ಕರ್ಮಯೋಗ : ಕರ್ಮಣ್ಯೇವಾಧಿಕಾರಸ್ತೇ_ಮಾ_ಫಲೇಷು

ಕರ್ಮಯೋಗ :  ಕರ್ಮಣ್ಯೇವಾಧಿಕಾರಸ್ತೇ_ಮಾ_ಫಲೇಷು

ಶ್ರೀಮದ್ಭಗವದ್ಗೀತೆಯ ಎರಡನೇ ಅಧ್ಯಾಯ ಸಾಂಖ್ಯಯೋಗದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುವ ಶ್ಲೋಕಗಳು.
ಶ್ಲೋಕ 47:
#ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ||೪೭||
-ಭಗವದ್ಗೀತಾ
ಅರ್ಥ:
ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ, ಅದರ ಫಲದಲ್ಲಿ ಇಲ್ಲ. ಆದ್ದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷಿಯಾಗಿ ಫಲಕ್ಕೆ ಕಾರಣನೂ ತಾನೆಂದುಕೊಳ್ಳಬೇಡ ಮತ್ತು ಕರ್ಮ( ಕರ್ತವ್ಯ) ಮಾಡದೇ ಇರಬೇಕೆಂಬ ಹಂಬಲ ನಿನ್ನಲ್ಲಿ ಉಂಟಾಗದಿರಲಿ.
ಶ್ಲೋಕ 48:
#ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |
ಸಮೋಭೂತ್ವಾ ಸಮತ್ವಂ ಯೋಗ ಉಚ್ಯತೇ ||೪೮||
-ಭಗವದ್ಗೀತಾ
ಅರ್ಥ :
ಗೆಲವು-ಸೋಲುಗಳಿಗೆ ಕುಂದದೆ ಎರಡನ್ನೂ ಸಮಾನಚಿತ್ತದಿಂದ ಸ್ವೀಕರಿಸುತ್ತ ನಿನ್ನ ಕರ್ತವ್ಯಗಳನ್ನು ಮಾಡು. ಈ ಸಮತ್ತ್ವಭಾವವೇ ಯೋಗ ಎಂದು ಕರೆಯಲ್ಪಡುತ್ತದೆ. ಎಂಬುದು ಈ  ಅರ್ಥ. ಜಯ-ಅಪಜಯ, ಕೀರ್ತಿ-ಅಪಕೀರ್ತಿ, ನೋವು-ನಲಿವು  ಇವೆಲ್ಲವನ್ನೂ ಅನುಭವಿಸುವ ಮನಸ್ಸು ಸ್ಥಿರವಾಗಿರಬೇಕು.  ಗೆಲುವು-ಸೋಲುಗಳಿಗೆ ಸಮನಾದ ಭಾವವನ್ನು ಹೊಂದುವ ಮನಸ್ಥಿತಿ ನಮ್ಮದಾಗಬೇಕು.
*ಶ್ಲೋಕಗಳ ಚಿಂತನೆ*:
ಇಲ್ಲಿ ಕರ್ಮದ ಅರ್ಥ *ಕಾರ್ಯ ಅಥವಾ ಕರ್ತವ್ಯಕ್ಕೆ*. 
ಕರ್ತವ್ಯನಿರತನಿಗೆ ಜಯಾಪಜಯಗಳ 
ಭಯ ಇರಬಾರದು. ಆಗುಹೋಗುಗಳ ಭಯ ಇರಬಾರದು.  ಪಾಪ ಪುಣ್ಯಗಳ ವಿಚಕ್ಷಣ ಇರಬಾರದು. ಫಲಿತದ ಬಗ್ಗೆ ಅನುಮಾನವೂ ಇರಬಾರದು. ಇದನ್ನೇ "ಕರ್ಮನಿಷ್ಠೆ" ಎನ್ನುತ್ತಾರೆ. ನೀನು ಎಲ್ಲಾಕರ್ಮಗಳ ಫಲವನ್ನೂ ನನಗೆ (ಭಗವಂತನಿಗೆ) ಅರ್ಪಿಸಿ ಈ ವಿಷಾದವನ್ನು ಬಿಟ್ಟು ಯುದ್ಧಮಾಡು. ನಿನಗೆ ಪಾಪ ಅಂಟದು. ಬಯಕೆ ಸಿಟ್ಟು ಮೊದಲಾದ ಹುಟ್ಟಿನಿಂದ ಬಂದ ಪ್ರಕೃತಿ ಧರ್ಮವು ಬಲವಾದದ್ದು. ಜನಕ ಮಹಾರಾಜನಂತೆ, ಅನಾಸಕ್ತರಾಗಿ, ರಾಗ ದ್ವೇಷಗಳನ್ನು ದಾಟಿ,- ಕುಟುಂಬದ ಹಿತ, ಸಮಾಜದ ಹಿತ ಎರಡನ್ನೂ ಪಾಲಿಸುತ್ತಾ ಕರ್ತವ್ಯ ನಿರತರಾಗಿರುವವರು ಕರ್ಮಯೋಗಿಗಳೆಂದು  ಭಾವಿಸಬೇಕು. ನೇಗಿಲಯೋಗಿಯಂತೆ ಎಲೆ ಮರೆಯ ಕಾಯಿಯಂತೆ ಅಹಂಕಾರ, ದ್ವೇಷ, ಅತಿಯಾಸೆ ತೊರೆದು ಪ್ರಾಮಾಣಿಕವಾಗಿ ಕರ್ತವ್ಯ ನಿಷ್ಟರಾಗಿ ಕೆಲಸ ಮಾಡುತ್ತಿರವವರು ಕರ್ಮಯೋಗಿಗಳು.
*#ನೇಗಿಲ ಹಿಡಿದಾ ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ.
ಫಲವನು ಬಯಸದ ಸೇವೆಯೆ ಪೂಜೆಯು
ಕರ್ಮವೆ ಇಹಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೇ ಭೋಗಿ.
ಯಾರೂ ಅರಿಯದ ನೇಗಿಲ ಯೋಗಿಯೆ
ಲೋಕಕೆ ಅನ್ನವನೀಯುವನು.
ಹೆಸರನು ಬಯಸದೆ ಅತಿಸುಖಕೆಳಸದೆ
ದುಡಿವನು ಗೌರವಕಾಶಿಸದೆ.
ನೇಗಿಲಕುಳದೊಳಗಡಗಿದೆ ಕರ್ಮ;
ನೇಗಿಲ ಮೇಲೆಯೆ ನಿಂತಿದೆ ಧರ್ಮ*.
ಎಂದು ಕರ್ಮಯೋಗಿಯ ಚಿತ್ರ ಬಿಡಿಸುತ್ತಾರೆ ಶ್ರೇಷ್ಠ ದಾರ್ಶನಿಕರು ಚಿಂತಕರಾದ ಕು.ವೆಂ.ಪು.ಅವರು.

ಕರ್ಮಯೋಗ ಹಿಂದೂಧರ್ಮದಲ್ಲಿ ಹೇಳಲ್ಪಟ್ಟ ಯೋಗಗಳಲ್ಲಿ ಕರ್ಮಯೋಗವೂ ಒಂದು. ಜ್ಞಾನಿಗೆ ಜ್ಞಾನಯೋಗ ; ಮತ್ತು ಸಾಧಕನಿಗೆ ಕರ್ಮಯೋಗವೆಂದು ಎರಡು ಬಗೆ. ಯಾರೂ ಯಾವ ಕ್ರಿಯೆಯನ್ನೂ ಮಾಡದೆ ಇರುವುದು ಆಗವುದಿಲ್ಲ. ಕರ್ಮಯೋಗಿ ಒಂದೊಮ್ಮೆ ಅವನು ದೈಹಿಕ ಕ್ರಿಯೆಗಳನ್ನು ಬಿಟ್ಟರೂ ಮಾನಸಿಕವಾಗಿ ಕ್ರಿಯಾಶೀಲನಾಗಿರುವನು. 'ಕರ್ಮ' ಎಂಬ ಶಬ್ದವು 'ಕೃ' ಎಂಬ ಧಾತುವಿನಿಂದ ಹುಟ್ಟಿರುತ್ತದೆ. 'ಕೃ' ಎಂದರೆ ಮಾಡುವುದು,ವ್ಯವಹರಿಸುವುದು ಮುಂತಾಗಿ ಅರ್ಥಗಳಿವೆ. ಹಾಗಾಗಿ ಕರ್ಮ ಎಂದರೆ ಕೆಲಸ ಎಂದು ತಾತ್ಪರ್ಯವಾಗುತ್ತದೆ. ಹಿಂದೂಧರ್ಮದಲ್ಲಿ ಪ್ರತಿಪಾದಿಸಿದಂತೆ ಪ್ರತಿಯೊಬ್ಬ ಜೀವಿಯೂ ತನ್ನ ಬದುಕಿಗೆ ಸಂಬಂಧಪಟ್ಟಂತೆ ಯಾವುದಾದರೂ ಕರ್ಮ ಮಾಡುತ್ತಲೇ ಇರುತ್ತಾನೆ. ಈ ಕರ್ಮಗಳಿಂದ ಜೀವಿಗೆ ತಾನು ಮಾಡಿದ ಕೆಲಸಕ್ಕೆ ಸರಿಯಾಗಿ ಒಳ್ಳೆಯ ಅಥವಾ ಕೆಟ್ಟ ಪ್ರತಿಫಲ ದೊರೆಯುತ್ತದೆ. ಅದಕ್ಕೆ ಕರ್ಮ ಫಲ ಎನ್ನುತ್ತಾರೆ.
#ಕಾನನದಿ ಮಲ್ಲಿಗೆಯು
ಮೌನದಿಂ ಬಿರಿದು ತಾನೆಲೆಯ ಪಿಂತಿರ್ದು
ತನ್ನ ಸೌರಭವ ಸೂಸಿ ನಲವಿಂ , ವನಸುಮದೊಳು ಎನ್ನ ಮನವ 
ನನುಗೊಳಿಸು ಗುರುವೆ ಹೇ ದೇವಾ ||
-  ಡಿವಿಜಿ 
ಕಾನನದ ಕುಸುಮವಾದ ಮಲ್ಲಿಗೆ ಮೌನದಿಂದ ತನ್ನ ಸುವಾಸನೆ ಬೀರಿ ತನ್ನಲ್ಲಿಯೇ ಸಂತೋಷಿಸುವಂತೆ ನನ್ನ ಮನಸನ್ನು ಹದಗೊಳಿಸು ಎಂದು ಡಿವಿಜಿ ಯವರು ದೇವರಾದ  ಗುರುವಿನಲ್ಲಿ  ಪ್ರಾಥಿಸುತ್ತಾರೆ. ಕರ್ಮ ಯೋಗದ ತತ್ವವನ್ನು ಪ್ರಕೃತಿ ಪಾಲಿಸುತ್ತಿದೆ. ಅದರಂತೆಯೇ ನಾನೂ ಸಹ ಕೀರ್ತಿ ಹಣದ ಆಸೆ ಇಲ್ಲದೆ ಕರ್ತವ್ಯವನ್ನು ನಿರ್ವಹಿಸುವಂತಾಗಲಿ. ಜ್ಞಾನಯೋಗ, ಕರ್ಮಯೋಗಗಳ ಜೊತೆಗೆ ಸ್ವಧರ್ಮ, ಪ್ರಾಪಂಚಿಕ ಪ್ರಕೃತಿಧರ್ಮವನ್ನು ಅನುಸರಣೆ ಮಾಡಬೇಕು. 

ಇಂತಹ ಶ್ರೇಷ್ಠ ವಿಚಾರಗಳು 
ನಂತರದ ಕಾಲದಲ್ಲಿ ಹೇಗೆ  ವಿಕೃತಿ ಪಡೆಯಿತು ಎಂದು ಅವಲೋಕಿಸಿದರೆ-
ಕರ್ಮ ಎಂದರೆ ವಿಧಿ, ಹಣೆಯಬರಹ, ಸ್ವಯಂಕೃತ, ನೀನು ಮಾಡಿದ ಪಾಪದ ಫಲ. ನೀನು ಈ ಜನ್ಮದಲ್ಲಿ ಪಾಪ ಮಾಡಿಲ್ಲವೆಂದು ಅಂದುದಾದರೆ  ಹಿಂದಿನ ಜನ್ಮದಲ್ಲಿ ನೀನು ಮಹಾಪಾಪ ಮಾಡಿದ್ದು !! ಅದಕ್ಕೆ ಈ ಪರಿಸ್ಥಿತಿ ಬಂದಿದೆ. ನೀನು ಇಂಥ ಜಾತಿಯಲ್ಲಿ ಹುಟ್ಟಿದ್ದು ನಿನ್ನ ಪೂರ್ವಜನ್ಮದ ಕರ್ಮಫಲ!! ಇಂಥ ಸ್ಥಿತಿಯಲ್ಲಿ ಹುಟ್ಟಿದ್ದಕ್ಕೆ ಅದೇ ಕಾರಣ!! ಈ ಭಯಂಕರ ರೋಗ , ಈ ದರಿದ್ರತನ ಅದಕ್ಕೆ ನಿನಗೆ ಬಂದಿದ್ದು!! ಇದು ಎಲ್ಲಾ  ನೀನು ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಪ್ರತಿಫಲ! ಎಂಬ ವಿಚಿತ್ರ ತರ್ಕ ಕಲ್ಪಿಸಲಾಯಿತು. ಎಂದರೆ ಅವನ ದುಃಖದ ಉರಿಯುವ ಗಾಯಕ್ಕೆ ಉಪ್ಪು ಖಾರ ಸೇರಿಸಿ ತಿಕ್ಕಿದಂತೆ ಆಯಿತು. ಅವರ ಅತ್ಯಂತ ನೋವಿನಲ್ಲಿ ನರಳುತ್ತಿದ್ದರೂ, ಕಡುಬಡತನವಿದ್ದಲ್ಲಿ, ಗಂಭೀರ ರೋಗವಿದ್ದಲ್ಲಿ, ಅವರ ಅಸಹಾಯಕತೆಗೆ ಕಣ್ಣೀರು ಒರಿಸಿ ಸಹಾಯ ಮಾಡುವುದು ಬಿಟ್ಟು ನಿನ್ನದೇ ಪಾಪದ ಫಲ ಇದು! ಅದಕ್ಕೇ ಈ ಕರ್ಮಫಲ ಸುತ್ತಿಕೊಂಡಿದೆ  ಎಂದು ಹೇಳಿದರೆ ಅದು  ಧರ್ಮದ ಹೆಸರಿನಲ್ಲಿಯ ಶೋಷಣೆಯ ಅಮಾನುಷ ಮನಸ್ಥಿತಿ ಆಯಿತು!! ಸತ್ಯ ಏನೆಂದರೆ ಇವರಾರು  ಹಿಂದಿನ ಮುಂದಿನ ಜನ್ಮ ನೋಡಿಲ್ಲ. ಹೋದವರು ಯಾರು ಬಂದು ಹೇಳಿಲ್ಲ. ದಯೆ ಕರುಣೆ ಮಾನವೀಯತೆ ಇಲ್ಲದಿದ್ದವರು ಮಾತ್ರ ಹಾಗೆ ಹೇಳಬಹುದು. ಒಂದು ಕಾಲದಲ್ಲಿ ಜಗತ್ತಿನಲ್ಲಿಯೇ  ಅತ್ಯಂತ ಶ್ರೇಷ್ಠ ವಿಚಾರಗಳನ್ನು ಮಂಡಿಸಿದ, ಪಾಲಿಸಿದ ಈ ಧರ್ಮದ  ತಿರುಚುವ ಕೆಲಸ ಮಾಡಿದವರೇ ನಮ್ಮಲ್ಲಿಯ ಒಕ್ಕಟ್ಟು ಮುರಿದು ಭಾರತದ  ಅಧಃಪತನಕ್ಕೆ ಕಾರಣರಾದರು.12ನೆಯ ಶತಮಾನದಲ್ಲಿ ಬಸವಾದಿ ಶರಣರು ಸ್ವರ್ಗ- ನರಕ, ಪಾಪ-ಪುಣ್ಯಗಳ, ಕರ್ಮಫಲಗಳ ಕಲ್ಪನೆಗಳನ್ನು ತೊರೆದು ಸಮತ್ವದ ಕಾಯಕ ಸಿದ್ಧಾಂತ ಜಾರಿಮಾಡಿದರು.
-✍️ Dr Prema Pangi 
#ಕರ್ಮಣ್ಯೇವಾಧಿಕಾರಸ್ತೇ_ಮಾ_ಫಲೇಷು

Comments

Popular posts from this blog

ವಚನ ದಾಸೋಹ: ರೂಪನೆ ಕಂಡರು, ನಿರೂಪ ಕಾಣರು.

Ajna system

Shika chakra or Bindu chakra:Bindu visarga