೋಡಿ ಮರಾಠಾ ಸೈನಿಕರು ಕಕ್ಕಾಬಿಕ್ಕಿ ಆಗುತ್ತಾರೆ. ಈ ಅಪಮಾನ ಸಹಿಸದ ಸಾಕೋಜಿ ಎಂಬ ಮರಾಠಾ ದಂಡನಾಯಕ ಶಿವಾಜಿಗೆ ತಪ್ಪು ಮಾಹಿತಿ ಕೊಟ್ಟು ಬೆಳವಡಿಯ ಮೇಲೆ ಆಕ್ರಮಣ ಮಾಡುತ್ತಾನೆ. ಆ ಯುದ್ಧದಲ್ಲಿ ಸಿದ್ದನಗೌಡ ಪಾಟೀಲ್ ಎಂಬ ಬೆಳವಡಿಯ ದಂಡನಾಯಕ ಸಾಕೊಜಿಯಿಂದ ಹತನಾಗುತ್ತಾನೆ.
ನಂತರ ಬೆಳವಡಿ ರಾಜನಾದ ಈಶ್ವರಪ್ರಭು ಮರಾಠಾ ಸೈನ್ಯದ ವಿರುದ್ಧ ಹೋರಾಡುವಾಗ ಯುದ್ಧಭೂಮಿಯಲ್ಲಿ ವೀರಮರಣ ಹೊಂದುತ್ತಾರೆ. ಆಗ ಕೋಟೆಯ ಮತ್ತು ಪ್ರಜೆಗಳ ರಕ್ಷಣೆಯ ಜವಾಬ್ದಾರಿ ರಾಣಿ ಮಲ್ಲಮ್ಮಳ ಮೇಲೆ ಬರುತ್ತದೆ. ತನ್ನ ರಾಜ್ಯದ ರಕ್ಷಣೆಗಾಗಿ ಅವಳು ದಳಪತಿ ದಾದಾಜಿ ರಘುನಾಥ್ ನೇಡ್ಕರ್ ಮುಂದಾಳತ್ವದ ಮರಾಠಾಸೈನ್ಯದ ವಿರುದ್ಧ ಹೋರಾಡಬೇಕಾಯಿತು. ಈ ಯುದ್ಧದ ಸಮಯದಲ್ಲಿ ಮಲ್ಲಮ್ಮಳ ಕೋಟೆಯನ್ನು ಮುತ್ತಿಗೆ ಹಾಕಲು ಮರಾಠಾ ಸೇನೆ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ.
ಶಿವಾಜಿ ಮಹಾರಾಜರ ಸೈನ್ಯ ನಿರಂತರ ಇಪ್ಪತ್ತೇಳು ದಿನಗಳ ಪ್ರಯತ್ನ ಮಾಡಿದರೂ ಬೆಳವಡಿ ಕೋಟೆ ಭೇದಿಸಲು ಸಾದ್ಯವಾಗುವಾದಿಲ್ಲ. ನಂತರ ಕೋಟೆಯೊಳಗಿನ ಎಲ್ಲ ದಾಸ್ತಾನು ಮುಗಿದ ಕಾರಣ, ಕೋಟೆಬಾಗಿಲು ತೆಗೆದು ಬೆಳವಡಿ ಮಲ್ಲಮ್ಮ ತನ್ನ ಸೈನ್ಯದೊಂದಿಗೆ ಶತ್ರುಪಡೆಗಳ ಮೇಲೆ ವೀರಗಚ್ಚೆ ಹಾಕಿ ಕುದುರೆ ಮೇಲೆ ಕುಳಿತು ಹೋರಾಡುತ್ತಾಳೆ. ಎಷ್ಟೋ ರಾಜ್ಯಗಳನ್ನು ಗೆದ್ದ ಶಿವಾಜಿಯ ಸೈನ್ಯಕ್ಕೆ ಬೆಳವಡಿಯ ದೇಸಾಯಿವಂಶದ ಮಲ್ಲಮ್ಮನನ್ನು ಬಗ್ಗಿಸಲು ಸುಲಭ ಸಾಧ್ಯವಾಗಲಿಲ್ಲ. ಮಲ್ಲಮ್ಮಳ ಬೆಟಾಲಿಯನ್ ಯುದ್ಧ ಕೌಶಲ್ಯದಲ್ಲಿ ನುರಿತವಾಗಿತ್ತು. ಈ ಮಹಿಳಾ ಬೆಟಾಲಿಯನ್‌ನ ವೀರ ವನಿತೆಯರು ವೀರಗಚ್ಚೆ ಹಾಕಿ ಕೈಯಲ್ಲಿ ಕತ್ತಿಯನ್ನು ಹಿಡಿದು ಕುದುರೆಯ ಮೇಲೆ ಕುಳಿತು ಜೀವದ ಹಂಗು ತೊರೆದು ಹೋರಾಡುತ್ತಿದ್ದರು. ಇವರ ನೇತೃತ್ವ ವೀರರಾಣಿ ಮಲ್ಲಮ್ಮ ವಹಿಸಿದ್ದರು. ಯುದ್ಧದಲ್ಲಿ ಶಿವಾಜಿಯ ಒಬ್ಬ ಸೈನಿಕನು ಅವಳು ಸವಾರಿ ಮಾಡುತ್ತಿದ್ದ ಕುದುರೆಯ ಕಾಲನ್ನು ಕತ್ತರಿಸಿದಾಗ ಅವಳು ಕೆಳಗೆ ಬಿದ್ದಳು. ಆದರೂ ಎದೆಗೆಡದೆ ಎದ್ದು ಅವಳು ಹೋರಾಟವನ್ನು ಮುಂದುವರೆಸಿದಳು. ಇಪ್ಪತ್ತೆಂಟನೆಯ ದಿನ ಕೋಟೆ ವಶವಾಯಿತು. ಶಿವಾಜಿಯ ಸೈನಿಕರು ಅವಳನ್ನು ಬಂಧಿಸಿ ಶಿವಾಜಿಯ ಆಸ್ಥಾನಕ್ಕೆ ಕರೆದುಕೊಂಡು ಹೋದರು. ಶಿವಾಜಿಯು ಆಸ್ಥಾನದಲ್ಲಿ ಆಕೆಯ ಜಗನ್ಮಾತೆಯ ಸ್ವರೂಪ ಕಂಡು, ತನ್ನ ಸೇನೆ ಮಾಡಿದ ತಪ್ಪಿನ ಅರಿವಾಗಿ ಅವಳ ಧೈರ್ಯಕ್ಕೆ ಸಾಹಸಕ್ಕೆ ಬಹುವಾಗಿ ಮೆಚ್ಚಿ ತನ್ನ ಸೈನ್ಯದ ಪುಂಡಾಟಕ್ಕೆ ಬಹಳ ಪಶ್ಚಾತಾಪ ಪಟ್ಟು "ನಾನು ತಪ್ಪು ಮಾಡಿದೆ, ತಾಯೀ, ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಶಿವಾಜಿ ಅವಳ ಕಾಲಿಗೆ ಬಿದ್ದು 'ನೀನು ಸಾಕ್ಷಾತ್ ನನ್ನ ತಾಯಿ ಜಗದಂಬೆ' ಯಂದು ನಮಿಸಿದರು. ಮಲ್ಲಮ್ಮ ಶಿವಾಜಿಯನ್ನು ಕ್ಷಮಿಸಿದ ಮೇಲೆ ಎರಡೂ ರಾಜ್ಯಗಳಲ್ಲಿ ಸ್ನೇಹದ ಒಪ್ಪಂದವಾಯಿತು. ಶಿವಾಜಿ ಮಹಾರಾಜರು "ನನಗೆ ನಿಮ್ಮ ರಾಜ್ಯ ಬೇಕಿಲ್ಲ ತಾಯಿ" ಎಂದು ಹೇಳಿ ರಾಣಿ ಮಲ್ಲಮ್ಮಳಿಗೆ "ಸಾವಿತ್ರಿ" ಎಂಬ ಗೌರವ ಸನ್ಮಾನ ಮಾಡಿ ರಾಜ್ಯ ಮರಳಿ ಕೊಟ್ಟರು. ರಾಣಿ ಮಲ್ಲಮ್ಮಳ ಮಗ ನಾಗಭೂಷಣನಿಗೆ ಬೆಳವಡಿ ಸಂಸ್ಥಾನದ ಪಟ್ಟಾಭಿಷೇಕ ಮಾಡುತ್ತಾನೆ. ಸುಳ್ಳು ಮಾಹಿತಿ ಕೊಟ್ಟ, ರಾಣಿ ಮಲ್ಲಮ್ಮಳಿಗೆ ಅವಮಾನಿಸಿದ ಸುಖೋಜಿ ಗಾಯಕವಾಡನ ಕಣ್ಣುಗಳನ್ನು ಶಿವಾಜಿ ಮಹಾರಾಜರು ಕೀಳಿಸಿರುವುದಾಗಿ ಮರಾಠಿ ಇತಿಹಾಸಕಾರರು ಬರೆದಿದ್ದಾರೆ. ಬೆಳವಡಿ ಮಲ್ಲಮ್ಮ 19 ಫೆಬ್ರುವರಿ 1717 ರಲ್ಲಿ ತಮ್ಮ 67 ನೆಯ ವಯಸ್ಸಿನಲ್ಲಿ ನಿಧನ ಹೊಂದಿದರು.
ಕನ್ನಡ ಇತಿಹಾಸಕಾರರು ಬೆಳವಡಿ ಮಲ್ಲಮ್ಮ ಶಿವಾಜಿ ಮಹಾರಾಜರನ್ನು ಸೋಲಿಸಿದರೆಂದು ಮರಾಠಿ ಇತಿಹಾಸಕಾರರು ಮಲ್ಲಮ್ಮ ತನ್ನ ಪರಾಕ್ರಮದಿಂದ ಶಿವಾಜಿ ಮಹಾರಾಜರ ಗೌರವಕ್ಕೆ ಪಾತ್ರಳಾದಳೆಂದು ಬರೆದಿರುವರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಹತ್ತಿರ ಇರುವ ಯಾದವಾಡದಲ್ಲಿ ವೀರರಾಣಿ ಮಲ್ಲಮ್ಮನ ಸಾಹಸ, ಶೌರ್ಯವನ್ನು ಬಿಂಬಿಸುವ ವೀರಗಲ್ಲುಗಳಿವೆ. ಈ ವೀರುಗಲ್ಲುಗಳನ್ನು ಫೋಟೊಗಳ ಸಮೇತ ಶಿವಾಜಿ ಮತ್ತು ಬೆಳವಡಿ ಮಲ್ಲಮ್ಮರ ಯುದ್ಧ ಮತ್ತು ನಂತರದ ಸಂಧಾನವನ್ನು ಮಹಾರಾಷ್ಟ್ರ ಸರ್ಕಾರ ಪಠ್ಯದಲ್ಲಿ ಅಳವಡಿಸಿ, ಮಕ್ಕಳಿಗೆ ಬೋಧಿಸುತ್ತಿರುವುದು ನಮ್ಮ ಹೆಮ್ಮೆ.
*ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ*:
ಶಿವಾಜಿ, ಮಲ್ಲಮ್ಮಾಜಿಯರ ಸಮರವು ಉತ್ಸವದಲ್ಲಿ ಪಠ್ಯವಸಾನವಾದುದರಿಂದ ಕೃತಿಗೆ ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ ಎಂದೇ ನಾಮಕರಣ ಮಾಡಲಾಗಿದೆ. ಮೇಲಿನ ಸಂಗತಿಗಳು 'ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ' ಎಂಬ ಮರಾಠಿ ಕೃತಿಯಲ್ಲಿ ದಾಖಲಾಗಿದೆ. ಅದನ್ನು ಬರೆಯಿಸಿದ ಶಿವಾಜಿಯ ಸೊಸೆ ರಾಜಾರಾಂ ಪತ್ನಿ ತಾರಾಬಾಯಿಯು ಮಲ್ಲಮ್ಮಳಿಂದ ಶಿವಾಜಿಯ ಸೈನ್ಯವನ್ನು ಸೋಲಿಸಿದ ನೇರ ಮಾಹಿತಿ ಪಡೆದು, ಶೇಷೋ ಮುತಾಲಿಕ್ ನಿಂದ 1717 ರಲ್ಲಿ ಬರೆಯಿಸಿದ ಕೃತಿಯನ್ನು ಓದಿ ಎಲ್ಲವೂ ಸತ್ಯವಾಗಿದೆಯೆಂದು ಪ್ರಥಮ ಬಹುಮಾನ ಕೊಡುತ್ತಾಳೆ. ಮತ್ತು ಈ ಪುಸ್ತಕದಲ್ಲಿ ಶಿವಾಜಿ ಮತ್ತು ಮಲ್ಲಮ್ಮರ ನಿಖರವಾದ ವಿಷಯವಿದೆ ಎಂದು ಹೇಳಿದ್ದಾರೆ. ತಿಳಿಯದೇ ತಾಯಿಸ್ವರೂಪ ವೀರ ಮಹಿಳೆಯೊಂದಿಗೆ ತನ್ನ ಮರಾಠಾಸೇನೆ ಯುದ್ಧ ಮಾಡಿದ್ದು ಶಿವಾಜಿಯನ್ನು ಅವನ ಕೊನೆಯ ಕಾಲದವರೆಗೂ ಬಾಧಿಸಿತು ಎಂದು ಶಿವಾಜಿಯ ಸೊಸೆ ರಾಜಾರಾಂ ಪತ್ನಿ ತಾರಾಬಾಯಿಯು ಹೇಳಿದ್ದಾರೆ.
1678 ರ ಒಬ್ಬ ಇಂಗ್ಲಿಷ್ ಅಧಿಕಾರಿ ಬರೆದ ಪತ್ರದಲ್ಲಿ ಹಲವು ಶೂರ ರಾಜರನ್ನು ಶಿವಾಜಿ ಸೋಲಿಸಿದರೂ ಮಲ್ಲಮ್ಮಳನ್ನು ಮಾತ್ರ ಸೋಲಿಸುವಲ್ಲಿ ವಿಫಲನಾದ ಎಂದು ಆಕೆಯನ್ನು ಕೊಂಡಾಡಿದ್ದಾನೆ.
ರಾಣಿ ಮಲ್ಲಮ್ಮನ ಗುರುಗಳಾಗಿದ್ದ ಶಂಕರಭಟ್ಟರು ಬರೆದ ಸಂಸ್ಕೃತ ಪುಸ್ತಕ "ಶಿವವಂಶ ಸುಧರ್ನವ" ದಲ್ಲಿ ಶಿವಾಜಿಯ ಸೈನ್ಯವನ್ನು ಬೆಳವಡಿ ಮಲ್ಲಮ್ಮ ಸೋಲಿಸಿದರು ಎಂದು ದಾಖಲಾಗಿದೆ.
ಬೆಳವಡಿ ಸಂಸ್ಥಾನದ ಪಾರಂಪರಿಕ ತಾಣವಾದ ಬೃಹನ್ಮಠದ ಶಿವಬಸವ ಶಾಸ್ತ್ರಿಯವರು ಬರೆದ "ತುರುಕರಿ ಪಂಚಮ"ರ ಇತಿಹಾಸ ಪುಸ್ತಕದಲ್ಲಿಯೂ ರಾಣಿ ಮಲ್ಲಮ್ಮ ಶಿವಾಜಿಯ ಸೈನ್ಯ ಸೋಲಿಸಿದ ಮಾಹಿತಿ ಇದೆ.
ರಾಣಿ ಮಲ್ಲಮ್ಮ ಮತ್ತು ಶಿವಾಜಿ ಮಹಾರಾಜರ ನಡುವೆ 27 ದಿನಗಳ ಕಾಲ ನಡೆದ ಯುದ್ಧವನ್ನು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆಯಲ್ಲಿ ಇತಿಹಾಸಕಾರ ಜಾದುನಾಥ್ ಸರ್ಕಾರ್ ಉಲ್ಲೇಖಿಸಿದ್ದಾರೆ.
ಶಿವಾಜಿಯ ಏಕೈಕ ಶಿಲ್ಪ ಬೆಳವಡಿಯಲ್ಲಿ ಎರಡೂ ಸಂಸ್ಥಾನಗಳ ಸ್ನೇಹದ ಗುರುತಾಗಿ ಈಗಲೂ ಇದೆ.
ವಿಶ್ವದ ಇತಿಹಾಸದಲ್ಲಿ ಎಲ್ಲೋ ಕೆಲವು ಸ್ತ್ರೀಯರು ಮಾತ್ರ ಸ್ತ್ರೀ ಸೈನ್ಯದ ನಾಯಕಿಯರಾಗಿ ಯುದ್ಧ ಮಾಡಿದ್ದು ದಾಖಲಾಗಿದೆ. ಭಾರತದಲ್ಲಿ ಹಲವರು ಸ್ತ್ರೀಯರು ಯೋಧರಂತೆ ರಣರಂಗದಲ್ಲಿ ಕಾದಾಡಿದರೂ, ಮಲ್ಲಮ್ಮಳಂತೆ ತಾವೇ ಸ್ವತಃ ಸ್ತ್ರೀ ಸೈನ್ಯವನ್ನು ಕಟ್ಟಿ ಅದರ ಸೇನಾನಿಯಾಗಿ ರಣರಂಗದಲ್ಲಿ ದೊಡ್ಡ ಸೈನ್ಯದೊಡನೆ ಹೋರಾಡಿ ಸೋಲಿಸಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಕನ್ನಡಿಗರಿಗೆ ಬೆಳವಡಿ ಮಲ್ಲಮ್ಮಳ ಧೈರ್ಯ, ಶೌರ್ಯ, ಕೆಚ್ಚು ಇವು ಒಂದು ಸ್ಪೂರ್ತಿ ಹೆಮ್ಮೆಯ ವಿಷಯ. ಕರ್ನಾಟಕ ಸರಕಾರ ಅವಳ ನೆನಪಿನಲ್ಲಿ ಪೆಬ್ರುವರಿ ೨೮ ರಂದು ಬೆಳವಡಿ ಉತ್ಸವ ನಡೆಸುತ್ತದೆ. ಆದರೆ ಮಹಾರಾಷ್ಟ್ರ ಸರಕಾರದಂತೆ ಕರ್ನಾಟಕದ ಪಠ್ಯಪುಸ್ತಕದಲ್ಲಿ ವೀರರಾಣಿ ಮಲ್ಲಮ್ಮನವರ ವೀರಗಾಥೆ ಬರಬೇಕು. ವೀರರಾಣಿ ಬೆಳವಡಿ ಮಲ್ಲಮ್ಮ ಶಿವಾಜಿಯ ಸೈನ್ಯದೊಂದಿಗೆ ಯುದ್ಧ ಮಾಡಿದ್ದು ಕರ್ನಾಟಕದ ಅತ್ಯಂತ ಸ್ಫೂರ್ತಿಯುತ ಸಾಂಸ್ಕೃತಿಕ ದಾಖಲೆ ಮತ್ತು ವೀರಕನ್ನಡತಿಯರ ಶೌರ್ಯದ ಐತಿಹಾಸಿಕ ದಾಖಲೆ.
- ✍️Dr Prema Pangi
#ಪ್ರೇಮಾ_ಪಾಂಗಿ,#ಬೆಳವಡಿ_ಮಲ್ಲಮ್ಮ
Comments
Post a Comment